ವಕ್ರviewಹ




ATTN: ಹೊಸ ಆಪ್‌ಗಳು ಬೇಕು
Jul 19, 2014, 04.05AM IST

ಇದು ರಿಯಲ್ಲೀ ಆಪೀ ಡೇಸ್. ಹಿಂದೆ ಮೊಬೈಲ್ ಕೈಗೆ ಬಂತೆಂದರೆ 'ಕಾಲ್' ಹರಣವಾಗುತ್ತಿತ್ತಷ್ಟೇ. ಈಗ ಹಾಗಲ್ಲ, ಅದಾವುದೋ ಆ್ಯಪ್‌ನ್ನು ಕೆಳಗಿಳಿಸಿ, ಅದರೊಳಗೆ ಲಾಗ ಹಾಕಿ ಅಲ್ಲಿಯೇ ಕಾಲಹರಣ ಮಾಡಲಾಗುತ್ತಿದೆ. ಜಗತ್ತು ಪೂರ್ತಿ ಆ್ಯಪ್‌ಮಯವಾಗುತ್ತಿದೆ.

ಬೆಳಗ್ಗೆ ಸರಿಯಾದ ಸಮಯಕ್ಕೆ ಎಚ್ಚರಿಸೋಕೆ ಒಂದು ಅಲರಾಂ ಆಪ್, ಹಲ್ಲನ್ನು ಯಾವ ದಿಕ್ಕಿನಿಂದ ಹೇಗೆ ಉಜ್ಜಬೇಕು ಎಂದು ಹೇಳಲಿಕ್ಕೆ ಮತ್ತೊಂದು ಡಾಕ್ಟರ್ ಆಪ್ ರೆಡಿಯಾಗಿರುತ್ತದೆ. ಬ್ರೇಕ್‌ಫಾಸ್ಟ್‌ಗೆ ರೆಸಿಪಿ ಹೇಳಲು ಅಡುಗೆಯವಳು ಮೊಬೈಲ್‌ಗೇ ಬರುತ್ತಾಳೆ. ಅಂದಿನ ಕೆಲಸಗಳ ಪಟ್ಟಿ ಮಾಡಿ ಕೊಟ್ಟು ಸ್ವೀಟಾಗಿ ಗುಡ್‌ಮಾರ್ನಿಂಗ್ ಹೇಳೋಕೆ ಇನ್ನೊಬ್ಬಾಕೆ ಅಸಿಸ್ಟೆಂಟ್ ಅಪ್, ವಾಹನ ಓಡಿಸುವಾಗ ದಾರಿ ತೋರಿಸೋಕೆ ಮ್ಯಾಪ್, ಅಂಗಡಿಗೆ ಹೋಗದೆ ಮೊಬೈಲ್‌ನಲ್ಲೇ ಕೂತು ಖರೀದಿ ಮಾಡುವ ಶಾಪ್...!

ನೈಟ್ ಕುಡಿಯುವಾಗ ಟೈಟ್ ಆಯಿತಾ ಅಂತ ಚೆಕ್ ಮಾಡೋಕೆ ಟೆಸ್ಟಿಂಗ್ ಆ್ಯಪ್, ಇಡೀ ದಿನ ತಿಂದು ಶುಗರ್ ಹೇಗಿದೆ ಅಂತ ನೋಡೋಕೆ ಇನ್ನೊಂದು ಅಪ್ಲಿಕೇಶನ್. ರಾತ್ರಿ ಕೂಡಬಹುದಾ, ಕಳೆಯಬಹುದಾ ಅಂತ ದಿನ ಲೆಕ್ಕ ಮಾಡಿ ಹೇಳೋಕೆ ಮಂತ್ಲೀ ಮ್ಯಾತ್‌ಮ್ಯಾಟಿಕ್ಸ್...

ಚಾಟ್ ಮಾಡಕ್ಕೊಂದು, ಫೊಟೋ ತೆಗೆಯೋಕೆ ಇನ್ನೊಂದು, ಅಡೋಕೆ ಮತ್ತೊಂದು, ಓದೋಕೆ ಮಗ ದೊಂದು, ಇದನ್ನೆಲ್ಲ ಲೆಕ್ಕ ಇಡೋದು ಇನ್ನೊಂದು... ಅಬ್ಬಬ್ಬಾ, ಈ ಸೆರೆಯ ಲೋಕದಲ್ಲಿ ನಾವೆಲ್ಲ ಕಳೆದು ಹೋಗಿ ಬಿಟ್ಟಿದ್ದೇವೆ. ಇ ಲೋಕ ಇರುವಾಗ ಇನ್ಯಾಕೆ ಬೇಕು ಆ... ಲೋಕ?

ಉಹುಂ, ಇಷ್ಟೆಲ್ಲ ಸಾಕಾಗೋದಿಲ್ಲ. ಸ್ಟೋರ್ ತುಂಬಾ ಆ್ಯಪ್‌ಗಳಿದ್ದರೂ, ಇನ್ನಷ್ಟು ಆ್ಯಪ್‌ಗಳು ಬೇಕೇಬೇಕು. ಮತ್ತಷ್ಟು ಆಪ್‌ಗಳ ಕೊರತೆ ಕಾಡುತ್ತಿದೆ. ದಿನದಿಂದ ದಿನಕ್ಕೆ ನಮ್ಮ ಸುತ್ತಮುತ್ತಲಿನ ಬೆಳವಣಿಗೆ ನೋಡಿದರೆ, ಮತ್ತತ್ತತ್ತತ್ತಷ್ಟು ಆಪ್‌ಗಳನ್ನು ಡೆವಲಪ್ ಮಾಡುವ ಅಗತ್ಯ ಇದೆ. ಈ ನಿಟ್ಟಿನಲ್ಲಿ ನಮ್ಮ ಸ್ಟಾರ್ಟಪ್ ಸಿಟಿಯ ಬೆಂಗಳೂರಿನ ಟೆಕಿಗಳು ಕೊಂಚ ಗಮನಿಸಬಹುದೇ?

ಹಿ(ಹೊ)ಡಿಯೋ:
ಇಂಥದ್ದೊಂದು ವಿಶೇಷ ಆ್ಯಪ್ ಬೃಹತ್ ಬೆಂಗಳೂರು ಮಹಾನಗರಪಾಲಿಕೆಗೆ ಅಗತ್ಯ ಇದೆ. ಇಪ್ಪತ್ತು ಇಲಿ ಹಿಡಿಯಲು ಎರಡು ಲಕ್ಷ ಖರ್ಚು ಮಾಡಿದ ಬಿಬಿಎಂಪಿಗೆ ಸುಲಭವಾಗಿ ಇಲಿ ಹಿಡಿಯೋ ಆ್ಯಪ್ ಬೇಕಾಗಿದೆ. ಈ ಆ್ಯಪ್‌ನ್ನು ಇಟ್ಟರೆ, ಇಲಿಗಳೇ ಹಾಗೆಯೇ ಸಾಲಾಗಿ ಬಂದು ನಿಂತುಕೊಂಡು ಬಿಡಬೇಕು. ಬಿಬಿಎಂಪಿಯಲ್ಲಿ ಇಲಿ ಹಿಡಿಯೋ ಇದಕ್ಕೆ ಮಂಡೂರಿನಲ್ಲಿ ನೊಣ ಹೊಡಿಯೋ ಸಾಮರ್ಥ್ಯನೂ ಇರಬೇಕು. ಕಸದ ರಾಶಿ ಮಧ್ಯೆ ಬದುಕುತ್ತಿರುವ ಅಮಾಯ ಕರಿಗೆ ಮೊಬೈಲ್ ಸಹಿತ ಈ ಆ್ಯಪ್ ಕೊಟ್ಟರೆ ಅನುಕೂಲವಾಗ ಬಹುದು. ಈ ಹಿ(ಹೊ)ಡಿಯೋ ಆ್ಯಪ್‌ನಿಂದ ಕಮಿಷನ್ ಹೊಡಿಯೋಕೆ ಆಗ್ತದಾ ಅಂತ ಯಾರಾದರೂ ಕಾರ್ಪೊ ರೇಟರ್ ಕೇಳಲೂಬಹುದು.

ವೇಕ್ ಅಪ್ ಸಿದ್:
ರಾಜ್ಯ ಸರಕಾರಕ್ಕೆ ತುರ್ತಾಗಿ ಬೇಕಿರುವ ಅಪ್ಲಿಕೇಷನ್ ಇದು. ಕೈ ಪ್ಲಾಟ್‌ಫಾರಂನಲ್ಲಿ ಕೆಲಸ ಮಾಡಬೇಕಾದ ಇದು, ರಾಜ್ಯದ ಮುಖ್ಯಮಂತ್ರಿ, ಎಲ್ಲ ಮಂತ್ರಿಗಳು, ಅಧಿಕಾರಿಗಳ ಕಿಸೆಯಲ್ಲಿ ಇದನ್ನು ಕಡ್ಡಾಯವಾಗಿ ಇಡಬೇಕು. ಇವರು ಅಕಸ್ಮಾತ್ ನಿದ್ದೆಗೆ ಎಂದು ಕಣ್ಣುಮುಚ್ಚಿದ ಕೂಡಲೇ ಅಲಾರಾಂ ಕಿರುಚಬೇಕು. ದಡಬಡನೆ ಎದ್ದು ಕೆಲಸ ಆರಂಭಿಸುವವರೆಗೆ ಅದು ಸದ್ದು ಮಾಡುತ್ತಲೇ ಇರಬೇಕು. ಯಾವುದೇ ಘಟನೆ ಗಳಿಗೆ ಸರಕಾರ ಸ್ಪಂದಿಸದಿದ್ದರೆ ಅಲರಾಂ ಹೊಡೆಯ ಬೇಕು. ಆ ಶಬ್ದ ದಿಲ್ಲಿಯಲ್ಲಿರುವ ಕಾಂಗ್ರೆಸ್ ಹೈಕಮಾಂಡ್ ತನಕ ಕೇಳಬೇಕು.

ಸೇಫ್ರನ್ ಅಲರ್ಟ್:
ಕೇಂದ್ರ ಸರಕಾರದ ದ್ವಂದ್ವ ನಿಲುವುಗಳ ಕುರಿತು ಮನವರಿಕೆ ಮಾಡುವ ವಿಶೇಷ ಆ್ಯಪ್ ಇದು. ನೆನಪಿನ ಶಕ್ತಿ ಕಡಿಮೆ ಇರುವ ಜನಸಾಮಾನ್ಯರಿಗೆ ತುಂಬಾ ಹೆಲ್ಪ್ ಆಗುತ್ತದೆ. ಆಡಳಿತಕ್ಕೆ ಬರುವ ಮುಂಚೆ ಬಿಜೆಪಿಯವರ ನಿಲುವು, ಸರಕಾರ ರಚಿಸಿದ ಮೇಲೆ ಬದಲಾದ ಅವರ ನಿಲುವು- ಇವುಗಳನ್ನು ತಕ್ಷಣ ಗುರುತಿಸಿ ಹೇಳಬೇಕು. ಹಿಂದೆ ಎಫ್‌ಡಿಐ ವಿರೋಧಿಸಿದ್ದು, ಈಗ ಜಾರಿಗೆ ಮುಂದಾಗಿರುವುದು; ಹಿಂದೆ ಸಲಿಂಗಕಾಮವನ್ನು ವಿರೋಧಿಸಿದ್ದು, ಈಗ ಯೆಸ್ ಎಂದು ಹೇಳಿರುವುದು... ಹೀಗೆ ದ್ವಂದ್ವ ನಿಲುವುಗಳನ್ನು ಇದು ಲೆಕ್ಕ ಹಾಕುತ್ತಿರಬೇಕು.

ರೇಪ್ ಆ್ಯಪ್:
ಯಾರನ್ನು ನಂಬೋದು, ಯಾರನ್ನು ಬಿಡೋದು ತಿಳಿಯುತ್ತಿಲ್ಲ. ಶಾಲೆಗೆ ಮಕ್ಕಳನ್ನು ಕಳುಹಿಸೋದು ಕಷ್ಟ; ರಸ್ತೆಯಲ್ಲಿ ಹೆಣ್ಣುಮಕ್ಕಳು ನಡೆದಾಡೋದು ಕಷ್ಟ. ಎಲ್ಲೆಡೆ ಅತ್ಯಾಚಾರದ ಸುದ್ದಿಗಳೇ ಬರುತ್ತಿವೆ. ಇಂಥ ಸಮಯದಲ್ಲಿ ಗಂಡಸು ಎಂಬ ಪ್ರಾಣಿಯ ಮನದೊಳಗೆ ಏನು ಹಕೀಕತ್ತು ನಡೆಯುತ್ತಿದೆ ಎಂಬುದನ್ನು ಬಹಿರಂಗಪಡಿಸುವ ವಿಶೇಷ ಆ್ಯಪ್‌ನ್ನು ಡೆವಲಪ್ ಮಾಡಲು ಅವಕಾಶ ಇದೆ.

ಬ್ರೈಬೋಮೀಟರ್:
ಒಬ್ಬ ಮಂತ್ರಿ, ಒಬ್ಬ ಶಾಸಕ, ಒಬ್ಬ ಅಧಿಕಾರಿ ಮುಂದೆ ಈ ಆ್ಯಪ್‌ನ್ನು ಹಿಡಿದರೆ ಮೊಬೈಲ್ ಸ್ಕ್ರೀನ್ ಮೇಲೆ ಅವರು ನಿರೀಕ್ಷಿಸುವ 'ರೇಟ್' ತನ್ನಿಂದ ತಾನೇ ಮೂಡಿಬರಬೇಕು. ಇದರಿಂದ ಅವರ ನಿರೀಕ್ಷೆಯನ್ನು ತಿಳಿದುಕೊಳ್ಳಲು ಜನರು ಪಡುವ ಮುಜುಗರವನ್ನು ತಪ್ಪಿಸಬಹುದು, ನೇರವಾಗಿ ಬಾರ್ಗೇನ್ ಮಾಡಬಹುದು. ಎಂಎಲ್‌ಸಿ, ರಾಜ್ಯಸಭೆ ಸದಸ್ಯರಾಗುವವರಿಗೆ ಶಾಸಕರ ರೇಟ್ ತಿಳಿದುಕೊಳ್ಳಲು ಇದು ತುಂಬಾ ಹೆಲ್ಪ್ ಮಾಡುತ್ತದೆ. ಇದರಿಂದ ಪಕ್ಷದ ನಾಯಕರಿಗೆ ಫೋನ್ ಮಾಡಿ ತಿಳಿದುಕೊಳ್ಳುವ ಬಾಬತ್ತೇ ಇರುವುದಿಲ್ಲ. ಸಿಡಿ ಬಹಿರಂಗದ ಪ್ರಶ್ನೆಯೂ ಉದ್ಭವಿಸುವುದಿಲ್ಲ.

ಹಾರ್ಟ್ ರೀಡರ್:
ಮೇಲಿನ ಬ್ರೈಬೋಮೀಟರ್ ಟೆಕ್ನಾಲಜಿಯನ್ನೇ ಇಲ್ಲಿ ಬಳಸಿಕೊಂಡು ಹಾರ್ಟ್ ರೀಡರ್ ಎಂಬ ಆ್ಯಪ್‌ನ್ನು ಡೆವಲಪ್ ಮಾಡಿದರೆ, ಬಂಬಾಟ್ ಸೇಲ್ ಆಗುತ್ತದೆ. ತಮ್ಮ ಪ್ರೀತಿಯನ್ನು ನಿವೇದಿಸಿಕೊಳ್ಳಲು ಇಲ್ಲದ ಒದ್ದಾಟ ಪಟ್ಟು ಕೊನೆಗೆ ಫೇಲ್ ಆಗುವ ಹುಡುಗರಿಗೆ ಇದು ಬೇಕೇ ಬೇಕು. ಈ ಆ್ಯಪ್‌ನ್ನು ತಮ್ಮ ಪ್ರೀತಿಪಾತ್ರರ ಮುಂದೆ ಇಟ್ಟರೆ ಸಾಕು, ಅವರ ಹಾರ್ಟ್ ನೊಳಗಿರುವ ಭಾವನೆಯನ್ನು ರೀಡ್ ಮಾಡಿ ಹೇಳುತ್ತದೆ. ಇದರಿಂದ ಪ್ರಪೋಸ್ ಮಾಡಬೇಕೇ, ಬೇಡವೇ ಎನ್ನುವುದನ್ನು ನಿರ್ಧರಿಸಬಹುದು. ಮದುವೆ ಪ್ರಪೋಸಲ್ ಫೈನಲ್ ಮಾಡು ವಾಗಲೂ ಪೇರೆಂಟ್ಸ್ ಇದನ್ನು ಬಳಸಬಹುದು. ಎಂಗೇಜ್‌ಮೆಂಟ್‌ಗೆ ಮುಂಚೆ ಈ ರೀಡರ್‌ನ್ನು ಬಳಸಿದರೆ, ಅತ/ಆಕೆಯ ಹೃದಯದಲ್ಲಿ ಇನ್ನಾರಿದ್ದಾರೆ ಎಂದು ತಿಳಿದು ಬಿಡುತ್ತದೆ. ಮದುವೆ ಮುರಿಯುವುದನ್ನು ತಪ್ಪಿಸಬಹುದು.

