Saturday, February 9, 2013

ಕೊನೆಯ ಸಂಘರ್ಷ!
`ಅಯ್ಯೋ ಇಷ್ಟಕ್ಕೆಲ್ಲ ಇವನು ಸತ್ತನಲ್ಲ..?' ಎಂದು ಎಲ್ಲವೂ ಮುಗಿದುಹೋದ ನಂತರ ತೋರಿಕೆಯ ಸಂತಾಪ ಹೇಳುವ ಮಂದಿಗೆ ನಿಜವಾಗಿಯೂ ಸತ್ತ ವ್ಯಕ್ತಿಯೊಳಗಿನ ಸಂಘರ್ಷದ ಅರಿವೇ ಇರುವುದಿಲ್ಲ.  ಆತ್ಮಹತ್ಯೆಗೆ ಬಹಿರಂಗವಾಗಿ ಕಾರಣಗಳು ಸಿಗಬಹುದು. ಆದರೆ, `ಆತ್ಮಹಂತಕ'ನೊಳಗೆ ನಡೆಯುತ್ತಿರುವ ಮಾನಸಿಕ ಮತ್ತು ದೈಹಿಕ ಸಂಘರ್ಷಗಳಿಗೆ ನಿರ್ದಿಷ್ಟ ವ್ಯಾಖ್ಯೆ ಕೊಡಲು ಯಾವ ತಜ್ಞರಿಂದಲೂ ಸಾಧ್ಯವಾಗಿಲ್ಲ.


ದೀರ್ಘಕಾಲದಿಂದ ಟೆನ್‌ಷನ್‌ನಲ್ಲಿದ್ದ  ವ್ಯಕ್ತಿ ಕೊನೆಗೂ ಆತ್ಮಹತ್ಯೆ ನಿರ್ಧಾರ ಕೈಗೊಂಡ ಕ್ಷಣದಲ್ಲಿ  ಅತ್ಯಂತ ನಿರಾಳನಾಗಿರುತ್ತಾನೆ. ಹೊಯ್ದಾಟ ನಿಂತು ಮನಸು ಪ್ರಫುಲ್ಲಗೊಳ್ಳುತ್ತದೆ; ತಲ್ಲಣಗಳು ಕೊನೆಗೊಂಡು ಶಾಂತತೆ ಮೂಡುತ್ತದೆ. ಯುದ್ಧ  ಮುಗಿದ ನಂತರದ ಮೌನ ಹೊದ್ದ ರಣರಂಗದಂತಿರುತ್ತದೆ ಆತನ ಮನ... ಸಾವಿನ ಮನೆಯ ಹೊಸ್ತಿಲ ಬಳಿ ಹೆಜ್ಜೆ ಇಟ್ಟವರಿಗೆ ಒಂದೆರಡು ಸಾಂತ್ವನದ ಮಾತು; ಒಂದೇ ಒಂದು ಸಹಾಯ ಹಸ್ತ ಸಿಕ್ಕರೆ ಜೀವವೊಂದು ಉಳಿಯುತ್ತದೆ.





ಸ್ಸೆಸ್ಸೆಲ್ಸಿ  ಫಲಿತಾಂಶ ಇನ್ನೂ ಹೊರಬಂದಿರಲಿಲ್ಲ. ಆಗಲೇ ಧಾರವಾಡದ ಶ್ರುತಿ ಆತ್ಮಹತ್ಯೆ ಮಾಡಿಕೊಂಡುಬಿಟ್ಟಳು. ಮನೆಯಲ್ಲಿ  ಮರುದಿನ ನಡೆಯುವ ಸಮಾರಂಭವೊಂದರಲ್ಲಿ ನೆಂಟರಿಷ್ಟರಿಗೆ ಮುಖ ತೋರಿಸುವುದು ಹೇಗೆ ಎನ್ನುವುದೇ ಆಕೆಯ ಚಿಂತೆಯಾಗಿತ್ತು. ಆಕೆ ರಿಸಲ್ಟ್‌ ಭೀತಿಯಲ್ಲಿ  ಸಾವನ್ನಪ್ಪಿದಳು. ಶವವಾಗುತ್ತಿದ್ದ ಹಾಗೆಯೇ ಫೇಲ್‌ ಎಂಬ ಕರಾಳ ರಿಸಲ್ಟೂ ಹೊರಬಿತ್ತು.
ಬೆಂಗಳೂರು ಜಾಲಿ ಟ್ರಿಪ್‌ ಮುಗಿಸಿ ಬರುವಾಗ ತನ್ನ  ಹೈಸ್ಕೂಲ್‌ ಲೈಫ್‌ ಮುಗಿದಿರುತ್ತದೆ; ಇನ್ನು ಕಾಲೇಜು ಸ್ಟೂಡೆಂಟ್‌ ಎಂಬ ಹಿಗ್ಗು  ಕೆ.ಆರ್‌.ನಗರದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಕಾವ್ಯಾಳಲ್ಲಿ ಇತ್ತು. ಆದರೆ ಅಕೆಯ ಲೈಫೇ ಮುಗಿದಿರುತ್ತದೆ ಎನ್ನುವುದು ಯಾರಿಗೆ ತಿಳಿದಿತ್ತು? ಬೆಂಗಳೂರಿಗೆ ಚಿಕ್ಕಮ್ಮನ ಮನೆಗೆ ಬಂದಿದ್ದ ಕಾವ್ಯ ಎಸ್ಸೆಸ್ಸೆಲ್ಸಿ  ರಿಸಲ್ಟ್‌  ನೋಡಿ ಹೌಹಾರಿಬಿಟ್ಟಳು. ಇಂಟರ್‌ನೆಟ್‌ನಲ್ಲಿ  ರಿಜಿಸ್ಟರ್‌ ನಂಬರ್‌ ನಮೂದಿಸುವ ಕ್ಷಣದವರೆಗೂ ಇದ್ದ ಕನಸುಗಳು ಒಮ್ಮಿಂದೊಮ್ಮೆಗೆ ಪತನವಾಯಿತು. `ಫೇಲ್‌' ಎಂಬ ಫಲಿತಾಂಶ ಬಂದಿದ್ದೇ ತಡೆ ಮನೆಗೆ ಸುದ್ದಿ ಮುಟ್ಟಿಸಿ ನೇಣು ಹಾಕಿಕೊಂಡಳು. ಜಾಲಿ ಟ್ರಿಪ್‌ ಮುಗಿಸಿ ಕೆ.ಆರ್‌.ನಗರಕ್ಕೆ ಕಾವ್ಯಾಳ ಮನಸ್ಸು ಹೋಗಲಿಲ್ಲ; ಕನಸು ಹೋಗಲಿಲ್ಲ. ನಿಶ್ಚೇತ ಶವ ಮಾತ್ರ ಹೋಯಿತು.
