Saturday, February 9, 2013

ಹಿರೇಮಠರ ಮಾತು 
ಬಳ್ಳಾರಿ ಅಕ್ರಮ ಗಣಿಯೊಳ ಹೊಕ್ಕು ಅಲ್ಲಿ ನಡೆಯುತ್ತಿದ್ದ ಲೂಟಿಕೋರರ ರುದ್ರನರ್ತನವನ್ನು ಕಣ್ಣಾರೆ ಕಂಡ ಎಸ್‌.ಆರ್‌.ಹಿರೇಮಠರು ಹೆದರಿ ನಿಲ್ಲಲಿಲ್ಲ. ಎದೆಯೊಳಗೆ ಧಗಧಗಿಸುತ್ತಿದ್ದ ಹೋರಾಟದ ಕಿಚ್ಚು ಹಾಗೆ ಸುಮ್ಮನಿರಲು ಬಿಡುವಂಥದ್ದೂ ಅಲ್ಲ. ಗಣಿವ್ಯೂಹದೊಳಗಿನ ಹಳವಂಡಗಳ ಒಂದೊಂದೇ ದಾಖಲೆಗಳನ್ನು ಕಲೆ ಹಾಕಿ ಸುಪ್ರೀಂಕೋರ್ಟ್‌ವರೆಗೆ ಹೋಗಿ ಮುಟ್ಟಿಸಿದರು. ಅಕ್ರಮಿಗಳನ್ನು ಸಿಬಿಐ ಕಟಕಟೆಗೆ ತಂದು ನಿಲ್ಲಿಸುವವರೆಗೆ ವಿರಮಿಸಲಿಲ್ಲ. ಈಗ ಜನಾರ್ದನ ರೆಡ್ಡಿ ಒಳಗಿದ್ದಾರೆ;ಯಡಿಯೂರಪ್ಪ ಒಳಗೆ ಹೋಗಲು ಕಾಯುತ್ತಿದ್ದಾರೆ.. ಹೋರಾಟ ಹೇಗೆ ಸಾಗಿಬಂತು? ಅದರ ಹಿಂದಿನ ರಣತಂತ್ರಗಳೇನು? ಹಿರೇಮಠ್‌ ಅವರ ಮಾತಿನಲ್ಲೇ ಕೇಳಿ. . .


ಇನ್ನೂ ಮಹಾಭಾರತ ಪೂರ್ಣಗೊಂಡಿಲ್ಲ..
ಎಸ್‌.ಆರ್‌.ಹಿರೇಮಠ
2008- ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ತಾಂಡವವಾಡುತ್ತಿದ್ದ ಸಮಯವದು. ನೈಸರ್ಗಿಕ ಸಂಪತ್ತು ಲೂಟಿಯಾಗುತ್ತಿರುವ ಬಗ್ಗೆ ಮಾಧ್ಯಮಗಳಲ್ಲೂ ಸಾಕಷ್ಟು ಚರ್ಚೆ ನಡೆಯುತ್ತಿತ್ತು. ಇದೇ ವೇಳೆ ಬಳ್ಳಾರಿ ಜಿಲ್ಲೆಯ ಸಂಡೂರು, ಹೊಸಪೇಟೆಗಳಲ್ಲಿ ಅವ್ಯಾಹತವಾಗಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಕೆಲವು ಸ್ನೇಹಿತರು ದಾಖಲೆ ಸಹಿತ ನಮ್ಮ ಗಮನಕ್ಕೆ ತಂದರು. ನೈಸರ್ಗಿಕ ಸಂಪತ್ತನ್ನು ರಕ್ಷಿಸುವುದು ನಮ್ಮ ಸಂಸ್ಥೆ ಸಮಾಜ ಪರಿವರ್ತನ ಸಮುದಾಯದ (ಎಸ್‌ಪಿಎಸ್‌) ಮುಖ್ಯ ಧ್ಯೇಯ ಕೂಡ.
ಪರಿಸರದ ಮೇಲೆ ಸರ್ಕಾರದ ನಿಯಂತ್ರಣ ಇರಬಾರದು. ಬದಲಾಗಿರುವ ಸಾಮಾಜಿಕ- ಆರ್ಥಿಕ ಪರಿಸ್ಥಿತಿಯಲ್ಲಿ ಪರಿಸರದ ಮೇಲೆ ಸಮುದಾಯದ ನಿಯಂತ್ರಣ ಇರಬೇಕು ಎನ್ನುವುದು ನಮ್ಮ ಇಂಗಿತ. ಈ ಅಭಿಪ್ರಾಯವನ್ನು ಇಟ್ಟುಕೊಂಡೇ ನಾವು ಬೇರೆ ಬೇರೆ ಕ್ಷೇತ್ರಗಳಿಂದ ಬಂದ ಸಮಾನ ಮನಸ್ಕರು ಒಂದು ಕಡೆ ಸೇರಿಕೊಂಡೆವು.