ಕಂಪ್ಲೇಂಟ್ ರಿಜಿಸ್ಟರ್:
ಪೊಲೀಸ್ ಠಾಣೆಯಲ್ಲಿ ಅತ್ಯಾಚಾರದಂಥ ಪ್ರಕರಣಗಳಿಗೂ ಕಂಪ್ಲೇಂಟ್ ದಾಖಲಿಸದೆ ಇರುವ ಬೆಳವಣಿಗೆ ನಡೆಯುತ್ತಿದೆ. ಇದನ್ನು ತಡೆಯಲು ಈ ಆ್ಯಪ್ ಬಳಸಬಹುದು. ಸ್ಟೇಷನ್‌ನಲ್ಲಿ ದೂರು ದಾಖಲಿಸಲು ನಿರಾಕರಿಸಿದರೆ, ತಕ್ಷಣ ಎಲ್ಲ ನ್ಯೂಸ್‌ಚಾನಲ್‌ಗಳಿಗೆ ಮೆಸೇಜ್ ಹೋಗಿಬಿಡಬೇಕು. ವರದಿಗಾರರು ಓಡೋಡಿ ಬರುತ್ತಾರೆ, ಇಡೀ ದಿನ ಪ್ಯಾನೆಲ್ ಡಿಸ್‌ಕಷನ್ ಶುರುವಾಗುತ್ತದೆ. ಅಲ್ಲಿಗೆ ತನ್ನಿಂದ ತಾನೇ ದೂರು ದಾಖಲಾಗುತ್ತದೆ.

ಆ್ಯಪೊಲಜಿ:
ತಪ್ಪು ಮಾಡಬೇಕು, ಕ್ಷಮೆ ಕೇಳಬೇಕು- ಅಂಥದ್ದೊಂದು ಆ್ಯಪ್ ಇದು. ಇದಕ್ಕೆ ಆಪ್ ಪಕ್ಷದ ಕೇಜರಿವಾಲ್ ಮಾದರಿ. ಎಷ್ಟು ಸಲ ತಪ್ಪು ಮಾಡಲಾಗಿದೆ, ಎಷ್ಟು ಸಲ ಕ್ಷಮೆ ಕೇಳಲಾಗಿದೆ ಎನ್ನುವುದೆಲ್ಲ ರೆಕಾರ್ಡ್ ಆಗುತ್ತದೆ. ಕೊನೆಗೆ ಇದನ್ನೆಲ್ಲ ಪರಿಶೀಲಿಸಿ ನಿಮ್ಮ ವ್ಯಕ್ತಿತ್ವದಲ್ಲಿ ಆಗಬೇಕಾದ ಬದಲಾವಣೆ ಕುರಿತು ಸಲಹೆ ನೀಡುವಂತಿರಬೇಕು.

ವಿಷ್ ಯು ಆಲ್ ಆ್ಯಪೀ ಡೇ



ಎಷ್ಟೇ ಒದೆಸಿಕೊಂಡರೂ ಗೋಲು ಮುಟ್ಟುವೆ
Jun 21, 2014,
ಇಡೀ ಜಗತ್ತು ನನ್ನನ್ನು ಈಗ ಉಸಿರುಬಿಗಿ ಹಿಡಿದು ನೋಡುತ್ತಿದೆ. ನಿಮ್ಮಂಥವರ ಕಾತರದ, ಉದ್ವೇಗದ, ಆಹ್ಲಾದದ, ಆತಂಕದ ಉಸಿರೇ ನನ್ನೊಳಗೆ ತುಂಬಿಕೊಂಡಿ ರುವುದು... ಈ ಉಸಿರೇ ನನಗೆ ಜೀವಾಳ. ಅದು ಒಮ್ಮೆ ಹೋಯಿತೆಂದರೆ ನಾನು ಠುಸ್! ಏಕೆಂದರೆ ನಾನು ಫುಟ್‌ಬಾಲ್.
ಬ್ರೆಜಿಲ್‌ನಲ್ಲಿ ವಿಶ್ವಕಪ್ ಸಮರ ನಡೆಯುತ್ತಿರುವ ಈ ಸಂದರ್ಭದಲ್ಲಿ ನಾನು ಈ ಪತ್ರ ಬರೆಯಲು ಕಾರಣಗಳೂ ಉಂಟು. 'ಫುಟ್‌ಬಾಲ್' ಎಂದಾಕ್ಷಣ ನಿಮ್ಮ ಮನಸ್ಸಿನಲ್ಲಿ ನೆಗೆಟಿವ್ ಭಾವನೆಯೇ ಬರುತ್ತಿದೆ ಎಂದು ನನಗೆ ಗೊತ್ತು. 'ನನ್ನ ಲೈಫ್ ಫುಟ್‌ಬಾಲ್‌ನಂತಾಗಿದೆ' ಅಂತಲೋ, 'ಅವ ನೊಬ್ಬ ಪಾಪ ಫುಟ್‌ಬಾಲ್' ಅಂತಲೋ ಬಹಿರಂಗವಾಗಿ ನಿಮ್ಮನ್ನು ನೀವು ಹಳಿದುಕೊಂಡಿರುವುದನ್ನು ನಾನು ಕೇಳಿದ್ದೇನೆ. ನಿಮ್ಮ ಬಾಳನ್ನು ನೀವು ನಿಂದಿಸಿಕೊಳ್ಳಿ. ಆದರೆ, ನನ್ನಂಥ ಬಾಲನ್ನಲ್ಲ.

ಫುಟ್‌ಬಾಲ್ ಪಂದ್ಯಾವಳಿ ನೋಡುವ ಮುನ್ನ ನನ್ನ ಬಗ್ಗೆ ಕೊಂಚ ಮಾಹಿತಿ ಇರಲಿ ಎನ್ನುವ ಕಾರಣದಿಂದ ಈ ಪತ್ರ ಬರೆಯುತ್ತಿದ್ದೇನೆ.
ನೀವು ಅಂದುಕೊಂಡಿರಬಹುದು, ಇಡೀ ಜಗತ್ತು ನನ್ನನ್ನು ಮೆಟ್ಟಿ ನಿಂತಿದೆ; ನನ್ನನ್ನು ಎಲ್ಲರೂ ಬೇಕಾಬಿಟ್ಟಿ ತುಳಿ ಯುತ್ತಿದ್ದಾರೆ ಎಂದು. ಆದರೆ, ನಾನು ಹಾಗೆ ಭಾವಿಸಿ ಕೊಂಡರೆ ಅದು ನೀವು ನನ್ನ ಮೇಲಿಟ್ಟ ಗೌರವಕ್ಕೆ ಮಾಡಿದ ಅಪಚಾರ ವಾಗಬಹುದು. ನಿಮ್ಮಂಥ ಕೋಟಿ ಕೋಟಿ ಅಭಿಮಾನಿಗಳ ಉಮೇದು, ಉತ್ಸಾಹ ನೋಡಿದರೆ, ಇಡೀ ಭೂಮಂಡಲವನ್ನೇ ನಾನು ಮೆಟ್ಟಿ ನಿಂತಿದ್ದೇನೆ ಎಂದೆನಿಸುತ್ತಿದೆ.

ಕೋಟ್ಯಂತರ ಎದೆಗಳ ಬಡಿತಕ್ಕೆ ತಕ್ಕಂತೆ ನಾನು ಪುಟಿಯುತ್ತಿದ್ದೇನೆ; ಅದೆಷ್ಟೋ ಭಾವಾರ್ದ್ರ ಹೃದಯಗಳು ನಾನು ನೆಗೆಯುವ ದಿಕ್ಕನ್ನು ನೋಡಿ ನಗುತ್ತಿವೆ, ಅಳುತ್ತಿವೆ. ಟಿವಿ ಮುಂದೆ ಕೂತ ಎಷ್ಟೋ ದೇಹಗಳು ಜಾಗ ಬಿಟ್ಟು ಕದಲುತ್ತಲೇ ಇಲ್ಲ. ಭಾರತದಂಥ ದೇಶದಲ್ಲಿ ನಡುರಾತ್ರಿ ತಮ್ಮ ಪ್ರೀತಿಪಾತ್ರರ ನಡು ಹಿಡಿದು ಮಲಗುವ ಎಷ್ಟೋ ಜೀವಗಳು ರಿಮೋಟ್ ಹಿಡಿದುಕೊಂಡು ಕೂತಿವೆ; ಗುಂಡು ಗುಂಡಾದ ನನ್ನನ್ನು ನೋಡುತ್ತಲೇ ಎಷ್ಟು ಮನೆಗಳಲ್ಲಿ ದೀಪ ಆರುತ್ತಲೇ ಇಲ್ಲ. 'ಒಲಿದ ಜೀವ ಜತೆಯಲ್ಲಿರಲು ಬಾಳು ಸುಂದರ' ಎಂದು ಹಾಡು ಹೇಳುತ್ತಿದ್ದವರೂ ಈಗ 'ಬಾಲು ಸುಂದರ' ಎಂದು ಹೇಳುತ್ತಿದ್ದಾರೆ. ಗಂಡ-ಹೆಂಡಿರ ಬಾಳಲ್ಲಿ ಇನ್ನು ಒಂದು ತಿಂಗಳು ಬರಿ ಬಾಲು; ಇರುಳಿಡೀ ನನ್ನನ್ನು ನೋಡಿ ಕಚೇರಿಯ ಕಂಪ್ಯೂಟರ್ ಮುಂದೆ ಎಷ್ಟೋ ಕಣ್ಣುಗಳು ತೂಕಡಿಸುತ್ತಾ ಕುಳಿತಿವೆ; ಬ್ಯಾಚುಲರ್‌ಗಳ ರೂಮಲ್ಲಿ ನಿತ್ಯ 'ಮದ್ಯ'ರಾತ್ರಿ; ಹಗಲು ಮಧ್ಯರಾತ್ರಿ... ಮಾನವ ುಲದ ಗಡಿಯಾರವನ್ನೇ ಬದಲಿಸಿದ ಬಾಲು ನಾನು.

ಒಂದೆರಡು ಮಾತಿನಲ್ಲಿ ನನ್ನ ಬಗ್ಗೆ ಹೇಳುತ್ತೇನೆ. ನನ್ನ ಹುಟ್ಟಿನ ಬಗ್ಗೆ ಯಾವ ಇತಿಹಾಸಕಾರನಿಗೂ ಸ್ಪಷ್ಟ ಜ್ಞಾನವಿಲ್ಲ. ಕೆಲವು ನಾನು ರೋಮಿನವನು ಎನ್ನುತ್ತಾರೆ; ಇನ್ನು ಕೆಲವರು ನಾನು ಈಜಿಪ್ಟ್‌ನಲ್ಲಿ ಹುಟ್ಟಿದ್ದೇನೆ ಎಂದು ಹೇಳುತ್ತಾರೆ. ಚೀನಾ ದವರಂತೂ, 'ನೀನು ನಮ್ಮವನು' ಎಂದು ಹೇಳು ತ್ತಿದ್ದಾರೆ. ಕ್ರಿ.ಪೂ. 2500ರಲ್ಲಿ ನನ್ನ ಪಿಜ್ಜನೊಬ್ಬನ ಶವ ಈಜಿಪ್ಟ್‌ನ ಸಮಾಧಿಯಲ್ಲಿ ಸಿಕ್ಕಿತ್ತಂತೆ. ಆದರೆ, ಆಧುನಿಕ ಜಗತ್ತಿನಲ್ಲಿ ಮಾತ್ರ ನನ್ನನ್ನು ಬೆಳೆಸಿದವರು ಇಂಗ್ಲೆಂಡಿನವರು. ಅದೇನೇ ಇರಲಿ, ಈಗಂತೂ ನಾನು ಯಾವ ದೇಶಕ್ಕೂ ಸೇರಿ ದ ವನಲ್ಲ. ಎಲ್ಲ ಗಡಿಗಳನ್ನೂ ಮೀರಿ 'ಸಾಕರೋ ಲ್ಲಂಘನ' ಮಾಡಿ ದ್ದೇನೆ. 'ಎಲ್ಲಿಯೂ ನಿಲ್ಲದಿರು ಮನೆಯನೆಂದೂ ಕಟ್ಟ ದಿರು' ಎನ್ನುವ ಕುವೆಂಪು ಮಾತು ನನ್ನನ್ನು ಉದ್ದೇಶಿ ಸಿ ಯೇ ಬರೆದದ್ದು. ಏಕೆಂದರೆ ನಾನು ಯಾವಾಗಲೂ ಉರುಳುತ್ತಲೇ ಇರುತ್ತೇನೆ...

ನನ್ನ ಸೈಕಾಲಜಿಯನ್ನು ಹಲವರು ಅರ್ಥ ಮಾಡಿ ಕೊಳ್ಳಲು ಯತ್ನಿಸಿದ್ದಾರೆ. ಕೆಲವರು ನನ್ನನ್ನು ಪುರುಷ ಎಂದೋ, ಕೆಲವರು ಮಹಿಳೆ ಎಂದೋ ಅವರವರ ಭಾವಕ್ಕೆ ವ್ಯಾಖ್ಯಾನಿಸುತ್ತಲೇ ಇರುತ್ತಾರೆ. ಕೆಲವು ಸ್ತ್ರೀವಾದಿಗಳ ಪ್ರಕಾರ ನಾನು ಒಬ್ಬಳು ಹೆಣ್ಣಂತೆ- ಏಕೆಂದರೆ, ಪುರುಷರ ಕಾಲುಗಳು ನನ್ನನ್ನು ತುಳಿಯುತ್ತಲೇ ಇರುತ್ತವೆ! ಗಾಳಿ ಹಾಕಿದಾಗ ನಾನು ಉಬ್ಬುತ್ತೇನಲ್ಲ, ಅದಕ್ಕಾಗಿ ನಾನು ಹೆಣ್ಣು ಎಂದು ಕೆಲವರು ವಾದಿಸುವುದು ಉಂಟು.
ನನ್ನನ್ನು ಪುರುಷ ಎಂದು ಹೇಳುವವರ ಆರ್ಗ್ಯುಮೆಂಟೇ ಬೇರೆ. ನಾನು ಎಲ್ಲೂ ಶಾಶ್ವತವಾಗಿ ನಿಲ್ಲುವುದಿಲ್ಲ. ಅಲ್ಲಿಂದ ಒದೆಯಿಸಿಕೊಂಡು ಇಲ್ಲಿಗೆ, ಇಲ್ಲಿಂದ ಒದೆಯಿಸಿಕೊಂಡು ಅಲ್ಲಿಗೆ... ಹೋಗುತ್ತಿರುತ್ತೇನಲ್ಲ. ಅದಕ್ಕೆ ನಾನು ಒಬ್ಬ ಪುರುಷ ಎಂದು ಕೆಲವರು ಹೇಳುತ್ತಾರೆ. ಬಹುಶಃ ಇದಾ ವುದೋ ಭಗ್ನಪ್ರೇಮಿ ಮಹಿಳೆಯ ವಾದವೂ ಇರಬ ಹು ದೇನೋ.

