Friday, October 21, 2011

ಸ್ಪೀಡ್‌ ಜಮಾನ!
ಸೂರ್ಯನಿಂದ ಭೂಮಿ 14,95,97,890 ಕಿಮೀ ದೂರವಿದೆ ಎಂದು ಮಿಡ್‌ಟರ್ಮ್‌ ಎಕ್ಸಾಮ್‌ಗೆ ಹುಡುಗರು ಉರು ಹೊಡೆಯುತ್ತಿರುವಾಗಲೇ ಜಿನೀವಾದಿಂದ ಸುದ್ದಿಯೊಂದು ಬೆಳಕಿನಷ್ಟೇ ವೇಗವಾಗಿ ಬಂದು ಅಪ್ಪಳಿಸಿದೆ. ಅದೇನಾದರೂ ನಿಜವಾಗಿಬಿಟ್ಟರೆ ನಾವು ಈವರೆಗೆ ಓದಿದ ಭೌತ ವಿಜ್ಞಾನವನ್ನೆಲ್ಲ ಮರೆಯಬೇಕಾಗುತ್ತದೆ.
ಭೌತವಿಜ್ಞಾನದ  ಜಗತ್ತಿನ ಅತಿ ದೊಡ್ಡ  ಪ್ರಯೋಗಾಲಯ ಯುರೋಪಿಯನ್‌ ಅರ್ಗನೈಸೇಷನ್‌ ಫಾರ್‌ ನ್ಯೂಕ್ಲಿಯರ್‌ ರೀಸರ್ಚ್‌ (ಸಿಇಆರ್‌ಎನ್‌)ನಿಂದ ಕಳೆದ ವಾರ ಬಂದ ಸುದ್ದಿ ಇದಾಗಿತ್ತು. ನಾವು ಈವರೆಗೆ ಜಗತ್ತಿನಲ್ಲಿ ಅತಿ ವೇಗದಲ್ಲಿ ಚಲಿಸುವ ವಸ್ತು ಬೆಳಕು  ಎನ್ನುವುದನ್ನು ನಂಬಿಕೊಂಡಿದ್ದೆವು. ಆದರೆ ಈ ಹೊಸ ಸುದ್ದಿ ಪ್ರಕಾರ, ಬೆಳಕಿಗಿಂತ ವೇಗವಾಗಿ ನ್ಯೂಟ್ರಿನೋ ಎಂಬ ಕಣ ಚಲಿಸುತ್ತದೆ.
ಅಂದರೆ, 1905ರಲ್ಲಿ ಆಲ್ಬರ್ಟ್‌ ಐನ್‌ಸ್ಟೀನ್‌ ಮಂಡಿಸಿದ್ದ ವಿಶೇಷ ಸಾಪೇಕ್ಷ ಸಿದ್ಧಾಂತವನ್ನೇ ಸಿಇಆರ್‌ಎನ್‌ ವಿಜ್ಞಾನಿಗಳು ಪ್ರಶ್ನಿಸಿದಂತಾಗಿದೆ. ಬೆಳಕು ಪ್ರತಿ ಸೆಕೆಂಡ್‌ಗೆ ಮೂರು ಲಕ್ಷ ಕಿಮೀ ವೇಗವಾಗಿ ಚಲಿಸುತ್ತದೆ ಎಂದು ಐನ್‌ಸ್ಟೀನ್‌ ಹೇಳಿದ್ದ.  ಆದರೆ, ಈ ಪ್ರಯೋಗದಲ್ಲಿ ನ್ಯೂಟ್ರಿನೋ ಎಂಬ ಪುಟ್ಟ ಕಣ ಬೆಳಕಿಗಿಂತ 60 ನ್ಯಾನೊ ಸೆಕೆಂಡ್‌ಗಳಷ್ಟು ಬೇಗ ಚಲಿಸುತ್ತದೆ ಎಂಬುದು ಶ್ರುತಪಡಿಟ್ಟಿದೆ.

ಹಾಗೆಂದು ಇದು ರಾತ್ರೋರಾತ್ರಿ `ಬೆಳಕಿಗೆ' ಬಂದ ವಿಚಾರವಲ್ಲ. ಕಳೆದ ಮೂರು ವರ್ಷಗಳಿಂದ ನಡೆಸಲಾದ ಪ್ರಯೋಗದ ಫಲ. ಇಟಲಿ ಮತ್ತು ಫ್ರಾನ್ಸ್‌ ಸರ್ಕಾರದ ನೆರವಿನಲ್ಲಿ ನಡೆದ ಈ ಪ್ರಯೋಗದಲ್ಲಿ 11 ದೇಶಗಳ 160 ವಿಜ್ಞಾನಿಗಳು ಭಾಗವಹಿಸಿದ್ದರು.
ಜಿನೆವಾದ ಸಿಇಆರ್‌ಎನ್‌ನಿಂದ ಇಟಲಿಯ ಗ್ರಾನ್‌ಸ್ಯಾಸೊ ಎಂಬಲ್ಲಿಗೆ 730 ಕಿಮೀ ದೂರದ ನಿರ್ವಾತ ಪ್ರದೇಶದಲ್ಲಿ ಈ ಪರೀಕ್ಷೆ ನಡೆದಿದೆ. ಸಿಇಆರ್‌ಎನ್‌ನಲ್ಲಿ ಸಿದ್ಧಪಡಿಸಲಾದ ನ್ಯೂಟ್ರಿನೋ ಕಣಗಳನ್ನು ಆಕ್ಸಿಲೇಟರ್‌ ಉಪಕರಣದ ಮೂಲಕ ಬಲವಾಗಿ ದೂಡಲಾಯಿತು.  ಅತ್ತ ಕಡೆ ಗ್ರಾನ್‌ಸ್ಯಾಸೊನಲ್ಲಿ ಇದನ್ನು ಪತ್ತೆ ಹಚ್ಚಲು ಆಸಿಲೇಷನ್‌ ಪ್ರೊಜೆಕ್ಟರ್‌  ವಿತ್‌ ಎಮಲ್ಷನ್‌ ಟ್ರಾಕಿಂಗ್‌ ಆಪರೇಟಸ್‌ (ಅಪೇರಾ) ಎಂಬ ವಿಶೇಷ ಡಿಟೆಕ್ಟರ್‌ನ್ನು ಭೂಮಿಯಡಿ ಹುದುಗಿಸಿಡಲಾಗಿತ್ತು. ಈ ಕಣಗಳು ಎಷ್ಟು ಸೆಕೆಂಡ್‌ನಲ್ಲಿ ಗ್ರಾನ್‌ಸ್ಯಾಸೊ ತಲುಪಿದವು ಎಂದು ಲೆಕ್ಕ ಹಾಕಲಾಯಿತು. ಇಂಥ ಪ್ರಯೋಗ ಮಾಡಿದ್ದು ಒಂದೆರಡು ಸಲ ಅಲ್ಲ. ಸಾವಿರಾರು ಸಲ. ಕೊನೆಗೂ ನ್ಯೂಟ್ರಿನೋ ಕಣ ಬೆಳಕಿಗಿಂತ ಶೇ 0.0025ರಷ್ಟು ಬೇಗ ಚಲಿಸುತ್ತದೆ ಎನ್ನುವ ವಿಚಾರ ಸ್ಪಷ್ಟವಾಯಿತು.
ಬರುವ ಪ್ರತಿಯೊಂದು ಫಲಿತಾಂಶಗಳು ನಿರೀಕ್ಷೆಯಂತೆಯೇ ಇವೆ ಎನ್ನುವುದು ವಿಜ್ಞಾನಿಗಳಿಗೆ ಗೊತ್ತಾಗಿಬಿಟ್ಟಿತು. ಹಾಗೆಂದು ಅವರು ಅದನ್ನು ತರಾತುರಿಯಲ್ಲಿ ಪ್ರಕಟಿಸುವ ಧೈರ್ಯವನ್ನೂ ಮಾಡಲಿಲ್ಲ. ಏಕೆಂದರೆ, ಈ ಫಲಿತಾಂಶ ಭೌತವಿಜ್ಞಾನದ ಬುಡವನ್ನೇ ಅಲ್ಲಾಡಿಸಿಬಿಡುತ್ತದೆ; ಟೀಕೆಗಳ ಮಹಾಪೂರ ಹರಿದುಬರುತ್ತದೆ ಎಂದು ಅರಿವೂ ಅವರಿಗೆ ಇತ್ತು. ಆ ಕಾರಣಕ್ಕಾಗಿಯೇ ಪ್ರಯೋಗದ ನೇತೃತ್ವ ವಹಿಸಿದ್ದ ಡೇರಿಯೋ ಅಟೆರಿಯೊ, `ಈ ಬಗ್ಗೆ ಇನ್ನಷ್ಟು ಪರೀಕ್ಷೆ ನಡೆಯಬೇಕು' ಎಂದು ಹೇಳಿ ನಿರೀಕ್ಷಣಾ ಜಾಮೀನು ಪಡೆದುಕೊಂಡುಬಿಟ್ಟರು.
2007ರಲ್ಲಿ ಚಿಕಾಗೋದ ಫರ್ಮಿಲ್ಯಾಬ್‌ನಲ್ಲೂ ಇಂಥದ್ದೊಂದು ಪ್ರಯೋಗ ನಡೆದಿತ್ತು. ಆದರೆ ನಿರೀಕ್ಷಿತ ಫಲಿತಾಂಶ ಸಿಕ್ಕಿರಲಿಲ್ಲ. ಆದರ ಜಿನೆವಾದ ಸುದ್ದಿ ಕೇಳಿ ಫರ್ಮಿಲ್ಯಾಬ್‌ನವರೂ ಗರಿಗೆದರಿದ್ದಾರಂತೆ. ದೂಳು ತುಂಬಿದ್ದ  ಯಂತ್ರೋಪಕರಣಗಳನ್ನು ಮತ್ತೆ ಅಣಿಗೊಳಿಸಲು ಹೊರಟಿದ್ದಾರೆ.
ಕಂಪನ
ಅಟೆರಿಯೋ ಪ್ರಯೋಗದ ಫಲಶ್ರುತಿಯನ್ನು ಪ್ರಕಟಿಸುತ್ತಿರುವಂತೆಯೇ ವಿಜ್ಞಾನ ಲೋಕದಲ್ಲಿ ಕಂಪನ ಶುರುವಾಗಿಬಿಟ್ಟಿದೆ. ಇದೇನು ಮಕ್ಕಳಾಟ ಎಂದು ಹಲವರು ಪ್ರಶ್ನಿಸಿದರೆ, ಇದು ಹಾರುವ ಚಾಪೆ ಇದ್ದ ಹಾಗೆ ಗೇಲಿ ಮಾಡಿದವರು ಇದ್ದಾರೆ. ನಿಜ, ಹಾಗೊಂದು ವೇಳೆ ಇದನ್ನು ವೈಜ್ಞಾನಿಕ ಲೋಕ ಒಪ್ಪಿಕೊಂಡುಬಿಟ್ಟರೆ ಫಿಜಿಕ್ಸ್‌ನ ಮೂಲತಳಹದಿಯೇ ಅಲುಗಾಡಿಬಿಡುತ್ತದೆ. ವಿಶ್ವದ ಉಗಮ, ವಿಕಾಸದಿಂದ ಹಿಡಿದು ಕಾಲದ ಗಣನೆಯವರೆಗೂ ಎಲ್ಲವನ್ನೂ ಮಾಡಿದ್ದು ಐನ್‌ಸ್ಟೀನ್‌ ಸಾಪೇಕ್ಷ ಸಿದ್ಧಾಂತವನ್ನು (ಥಿಯರಿ ಆಫ್‌ ರಿಲೇಟಿವಿಟಿ) ಆಧರಿಸಿಯೇ. 
ನಕ್ಷತ್ರ, ಗ್ಯಾಲಕ್ಸಿಗಳ ದೂರ ಅಳೆಯುತ್ತಿದ್ದುದು ಐನ್‌ಸ್ಟೀನ್‌ನ ಇದೇ ಪರಿಕಲ್ಪನೆ ಮೂಲಕ. ನಾವು ಪ್ರಸಕ್ತ ನೋಡುತ್ತಿರುವ ನಕ್ಷತ್ರ ಎಷ್ಟೋ ಸಾವಿರ ವರ್ಷಗಳ ಹಿಂದೆ ಚೆಲ್ಲಿದ ಬೆಳಕು. ಬಹುಶಃ ಈಗ ಆ ನಕ್ಷತ್ರ ಸತ್ತೇ ಹೋಗಿದ್ದಿರಬಹುದು ಎಂಬ ನಮ್ಮ ವಿಜ್ಞಾನಿಗಳ ವಾದವನ್ನೆಲ್ಲ ಮರುಪರಿಶೀಲಿಸಬೇಕಾಗಬಹುದು. ಫಿಜಿಕ್ಸ್‌ ಪಠ್ಯಪುಸ್ತಕವೇ ಬದಲಾಗಿಬಿಡುತ್ತದೆ.
ಇದಕ್ಕೂ ಮಿಗಿಲಾಗಿ, ಕಾಲದ ಪರಿಕಲ್ಪನೆ  ಬಗ್ಗೆ ಆಲೋಚಿಸೋಣ. ಕಾಲದ ಮೇಲಿನ ಸವಾರಿ ಬಗ್ಗೆ ಸಾಕಷ್ಟು ಸಿನೆಮಾ, ಧಾರಾವಾಹಿಗಳು ಬಂದಿವೆ. ಖ್ಯಾತ ವಿಜ್ಞಾನಿ ಸ್ಟೀಫನ್‌ ಹಾಕಿಂಗ್‌ ಟೈಮ್‌ ಮತ್ತು ಸ್ಪೇಸ್‌ ಪರಿಕಲ್ಪನೆ ಕುರಿತು ಮನೋಜ್ಞವಾಗಿ ಬರೆದಿದ್ದಾರೆ. ಲಾಸ್ಟ್‌ ಎಂಬ ಟಿವಿ ಧಾರಾವಾಹಿಯಲ್ಲಿ  ಗೆಳೆಯರ ತಂಡವೊಂದು ಬೆಳಕಿಗಿಂತ ವೇಗವಾಗಿ ಚಲಿಸಿ ದಶಕಗಳ ಹಿಂದೆ ಹೋಗಿ ನಿಂತುಕೊಂಡ ಸ್ವಾರಸ್ಯಕರ ಕಥೆ ಇತ್ತು. ಬಹುಶಃ ಅದೇ ನಿಜವಾಗಿಬಿಟ್ಟರೆ..?
ನ್ಯೂಟ್ರಿನೋ ಕಣದ ಮೂಲಕ ನಾವು ಮುಂದಿನ ದಿನಗಳಲ್ಲಿ ಇ ಮೇಲ್‌ನಂತೆ ಯಾವುದಾದರೂ ಸಂದೇಶ ಕಳುಹಿಸಲು ಸಾಧ್ಯವಾಯಿತು ಎಂದಿಟ್ಟುಕೊಳ್ಳಿ. ಅಂಥ ಸಂದರ್ಭದಲ್ಲಿ ನಮ್ಮ ಸಂದೇಶ  ಭೂತ ಕಾಲಕ್ಕೆ ಹೋಗಿನಿಂತುಕೊಂಡು ಬಿಡುತ್ತದೆ. ಅಂದರೆ, ಬೆಳಕಿಗಿಂತ ವೇಗವಾಗಿ ಈ ಕಣಗಳು ಸಂದೇಶವನ್ನು  ಹೊತ್ತೊಯ್ದಿರುತ್ತವೆ!
ಐನ್‌ಸ್ಟೀನ್‌ ಹೇಳಿದ, ವಿಶ್ವ ಒಪ್ಪಿಕೊಂಡ ಇ=ಎಂಸಿ2 (ಇಲ್ಲಿ ಇ ಎಂದರೆ ಶಕ್ತಿ, ಎಂ ಎಂದರೆ ದ್ರವ್ಯರಾಶಿ ಹಾಗೂ ಸಿ ಎನ್ನುವುದು ಬೆಳಕಿನ ವೇಗದ ಸ್ಥಿರಾಂಕ) ಇಲ್ಲಿ ಅರ್ಥ ಕಳೆದುಕೊಳ್ಳಬಹುದು. ಈ ನಿಯಮದ ಪ್ರಕಾರ ಬೆಳಕಿಗಿಂತ ವೇಗವಾಗಿ ಚಲಿಸುವ ಯಾವುದಾದರೂ ವಸ್ತುಗಳಿದ್ದರೆ ಅವುಗಳ ದ್ರವ್ಯರಾಶಿ(ಮಾಸ್‌) ಅನಂತವಾಗಿರಬೇಕು. ಸಾಧಾರಣ ದ್ರವ್ಯರಾಶಿ ಇರುವ ಯಾವುದೇ ವಸ್ತು ಬೆಳಕಿಗಿಂತ ಬೇಗ ಚಲಿಸಲಾರವು. ಇಲ್ಲಿ ಬೆಳಕಿನ ಕಣಕ್ಕೆ  (ಫೋಟಾನ್‌) ದ್ರವ್ಯರಾಶಿ ಇಲ್ಲ. ಹೀಗಾಗಿ ಐನ್‌ಸ್ಟೀನ್‌ ಆಲೋಚನೆ ಕತೆ ಏನು? ಯಾವುದು ನಿಜ? ಎಷ್ಟು ನಿಜ?
ಆ್ಯಂಟಿ ರಿಲೇಟಿವಿಸಂ
ಐನ್‌ಸ್ಟೀನ್‌ ಸಿದ್ಧಾಂತವನ್ನು ಒಪ್ಪದವರು, ತಿರಸ್ಕರಿಸಿದವರು ಒಬ್ಬಿಬ್ಬರಲ್ಲ. ಅವರು ಥಿಯರಿ ಮಂಡಿಸುತ್ತಿರುವಾಗಲೇ ವಿರೋಧ ಸಾಕಷ್ಟು ವ್ಯಕ್ತವಾಗಿದ್ದವು.  ಗ್ರಹಣದ ವೇಳೆ, ಬಾಹ್ಯಾಕಾಶ ನೌಕೆಯಲ್ಲಿ  ಹೀಗೆ ಬೇರೆ ಬೇರೆ ಸನ್ನಿವೇಶದಲ್ಲಿ ಐನ್‌ಸ್ಟೀನ್‌ನ ನಿಲುವನ್ನು ಪರೀಕ್ಷಿಸಲಾಗಿದೆ. ಮ್ಯಾಕ್ಸ್‌ವೆಲ್‌ನ ಎಲೆಕ್ಟ್ರೋಮ್ಯಾಗ್ನೆಟಿಸಂ ನಿಯಮ ಹಾಗೂ ಮೈಕೆಲ್ಸನ್‌ ಮೋರೆ ಪ್ರಯೋಗಗಳು ಐನ್‌ಸ್ಟೀನ್‌ ನಿಲುವಿಗೆ ಸವಾಲು ಒಡ್ಡಿದ್ದವು. ಲಾರೆಂಟ್ಜ್‌ ಎಂಬಾತ ಸಾಪೇಕ್ಷ  ಥಿಯರಿಯನ್ನು ಪ್ರಶ್ನಿಸಲು ಪ್ರಯತ್ನಿಸಿ ಸೋತಿದ್ದ.
ಐನ್‌ಸ್ಟೀನ್‌ ಇದ್ದಾಗಲೇ ಆತನ ಸಿದ್ಧಾಂತವನ್ನು ಮುರಿಯುವ ಪ್ರಯತ್ನ ನಡೆಯುತ್ತಲೇ ಇತ್ತು. ಅಂಥ ನೂರಕ್ಕೂ ಹೆಚ್ಚು ವಿಜ್ಞಾನಿಗಳು ಬರೆದ ಪ್ರಬಂಧವನ್ನು ಕ್ರೋಡೀಕರಿಸಿ `100 ಆಥರ್ಸ್‌ ಎಗೆನೆಸ್ಟ್‌ ಐನ್‌ಸ್ಟೀನ್‌' ಎಂಬ ಪುಸ್ತಕವೇ ಬಂದಿತ್ತು. ಇದನ್ನು ಓದಿ ಐನ್‌ಸ್ಟೀನ್‌ ಏನು ಹೇಳಿದ್ದ ಗೊತ್ತೇ? `ಸುಳ್ಳಿದ್ದರೆ ಸುಳ್ಳೆಂದು ಹೇಳಲು ನೂರು ಜನ ಏಕೆ? ಒಬ್ಬ ಸಾಕಲ್ಲವೇ?' ಎಂದು.
ಈಗಲೂ ಐನ್‌ಸ್ಟೀನ್‌ ನಿಲುವನ್ನು ಪ್ರಶ್ನಿಸುತ್ತಲೇ ಇರುವ ವರ್ಗ ಒಂದಿದೆ. ಅವರನ್ನು ಆ್ಯಂಟಿ ರಿಲೇಟಿವಿಸ್ಟ್‌ ಎಂದು ಕರೆಯಲಾಗುತ್ತದೆ.  ಈ ವಿಜ್ಞಾನಿಗಳ ಗುಂಪು ಒಂದಲ್ಲ ಒಂದು ರೀತಿಯಲ್ಲಿ ಒಗ್ಗೂಡಿ, ಪ್ರಯೋಗ ನಡೆಸಿ ಐನ್‌ಸ್ಟೀನ್‌ ಪಾರಮ್ಯವನ್ನು ಮುರಿಯಲು ಪ್ರಯತ್ನಿಸುತ್ತಲೇ ಇದೆ.

ನ್ಯೂಟ್ರಿನೋ ಎಂದರೇನು?
ಸಬ್‌ ಅಟಾಮಿಕ್‌ ಕಣವಾಗಿರುವ ಇದು ಕೊಂಚ ಎಲೆಕ್ಟ್ರಾನ್‌ ಥರದ ಗುಣಲಕ್ಷಣಹೊಂದಿದೆ. ಆದರೆ, ಇದಕ್ಕೆ ಎಲೆಕ್ಟ್ರಾನ್‌ನಂತೆ ಯಾವುದೇ ವಿದ್ಯುತ್‌ ಚಾರ್ಜ್‌ ಹೊಂದಿರುವುದಿಲ್ಲ. ಇದರಿಂದ ಯಾವುದೇ ವಿದ್ಯುತ್‌ಕಾಂತೀಯ ಬಲ ಇದರ ಮೇಲೆ ಪರಿಣಾಮ ಬೀರುವುದಿಲ್ಲ.  ಹಾಗಾಗಿ ಯಾರ ಅಡ್ಡಿ ಇಲ್ಲದೆಯೂ ಬಲುದೂರವನ್ನು ಕ್ರಮಿಸಿಬಿಡುತ್ತದೆ. ಟ್ರಾಫಿಕ್‌ ಸಿಗ್ನಲ್‌ ಇದ್ದರೂ ಸೈಕಲ್‌ ಸವಾರ ಹೋಗುತ್ತಾನಲ್ಲ ಹಾಗೆ. ಕೆಲವು ಸಲ ಘನವಸ್ತುಗಳ ಒಳಗೂ ಇದು ಹೊಕ್ಕುಬಿಡುತ್ತದೆ. ಗೋಡೆಗಳನ್ನೂ ಕ್ರಮಿಸಿ ಮುಂದೆ ಹೋಗುವ ಛಾತಿ ಇದಕ್ಕಿದೆಯಂತೆ.
1931ರಲ್ಲಿ ಇಂಥದ್ದೊಂದು ಕಣದ ಅಸ್ತಿತ್ವದ ಬಗ್ಗೆ ತಿಳಿದುಬಂತು. 1968ರಲ್ಲಿ ಸೂರ್ಯನ ಕಿರಣಗಳಿಂದ ಹೊರಹೊಮ್ಮಿದ ಎಲೆಕ್ಟ್ರಾನ್‌ನ ಜತೆಗೆ ಈ ನ್ಯೂಟ್ರಿನೋ ಇರುವುದು ಗೊತ್ತಾಯಿತು. 1987ರಲ್ಲಿ  ಸೂಪರ್‌ನೋವಾದಿಂದ ಹೊರಬಂದ ನ್ಯೂಟ್ರಿನೋ ವೇಗವನ್ನು ನೋಡಿ ವಿಜ್ಞಾನಿಗಳಿಗೆ ಅಚ್ಚರಿಯಾಯಿತಂತೆ.
ಇದರ ದ್ರವ್ಯರಾಶಿ ಭಾರಿ ಕಡಿಮೆ. ಇವು ಕ್ರಮಿಸುತ್ತಿರುವಾಗಲೇ ವೇಷ ಬದಲಾಯಿಸಿಕೊಂಡು ಹೋಗುವ ಸಾಮರ್ಥ್ಯ ಹೊಂದಿದೆಯಂತೆ.  ಇವುಗಳಿಗೆ ಒಂದು ಬಗೆಯ ವಾಸನೆಯೂ ಇದೆ. ವಾಸನೆಯನ್ನೂ ಬದಲಾಯಿಸಿಕೊಳ್ಳುತ್ತಾ ಇರುತ್ತವೆ. ಎಲೆಕ್ಟ್ರಾನ್‌, ಮ್ಯೂವಾನ್‌ ಅಥವಾ ಟಾವೊ ಜತೆಗೆ ನ್ಯೂಟ್ರಿನೋ ಲಿವ್‌ ಇನ್‌ ರಿಲೇಷನ್‌ಶಿಪ್‌ ನಡೆಸುವುದೇ ಹೆಚ್ಚು.