ಸಮಾಜದ ಮೇಲೆ ದೂರಗಾಮಿ ದುಷ್ಪರಿಣಾಮ ಬೀರಬಲ್ಲ ಅಕ್ರಮಗಳ ವಿರುದ್ಧ ಕಾನೂನುಬದ್ಧವಾಗಿ ಹೋರಾಡುತ್ತಿದ್ದೆವು. ಕೆಲವು ವರ್ಷಗಳ ಹಿಂದೆಯಷ್ಟೇ ಛತ್ತೀಸ್‌ಗಢದ ಬಸ್ತಾರ್‌ ಅರಣ್ಯದಲ್ಲಿ ಟಿಂಬರ್‌ ಮಾಫಿಯಾದ ವಿರುದ್ಧ ಸುಪ್ರೀಂಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದೆ. ಆ ಪ್ರಕರಣದ ಗಾಢ ಅನುಭವ ನನ್ನದ್ದಾಗಿದ್ದರಿಂದಲೋ ಏನೋ, ಬಳ್ಳಾರಿ ಗಣಿಗಾರಿಕೆ ವಿಷಯವನ್ನು ಸಂಡೂರಿನ ನಾಗರಿಕ ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳು ನನ್ನ ಗಮನಕ್ಕೆ ತಂದರು. ಅಲ್ಲಿ ನಡೆಯುತ್ತಿದ್ದ ಅರಣ್ಯ ನಾಶ, ಗಣಿಗಾರಿಕೆ ಕುರಿತು ದಾಖಲೆ ಸಹಿತ ಹಲವು ಸ್ವಯಂ ಸೇವಕರು ನನ್ನನ್ನು  ಸಂಪರ್ಕಿಸಿದರು. ಸ್ಥಳೀಯರೇ ನಿಂತು ಹೋರಾಡಬೇಕು, ನಾನು ನಿಮಗೆ ಸಹಕರಿಸುತ್ತೇನೆ ಎಂದು ಹೇಳಿ ಅವರೆಲ್ಲರ ಸಹಾಯದಿಂದ ಬಳ್ಳಾರಿ ಜಿಲ್ಲೆಯ ಗಣಿಗಾರಿಕೆ ಇತಿಹಾಸ, ಅಲ್ಲಿನ ಪರಿಸರ ನಾಶ, ನಿಯಮಗಳನ್ನು ಮೀರಿ ನಡೆಯುತ್ತಿರುವ ಗಣಿಗಾರಿಕೆ ಎಲ್ಲವನ್ನೂ ಅಧ್ಯಯನ ಮಾಡಿದೆವು. ಅಲ್ಲಿ ರೆಡ್ಡಿ ಸೋದರರದ್ದು ಮಾತ್ರ ಅಕ್ರಮ ಗಣಿಗಾರಿಕೆ ಆಗಿರಲಿಲ್ಲ. ಅನಿಲ್‌ ಲಾಡ್‌, ಎಂಎಸ್‌ಪಿಎಲ್‌, ಕಲ್ಯಾಣಿ, ಜಿಂದಾಲ್‌ ಹೀಗೆ ಎಲ್ಲರಿಗೂ ಖನಿಜದ ಲಾಭ ಮುಖ್ಯವಾಗಿತ್ತೇ ಹೊರತು ಪರಿಸರದ ಬಗ್ಗೆ ಯಾರಿಗೂ ಚಿಂತೆ ಇರಲಿಲ್ಲ. ಇಲ್ಲಿ ಕೋಟಿಗಟ್ಟಲೆ ಅವ್ಯವಹಾರ ನಡೆದಿರುವ ಅನುಮಾನ ಶುರುವಾಯಿತು.
ಮೊದಲ ಹೆಜ್ಜೆ
ಇದರ ವಿರುದ್ಧ ಹೋರಾಟ ಎಂದು ಮಹಾಭಾರತ ಯುದ್ಧದಂಥ ತೀವ್ರತಮವಾದ ಹೋರಟ ಬೇಕು ಎಂದು ನನಗೆ ಅನ್ನಿಸಿತು. ಎಲ್ಲದ್ದಕ್ಕೂ ಮೊದಲು ಜನರನ್ನು ಸೇರಿಸಬೇಕಾಗುತ್ತದೆ. ಜನರಿಗೆ ತಿಳುವಳಿಕೆ ನೀಡಬೇಕಾಗುತ್ತದೆ. ಹೀಗಾಗಿ, 2008ರ ನವೆಂಬರ್‌ 16 ರಂದು ಸಂಡೂರಿನಲ್ಲಿ  ಜಾಗೃತಿ ರೇಖಾ ಎಂಬ ಸತ್ಯಾಗ್ರಹವನ್ನು ಹಮ್ಮಿಕೊಂಡೆವು. ಇದರಲ್ಲಿ ಸುಮಾರು 350 ಜನ ಭಾಗವಹಿಸಿದ್ದರು. ಮರುದಿನವೇ ಹೊಸಪೇಟೆಯಲ್ಲಿ ಅಂಥದ್ದೇ ಕಾರ್ಯಕ್ರಮ ಹಮ್ಮಿಕೊಂಡೆವು. ಸಂಕಲ್ಪ ಸಭಾ ಎಂಬ ಸಭೆ ನಡೆಸಿ ತಹಶೀಲ್ದಾರ್‌ ಮೂಲಕ ಪ್ರಧಾನಿ ಹಾಗೂ ಮುಖ್ಯಮಂತ್ರಿಗಳಿಗೆ ಅಕ್ರಮ ಗಣಿಗಾರಿಕೆ ಬಗ್ಗೆ ಮನವಿ ಸಲ್ಲಿಸಿದೆವು. ಇದು ಮಹಾಭಾರತದ ಮೊದಲ ಹೆಜ್ಜೆ.