*****
ಯಾಹೂ ಆನ್ಸರ್‌ನಲ್ಲಿ  ವಿನ್ಸಿ ಎನ್ನುವ ಹೆಸರಲ್ಲಿ  ಆತ ಪ್ರಶ್ನೆಯೊಂದನ್ನು ಪೋಸ್ಟ್‌ ಮಾಡಿದ್ದ. `ನನಗೇಕೋ ತೀರಾ ಡಿಪ್ರೆಷನ್‌. ಸಾಯಬೇಕೂಂತ ಆರು ತಿಂಗಳಿಂದ ಅನ್ನಿಸುತ್ತಿದೆ. ಏನು ಮಾಡಲಿ?' ಅಂತ. ಒಂದಷ್ಟು ಜನ ಅಷ್ಟಿಷ್ಟು ಸಲಹೆಗಳನ್ನು ಕೊಟ್ಟರು. ಆ ಸಲಹೆಗಳಿಗೆ ಆತನ ಪ್ರತಿಕ್ರಿಯೆ ಏನೂ ಬಂದಿಲ್ಲ... ಅವನು ಏನು ಮಾಡಿಕೊಂಡನೋ ಗೊತ್ತಿಲ್ಲ.
3. ಜೋಗುಳ ಹಾಡಿ ಒಂದೂವರೆ ವರ್ಷದ ಕಂದಮ್ಮಳನ್ನು ಮಲಗಿಸಿದ ಬನಶಂಕರಿಯ ಗಂಗಾಧರ- ಕಾವ್ಯಾ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರು. ಅವತ್ತು ರಾತ್ರಿ ಮಲಗುವ ತನಕವೂ ಆರಾಮವಾಗಿದ್ದರು. ಎದುರಿಗೆ ಸಿಕ್ಕವರ ಜತೆ ಚೆನ್ನಾಗಿಯೇ ಮಾತನಾಡಿದ್ದರು. ಆದರೆ...ಏನಾಯಿತೋ ಗೊತ್ತಿಲ್ಲ. ಬೆಳಿಗ್ಗೆ ನೆರೆಮನೆಯವರು ಎದ್ದು ನೋಡಿದಾಗ ಶವವಾಗಿದ್ದರು, ಮಗು ನಿದ್ದೆ ಮಾಡುತ್ತಿತ್ತು.
-ಈ ಮೂರೂ ಪ್ರಕರಣಗಳಲ್ಲಿ  ಅಂತಿಮ ನಿರ್ಧಾರ ಒಂದೇ- ಆತ್ಮಹತ್ಯೆ!
ವಿನ್ಸಿ ಮಾತ್ರ ಅದಾವುದೋ ಸಮಸ್ಯೆಯಿಂದ ಖಿನ್ನತೆಗೆ ಗುರಿಯಾದ. ಸಾಯಬೇಕೆನ್ನುವುದು ಆತನ ನಿರ್ಧಾರವಾದರೂ ಆ ಒಳಸುಳಿಯಿಂದ ಹೊರಬರಬೇಕೆಂದು ಪರದಾಡುತ್ತಿದ್ದ. ಎಷ್ಟೋ ವರ್ಷಾನುಗಟ್ಟಲೆ ಇದೇ ತಳಮಳಕ್ಕೆ ಗುರಿಯಾಗಿ ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆಯೂ ದೊಡ್ಡದ್ದಿದೆ.
ಆದರೆ ಉಳಿದ ಎರಡು ಪ್ರಕರಣಗಳು ವಿಭಿನ್ನ.  ಇವರು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಗಟ್ಟಿ ನಿರ್ಧಾರ ಮಾಡಿಕೊಂಡವರಲ್ಲ. ಕ್ಷಣದಲ್ಲಿ ಎದುರಾದ ಸಮಸ್ಯೆಗೆ ಕ್ಷಣದಲ್ಲೇ ಉತ್ತರ ಕಂಡುಕೊಳ್ಳಲು ಹೊರಟವರು.
ಇಲ್ಲಿ  ಶ್ರುತಿಗೆ ಬದುಕುವ ಉತ್ಸಾಹ ಇತ್ತು. ಆದರೆ ಆಕೆಗೆ ಸೋಲನ್ನು ಎದುರಿಸಿ ಬದುಕುವ ಧೈರ್ಯ ಇರಲಿಲ್ಲ. ಎಸ್ಸೆಸ್ಸೆಲ್ಸಿ ರಿಸಲ್ಟ್‌  ನೋಡಿ ಮನೆಮಂದಿ- ಸಮಾಜವನ್ನು ಎದುರಿಸಲಾಗದೆ ಆಕೆ ಅಪಮಾನದಿಂದ ನೇಣಿಗೆ ಮೊರೆ ಹೋದಳು. ಸಾಯಲೇಬೇಕು ಎನ್ನುವಷ್ಟು  ಅಪಚಾರ  ಆಕೆ ಏನು ಮಾಡಿದ್ದಳು?
