Saturday, August 27, 2011

gani


ಅಧಿಕಾರಿಗಳು ಗಣಿ ತನಿಖೆ ನಡೆಸಿದ ರೋಚಕ ಕತೆ
ಎಲ್ಲರ ಮೈಪೂರ್ತಿ ಕೆಂಪು. ದೂಳಿನ ಮಧ್ಯೆ ಕಣ್ಣರಳಿಸಿ ನೋಡಿದರೆ ಮಾತ್ರ ಕಾಣುತ್ತಿದ್ದ ಆ ಜನರಿಗೋ ವಿಪರೀತ ಗಡಿಬಿಡಿ. ಜೆಸಿಬಿಗಳಿಗೂ ತನ್ನ ಆರ್ಭಟ ಯಾರಿಗೂ ಕೇಳಿಸದು ಎಂಬ ಅಹಮಿಕೆ. ಶಬ್ದ ಹತ್ತು ಮೈಲಾಚೆ ಕೇಳಿಸುತ್ತಿದ್ದರೂ, ಇದು ಜಗದ ಮೋಸ್ಟ್‌ ಸೀಕ್ರೆಟ್‌ ಎನ್ನುವ ಭ್ರಮೆ ಆ ಮ್ಯಾನೇಜರನಿಗೆ..
-ಹೇಳಿ ಕೇಳಿ ಅದು ಅರಳಿಕಟ್ಟೆಯ ಅಕ್ರಮ ಗಣಿ. ಸದ್ದಿಲ್ಲದೆ ಕೆಲಸ ಮಾಡುತ್ತಿದ್ದೇವೆ ಎಂಬ ಭಾವನೆ ಎಲ್ಲರಲ್ಲೂ ಇರಬೇಕು. ಹಾಗೇನಾದರೂ ಮೈನ್‌ನವರೋ, ಫಾರೆಸ್ಟ್‌ನವರೋ ಬಂದರೆ ಒಂದಷ್ಟು ಅದಿರು ಮುಕ್ಕಿಸಿದರಾಯಿತು ಎನ್ನುವ ಭಂಡತನ ಇದ್ದೇ ಇದೆ.
ಅರಳಿಕಟ್ಟೆ ಇರುವುದು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನಲ್ಲಿ. ಎಂದಿನಂತೆ ಅವತ್ತೂ ಉರಿಬಿಸಿಲಿನಲ್ಲಿ ಕಾರ್ಮಿಕರೆಲ್ಲರೂ ಕಾರ್ಯಮಗ್ನರಾಗಿದ್ದರು. ಆ ವೇಳೆ, ಅಷ್ಟರಲ್ಲಿ ಆರಡಿ ಉದ್ದದ ವ್ಯಕ್ತಿಯೊಬ್ಬರು ಗಣಿಭಾಗದತ್ತ ನಡೆದುಕೊಂಡು ಬಂದರು. ದೂಳಿನಿಂದ ಪೈಜಾಮದ ನಿಜಬಣ್ಣ ಕೆಟ್ಟಿತ್ತು. ಕೆಂಪು ರುಮಾಲು ತೊಟ್ಟುಕೊಂಡಿದ್ದರು. ನೋಡಿದರೆ ಸಾಕು, ಯಾರೊ ರಾಜಾಸ್ಥಾನಿ ಮಾರ್ವಾಡಿ ಎನ್ನಬಹುದಿತ್ತು. ಸ್ವಲ್ಪ ಸ್ವಲ್ಪ ಹಿಂದಿ, ತೋಡಾ ತೋಡಾ ಕನ್ನಡದಲ್ಲಿ ಮಾತು ಶುರು ಮಾಡಿದ ಆತ ಅದಿರು ಕೊಳ್ಳಲು ಬಂದ ವ್ಯಾಪಾರಿ ಎಂದು ತಿಳಿಯಲು ಮ್ಯಾನೇಜರ್‌ಗೆ ಹೆಚ್ಚು ಹೊತ್ತು ಹಿಡಿಯಲಿಲ್ಲ.
ಕೂತಲ್ಲೇ ವ್ಯಾಪಾರ ಕುದುರುತಿದೆಯಲ್ಲ ಎನ್ನುವ ಖುಷಿ ಮ್ಯಾನೇಜರ್‌ಗೆ. ಆಗ ಮಾರುಕಟ್ಟೆ ಬೆಲೆ ಪ್ರತಿ ಮೆಟ್ರಿಕ್‌ ಟನ್‌ಗೆ 900ರಿಂದ 1000 ರೂಪಾಯಿ ಇತ್ತು. ಆದರೆ ಈ ವರ್ತಕ ಈ ಬೆಲೆಯನ್ನು ಏಕ್‌ದಮ್‌ ತಿರಸ್ಕರಿಸಿಬಿಟ್ಟರು. ಉಹುಂ, 700 ರೂಪಾಯಿಗೆ ಕೊಟ್ಟರೆ ತಗೋತ್ತೀನಿ ಎಂದು ಒಂದೇ ಮಾತು ಇಟ್ಟರು. ಚೌಕಾಸಿ ನಡೆಯುತ್ತಿರುವ ಹಾಗೆಯೇ ಆ ವ್ಯಾಪಾರಿ ಇಡೀ ಗಣಿಗೆ ನಾಲ್ಕು ಸುತ್ತು ಬಂದಾಗಿತ್ತು. ಎಷ್ಟು ಅದಿರು ಸಿಗುತ್ತದೆ, ಎಷ್ಟು ಸಾಗಾಟವಾಗುತ್ತದೆ, ಎಲ್ಲಿಗೆ ಸಾಗಾಟವಾಗುತ್ತದೆ ಎಂದೆಲ್ಲ ಕಣ್ಣಲ್ಲೇ ಲೆಕ್ಕ ಹಾಕಿ ಆಗಿತ್ತು. ಗಣಿ ಒಡೆಯನ ಮೊಬೈಲ್‌ ನಂಬರ್‌ಗೂ ಮಾತಾಡಿ ಡೀಲ್‌ ಇನ್ನೇನು ಪಕ್ಕಾ ಆಗುತ್ತದೆ ಎನ್ನುವಷ್ಟರಲ್ಲಿ, ದಿಢೀರಾಗಿ ಮುಂದಿನ ವಾರ ಬರುತ್ತೇನೆ ಎಂದು ಹೊರಟೇಬಿಟ್ಟ ವ್ಯಾಪಾರಿ.
ಮುಂದಿನ ಭಾನುವಾರ- ವ್ಯಾಪಾರಿ ಮಿಸ್‌ ಮಾಡಲಿಲ್ಲ. ಹಿಂದಿನ ವಾರದ ಡ್ರೆಸ್ಸೆ ಹಾಕಿಕೊಂಡಿದ್ದರಿಂದ  ಮ್ಯಾನೇಜರ್‌ಗೆ ಬೇಗ ಗುರ್ತು ಸಿಕ್ಕಿತು. ಈ ಸಲ ಮತ್ತೆ ಶುರುವಿನಿಂದ ಚೌಕಾಸಿ. ಈ ವಾರದ ರಿಸಲ್ಟ್‌ ಅಷ್ಟೇ.. ಆಮೇಲೆ ಬರುತ್ತೇನೆ ಎಂದು ಹೊರಟುಬಿಟ್ಟ.
ಒಂದೆರಡು ದಿನ ಆಗಿತ್ತೇನೋ- 2007, ಜೂನ್‌ 13. ಈಗ ವ್ಯಾಪಾರಿ ಬರಲಿಲ್ಲ. ದಂಡೆತ್ತಿ ಬಂದದ್ದು ಲೋಕಾಯುಕ್ತ ಅಧಿಕಾರಿಗಳು ಮತ್ತು ಪೊಲೀಸರು. ಒಂದು ಕೋಟಿ ರೂ ಮೌಲ್ಯದ 11,500 ಟನ್‌ ಅದಿರು, ಐದು ಜೆಸಿಬಿಗಳನ್ನು ವಶಪಡಿಸಿಕೊಂಡರು. ಇದುವೇ ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿಗೆ ಗಣಿ ಮೇಲೆ ನಡೆದ ದಾಳಿ.
ಆ ಮಾರ್ವಾಡಿ ವ್ಯಾಪಾರಿ ವೇಷ ಹಾಕಿಕೊಂಡು ಬಂದವರು ಬೇರೆ ಯಾರೂ ಅಲ್ಲ- ಗಣಿ ತನಿಖೆಯ ದಂಡನಾಯಕ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಯು.ವಿ.ಸಿಂಗ್‌. ಇನ್ನಾರೋ ಕೆಳಹಂತದ ಅಧಿಕಾರಿಯನ್ನು ಕಳುಹಿಸಿ ಸ್ಥಳ ಪರಿಶೀಲನೆ ಮಾಡಬಹುದಾಗಿತ್ತು. ಡಾ. ಸಿಂಗ್‌ ಹಾಗೆ ಮಾಡಲಿಲ್ಲ. ತಾವೇ ಗಣಿಗಿಳಿದರು!
2-3 ಕಿಮೀ ದೂರದಲ್ಲಿ ಜೀಪು ನಿಲ್ಲಿಸಿ ವೇಷ ಬದಲಿಸಿಕೊಂಡು ಬಂದ ಸಿಂಗ್‌ಗೆ ಮುಖ್ಯವಾಗಿ ಅಲ್ಲಿಗೆ ಇರುವ ದಾರಿಗಳ ಬಗ್ಗೆ ತಿಳಿದುಕೊಳ್ಳಬೇಕಿತ್ತು. ಗಣಿಗಾರಿಕೆ ರಾತ್ರಿ ಎಷ್ಟು ಹೊತ್ತಿನವರೆಗೆ ನಡೆಯುತ್ತದೆ ಎನ್ನುವ ವಿಷಯ ಬೇಕಾಗಿತ್ತು. ಅದೆಲ್ಲವನ್ನೂ ಸಂಗ್ರಹಿಸಿದರು.
ಆದರೆ ಅದಿರು ಕೊಳ್ಳಲು ಬಂದ ವ್ಯಾಪಾರಿ ನಡೆದುಕೊಂಡು ಏಕೆ ಬರುತ್ತಿದ್ದಾನೆ ಎಂದು ಊಹಿಸುವ ಶಕ್ತಿ ಮಾತ್ರ ಗಣಿಯಲ್ಲಿ ಯಾರಿಗೂ ಇರಲಿಲ್ಲ. ಏಕೆಂದರೆ, ಗಣಿದಾಳಿ ಎನ್ನುವ ಕಲ್ಪನೆಯೂ ಆ ತನಕ ಯಾರಿಗೂ ಇರಲಿಲ್ಲ.
ಜೆಸಿಬಿ ಕಂಟಕ
ಅರಳಿಕಟ್ಟೆ ಗಣಿ ಮೇಲೆ ದಾಳಿ ಮಾಡಲು ಬೆಂಗಳೂರಿನಿಂದ 50 ಮಂದಿ ಕ್ವಿಕ್‌ ರೆಸ್ಪಾನ್ಸ್‌ ಟೀಮ್‌ನ ಪೊಲೀಸರೂ ಬಂದಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ ದಂಡು ಜೂನ್‌ 13ರ ರಾತ್ರಿ 8 ಗಂಟೆಗೆ ಹೊರಟಿತು. ಮೂರು ಪ್ರತ್ಯೇಕ ತಂಡಗಳನ್ನು ರಚಿಸಲಾಗಿದ್ದು, ಮೂರು ಕಡೆಯಿಂದ ದಾಳಿ ಮಾಡುವುದು ಎಂದು ನಿರ್ಧರಿಸಲಾಯಿತು. ಲೋಕಾಯುಕ್ತ ಎಸ್ಪಿ ರಂಗಸ್ವಾಮಿ ನಾಯಕ್‌ ದಾಳಿಯ ನೇತೃತ್ವ ವಹಿಸಿದ್ದರು.
ರಾತ್ರಿ ಸುಮಾರು 11 ಗಂಟೆಗೆ ಐದು ಜೆಸಿಬಿಗಳು ಆರ್ಭಟಿಸುತ್ತಾ ಕೆಲಸ ಮಾಡುತ್ತಿದ್ದವು. ಮೂರು ಕಡೆಯಿಂದ ಏಕಾಏಕಿ ಸ್ಥಳಕ್ಕೆ ದಾಳಿ ನಡೆದಾಗ ಕೆಲಸಗಾರರಿಗೆಲ್ಲರಿಗೂ ದಿಗ್ಬ್ರಾಂತಿ. ಕೆಲವರು ಓಡಿದರು, ಇನ್ನು ಕೆಲವರು ಪ್ರತಿರೋಧ ಒಡ್ಡಿದರು.
ಅಲ್ಲೇ ಸನಿಹದಲ್ಲಿ ಜೀಪಿನಲ್ಲಿ ಕೂತಿದ್ದ ಡಾ. ಸಿಂಗ್‌, ಕ್ಷಣಕ್ಷಣದ ಮಾಹಿತಿಗಳನ್ನು ಲೋಕಾಯುಕ್ತ ಸಂತೋಷ್‌ ಹೆಗಡೆಯವರಿಗೆ ತಿಳಿಸುತ್ತಿದ್ದರು. ರಾತ್ರಿ ಮೂರು ಗಂಟೆಯವರೆಗೂ ಇವರಿಬ್ಬರು ಸತತ ಸಂಪರ್ಕದಲ್ಲಿದ್ದರು. ಅಷ್ಟರಲ್ಲಿ... ಒಮ್ಮಿಂದೊಮ್ಮೆಗೆ ಹಿಂದಿನಿಂದ ರಕ್ಕಸನಂತೆ ಬಂದ ಜೆಸಿಬಿಯೊಂದು ಜೀಪನ್ನು ಬುಡಮೇಲು ಮಾಡಿಬಿಟ್ಟಿತು. ತಕ್ಷಣ ಜೀಪಿನಿಂದ ಸಿಂಗ್‌ ಜಿಗಿದುಬಿಟ್ಟರು. ಕೊಂಚ ತರಚಿದ ಗಾಯಗಳಿಗೀಡಾದ ಅವರು ಪವಾಡ ಎಂಬಂತೆ ಸಾವಿನಿಂದ ಪಾರಾಗಿಬಿಟ್ಟರು.
ಬಹುಶಃ ಇಂಥ ದಾಳಿಗಳು, ಬೆದರಿಕೆಗಳು ಲೋಕಾಯುಕ್ತ ತನಿಖಾ ತಂಡದಲ್ಲಿದ್ದ ಯಾರಿಗೂ ಹೊಸದಲ್ಲ. ಇತರೆ ಅಧಿಕಾರಿಗಳಾದ ವಿಪಿನ್‌ ಸಿಂಗ್‌, ಕೆ.ಉದಯಕುಮಾರ್‌, ಬಿಸ್ವಜಿತ್‌ ಮಿಶ್ರಾ, ತಾಕತ್‌ ಸಿಂಗ್‌ ರಣಾವತ್‌ ಅವರು ಕಳೆದ ನಾಲ್ಕು ವರ್ಷಗಳಲ್ಲಿ ಇಂಥ ಸಮಸ್ಯೆಗಳನ್ನು ಎದುರಿಸಿಕೊಂಡೇ ಬಂದಿದ್ದಾರೆ.
ಒಂದು ಮುಖ್ಯಮಂತ್ರಿ ಪದವಿಯನ್ನು ಅಲುಗಾಡಿಸಿದ, ಇಬ್ಬರು ಮಾಜಿ ಮುಖ್ಯಮಂತ್ರಿಗಳ ವಿರುದ್ಧ ಆರೋಪ ಹೊರಿಸಿದ ಈ ರಾಜ್ಯದ ಅತ್ಯಂತ ಶಕ್ತಿಶಾಲಿ ವರದಿ ತಯಾರಿಸುವುದು ಸುಲಭವಲ್ಲ ಎನ್ನುವುದು ಎಲ್ಲರಿಗೂ ತಿಳಿದಿತ್ತು. ಹೀಗಾಗಿಯೇ ಪ್ರತಿಯೊಬ್ಬರೂ ಹೊರಜಗತ್ತಿಗೆ ತಿಳಿಯದಂತೆ ನಾಜೂಕಾಗಿ ತನಿಖೆಯಲ್ಲಿ ತೊಡಗಿಸಿಕೊಂಡಿದ್ದರು.

ಗಣಿಭೂಮಿ
ಈ ತಂಡಕ್ಕೆ ಮೊದಲು ಬಂದ ಕೆಲಸ- ಗಣಿ ಪ್ರದೇಶದ ಸಮೀಕ್ಷೆ. ಗಣಿಪ್ರದೇಶದ ವಿಸ್ತೀರ್ಣ, ಗಡಿ ಒತ್ತುವರಿ, ಅಕ್ರಮ ಗಣಿಗಾರಿಕೆ ವಿಷಯ ತಿಳಿಯಲು ಒಂಬತ್ತು ತಂಡವನ್ನು 2007ರಲ್ಲಿ ಈ ತನಿಖಾ ತಂಡ ರಚಿಸಿತ್ತು. ಇದಕ್ಕೂ ಸಾಕಷ್ಟು ಅಡ್ಡಿ ಇದ್ದವು. ಒಂದು ಕಡೆ ಅಗತ್ಯ ದಾಖಲೆ ನೀಡಲು ಅಧಿಕಾರಿಗಳು ಅಸಹಕಾರ ಒಡ್ಡಿದರೆ, ಇನ್ನು ಕೆಲವು ಕಡೆ ಗಣಿಒಡೆಯರ ಬೆದರಿಕೆ.
ಒಮ್ಮೆ ಡಿಸಿಎಫ್‌ ಉದಯಕುಮಾರ್‌ ನೇತೃತ್ವದ ತಂಡ ಹೊಸಪೇಟೆ ಭಾಗದಲ್ಲಿ ಸಮೀಕ್ಷೆಗೆ ಹೊರಟಿತ್ತು. ಹತ್ತಾರು ಕಿಲೋ ಮೀಟರ್‌ ದೂರದ ಗಣಿಪ್ರದೇಶಕ್ಕೆ ಹೋಗುತ್ತಿರಬೇಕಾದರೆ ಗುಂಪೊಂದು ಉದಯಕುಮಾರ್‌ ಟೀಮನ್ನು ನಿಲ್ಲಿಸಿ ಸಮೀಕ್ಷೆ ಮಾಡಲು ಬಿಡೊಲ್ಲ ಎಂದು ಧಮಕಿ ಹಾಕಿತು. ಈ ಅಧಿಕಾರಿಗಳೂ ಏನೂ ಮಾಡುವ ಸ್ಥಿತಿ ಇರಲಿಲ್ಲ. ಉದಯ್‌ ನಮ್ರತೆಯಿಂದಲೇ ಹೇಳಿದರು-ನೋಡಿ, ಇವತ್ತು ನಮಗೆ ತೊಂದರೆ ಮಾಡಿದರೆ ಸಮೀಕ್ಷೆ ನಿಲ್ಲೊಲ್ಲ. ನಾಳೆ ಇನ್ನೊಂದು ತಂಡ ಇಲ್ಲಿಗೆ ಬಂದು ಕೆಲಸ ಮಾಡಿಯೇ ತೀರುತ್ತೆ. ಪೊಲೀಸ್‌ ಫೋರ್ಸ್‌ ಕೂಡ ಬರಬಹುದು ಎಂದು. ವಿಷಯ ಪ್ರಕೋಪಕ್ಕೆ ಹೋಗಬಹುದು ಎಂಬ ಭಯದಿಂದಲೋ ಏನೋ ಸಮೀಕ್ಷೆ ಮತ್ತೆ ಯಾರೂ ಅಡ್ಡಿಪಡಿಸಲಿಲ್ಲ.
ಅಲ್ಲಿದ್ದುದು ಒಂದು ಬಗೆಯ ರಣಭೂಮಿಯ ಛಾಯೆಯೇ. ಬೆಳಿಗ್ಗೆ ಎದ್ದು ಗಣಿಭೂಮಿಗೆ ಹೋದರೆ ಮತ್ತೆ ಮರಳುತ್ತೇವೆ ಎನ್ನುವ ಗ್ಯಾರಂಟಿಯೂ ಇರೋದಿಲ್ಲ. ದಿನಕ್ಕೆ ಹತ್ತರಿಂದ ಹದಿನೈದು ಕಿಮೀ ನಡೆಯಲೇಬೇಕು. ಬೆಳಿಗ್ಗೆ ತಿಂಡಿ ಬಿಟ್ಟರೆ ಮತ್ತೆ ರಾತ್ರಿಯೇ ಊಟ. ಮಧ್ಯೆ ಮಧ್ಯೆ ಬಿಸ್ಕೆಟ್ಟೇ ಗತಿ.
ಒಮೆ ಉತ್ಸಾಹದ ಯುವ ಅಧಿಕಾರಿಯೊಬ್ಬರು ವೇಗವಾಗಿ ನಡೆಯುವಾಗ ಕಾಲು ಉಳುಕಿಸಿಕೊಂಡು ಮತ್ತೆ ಅವರನ್ನು ಎಷ್ಟೋ ಮೈಲಿ ಎತ್ತಿಕೊಂಡು ಬಂದ ಘಟನೆಗಳು ಈ ತಂಡದಲ್ಲಿ ಇನ್ನೂ ಹಸಿರಾಗಿದೆ.

ಅಧಿಕಾರಿಗಳೇ ಅಡ್ಡಿ
ಸರ್ವೆಗೆ ಬೇಕಾದುದು ಅಗತ್ಯ ದಾಖಲೆ. ಅದನ್ನು ಪೂರೈಸಲಿಕ್ಕೇ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದರು. ಹೀಗಾಗಿ ಎರಡು ತಿಂಗಳ ಕಾಲ ಬರೇ ದಾಖಲೆ ಪಡೆಯಲಿಕ್ಕೇ ಟೈಮ್‌ ವೇಸ್ಟ್‌ ಮಾಡಿದ್ದು ಉಂಟು ಎಂದು ತನಿಖಾ ಅಧಿಕಾರಿಯೊಬ್ಬರು ಹೇಳುತ್ತಾರೆ.
ಒಮೆ ಹೊಸಪೇಟೆಯ ಗಣಿ ಇಲಾಖೆ ಉಪನಿರ್ದೇಶಕರ ಬಳಿ ಅಗತ್ಯ ದಾಖಲೆ ಕೋರಿದಾಗ ಅದನ್ನು ನೀಡಲು ನಿರಾಕರಿಸಿದರು. ಆ ದಾಖಲೆ ಇಲ್ಲದೆ ಸರ್ವೆ ಮಾಡುವ ಹಾಗೂ ಇಲ್ಲ. ಹಲವು ಸಲ ಕೋರಿದರೂ ಉಹುಂ, ಆ ಗಣಿ ಅಧಿಕಾರಿ ಜಪ್ಪಯ್ಯ ಅನ್ನಲಿಲ್ಲ. ಕೊನೆಗೆ ಲೋಕಾಯುಕ್ತರಿಂದ ಸರ್ಚ್‌ ವಾರಂಟ್‌ ಹೊರಡಿಸಿದ ನಂತರ ದಾಖಲೆ ಸಿಕ್ಕಿತು. 30 ಜನ ಅಧಿಕಾರಿಗಳು 170 ಗಣಿಗಳ ಸರ್ವೆ ಮಾಡಿ ಮುಗಿಸುವಷ್ಟರಲ್ಲಿ ಒಂದೂವರೆ ವರ್ಷ ಕಳೆದಿತ್ತು.
ಗಡಿಗಳನ್ನು ಗುರುತಿಸಲು ಹಿಂದೆ ಬಳಸುತ್ತಿದ್ದ ಪರ್ಮನೆಂಟ್‌ ರಾಕ್‌ಗಳನ್ನೂ ಬ್ಲಾಸ್ಟ್‌ ಮಾಡಿ ಬಿಟ್ಟಿತ್ತು ಗಣಿ ಮಾಫಿಯಾ. ಗಡಿ ಗುರುತಿಸಲು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ ಇತ್ತು. ಕೊನೆಗೇ ಅದನ್ನು ಉಪಗ್ರಹ ಚಿತ್ರವನ್ನು ಬಳಸಿಕೊಂಡು ಗುರುತಿಸಿತು ಲೋಕಾಯುಕ್ತ ತಂಡ.

ಲಾಟರಿ ರೇಡ್‌
ಗಣಿಗಳ ಮೇಲೆ ದಾಳಿ ನಡೆಸುವ ಸಂದರ್ಭದಲ್ಲೂ ಇವರು ಸೈನಿಕರಂತೆ ವ್ಯವಸ್ಥಿತ ವ್ಯೂಹ ರೂಪಿಸುತ್ತಿದ್ದರು. ಇಡುವ ಒಂದೊಂದು ಹೆಜ್ಜೆಯೂ ನಿಗೂಢವಾಗಿರಬೇಕು, ಅಷ್ಟೇ ಕೇರ್‌ಫುಲ್ಲಾಗಿರಬೇಕು. ಇವರ ಎದುರು ಪಾಳಯದಲ್ಲಿ ಇದ್ದುದು ಗುಪ್ತಚರ ಇಲಾಖೆಯನ್ನು ಕೈಯಲ್ಲಿ ಇಟ್ಟುಕೊಂಡ ಒಂದು ಸರ್ಕಾರ ಹಾಗೂ ಯಾವ ಕಾನೂನಿಗೂ ಜಗ್ಗದ ಗಣಿ ಮಾಫಿಯಾ! ಇಡುವ ಒಂದು ತಪ್ಪು ಹೆಜ್ಜೆಯ ಪರಿಣಾಮ ಯಾವ ದುರಂತವೂ ಆಗಬಹುದು.
ಹೀಗಾಗಿ, ಲೋಕಾಯುಕ್ತ ಅಧಿಕಾರಿಗಳು ರೈಡ್‌ಗೆ ತೆರಳುವ ಸಂದರ್ಭ ಯಾವ ಮಾಹಿತಿಗಳನ್ನೂ ಲೀಕ್‌ ಮಾಡುತ್ತಿರಲಿಲ್ಲ. ದಾಳಿಗೆ ಪೂರಕ ಮಾಹಿತಿ ಸಂಗ್ರಹವಾಯಿತು ಎಂದು ಗೊತ್ತಾದ ತಕ್ಷಣ ಸಂಬಂಧಿಸಿದ ಅರಣ್ಯಾಧಿಕಾರಿಗಳಿಗೆ ಮೆಸೇಜ್‌ ಹೋಗುತ್ತಿತ್ತು- ನಾಳೆ ಬೆಳಿಗ್ಗೆ ಇಷ್ಟು ಹೊತ್ತಿಗೆ ಗೆಸ್ಟ್‌ಹೌಸ್‌ಗೆ ಬಂದು ಬಿಡಿ ಎಂದು. ಯಾವ ಅಧಿಕಾರಿಯನ್ನೂ ನಂಬುವ ಸ್ಥಿತಿ ಇಲ್ಲ!
ಮರುದಿನ ಅಧಿಕಾರಿಗಳೆಲ್ಲರೂ ಜಮಾಯಿಸಿದ ತಕ್ಷಣ, ಎಲ್ಲರ ಮೊಬೈಲ್‌ಗಳನ್ನು ಪಡೆದುಕೊಳ್ಳಲಾಗುತ್ತಿತ್ತು. ನಂತರ ತಂಡಗಳನ್ನು ರಚಿಸಲಾಗುತ್ತಿತ್ತು. ಪ್ರತಿಯೊಂದು ತಂಡದಲ್ಲೂ ಐದಾರು ಅಧಿಕಾರಿಗಳು. ಅವರು ಎಲ್ಲಿಗೆ ಹೊರಡಬೇಕೆಂದು ನಿರ್ಧಾರ ಮಾಡುತ್ತಿದ್ದುದು ಲಾಟರಿ ಮೂಲಕ! ಲಾಟರಿಯಲ್ಲಿ ಬಂದ ಸ್ಥಳಕ್ಕೆ ಆ ತಂಡ ದಾಳಿ ಮಾಡುತ್ತಿತ್ತು.
ಈ ಹೊತ್ತಿಗೆ ತಂಡಕ್ಕೆ ಅಗತ್ಯವಾದ ಎಲ್ಲ ಪರಿಕರಗಳು ಸಿದ್ಧವಾಗಿಬಿಡುತ್ತಿತ್ತು. ಶಸ್ತ್ರದಿಂದ ಹಿಡಿದು ಕ್ಯಾಂಡಲ್‌, ಹಗ್ಗ, ಪೆನ್‌, ಕಾಗದ.. ಹೀಗೆ ಒಂದೇ ಒಂದು ಚಿಕ್ಕ ಸಂಗತಿಯೂ ಅಲ್ಲಿ ಮುಖ್ಯ. ಗಣಿಭಾಗದಲ್ಲಿ ಏನೇನೂ ಸಿಗುತ್ತಿರಲಿಲ್ಲ. ತಂಡದ ನಾಯಕನೊಬ್ಬನ ಕೈಯಲ್ಲಿ ಬಿಟ್ಟರೆ ಇನ್ನಾರ ಕೈಯಲ್ಲಿ ಮೊಬೈಲ್‌ ಇರುತ್ತಿರಲಿಲ್ಲ. ಇದಕ್ಕೆ ಪೂರ್ವ ಸಿದ್ಧತೆ ವ್ಯವಸ್ಥೆ ಮಾಡುತ್ತಿದ್ದುದು ಡಿಸಿಎಫ್‌ ಉದಯಕುಮಾರ್‌.
ಗಣಿಭೂಮಿಯಲ್ಲಿ ಕಲ್ಲುಗಳಿಗೂ ಕಣ್ಣಿವೆ. ಹೀಗಾಗಿ ಯಾರಿಗೂ ಹೇಳದೆ ಕೇಳದೆ ಗಣಿ ಕಡೆಗೆ ಹೆಜ್ಜೆ ಇಡುವ ಸ್ಥಿತಿ. ಒಮೊಮೆ  ಅಧಿಕಾರಿಗಳು ಮನೆಯವರಿಗೂ ವಿಷಯ ಹೇಳುತ್ತಿರಲಿಲ್ಲ. ಅದು ಹೋಗಲಿ, ತಾನೆಲ್ಲಿಗೆ ಇವತ್ತು ಹೋಗುತ್ತಿದ್ದೇನೆ ಎನ್ನುವ ಅರಿವು ಸ್ವತಃ ಡ್ರೈವರ್‌ಗೂ ಇರುತ್ತಿರಲಿಲ್ಲ. ಸಾಹೇಬ್ರು ಹೇಳಿದ ಕಡೆ ಹೋಗುವುದಷ್ಟೇ ಕೆಲಸ. ಎರಡು ವರ್ಷ ಕಳೆಯುವುದರೊಳಗೆ ಈ ಎಲ್ಲ ಅಧಿಕಾರಿಗಳಿಗೆ ಗಣಿ ಪ್ರದೇಶದ ಇಂಚಿಂಚೂ ಕರಗತವಾಗಿಬಿಟ್ಟಿತ್ತು.





ಜಾತ್ರೆಗೆ ಹೊರಟ ಲಾರಿ
ಬೇಲೆಕೇರಿಗೆ ಬಂತು!


ಇಡೀ ವ್ಯವಸ್ಥೆಯ ಕಣ್ಣಿಗೆ ಅದಿರು ಎರಚಿದ್ದ ಕಾರವಾರ ಬಳಿಯ ಬೇಲೆಕೇರಿ ಬಂದರು ಸದ್ದಿಲ್ಲದೆ ಮಲಗಿತ್ತು. ಯಾವುದೇ ಭದ್ರತಾ ವ್ಯವಸ್ಥೆ ಇಲ್ಲದ ಬಂದರು ಅದು. ಕರಾವಳಿ ನಿಗಾಪಡೆ ಅಲ್ಲಿ ಇಲ್ಲ. ವಾಚ್‌ ಟವರ್‌ ಕೂಡ ಇಲ್ಲ. ಅದಿರು ತಂದ ಕಾರ್ಗೊಗಳನ್ನು ಹಾಗೆಯೇ ಬಾರ್ಜ್‌ನಲ್ಲಿ ಹೇರಿಕೊಂಡು ಆಳಸಮುದ್ರದಲ್ಲಿ ನಿಂತಿದ್ದ ಹಡಗಿಗೆ ಇಳಿಸಿಬಿಡುವ ಕಾಯಕ ನಡೆಯುತ್ತಲೇ ಇತ್ತು. ವಿದೇಶಕ್ಕೆ ಅಕ್ರಮವಾಗಿ ಹೋದ ಅದಿರಿಗೆ ಲೆಕ್ಕವೇ ಇರಲಿಲ್ಲ.
ಈ ವಾಸನೆ ಸಿಕ್ಕ ಕೂಡಲೇ ಪಿಸಿಸಿಎಫ್‌ ಯು.ವಿ.ಸಿಂಗ್‌ ಅವರು ಡಿಸಿಎಫ್‌ ಉದಯಕುಮಾರ್‌ ಅವರಿಗೆ ಜವಾಬ್ದಾರಿ ವಹಿಸಿದರು.
ಆಗ ಜಲಸಂವರ್ಧನ ಇಲಾಖೆಯಲ್ಲಿದ್ದ ಉದಯಕುಮಾರ್‌ ಮಾಹಿತಿ ಕಲೆ ಹಾಕಲು ಆರಂಭಿಸಿದರು. ಖಾಸಗಿ ಜೀಪಿನಲ್ಲಿ ಬೇಲೆಕೇರಿಗೆ ಹೋಗಿ ಅಲ್ಲಿ ಸಾಗಣೆಯಾಗುತ್ತಿದ್ದ ಅದಿರಿನ ಬಗ್ಗೆ ಮಾಹಿತಿ ಪಡೆದುಕೊಂಡರು. ಒಂದು ದಿನಕ್ಕೆ ಎಷ್ಟು ಲಾರಿ ರೋಡಲ್ಲಿ ಹೋಗುತ್ತಿದೆ ಎಂದು ಸಾರ್ವಜನಿಕರಿಂದ ಮಾಹಿತಿ ಪಡೆದುಕೊಂಡರು. ಅಡಾನಿ ಎಂಟರ್‌ಪೈಸಸ್‌, ಮಲ್ಲಿಕಾರ್ಜುನ್‌ ಶಿಪ್ಪಿಂಗ್‌ ಕಂಪೆನಿಗಳೇ ಇಲ್ಲಿ ಅಕ್ರಮ ವಹಿವಾಟು ಮಾಡುತ್ತಿರುವುದು ಬೆಳಕಿಗೆ ಬಂತು.
ಒಂದೆರಡು ಬಾರಿ ಸ್ವತಃ ಯುವಿ ಸಿಂಗ್‌ ಅವರೇ ಮಾಹಿತಿ ಕಲೆ ಹಾಕಲು ಬಂದರು. ಆ ಹೊತ್ತಿಗೇ (2010) ಸಿಂಗ್‌ ಮುಖಪರಿಚಯ ಎಲ್ಲರಿಗೂ ಆಗಿಬಿಟ್ಟಿತು. ಲೋಕಾಯುಕ್ತ ಅಧಿಕಾರಿ ಎಂದು ಟಿವಿ, ಪತ್ರಿಕೆಗಳಲ್ಲಿ ಪ್ರಚಾರವಾಗಿಬಿಟ್ಟಿತ್ತು. ಹೀಗಾಗಿ, ಹಳೆಯ ಟಿ ಶರ್ಟ್‌, ಪ್ಯಾಂಟ್‌ ಮತ್ತು ತಲೆಗೆ ಮಫ್ಲರ್‌ ಸುತ್ತಿಕೊಂಡು ವಿಲಕ್ಷಣ ಡ್ರೆಸ್‌ನಲ್ಲಿ ಅವರು ಬೇಲೆಕೇರಿಗೆ ಬಂದರು. ಜಲಸಂವರ್ಧನಾ ಇಲಾಖೆಯ ಜೀಪಿನಲ್ಲಿ ಬಂದ ಅವರು ಒಬ್ಬ ಲೋಕಾಯುಕ್ತ ಅಧಿಕಾರಿ ಎಂದು ಯಾರಿಗೂ ತಿಳಿಯಲಿಲ್ಲ. ಸ್ವತಃ ಜೀಪು ಚಾಲಿಸುತ್ತಿದ್ದ ಡ್ರೈವರ್‌ಗೂ ಸಹ. ಅಲ್ಲಿ ಸಾಗಾಟಕ್ಕೆ ರಾಶಿ ಬಿದ್ದಿದ್ದ ಅದಿರು ನೋಡಿ ದಂಗಾದರು.
ಒಂದೆರಡು ದಿನಗಳ ನಂತರ ರೇಡ್‌ಗೆ ವ್ಯವಸ್ಥೆ ಮಾಡಿದರು. ಅವತ್ತು 2010 ಫೆಬ್ರವರಿ 20. ದಾಳಿ ಕೂಡ ಅತ್ಯಂತ ನಾಜೂಕಾಗಿ ನಡೆಯುವಂತೆ ವ್ಯವಸ್ಥೆ ಮಾಡಿಕೊಂಡರು. ಆಗ ಕಾರವಾರದಲ್ಲಿದ್ದ ದಕ್ಷ ಅಧಿಕಾರಿ ಆರ್‌. ಗೋಕುಲ್‌ ಸಹಾಯ ಪಡೆದುಕೊಂಡರು. ಎಸಿಎಫ್‌ ತಾಕತ್‌ ಸಿಂಗ್‌ ರಣಾವತ್‌ ವ್ಯೂಹ ರಚಿಸಿದರು.
ಅದಿರು ಸಾಗಾಟಕ್ಕೆ ಬಳಸುವ ಲಾರಿಗೆ ಸ್ಥಳೀಯ ದೇವಸ್ಥಾನ ಜಾತ್ರೆಯೊಂದರ ಬ್ಯಾನರ್‌ ಬರೆಯಿಸಿ ಹಾಕಲಾಯಿತು. ನೋಡಿದರೆ, ಎಲ್ಲೋ ಜಾತ್ರೆಗೆ ಹೊರಟ ಲಾರಿಯಂತೇ ಕಾಣುತ್ತಿತ್ತು. ಆ ಲಾರಿಯಲ್ಲಿ ಅಧಿಕಾರಿಗಳು ಕೂತರು. ಯುವಿ ಸಿಂಗ್‌ರಂತೂ ಥೇಟ್‌ ಲಾರಿ ಕ್ಲೀನರ್‌ ಮಾದರಿ ಕಾಣಿಸುತ್ತಿದ್ದರು.
ಯಾರಿಗೂ ತಿಳಿಯದಂತೆ ರೂಪಿಸಿದ ದಾಳಿ ಮರುದಿನ ಇಡೀ ದೇಶದಾದ್ಯಂತ ಸುದ್ದಿಯಾಯಿತು. ದಾಳಿಯಲ್ಲಿ 80,000 ಮೆಟ್ರಿಕ್‌ ಟನ್‌ ಅಕ್ರಮ ಅದಿರನ್ನು ವಶಪಡಿಸಿಕೊಳ್ಳಲಾಯಿತು. ರಫ್ತುದಾರರ ಕಂಪ್ಯೂಟರ್‌ಗಳನ್ನು ವಶಪಡಿಸಿಕೊಳ್ಳಲಾಯಿತು.
ಈ ಕಂಪ್ಯೂಟರ್‌ನಲ್ಲಿದ್ದ ಮಾಹಿತಿಗಳನ್ನು ಅಧಿಕಾರಿಗಳಾದ ವಿಪಿನ್‌ ಸಿಂಗ್‌ ಮತ್ತು ಬಿಸ್ವಜಿತ್‌ ಮಿಶ್ರಾ ಹೊರತೆಗೆದು ದೇಶಕ್ಕೆ ಆಘಾತಕಾರಿ ಸುದ್ದಿ ಕೊಟ್ಟರು- 2006-07ರಿಂದ 2010ರ ತನಕ ಈ ಬಂದರು ಮೂಲಕ 77.38 ಲಕ್ಷ ಮೆಟ್ರಿಕ್‌ ಟನ್‌ ಅದಿರು ಸಾಗಾಟವಾಗಿತ್ತು!
ಆಫೀಸ್ಸೇ ಮನೆ, ಗಣಿಯೇ ಪಿಕ್ನಿಕ್‌
ಗಣಿ ತನಿಖಾ ಅಧಿಕಾರಿಗಳಿಗೆ 2007ರಿಂದ ಮನೆ ಮತ್ತು ಮೈನ್‌ ಎರಡೂ ಒಂದೇ ಆಗಿಬಿಟ್ಟಿತ್ತು. ನಂಬಿದರೆ ನಂಬಿ, ಬಿಟ್ಟರೆ ಬಿಡಿ- ಈ ಅಧಿಕಾರಿಗಳು ರಜೆ ತೆಗೆದುಕೊಳ್ಳದೆ ಎಷ್ಟೋ ವರ್ಷಗಳಾದವು. ಭಾನುವಾರವೂ ಕೆಲಸ. ಯುವಿ ಸಿಂಗ್‌ರಂತೂ 2004ರಿಂದ ಈವರೆಗೆ ರಜೆ ತೆಗೆದುಕೊಂಡಿದ್ದು ಬರೇ ನಾಲ್ಕು ಸಲ. ಅದೂ ಹುಷಾರಿಲ್ಲದೆ ಆಸ್ಪತ್ರೆಗೆ ದಾಖಲಾಗಿದ್ದಕ್ಕಾಗಿ!
ಐದಾರು ವರ್ಷಗಳ ನಂತರ ನಾನು ಇಡೀ ಸಂಡೇನ ಎಂಜಾಯ್‌ ಮಾಡಿದ್ದು ಮೊನ್ನೆ ಜುಲೈ 31ಕ್ಕೆ. ಎಲ್ಲೂ ಹೋಗಿಲ್ಲ ಮನೆಯಲ್ಲೇ ಇದ್ದೆ ಎಂದು ಸಿಂಗ್‌ ಹೇಳುತ್ತಾರೆ.ಹೌದು ಅವರ ರುಟೀನೇ ಹಾಗಿತ್ತು. ವಾರದ ದಿನಗಳಲ್ಲಿ ಚರ್ಚ್‌ ಬೀದಿಯ ಕೆರೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಗಣಿ ವರದಿ ಕೆಲಸ ಮಾಡುತ್ತಿದ್ದರೆ, ಶನಿವಾರ-ಭಾನುವಾರ ಗಣಿ ಕಡೆಗೆ ಪಯಣ.ಕೆಲವೊಮೆ ಯಾರಿಗೂ ಹೇಳದೆ- ಲೋಕಾಯುಕ್ತರಿಗೂ ಸಹ.
2009ರ ಅಕ್ಟೋಬರ್‌ 2
ಅವತ್ತು ಸರ್ಕಾರಿ ರಜೆ. ಎಲ್ಲರೂ ಗಾಂಧಿ ಜಯಂತಿ ನೆಪದಲ್ಲಿ ರಜೆ ಅನುಭವಿಸುತ್ತಿದ್ದರೆ ಸಿಂಗ್‌ ಓಬಳಾಪುರಂ ಕಡೆಗೆ ಹೊರಟರು. ರೆಡ್ಡಿ ಸಾಮ್ರಾಜ್ಯದ ಓಬಳಾಪುರಂಗೆ ಕಾಲಿಡುವುದೆಂದರೆ ಚಕ್ರವ್ಯೂಹಕ್ಕೆ ಹೆಜ್ಜೆ ಇಟ್ಟ ಹಾಗೆ. ಅದೇಕೋ ಏನೋ, ಯಾವುದಕ್ಕೂ ಅಂಜದ ಸಿಂಗ್‌ ಲೋಕಾಯುಕ್ತರಿಗೂ ಹೇಳದೆ ಹೊರಟುಬಿಟ್ಟರು. ಖಾಸಗಿ ಜೀಪಿನಲ್ಲಿ ರೆಡ್ಡಿಕೋಟೆ ಪ್ರವೇಶಿಸಿದರು. ಆ ಕೋಟೆಯ ಇಂಚಿಂಚಿನಲ್ಲಿ ಕಾವಲುಪಡೆ ಇರುತ್ತದೆ. ಹಾಗೆಯೇ, ಸಿಂಗ್‌ ಪ್ರವೇಶ ಮಾಹಿತಿ ಸಿಕ್ಕ ಕೂಡಲೇ ಬೆಂಗಳೂರು ರಿಜಿಸ್ಟ್ರೇಷನ್‌ನ ಮೂರು ಸ್ಕಾರ್ಪಿಯೋ ವಾಹನಗಳು ಫಾಲೋ ಮಾಡಿದವು.
ಆ ಗಣಿ ಭಾಗದ ಇಂಚಿಂಚೂ ಪರಿಚಯವಿದ್ದ ಸಿಂಗ್‌ ಹೆಚ್ಚೇನೂ ಹೆದರಲಿಲ್ಲ. ಕವಲು ಹಾದಿಯಲ್ಲಿ ಒಂದು ಕಡೆ ಜೀಪನ್ನು ನಿಲ್ಲಿಸಿ ಬೆಟ್ಟ ಏರತೊಡಗಿದರು. ಸ್ವಲ್ಪ ಹೊತ್ತು ಇವರ ಚಲನವಲನ ಗಮನಿಸಿದ ಸ್ಕಾರ್ಪಿಯೋ ಮಂದಿ ಹಿಂತಿರುಗಿದರು.
ಬಿರುಬಿಸಿಲಿನಲ್ಲಿ ಬೆಟ್ಟ ಏರಿದ ಸಿಂಗ್‌ಗೆ ಅಲ್ಲಿನ ಗಣಿಯೊಂದರ ಮ್ಯಾನೇಜರ್‌ ಚಂದ್ರಶೇಖರ್‌ ಎಂಬಾತ ಒಬ್ಬ ಸಿಕ್ಕಿದ. ತಾನು ಕೇಂದ್ರ ಸರ್ಕಾರಿ ಅಧಿಕಾರಿ ಎಂದು ಹೇಳಿಕೊಂಡ ಸಿಂಗ್‌, ಗಣಿ ಚಟುವಟಿಕೆಯನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯತೊಡಗಿದರು. ಫೊಟೋ ತೆಗೆಯಲು ಆತ ಅಡ್ಡಿಪಡಿಸಿ ಬೆದರಿಕೆ ಒಡ್ಡಿದ. ಆ  ಅಕ್ರಮ ಗಣಿಗಳ ಬಗ್ಗೆ ಒಂದೊಂದೇ ಅಸ್ತ್ರ ತೆಗೆದು ಮ್ಯಾನೇಜರ್‌ ಬಾಯಿ ಮುಚ್ಚಿಸಿದರು. ಇವರು ಸಿಬಿಐ ಅಧಿಕಾರಿ ಇರಬೇಕು ಎಂದು ಭಾವಿಸಿದ ಆತ ಸುಮನಾಗಿಬಿಟ್ಟ.
ಉರಿಬಿಸಿಲಿನಲ್ಲಿ ಬೆವರುತ್ತಲೇ, ಕುಡಿಯಲು ನೀರೂ ಇಲ್ಲದೆ ಸಂಜೆ ತನಕ ಸಮೀಕ್ಷೆ ನಡೆಸಿದ್ದರು ಸಿಂಗ್‌.
ಇನ್ನೊಂದು ಸಲ 2007ರ ಆಗಸ್ಟ್‌ 15ರಂದು ಆಂಧ್ರಪ್ರದೇಶ ಗಡಿಯಲ್ಲಿರುವ ಗಣಿಗೆ ಸಿಂಗ್‌ ಭೇಟಿ ನೀಡಿದರು. ಹತ್ತಾರು ಕಿಲೋ ಮೀಟರ್‌ ನಡೆದುಕೊಂಡು ಹೋಗುತ್ತಿರುವಾಗ ಅವರ ಎಡಗಾಲಿನಲ್ಲಿ ರಕ್ತ ಹೆಪ್ಪುಗಟ್ಟಿ ಕಾಲು ವಿಪರೀತ ಊದಿಕೊಂಡಿತು. ತಕ್ಷಣ ಬೆಂಗಳೂರಿಗೆ ಮರಳಿದರು. ಎರಡು ದಿನ ತರುವಾಯ ಲೋಕಾಯುಕ್ತರ ಕರೆಯಂತೆ ಮಂಗಳೂರು ಬಂದರು ವೀಕ್ಷಣೆಗೆ ಹೊರಟರು. ಅಲ್ಲಿಂದ ಮರಳುವಾಗ ಕಾಲು ಮತ್ತಷ್ಟು ಊದಿಕೊಂಡಿತು. ನಡೆದಾಡಲಾಗದ ಸ್ಥಿತಿ ಉಂಟಾಯಿತು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಾದರು.
ಅಹರ್ನಿಶಿ ದುಡಿಮೆ
ಕಳೆದ ಹನ್ನೊಂದು ತಿಂಗಳು ಇಡೀ ಟೀಮ್‌ಗೆ ಅಹರ್ನಿಶಿ ದುಡಿಮೆ. ರಾತ್ರಿ 2 ಗಂಟೆಯವರೆಗೂ ಅಧಿಕಾರಿ, ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ತಕ್ಷಣ ಗಾಢ ನಿದ್ದೆ ಬರಲು ಸಿಂಗ್‌ ನಿದ್ರೆ ಮಾತ್ರೆ ತೆಗೆದುಕೊಳ್ಳುತ್ತಿದ್ದರು. ಎಲ್ಲರೂ ಅಷ್ಟೇ ವಿಪಿನ್‌, ಬಿಸ್ವಜಿತ್‌, ತಾಕತ್‌ಸಿಂಗ್‌ ಎಲ್ಲರೂ ನಡುರಾತ್ರಿ ತನಕ ಕೆಲಸ ಮಾಡುತ್ತಿದ್ದರು. ಈ ದೊಡ್ಡ ಜವಾಬ್ದಾರಿ ಮುಗಿದ ನಂತರವಷ್ಟೇ ಆರೂವರೆ ಗಂಟೆಗೆ ಮೊನ್ನೆ ಮನೆಗೆ ಹೋದೆ ಎಂದು ಉದಯಕುಮಾರ್‌ ಹೇಳುತ್ತಾರೆ.


ಕಲಿಗಳ ಪರಿಚಯ
ಸರ್‌ ದಯವಿಟ್ಟು ನಮನ್ನು ಪರಿಚಯ ಮಾಡಿಕೊಡಬೇಡಿ..
ಇದು ಐವರು ಅಧಿಕಾರಿಗಳು ಲೋಕಾಯುಕ್ತ ಸಂತೋಷ ಹೆಗಡೆಯವರಿಗೆ ಕೈ ಮುಗಿದು ಮಾಡಿಕೊಂಡ ಮನವಿ.
ಐತಿಹಾಸಿಕ ಗಣಿ ವರದಿ ಸರ್ಕಾರಕ್ಕೆ ಸಲ್ಲಿಕೆಯಾದ ಕೂಡಲೇ ಲೋಕಾಯುಕ್ತರು ತಮ್ಮ  ಕಚೇರಿಯಲ್ಲಿ ಆಯೋಜಿಸಲು ಉದ್ದೇಶಿಸಿದ ಪತ್ರಿಕಾಗೋಷ್ಠಿಗೆ ಈ ಐವರನ್ನು ಆಹ್ವಾನಿಸಿದರು. ಈವರೆಗೆ ತೆರೆಮರೆಯಲ್ಲಿದ್ದವರನ್ನು ಪರಿಚಯಿಸುವುದು ಅವರ ಉದ್ದೇಶವಾಗಿತ್ತು. ಪ್ರಚಾರಕ್ಕೆ ಮುಖಕೊಡದೆ ಸದ್ದಿಲ್ಲದೆ ಕೆಲಸ ಮಾಡುವ ಅಧಿಕಾರಿಗಳಿಗೆ ಇದು ಮುಜುಗರ ತಂದಿದ್ದರಿಂದಲೇ ಲೋಕಾಯುಕ್ತರಿಗೆ ಮನವಿ ಮಾಡಿದ್ದರು.
ಹೌದು, ನಮಗೆ ಕೊಟ್ಟ ಕೆಲಸ ಮಾಡಿದ್ದೇವೆ. ಇದರಲ್ಲೇನಿದೆ ಸಾಧನೆ? ಎಂದು ವಿನಮ್ರತೆಯಿಂದ ಹೇಳುವ ಈ ಐವರು ಅಧಿಕಾರಿಗಳೇ ಲೋಕಾಯುಕ್ತ ವರದಿಯ ಬೆನ್ನಿಗಿದ್ದವರು. ಸರ್ಕಾರವನ್ನೇ ಅಲುಗಿಸಿಬಿಟ್ಟ 25,000 ಪುಟಗಳ ವರದಿ ತಯಾರಿಸುವುದು ಸಣ್ಣ ಕೆಲಸವೇನಲ್ಲ.
ಇಡೀ ಸರ್ಕಾರವನ್ನು, ಗಣಿ ಮಾಫಿಯಾವನ್ನು ಎದುರಿಗಿಟ್ಟುಕೊಂಡು ಕ್ಷಣ ಕ್ಷಣ ಆತಂಕದಲ್ಲೇ ಕಾಲ ದೂಡಿದ ಇವರ ಪರಿಚಯ ನಿಮಗಿದೆಯೇ?

ಉದಯ ವೀರ್‌ ಸಿಂಗ್‌
ಇಡೀ ಲೋಕಾಯುಕ್ತ ವರದಿಯ ಬೆನ್ನೆಲುಬು ಇವರು. ದಕ್ಷ ಹಾಗೂ ದಿಟ್ಟ ಅಧಿಕಾರಿ ಮೂಲತಃ ರಾಜಸ್ಥಾನದವರು. 2007ರಲ್ಲಿ ಲೋಕಾಯುಕ್ತರು ಇವರಿಗೆ ಗಣಿ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ಸೂಚಿಸಿದಂದಿನಿಂದ ವಿಶ್ರಾಂತಿ ಪಡೆದುಕೊಂಡೇ ಇಲ್ಲ. ಸ್ವತಃ ಫೀಲ್ಡಿಗಿಳಿಯುವ ದಂಡನಾಯಕ. ಅತ್ಯಂತ ಸರಳ ವ್ಯಕ್ತಿ.
1988ರಲ್ಲಿ ಐಎಫ್‌ಎಸ್‌ಗೆ ಸೇರಿದ ಅವರು 25 ವರ್ಷಗಳ ಅನುಭವದಲ್ಲಿ ನಾಲ್ಕಕ್ಕೂ ಹೆಚ್ಚು ಸಲ ಮಾರಣಾಂತಿಕ ದಾಳಿಗೆ ಒಳಗಾಗಿದ್ದಾರೆ. 44 ವರ್ಷದ ಈ ಕಲಿ ಟಿಂಬರ್‌ ಮಾಫಿಯಾ, ಮರಳು ಮಾಫಿಯಾ, ಗಣಿ ಮಾಫಿಯಾಗಳನ್ನು ಎದುರು ಹಾಕಿಕೊಂಡಿದ್ದಾರೆ. ಮೂಲತಃ ಕೃಷಿಕ ಕುಟುಂಬದ ಇವರು ಸಸ್ಯಶಾಸ್ತ್ರದಲ್ಲಿ ಪಿಎಚ್‌ಡಿ ಗಿಟ್ಟಿಸಿಕೊಂಡಿದ್ದು, 23 ಪ್ರಬಂಧಗಳನ್ನು ಮಂಡಿಸಿದ್ದಾರೆ. ಈಗಲೂ ಕೆರೆ ಅಭಿವೃದ್ಧಿ ಪ್ರಾಧಿಕಾರದ ಮುಖ್ಯಸ್ಥರಾಗಿ ಬೆಂಗಳೂರಿನ ಕೆರೆಗಳಿಗೆ ತ್ಯಾಜ್ಯ ನೀರು ಬಿಡುವ ಮಾಫಿಯಾದ ವಿರುದ್ಧ ಸೆಣಸುತ್ತಿದ್ದಾರೆ.
ಲೋಕಾಯುಕ್ತ ತನಿಖೆ ನಡೆಸುತ್ತಿರುವಾಗಲೇ ಇವರನ್ನು ಎರಡೆರಡು ಬಾರಿ ವರ್ಗ ಮಾಡಲು ಸರ್ಕಾರ ಪ್ರಯತ್ನಿಸಿತ್ತು.

ಕೆ. ಉದಯಕುಮಾರ್‌
ಸದ್ಯ ಕೆರೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿರುವ ಉದಯಕುಮಾರ್‌ ಈ ಟೀಮಿನಲ್ಲಿರುವ ಕನ್ನಡಿಗ. ಮೂಲತಃ ಧಾರವಾಡದ ಇವರ ತಂದೆ ಮತ್ತು ತಾತ ಇಬ್ಬರೂ ಕೃಷಿ ವಿಜ್ಞಾನಿಗಳು. 58 ವರ್ಷದ ಉದಯಕುಮಾರ್‌ ತಮ ವಯಸ್ಸನ್ನು ಮರೆತು ಗಣಿಗುಂಟ ಸುತ್ತಾಡಿ ವರದಿ ಸಿದ್ಧಪಡಿಸಿದ್ದಾರೆ. ದಿನಕ್ಕೆ ಹತ್ತರಿಂದ 15 ಕಿಮೀ ನಡೆಯುವುದರಿಂದ ನನ್ನ ಆರೋಗ್ಯ ಸುಧಾರಿಸಿದೆ ಎಂದು ಹೇಳುತ್ತಾರೆ.
ಅರಣ್ಯ ಇಲಾಖೆಯ ವಿವಿಧ ಹುದ್ದೆಯಲ್ಲಿದ್ದ ಅವರು ಒಮೆಯೂ ರಾಜಕೀಯ ಒತ್ತಡಕ್ಕೆ ಮಣಿದಿಲ್ಲ. ಅತ್ಯಂತ ಮೃದು ಸ್ವಭಾವದವರಾದರೂ ವೃತ್ತಿ ವಿಚಾರಕ್ಕೆ ಬಂದಾಗ ಇವರದು ಸದಾ ಗಟ್ಟಿ ನಿಲುವು. ಗಣಿಗಳ ಸಮೀಕ್ಷೆಯಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು.
ಬಿಸ್ವಜಿತ್‌ ಮಿಶ್ರಾ
ಬಳ್ಳಾರಿಯಲ್ಲಿ 10 ದಿನಗಳ ಕಾಲ ಡಿಸಿಎಫ್‌ ಆಗಿದ್ದ ಇವರು ತೆರಿಗೆ ಪಾವತಿಸದ ಗಣಿ ಕಂಪೆನಿಗಳ ಲೈಸೆನ್ಸ್‌ ನವೀಕರಣಕ್ಕೆ ನಿರಾಕರಿಸಿದ್ದರು. ಬರೇ ಹತ್ತು ದಿನಗಳಲ್ಲಿ 20 ಕೋಟಿ ರೂಪಾಯಿ ವಸೂಲಿ ಮಾಡಿದ್ದರು. ಆದರೆ ರೆಡ್ಡಿ ಸೋದರರ ಬಂಡಾಯದಿಂದ ಚಾಮರಾಜನಗರಕ್ಕೆ ವರ್ಗಗೊಂಡರು. ಅಲ್ಲಿಯೂ ಸುಮನೆ ಕೂರಲಿಲ್ಲ. ಆನೆ- ಮನುಷ್ಯನ ನಡುವಿನ ಸಂಘರ್ಷ ತಪ್ಪಿಸಲು 547 ಕಿಮೀ ಉದ್ದದ ಆನೆ ತಡೆ ಬೇಲಿ ನಿರ್ಮಿಸಿ ಎಲ್ಲರ ಮೆಚ್ಚುಗೆ ಗಳಿಸಿದರು. ಪ್ರಸಕ್ತ ಇ- ಆಡಳಿತ ಇಲಾಖೆಯಲ್ಲಿರುವ ಇವರು ಮೂಲತಃ ಭೋಪಾಲ್‌ನವರು. ಟೆಲಿಕಮ್ಯುನಿಕೇಷನ್ಸ್‌ನಲ್ಲಿ ಬಿಇ ಪಡೆದಿರುವ ಇವರು 1998ರಲ್ಲಿ ಐಎಫ್‌ಎಸ್‌ ಸೇರಿದ್ದಾರೆ. ಲೋಕಾಯುಕ್ತ ತನಿಖೆ ವೇಳೆ ರಾಜ್ಯ ಹಾಗೂ ಹೊರರಾಜ್ಯಗಳ ಬಂದರು, ಸ್ಟಾಕ್‌ಯಾರ್ಡ್‌ಗಳಿಗೆ ತೆರಳಿ ಅಕ್ರಮ ರಫ್ತುಗಳ ಕುರಿತ ಮಾಹಿತಿ ಕಲೆ ಹಾಕಿದ್ದಾರೆ. ತನಿಖೆ ಸಂದರ್ಭ ಕಂಪ್ಯೂಟರ್‌ ಸಂಬಂಧಿಸಿದ ದಾಖಲೆಗಳ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ವಿಪಿನ್‌ ಸಿಂಗ್‌
ಮೂಲತಃ ಉತ್ತರ ಪ್ರದೇಶದ ವಿಪಿನ್‌ ಸಿಂಗ್‌ ಮಾಹಿತಿ ತಂತ್ರಜ್ಞಾನ ಪರಿಣಿತ. 1998ರಲ್ಲಿ ಐಎಫ್‌ಎಸ್‌ ಸೇರಿದ ಇವರು ಶಿರಸಿಯಲ್ಲಿ ಕೆಲಸ ಆರಂಭಿಸಿದರು. ನಂತರ ಬೀದರ್‌ನಲ್ಲಿ ಡಿಸಿಎಫ್‌ ಆಗಿ ಕೆಲಸ ಮಾಡಿದ್ದು, ಪ್ರಸಕ್ತ ಇ- ಆಡಳಿತದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಕ್ರಮ ಗಣಿಗಾರಿಕೆಯಿಂದ ಹರಿದುಬರುತ್ತಿದ್ದ ಹಣದ ಜಾಡು ಹಿಡಿದು ಹೋದ ಇವರು 4,000 ಬ್ಯಾಂಕ್‌ ಖಾತೆಗಳನ್ನು ಪರಿಶೀಲಿಸಿದ ಅಧಿಕಾರಿಗಳಲ್ಲಿ ಪ್ರಮುಖರು. ಪ್ರಚಾರದ ಹಿಂದೆ ಬೀಳದ ವಿಪಿನ್‌ ಈಗಲೇ ಸಾಕಷ್ಟು ಪ್ರಚಾರ ಸಿಕ್ಕಿದೆ ಎಂದು ಹೇಳುತ್ತಾರೆ.

ತಾಕತ್‌ ಸಿಂಗ್‌ರಣಾವತ್‌
ಈ ತಂಡದ ಅತ್ಯಂತ ಕಿರಿಯ ಅಧಿಕಾರಿ ಇವರು. ಐಎಫ್‌ಎಸ್‌ ಪ್ರೊಬೇಷನರಿ ಅವಧಿಯಲ್ಲಿರುವ ಇವರು ಬೀದರ್‌ ಡಿಸಿಎಫ್‌ ಆಗಿ ವರ್ಗವಾಗಿದ್ದಾರೆ. ಅಂಕೋಲಾದಲ್ಲಿ ಎಸಿಎಫ್‌ ಆಗಿದ್ದ ಇವರು ಬೇಲೆಕೇರಿ ದಾಳಿಯ ಸಂದರ್ಭ ಪ್ರಮುಖ ಪಾತ್ರ ವಹಿಸಿದ್ದರು. ಯುವ ಉತ್ಸಾಹಿ ಅಧಿಕಾರಿ ತಮ್ಮ ಕಿರು ಅವಧಿಯಲ್ಲೇ ಉತ್ತಮ ಹೆಸರು ಮಾಡಿದ್ದಾರೆ. ಮೂಲತಃ ರಾಜಾಸ್ಥಾನದವರು.
(ವಿಜಯnext ನಲ್ಲಿ ಪ್ರಕಟಿತ ಲೇಖನ)