ಹೀಗೆ ಒಂದೊಂದೇ ಹೆಜ್ಜೆ ಇಟ್ಟುಕೊಂಡು ಹೋಗಬೇಕೆಂದು ನಮಗೆ ಬಹಳ ಸ್ಪಷ್ಟವಾಗಿ ಗೊತ್ತಿತ್ತು. ಏಕೆಂದರೆ ನಾವು ಎದುರು ಹಾಕಿಕೊಳ್ಳುತ್ತಿರುವುದು ಸಾಮಾನ್ಯ ವ್ಯಕ್ತಿಗಳನ್ನಲ್ಲ ಎಂದು ಅರಿವೂ ನಮಗಿತ್ತು. 2009ರ ಜನವರಿ 25ರಂದು ಬಳ್ಳಾರಿ ಜಿಲ್ಲಾಧಿಕರಿ ಕಚೇರಿ ಎದುರು ಭಾರಿ ಪ್ರತಿಭಟನೆ ಮಾಡಿದೆವು. ಅದರಲ್ಲಿ ಸುಮಾರು 5,000ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.
ಮೇ ತಿಂಗಳಲ್ಲಿ ಎಸ್‌ಪಿಎಸ್‌ ಮತ್ತು ನಾಗರಿಕ ಹಿತರಕ್ಷಣಾ ವೇದಿಕೆ ಜಂಟಿಯಾಗಿ ಕಾರ್ಯಾಗಾರವನ್ನು ಆಯೋಜಿಸಿತು. ಇದರಲ್ಲಿ ಹಂಪಿ ಕನ್ನಡ ವಿವಿ ಮತ್ತು ಗುಲ್ಬರ್ಗ ವಿವಿಯ ವಿಸ್ತರಣಾ ಕೇಂದ್ರದ ತಜ್ಞರು ಆಗಮಿಸಿ ವಿವಿಧ ಕಡೆಗಳಿಂದ ಬಂದಿದ್ದ ಯುವ ಕಾರ್ಯಕರ್ತರಿಗೆ ಮಾಹಿತಿಗಳನ್ನು ನೀಡಿದರು.
ಜನಾಂದೋಲನದ ಜತೆಗೆ ಕಾನೂನು ಹೋರಾಟ ಮಾಡುವುದು ನಮ್ಮ ಮುಖ್ಯ ಗುರಿ. ಸುಪ್ರೀಂಕೋರ್ಟಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ನಿರ್ಧರಿಸಿದೆವು. ಇದೇನು ಸರಳವಲ್ಲ. ಎಲ್ಲ ಅಗತ್ಯ ದಾಖಲೆಗಳನ್ನು ಕಲೆಹಾಕಬೇಕು. ಒಂದಿಷ್ಟೂ ಜಾರದಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ನನ್ನ ಜತೆಗೆ ಪ್ರೊ. ವಿಷ್ಣು ಕಾಮತ್‌, ಡಾ. ರವೀಂದ್ರನಾಥ ರಾಮಚಂದ್ರರಾವ್‌ ಕೊಂಗೊವಿ ಮತ್ತಿತರರು ಸಾಕಷ್ಟು ಅಧ್ಯಯನ ನಡೆಸಿದರು. ಆ ಹೊತ್ತಿಗೆ ಲೋಕಾಯುಕ್ತರಾಗಿದ್ದ ಸಂತೋಷ್‌ ಹೆಗಡೆ ಅವರು ತಮ್ಮ ಮೊದಲ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು. ಅದರಲ್ಲಿ ಅಕ್ರಮದ ಬಗ್ಗೆ ಸಾಕಷ್ಟು ಮಾಹಿತಿ ಇದ್ದವು. ಇದರ ಜತೆಗೆ ಮೈನ್ಸ್‌ ಅಂಡ್‌ ಮಿನರಲ್ಸ್‌ ರೆಗ್ಯುಲೇಷನ್‌ ಕಾಯ್ದೆ, ರಾಷ್ಟ್ರೀಯ ಖನಿಜ ನೀತಿ, 2004ರಲ್ಲಿ ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್‌ ಸಂಶೋಧನಾ ಸಂಸ್ಥೆ (ನೀರಿ) ನೀಡಿದ ವರದಿ, ರಾಜ್ಯ ಸರ್ಕಾರ ನೀಡಿದ ಲೈಸೆನ್ಸ್‌, ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳು ಗಣಿ ಅಕ್ರಮದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ವರದಿ. . .  ಹೀಗೆ ನೂರಾರು ದಾಖಲೆಗಳನ್ನು ಕಲೆ ಹಾಕಿದೆವು.

ರಣನೀತಿ
ದಾಖಲೆಗಳನ್ನು  ಕಲೆಹಾಕಿದ ನಂತರ ನಾವು ಇದನ್ನು ಯಾವ ರೀತಿ ಮಂಡಿಸಬೇಕು ಎನ್ನುವುದರ ಬಗ್ಗೆ  ಚರ್ಚೆ ಆರಂಭಿಸಿದೆವು. ಅದಕ್ಕೊಂದು ರಣನೀತಿ ಬೇಕಾಗಿತ್ತು. ಸ್ವಲ್ಪ ಯಾಮಾರಿದರೂ ನಮ್ಮ ಪ್ರಯತ್ನವೆಲ್ಲ ನೀರಿಗೆ ಹಾಕಿದ ಹೋಮದಂತಾಗಿಬಿಡುತ್ತಿತ್ತು.