ಐದು ವರ್ಷಗಳ ಹಿಂದೆಯಷ್ಟೇ ಮದುವೆಯಾಗಿ ಸುಂದರ ಬದುಕು ಸಾಗಿಸುತ್ತಿದ್ದ ಕಾವ್ಯ-ಗಂಗಾಧರ ದಂಪತಿ ಮಗುವನ್ನು ಅನಾಥ ಮಾಡಿ ಸಾಯುವಷ್ಟು ಕಟುಕರೇ? ಅನ್ಯೋನ್ಯ ದಾಂಪತ್ಯ ಜೀವನದಲ್ಲಿ  ಯಾವುದೋ ಕ್ಷಣಿಕ ಸೋಲನ್ನು  ಎದುರಿಸುವಷ್ಟು ಅವರು ಅಸಮರ್ಥರಾಗಿದ್ದರೇ?

ಸಾಯುವುದು ಸುಲಭವಲ್ಲ
ಹಾಗಂತ ಸಾಯುವುದು ನೀರು ಕುಡಿದಷ್ಟು ಸುಲಭದ ಕೆಲಸವಲ್ಲ.  ಅದು ಬದುಕುವಷ್ಟೇ ಕಷ್ಟದ ಕೆಲಸ! ಸಾಯುವ ಕೊನೇ ಕ್ಷಣದಲ್ಲೂ  ವ್ಯಕ್ತಿ ದೈಹಿಕ- ಮಾನಸಿಕ ತಾಕಲಾಟಗಳನ್ನು ಎದುರಿಸಿ ಕೊನೆಗೆ ಸೋಲನ್ನಪ್ಪುತ್ತಾನೆ. ಸಾಮಾಜಿಕ- ಆರ್ಥಿಕ- ಔದ್ಯೋಗಿಕ- ಆರೋಗ್ಯ- ಶೈಕ್ಷಣಿಕ- ಹೀಗೆ ಸಾವಿಗೆ ಕಾರಣ ನೂರಾರು. ಇಂಥ ಕಾರಣಗಳಿಂದ ಹುಟ್ಟಿಕೊಳ್ಳುವ ಸಮಸ್ಯೆಯಿಂದ ಮನಸ್ಸಿನಲ್ಲಿ  ಮೂಡುವ ಹತಾಶೆ, ಬೇಸರ, ನಿರಾಶೆ, ಒಂಟಿತನ, ನಿರುತ್ತೇಜನಗಳಿಂದ ವ್ಯಕ್ತಿ ಖಿನ್ನತೆ ಕಡೆ ಮುಖ ಮಾಡುತ್ತಾನೆ. ಆ ಖಿನ್ನತೆಯಿಂದ ಹೊರಬಂದರೆ ಸಾವಿನಿಂದ ಪಾರು ಗ್ಯಾರಂಟಿ.
ಆತ್ಮಹತ್ಯೆಗೆ ಬಹಿರಂಗವಾಗಿ ಕಾರಣಗಳು ಸಿಗಬಹುದು. ಆದರೆ, `ಆತ್ಮಹಂತಕ'ನೊಳಗೆ ನಡೆಯುತ್ತಿರುವ ಮಾನಸಿಕ ಮತ್ತು ದೈಹಿಕ ಸಂಘರ್ಷಗಳಿಗೆ ನಿರ್ದಿಷ್ಟ ವ್ಯಾಖ್ಯೆ ಕೊಡಲು ಯಾವ ತಜ್ಞರಿಂದಲೂ ಸಾಧ್ಯವಾಗಿಲ್ಲ.
ಆತ್ಮಹತ್ಯೆಗೆ ಹೊರಟ ವ್ಯಕ್ತಿ ಮನಸ್ಸು- ಮಿದುಳು ಕುರುಕ್ಷೇತ್ರವಾಗಿರುತ್ತದೆ. ಅದೂ ಎರಡೆರಡು ಆಯಾಮದ ಯುದ್ಧ. ಒಂದು ಕಡೆ ಮಾನಸಿಕ ಹೋರಾಟ, ಇನ್ನೊಂದೆಡೆ ನರವ್ಯೂಹದ ಸಂಘರ್ಷ. `ಅಯ್ಯೋ ಇಷ್ಟಕ್ಕೆಲ್ಲ ಇವನು ಸತ್ತನಲ್ಲ..?' ಎಂದು ಎಲ್ಲವೂ ಮುಗಿದುಹೋದ ನಂತರ ತುಟಿಸಂತಾಪ ಹೇಳುವ ಮಂದಿಗೆ ನಿಜವಾಗಿಯೂ ಸತ್ತ ವ್ಯಕ್ತಿಯೊಳಗಿನ ಸಂಘರ್ಷದ ಅರಿವೇ ಇರುವುದಿಲ್ಲ.  ಒಂದು ತಿಂಗಳ ಅವಧಿಯಲ್ಲಿ  ಆತನಿಗೆ ಎದುರಾದ ಘಟನೆಗಳು, ಸನ್ನಿವೇಶಗಳು ಒಂದರ ಮೇಲೊಂದರಂತೆ ಮನಸ್ಸಿಗೆ ಅಪ್ಪಳಿಸುತ್ತಿರುತ್ತವೆ. ಸಾಯಬೇಕು ಎಂಬ ತೀರ್ಮಾನಕ್ಕೆ ಬಂದ ವ್ಯಕ್ತಿ `ಬೇಕು'- 'ಬೇಡ' ಎಂಬ ಆತ್ಮನುಡಿಯ ನಡುವೆ ತಿಕ್ಕಾಟಕ್ಕೆ ಸಿಲುಕಿಬಿಡುತ್ತಾನೆ... ಆ ಕೊನೇ ಒಂದು ಕ್ಷಣ... ಹೂಂ... ಅದು ನಿರ್ಣಾಯಕ.. ಆ ಕ್ಷಣದಲ್ಲಿ  ಮನಸ್ಸು ಯಾವ ತೀರ್ಮಾನ ನೀಡಿತೋ ಅದುವೇ ಘಟಿಸಿಬಿಡುತ್ತದೆ. ಸಾಯಲು ಹೊರಟವನು `ಶಸ್ತ್ರತ್ಯಾಗ' ಮಾಡಬಹುದು