ನಾನು ಗಂಡಸು ಎಂದು ಹೇಳು ವವರು ತುಂಬಾ ಮಂದಿ. ಅವರು ಕೊಡುವ ಕಾರಣ - ನಾನು ಹೊರಗೆ ಮಾತ್ರ ಗಟ್ಟಿ, ಒಳಗೆಲ್ಲ ಟೊಳ್ಳು ಅಂತ.
ಆದರೆ ನಾನು ಸ್ಪಷ್ಟವಾಗಿ ಹೇಳುತ್ತೇನೆ- ನಾನು ಗಂಡೂ ಅಲ್ಲ, ಹೆಣ್ಣೂ ಅಲ್ಲ. ನಾನು ಬಾಲು.
ದೇಶ, ಲಿಂಗ, ಜಾತಿ, ಧರ್ಮ.. ಹೀಗೆ ಎಲ್ಲಿಯೂ ಒಂದು 'ವರ್ತುಲ'ದೊಳಗೆ ಸಿಲುಕದ ನಾನು ಸಿಕ್ಕಿಹಾಕಿಕೊಳ್ಳುವುದು ಪೀಲೆ, ಮರಡೊನ, ರೊನಾಲ್ಡೊ, ಮೆಸ್ಸಿಯಂಥವರ ಕಾಲಿಗೆ ಮಾತ್ರ. ದೇಶ- ಕಾಲದ ಎಲ್ಲ ಬಂಧಗಳನ್ನು ಕಡಿದುಹಾಕಿ ಮುನ್ನುಗ್ಗುತ್ತಿರುವುದರಿಂದಲೇ ನಾನು 'ಕಾಲ್'ತೀತ. ಎಲ್ಲ ದೇಶಗಳ ಸಂಸ್ಕೃತಿಯನ್ನು ಜೋಡಿ ಸಿದವನು ನಾನು. ಒಮ್ಮೆ ಸ್ವಾಮಿ ವಿವೇಕಾನಂದರು 'ನಿನ್ನ ಎಡಗೈಯಲ್ಲಿ ಭಗವದ್ಗೀತಾ ಇದ್ದರೂ, ಬಲಗೈನಲ್ಲಿ ಫುಟ್‌ಬಾಲ್ ಹಿಡಿದುಕೊಳ್ಳಿ' ಎಂದು ಹೇಳಿದ್ದನ್ನು ನೀವು ಮರೆತುಬಿಟ್ಟೀರಾ?

ನನ್ನಿಂದ ನೀವು ಕಲಿತುಕೊಳ್ಳಬೇಕಾದ ಪಾಠ ಸಾಕಷ್ಟಿದೆ.
1. ನಾನು ಎಷ್ಟು ಒದೆಯಿಸಿಕೊಂಡರೂ, ನೋವು ಅನುಭವಿಸಿದರೂ 'ಗೋಲ್' ಮುಟ್ಟದೇ ಬಿಡುವುದಿಲ್ಲ.
2.ಎಷ್ಟೇ ಮೇಲೆ ಹಾರಿದರೂ ಕೆಳಗೆ ಬಂದೇ ಬರುತ್ತೇನೆ.
3.ಯಾರೂ ಗೆದ್ದರೂ ನಾನು ಉಬ್ಬುವುದಿಲ್ಲ. ಯಾರು ಸೋತರೂ ನಾನು ಕುಗ್ಗುವುದಿಲ್ಲ. ಏಕೆಂದರೆ, ನಾನು ಸದಾ ಆತ್ಮವಿಶ್ವಾಸದ ಗಾಳಿ ತುಂಬಿಕೊಂಡೇ ಇರುತ್ತೇನೆ.
4. ನನ್ನನ್ನು ಎಂದಿಗೂ ನಿಮ್ಮ ಜತೆ ಹೋಲಿಸಬೇಡಿ. ನಾನೆಂದೂ ನಿಯತ್ತನ್ನು ಬಿಟ್ಟವನಲ್ಲ. 'ಬಿಡೆ ನಿನ್ನ ಪಾದವಾ...' ಎಂದು ಆಟಗಾರರ ಪಾದಕ್ಕೆ ಅಂಟಿಕೊಂಡೇ ಇರುವವನು.
5. ಗುಂಡಗಿರೋದೆಲ್ಲ ಫುಟ್‌ಬಾಲಲ್ಲ- ಇದನ್ನು ಸದಾ ನೆನಪಿಟ್ಟುಕೊಳ್ಳಿ.
ನನ್ನ ನೆಚ್ಚಿನ ದೇವರು: BALLaಜಿ
ನನ್ನ ನೆಚ್ಚಿನ ಪ್ರವಾಸಿ ಸ್ಥಳ: Goalಗುಮ್ಮಟ
ನನ್ನ ನೆಚ್ಚಿನ ಸಿನಿಮಾ: Goalಮಾಲ್
ನೆಚ್ಚಿನ ಪಾನೀಯ: 'ಕಿಕ್' ಕೊಡುವ ಯಾವುದೇ ಪಾನೀಯ
ಇಂತಿ ನಿಮ್ಮ
ಬಾಲು

ಕೊನೇ ಮಾತು: ಒಮ್ಮೆ ಹೀಗಾಯಿತು ಫುಟ್‌ಬಾಲ್ ನೋಡಲು ಒಬ್ಬ ಬಂದಿದ್ದ. ಬಂದವನು ಒಬ್ಬನೇ ಆದರೆ, ಎರಡು ಟಿಕೆಟ್ ತೆಗೆ ದುಕೊಂಡಿದ್ದ. ಪಕ್ಕದ ಸೀಟನ್ನು ಹಾಗೆಯೇ ಖಾಲಿ ಬಿಟ್ಟು ಕೂತುಕೊಂಡಿದ್ದ.

ಅದರಾಚೆ ಕೂತುಕೊಂಡವನು ಕೇಳಿದ: ಯಾಕೆ ಒಂದು ಸೀಟು ಖಾಲಿ ಬಿಟ್ಟಿದ್ದೀಯಲ್ಲ ಅಂತ.

ಇದಕ್ಕೆ ಆತ ಹೇಳಿದ: ಅದು ನನ್ನ ಹೆಂಡತಿಯ ಸೀಟು. ಕಳೆದ ಐದು ಫೈನಲ್ ಪಂದ್ಯಗಳನ್ನು ನಾವು ಜತೆಯಾಗಿಯೇ ನೋಡುತ್ತಿದ್ದೆವು. ಆದರೆ, ಈ ಸಲ ಅವಳು ಬದುಕಿಲ್ಲ.

ಇವನು ದುಃಖದಿಂದ ಹೇಳಿದ- ಹೌದಾ, ಛೆ! ಆದರೆ ಈ ಸೀಟಿಗೆ ಮನೆಯಿಂದ ಬೇರೆ ಯಾರನ್ನಾದರೂ ಕರೆಯಬಹುದಿತ್ತಲ್ಲವೇ?
ಆತನ ಪ್ರತಿಕ್ರಿಯೆ: ಏನು ಮಾಡ್ಲಿ? ಎಲ್ಲರೂ ಅವಳ ಅಂತ್ಯಕ್ರಿಯೆಗೆ ಹೋಗಿದ್ದಾರೆ. ನಾನು ಇಲ್ಲಿಗೆ ಬಂದೆ.



ಟೈಟ್ ಪ್ಯಾಂಟ್‌ನಿಂದ ಲೂಸ್ ಲುಂಗಿಯ ತನಕ
Jun 7, 2014, 04.12AM IST

ಚೀನಾದಿಂದ ಬಂದ ಸುದ್ದಿಯೊಂದು ಇತಿಹಾಸಕಾ ರರನ್ನು ತುದಿಗಾಲಲ್ಲಿ ನಿಲ್ಲಿಸಿದೆ. ತುದಿಗಾಲಲ್ಲೇ ಯಾಕೆ ನಿಂತುಕೊಂಡರು ಎಂದರೆ ಅದು ಪ್ಯಾಂಟಿಗೆ ಸಂಬಂಧಿಸಿದ ಸುದ್ದಿ. ಅಲ್ಲಿನ ಯಾಂಗಾಯ್ ಎಂಬಲ್ಲಿನ ಸ್ಮಶಾನದಲ್ಲಿ ಎರಡು ಜೊತೆ ಪ್ಯಾಂಟ್ ಸಿಕ್ಕಿದೆಯಂತೆ. ಇವು ಸುಮಾರು 3,000 ವರ್ಷಗಳ ಹಿಂದಿನದು ಎಂದು ಕಾರ್ಬನ್ ಡೇಟಿಂಗ್ ಮೂಲಕ ಖಚಿತ ಪಡಿಸಲಾಗಿದೆ. ಅಂದರೆ, ಇದು ಜಗತ್ತಿನಲ್ಲೇ ಲಭ್ಯವಾಗಿರುವ ಅತ್ಯಂತ ಪುರಾತನ ಪ್ಯಾಂಟ್ ಅಂತೆ. ಪಾಶ್ಚಿ ಮಾ ತ್ಯ ರಿಗಿಂತ ನಾವೇ ಮೊದಲು ಪ್ಯಾಂಟ್ ಏರಿಸುತ್ತಿದ್ದೆವು ಎಂದು ಚೀನಿ ಯರು ಹೇಳಬಹುದು; ಈ ಮೂಲಕವೇ ಹೊಸ ಚರಿತ್ರೆ ಕಟ್ಟಲು ಹೊರಡಬಹುದು.

ಪ್ಯಾಂಟಿನ ಚರಿತ್ರೆ ಕೆದಕುತ್ತಾ ಹೋದರೆ, ಅದು ಪೌರಾತ್ಯ ರಾಷ್ಟ್ರಗಳಲ್ಲಿ ಎಲ್ಲಿಯೂ ಕಾಣಿಸುತ್ತಿರಲಿಲ್ಲ. ಯುರೋಪ್ ರಾಷ್ಟ್ರಗಳಲ್ಲಿ ಮಧ್ಯ ಕಾಲೀನದಿಂದಲೇ ದೇಹದ ಕಾಲಿನ ಭಾಗ ಸೇರಿದಂತೆ ಅರ್ಧಭಾಗವನ್ನು ಮುಚ್ಚುವ ಪ್ಯಾಂಟ್‌ಗಳ ಬಳಕೆ ಯಾಗುತಿತ್ತು. ಆದರೆ, ಚೀನಾದ ಈ ಉತ್ಖನನ ಮಾತ್ರ ಇದೆಲ್ಲವನ್ನು ಉಲ್ಟಾಪಲ್ಟಾ ಮಾಡಿದೆ.
ವಿಶೇಷವೆಂದರೆ, ಇದು ಅಲ್ಲಲ್ಲಿ ಹರಿದುಹೋಗಿದ್ದು ಬಿಟ್ಟರೆ ಹೊಸ ಪ್ಯಾಂಟ್‌ನಂತೆಯೇ ಕಾಣಿಸುತ್ತದೆಯಂತೆ. ನಮ್ ಬ್ರಿಗೇಡ್ ರೋಡ್ ಹುಡ್ಗೀರು ಧರಿಸುತ್ತಾರಲ್ಲ ಅದೇ ತರಹ! ಬಹುಶಃ ಆಗಲೇ ಹರಿದ ಪ್ಯಾಂಟ್‌ನ್ನು ನಮ್ಮವರು ಹಾಕಿ ಕೊಂ ಡಿದ್ದರು; ನಾವು ಆಗಲೇ ಸೂಪರ್‌ಫಾಸ್ಟ್ ಅಂತ ಚೀನಾದವರು ಕ್ಲೇಮ್ ಮಾಡಲುಬಹುದು. ಅಷ್ಟೇ ಅಲ್ಲ, ಎರಡು ಪ್ಯಾಂಟ್ ಸಿಕ್ಕಿರುವುದರಿಂದ 'ಬೈ ಒನ್- ಗೆಟ್ ಒನ್' ಕಲ್ಚರ್ ನಮ್ಮಲ್ಲಿ ಆಗಲೇ ಇತ್ತು ಅಂತ ಅವರು ಹೇಳಿಕೊಂಡರೆ, ಅಮೆರಿಕ ಸಹಿತ ಪಾಶ್ಚಿಮಾತ್ಯರು ಮೇಲುಗೈ ಸಾಧಿಸಲು ಇನ್ನಷ್ಟು ಉತ್ಖನನ ಮಾಡಬೇಕಾಗುತ್ತದೆ.
***

ಹಳೇ ಪ್ಯಾಂಟ್‌ಗಳು ಯಾವಾಗಲೋ ಸಿಗುವುದು ಹೊಸ ಸಂಗತಿಯೇನಲ್ಲ ಬಿಡಿ. ನಮ್ಮಲ್ಲಿನ ಟೈಲರ್ ಅಂಗಡಿಗಳಲ್ಲಿ ಉತ್ಖನನ ಮಾಡಿದರೆ ಸಮಯಕ್ಕೆ ಸರಿಯಾದ ಡೆಲಿವರಿ ಆಗದ ಇಂಥ ನೂರಾರು ಪ್ಯಾಂಟ್‌ಗಳು ಸಿಗಬಹುದು. ನಿಮ್ಮ ಸೊಂಟದ ಸೈಜ್ 28 ಇದ್ದಾಗ ಹೊಲಿಯಲು ಕೊಟ್ಟ ಪ್ಯಾಂಟ್‌ಸೈಜ್ 34 ಆದಾಗಲೂ ಸಿಗದೇ ಹೋದ ಉದಾಹರಣೆಗಳು ಸಾಕ ಷ್ಟಿರಬಹುದು. ಬಹುಶಃ, ಇವೆಲ್ಲ ಚರಿತ್ರೆಯನ್ನೇ ಬದಲಿಸಿ ಬಿಡು ವಷ್ಟು ಶಕ್ತಿ ಹೊಂದಿವೆ. ಹೀಗೆ ಗಾತ್ರ ಏರುಪೇರಾದಾಗ, ಎಷ್ಟೋ ಬಾರಿ, ಯಾರದೋ ಪ್ಯಾಂಟನ್ನು ಇನ್ನಾರಿಗೋ ಕೊಟ್ಟು ವರ್ತಮಾನವನ್ನೂ ಬದಲಿಸುವ ಶಕ್ತಿ ಟೈಲರ್‌ಗಳಿಗೆ ಇರುತ್ತದೆ.
ಅದರಲ್ಲೂ ಈಗ ರೆಡಿಮೇಡ್, ಮಾಲ್ ಸಂಸ್ಕೃತಿ ಬಂದ ನಂತರ ಪ್ಯಾಂಟ್ ವರ್ತಮಾನ, ಭವಿಷ್ಯ ಎರಡೂ ಬದಲಾಗಿದೆ. ಬೆಲ್‌ಬಾಟಮ್‌ನಿಂದ ಹಿಡಿದು ಮಸುಕಾದ ಬಣ್ಣದ ಹರಿದು ಹೋದ ಪ್ಯಾಂಟ್‌ನವರೆಗೂ ಬಗೆಬಗೆಯ ಪ್ಯಾಂಟ್‌ಗಳು ಏರಿದೆ; ಇತಿಹಾಸದಲ್ಲಿ ಜಾರಿವೆ. ಅದರಲ್ಲೂ ಈಗಂತೂ
ಜೀನ್ಸ್, ಖಾಕಿ, ಪ್ಲೀಟೆಡ್, ಫ್ಲಾಟ್ ಫ್ರಂಟ್ ಪ್ಯಾಂಟ್, ಕಾರ್ಗೊ, ಚಿನೋ, ಕ್ಯಾಪ್ರಿಸ್, ಯೋಗ ಪ್ಯಾಂಟ್‌ಗಳು, ಫೀಮೇಲ್ ಪ್ಯಾಂಟ್ಸ್... ಇತಿಹಾಸ ವಾರ್ಡ್‌ರೋಬ್ ತುಂಬಾ ಪ್ಯಾಂಟ್‌ಗಳೇ.
***

20ನೇ ಶತಮಾನದವರೆಗೂ ಪ್ಯಾಂಟ್ ಎನ್ನುವುದು ಪುರು ಷರ ಸರಕಾಗಿತ್ತು. ಹಾಗಾಗಿಯೇ ಇಂಗ್ಲಿಷ್‌ನಲ್ಲಿ ಮಾತೊಂದು ಚಾಲ್ತಿಗೆ ಬಂದಿದೆ: 'ಹೂ ವೇರ್ಸ್‌ ದಿ ಪ್ಯಾಂಟ್ಸ್ ಇನ್ ಯುವರ್ ಹೌಸ್' ಎಂದು. ಅಂದರೆ, ಮನೆಯಲ್ಲಿ ಯಜಮಾನ ಯಾರು ಎನ್ನುವುದನ್ನು ಈ ಮಾತು ಸೂಚಿಸುತ್ತದೆ. ಪ್ಯಾಂಟ್ ಹಾಕಿ ದವನೇ ಯಜಮಾನ ಅಂತ ಗೊತ್ತಾಗಿದ್ದೇ ತಡ, ಮನೆಯಾಕೆ ಸಹ ಪ್ಯಾಂಟ್ ಹಾಕಲು ಆರಂಭಿಸಿದಳು. 'ಯಾಕೆ' ಅಂತ ಕೇಳೋ ಧೈರ‌್ಯ 'ಯಜಮಾನ' ಮಾಡಿಲ್ಲ... ಹೀಗಾಗಿ ಪ್ಯಾಂಟ್ ಉಭಯಲಿಂಗಿಗಳಾಗಿ ಬದಲಾಗಿಬಿಟ್ಟಿತು. ಸಮಾಜದಲ್ಲಿ ಸಮಾನತೆ ಅಷ್ಟರ ಮಟ್ಟಿಗೆ ಬಂದಿದೆ ಎನ್ನಬಹುದಾ?
***

ಸಮಾನತೆ ಬಂದುಬಿಟ್ಟಿದೆ ಎಂದು ಅಂದುಕೊಳ್ಳುವಷ್ಟರಲ್ಲಿ, ಮುಲಾಯಂ ಸಿಂಗ್ ಪ್ಯಾಂಟ್‌ಧಾರಿ ಪುರುಷರ ಆಟಾಟೋಪ ವನ್ನು ಸಮರ್ಥಿಸಿಕೊಳ್ತಿದ್ದಾರಲ್ಲ. 'ಹುಡುಗರು ಹಾಗೆಯೇ ಬಿಡಿ' ಅಂತ ಹೇಳಿ ರೇಪಿಸ್ಟ್ ಹುಡುಗರಿಗೆಲ್ಲ ಅಭಯ ನೀಡಿದ್ದಾರೆ. ಏನಾದರೂ ಜಾಸ್ತಿ ಕೇಳಿದ್ರೆ, 'ನಿಮ್ ಕೆಲಸ ನೀವು ಮಾಡಿ, ನಮ್ ಕೆಲಸ ನಾವು ಮಾಡ್ತೀವಿ' ಅಂತ ಹೇಳಿ ಮರುಮಾತಿಗೆ ಅವಕಾಶವೇ ಇಲ್ಲದೆ ಮುಂದೆ ಹೋಗಿಬಿಟ್ಟರು ಧೋತಿ ಕಚ್ಚೆ ಏರಿಸಿಕೊಂಡು. ಅದು ಅಪ್ಪಟ ದೇಸಿ ಉಡುಗೆ!
***

ಪ್ಯಾಂಟ್‌ಗೆ ಹೇಗೆ ಯುರೋಪ್ ಇತಿಹಾಸ ಇದೆಯೋ, ನಮ್ಮಲ್ಲಿ ಧೋತಿಗೂ ಅಷ್ಟೇ ದೊಡ್ಡ ಇತಿಹಾಸ ಇದೆ. ಇದು ರಾಜ್ಯದಿಂದ ರಾಜ್ಯಕ್ಕೆ ಒಂದೊಂದು ಬಗೆಯಲ್ಲಿ ರೂಪಾಂತರ ಗೊಳ್ಳುತ್ತಲೇ ಬಂದಿದೆ. ಪಂಚೆ, ಕಚ್ಚೆ, ಧೋತಿ, ಲುಂಗಿ. ಮುಂಡು... ಹೀಗೆ ಒಂದೊಂದು ರಾಜ್ಯದಲ್ಲಿ ಒಂದೊಂದು ಹೆಸರು. ಅದರಲ್ಲೂ ತಮಿಳುನಾಡು ಹಾಗೂ ಕೇರಳ ರಾಜ್ಯಗಳ 'ರಾಷ್ಟ್ರೀಯ' ಉಡುಗೆಯೇ ಲುಂಗಿ. ಬಹುಶಃ ಮಾನವನ ವಿಕಾಸದ ಹಾದಿಯಲ್ಲಿ ಉಡುಗೆ ಎಂದು ಆರಂಭವಾಯಿತೋ, ಆಗಲೇ ಈ ಲುಂಗಿ ಎನ್ನುವುದು ಆರಂಭವಾಗಿದ್ದಿರಬೇಕು.. ಅದರ ವಿಕಾಸ ಇನ್ನೂ ಮುಂದುವರೆಯುತ್ತಲೇ ಇದೆ.. ಬಣ್ಣ ಬಣ್ಣದ ಲುಂಗಿಯಿಂದ ಹಿಡಿದು ಚೆನ್ನೈ ಎಕ್ಸ್‌ಪ್ರೆಸ್‌ನ ಡ್ಯಾನ್ಸ್ ತನಕ.
ಲುಂಗಿ, ಪಂಚೆ ಉಟ್ಟುಕೊಳ್ಳುವುದು ದಕ್ಷಿಣ ಭಾರತದ ಪ್ರೆಸ್ಟೀಜ್. ಪಂಚೆ, ಲುಂಗಿ ಉಟ್ಟವರಿಗೆ ಸಿಗುವ ಗೌರವ ಪ್ಯಾಂಟ್ ತೊಟ್ಟವರಿಗೆ ಅಲ್ಲಿ ಸಿಗುವುದಿಲ್ಲ. ಮೋದಿಯಂಥ ವರೇ ರಜನಿಕಾಂತ್ ಭೇಟಿಯಾಗುವಾಗ ಪಂಚೆ ಉಟ್ಟುಕೊಂಡು ಹೋಗಿದ್ದರು. ಅದು ಪಂಚೆ ನಾಮ ಮಹಿಮೆ!
***

ಲುಂಗಿ ಯಾಕೆ ಉಡ್ತೀರಿ ಎಂದು ಕೇರಳದವರನ್ನು ಕೇಳಿ ನೋಡಿ. ಅದು 'ಸಿಂಪಳ್ ಡ್ರೆಸ್' ಅಂತಾರೆ. ಎಷ್ಟು ಸಿಂಪಲ್ ಎಂದರೆ, ಕೆಳಗೆ ಬಿಟ್ಟರೆ ನೆಲಕ್ಕೇ ತಾಗುತ್ತದೆ... ಡೌನ್ ಟು ಅರ್ಥ್ ಅನ್ನೋದು ಇದಕ್ಕೇನೇ. ಈ ಲುಂಗಿಗೂ ಶಿಷ್ಟಾಚಾರ ಇದೆ. ಹಿರಿಯರನ್ನು ಭೇಟಿ ಮಾಡಿದಾಗ ಲುಂಗಿ ಪೂರ್ತಿ ಕೆಳಗಿ ಳಿದು ಬಿಡುತ್ತದೆ... ಅದು ಹಿರಿಯರಿಗೆ ಕೊಡುವ ಗೌರವ. ಬಸ್ ಹತ್ತುವಾಗ, ಕ್ರಿಕೆಟ್ ಆಡುವಾಗ, ಓಡುವಾಗ ಆಟೊ ಮ್ಯಾ ಟಿಕ್ ಆಗಿ ಲುಂಗಿ ಮೇಲಕ್ಕೇರಿಬಿಡುತ್ತದೆ. ದಟ್ಸ್ ಲುಂಗಿ!
***

ಕೇರಳೀಯರು ಯಾಕೆ ಲುಂಗಿಯನ್ನು ಇಷ್ಟಪಡು ತ್ತಾರೆ?
-ಅದು ಮಳೆಗಾಲದಲ್ಲಿ ನಡೆದುಕೊಂಡುಹೋಗುವಾಗ ನೀರು ಬಂದಹಾಗೆ ಮೇಲೇರುತ್ತಲೇ ಇರುತ್ತದೆ.
ಕೇರಳದಲ್ಲಿ ಕೈಗಾರಿಕೆ ಉತ್ಪಾದನೆ ಕಡಿಮೆ ಯಾಕೆ?
-ಫ್ಯಾಕ್ಟರಿಯ ಶಿಫ್ಟ್ ನಲ್ಲಿ ಶೇ 70ರಷ್ಟು ಸಮಯ ಲುಂಗಿ ಎತ್ತಿ ಮಡಚುವುದು, ಬಿಚ್ಚುವುದು ಮತ್ತೆ ಕಟ್ಟುವುದರಲ್ಲೇ ವ್ಯಯವಾಗಿಬಿಡುತ್ತದೆಯಂತೆ!
***

ಇಂಥ ಜಗದ್ವಿಖ್ಯಾತ ಲುಂಗಿಗೂ ಅಪಾಯ ಬಂದಿದೆ ಎಂದರೆ ನಂಬ್ತೀರಾ? ಈಗಿನ ಹುಡುಗರು ಲುಂಗಿ ಬದಲು ಬರ್ಮುಡಾ ಹಾಕ್ತಿದ್ದಾರೆ ಎನ್ನುವುದು ಹಲವು ಲುಂಗಿಪ್ರಿಯರ ಬೇಸರದ ಮಾತು. ಅದು ಬರೇ ಮಾತಾಗಿಯೇ ಉಳಿದಿಲ್ಲ. ಕೇರಳದಲ್ಲಿ ಬಿಚ್ಚಿರುವ ಲುಂಗಿ ಕಟ್ಟಲಿಕ್ಕಾಗಿಯೇ 'ಲುಂಗಿ ವೇರಿಂಗ್ ಮಲ್ಲು ಯೂನಿಯನ್' ಎಂಬ ಸಂಘಟನೆ ಕೆಲ ವರ್ಷಗಳ ಹಿಂದೆ ಹುಟ್ಟಿಕೊಂಡಿತ್ತು. ಲುಂಗಿಯನ್ನು 'ಮೇಲೆತ್ತು ವುದು' ಈ ಸ್ವಯಂ ಸೇವಾ ಸಂಘಟನೆಯ ಮೂಲ ಉದ್ದೇಶವಂತೆ. ಹೊಸ ತಲೆಮಾರಿನ ಹುಡುಗರು ಲುಂಗಿ ಯನ್ನು ಭದ್ರವಾಗಿ ಕಟ್ಟುವ ಮೂಲಕ ಸಂಸ್ಕೃತಿಯನ್ನು ಬೆಳೆಸಲಿಕ್ಕೆ ಈ ಸಂಸ್ಥೆ ಹಗಲಿರುಳು ಹೋರಾಡುತ್ತಿದೆಯಂತೆ. ಪ್ಯಾಂಟ್ ಸಹಿತ ಬೇರೆ ಉಡುಗೆ ತೊಡಲು ಉತ್ತೇಜಿಸುವ ಯಾವುದಾದರೂ ಸಂಘಟನೆ ಕೇಳಿದಿರಾ? ದಟ್ಸ್ ಲುಂಗಿ!
***

ಪ್ಯಾಂಟಿಗೂ ಲುಂಗಿಗೂ ಏನು ಹೋಲಿಕೆ ಏನು?
ಲುಂಗಿ ಸಹ ಉಭಯ ಲಿಂಗಿ.
ಏನು ವ್ಯತ್ಯಾಸ ?
ಲುಂಗಿ ಸ್ವಾತಂತ್ರ್ಯದ ಸಂಕೇತ. ಸದಾ ಫ್ರೀ.

ಮೋದಿ ಸರಕಾರಕ್ಕೆ ಹತ್ತು ಸಲಹೆಗಳು
May 24, 2014, 04.04AM IST
ನರ ಸಮಸ್ಯೆಗಳ ಪರಿಹಾರಕ್ಕಾಗಿಯೇ ಅವತಾರ ಎತ್ತಿದ್ದೇನೆ ಎಂದು ಹೇಳಿಕೊಂಡು ದೇಶದೆಲ್ಲೆಡೆ ತಿರುಗಾಡುವ ನಮ್ಮ 'ಪ್ರಾಬ್ಲಂ ಸಾಲ್ವಾನಂದ ಸ್ವಾಮೀಜಿ' ಅವರಲ್ಲಿ ಒಮ್ಮಿಂದೊಮ್ಮೆಗೆ ಗೊಂದಲ ಕಾಣಿಸಿಕೊಂಡಿದೆ. ಎಲೆಕ್ಷನ್ ಸಮಯದಲ್ಲಿ ರಾಜಕಾರಣಿಗಳ ಜಾತಕಗಳನ್ನು ಜಾಲಾಡಿ, ಪರಿಹಾರ ಸೂತ್ರ ಹೆಣೆದು ಕೊಡುತ್ತಿದ್ದ ಸ್ವಾಮೀಜಿಗೆ ಈಗ ಮುಂದೇನು ಎನ್ನುವ ಪ್ರಶ್ನೆ ಧುತ್ತನೆ ಕಾಣಿಸಿಕೊಂಡಿದೆ. ಯಾಕೆಂದರೆ, ಮೋದಿ ಗೆದ್ದಾಯಿತು; ನಾಡಿದ್ದು ಅವರು ಪ್ರಧಾನಿಯಾಗಿ ಅಧಿಕಾರವನ್ನೂ ಸ್ವೀಕರಿಸುತ್ತಾರೆ.

ಮೋದಿ ಪಿಎಂ ಆಗಿದ್ದರಿಂದ ಈ ಸ್ವಾಮೀಜಿಗೆ ತೊಂದರೆ ಏನೂ ಆಗಿಲ್ಲ. ದೇಶದ ಉದ್ದಗಲಕ್ಕೂ ಆಶ್ರಮಗಳನ್ನು ಕಟ್ಟಿ ಕೂತುಕೊಂಡು ಪ್ರಾಬ್ಲಂ ಸಾಲ್ವ್ ಮಾಡುವ ಪ್ಲಾನ್ ಇಟ್ಟುಕೊಂಡಿರುವ ಇವರಿಗೆ ಈಚೆಗೆ ಕೆಲವು ಕೇಸರಿ ಹುಡುಗರ ಮಾತು ಮಾತ್ರ ತಲೆಕೆಡಿಸಿದೆ. 'ಇನ್ನು ನಮ್ಮ ದೇಶದಲ್ಲಿ ಪ್ರಾಬ್ಲಮ್ಮೇ ಇರೊಲ್ಲ ಕಣ್ರೀ. ಇನ್ನು ನೀವ್ಯಾಕೆ ಬೇಕು' ಎಂದು ಈ ಹುಡುಗರು ಹೇಳಿಕೊಂಡು ತಿರುಗಾಡುವುದನ್ನು ನೋಡಿ ಸ್ವಾಮೀಜಿ ಎದೆಗೆ ಚೂರಿ ಹಾಕಿದ ಹಾಗೆ ಆಗಿದೆಯಂತೆ. ಹೀಗಾಗಿ, ಸ್ವಾಮೀಜಿಗೆ ಒಳಗಿಂದೊಳಗೆ ತಳಮಳ. ಪಿಯುಸಿ ಪಾಸಾಗಿ ಮುಂದಿನ ಕೋರ್ಸ್ ಬಗ್ಗೆ ತಲೆಕೆಡಿಸಿಕೊಳ್ಳುವ ಹುಡುಗರ ಹಾಗೆ, ತನ್ನ ಮುಂದಿನ ಭವಿಷ್ಯದ ಬಗ್ಗೆಯೇ ಯೋಚನೆ ಶುರುಮಾಡಿದ್ದಾರೆ. ದೇಶದಲ್ಲಿ ಪ್ರಾಬ್ಲಮ್ಮೇ ಇಲ್ಲಾಂದ್ರೆ, ನಮ್ಮಂಥ ಸ್ವಾಮೀಜಿಗಳಿಗೇನು ಕೆಲಸ ಎನ್ನುವುದು ಅವರ ತಲೆ ಕೊರೆಯುತ್ತಿದೆ. ಕೊನೆಗೆ ಒಂದು ತೀರ್ಮಾನಕ್ಕೆ ಬಂದೇ ಬಿಟ್ಟರು.

ಅದು 'ಸನ್ಯಾಸ ಸನ್ಯಾಸ' ಸ್ವೀಕರಿಸುವುದು. (ರಾಜಕಾರಣಿಗಳು ರಾಜಕೀಯ ಸನ್ಯಾಸ ಸ್ವೀಕರಿಸುತ್ತಾರಲ್ಲ ಹಾಗೆ) ತೊಟ್ಟ ಕಾವಿಯನ್ನು ತೊರೆದು, ಜಟೆಯನ್ನು ಕಳಚಿ ಯಾವುದಾದರೂ ಸಿಟಿಗೆ ಹೋಗಿ ನಿಯತ್ತಾಗಿ ಬದುಕೋಣ ಎಂದು ಲೆಕ್ಕಾಚಾರ ಹಾಕಿದರು.

ಅಷ್ಟರಲ್ಲೇ, ಮೊಬೈಲಿಗೆ ಕರೆಯೊಂದು ಬಂತು. ಅದು ಯಾರಿಂದ ಬಂದ ಕರೆ ಎನ್ನುವುದು ಗೊತ್ತಿಲ್ಲ- ಆದರೆ, ''ಹೇ ಬಾಬಾ, ಚಿಂತಾ ಮತ್ ಕರೋ. ದೇಶದ ಪ್ರಾಬ್ಲಂ ಇನ್ನೂ ಇದೆ. ಕಾಂಗ್ರೆಸ್ ನಾಯಕರನ್ನು ನೋಡಿದರೆ ಗೊತ್ತಾಗೊಲ್ವೆ?'' ಎಂದು ಆ ಕರೆ ಹೇಳಿತಂತೆ. ಹೌದು, ಸಾಲುಸಾಲಾಗಿ ಕಾಂಗ್ರೆಸ್ ಮುಖಂಡರು ತಲೆ ಮೇಲೆ ಕೈ ಹೊತ್ತುಕೊಂಡು ಕೂತಿರುವುದನ್ನು ನೋಡಿದರೆ, ಕೇಜ್ರಿವಾಲ್ ಜೈಲಿಗೆ ಹೋಗಿ ಅಮರಿಕೊಂಡಿರುವುದನ್ನು ನೋಡಿದರೆ, ಬಿಹಾರದಲ್ಲಿ ನಿತೀಶ್‌ರಂಥವರೇ ರಾಜೀನಾಮೆ ನೀಡಿರುವುದನ್ನು ದೇಶದ ಸಮಸ್ಯೆ ಸಾಲ್ವ್ ಆಗಲ್ಲ ಎನ್ನುವುದು ಸ್ವಾಮೀಜಿಗೆ ಖಚಿತವಾಯಿತು. ತನಗೆ ಇನ್ನೂ ಈ ದೇಶದಲ್ಲಿ ಭವಿಷ್ಯ ಇದೆ ಎಂದು ಸ್ಪಷ್ಟವಾಗತೊಡಗಿತು.

ಇಷ್ಟರ ನಡುವೆ ದೂರದಲ್ಲೆಲ್ಲೋ ಒಂದು ಆಸೆ- ಮೋದಿ ಸಂಪುಟದಲ್ಲಿ ರಾಜರ್ಷಿ ಪಟ್ಟ ಸಿಗಬಹುದೇ ಅಂತ. ಆದರೆ, ಹಾಗೆಂದು ಹೋಗಿ ನೇರಾ ನೇರಾ ಕೇಳಲಿಕ್ಕಾಗುತ್ತಾ? ಕೆಲವು ಆತ್ಮೀಯ ಮೀಡಿಯಾದವರನ್ನು ಕರೆದು ಇಂಥದ್ದೊಂದು ಸುದ್ದಿಯನ್ನು ಹರಿಯಬಿಟ್ಟರು. ಮರುದಿನ ಪತ್ರಿಕೆಗಳಲ್ಲೆಲ್ಲ 'ಮೋದಿ ಸರಕಾರದ ರಾಜರ್ಷಿಯಾಗಿ ಪ್ರಾಬ್ಲಂ ಸಾಲ್ವಾನಂದ ಸ್ವಾಮೀಜಿ ನೇಮಕ ನಿರೀಕ್ಷೆ' ಎಂಬ ಸುದ್ದಿಯೂ ಬಂತು. ಅದು ವರ್ಕ್ ಔಟ್ ಆಗುತ್ತೋ ಇಲ್ವೋ, ನೀವು ಮೋದಿಗೆ ಡೈರೆಕ್ಟಾಗಿ ಒಂದು ಪತ್ರ ಯಾಕೆ ಬರಿಬಾರ್ದು ಅಂತ ಕೆಲವು ಫೆಲೋ ಸಂತರು ಸಲಹೆ ಕೊಟ್ಟರು.

ನಮ್ಮ ಸ್ವಾಮೀಜಿಗಳು ಕೂತೇಬಿಟ್ಟರು ಪತ್ರ ಬರೆಯೋಕೆ. ಇದರಲ್ಲೇ ಕೆಲವು ಸ್ಯಾಂಪಲ್ ಸಹೆಗಳನ್ನು ಕೊಟ್ಟರೆ ಒಂದು ಚಾನ್ಸ್ ಸಿಗಬಹುದು ಎನ್ನುವ ಆಲೋಚನೆ ಅವರದು. ಆ ಪತ್ರದ ಸಂಕ್ಷಿಪ್ತ ಸಾರ ಇಲ್ಲಿದೆ:
ಆತ್ಮೀಯ ಮೋದೀಜಿ,
ನೀವು ಗೆದ್ದ ಸುದ್ದಿಯನ್ನು ಮಾಧ್ಯಮಗಳಲ್ಲಿ ಒಂದು ವರ್ಷದ ಮುಂಚಿನಿಂದಲೇ ನೋಡುತ್ತಿದ್ದೆ. ಆದರೂ ಖಚಿತಪಡಿಸಿಕೊಳ್ಳೋಣ ಎಂದು ರಿಸಲ್ಟ್ ದಿನ ಟಿವಿ ಆನ್ ಮಾಡಿದ್ದರೆ ಆ ಸುದ್ದಿ ನಿಜವಾಗಿತ್ತು. ನೀವು ಗೆದ್ದುಬಿಟ್ಟಿದ್ದೀರಿ. ಆದರೆ ನೀವು ಕನ್‌ಫ್ಯೂಸ್ ಮಾಡಿಕೊಂಡು, 'ಭಾರತ ಗೆದ್ದಿದೆ' ಎಂದು ಹೇಳಿಕೆ ಕೊಟ್ಟಿದ್ದೀರಾ. ಭಾರತ ಸದಾ ಗೆದ್ದುಕೊಂಡೇ ಬಂದಿತ್ತು ಎನ್ನುವುದನ್ನು ಈ ಮುಖೇನ ಗಮನಕ್ಕೆ ತರುತ್ತೇನೆ.

ನಿಮ್ಮ ಗೆಲುವಿಗೆ ಅಭಿನಂದನೆ ಹೇಳುವುದಷ್ಟೇ ಈ ಪತ್ರದ ಉದ್ದೇಶ. ಹಾಗೆಂದು ಯಾವುದೇ ಹುದ್ದೆ, ಜವಾಬ್ದಾರಿ ನನಗೆ ಬೇಡ. ಕೆಲವು ಪತ್ರಿಕೆಗಳಲ್ಲಿ ನನ್ನನ್ನು ರಾಜರ್ಷಿಯಾಗಿ ನೇಮಿಸಿಕೊಳ್ಳುತ್ತೀರಿ ಎನ್ನುವ ವರದಿ ಓದಿದ್ದೆ. ಆದರೆ, ನನಗೆ ಅಧಿಕಾರದಲ್ಲಿ ಒಂದಿಷ್ಟೂ ಮೋಹ ಇಲ್ಲ. ಈ ದೇಶದ ಉದ್ದಗಲಕ್ಕೂ ಫಕೀರನ ಹಾಗೆ ಓಡಾಡಿಕೊಂಡು ಜನರ ಪ್ರಾಬ್ಲಂ ಸಾಲ್ವ್ ಮಾಡೋದರಲ್ಲೇ ನನಗೆ ಆಸಕ್ತಿ. ಅದು ನನ್ನ ಜೀವನದ ಪರಮಧ್ಯೇಯ ಕೂಡ. ಆದರೂ ಈ ಮೂಲಕ ಕೆಲವು ಸಣ್ಣ ಪುಟ್ಟ ಸಲಹೆಗಳನ್ನು ನಿಮಗೆ ನಾನು ನೀಡುತ್ತೇನೆ. ಇದನ್ನು ಹೇಗೆ ಸ್ವೀಕರಿಸುತ್ತೀರೋ, ಬಿಡುತ್ತೀರೋ ನಿಮಗೇ ಬಿಟ್ಟಿರುವುದು.
1: ದೇಶದ 400 ಕಡೆಗೂ ಹೆಚ್ಚು ಕಡೆ ರ‌್ಯಾಲಿ ಮಾಡಿ ಗೆದ್ದಿದ್ದೀರಿ. ಈ ರ‌್ಯಾಲಿ ಮಾಡಿದ ಸ್ಥಳಗಳನ್ನು ಜೋಡಿಸುವ 'ರ‌್ಯಾಲಿ ಕಾರಿಡಾರ್' ಎಂಬ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸಿ. ನಿಮ್ಮ ಹೆಸರು ಶಾಶ್ವತವಾಗಿ ಉಳಿಯುತ್ತದೆ.

2: ಪ್ರಧಾನಿ ಕಚೇರಿಯಲ್ಲಿ 2ಜಿ ಹೋಗಲಿ, ಒಂದು ಸೂಜಿ ಬಿದ್ದರೂ ಆ ಸದ್ದು ನಿಮಗೆ ಕೇಳಿಸುವಂತೆ ವ್ಯವಸ್ಥೆ ಮಾಡಿ. ನೀವು ಹೋದಲ್ಲೆಲ್ಲ ನಿಮ್ಮ ಜತೆಗೆ ಇಡೀ ಪ್ರಧಾನಿ ಕಾರ‌್ಯಾಲಯ ಬರುತ್ತಿರಲಿ.

3: ನೀವು ಗೆಲುವಿನ ಲೆಕ್ಕಾಚಾರ ಅಮೋಘ. ಹೀಗಾಗಿ ನೀವು ಲೆಕ್ಕದಲ್ಲಿ ಪಂಟರ್ ಎನ್ನುವುದು ಖಚಿತವಾಯಿತು. ಆದರೆ, ಲೆಕ್ಕದಲ್ಲಿ ಕೂಡಿಸು, ಗುಣಿಸು, ವ್ಯವಕಲನ ಎಲ್ಲವೂ ಇರಲಿ. ಬರಿ 'ಡಿವೈಡ್' ಮಾತ್ರ ಬೇಡ

4: ಆಗಾಗ್ಗೆ 'ಇದು ಮೋದಿ ಸರ್ಕಾರ್' ಎಂದು ಹೇಳುತ್ತಿರಿ. ಇಲ್ಲದೇ ಇದ್ದರೆ, ನಿಮ್ಮಿಂದಲೇ ಸರಕಾರ ಬಂತು ಎನ್ನುವುದನ್ನು ನಿಮ್ಮ ಪಕ್ಷದ ಕೆಲವರು ಮರೆತುಬಿಡುವ ಅಪಾಯ ಇದೆ.

5: ಹಿಂದಿನ ಯುಪಿಎ ಸರಕಾರ ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೆ ತಂದಿರುವುದು ನೆನಪಿದೆಯಲ್ಲವೇ? ನೀವೂ 'ಪಾನೀಯ ಭದ್ರತಾ ಕಾಯ್ದೆ' ಜಾರಿಗೆ ತನ್ನಿ. ಪಾನೀಯ ಎಂದರೆ, ಚಾಯ್ ಮಾತ್ರ ಆಗಿರಲಿ.

6: ದೇಶ-ವಿದೇಶಗಳೆಲ್ಲೆಡೆ ನೀವೇ ಓಡಾಡಿಕೊಂಡು ಭಾಷಣ ಮಾಡುವ ಬದಲು, ಅಲ್ಲಿ 3ಡಿ ಇಮೇಜ್ ಭಾಷಣ ವ್ಯವಸ್ಥೆ ಮಾಡಿಸಿಬಿಡಿ.

7: ಈ ದೇಶದ ಹುಡ್ಗೀರು ಸ್ಲಿಮ್ ಯಾಕಂದ್ರೆ, ಅವರಿಗೆ ಸೌಂದರ‌್ಯಪ್ರಜ್ಞೆ ಜಾಸ್ತಿಇದೆ ಎಂದು ಮರೆತೂ ಸ್ಟೇಟ್‌ಮೆಂಟ್ ಕೊಡಬೇಡಿ- ಯಾಕೋ ಈಚೆಗೆ ನಮ್ ಸಿಟಿ ಹುಡುಗೀರು ದಪ್ಪ ಆಗ್ತಾ ಇದ್ದಾರೆ.

8: ಈ ದೇಶ ಬಿಟ್ಟುಹೋಗುತ್ತೇನೆ ಎಂದು ಹೇಳಿದವರಿಗೆ ಸರಕಾರದ ವತಿಯಿಂದಲೇ ವಿದೇಶ ಟೂರ್ ಏರ್ಪಡಿಸಿ. ಯಾವುದಾದರೂ ಕಾರ್ಪೊರೇಟ್ ಕಂಪನಿಗಳ ಪ್ರಾಯೋಜನೆ ತೆಗೆದುಕೊಳ್ಳಬಹುದು.

9: ಎಲ್ಲ ಟೀವಿ ಮಾಧ್ಯಮಗಳಲ್ಲಿ ನಿಮ್ಮ ಲೇಟೆಸ್ಟ್ ಉಡುಗೆಯ ಚಿತ್ರವೇ ಪ್ರಸಾರವಾಗುವಂತೆ ನೋಡಿಕೊಳ್ಳಲು, ಪ್ರತ್ಯೇಕ ಅಧಿಕಾರಿಯೊಬ್ಬರನ್ನು ನೇಮಿಸಿ. ಹಳೆಯ ಡ್ರೆಸ್‌ನ ಚಿತ್ರಗಳು ಪ್ರಸಾರವಾದರೆ, ತಕ್ಷಣ ಅಂಥ ಮಾಧ್ಯಮಗಳ ವಿರುದ್ಧ ಕ್ರಮ ಕೈಗೊಳ್ಳಿ.

10: ಕೊನೆಯದಾಗಿ- ಈ ಮೇಲ್ಕಂಡ ಸಲಹೆಗಳಲ್ಲಿ ಯಾವುದಾದರೂ ನಿಮಗೆ ಇಷ್ಟವಾದರೆ ತಿಳಿಸಿ. ಇನ್ನಷ್ಟು ಸಲಹೆಗಳನ್ನು ಕೊಡುತ್ತೇನೆ. ಒಂದು ವೇಳೆ ಇದಾವುದೂ ಇಷ್ಟವಾಗಿಲ್ಲ ಎಂದಾದರೆ, ಈ ಪತ್ರವನ್ನು ಹರಿದು ಬಿಸಾಕಿ. ಪ್ರಾಬ್ಲಂ ಸಾಲ್ವ್!

ಇಂತಿ ತಮ್ಮ ವಿಶ್ವಾಸಿ,
ಪ್ರಾಬ್ಲಂ ಸಾಲ್ವಾನಂದ ಸ್ವಾಮೀಜಿ

ಕೊನೇಮಾತು: ಈ ಪತ್ರ ತಲುಪಿದ ಸಮಯದಲ್ಲೇ ಮೋದಿ ಆಸ್ಥಾನದಲ್ಲಿ ರಾಜರ್ಷಿ ನೇಮಕವಾಗಿದೆ ಎಂಬ ಬ್ರೇಕಿಂಗ್ ಸುದ್ದಿ ಹೊರಬಿದ್ದಿದೆ.
ರಾಜರ್ಷಿ ಯಾರು ಗೊತ್ತೇ? ರಜನೀಕಾಂತ್. ಇನ್ನು, ದೇಶದ ಪ್ರಾಬ್ಲಂ ಸಾಲ್ವ್!

ಎಲೆಕ್ಷನ್ 2014: ಹೊಸ ಬ್ರ್ಯಾಂಡ್‌ಗಳು
Apr 26, 2014, 04.00AM IST

ಆರಕ್ಕೇರಿಯಾಗಿದೆ, ಇನ್ನು ಮೂರಕ್ಕೆ ಇಳಿಯುವುದಷ್ಟೇ ಬಾಕಿ. ಇಡೀ ದೇಶ ಒಂದಾಗಿ ಭಾಗವಹಿಸುತ್ತಿರುವ ಮತದಾನದಲ್ಲಿ ಆರು ಹಂತ ಈಗಾಗಲೇ ಮುಗಿದಿದೆ. ಒಂಬತ್ತಕ್ಕೆ ಎಲ್ಲವೂ ಮುಕ್ತಾಯ.

ದೇಶದ ಇತಿಹಾಸದಲ್ಲೇ ಹಿಂದೆಂದೂ ಕಾಣದಷ್ಟು ಸಾವಿರ ಸಾವಿರ ಕೋಟಿ ಹಣ ಈ ಬಾರಿಯ ಚುನಾವಣೆಯಲ್ಲಿ ಹರಿದುಹೋಗಿದೆ. ವಾರಣಾಸಿ ಗಂಗೆ ಎಷ್ಟು ಮಲಿನವಾಗಿದ್ದಾಳೋ, ಅಷ್ಟೇ ಮಲಿನ ಹಣ ದೇಶದ ಗಲ್ಲಿ-ಗಲ್ಲಿಗಳಿಗೆ ತಲುಪಿದೆ. ಅಷ್ಟರ ಮಟ್ಟಿಗೆ ನಮ್ಮ ದೇಶದ ಬಡತನ ನಿವಾರಣೆಯಾಗಿದೆ!

ಈ ಎಲೆಕ್ಷನ್ನೇ ತೀರಾ ವಿಚಿತ್ರ. ಎಂದೂ ನೆನಪಿಸಿಕೊಳ್ಳದ ಹೆಂಡತಿ ಈಗ ಗಂಡನಿಗೆ ಏಕ್‌ದಮ್ ನೆನಪಾಗಿಬಿಟ್ಟಿದೆ; ಎಂದೂ ಗಂಡನ ಬಗ್ಗೆ ಮಾತಾಡದ ಹೆಂಡತಿ ಈ ಸಲ ಒಮ್ಮಿಂದೊಮ್ಮೆಗೆ ಪತಿರಾಯರ ಬೆನ್ನಿಗೆ ನಿಂತುಕೊಂಡಿದ್ದಾರೆ; ತಿಂದುಂಡು ತೇಗಿದವರಿಗೂ ಕರಪ್ಷನ್ ನೆನಪಿಗೆ ಬಂದಿದೆ; ಇನ್ನೊಬ್ಬರಿಗೆ ಟೋಪಿ ಹಾಕುವುದು ತಪ್ಪು ಎಂದು ಹೇಳಿ ಜನಪ್ರಿಯರಾದವರೇ, ತಾವೇ ಟೋಪಿ ಹಾಕಿಕೊಂಡು ಓಡಾಡುತ್ತಿದ್ದರೆ, ಮಾತಿನಲ್ಲೇ ಟೋಪಿ ಹಾಕೋರು ತಾವು ಟೋಪಿ ಹಾಕಿಸಿಕೊಳ್ಳಲು ಹಿಂದೆ ಮುಂದೆ ನೋಡುತ್ತಾರೆ. ಒಂದೆಡೆ ಅವರಿಗೆ ಅಮೆರಿಕ ವೀಸಾ ಸಿಗುತ್ತೋ ಎನ್ನುವ ಚರ್ಚೆ; ಇನ್ನೊಂದೆಡೆ ಇವರು ದೇಶ ಬಿಡ್ತಾರಾ ಎನ್ನುವ ಜಿಜ್ಞಾಸೆ; ಮತ್ತೊಂದೆಡೆ, ನೆರೆ ದೇಶಕ್ಕೆ ಹೋಗಿ ಎನ್ನುವ ಫರ್ಮಾನು... ಹೀಗೆ ದೇಶ-ಖಂಡಗಳನ್ನೆಲ್ಲ ದಾಟಿ ಪ್ರಚಾರದ ಅಬ್ಬರ ಎಲ್ಲೆಲ್ಲೋ ಹೋಗಿಬಿಟ್ಟಿದೆ. ಥೇಟ್ ಮಲೇಷ್ಯ ಏರ್‌ಲೈನ್ಸ್ ಥರ ದಾರಿತಪ್ಪಿ ಬಿಟ್ಟಿದೆ.

ಈ ಎಲೆಕ್ಷನ್ ಒಂಥರಾ ಬ್ರ್ಯಾಂಡ್ ವಾರ್‌ಗೂ ಅವಕಾಶ ಮಾಡಿಕೊಟ್ಟಿದೆ. ಗೋಧ್ರಾ- ವಾಧ್ರಾಗಳ ನಡುವೆ ಸಮರ ನಡೆಯುತ್ತಿದೆ ಎಂದು ಭಾವಿಸುವಷ್ಟರಲ್ಲೇ, ಪುರಾಣ-ಇತಿಹಾಸ ಜತೆಗೂಡಿಬಿಡುತ್ತದೆ. ಶೆಹಜಾದ್, ಹಿಟ್ಲರ್ ಇಬ್ಬರೂ ಮುಖಾಮುಖಿಯಾಗುತ್ತಾರೆ; ಮೋಕ್ಷಕ್ಕಾಗಿ ಜನ ಕಾಶಿಗೆ ಹೋದರೆ, ಕೆಲವರು ಅಲ್ಲೇ ಕಪಾಳಮೋಕ್ಷದಿಂದ ಪುನೀತರಾಗುತ್ತಾರೆ. ಹಿಂದಿನ ಚುನಾವಣೆಯಲ್ಲಿ 'ವೀಕ್-ಸ್ಟ್ರಾಂಗ್' ಎಂದು ಬೈದಾಡಿಕೊಂಡವರೆಲ್ಲ ಎಲ್ಲೋ ಮೂಲೆ ಸೇರಿದ್ದಾರೆ. ಅರಚುವವರು, ಕಿರುಚುವವರು, ಕೊಚ್ಚುವವರು... ಅಬ್ಬಬ್ಬಾ... ಈ ಎಲೆಕ್ಷನ್ ಮಜಾನೇ ಬೇರೆ. ಅಂಥದ್ದರಲ್ಲಿ ಕೆಲವು ನಾಯಕರ ಬ್ರ್ಯಾಂಡ್‌ಗಳು, ಉತ್ಪನ್ನಗಳೂ ಡೆವಲಪ್ ಆಗಿಬಿಟ್ಟಿವೆ. ಅಂಥ ಕೆಲವು ಬ್ರಾಂಡ್‌ಗಳು ಇಲ್ಲಿವೆ:

ಮೋ ಟಾನಿಕ್
ಗುಜರಾತ್ ಹರ್ಬಲ್ ಫಾರ್ಮುಲಾವನ್ನು ಒಳಗೊಂಡಿರುವ ಮೋ ಟಾನಿಕ್‌ನ್ನು ಬ್ರಿಗೇಡ್ ಎನ್ನುವ ಕಂಪನಿ ಸಿದ್ಧಪಡಿಸಿದ್ದು, ವ್ಯಾಪಕ ಪ್ರಚಾರ ಮಾಡುತ್ತಿದೆ. ಇದನ್ನು ಸೇವಿಸಿದರೆ, ಎದೆ 56 ಇಂಚು ಉಬ್ಬುತ್ತದೆ ಎಂದು ಹೇಳಲಾಗುತ್ತಿದ್ದು, ವಿಪರೀತ ಶಕ್ತಿ ಬರುತ್ತದೆಯಂತೆ. ದೈಹಿಕ ಕ್ಷಮತೆ ಹೆಚ್ಚಿ, ಸಾವಿರಾರು ಕಿಲೋಮೀಟರ್‌ಗಟ್ಟಲೆ ವಿಮಾನದಲ್ಲಿ ಹಾರಾಡಬಹುದು. ಎದುರಾಳಿಗಳಿಗೆ ಕಿರಿಕಿರಿಯಾಗುವಂಥ ಮಾತನ್ನು ಆಡಲು ಇದು ಉತ್ತೇಜಿಸುತ್ತದೆ ಎಂದು ಬ್ರಿಗೇಡ್ ಕಂಪನಿ ತನ್ನ ಜಾಹೀರಾತಿನಲ್ಲಿ ಹೇಳಿಕೊಂಡಿದೆ. ಇದನ್ನು ಸೇವಿಸುವವರ ಅಕ್ಕಪಕ್ಕದಲ್ಲಿರುವವರೆಲ್ಲರೂ ಹೆದರಿ ದೂರ ಸರಿಯುತ್ತಾರೆ ಎನ್ನುವುದು ಶ್ರುತಪಟ್ಟಿದೆ. ಆದರೆ, ಅಮೆರಿಕದಲ್ಲಿ ಈ ಟಾನಿಕ್ ನಿಷೇಧಗೊಂಡಿದೆ. ಇದರಲ್ಲಿ ಉದ್ದೀಪನಾ ಔಷಧಿ ಸೇರಿಸಲಾಗಿದೆ ಎನ್ನುವ ವಾದ ಕೇಳಿಬರುತ್ತಿದ್ದು, ಆ ಬಗ್ಗೆ ತನಿಖೆಯಾಗಬೇಕಷ್ಟೇ. ಗರ್ಭಿಣಿಯರು ಇದನ್ನು ಸೇವಿಸಬಾರದು. ಏಕೆಂದರೆ, ಇದರಿಂದ ಹುಟ್ಟುವ ಮಕ್ಕಳಲ್ಲಿ ಅಸಹಿಷ್ಣುತೆ ಉಂಟಾಗಬಹುದು ಎನ್ನುವುದು ಇಂಡಿಯನ್ ಮೆಡಿಕಲ್ ಜರ್ನಲ್‌ಗಳು ಹೇಳುತ್ತಿವೆ. ಆದರೆ, ಮುಖ್ಯವಾಹಿನಿಯ 'ಮೋಡಿಯಾ'ಗಳು ಇದನ್ನು ಒಪ್ಪುತ್ತಿಲ್ಲ.

ಕೇಜ್ರಿ ಇಂಡಿಯಾ ಇಂಕ್
ರಾಜಕೀಯ ಪ್ರಚಾರ ಭಾಷಣಗಳಲ್ಲಿ ಈಚೆಗೆ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತಿರುವ 'ಕೇಜ್ರಿ ಇಂಡಿಯಾ ಇಂಕ್' ಶುದ್ಧ ದೇಸಿ. ದಿಲ್ಲಿ, ಹರ‌್ಯಾಣ, ಉತ್ತರ ಪ್ರದೇಶಗಳಲ್ಲಿ ಹೆಚ್ಚು ಜನಪ್ರಿಯವಾಗಿರುವ ಇಂಕ್, ರಾಜಕೀಯ ಸಮಾವೇಶ, ಧರಣಿ, ಪ್ರತಿಭಟನೆ, ರೋಡ್ ಶೋ ಮುಂತಾದ ಕಡೆಗಳಲ್ಲಿ ಹೆಚ್ಚು ಮಾರಾಟವಾಗುತ್ತಿದೆ. ಫೌಂಟನ್ ಪೆನ್, ಫೇಬರ್ ಕ್ಯಾಸಲ್ ಮುಂತಾದ ಕಂಪನಿಗಳ ಮಾರಾಟಕ್ಕೆ ಇದರಿಂದ ಹೊಡೆತ ಬಿದ್ದಿರುವುದು ನಿಜ. ಒಮ್ಮೆ ಮುಖಕ್ಕೆ ರಾಚಿದರೆ 49 ದಿನದವರೆಗೆ ಕಲೆ ಹೋಗುವುದಿಲ್ಲ. 50ನೇ ದಿನ ತನ್ನಿಂದ ತಾನೇ ಇದು ಮಾಯವಾಗುತ್ತದೆ. ಈಚೆಗೆ ದೇಶದ ಕೆಲವು ಭಾಗಗಳಲ್ಲಿ ಮೊಟ್ಟೆ ಮಾರಾಟಗಾರರು ಹಾಗೂ ಟೊಮೇಟೊ ಬೆಳೆಗಾರರು ಪತ್ರಿಕಾಗೋಷ್ಠಿಯನ್ನು ಕರೆದು ಈ ಇಂಕ್‌ನಲ್ಲಿ ಅತಿ ಹೆಚ್ಚಿನ ಪ್ರಮಾಣದ ರಾಸಾಯನಿಕ ವಸ್ತು ಇರುವುದರಿಂದ, ಇದರ ಬಳಕೆ ಅಪಾಯಕಾರಿ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.

ಶೆಹಜಾದ್ ಟಾಫೀ
ಇದರ ಬೆಲೆ ಒಂದೇ ರೂಪಾಯಿ. ಈವರೆಗಿನ ಸಾಂಪ್ರದಾಯಿಕ ಟಾಫಿಗಳಿಗೆ ಸ್ಪರ್ಧೆಯೊಡ್ಡಿ, ಯುವಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯಬೇಕೆನ್ನುವ ಉದ್ದೇಶದಿಂದ ಗಾಂಧಿ ಅಂಡ್ ಗಾಂಧಿ ಕಂಪನಿ ಈ ಟಾಫಿಯನ್ನು ಮಾರುಕಟ್ಟೆಗೆ ಹೊರತಂದಿದೆ. ಕೆಲವು ಕಾರ್ಪೊರೇಟ್ ಕಂಪನಿಗಳ ಚಾಕೊಲೇಟ್‌ಗಳ ಮುಂದೆ ಈ ಟಾಫಿ ಪ್ರಚಾರ ಮಂಕಾದಂತೆ ಕಾಣಿಸಿದರೂ, ಗ್ರಾಮೀಣ ಪ್ರದೇಶದಲ್ಲಿ ಟಾಫಿಯನ್ನು ಇಷ್ಟಪಡುವವರೂ ಇನ್ನೂ ಇದ್ದಾರೆ ಎಂದು ಕಂಪನಿ ಹೇಳುತ್ತದೆ. 'ನಮ್ಮ ಟಾಫಿ ಸಿಹಿಯಾಗಿರುತ್ತದೆ' ಎಂದು ಜಾಹೀರಾತು ನೀಡಿರುವ ಗಾಂಧಿ ಅಂಡ್ ಗಾಂಧಿ ಕಂಪನಿ, ಯಾವುದು ಕಹಿ ಎಂದು ಸ್ಪಷ್ಟಪಡಿಸಿಲ್ಲ. ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಟಾಫಿ ಸೆಕ್ಯುರಿಟಿ ಬಿಲ್‌ನ್ನು ಜಾರಿಗೆ ತರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದ್ದು, ಎಲ್ಲ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಟಾಫಿಯನ್ನು ಉಚಿತವಾಗಿ ನೀಡುವ ಉದ್ದೇಶ ಇದೆ ಎನ್ನಲಾಗಿದೆ. ಆದರೆ, ಈ ಕುರಿತು ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.

ಆಯನೂರು ಕಟ್ಟಿಂಗ್ ಸೆಂಟರ್
ಶಿವಮೊಗ್ಗದ ಪುಟ್ಟ ಗ್ರಾಮವೊಂದರಲ್ಲಿ ಆರಂಭವಾದ ಈ ಕಟ್ಟಿಂಗ್ ಸೆಂಟರ್ ಇಂದು ದೇಶಾದ್ಯಂತ ಹಲವು ಕೇಂದ್ರಗಳನ್ನು ಆರಂಭಿಸಿದೆ. ಇದೇ ಊರಿನಲ್ಲಿ ಈಶು ನಾಲಿಗೆ- ಕೈ ಕಟ್ಟಿಂಗ್ ಸೆಂಟರ್ ಓಪನ್ ಆಗಿತ್ತು. ಹೆಚ್ಚು ಬಿಸ್ನೆಸ್ ಆಗದೆ ಅದು ಮುಚ್ಚಿತ್ತು. ಆದರೆ, ಈ ಕಟ್ಟಿಂಗ್ ಸೆಂಟರ್‌ನಲ್ಲಿ ಕೇಶ ಮಾತ್ರ ಕಟ್ ಮಾಡಲಾಗುವುದಂತೆ. ಧರ್ಮಸ್ಥಳದ 'ಮಂಜುನಾಥ' ಕೇಶಮುಂಡನಕ್ಕೂ ಇದಕ್ಕೂ ಸಂಬಂಧ ಇಲ್ಲ ಎನ್ನುವುದನ್ನು ಈಗಾಗಲೇ ಸ್ಪಷ್ಟಪಡಿಸಲಾಗಿದೆ. ಇದನ್ನೇ ಮಾದರಿಯಾಗಿಸಿಕೊಂಡು ಉತ್ತರ ಪ್ರದೇಶದಲ್ಲಿ ಇಮ್ರಾನ್ ಮಸೂದ್ ಎಂಬುವರು ತೆರೆದಿರುವ ಇನ್ನೊಂದು ಕಟ್ಟಿಂಗ್ ಸೆಂಟರ್‌ಗೆ ಚುನಾವಣಾ ಆಯೋಗ ಬೀಗ ಹಾಕಿದೆ. ಆಯನೂರು ಕಟ್ಟಿಂಗ್ ಸೆಂಟರ್ ಚುನಾವಣೆ ರಿಸಲ್ಟ್ ಬಂದ ನಂತರ ಮುಂದುವರೆಯುವುದೇ ಇಲ್ಲವೇ ಎನ್ನುವುದು ಖಚಿತವಾಗಿಲ್ಲ.

ಜಾಫರ್ ಗೇಮ್ಸ್
ಈ ಸಲದ ಚುನಾವಣೆ ವೇಳೆ ಹೆಚ್ಚು ಕುತೂಹಲ ಕೆರಳಿಸಿದ ಕಂಪ್ಯೂಟರ್ ಗೇಮ್ಸ್ ಇದು. ಚುನಾವಣೆಗೆ ನಿಂತುಕೊಳ್ಳಲು ಅಭ್ಯರ್ಥಿಯೊಬ್ಬರು ಆಡಬಹುದಾದ ಆಟ ಇದು. ಒಂದು ಪಕ್ಷದಲ್ಲಿದ್ದುಕೊಂಡೇ ಇನ್ನೊಂದು ಪಕ್ಷಕ್ಕೆ ಸೇರುತ್ತೇನೆ ಎಂದು ಹೇಳಿಕೊಂಡೇ ಅಭ್ಯರ್ಥಿಯನ್ನು ಮೂವ್ ಮಾಡಬೇಕು. ಹೆಜ್ಜೆ ಹೆಜ್ಜೆಗೂ ಅಪಾಯಗಳಿರುತ್ತವೆ. ಅದೆಲ್ಲವನ್ನೂ ಯಶಸ್ವಿಯಾಗಿ ಹಿಮ್ಮೆಟ್ಟಿಸಿ ಮುಂದುವರೆದರೆ ಟಿಕೆಟ್ ಸಿಗುತ್ತದೆ. ಅಲ್ಲಿಗೆ ಆಟ ಎಂಡ್. ಟಿಕೆಟ್ ಸಿಗಲಿಲ್ಲ ಎಂದರೆ, ಸೋಲು ಎಂದರ್ಥ. ಕೆಲವೊಮ್ಮೆ ಅಭ್ಯರ್ಥಿ ಸಡನ್ನಾಗಿ ಕಂಪ್ಯೂಟರ್‌ನಿಂದ ಮಾಯವಾಗಿಬಿಡುತ್ತದೆ. ಅದು 'ಯಾತ್ರೆ'ಯಲ್ಲಿರುತ್ತದೆ ಎನ್ನುವ ಮೆಸೇಜ್ ಬರುತ್ತದೆ. ಅಲ್ಲಿಂದ ನಿಧಾನವಾಗಿ ಎಳೆದುತರಬೇಕು. ಇದು ಫ್ರೀ ಡೌನ್‌ಲೋಡ್.

ಕೊನೇ ಮಾತು
ಜನ ವೋಟ್ ಹಾಕಿ ಗೆಲ್ಲಿಸಿದರೆ ನೇತಾರರು
'ನೋಟಾ' ಹಾಕಿ ಸೋಲಿಸಿದರೆ- ನೋಟಾರರು

ನಾವು ತಿಂತೀವಿ; ನೀವು ಕುಡೀರಿ!
Mar 1, 2014, 04.00AM IST
ಆಟೀ ಸ್ಟಾಲ್ ಜಗಮಗಿಸುತಿತ್ತು. ಪ್ರಖರ ಬೆಳಕಿನಲ್ಲಿ ಎಲ್ಲರ ಮುಖವೂ ಫಳಫಳ. ಚಡ್ಡಿ ಹಾಕಿಕೊಂಡ ಹುಡುಗ- ಹುಡುಗಿಯರು 'ಯಾವ ಟೀ ಬೇಕು' ಎಂದು ಸ್ಟೈಲಿನಲ್ಲಿ ಕೇಳುತ್ತಿದ್ದರು. 'ಟೀ ಲೋಕ'ದ ರಂಭೆ, ಊರ್ವಶಿ, ಮೇನಕೆಯರೆಲ್ಲ ಅಲ್ಲೇ ಇದ್ದರು. ಲೆಮನ್ ಟೀ, ಏಲಕ್ಕಿ ಟೀ, ಮಸಾಲ ಟೀ, ಗ್ರೀನ್ ಟೀ, ಬ್ಲ್ಯಾಕ್ ಟೀ, ಸೇಫ್ರನ್ ಟೀ... ಬಗೆ ಬಗೆ ಟೀಗಳನ್ನು ಇಟ್ಟುಕೊಂಡಿದ್ದರೂ ಎಲ್ಲದರ ಬಣ್ಣ ಒಂದೇ. ಗೋಡೆ ಪೂರ್ತಿ ಕನ್ನಡಿ ಥಳಥಳಿಸುತ್ತಿದೆ. ಒಬ್ಬ ಒಳಗೆ ಬಂದರೆ, ಹತ್ತು ಜನರಂತೆ ಕಂಡುಬಿಡುತ್ತದೆ. ಚಹಾದ ಒಗರಿಗಿಂತ ಮಾತಿನ ಒಗರು ಇಲ್ಲಿ ಹೆಚ್ಚು ಬಲವಾಗಿದೆ. ಬಂದವರೆಲ್ಲ ಏನನ್ನೋ ಚರ್ಚೆ ಮಾಡುತ್ತಾರೆ, ಕಡೆಗೆ ಟೀ ಕುಡಿದು ಹೋಗಿಬಿಡುತ್ತಾರೆ. ನೋಡಲು ಈ ಟೀ ಅಂಗಡಿ ಮಾಲೀಕ ಸದಾ ಟಾಕು-ಟೀಕು. ಟಾಕೂ ಟೀಕೆಯೇ! ದೇಶದೆಲ್ಲೆಡೆ ಇಂಥ ಲಕ್ಷಾಂತರ ಅಂಗಡಿ ತೆರೆಯಬೇಕೆಂದು ಹೊರಟಿರುವ ಈ ಉದ್ಯಮಿಗೆ ಒಂದು ಮಾತ್ರ ಅರ್ಥ ಆಗಿಲ್ಲ- ಈ ಟೀಯಿಂದ ಹಾಲು, ಟೀ ಪುಡಿ, ಸಕ್ಕರೆ, ನೀರು- ಇವುಗಳನ್ನು ಒಡೆದು ಬೇರ್ಪಡಿಸುವುದು ಹೇಗೆ ಎಂದು.

ಪಕ್ಕದ ಬೀದಿಯಲ್ಲಿ ಇನ್ನೊಂದು ಅಂಗಡಿ. ಮುಂಭಾಗದಲ್ಲಿ ನೋಡಿದರೆ ತುಂಬಾ ಹಳೇ ಅಂಗಡಿಯ ಹಾಗೆ ಕಾಣಿಸುತ್ತದೆ. ಗೋಡೆಗಳೆಲ್ಲ ಶಿಥಿಲಗೊಂಡಿದೆ; ಜಂತಿ ಕುಂಬಾಗಿದೆ. ಆದರೆ ಒಳಗೆ ಹಾಲುಗಲ್ಲದ ಹುಡುಗರು ಚಟುವಟಿಕೆಯಿಂದ ಓಡಾಡುತ್ತಿದ್ದಾರೆ. ಅಲ್ಲಿ ಸಿಗುವುದು ಹಾಲು ಮಾತ್ರ. ಎದುರಿಗೆ ಒಂದು ಬೋರ್ಡಿದೆ- ''ಪಕ್ಕದ ಬೀದಿಯಲ್ಲಿರುವ ಅಂಗಡಿಯ ಟೀಯಲ್ಲಿ ರಕ್ತದ ವಾಸನೆ ಇದೆ; ನಮ್ಮದು ಪ್ಯೂರ್ ಹಾಲು'' ಅಂತ. ಇಲ್ಲಿ ಹಸುವಿನ ಹಾಲು, ಎಮ್ಮೆ ಹಾಲು, ಕುರಿ ಹಾಲು, ಕತ್ತೆ ಹಾಲು, ಹಾಲಲ್ಲದ ಹಾಲು, ಆಲ್ಕೋಹಾಲು... ಹೀಗೆ ಎಲ್ಲವೂ ಸಿಗುತ್ತದೆ. ಈ ಅಂಗಡಿಯ ನೌಕರರು, ಅರ್ಧಕ್ಕರ್ಧ ಹಾಲು ಕುಡಿದು, ಉಳಿದದ್ದಕ್ಕೆ ನೀರು ಹಾಕಿ ಕೊಡುತ್ತಾರೆ ಎನ್ನುವ ಆರೋಪವೂ ಇದೆ. ಇದರ ಮಾಲೀಕ ಇನ್ನೂ ಹಾಲು ಕುಡಿಯುವಷ್ಟು ಯಂಗ್. ತುಂಬಾ ಫಾಸ್ಟ್, ಸದಾ ಗಡಿಬಿಡಿ ಮನುಷ್ಯ. ಒಮ್ಮೊಮ್ಮೆ ಹಸುವಿನ ಹಾಲು ಕೊಡಿ ಎಂದು ಕೇಳಿದರೆ, ಎಮ್ಮೆ ಹಾಲನ್ನು ತಂದು ಮುಂದಿಟ್ಟುಬಿಡುತ್ತಾರೆ. 'ಎಮ್ಮೆ ಹಾಲು ಬೇಡ, ಚೇಂಜ್ ಮಾಡಿಕೊಡಿ' ಎಂದು ಹೇಳಿದರೆ, ಮೊದಲಿಗೆ ವ್ಯವಸ್ಥೆ ಬದಲಿಸಬೇಕು ಅಂತಾರೆ.

ಅಲ್ಲೇ ಮತ್ತೊಂದು ಬೀದಿ. ಅಲ್ಲಿ ಮದ್ರಾಸಿಗಳೇ ಹೆಚ್ಚು. ಆ ಬೀದಿಯಲ್ಲಿ ಒಂದು ನೀರು ಅಂಗಡಿ. ''ಟೀ ಆರೋಗ್ಯಕ್ಕೆ ಹಾನಿಕರ, ಬೆಳ್ಳಗಿರುವುದೆಲ್ಲ ಹಾಲಲ್ಲ. ನೀರೇ ಶ್ರೇಷ್ಠ' ಎಂದು ತಮಿಳಿನಲ್ಲಿ ಬೋರ್ಡ್ ನೇತು ಹಾಕಿಕೊಂಡಿದೆ. ನಮ್ಮ ಅಂಗಡಿಗೆ ಬಂದವರಿಗೆ ಅದು ಕೊಡ್ತೀವಿ, ಇದು ಕೊಡ್ತೀವಿ ಎಂದು ಇಲ್ಲಸಲ್ಲದ ಆಮಿಷವೊಡ್ಡುತ್ತಾರೆ. ಒಳಗೆ ಹೋದವರು ಕೈ ಕಟ್ಟಿ ಕೂರಬೇಕು, ಕೊಟ್ಟ ನೀರನ್ನು ಕುಡಿದು ಹೋಗಬೇಕು. ಎರಡನೇ ಮಾತೇ ಇಲ್ಲ. ನೀರು ಕುಡಿದವರಿಗೆ ಇಡ್ಲಿ ಫ್ರೀ ಕೊಡ್ತಾರೆ. ಅಂಗಡಿ ನೌಕರರೆಲ್ಲ ಮೀಸೆ ಹೊತ್ತ ಮಹಿಳೆಯರು. ಏಕೆಂದರೆ, ಈ ಅಂಗಡಿಯೂ ಒಬ್ಬ ಮಹಿಳೆಯದು. ನೀರಿನ ಬಿಸ್ನೆಸ್‌ನಿಂದಲೇ ಮೇಲ್ ಬಂದಿರುವ ಈ ಫೀಮೇಲು ಉದ್ಯಮಿಗೆ, ದೇಶದೆಲ್ಲೆಡೆ ತನ್ನ ಅಂಗಡಿ ಸ್ಥಾಪಿಸಬೇಕು ಎನ್ನುವುದು ದೊಡ್ಡ ಗುರಿ. ಈಕೆಗೆ ನಿರಂತರವಾಗಿ ಕರ್ನಾಟಕದಿಂದ ನೀರು ಸಪ್ಲೈ ಆಗುತ್ತದೆ. ಆದರೂ, ಆ ನೀರನ್ನು ನಮ್ಮ ನೀರೇ ಎಂದು ಹೇಳಿಕೊಳ್ಳುವ ಈಕೆ, ಯಾವುದಕ್ಕೂ ಇರಲಿ ಅಂತ ಟೀ ಅಂಗಡಿಗೂ, ಹಾಲಿನ ಅಂಗಡಿಗೂ ಒಳಗಿನಿಂದೊಳಗೆ ನೀರು ಕೊಡುತ್ತಾಳೆ.
***

ಈ ಮೂರೂ ಬಿಸ್ನೆಸ್‌ಗಳು ನಮ್ಮ ಈಗಿನ ರಾಜಕೀಯವನ್ನು ಸೂಚಿಸುತ್ತದೆ. 2014ರ ಚುನಾವಣೆಯೇ ಸ್ಪೆಷಾಲಿಟಿಯೇ ಅದು. 'ಹೊಡಿ-ಬಡಿ' ಸ್ಲೋಗನಿಲ್ಲ. ಏನಿದ್ದರೂ 'ಕುಡಿ ಮತ್ತು ಕಿಡಿ' ರಾಜಕೀಯ. ಮೋದಿ ಟೀಯನ್ನೋ, ರಾಹುಲ್ ಹಾಲನ್ನೋ ಅಥವಾ ಜಯಲಲಿತಾ ನೀರನ್ನೋ ಕುಡಿಯೋದು, ಕಿಡಿ ಕಿಡಿ ಮಾತಾಡೋದು... ಇದು ಲೇಟೆಸ್ಟ್ ಪೊಲಿಟಿಕ್ಸ್.

ಇದ್ಯಾಕೆ ಹೀಗೆ ಎಲ್ಲರೂ ಕುಡಿ ಕುಡಿದು ಬಾರಾ, ಕೂಡಿ ಕುಡಿಯೋಣ ಬಾರಾ ಎಂದು ಹೇಳಲು ಹೊರಟಿದ್ದಾರೋ ತಿಳಿಯದು. ಆದರೆ ಎಲ್ಲ ರಾಜಕೀಯ ಚಟುವಟಿಕೆಗಳ ಹಿಂದೆ 'ಪಾನಗೋಷ್ಠಿ' ಇರುತ್ತದೆ ಎನ್ನುವುದನ್ನು ಇಷ್ಟೊಂದು ಸರಳವಾಗಿ ಹೇಳಲು ಹೊರಟಿದ್ದಾರೆಯೇ?

ನಾವು (ರಾಜಕಾರಣಿಗಳು) ತಿಂತೀವಿ; ನೀವು (ಮತದಾರರು) ಕುಡೀರಿ ಎಂದಿರಬಹುದೇ ಇವರ ಉದ್ದೇಶ?
***

ಕಳೆದ ವರ್ಷದಲ್ಲಿ ಅಮೆರಿಕದಲ್ಲಿ ನಡೆದ ಚುನಾವಣೆ ಸಂದರ್ಭ ಅಲ್ಲಿನ ಸಂಸ್ಥೆಯೊಂದು ವಿಶಿಷ್ಟ ಸಮೀಕ್ಷೆಯೊಂದನ್ನು ನಡೆಸಿತು. ಅದು ಜನರ ಮದ್ಯಪಾನ ಹವ್ಯಾಸ ಮತ್ತು ಅವರ ರಾಜಕೀಯ ಒಲವಿನ ಕುರಿತು ಸಾವಿರಾರು ಜನರ ಜತೆ ಮಾತನಾಡಿಸಿತು. ಅದರ ಪ್ರಕಾರ, ಗ್ರೆ ಗೂಸ್, ಅಬ್ಸೊಲ್ಯೂಟ್ ವೋಡ್ಕ ಕುಡಿಯುವವರು ಹೆಚ್ಚಾಗಿ ಡೆಮಾಕ್ರಟಿಕ್‌ಗೆ ಮತ್ತು ಕೆಂಡೆಲ್ ಜಾಕ್ಸನ್ ವೈನ್ ಕುಡಿಯುವವರು ರಿಪಬ್ಲಿಕನ್ ಪಕ್ಷಕ್ಕೆ ವೋಟ್ ಹಾಕ್ತಾರೆ ಅಂತೆ. ಹಾಗಂತ ಭಾರತದಲ್ಲಿ ಚಹಾ ಕುಡಿಯುವವರೆಲ್ಲ ಬಿಜೆಪಿ, ಹಾಲು ಕುಡಿಯುವವರೆಲ್ಲ ಕಾಂಗ್ರೆಸ್, ನೀರು ಕುಡಿಯುವವರೆಲ್ಲ ತತೀಯ ರಂಗ ಅಂತೇನೂ ಹೇಳಲಾಗದು ಬಿಡಿ. ರಾತ್ರೋರಾತ್ರಿ ಏನೇನನ್ನೋ ಕುಡಿಸಿ, ತಮ್ಮ ಪಕ್ಷಕ್ಕೇ ವೋಟ್ ಹಾಕಿಸಿಕೊಳ್ಳೋ ತಾಕತ್ತು ಎಲ್ಲ ಪಕ್ಷಗಳವರಿಗೂ ಇದೆ ಬಿಡಿ.

ಇದಾವುದೂ ಒಗ್ಗದ ಬರಿ ಜ್ಯೂಸ್ ಕುಡಿಯುವ 'ಸಾಫ್ಟ್' ಮಂದಿಗೆ ಯಾವ ಪಕ್ಷ ಎನ್ನುವ ಪ್ರಶ್ನೆ ನಿಮ್ಮದೇ? ಇದೇನಾದರೂ ಕೇಜ್ರಿವಾಲ್‌ಗೆ ಕೇಳಿದರೆ, ''ನಮ್ಮದಿದೆಯಲ್ಲ. ಮಧ್ಯಮವರ್ಗದ ಆಮ್ ಆದ್ಮಿ ಮಂದಿಗೆ ಆಮ್ (ಮಾವು) ಜೂಸ್ ಕೊಡ್ತೀವಿ' ಎಂದು ಹೇಳಬಹುದು.

ಆದರೆ, ದೇಶದಲ್ಲಿ ಕಾಫಿ ಕುಡಿಯುವವರ ಪ್ರಮಾಣ ಹೆಚ್ಚುತ್ತಿದ್ದರೂ, ನಮಗ್ಯಾಕೆ ಯಾವ ಪಕ್ಷವೂ ಇಲ್ಲ ಅಂತ 'ಕಾಫಿ ಕುಡುಕರು' ಬೀದಿಗಿಳಿದರೆ?
***

ಒಂದಂತೂ ನಿಜ. 2014ರ ಚುನಾವಣೆಯಲ್ಲಿ ಸ್ಟಾರ್ ಕ್ಯಾಂಪೇನರ್ಸ್ ಇರಲಾರರು

ಮತ್ತೆ? ಎಲ್ಲ ಸ್ಟಾಲ್ ಕ್ಯಾಂಪೇನರ್ಸ್!
***

ಹೋಗಲಿ, ಯಾಕೆ ಈ ಪಾನ ಪೊಲಿಟಿಕ್ಸ್ ಅಂತ ನಮ್ಮ ನಾಯಕರನ್ನೇ ಕೇಳಿದರೆ, ಅವರೇನು ಉತ್ತರ ಕೊಟ್ಟಾರು?

ಪ್ರಶ್ನೆ: ಮೋದೀಜಿ, ಈ ಸಲದ ಎಲೆಕ್ಷನ್ ಇಶ್ಯೂ ಏನು? ಟೀ ನಾ?

ಮೋದಿ: ಇಶ್ಯೂ (issue) ಮತಲಬ್ ಟಿಶ್ಯೂ..

(tissue)ಹೋದಲ್ಲೆಲ್ಲ ಟಿ ಇರಲೇಬೇಕು. ನೋಡಿ, ಟೆಂಪಲ್‌ನಲ್ಲೂ ಟಿ ಇದೆ, ಟಾಯ್ಲೆಟ್‌ನಲ್ಲೂ ಟಿ ಇದೆ. ಅದಕ್ಕೇ ನಾನು ಅವತ್ತು ಹೇಳಿದ್ದು- ಮೊದಲು ಟಾಯ್ಲೆಟ್ ಕಟ್ಟಿ, ಆಮೇಲೆ ಟೆಂಪಲ್ ಕಟ್ಟಿ ಅಂತ. ಸಮಜ್ ಗಯಾ?
***

ಪ್ರಶ್ನೆ: ರಾಹುಲ್‌ಜೀ, ಹಾಲು ಯಾಕೆ ಬೇಕು?

ರಾಹುಲ್: ಮೊದಲು ಈ ರಾಹುಲ್ ಗಾಂಧಿ ಯಾಕೆ ಇಲ್ಲಿದ್ದಾನೆ ಎಂದು ಅರ್ಥ ಮಾಡಿಕೊಳ್ಳಿ. ಆಮೇಲೆ ಹಾಲು ಯಾಕೆ ಬೇಕು ಎಂದು ನಿಮಗೇ ಅರ್ಥ ಆಗುತ್ತದೆ. ಹಾಲೆಂದರೆ, ಮುಗ್ಧತೆ, ಹಾಲೆಂದರೆ ಕ್ಲೀನ್. ಹಾಲೆಂದರೆ- ಪಾರದರ್ಶಕತೆ. ಹಾಲೆಂದರೆ ಪ್ಯೂರಿಟಿ.
***

ಪ್ರಶ್ನೆ: ಅಮ್ಮಾ, ನೀರು ಯಾಕೆ ಕೊಡ್ತೀರಿ?

ಜಯಲಲಿತಾ: ಡೋಂಟ್ ಆಸ್ಕ್ ಸಿಲ್ಲಿ ಕೊಶ್ಚನ್. ಸೀ, ಮೊದಲಿಗೆ ನನಗೆ ನಮ್ಮ ರಾಜ್ಯ ತಮಿಳುನಾಡು ಹೆಸರನ್ನು ಬದಲಿಸಬೇಕೂಂತ ಡಿಸೈಡ್ ಮಾಡಿದ್ದೀನಿ. ಏಕೆಂದರೆ, ಅಲ್ಲಿ ಮೊದಲಕ್ಷರ ಟಿ. ಅದನ್ನು ತೆಗೆದು ಅಮ್ಮಳ್‌ನಾಡ್ ಎಂದು ಚೇಂಜ್ ಮಾಡ್ತಾ ಇದ್ದೀನಿ. ರೈಟ್ ಇಟ್ ಡೌನ್.

ಕೊನೇ ಮಾತು: ಈ ದೇಶಕ್ಕೆ ಯಾರು ಪ್ರಧಾನಿಯಾಗ್ತಾರೋ ಗೊತ್ತಿಲ್ಲ. ಆದರೆ, ಪ್ರಧಾನಿಯಾಗಲು ಮುಂಚೂಣಿ ಯಲ್ಲಿ ನಿಂತವರು ಮೂರೂ ಜನರು ತಾವು ಹೇಳಿಕೊಳ್ಳುವ ಪ್ರಕಾರ, ಅವಿವಾಹಿತರು.

==========
ಫೇಸ್‌ಬುಕ್ಕಿನಲ್ಲಿ ಫೇಸ್-ಟು-ಫೇಸ್
Feb 1, 2014, 04.00AM IST

ಬೆಳಗ್ಗೆ ಎದ್ದು ಫೇಸ್‌ವಾಷ್ ಮಾಡುವ ಮೊದಲೇ ಫೇಸ್‌ಬುಕ್ಕಿಗೆ 'ಲಾಗ್' ಆಗುವುದು ನಮ್ಮ ರಿಪೋರ್ಟರ್ ರ‌್ಯಾಂಬೋ ಚಾಳಿ. ಮನಸ್ಸಿಗೆ ತೋಚಿದ್ದನ್ನು 'ವಾಲ್'ನಲ್ಲಿ ಗೀಚಿ ಪೋಸ್ಟ್ ಮಾಡುತ್ತಾನೆ. ಮುಂದಿನ ಕೆಲಸ ಅವನ 'ಲೈಕ್' ಮೈಂಡಿನ ಜನರದ್ದು. ಒಂದಷ್ಟು 'ಲೈಕ್'ಗಳು, ಇನ್ನೊಂ ದಷ್ಟು ಕಮೆಂಟ್‌ಗಳು. ಅದನ್ನು ನೋಡಿ, ಒಂದಷ್ಟು ಬೀಗುತ್ತಾನೆ; ಕೆಲವರಿಗೆ ರೇಗುತ್ತಾನೆ; ಒಳಗೊಳಗೇ ನಗುತ್ತಾನೆ... ತಾನೆಂಥ ಸೆಲೆಬ್ರಿಟಿ ಎಂದು ಕೊಳ್ಳುತ್ತಾನೆ.

ಇವತ್ತೂ ಸಹ ಹಾಗೇ ಆಯಿತು. ಬೆಳಗ್ಗೆ ಎದ್ದ ತಕ್ಷಣ ರಿಪೋರ್ಟರ್ ರ‌್ಯಾಂಬೊ ಯಥಾಪ್ರಕಾರ ಗೀಚಿದ. ಅವನ 'ಸ್ಟೇಟಸ್ಸೇ' ಬದಲಾಗಿಬಿಡ್ತು! ಯಾರೆಲ್ಲ ರಿಯಾಕ್ಟ್ ಮಾಡಿದರು, ಏನೆಲ್ಲ ಚರ್ಚೆ ನಡೀತು ಗೊತ್ತಾ... ?

ರಿಪೋರ್ಟರ್ ರ‌್ಯಾಂಬೊ: ಡಿಯರ್ ಆಲ್, ನಾನಿವತ್ತು ರಾಹುಲ್ ಗಾಂಧಿ ಇಂಟರ್‌ವ್ಯೆ ಮಾಡ್ತಾ ಇದ್ದೀನಿ...

ರಾಹುಲ್ ಗಾಂಧಿ: ಥ್ಯಾಂಕ್ಯು, ಥ್ಯಾಂಕ್ಯು... ಇದು ದೇಶ ದಲ್ಲಿ ಕಾಂಗ್ರೆಸ್‌ಗೆ ಇರುವ ಪವರ್‌ಗೆ ಸಾಕ್ಷಿ.

ಸೋನಿಯಾ: ಅಲ್ ದಿ ಬೆಸ್ಟ್ ... ಬಿ ಕೇರ್‌ಫುಲ್.

ಮೋದಿ: ಭಾಯ್‌ಯೋ, ಬೆಹನೋ... ಈ ದೇಶದ ಇತಿ ಹಾಸದಲ್ಲಿ ಇದೇ ಮೊದಲ ಸಲ ಪ್ರಿನ್ಸ್ ಇಂಟರ್‌ವ್ಯೆ ಕೊಡ್ತಾ ಇದ್ದಾರೆ.

ಚಿದಂಬರಂ: ಮೋದಿಗೆ ಇತಿಹಾಸ ಗೊತ್ತಿಲ್ಲ. ರಾಹುಲ್ 2004 ಏಪ್ರಿಲ್ 23ಕ್ಕೆ ರಿಡಿಫ್ ಡಾಟ್ ಕಾಮ್‌ಗೆ ಸಂದರ್ಶನ ನೀಡಿದ್ದರು.

ರ‌್ಯಾಂಬೊ: ಓಹೋ, ಓಕೆ.. ಮಿ. ಮಿ. ರಾಹುಲ್ ಗಾಂಧಿ, ನೀವು ಮೋದಿ ಜತೆ ಪಬ್ಲಿಕ್ ಡಿಬೇಟ್‌ಗೆ ರೆಡಿ ಇದ್ದೀರಾ?

ರಾಹುಲ್: ನನ್ನ ಮುಂದೆ ಮೂರು ವಿಷಯ ಇದೆ...

ವೀರಪ್ಪ ಮೊಯಿಲಿ: ಗ್ರೇಟ್. ಎಂಥ ಪ್ರಚಂಡ ಬುದ್ಧಿವಂತಿಕೆ!

ಹರ್ಷ ಮೊಯಿಲಿ: ಅಪ್ಪಾ, ಮೀಡಿಯಾದವರು ಫೋನ್ ಮಾಡಿ ಎತ್ತಿನಹೊಳೆ ಬಗ್ಗೆ ಕೇಳ್ತಾ ಇದ್ದಾರೆ. ಹಾಗೆ ಹೇಳಿದರೆ ಎಂತ?

ಪೂಜಾರಿ: ಎತ್ತಿನಹೊಳೆ ಯೋಜನೆಗೆ ನನ್ನ ವಿರೋಧ ಉಂಟು. ಇದೆಲ್ಲ ನನ್ನನ್ನು ಮಂಗಳೂರಿನಿಂದ ಎತ್ತಿಹಾಕುವ ಪ್ರಯತ್ನ.

ಕೇಜರಿವಾಲ್: ಡೋಂಟ್ ವರಿ ಪೂಜಾರೀಜಿ. ಹಾಗೇನಾ ದರೂ ಆದ್ರೆ, ನಾನು ಟಿಕೆಟ್ ಕೊಡ್ತೀನಿ.

ಸದಾನಂದ ಗೌಡ: ಪ್ರಾಯಶಃ, ನಂಗೂ ಒಂದು ಬೇಕಾಗ ಬ ಹುದು ಅರವಿಂದ್. ಬಿಜೆಪಿಯವರು ಆಟ ಆಡಿಸ್ತಿದ್ದಾರೆ.

ಕೇಜರಿವಾಲ್: ಒಹೋ, ನಮ್ಮತ್ರ ಸಾಕಷ್ಟು ಟಿಕೆಟ್ ಇವೆ. ಒಂದು ಮಿಸ್ಡ್ ಕಾಲ್ ಕೊಡಿ ಸಾಕು.

ಎಲ್ ಕೆ ಅಡ್ವಾಣಿ: ಮಿ. ಗೌಡಾ. ಡೋಂಟ್ ವರಿ ಫಾರ್ ಟಿಕೆಟ್. ಐ ಯಾಮ್ ಹಿಯರ್.

ಧನಂಜಯ್‌ಕುಮಾರ್: ಓಹೋ... ನಿಮ್ಮನ್ನೇ ಹುಡುಕ್ತಿದ್ದೆ... ಐ ಯಾಮ್ ಸ್ಸಾರಿ ಸರ್.

ಕೇಜರಿವಾಲ್: ಸ್ಸಾರಿ ಹೇಳ್ಬೇಕಿರುವುದು ನೀವು ಮಾತ್ರ ಅಲ್ಲ, ಬಿಜೆಪಿ ಮತ್ತು ಕಾಂಗ್ರೆಸ್‌ನೋರು. ಗುಜರಾತ್ ಮತ್ತು ಸಿಖ್ ಗಲಭೆಯನ್ನು ನಾವು ಮರೆತಿಲ್ಲ.

ಟೈಗರ್ ಅಶೋಕ್‌ಕುಮಾರ್: ಕರ್ನಾಟಕ ಪೊಲೀಸರು ಇರುತ್ತಿದ್ದರೆ ಈ ಎರಡೂ ಗಲಾಟೆ ಆಗ್ತಾ ಇರಲಿಲ್ಲ. ಶಂಕರ್ ಬಿದರಿ: ಯೆಸ್, ಯೆಸ್ ಮಿ. ಅಶೋಕ್. ನಿಮ್ಮ ಹೇಳಿಕೆಯನ್ನು ಜನಶಕ್ತಿ ಪಾರ್ಟಿ ಬೆಂಬಲಿಸುತ್ತದೆ.

ಸಿದ್ದರಾಮಯ್ಯ: ಏನದು ಜನಶಕ್ತಿ? ಆ ಜನಶಕ್ತಿ ನಮ್ಮ ಜತೆ ