ಏನಂತೀರಿ?


ಸಾಮಂತರ ಆರ್ಭಟಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಅವರ ಕಾಕನಕೋಟೆ ಕಾದಂಬರಿಯಲ್ಲಿ  ಹೀಗೊಂದು ಪ್ರಸಂಗ ಬರುತ್ತದೆ. ಮೈಸೂರು ಅರಸರ ಅಧೀನದಲ್ಲಿದ್ದ ಹೆಗ್ಗಡೆ ದೇವನಕೋಟೆಯ ಹೆಗ್ಗಡೆ ಮತ್ತು ಕಾಕನ ಕೋಟೆ ಕಾಡುಕುರುಬರಿಗೂ ಕಪ್ಪದ ವಿಚಾರದಲ್ಲಿ  ವಿವಾದ ತಲೆದೋರುತ್ತದೆ. ನಾನೇಕೆ ನಿನಗೆ ಕಪ್ಪ ಕೊಡಲಿ ಎಂದು ಕಾಡುಕುರುಬರ ಮುಖಂಡ ನೇರವಾಗಿ ಹೆಗ್ಗಡೆಗೆ ಸೆಡ್ಡು ಹೊಡೆಯುತ್ತಾನೆ.
ಯಡಿಯೂರಪ್ಪ ಪ್ರಕರಣ ಇದಕ್ಕಿಂತ ಭಿನ್ನವೇನಲ್ಲ. ಸಾಮಂತ ರಾಜ ಯಡಿಯೂರಪ್ಪ  ತನ್ನ ಹೈಕಮಾಂಡ್‌ಗೆ ಸೆಡ್ಡು ಹೊಡೆದಿದ್ದಾರೆ.
ಜನ-ಧನ, ಹಠ- ಮಠ.. ಇವು ತನ್ನ ಜತೆಗೆ ಇವೆ ಎಂಬ ಭ್ರಮೆ ಮೈಗೂಡಿದ ಕೂಡಲೇ ಏನಾಗಬೇಕೋ ಅದೇ ಆಗುತ್ತಿದೆ ಈಗ ಯಡಿಯೂರಪ್ಪ  ಅವರಲ್ಲಿ. ಶಾಸಕರ ಬೆಂಬಲ ಇದೆ ಎಂಬ ಬೀಗು, ಜನರನ್ನು ಖರೀದಿಸಲು ಅಗತ್ಯವಾದ ಹಣ ಇದೆ ಎಂಬ ಅಹಂ, ಮಠಗಳ ಸಂಪೂರ್ಣ ಬೆಂಬಲ ಇದೆ ಎಂಬ ಠೇಂಕಾರ
ಹಾಗೂ ಇವೆಲ್ಲದರ ಜತೆಗೆ ಜನತಃ ಮೈಗೂಡಿಸಿಕೊಂಡಿರುವ ಹಠ ಸ್ವಭಾವ ಯಡಿಯೂರಪ್ಪ ಅವರನ್ನು ಪಕ್ಷದ ಹೈಕಮಾಂಡ್‌ಗೇ ಸೆಡ್ಡು ಹೊಡೆಯುವಂತೆ ಮಾಡಿದೆ.
ಆರು ತಿಂಗಳ ಹಿಂದಿನ ಘಟನೆಯನ್ನು ನೆನಪಿಸಿಕೊಳ್ಳಿ. ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವಂತೆ ಸೂಚಿಸಲು ಪಕ್ಷದ ವರಿಷ್ಠರಾದ ರಾಜ್‌ನಾಥ್‌ ಸಿಂಗ್‌, ಅರುಣ್‌ ಜೇಟ್ಲಿ ಬೆಂಗಳೂರಿಗೆ ಬಂದಿದ್ದಾಗ ಎರಡು ದಿನ ಮನೆಯಿಂದ ಹೊರಗೆ ಬಾರಲೇ ಇಲ್ಲ ಯಡಿಯೂರಪ್ಪ. ಮುಖ್ಯಮಂತ್ರಿಯ ಜವಾಬ್ದಾರಿಯನ್ನು ಆ ಎರಡು ದಿನ ಪೂರ್ಣ ಮರೆತುಬಿಟ್ಟಿದ್ದರು. ಕೊನೆಗೆ ವರಿಷ್ಠರೇ ಇವರ ಮನೆಯ ಮೆಟ್ಟಿಲು ಹತ್ತಿ ರಾಜೀನಾಮೆ ಪಡೆಯಬೇಕಾಯಿತು. ಜೈಲಲ್ಲಿ ಕೂತಿದ್ದಾಗಲೂ ಅಡ್ವಾಣಿ ಅವರ ಯಾತ್ರೆಗೆ ತಮ್ಮ ಬೆಂಬಲಿಗರು ಬಹಿಷ್ಕರಿಸುವಂತೆ ನೋಡಿಕೊಂಡಿದ್ದರು. ಪಕ್ಷದ ಹೈಕಮಾಂಡ್‌ ತನ್ನಷ್ಟು ಶಕ್ತಿಶಾಲಿ ಅಲ್ಲ ಎಂದು ತಿಳಿದಾಗಲಷ್ಟೇ ಇಂಥ ಬಾಣಗಳನ್ನು ಪ್ರಯೋಗಿಸಲು ಸಾಧ್ಯವಾಗುತ್ತದೆ. ದೆಹಲಿ ನಾಯಕರ ವೀಕ್‌ನೆಸ್‌ಗಳನ್ನೆಲ್ಲ ಕರಗತ ಮಾಡಿಕೊಂಡಿರುವ ಯಡಿಯೂರಪ್ಪ ತನಗೆ ಗೊತ್ತಿರುವ, ಗೊತ್ತಿಲ್ಲದ ಎಲ್ಲ ರಾಜಕೀಯ ಪಟ್ಟುಗಳನ್ನು ಪ್ರಯೋಗಿಸುತ್ತಿದ್ದಾರೆ. ಆರು ವರ್ಷ ಕಾಲ ರಾಷ್ಟ್ರವನ್ನು ಆಳಿದ ರಾಷ್ಟ್ರೀಯ ಪಕ್ಷವೊಂದು ಅಕ್ಷರಶಃ ಮಂಡಿಯೂರಿ ಕೂತುಬಿಟ್ಟಿದೆ ಇವರ ಮುಂದೆ.