ಅಷ್ಟೂ ದಿನ ಕರ್ನಾಟಕದಲ್ಲಿ ನಮ್ಮದು ಯಾವುದೇ ಗಣಿಗಾರಿಕೆ  ಇಲ್ಲ ಎಂದು ಜನಾರ್ದನ ರೆಡ್ಡಿ ಹೇಳುತ್ತಿದ್ದರೆ, ಕರ್ನಾಟಕದಲ್ಲಿ ಅಕ್ರಮ ನಡೆಯುತ್ತಿಲ್ಲ ಎಂದು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ವಾದಿಸುತ್ತಿದ್ದರು. ಹೀಗಾಗಿ, ನಾವು ಆಂಧ್ರದ ಅಕ್ರಮವನ್ನೇ ಆಧಾರವಾಗಿಟ್ಟುಕೊಂಡು ಸಿಬಿಐಯನ್ನು ಕರ್ನಾಟಕಕ್ಕೆ ಎಳೆದು ತಂದು ಇವರನ್ನೆಲ್ಲ ಕಟಾಂಜನದಲ್ಲಿ ನಿಲ್ಲಿಸಬೇಕಾಗಿತ್ತು. ಕರ್ನಾಟಕದ ಅಕ್ರಮದ ಬಗ್ಗೆ ನಾವು ಮೊದಲಿಗೆ ಪ್ರಸ್ತಾಪಿಸುವ ಹಾಗೆ ಇರಲಿಲ್ಲ. ಇದಕ್ಕಾಗಿ 4 ತಿಂಗಳು ತಪಸ್ಸನ್ನೇ ಮಾಡಿದೆವು. ನಾನು ಮತ್ತು ಗೆಳೆಯ ನಾಗಮಣಿ ಒಂದೊಂದೇ ತನಿಖೆ ಶುರು ಮಾಡಿದೆವು.  ಎರಡೂ ರಾಜ್ಯಕ್ಕೆ ಹೊಂದಿಕೊಂಡಿರುವ ಬಳ್ಳಾರಿ ಮೀಸಲು ಅರಣ್ಯದಲ್ಲಿ  ನಡೆದ ಒತ್ತುವರಿ, ರಸ್ತೆ ನಿರ್ಮಾಣ, ಸುಗಲಮ್ಮ ದೇವಸ್ಥಾನ ಧ್ವಂಸಗಳ ಬಗ್ಗೆ  ದಾಖಲೆ ಕಲೆ ಹಾಕಿದೆವು. ಆಂಧ್ರಕ್ಕೆ ಸೇರಿರುವ ಓಬಳಾಪುರದಲ್ಲಿ 29.21 ಲಕ್ಷ ಟನ್‌; ಅನಂತಪುರ ಮೈನಿಂಗ್‌ನಲ್ಲಿ 11 ಲಕ್ಷ ಟನ್‌ ಖನಿಜ ಸಂಗ್ರಹಿಸಿದ್ದೇವೆ ಎಂದು ಓಎಂಸಿ ಹೇಳಿಕೊಂಡಿತ್ತು. ಇದು ಹೇಗೆ ಸಾಧ್ಯ?  ಅಲ್ಲಿ ಅಷ್ಟೊಂದು ಖನಿಜ ಸಿಗುವುದಿಲ್ಲ; ಸಿಕ್ಕರೂ ಗುಣಮಟ್ಟದ್ದಿಲ್ಲ. ಹೀಗಾಗಿ ಇವೆಲ್ಲ ಕರ್ನಾಟಕದಿಂದ ಅಕ್ರಮವಾಗಿ ಸಾಗಾಟವಾದದ್ದು ಎನ್ನುವುದನ್ನು ಸಾಬೀತುಪಡಿಸುವ ಹೊಣೆ ನಮ್ಮ ಮೇಲೆ ಇತ್ತು.
ಇದೇ ಹೊತ್ತಿಗೆ ಆಂಧ್ರದಲ್ಲಿ  ರಾಜಕೀಯ ಸ್ಥಿತಿ ಬದಲಾಗಿತ್ತು. ಅಲ್ಲಿ ಗಣಿಗಾರಿಕೆ ಬಗ್ಗೆ ತನಿಖೆ ನಡೆಸಲು ಮೂವರು ಸದಸ್ಯರ ಸಮಿತಿ ರಚಿಸಲಾಗಿತ್ತು. ಅದರ ವರದಿ ಆಧರಿಸಿ ಆಂಧ್ರ ಸರ್ಕಾರ ಸುಪ್ರೀಂಕೋರ್ಟಿಗೆ ಎಸ್‌ಎಲ್‌ಪಿ ಸಲ್ಲಿಸಿತು. ಗಣಿಗಾರಿಕೆ ನಿಷೇಧವೂ ಆಯಿತು.
ಈ ಬೆಳವಣಿಗೆಯನ್ನೇ ನಾವು ಕಾಯುತ್ತಿದ್ದೆವು. ತಕ್ಷಣ ನಾವೂ ಸುಪ್ರೀಂಕೋರ್ಟಿಗೆ ರಿಟ್‌ ಹಾಕಿದೆವು. ತನಿಖೆ ವ್ಯಾಪ್ತಿಗೆ ಕರ್ನಾಟಕವನ್ನೂ ಸೇರಿಸಿ ಎಂದು ಕೋರಿಕೊಂಡೆವು. ನಮ್ಮ ಅರ್ಜಿ ಅರಣ್ಯಪೀಠದಲ್ಲಿ ಏಳನೇ ಸರದಿಯಲ್ಲಿತ್ತು. ಪರಿಸ್ಥಿತಿ ನಮ್ಮ ಪರವಾಗಿಲ್ಲ ಎನ್ನುವುದು ಅರಿವಿಗೆ ಬಂತು. ಮುಖ್ಯ ನ್ಯಾಯಮೂರ್ತಿ ಬದಲಾಗುವವರೆಗೆ ನಮ್ಮ ಯಾವುದೇ ಪ್ರಯತ್ನ ಫಲ ಕೊಡುವುದಿಲ್ಲ ಎಂದು ಗೊತ್ತಾದ ಕೂಡಲೇ ಒಂದೆರಡು ತಿಂಗಳು ಸುಮ್ಮನೆ ಕುಳಿತೆವು.