`ಆ ನಿರ್ಣಾಯಕ ಸನ್ನಿವೇಶದಲ್ಲಿ  ಕೊಂಚ ಧೈರ್ಯದ ನುಡಿ ಸಿಕ್ಕರೆ ಸಾಕು. ವ್ಯಕ್ತಿ ಆತ್ಮಹತ್ಯೆಯಂಥ ನಿರ್ಧಾರದಿಂದ ದೂರ ಸರಿಯಬಲ್ಲ' ಎಂದು ಹೇಳುವ ಮನೋವಿಜ್ಞಾನಿ ಡಾ. ಅ.ಶ್ರೀಧರ ತಮ್ಮ ಅನುಭವವೊಂದನ್ನು ಹೇಳುತ್ತಾರೆ. `ಮಹಿಳೆಯೊಬ್ಬರು ಬೆಳಿಗ್ಗೆ ಸುಮಾರು 11 ಗಂಟೆಗೆ ನನಗೆ ಫೋನ್‌ ಮಾಡಿದರು. ನನಗೆ ಕುಟುಂಬದ ಪ್ರೆಷರ್‌ ತಡೆದುಕೊಳ್ಳಲು ಆಗುತ್ತಿಲ್ಲ. ನಾನು ಸತ್ತೇಬಿಡುತ್ತೇನೆ... ಎಂದು ನೋವು ತೋಡಿಕೊಂಡರು. ನಾನು ಸುಮಾರು ಅರ್ಧ ಗಂಟೆ ಆಕೆ ಜತೆ ಸಮಾಧಾನಚಿತ್ತದಿಂದ ಮಾತನಾಡಿ ಫೋನ್‌ ಇಟ್ಟೆ. ಸಂಜೆ 4 ಗಂಟೆಗೆ ಮತ್ತೆ ಆಕೆಯದೇ ಕಾಲ್‌- ಡಾಕ್ಟರ್‌ ನಾನು ಬದುಕಿಬಿಟ್ಟೆ.. ಥ್ಯಾಂಕ್ಸ್‌ ಎಂದು ಹೇಳಿದರು'.
ಸಾವಿನ ಮನೆಯ ಹೊಸ್ತಿಲ ಬಳಿ ಹೆಜ್ಜೆ ಇಟ್ಟವರಿಗೆ ಒಂದೆರಡು ಸಾಂತ್ವನದ ಮಾತು; ಒಂದೇ ಒಂದು ಸಹಾಯ ಹಸ್ತ ಸಿಕ್ಕರೆ ಜೀವವೊಂದು ಉಳಿಯುತ್ತದೆ.


ಸಾವಿನ ಸಂದೇಶ
ಆತ್ಮಹತ್ಯೆ ಮಾಡಿಕೊಳ್ಳುವವನು ಊರಿಡೀ ಹೇಳಿಕೊಂಡು (ಈಗ ಬಿಡಿ, ಆನ್‌ಲೈನ್‌ನಲ್ಲಿ  ಮೆಸೇಜ್‌ ಹಾಕಿಯೇ ಸಾಯುತ್ತಾರೆ) ಸಾಯೋದಿಲ್ಲ. ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವವರ ಮಾತಿನಲ್ಲಿ  ಅಡಗಿರುವ ನಿಗೂಢಾರ್ಥಗಳನ್ನು ಕೆದಕಿದರೆ ಆತನಲ್ಲಿ  ಆತ್ಮಹತ್ಯೆ ಪ್ರವೃತ್ತಿ ನುಸುಳುತ್ತಿದೆ ಎಂಬುದನ್ನು ತಿಳಿದುಕೊಳ್ಳಬಹುದು, ಆದರೆ ಇದು ಎಲ್ಲ ಪ್ರಕರಣಗಳಿಗೂ ಅನ್ವಯವಾಗುವ ವಿಚಾರವಲ್ಲ. ಕೆಲವರು ಸಾವಿನ ಬಗ್ಗೆ  ಮಥಿಸುತ್ತಿದ್ದರೂ, ಮಾತಿನಲ್ಲಿ  ಯಾವ ಭಾವನೆಗಳೂ ಇರುವುದಿಲ್ಲ.
ಬೆಡ್‌ನ ಒಂದು ಬದಿಯಲ್ಲಿ ಆಕಾಶವನ್ನೇ ದಿಟ್ಟಿಸುತ್ತಿದ್ದ  ಖಿನ್ನಮನಸ್ಕನನ್ನು -`ಯಾಕೋ ಬೇಜಾರದಲ್ಲಿದ್ದೀಯಾ' ಎಂದು ಕೇಳಿದರೆ, `ಇಲ್ಲವಲ್ಲ.. ಅದೇನೋ ಯೋಚನೆ ಮಾಡ್ತಾ ಇದ್ದೆ' ಎಂದು ದಡಬಡಾಯಿಸಿ ಏಳುತ್ತಾನೆ. ಬಹುತೇಕ ಖಿನ್ನಮನಸ್ಕರು ತಮ್ಮ ನೋವನ್ನು ಹಂಚಿಕೊಳ್ಳಲಾರರು.
ಸಾವಿನ ಸೂಚನೆ ತಿಳಿದುಕೊಳ್ಳುವಲ್ಲಿ  ವಿಜ್ಞಾನಿಗಳೂ ಸಫಲವಾಗಿಲ್ಲ. ಈಚೆಗೆ ಹಾರ್ವರ್ಡ್‌ ವಿಶ್ವವಿದ್ಯಾಲಯದ ಮನೋವಿಜ್ಞಾನಿ ಡಾ. ಮ್ಯಾಥ್ಯು ನಾಕ್‌ ನೇತೃತ್ವದ ತಜ್ಞರ ತಂಡ ಆತ್ಮಹತ್ಯಾಕಾರಿ ಪ್ರವೃತ್ತಿ ಬಗ್ಗೆ ತಿಳಿದುಕೊಳ್ಳಲು ವಿಧಾನವೊಂದನ್ನು ಆವಿಷ್ಕರಿಸಿದರು. ಮನುಷ್ಯನ ಅಪ್ರಜ್ಞಾಪೂರ್ವಕ ಆಲೋಚನೆಗಳನ್ನು ಬೇಧಿಸುವ ಈ ವಿಧಾನದಿಂದ ವ್ಯಕ್ತಿಯೊಳಗೆ ನಡೆಯುತ್ತಿರುವ ಸಂಘರ್ಷಗಳನ್ನು ತಿಳಿದುಕೊಳ್ಳಬಹುದು ಎನ್ನುತ್ತಾರೆ ನಾಕ್‌.
ದೀರ್ಘಕಾಲದಿಂದ ಟೆನ್‌ಷನ್‌ನಲ್ಲಿದ್ದ  ವ್ಯಕ್ತಿ ಕೊನೆಗೂ ಆತ್ಮಹತ್ಯೆ ನಿರ್ಧಾರ ಕೈಗೊಂಡ ಕ್ಷಣದಲ್ಲಿ  ಅತ್ಯಂತ ನಿರಾಳನಾಗಿರುತ್ತಾನೆ. ಹೊಯ್ದಾಡುತ್ತಿದ್ದ ಮನಸು ಪ್ರಫುಲ್ಲಗೊಳ್ಳುತ್ತದೆ; ತಲ್ಲಣಗಳು ಕೊನೆಗೊಂಡು ಶಾಂತತೆ ಮೂಡುತ್ತದೆ. ಯುದ್ಧ ಎಲ್ಲ ಮುಗಿದ ನಂತರ ನೆಲೆಸಿದ ಮೌನ ಹೊದ್ದ ರಣರಂಗದಂತಿರುತ್ತದೆ ಆತನ ಮನ.
ಕೆಲವು ವರ್ಷಗಳ ಹಿಂದೆ ಪ್ರೇಮವೈಫಲ್ಯದಿಂದ ಆತ್ಮಹತ್ಯೆಗೆ ಯತ್ನಿಸಿ ನಂತರ ಬದುಕುಳಿದ ರಾಮನಾಥನ್‌ (ಹೆಸರು ಬದಲಿಸಿದೆ) ಪ್ರಕಾರ- `ಈಗ ನೋಡಿದರೆ ಅಷ್ಟೊಂದು ಸಣ್ಣ ಸಮಸ್ಯೆಗೆ ನಾನು ಸಾಯಲು ಹೊರಟಿದ್ದೇನಾ ಅನ್ನಿಸುತ್ತದೆ. ಆದರೆ ಆಗಂತೂ ನನಗೆ ಅದುವೇ ಜಗತ್ತಿನ ದೊಡ್ಡ ಸಮಸ್ಯೆ ಎನ್ನಿಸಿತು.  ಸೂಯಿಸೈಡ್‌ ಅಲ್ಲದೆ ಬೇರೆ ದಾರಿಯೇ ಇಲ್ಲ ಎಂದು ಭಾವಿಸಿಕೊಂಡಿದ್ದೆ. ಆ ಸಂದರ್ಭದಲ್ಲಿ  ನಾನು ಸುಮಾರು ಒಂದು ತಿಂಗಳು ಅನುಭವಿಸಿದ ಸಂಕಟ ಯಾರಿಗೂ ಬೇಡ. ತಿಂಗಳಿಡೀ ಸರಿಯಾಗಿ ಊಟವನ್ನೇ ಮಾಡಿರಲಿಲ್ಲ. ಈ ಜಗತ್ತನ್ನು ಎದುರಿಸುವುದಕ್ಕಿಂತ ಸಾಯುವುದೇ ಮೇಲು ಎಂದೆನಿಸಿತು'.
ಅದೃಷ್ಟಕ್ಕೆ ರಾಮನಾಥನ್‌ ಬದುಕುಳಿದರು.

ಸೂಕ್ಷ್ಮ ಮನಸ್ಥಿತಿ
ಮನುಷ್ಯನಲ್ಲಿ  ಆತ್ಮವಿಶ್ವಾಸ ಮೂಡುವುದರ ಜತೆಗೆ ಆತ್ಮಹತ್ಯೆ ಯೋಚನೆಯೂ ದೂರ ಸರಿಯುತ್ತದೆ. ಆತ್ಮವಿಶ್ವಾಸ ಹಾಗೂ ಬೆಂಬಲ ಇರುವ ವ್ಯಕ್ತಿಗೆ ಎಷ್ಟೇ ಅನುಮಾನವಾದರೂ, ಜೀವನದಲ್ಲಿ ವಿಫಲನಾದರೂ ಆತ್ಮಹತ್ಯೆಗೆ ಹೋಗುವುದಿಲ್ಲ. ಲೋಕಾಯುಕ್ತ ದಾಳಿಗೆ ಸಿಕ್ಕಿಹಾಕಿಕೊಂಡ ಅಧಿಕಾರಿ ಸಮಾಜದ ಎದುರು ತೀರಾ ಅಪಮಾನಿತನಾಗುತ್ತಾನೆ- ಆದರೂ ಆತ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಒಬ್ಬ ವಿದ್ಯಾರ್ಥಿ  ಪಿಯುಸಿಯಲ್ಲಿ ಒಂದು ಸಬ್ಜೆಕ್ಟ್‌ ಫೇಲಾದರೂ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಇಲ್ಲಿ  ಆ ಭ್ರಷ್ಟ ಅಧಿಕಾರಿಗೆ ಸಮಾಜದ ಬೆಂಬಲ ಸಿಗುತ್ತದೆ; ಈ ವಿದ್ಯಾರ್ಥಿಗೆ ತಪರಾಕಿ ಸಿಗುತ್ತದೆ.
`ಆತ್ಮಹತ್ಯೆಗೆ ವ್ಯಕ್ತಿಯ ವ್ಯಕ್ತಿತ್ವ, ವಯಸ್ಸು, ಸಾಮಾಜಿಕ- ಸಾಂಸ್ಕೃತಿಕ ಪರಿಸ್ಥಿತಿಗಳು ಕಾರಣವಾಗಿರುತ್ತದೆ. ಸೂಕ್ಷ್ಮ ಮನಸ್ಥಿತಿಯ ವ್ಯಕ್ತಿ ಅಪಮಾನವನ್ನು ಸಹಿಸಿಕೊಳ್ಳಲಾರ. ಒಬ್ಬನ ಆತ್ಮಹತ್ಯೆಗೆ ಇಂಥದ್ದೇ ನಿರ್ದಿಷ್ಟ ಕಾರಣ' ಎಂದು ಸ್ಪಷ್ಟಪಡಿಸುವುದು ಕಷ್ಟ ಎನ್ನುತ್ತಾರೆ ಬೆಂಗಳೂರು ವಿವಿ ಮನೋವಿಜ್ಞಾನ ಪ್ರವಾಚಕ ಡಾ. ಆರ್‌.ಗೋಪಾಲಕೃಷ್ಣ.

ಸಿರೊಟೋನಿನ್‌ ಪ್ರಭಾವ
ಆತ್ಮಹತ್ಯೆ ಒಂದು ಮನೋಜನಕ ಸಮಸ್ಯೆ. ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಶೇ 90ರಷ್ಟು ಜನ ಮಾನಸಿಕವಾಗಿ ದುರ್ಬಲರು. ಸಣ್ಣ ಆಘಾತವನ್ನು ಸಹಿಸಿಕೊಳ್ಳಲೂ ಅವರಿಂದ ಸಾಧ್ಯವಿಲ್ಲ. ಇದರ ಜತೆಗೆ ನರವ್ಯೂಹ ಸಮಸ್ಯೆಯೂ ಇಲ್ಲಿ ಅಡಗಿದೆ. ಆತ್ಮಹತ್ಯೆ ಪ್ರವೃತ್ತಿ ಯಾರಲ್ಲಿ ಇರುತ್ತದೋ ಅವರಲ್ಲಿ  ನ್ಯೂರೋಟ್ರಾನ್ಸ್‌ಮಿಟರ್‌ ರಸಾಯನಿಕ ಸಿರೊಟೋನಿನ್‌ ಪ್ರಮಾಣತೀರಾ ಕಡಿಮೆ ಇರುತ್ತದೆ. ಆತ್ಮಹತ್ಯೆ ಮನೋಭಾವ ಸಿರೊಟೋನಿನ್‌ ಚಟುವಟಿಕೆ ಮೇಲೆಯೇ ಅವಲಂಬನೆಯಾಗಿರುತ್ತದೆ. ಮನಸ್ಸು  ನೊಂದ ಕ್ಷಣದಲ್ಲಿ  ಸಿರೊಟೋನಿನ್‌ ಉತ್ಪಾದನೆ ಕುಸಿದಿದ್ದರೆ ಆತ್ಮಹತ್ಯೆಗೆ ಮನಸ್ಸು ಸೆಳೆಯುವ ಸಾಧ್ಯತೆ ಹೆಚ್ಚು, ಆತ್ಮಹತ್ಯೆ ಮಾಡಿಕೊಂಡವರ ಮಿದುಳಿನಲ್ಲಿ ಕಡಿಮೆ ಪ್ರಮಾಣದ ಸಿರೊಟೋನಿನ್‌ ಇರುವುದು ಅಟ್ಲಾಂಟದಲ್ಲಿ ನಡೆದ ಸಂಶೋಧನೆಯಲ್ಲಿ  ವ್ಯಕ್ತವಾಗಿದೆ. ಜತೆಗೆ ಹೈಪೊಥಲಾಮಿಕ್‌ ಪಿಟ್ಯುಟರಿ ಅಡ್ರೆನಲ್‌ ಉತ್ಪಾದನೆ ಸಹ ಮಾನಸಿಕ ಒತ್ತಡಕ್ಕೆ ಪರೋಕ್ಷ ಕಾರಣವಾಗಿದೆ.
ಎರಡು ವರ್ಷಗಳ ಹಿಂದೆ ಕೆನಡಾದಲ್ಲಿ ನಡೆದ ಸಂಶೋಧನೆಯಲ್ಲಿ ಆತ್ಮಹತ್ಯೆಯಿಂದ ಸಾವನ್ನಪ್ಪಿದವರ ಮೆದುಳು ರಾಸಾಯನಿಕವಾಗಿ ವಿಭಿನ್ನವಾಗಿರುವುದು ಖಚಿತವಾಗಿದೆ.
ಆತ್ಮಹತ್ಯೆ ಪ್ರವೃತ್ತಿ ಹಿಂದೆ ಅನುವಂಶೀಯ ಕಾರಣಗಳೂ ಇವೆ ಎನ್ನುವುದನ್ನು ಸಂಶೋಧನೆಗಳೇ ಶ್ರುತಪಡಿಸಿವೆ. ಆತ್ಮಹತ್ಯೆಗೆ ಕಾರಣವಾಗುವ ನಿರ್ದಿಷ್ಟ ಜೀನ್‌ ಬಗ್ಗೆ ಇನ್ನೂ ಖಚಿತ ಮಾಹಿತಿ ಇಲ್ಲವಾದರೂ ಅಧ್ಯಯನಗಳ ಪ್ರಕಾರ ಇದು ಅನುವಂಶೀಯ ಎನ್ನುವುದು ಸ್ಪಷ್ಟವಾಗಿದೆ.

ಉದ್ದೇಶ ಸಾವಲ್ಲ
ಆತ್ಮಹತ್ಯೆ ಪ್ರಯತ್ನದ ಉದ್ದೇಶ ಬರೇ ಸಾವಾಗಿರುವುದಿಲ್ಲ. ಹಲವು ಬಾರಿ ಅದು ಗಮನ ಸೆಳೆಯುವ ತಂತ್ರವೂ ಆಗಿರುತ್ತದೆ ಎಂದು ಮನೋವಿಜ್ಞಾನಿಗಳು ಹೇಳುತ್ತಾರೆ. ತನ್ನ ಉದ್ದೇಶ ಸಾಧನೆಗೆ ಮನೆಯವರನ್ನು ಹೆದರಿಸಲು, ನಿರ್ದಿಷ್ಟ  ಕಠಿಣ ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು ಆತ್ಮಹತ್ಯೆ ಪ್ರಯತ್ನದ ದಾರಿ ಹುಡುಕುವವರು ಇದ್ದಾರೆ. ಇದನ್ನು `ಪ್ಯಾರಾ ಸುಸೈಡ್‌' ಎನ್ನುತ್ತಾರೆ. ಆದರೆ ಎಷ್ಟೋ ಬಾರಿ `ಗುರಿ' ತಪ್ಪಿ  ಸಾವಿಗೆ ಶರಣಾದ ಉದಾಹರಣೆಗಳೂ ಇವೆ.
ಆತ್ಮಹತ್ಯೆಗೆ ಕಾರಣಗಳೇನಪ್ಪ ಎಂದು ವಿಜ್ಞಾನಿಗಳ ಹುಡುಕಾಟ ಇನ್ನೂ ನಿಂತಿಲ್ಲ. ಮನೋವಿಜ್ಞಾನಿಗಳು ಕಾರಣಗಳನ್ನು ಪಟ್ಟಿ ಮಾಡುತ್ತಲೇ ಇದ್ದರೆ, ನರತಜ್ಞರು ಬೇರೆ ಬೇರೆ ಕಾರಣಗಳನ್ನು ಹುಡುಕುತ್ತಿದ್ದಾರೆ. ಕೆನಡಾದ ವೆಸ್ಟರ್ನ್‌ ಒಂಟಾರಿಯೋ ವಿವಿಯ ತಜ್ಞರ ತಂಡ ನಡೆಸಿದ ಸಂಶೋಧನೆಯಲ್ಲಿ, ಇದಕ್ಕೆಲ್ಲ  ಪ್ರೊಟೀನ್‌ ಕಾರಣ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ನಿರ್ದಿಷ್ಟ ಜೀನೊಂದರ ಮೇಲೆ ಪ್ರಭಾವ ಬೀರುವ ಪ್ರೊಟೀನ್‌ ಉತ್ಪಾದನೆ ಹೆಚ್ಚುವುದರಿಂದ ಜನರಲ್ಲಿ  ಒತ್ತಡ, ಖಿನ್ನತೆ ಉಂಟಾಗುತ್ತಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಇಷ್ಟಕ್ಕೂ ಪ್ರತಿ ಅತ್ಮಹತ್ಯೆಗಳಿಗೂ ಸಕಾರಣ ಇದ್ದೇ ಇರುತ್ತದೆ. ಯಶಸ್ಸು ಮತ್ತು ವೈಫಲ್ಯ ಎರಡನ್ನೂ ಸಹಿಸಿಕೊಳ್ಳುವುದು ಕಷ್ಟ.  ಯಶಸ್ಸಿನ ಜತೆಗೆ ಸ್ಥಾನಮಾನ, ಅಹಂಕಾರ, ಡಿವೋರ್ಸ್‌, ಗಲಾಟೆ, ಅಶಾಂತಿ, ಖಿನ್ನತೆ ಹಾಗೂ ಆತ್ಮಹತ್ಯೆ  ಯೋಚನೆ ಬರುವ ಸಾಧ್ಯತೆ ಇದೆ.


ಬಾಕ್ಸ್‌
ಬೇಜಾರಾಗ್ತಿದೆ ಅಂತಿದ್ದಾರಾ?
ಯಾರಿಗೆ ಬೇಕು ಈ ಲೈಫ್‌? ಸತ್ತರೆ ಒಂದೇ ಸಲಕ್ಕೆ ಎಲ್ಲ  ಪ್ರಾಬ್ಲಂ ಸಾಲ್ವ್‌... ಹೀಗೆ ಗೊಣಗುವವರು ನಿಮ್ಮ ಸುತ್ತಮುತ್ತ ಇದ್ದರೆ ಕೊಂಚ ಎಚ್ಚರಿಕೆಯಿಂದ ಇರಿ. ಅವರ ಮನಸ್ಥಿತಿ ಮತ್ತು ಯೋಚನಾಧಾಟಿಯಲ್ಲಿ ಎಲ್ಲೋ ಏನೋ ಹೆಚ್ಚು ಕಡಿಮೆಯಾಗಿದೆ ಎಂದೇ ಅರ್ಥ.
ಈ ಕೆಲವು ವರ್ತನೆಗಳತ್ತ ಕೊಂಚ ಜಾಗರೂಕರಾಗಿರಿ
* ಈ ಮೊದಲು ಖುಷಿಪಡುತ್ತಿದ್ದ  ಕೆಲಸದಲ್ಲಿ ಈಗ ನಿರಾಸಕ್ತಿ
* ಏಕಾಗ್ರತೆಗೆ ಅಡ್ಡಿ
* ಆಗಾಗ್ಗೆ ಗೊಣಗುತ್ತ, ಕಾಲಹರಣ ಮಾಡುವ ಮನೋಭಾವ
* ತುಂಬಿದ ಸಿನಿಕತನ, ಮಾಯವಾದ ಸೃಜನಶೀಲತೆ
* ವಿನಾಕಾರಣ ನಿರಾಶೆ, ಕ್ರೋಧ, ಆಕ್ರೋಶ. ದಿಢೀರ್‌ ಮೂಡ್‌ ಬದಲಾವಣೆ
* ನಿದ್ದೆ  ಮತ್ತು ಊಟದ ಕ್ರಮದಲ್ಲಿ ಬದಲಾವಣೆ
* ಸ್ನೇಹಿತರಿಂದ ದೂರ ಉಳಿದು ಏಕಾಂತಕ್ಕೆ ಮೊರೆ


ಕೌಟುಂಬಿಕ ಸಮಸ್ಯೆ; ಸಾವಿನ ದಾರಿ
ದೇಶದಲ್ಲಿ ಜನರ ಆತ್ಮಹತ್ಯೆಗೆ ಬಹುಪಾಲು ಕಾರಣ ಕೌಟುಂಬಿಕ ಸಮಸ್ಯೆ. ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ ವರದಿ ಪ್ರಕಾರ  ಒಟ್ಟು ನಡೆಯುವ ಆತ್ಮಹತ್ಯೆಗಳ ಪೈಕಿ ಶೇ 26.1ರಷ್ಟು  ಬರೇ ಮನೆಜಗಳದಿಂದ. ನಂತರದ ಸ್ಥಾನ ಅನಾರೋಗ್ಯಕ್ಕೆ. ಅನಾರೋಗ್ಯದ ಕಾರಣವೊಡ್ಡಿ  ಸಾವನ್ನಪ್ಪಿದವರ ಸಂಖ್ಯೆ ಶೇ 22
ಮೂರು ವರ್ಷಗಳ ಅಂಕಿಅಂಶವನ್ನು ಅಧ್ಯಯನ ನಡೆಸಿದರೆ  ಪರೀಕ್ಷೆಯಲ್ಲಿ ಫೇಲಾದ ಕಾರಣ ಸಾವನ್ನಪ್ಪಿದವರ ಸಂಖ್ಯೆ ಸರಾಸರಿ ಶೇ 2. ಆರ್ಥಿಕ ನಷ್ಟದಿಂದ ಶೇ 2.4ರಷ್ಟು ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಷ್ಟೇ ಜನ ವರದಕ್ಷಿಣೆ ಕಿರುಕುಳಕ್ಕೂ `ಬಲಿ'ಯಾಗಿದ್ದಾರೆ. ಪ್ರೇಮಪಾಶಕ್ಕೆ ಕೊರಳೊಡ್ಡಿದವರ ಸಂಖ್ಯೆ ಶೇ 3ರಷ್ಟಿದೆ.


ಸೂಯಿಸೈಡ್‌ ಸತ್ಯ
* ದೇಶದಲ್ಲಿ ಪ್ರತಿ 15 ನಿಮಿಷಕ್ಕೊಮ್ಮೆ ನಡೆಯುವ ಮೂರು ಆತ್ಮಹತ್ಯೆಗಳ ಪೈಕಿ ಒಬ್ಬರ ವಯೋಮಾನ 15ರಿಂದ 29 ಆಗಿದೆ.
* ದೇಶದಲ್ಲಿ ಪ್ರತಿ 10,000 ಜನಕ್ಕೆ 98 ಮಂದಿ ಆತ್ಮಹತ್ಯೆಗೆ ಗುರಿಯಾಗುತ್ತಿದ್ದಾರೆ
* ವಿಶ್ವ ಆರೋಗ್ಯ ಸಂಸ್ಥೆ  ಪ್ರಕಾರ ಜಗತ್ತಿನಾದ್ಯಂತ ಕಳೆದ 50 ವರ್ಷಗಳಲ್ಲಿ ಆತ್ಮಹತ್ಯೆ ದರ ಶೇ 60ರಷ್ಟು ಹೆಚ್ಚಾಗಿದೆ
* ಭಾರತದಲ್ಲಿ ಅತ್ಮಹತ್ಯೆ ಮಾಡುವವರಲ್ಲಿ  ಶೇ 37ರಷ್ಟು ಪ್ರಮಾಣ 30 ವಯಸ್ಸಿನೊಳನವರಗಿರಬೇಕು.
* ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ ವರದಿ ಪ್ರಕಾರ ಬೆಂಗಳೂರಿನಲ್ಲಿ  ಪ್ರತಿ 10,000 ಜನಕ್ಕೆ 35 ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.
* ದೇಶದ ಒಟ್ಟು ಆತ್ಮಹತ್ಯೆ ಪ್ರಮಾಣದಲ್ಲಿ  ಕರ್ನಾಟಕದ ಪ್ರಮಾಣ ಶೇ 9.8 (2008ರಲ್ಲಿ)



ಮೆದುಳು ನೋಡಿದಾಗ
ಇದು ಮೆದುಳಿನ ಕ್ರಿಯಾಶೀಲತೆಯ ಚಿತ್ರಣ. ಕೆಂಪು ಚಟುವಟಿಕೆ ವೃದ್ಧಿಸೂಚಕವಾದರೆ, ನೀಲಿ ಬಣ್ಣ  ಕ್ಷೀಣ ಚಟುವಟಿಕೆ ಸಂಕೇತ. ಆತ್ಮಹತ್ಯೆಯ ಯೋಚನೆ ಬಂದ ವ್ಯಕ್ತಿ ಮೆದುಳನ್ನು  ಪರೀಕ್ಷೆಗೆ ಒಳಪಡಿಸಲಾಯಿತು. ಮೇಲಿನ ಚಿತ್ರದಲ್ಲಿ ಆತ್ಮಹತ್ಯಾ ಆಲೋಚನೆಯಿಂದ ಮೆದುಳಿನ ಚಟುವಟಿಕೆ ಕುಸಿದಿರುವುದು ದಾಖಲಾಗಿದ್ದರೆ, ಕೆಳಗಿನ ಚಿತ್ರದಲ್ಲಿ  ಆತ್ಮಹತ್ಯಾ ಆಲೋಚನೆ ಅಷ್ಟಾಗಿ ಕಾಣಿಸಿಕೊಳ್ಳದ ಮೆದುಳಿದೆ.
(ಯುಸಿಎಲ್‌ಎ ಮೆದುಳಿನ ವರ್ತನೆ ಪ್ರಯೋಗಾಲಯದ ಚಿತ್ರ)

No comments:

Post a Comment