ರಾಜಕೀಯ ಪಕ್ಷಗಳ ಇತಿಹಾಸವನ್ನು ಕೆದಕಿ ನೋಡಿದರೆ ಇದಾವುದೂ ಹೊಸತಲ್ಲ. ರಾಷ್ಟ್ರೀಯ ಪರಿಕಲ್ಪನೆಯನ್ನು ಆಧರಿಸಿ ವಿಶಾಲ ತಳಹದಿಯ ನಿಲುವುಗಳನ್ನು ದರ್ಶಿಸಬೇಕಾದ ರಾಷ್ಟ್ರೀಯ ಪಕ್ಷವೆಂಬ ಸಾಮ್ರಾಜ್ಯದ ದೊರೆಗಳು ಪ್ರಾದೇಶಿಕ ಸಾಮಂತರಿಗೆ ಎಷ್ಟೋ ಸಲ ಶರಣಾಗಿಬಿಟ್ಟಿದೆ. ಇದು ಒಂದು ಹಂತದಲ್ಲಿ ಅನಿವಾರ್ಯವೂ ಹೌದು. ಕೆಲವು ಬಾರಿ ಅಂಥ ಸ್ಥಳೀಯ ನಾಯಕರಿಂದ ಪಕ್ಷದ ವರ್ಚಸ್ಸು ವೃದ್ಧಿಯಾದರೆ, ಇನ್ನೆಷ್ಟೋ ಸಲ ಮುಖಭಂಗ ಅನುಭವಿಸಬೇಕಾಗುತ್ತದೆ. ಇದು ಒಂದು ರಾಜಕೀಯ ಪಕ್ಷಕ್ಕೆ ಸೀಮಿತವಾದ ಘಟನೆಯೂ ಅಲ್ಲ.
ಈಚೆಗೆ ಮಣಿಪುರದಲ್ಲಿ ನಡೆದ ವಿಧಾನಸಭಾ ಚುನಾವಣೆ ಫಲಿತಾಂಶವನ್ನು ಗಮನಿಸಿ. ಅಲ್ಲೊಬ್ಬ ಇಬೊಬಿ ಸಿಂಗ್‌ ಇಲ್ಲದಿದ್ದರೆ ಸತತ ಮೂರು ಸಲ ಕಾಂಗ್ರೆಸ್‌ ಅಧಿಕಾರ ಹಿಡಿಯುವುದು ಸಾಧ್ಯವೇ ಆಗುತ್ತಿರಲಿಲ್ಲ. ಅದು ಇಬೊಬಿ ಸಿಂಗ್‌ ಶಕ್ತಿ. ಬಹುಶಃ ಇದೇ ವ್ಯಕ್ತಿ ನಾಳೆ ಕಾಂಗ್ರೆಸ್‌ ವಿರುದ್ಧವೇ ಬಂಡೆದುಬಿಟ್ಟರೆ ಅಲ್ಲಿ ಪಕ್ಷ ನಾಮಾವಾಶೇಷವಾಗುತ್ತದೆ. ಏಕೆಂದರೆ, ಪರ್ಯಾಯ ನಾಯಕತ್ವ ಇಲ್ಲ.
ಇಂಥದ್ದೇ ಸಂಕಟವನ್ನು  ಕರ್ನಾಟಕದಲ್ಲಿ ಬಿಜೆಪಿಯೂ ಎದುರಿಸುತ್ತಿದೆ. ಯಡಿಯೂರಪ್ಪ ಬಿಟ್ಟರೆ ಜನಸಮೂಹವನ್ನು ಸೆಳೆಯಬಲ್ಲ; ಜಾತಿ ಬಲ ಇರುವ ಬೇರೆ ನಾಯಕರು ಇಲ್ಲಿಲ್ಲ. ಅಂಥದ್ದೊಂದು ಪರ್ಯಾಯ ನಾಯಕತ್ವ ಸೃಷ್ಟಿ ಮಾಡುವ ಬಗ್ಗೆಯೂ ಪಕ್ಷ ಯೋಚಿಸಿಲ್ಲ. ಕಾಂಗ್ರೆಸ್‌ ಇಂಥ ಹೊಡೆತವನ್ನು  ಸಾಕಷ್ಟು ಬಾರಿ ತಿಂದಿದೆ. ಇದಕ್ಕೆ ಲೇಟೆಸ್ಟ್‌ ಉದಾಹರಣೆ ಎಂದರೆ ಆಂಧ್ರಪ್ರದೇಶದ ರಾಜಕೀಯ ಬೆಳವಣಿಗೆ.
ಆಂಧ್ರದ ಮುಖ್ಯಮಂತ್ರಿಯಾಗಿದ್ದ ವೈ.ಎಸ್‌.ರಾಜಶೇಖರ ರೆಡ್ಡಿ ಯಾವ ಮಟ್ಟಕ್ಕೆ ಬೆಳೆದುಬಿಟ್ಟರೆಂದರೆ ಅವರ ಮುಂದೆ ಕಾಂಗ್ರೆಸ್‌ ಸಣ್ಣದಾಗಿಬಿಟ್ಟಿತ್ತು. ಕಾಂಗ್ರೆಸ್‌ ಎಂದರೆ ವೈಎಸ್‌ಆರ್‌ ಎಂದು ಜನ ಗುರುತಿಸುತ್ತಿದ್ದರೇ ಹೊರತು ಅಲ್ಲಿ ಸೋನಿಯಾ ಮ್ಯಾಜಿಕ್‌ ನಡೆಯುತ್ತಿರಲಿಲ್ಲ. ಒಮ್ಮಿಂದೊಮ್ಮೆಗೆ ಹೆಲಿಕಾಪ್ಟರ್‌ ದುರಂತದಲ್ಲಿ ವೈಎಸ್‌ಆರ್‌ ಕಣ್ಮರೆಯಾದಾಗಲೇ ಕಾಂಗ್ರೆಸ್‌ಗೆ ಗೊತ್ತಾಗಿದ್ದು ಅಲ್ಲೊಬ್ಬ ಸಮರ್ಥ ನಾಯಕರಿಲ್ಲ ಎನ್ನುವುದು. ಅದರ ಪರಿಣಾಮವನ್ನು ವರ್ಷ ಮೂರಾದರೂ ಕಾಂಗ್ರೆಸ್‌ಗೆ ಅರಗಿಸಿಕೊಳ್ಳಲಾಗಲಿಲ್ಲ. ಮುಂದೆ ಎದುರಾಗುವ ಚುನಾವಣೆಯಲ್ಲೂ ಕಾಂಗ್ರೆಸ್‌ನ್ನು  ಮುನ್ನಡೆಸಬಲ್ಲ ನಾಯಕರು ಯಾರು ಎನ್ನುವ ಗೊಂದಲ ಹಾಗೆಯೇ ಉಳಿದುಕೊಂಡಿದೆ.
ಇಂಥದ್ದೇ ಶೂನ್ಯಸ್ಥಿತಿಯನ್ನು ಕರ್ನಾಟಕದಲ್ಲೂ ಇದೆ. ಯಡಿಯೂರಪ್ಪ  ಪಕ್ಷ ಬಿಟ್ಟರೆ ಹೋಗಲಿ ಎಂದು ಗಟ್ಟಿದನಿಯಲ್ಲಿ ಹೇಳುವ ಧೈರ್ಯ ಯಾವ ರಾಷ್ಟ್ರೀಯ ನಾಯಕರಿಗೂ ಇಲ್ಲ. ಇದಕ್ಕೆ ಯಡಿಯೂರಪ್ಪ ಜತೆ ಶಾಸಕರ ಬಲ ಇದೆ ಎನ್ನುವುದು ಕಾರಣವೇ ಅಲ್ಲ. ಅದರ ಬದಲು, ಮತ ಸೆಳೆಯಬಲ್ಲ; ರಾಜಕೀಯ ತಂತ್ರಗಾರಿಕೆ ಮೆರೆಯಬಲ್ಲ, ಎಲ್ಲಕ್ಕೂ ಮಿಗಿಲಾಗಿ ಮುಂದಿನ ದಿನ ಮತ್ತೆ ಅಧಿಕಾರಕ್ಕೆ ತರಬಲ್ಲ ಶಕ್ತಿ ಯಡಿಯೂರಪ್ಪ ಅವರಿಗಿದೆ ಎನ್ನುವ ಭಾವನೆ.  ಮುಂದಿನ ಚುನಾವಣೆಯಲ್ಲಿ ಇದೆಲ್ಲವೂ ಯಡಿಯೂರಪ್ಪ ಅವರಿಂದ ಸಾಧ್ಯವಾಗುತ್ತದೆಯೊ, ಇಲ್ಲವೋ ಗೊತ್ತಿಲ್ಲ. ಆದರೆ ಒಂದಂತೂ ಸುಸ್ಪಷ್ಟ- ಇನ್ನಾರಿಗೂ ಸಾಧ್ಯವಾಗದು. ಈ ಪರ್ಯಾಯ ಶಕ್ತಿ ಇಲ್ಲದೆ ಇರುವುದರಿಂದಲೇ ಯಡಿಯೂರಪ್ಪ ಪಕ್ಷ ಮೀರಿ ಬೆಳೆಯುತ್ತಿರುವುದು.
ರಾಷ್ಟ್ರೀಯ ಪಕ್ಷವಾದರೂ ಗಟ್ಟಿಯಾದ ಸ್ಥಳೀಯ ನಾಯಕರು ಇಲ್ಲದಿದ್ದರೆ ಆ ಪಕ್ಷ ಬೆಳೆಯುವುದು ಕಷ್ಟ. ಈಚೆಗೆ ನಡೆದ ಉತ್ತರ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್‌ನ ರಾಹುಲ್‌ ಗಾಂಧಿಯಾಗಲಿ, ಬಿಜೆಪಿಯ ಉಮಾ ಭಾರತಿಯವರಾಗಲಿ ಪರಿಣಾಮ ಬೀರಲು ಸಾಧ್ಯವೇ ಆಗಲಿಲ್ಲ. ಇವರನ್ನು ಮತದಾರರು ಹೊರಗಿನವರು ಎಂದು ಭಾವಿಸಿದರೇ ಹೊರತು ತಮ್ಮವರು ಎಂದು ಸ್ವೀಕರಿಸಿಕೊಳ್ಳಲೇ ಇಲ್ಲ. ಹೀಗಾಗಿ, ಸ್ಥಳೀಯ ಸಾಮಂತರ ಸಹಾಯ ಬೇಕೇ ಬೇಕು. ಕಲ್ಯಾಣ್‌ಸಿಂಗ್‌ರಂಥ ಸಾಮಂತರನ್ನು ಪಕ್ಷದಿಂದ ಹೊರಗೆ ಹಾಕಿದ ಪರಿಣಾಮವನ್ನು ಈಗಲೂ ಬಿಜೆಪಿ ಅನುಭವಿಸುತ್ತಿದೆ
ಸಿದ್ಧಾಂತದಲ್ಲೇ ರಾಜಿ
ಕಲ್ಯಾಣ್‌ ಸಿಂಗ್‌ ಅವರು ಪಕ್ಷದ ಮೂಲ ಹಿಂದುತ್ವ ಸಿದ್ಧಾಂತವನ್ನು ನೆಚ್ಚಿ ರಾಜಕೀಯ ಮಾಡಿಕೊಂಡು ಬಂದವರು. ಆದರೆ ಯಡಿಯೂರಪ್ಪ ಹಾಗಲ್ಲ. ಹಾಗೆ ನೋಡಿದರೆ ಯಡಿಯೂರಪ್ಪ  ಅವರು ಈಗ ಬಲವಾಗಿ ಅಪ್ಪಿಕೊಂಡಿರುವ ವೀರಶೈವ ರಾಜಕೀಯ ತಂತ್ರ ಬಿಜೆಪಿಗೆ ಒಗ್ಗುವಂಥದ್ದಲ್ಲ. ವೀರಶೈವ ಒಂದು ಜಾತಿ ಅಲ್ಲ; ಧರ್ಮ ಎಂಬ ಯಡಿಯೂರಪ್ಪ ಹೇಳಿಕೆಯೇ ಬಿಜೆಪಿ ಮತ್ತು ಸಂಘಪರಿವಾರದ ಹಿಂದುತ್ವ ಪರಿಕಲ್ಪನೆಗೆ ವಿರೋಧಿಯಾದುದು. ಬಿಜೆಪಿ, ಆರೆಸ್ಸೆಸ್‌ ಎಂದಿಗೂ ಹಿಂದುತ್ವದ ಎದುರು ಮತ್ತೊಂದು ಧರ್ಮವನ್ನು ಕಾಣಲು ಇಚ್ಛಿಸುವುದಿಲ್ಲ. ಅದು ಪಕ್ಕಾ ಹಿಂದುತ್ವದ ನೆಲೆಗಟ್ಟಿನಲ್ಲಿ ರಾಜಕೀಯ ಮಾಡಿಕೊಂಡು ಬಂದ ಪಕ್ಷ. ಆದರೆ ಒಂದು ದೊಡ್ಡ ಸಮುದಾಯವನ್ನು ಜತೆಗೆ ಕರೆದೊಯ್ಯಬಲ್ಲ  ನಾಯಕನ ಮುಂದೆ ಈ ಸಿದ್ಧಾಂತಗಳು ಗೌಣ ಎಂದು ವರಿಷ್ಠರು ಭಾವಿಸಿಕೊಂಡಿದ್ದಿರಬೇಕು. ಹೀಗಾಗಿ ರಾಜ್ಯದಲ್ಲಿ ಈ ಸಾಮಂತರ ಕೈಗೆ ಪಕ್ಷವನ್ನು  ಬಿಟ್ಟುಕೊಟ್ಟರು. ಯಡಿಯೂರಪ್ಪ ಪಕ್ಷವನ್ನೇ ಹೈಜಾಕ್‌ ಮಾಡಿಬಿಟ್ಟರು.
ಗುಜರಾತ್‌ ಸಿಎಂ ಮೋದಿ ವಿಚಾರದಲ್ಲೂ ಆಗಿದ್ದು ಅದೇ. ಸಂಘ ಪರಿವಾರ ಮತ್ತು ಬಿಜೆಪಿಯ ನೆರಳಿನಡಿಯೇ ಬೆಳೆದ ಮೋದಿ ಇವತ್ತು ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿಲ್ಲ. ಪಕ್ಷ ಸೂಚನೆ ನೀಡಿದರೂ ಉತ್ತರ ಪ್ರದೇಶ ಚುನಾವಣೆಯಲ್ಲಿ ಪ್ರಚಾರ ಮಾಡದಿರಲು ನಿರ್ಧರಿಸಿದ್ದರು ಮೋದಿ. ತಮ್ಮ ಒಂದು ಕಾಲದ ಎದುರಾಳಿ ಸಂಜಯ್‌ ಜೋಷಿ ಅವರಿಗೆ ಆದ್ಯತೆ ನೀಡಿರುವುದನ್ನು ಪ್ರಶ್ನಿಸಿ ಹೈಕಮಾಂಡ್‌ಗೇ ಸೆಡ್ಡು ಹೊಡೆದರು. ಮೋದಿ ಹಾಗೂ ಆರೆಸ್ಸೆಸ್‌ ಸಂಬಂಧವೂ ಅಷ್ಟಕ್ಕಷ್ಟೇ. 2007ರ ಚುನಾವಣೆಯಲ್ಲಿ  ಆರೆಸ್ಸೆಸ್‌ನ ಪ್ರಮುಖರು ಪ್ರಚಾರಕ್ಕೆ ಬಾರದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಆರೆಸ್ಸೆಸ್‌ಗಿಂತಲೂ ಕಟ್ಟಾ ಹಿಂದುತ್ವವನ್ನು  ಮೈಗೂಡಿಸಿಕೊಂಡು ಬಿಜೆಪಿ ಮತ್ತು ಸಂಘವನ್ನೇ ಹೈಜಾಕ್‌ ಮಾಡಿದರು ಮೋದಿ. ಗುಜರಾತ್‌ ಬಿಜೆಪಿ ರಾಷ್ಟ್ರೀಯ ಬಿಜೆಪಿಯ ಅಂಗವೇ ಅಲ್ಲ ಎನ್ನುವಷ್ಟರ ಮಟ್ಟಿಗೆ ಪರ್ಯಾಯ ಬಿಜೆಪಿ ಕಟ್ಟಿದರು.
ಈ ಗುಜರಾತ್‌ ಮಾಡೆಲ್‌ನ್ನು ಯಡಿಯೂರಪ್ಪ  ಪಾಲಿಸುವಂತಿದೆ. ಅತ್ತ ಪಕ್ಷ ಬಿಡದೆ ಇಡೀ ಬಿಜೆಪಿಯನ್ನು ತಮ್ಮ ಮುಷ್ಠಿಯಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಇಂಥದ್ದೇ ಪ್ರಯತ್ನ ಮಾಡಿದವರು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರ ರಾಜೇ. ಕಳೆದ ವಿಧಾನಸಭಾ ಚುನಾವಣೆಯಲ್ಲಿ  ಸೋಲನ್ನಪ್ಪಿದಕ್ಕೆ  ಪ್ರಾಯಶ್ಚಿತ್ತವಾಗಿ ಶಾಸಕಾಂಗ ಪಕ್ಷದ ನಾಯಕಿ ಸ್ಥಾನ ಬಿಟ್ಟುಕೊಡುವಂತೆ ವರಿಷ್ಠರು ಅಪ್ಪಣೆ ಹೊರಡಿಸಿದರು. ಒಂದೇ ಪೆಟ್ಟಿಗೆ ಈ ಮಾತನ್ನು ಒಪ್ಪಿಕೊಳ್ಳದ ವಸುಂಧರ ಪಕ್ಷಕ್ಕೇ ತಿರುಗಿಬಿದ್ದರು. ಪ್ರಾದೇಶಿಕ ಪಕ್ಷ ಕಟ್ಟಲು ಹೊರಟಿದ್ದರು. ಆದರೆ ಆ ಪ್ರಯತ್ನ ಯಶಸ್ವಿಯಾಗಲಿಲ್ಲ ಬಿಡಿ.
ಆದರೆ ಅಂಥ ಬಂಡಾಯದಲ್ಲಿ  ಮಮತಾ ಬ್ಯಾನರ್ಜಿ ಯಶಸ್ವಿಯಾಗಿದ್ದರು. ಕಾಂಗ್ರೆಸ್‌ ನೀರನ್ನೇ ಕುಡಿದು ಬೆಳೆದ ಮಮತಾ ಬ್ಯಾನರ್ಜಿ 1997ರಲ್ಲಿ ಕಾಂಗ್ರೆಸ್‌ ತೊರೆದು ತೃಣಮೂಲ ಕಾಂಗ್ರೆಸ್‌ ಕಟ್ಟಿದರು. ಬಹುಶಃ ಪಶ್ಚಿಮ ಬಂಗಾಳದ ಸಾಮಂತ ರಾಣಿಯನ್ನು ಕಾಂಗ್ರೆಸ್‌ನಲ್ಲೇ ಉಳಿಸಿಕೊಂಡಿದ್ದರೆ ಇವತ್ತು ಆ ರಾಜ್ಯ ಕಾಂಗ್ರೆಸ್‌ ತೆಕ್ಕೆಯಲ್ಲಿ ಇರುತ್ತಿತ್ತೇನೋ. ಮಹಾರಾಷ್ಟ್ರದ ಇನ್ನೊಬ್ಬ ಸಾಮಂತ ದೊರೆ ಶರದ್‌ ಪವಾರ್‌ ಸಹ ಕಾಂಗ್ರೆಸ್‌ಗೆ ಸೆಡ್ಡು ಹೊಡೆದುಕೊಂಡೇ ಮೈತ್ರಿ ಮಾಡಿಕೊಳ್ಳುತ್ತಿರುವವರು. ನಮ್ಮಲ್ಲಿ ದೇವರಾಜ ಅರಸು, ಬಂಗಾರಪ್ಪ ಅವರಂಥ ಸಾಮಂತರು ಯಶ ಪಡೆಯಲಿಲ್ಲ.
ಹೀಗೆ, ರಾಷ್ಟ್ರೀಯ ದೃಷ್ಟಿಕೋನದಿಂದ ನಿಲುವು ರೂಪಿಸಿಕೊಳ್ಳುವ ರಾಷ್ಟ್ರೀಯ ಪಕ್ಷಗಳು ಒಂದರ್ಥದಲ್ಲಿ ಪ್ರಾದೇಶಿಕ ಪಕ್ಷಗಳ ಹಾಗೆಯೇ ಕೆಲಸ ಮಾಡುವ ಸ್ಥಿತಿ ಬಂದಿದೆ. ಅಧಿಕಾರ ಬೇಕೆಂದರೆ ಪ್ರತಿಯೊಂದು ಹಂತದಲ್ಲೂ ರಾಜಿ ಮಾಡಿಕೊಂಡು ಆಯಾ ಪ್ರಾದೇಶಿಕ ಸಾಮಂತರಿಗೆ ತಲೆಬಾಗುವ ಸ್ಥಿತಿ ಸದ್ಯದ ರಾಜಕಾರಣದ್ದು. ಇಲ್ಲದೆ ಹೋದರೆ ಅಧಿಕಾರ ನಷ್ಟ; ಅಸ್ತಿತ್ವ ನಾಶ.

 



ಅಣ್ಣಾ ಗೆಲುವು; ಪ್ರಜಾಪ್ರಭುತ್ವದ ಸೋಲು
ಇನ್ನೊಮ್ಮೆ ಭಾರತ ಗೆದ್ದಿತು ಎಂದು ಟಿವಿಗಳೆಲ್ಲ ಉಲಿಯಿತು; ಭಾರತ ಸಂಭ್ರಮಿಸಿಬಿಟ್ಟಿತು. ಕ್ರಿಕೆಟ್‌ ವಿಶ್ವಕಪ್‌ ಗೆದ್ದಾಗ ಆಚರಿಸಿದ್ದ ವಿಜಯೋತ್ಸವದ ಅಳಿಕೆ ಉಳಿಕೆ ಉತ್ಸಾಹಗಳನ್ನೆಲ್ಲ ಇಲ್ಲಿ ತೋರಿಸಿಬಿಟ್ಟಿತು. ಗಾಂಧಿವಾದಿ ಅಣ್ಣಾ ಹಜಾರೆ ಸತ್ಯಾಗ್ರಹಕ್ಕೆ ಹಾಗೂ ಅದಕ್ಕೆ ಸಿಕ್ಕಿದ ಜಯಕ್ಕೆ ಇಷ್ಟೊಂದು ಜನಮನ್ನಣೆ ಸಿಕ್ಕಿರುವುದು ಸಹಜವಾಗಿಯೇ ಭ್ರಷ್ಟಾಚಾರದ ವಿರುದ್ಧ ಭಾರತ ರೋಸಿ ಹೋಗಿರುವುದಕ್ಕೆ ಒಂದು ಸಾಕ್ಷಿ.
ಭ್ರಷ್ಟಾಚಾರದಂಥ ಜ್ವಲಂತ ವಿಚಾರದ ಬಗ್ಗೆ ಹೋರಾಡಲು ಎಲ್ಲ ಭಾರತೀಯ ಮನಗಳು ತವಕಿಸುತ್ತಿವೆ; ಆದರೆ ಅದಕ್ಕಾಗಿ ಸಮರ್ಥ ನಾಯಕನೊಬ್ಬನನ್ನು ಅರಸುತ್ತಿತ್ತೇನೋ. ಬಹುಶಃ ಮೈ ಮೇಲೆ ಕೆಸರು ಅಂಟಿಸಿಕೊಳ್ಳದ ಅಣ್ಣಾ ಅವರಲ್ಲಿ ದೇಶ ನಾಯಕತ್ವ ಕಂಡಿದ್ದಿರಬೇಕು. ಹಾಗಾಗಿಯೇ ನಿರೀಕ್ಷೆ ಮೀರಿದ ಪ್ರತಿಕ್ರಿಯೆ ಸಿಕ್ಕಿತು. ಆದರೆ ಪ್ರಶ್ನೆ ಅದಲ್ಲ- ಇಂಥ ಗಂಭೀರ ಸಮಸ್ಯೆಯ ವಿರುದ್ಧ ಹೋರಾಡಲು ನಾವು ಇಷ್ಟೊಂದು ದಿನ ಕಾಯಬೇಕಾಯಿತ್ತಲ್ಲ ಎನ್ನುವುದು. ನಮಲ್ಲಿ ನಾಯಕತ್ವಕ್ಕೇನೂ ಕೊರತೆ ಇಲ್ಲ. ಗಲ್ಲಿ ಗಲ್ಲಿ ವಾರ್ಡ್‌ ವಾರ್ಡ್‌ಗಳಲ್ಲಿ ಸೋ ಕಾಲ್ಡ್‌ ನಾಯಕರು ಸಿಗುತ್ತಾರೆ. ಆದರೆ ಅವರ್ಯಾರಿಗೂ ಭ್ರಷ್ಟತೆ ಕುರಿತು ಸೊಲ್ಲೆತ್ತುವ ಧೈರ್ಯ ಇಲ್ಲ. ಏಕೆಂದರೆ ನಾಯಕತ್ವ ಮತ್ತು ಭ್ರಷ್ಟಾಚಾರ ಎರಡೂ ಒಂದಕ್ಕೊಂದು ಅಂಟಿಕೊಂಡ ವಿಷಯ. ಸೊತ್ತಿಲ್ಲದೆ ಸತ್ತೆ ಇಲ್ಲ. ಸೊತ್ತಿನ ಬಗ್ಗೆ ಮೋಹ ಇಲ್ಲದವರಿಗೂ ಸತ್ತೆ ಬಗ್ಗೆ ಪ್ರೀತಿಯಿಂದಾಗಿ ಕರಪ್ಷನ್‌ ಬಗ್ಗೆ ದಿಟ್ಟ ನಿಲುವು ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ನಮ ಸಂಪುಟದಲ್ಲಿ ಪ್ರಾಮಾಣಿಕರು ಎಂದು ಜನ ನಂಬಿಕೊಂಡಿರುವ ಕೆಲವು ಸಚಿವರು ಇತರರ ಭ್ರಷ್ಟತೆಯನ್ನು ನೋಡಿ ಸುಮನಿರುವುದು ಸಹ ಒಂದರ್ಥದಲ್ಲಿ ಭ್ರಷ್ಟಾಚಾರವೇ. ಇದುವೇ ಈ ದೇಶದ ಸ್ವಾತಂತ್ರ್ಯಾನಂತರದ ಅತಿ ದೊಡ್ಡ ದುರಂತ. ಅದಕ್ಕೆ ಅಣ್ಣಾ ಹಜಾರೆಯಂಥ ನಿಸ್ವಾರ್ಥಿ ವ್ಯಕ್ತಿಯೇ ಬೇಕು.
ಹಾಗೆಂದು ಅಣ್ಣಾ ವಿಜಯವನ್ನು ನಾವು ಸಂಭ್ರಮಿಸಿಕೊಂಡು ಕೂರಲು ಇದೇನು ವಿಶ್ವಕಪ್‌ ಅಲ್ಲ. ಅತಿಕ್ರಮಿಗಳ ವಶವಾದ ಕಾರ್ಗಿಲ್‌ ಭಾಗವನ್ನು ಮತ್ತೆ ನಾವು ಗೆದ್ದಾಗ ಸಂಭ್ರಮಿಸಿದ್ದನ್ನು ನೆನಪಿಸಿಕೊಳ್ಳಿ. ಅಲ್ಲಿ ನಿಜವಾಗಿ ಬೇಕಿದ್ದುದು ಸಂಭ್ರಮವಲ್ಲ. ಅದು ನಮ ಜಾಗೃತಾವಸ್ಥೆಗೆ ಹಾಕಿದ ಸವಾಲಾಗಿತ್ತು. ಅದರಿಂದ ನಾವು ಪಾರಾದೆವಲ್ಲ ಎಂಬ ನಿಟ್ಟುಸಿರು ಮಾತ್ರ ಅಲ್ಲಿ ಸಾಕಿತ್ತು. ಈ ಕರಪ್ಷನ್‌ ವಿಚಾರದಲ್ಲಿ ಸಹ ಅಂಥದ್ದೇ ಒಂದು ಅವಲೋಕನದ ಅಗತ್ಯ ಇದೆ. ಹಾಗೆ ನೋಡಿದರೆ, ಅಣ್ಣಾ ಅವರ ಸತ್ಯಾಗ್ರಹ, ಗೆಲುವು ಎಲ್ಲವೂ ಈ ಪ್ರಜಾಪ್ರಭುತ್ವದ ಸೋಲು.
ಬಿಕ್ಕಟ್ಟು ಬಂದಾಗಲೆಲ್ಲ ಭಾರತ ಒಂದಾಗಿದೆ ಎಂದು ಟಿವಿಯಲ್ಲಿ ಪ್ರಾಜ್ಞರು ಮಾತನಾಡುತ್ತಿದ್ದರು. ಬಹುಶಃ, ಈಗ ಬಿಕ್ಕಟ್ಟು ಬಂದಿರುವುದಲ್ಲ; ನಾವೇ ಎಳೆದುಕೊಂಡಿರುವುದು. ಈ ದೇಶದಲ್ಲಿ ಪ್ರಜಾಪ್ರಭುತ್ವ ಸಮರ್ಪಕವಾಗಿ ಆಚರಣೆಗೆ ಬರುತ್ತಿದ್ದರೆ ಇಂಥದ್ದೊಂದು ಬಿಕ್ಕಟ್ಟು ಬರುತ್ತಿರಲಿಲ್ಲವೇನೋ. ಅಂದರೆ, ಭಾರತ ಒಂದಾಗಿದೆ ಎಂದು ಹೇಗೆ ಹೇಳುವುದು?
ಈಗ ಭ್ರಷ್ಟರು ಎಂದು ನಾವು ಉಲ್ಲೇಖಿಸುವ ಮುಖ್ಯಮಂತ್ರಿಗಳು, ಮಂತ್ರಿಗಳು ಅವರವರ ಕ್ಷೇತ್ರದ ಜನಪ್ರಿಯ ನಾಯಕರು ಎಂಬುದನ್ನು ಮರೆಯಬೇಡಿ. ಅವರು ಜನಪ್ರಿಯರಾಗಲು ಕಾರಣ ನಾವು ಅರ್ಥಾತ್‌ ನಾವು. ಚುನಾವಣೆ ಹಂತದಲ್ಲೇ ಭ್ರಷ್ಟರನ್ನು ಮನೆಗೆ ಕಳುಹಿಸಲಾಗದೆ ಇರುವುದು ಪ್ರಜಾಪ್ರಭುತ್ವದ ಸೋಲಲ್ಲವೇ? ಪ್ರಜಾಸತ್ತೆ ಮೇಲೆ ಈ ಆಧುನಿಕ ಪ್ರಭುಗಳ ಸವಾರಿ ಹೊರಟಿದ್ದಾರೆ ಎನ್ನುವುದಾದರೆ ಮತದಾರರು ಇನ್ನೂ ಜಾಗೃತರಾಗಿಲ್ಲ ಎಂದರ್ಥವಲ್ಲವೇ. ಇಲ್ಲೂ ಕಾರ್ಗಿಲ್‌ನ ಹಾಗೆ ನಾವು ಮೈ ಮರೆತಿದ್ದೇವೆ. ನಿಜವಾಗಿ ಪ್ರಜಾಪ್ರಭುತ್ವ ಸಮರ್ಥವಾಗಿ ನಡೆಯುತ್ತಿದ್ದಿದ್ದರೆ ಅಣ್ಣಾ ಹಜಾರೆ ಸತ್ಯಾಗ್ರಹದ ಅವಶ್ಯಕತೆಯೇ ಇರುತ್ತಿರಲಿಲ್ಲ. ಇಡೀ ದೇಶಕ್ಕೆ ದೇಶವೇ ಎದ್ದುನಿಲ್ಲುವ ಅಗತ್ಯವೂ ಇರಲಿಲ್ಲ.
ಇನ್ನೊಂದು ಆಯಾಮದಿಂದ ನೋಡುವುದಾದರೆ, ಹಜಾರೆಯವರ ಈ ಸತ್ಯಾಗ್ರಹ ಒಂದು ರೀತಿಯಲ್ಲಿ ಸರ್ಕಾರವನ್ನು ಬ್ಲಾಕ್‌ಮೇಲ್‌ ಮಾಡಿ ಕೆಲಸ ಮಾಡಿಸಿಕೊಂಡ ಹಾಗೆಯೇ. ಈ ಹೋರಾಟ ಎಲ್ಲರೂ ವಿರೋಧಿಸಲೇಬೇಕಾದ ಭ್ರಷ್ಟಾಚಾರದ ವಿರುದ್ಧ ಆದುದರಿಂದ ಸರ್ವಾನುಮತಿ ಪಡೆದುಕೊಂಡಿರಬಹುದು. ಆದರೆ, ಅದುವೇ ಬಹುಜನಕ್ಕೆ ಬೇಕಾದ ಹಾಗೂ ವಿವಾದಾಸ್ಪದ ವಿಚಾರಗಳ ಬಗ್ಗೆ ಇಂಥದ್ದೇ ಧರಣಿ ಹೋರಾಟಕ್ಕೆ ಸರ್ಕಾರ ಮಣಿದರೆ ಅದನ್ನು ಪ್ರಜಾಪ್ರಭುತ್ವ ಎಂದು ವ್ಯಾಖ್ಯಾನಿಸಬಹುದೇ ಎನ್ನುವ ಪ್ರಶ್ನೆ ಇಲ್ಲಿ ಏಳುತ್ತದೆ.
ಇದನ್ನೇ ನಿವೃತ್ತ ಪೊಲೀಸ್‌ ಅಧಿಕಾರಿ ಕಿರಣ್‌ ಬೇಡಿ ಸಹ ಮುಂದಿಟ್ಟಿದ್ದಾರೆ. ಸಂವಿಧಾನಬದ್ಧವಾಗಿ ಕಾರ್ಯಾಚರಿಸಬೇಕಾದ ಸರ್ಕಾರದ ಮೇಲೆ ನಿರ್ದಿಷ್ಟ ಶಾಸನ ನಿರೂಪಣೆಗೆ ಒತ್ತಾಯ ಹೇರುವುದು ಬ್ಲಾಕ್‌ಮೇಲ್‌. ಇದು ಮುಂದಿನ ದಿನಗಳಲ್ಲಿ ಆಡಳಿತ ವ್ಯವಸ್ಥೆ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬ ವಾದ ಅವರದ್ದು.
ಪ್ರಾಯಶಃ ಪ್ರಜಾಪ್ರಭುತ್ವ ನಾವು ಅಂದುಕೊಂಡ ಮಾರ್ಗದಲ್ಲಿ ನಡೆಯದಿರುವುದೇ ಈ ಎಲ್ಲ ವಿದ್ಯಮಾನಗಳಿಗೆ ಕಾರಣವಾಗುತ್ತಿದೆ. ಆಶಾದಾಯಕ ಬೆಳವಣಿಗೆ ಎಂದರೆ ಯುವಸಮೂಹ, ವಿದ್ಯಾರ್ಥಿಗಳು ಈ ಸಲ ಅಣ್ಣಾ ಹಿಂದೆ ನಿಂತಿದ್ದಾರೆ. ಮುಂದಿನ ಸಲ ಮತಗಟ್ಟೆಗೆ ಹೋಗುವಾಗಲೂ ಅಣ್ಣಾ ಅವರನ್ನು ನೆನಪಲ್ಲಿ ಉಳಿಸಿಕೊಂಡರೆ ಖಂಡಿತಾ ಬದಲಾವಣೆ ನಿರೀಕ್ಷಿಸಬಹುದು. ಭ್ರಷ್ಟತೆಯನ್ನು ತಿರಸ್ಕರಿಸುವ ಮನಸ್ಸು ಚುನಾವಣೆಯಿಂದಲೇ ಆರಂಭವಾದಾಗಲೇ ಭಾರತ ಗೆಲ್ಲುತ್ತದೆ. ಇಲ್ಲದಿದ್ದರೆ ಪ್ರಜಾಪ್ರಭುತ್ವ ಸೋಲುತ್ತದೆ.
ಏನಂತೀರಿ?