ಮುಖ್ಯ ನ್ಯಾಯಮೂರ್ತಿಗಳಾಗಿ ಎಸ್‌.ಎಸ್‌.ಕಪಾಡಿಯಾ ಅಧಿಕಾರ ಸ್ವೀಕರಿಸಿದ್ದು ನಮ್ಮ ಆತ್ಮಸ್ಥೈರ್ಯವನ್ನು ಹೆಚ್ಚಿಸಿತು. ಅವರು ಒಬ್ಬ ನಿಷ್ಪಕ್ಷಪಾತ ಮತ್ತು ಸಮರ್ಥ ನ್ಯಾಯಮೂರ್ತಿ. ಏಳನೇ ಸ್ಥಾನದಲ್ಲಿರುವ ನಮ್ಮ ಅರ್ಜಿಗೆ ಮೊದಲ ಆದ್ಯತೆ ಕೊಡಿ ಎಂದು ಕೋರ್ಟಿಗೆ ಮತ್ತೆ ಮೊರೆ ಹೋದೆವು. ಇಲ್ಲದಿದ್ದರೆ ಪ್ರಕರಣ ವಿಚಾರಣೆಗೆ ಬರುವಾಗ ಐದೋ, ಹತ್ತೋ ವರ್ಷವಾಗಬಹುದು. ಅಷ್ಟರೊಳಗೆ ಗಣಿಕಳ್ಳರು ಎಲ್ಲ ಸಂಪನ್ಮೂಲವನ್ನು  ಖಾಲಿ ಮಾಡುವ ಅಪಾಯವಿದೆ. ಆದ್ದರಿಂದ ಕನಿಷ್ಠ  ಪ್ರಕರಣದ ವಿಚಾರಣೆಯನ್ನು ಕೇಂದ್ರ ಉನ್ನತಾಧಿಕಾರ ಸಮಿತಿಗೆ ವಹಿಸಿಕೊಡಿ ಎಂದು ನಾವು ಮಾಡಿದ ಮನವಿಗೆ ಸಿಜೆ ಸ್ಪಂದಿಸಿದರು. ಬಳ್ಳಾರಿಯಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ಸಿಇಸಿಯನ್ನು ರಚಿಸಿ ಸಿಜೆ ಕಪಾಡಿಯಾ ಆದೇಶಿಸಿದರು.


ಸ್ವಯಂ ವಾದ
ನನಗೆ ವಾದ ಮಂಡನೆಗೆ ನೆರವಾಗುತ್ತಿದ್ದವರು ಹಿರಿಯ ನ್ಯಾಯವಾದಿ ಪ್ರಶಾಂತ್‌ ಭೂಷಣ್‌. ಒಂದು ಹಂತದಲ್ಲಿ ಅವರು 2ಜಿ ಪ್ರಕರಣದಲ್ಲಿ ಬಿಝಿಯಾಗಿದ್ದರು. ಹಾಗಾಗಿ, ನನಗೆ ವಾದ ಮಂಡಿಸಲು ಉತ್ತೇಜಿಸಿದರು. ಕೆಲವು ಲಾ ಪಾಯಿಂಟ್‌ಗಳನ್ನು ನಾನು ಹೇಳಿಕೊಡುತ್ತೇನೆ. ಉಳಿದಂತೆ ಸತ್ಯವನ್ನೇ ಹೇಳುತ್ತಾ ಬಂದರೆ ಸಾಕು ಎಂದು ನನ್ನನ್ನು ಹುರಿದುಂಬಿಸಿದರು. ಆಗಲೇ ಬೇರೆ ಬೇರೆ ಪ್ರಕರಣಗಳಲ್ಲಿ  4 ಪಿಐಎಲ್‌ ಹಾಕಿದ್ದ ಅನುಭವ ಇದ್ದುದರಿಂದ ವಾದ ಮಂಡಿಸುವುದು ನನಗೆ ಕಷ್ಟ ಎಂದು ಅನ್ನಿಸಲಿಲ್ಲ.
ಸಿಇಸಿ ಮುಂದೆ ನಾನು ವಾದ ಮಂಡಿಸಬೇಕಾಗಿತ್ತು. ಅವರ ಪರವಾಗಿದ್ದ 3-4 ವಕೀಲರು ನನ್ನನ್ನು ಹರಿದು ತಿನ್ನುವ ಹಾಗೆ ನೋಡುತ್ತಿದ್ದರು. ನಾನು ತಣ್ಣಗೆ ವಾದ ಮಂಡಿಸಿದೆ. ಸುಮಾರು 500 ಪುಟಗಳ ಸಮಗ್ರ ದಾಖಲೆಗಳನ್ನು ಸಿಇಸಿ ಮುಂದೆ ಸಲ್ಲಿಸುವ ಮೂಲಕ ರೆಡ್ಡಿ ಒಡೆತನದಲ್ಲಿರುವ ನಾಲ್ಕು ಗಣಿಗಾರಿಕೆ ಲೀಸ್‌ನ್ನು ರದ್ದುಪಡಿಸಬೇಕು ಎಂದು ವಾದಿಸಿದೆ. ಗಣಿಗಾರಿಕೆ ನಿಷೇಧವನ್ನು ಮೊದಲಿಗೆ ಸಿಇಸಿ ನ್ಯಾಯಮೂರ್ತಿಗಳು ಒಪ್ಪಿಕೊಂಡಿರಲಿಲ್ಲ. ನಿಷೇಧಿಸದಿದ್ದರೆ ಸಕ್ರಮದ ಹೆಸರಿನಲ್ಲಿ ಅಕ್ರಮಗಳು ಮುಂದುವರೆಯಬಹುದೆಂಬ ಆತಂಕವನ್ನು ಸಕಾರಣವಾಗಿ ವಿವರಿಸಿದೆ.
ಕಡೆಗೂ 2011ರ ಏಪ್ರಿಲ್‌ 15ರಂದು 2003ರಿಂದ 2009ರವರೆಗೆ ಸುಮಾರು 304.91 ಲಕ್ಷ ಮೆಟ್ರಿಕ್‌ ಟನ್‌ಅದಿರು ಅಕ್ರಮ ಸಾಗಣೆಯಾಗಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಸಿಇಸಿ ಮಧ್ಯಂತರ ವರದಿಯಲ್ಲಿ ಹೊರಹಾಕಿತು. ಯಡಿಯೂರಪ್ಪ ಮುಖ್ಯಮಂತ್ರಿ ಅವಧಿಯಲ್ಲಿ ಸಕ್ರಮಕ್ಕಿಂತ (61 ಲಕ್ಷ ಟನ್‌) ಅಕ್ರಮ (71 ಲಕ್ಷ ಟನ್‌) ಅದಿರು ರಫ್ತಾಗಿದ್ದು, ಹಿಂದೆಂದೂ ಇಷ್ಟು ದೊಡ್ಡ ಪ್ರಮಾಣದ ಅವ್ಯವಹಾರವನ್ನು ನೋಡಿಲ್ಲ ಎಂದು ಸ್ವತಃ ನ್ಯಾಯಮೂರ್ತಿಗಳು ಹೇಳಿದರು.
ಸಿಇಸಿ ತನ್ನ ತನಿಖೆ ಆರಂಭಿಸಿತ್ತು. ಈ ನಡುವೆ 2011ರ ಜುಲೈ 27ರಂದು ಲೋಕಾಯುಕ್ತ ಸಂತೋಷ್‌ ಹೆಗಡೆ ತಮ್ಮ ವರದಿ ಸಲ್ಲಿಸಿದ್ದರು. ಆ ವರದಿಯಲ್ಲಿ ತುಮಕೂರು, ಚಿತ್ರದುರ್ಗದಲ್ಲಿನ ಅಕ್ರಮಗಳ ಬಗ್ಗೆಯೂ ಪ್ರಸ್ತಾಪವಿತ್ತು. ಸಿಇಸಿಯವರಿಗೆ ಈ ವಿಷಯವನ್ನು ಮನವರಿಕೆ ಮಾಡಿಕೊಡಬೇಕಾಗಿತ್ತು. ಹೀಗಾಗಿ 4-5 ದಿನಗಳಲ್ಲಿ ಲೋಕಾಯುಕ್ತ ವರದಿಯನ್ನು ಕೋರ್ಟಿಗೆ ಸಲ್ಲಿಸಿ, ತನಿಖೆ ವ್ಯಾಪ್ತಿಯನ್ನು ಈ ಜಿಲ್ಲೆಗಳಿಗೂ ವಿಸ್ತರಿಸಬೇಕೆಂದು ಕೋರಿಕೊಂಡೆ.
ಸಾಕಷ್ಟು ದಿನಗಳ ವಾದ-ಪ್ರತಿವಾದಗಳ ನಂತರ, ಆಂಧ್ರಪ್ರದೇಶದಲ್ಲಿ ನಡೆಯುತ್ತಿದ್ದ ಸಿಬಿಐ ತನಿಖೆಯನ್ನು ಕರ್ನಾಟಕಕ್ಕೂ ವಿಸ್ತರಿಸುವಲ್ಲಿ ಸಫಲನಾದೆ. ಇದು ಬೆಣ್ಣೆಯಿಂದ  ಕೂದಲು ತೆಗೆಯುವಂಥ ಸೂಕ್ಷ್ಮತೆಯ ಕೆಲಸ. ನಮ್ಮ ರಾಜ್ಯಕ್ಕೂ ಸಿಬಿಐ ಕಾಲಿಟ್ಟಿತ್ತು. ಅಲ್ಲಿಗೆ ನನ್ನ ಒಂದು ಹಂತದ ಕೆಲಸ ಮುಗಿದಿತ್ತು. ಜನಾರ್ದನ ರೆಡ್ಡಿ ಬಂಧನವೂ ಆಯಿತು. ವಿಚಾರಣೆ ನಡೆಯುತ್ತಿದೆ.
ಆದರೆ, ಮಹಾಭಾರತ ಮುಗಿದಿರಲಿಲ್ಲ. ರೆಡ್ಡಿಯನ್ನು ಸಿಬಿಐ ತೆಕ್ಕೆಗೆ ಎಳೆದುಕೊಳ್ಳುವಾಗ ಅನಾಯಾಸವಾಗಿ ಸಿಕ್ಕಿಬಿದ್ದಿದ್ದು  ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ. ಆಗಲೇ ಸಿರಾಜುದ್ದೀನ್‌ ಬಾಷಾ ಅವರ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿತ್ತು. ಸಂತೋಷ್‌ ಹೆಗಡೆ ವರದಿಯಲ್ಲೂ ಯಡಿಯೂರಪ್ಪ ಅಕ್ರಮಗಳ ಪ್ರಸ್ತಾಪವಿತ್ತು. ನಾನು ಹೆಚ್ಚೇನೂ ಮಾಡಲಿಲ್ಲ. ಈ ವರದಿಗಳನ್ನು ಸುಪ್ರೀಂಕೋರ್ಟಿನ ಸಿಇಸಿಗೆ ಸಲ್ಲಿಸಿದೆ. ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ಹೆಚ್ಚು ಕಷ್ಟವೇನೂ ಆಗಲಿಲ್ಲ. ನ್ಯಾಯಾಲಯ ನಮ್ಮ ವಾದಕ್ಕೆ ಸಮರ್ಪಕವಾಗಿಯೇ ಸ್ಪಂದಿಸಿತು. ಈವರೆಗೆ ನಡೆದ ಸುಮಾರು 140ಕ್ಕೂ ಹೆಚ್ಚು ಡಿನೋಟಿಫಿಕೇಷನ್‌ ಪ್ರಕರಣ ತನಿಖೆಗೆ ಒಳಪಡುತ್ತದೆ.
ಮಹಾಭಾರತ ಇನ್ನೂ ಮುಗಿದಿಲ್ಲ. ಬೇಲೆಕೇರಿ ಬಂದರು ಹಗರಣವನ್ನೂ ತನಿಖೆಗೆ ಒಳಪಡಿಸುವುದು ಮುಂದಿನ ಗುರಿ. ಈ ಪ್ರಕರಣದ ವಿಚಾರಣೆ ಆಗಸ್ಟ್‌ನಲ್ಲಿ ಬರಲಿದೆ. ಇದರಲ್ಲಿ  ಜನಾರ್ದನ ರೆಡ್ಡಿ ಪತ್ನಿ, ಶ್ರೀರಾಮುಲು ಪತ್ನಿ ಒಡೆತನದ ಕಂಪೆನಿ, ಶಾಸಕ ನಾಗೇಂದ್ರ ಅವರ ಹಗರಣ, ಅದಾನಿ ಎಂಟರ್‌ಪ್ರೈಸಸ್‌, ಮಲ್ಲಿಕಾರ್ಜುನ ಶಿಪ್ಪಿಂಗ್‌ ಮುಂತಾದ 20 ಕಂಪೆನಿಗಳ ಅಕ್ರಮ ವಿಚಾರಣೆಗೆ ಬರುತ್ತದೆ.
ಇಷ್ಟರ ನಡುವೆ, ಕನಕಪುರ- ಚಾಮರಾಜನಗರದಲ್ಲಿನ ಗ್ರಾನೈಟ್‌ ಗಣಿಗಾರಿಕೆ ಕುರಿತು ಕೋರ್ಟ್‌ ಮೆಟ್ಟಿಲೇರಬೇಕೆಂಬ ಒತ್ತಡ ಬರುತ್ತಿದೆ. ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರ ಅಕ್ರಮಗಳ ಕುರಿತು ತನಿಖೆಯಾಗಬೇಕೆಂದು ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸುತ್ತಿದ್ದೇನೆ.
ನನಗೆ ಇಲ್ಲಿ ರೆಡ್ಡಿ, ಯಡಿಯೂರಪ್ಪ ಯಾರೂ ಮುಖ್ಯರಲ್ಲ. ಅವರೆಲ್ಲರೂ ನಿಮಿತ್ತ ಮಾತ್ರ. ಮುಖ್ಯ ಗಣಿ ಪ್ರದೇಶದ ಜನರ ಬದುಕು. ಅದಕ್ಕಾಗಿ ಪುನಶ್ಚೇತನ ಕೆಲಸ ಆರಂಭವಾಗುವ ಹಂತದಲ್ಲಿದೆ. ಇನ್ನು ಮುಂದೆ ಯಾರೂ ಸಹ ಇಂಥ ಅಕ್ರಮಗಳಿಗೆ ಕೈ  ಹಾಕಬಾರದು ಎನ್ನುವುದು ನನ್ನ ಉದ್ದೇಶ. ಹಾಗೆ ನೋಡಿದರೆ ನನ್ನದು ದೊಡ್ಡ ಸಾಹಸವೇನಲ್ಲ. ಬೇರೆಯವರು ಸಿದ್ಧಪಡಿಸಿದ ವರದಿ, ಕೊಟ್ಟ ದಾಖಲೆಗಳನ್ನು ಒಂದು ಕಡೆ ಜೋಡಿಸಿ ಎಲ್ಲಿಗೆ ತಲುಪಿಸಬೇಕೋ ಅಲ್ಲಿಗೆ ತಲುಪಿಸಿದ್ದೇನೆ ಅಷ್ಟೇ. ಇಂಥ ಹೋರಾಟ ನನ್ನಿಂದ ಒಬ್ಬನಿಂದಲೇ ಆಗುವ ಕೆಲಸ ಅಲ್ಲ. ಇಷ್ಟರವರೆಗೆ ನೀವು ನೋಡಿದ್ದು ಮಹಾಭಾರತದ ಒಂದು ಭಾಗ ಮಾತ್ರ. ನೀವೆಲ್ಲರೂ ಕೈ ಜೋಡಿಸಿ ಇದನ್ನು ಪೂರ್ಣಗೊಳಿಸಬೇಕು.


ಬಾಕ್ಸ್‌...

ಹಿರೇಮಠರಿಗೆ ಆದಾಯ ಎಲ್ಲಿಂದ?
ರಾಜ್ಯದ ಅತಿರಥ ಮಹಾರಥ ರಾಜಕಾರಣಿಗಳನ್ನು ಎದುರು ಹಾಕಿಕೊಂಡು ಸುಪ್ರೀಂಕೋರ್ಟ್‌ ತನಕ ಹೋಗಿ ಹೋರಾಡುತ್ತಿರುವ ಎಸ್‌.ಆರ್‌.ಹಿರೇಮಠರಿಗೆ ಆದಾಯ ಎಲ್ಲಿಂದ ಎನ್ನುವ ಪ್ರಶ್ನೆ ನಿಮಗೂ ಉದ್ಭವಿಸಿರಬಹುದು. ಅದಕ್ಕೆ ಅವರು ಕೊಡುತ್ತಿರುವ  ಉತ್ತರ ಇದು:
ನನ್ನ ನ್ಯಾಯಪರ ಹೋರಾಟಕ್ಕೆ ಮೂರು ಬಗೆಯಲ್ಲಿ ಸಂಪನ್ಮೂಲ ಸಂಗ್ರಹಿಸುತ್ತಿದ್ದೇನೆ.
ಹಳ್ಳಿಗರ ಸೇವೆ: ಯಾವುದೇ ಹೋರಾಟಕ್ಕೆ ಆಯಾ ಹಳ್ಳಿ ಜನರ ಸಹಕಾರ ಬೇಕು. ನಮಗೆ ಇರಲು ಶಾಲೆಯೋ, ಗುಡಿಯನ್ನು ಕೊಟ್ಟರೆ ಸಾಕು. ಅಲ್ಲಿಯೇ ಇದ್ದು ಜನಸಂಘಟನೆ ಮಾಡುತ್ತೇವೆ. ಮನೆ ಮನೆಯಿಂದಲೂ ಜನ ರೊಟ್ಟಿ ಕೊಟ್ಟು ಕಳುಹಿಸುತ್ತಾರೆ. ಯುವಕರು, ಯುವತಿಯರು, ಸ್ವಯಂ ಸೇವಾ ಸಂಸ್ಥೆಗಳ ಸದಸ್ಯರು ಮಾಹಿತಿ ಸಂಗ್ರಹ ಮಾಡಿಕೊಡುತ್ತಾರೆ.
ಮಧ್ಯಮ ವರ್ಗ: ಯಾರೋ ಒಬ್ಬ ಶ್ರೀಮಂತನಿಂದ ಹಣ ಸಂಗ್ರಹಿಸಿದರೆ ಅದಕ್ಕೆ ಜನಶಕ್ತಿ ಬರುವುದಿಲ್ಲ. ಹೀಗಾಗಿ ನಾನು ಮಧ್ಯಮವರ್ಗದ ಜನರಿಂದ ಹಣ ಪಡೆದುಕೊಂಡಿದ್ದೇನೆ. ಎಲ್ಲ ಲೆಕ್ಕವೂ ಇದೆ. ಅಕ್ರಮ ಗಣಿ ವಿರುದ್ಧದ ಹೋರಾಟಕ್ಕೆ ಬೆಂಗಳೂರಿನ ಪ್ರೊಫೆಸರ್‌ಡಾ. ವಿಷ್ಣು ಕಾಮತ್‌ನನಗೆ ಸಹಕಾರ ಕೊಟ್ಟಿದ್ದಾರೆ. ವಕೀಲ ಮೋಹನ್‌ಕಾತರಕಿ ಅವರು ಈ ವರ್ಷ 20,000 ರೂ ಕೊಟ್ಟಿದ್ದಾರೆ. ಖರ್ಚು ವೆಚ್ಚವನ್ನು ಲೆಕ್ಕಾಚಾರದಿಂದಲೇ ಮಾಡುತ್ತೇನೆ. ಸಾಧಾರಣವಾಗಿ ದೆಹಲಿಗೆ ಹೋಗುವುದು ರೈಲಿನಲ್ಲೇ. ಅಲ್ಲಿ ಗಾಂಧಿ ಶಾಂತಿ ಪ್ರತಿಷ್ಠಾನದಲ್ಲಿ ದಿನಕ್ಕೆ 175 ರೂ ಕೊಟ್ಟು ಉಳಿದುಕೊಳ್ಳುತ್ತೇನೆ. ಗಣಿ ವಿರುದ್ಧದ ಹೋರಾಟದಲ್ಲಿ ವಕೀಲ ಶಾಂತಿಭೂಷಣ್‌ಉಚಿತ ವಕಾಲತು ಮಾಡಿದ್ದಾರೆ. ಪಿಐಎಲ್‌ಸಲ್ಲಿಸಲು ಜಸ್ಟೀಸ್‌ಪಿ.ಎನ್‌.ಭಗವತಿ ಪ್ರತಿಷ್ಠಾನ ಹಣ ಕೊಟ್ಟಿದೆ.
ನಾನು ಹನ್ನೊಂದು ವರ್ಷ ಅಮೆರಿಕದಲ್ಲಿದ್ದೆ. ಅಲ್ಲಿನ ಭಾರತೀಯರು ಇಂಥ ಕೆಲಸಕ್ಕೆ ಹಣ ಕೊಡುತ್ತಾರೆ. 1979ರಿಂದಲೇ ನಮ್ಮ ಸಂಸ್ಥೆಗೆ ವಿದೇಶಿ ಭಾರತೀಯರು ದೇಣಿಗೆ ಕೊಟ್ಟಿದ್ದಾರೆ. ಹೀಗೆ ಈ ತ್ರಿವೇಣಿ ಸಂಗಮದ ದೇಣಿಗೆಯಿಂದಲೇ ಹೋರಾಡುತ್ತಿದ್ದೇನೆ.


No comments:

Post a Comment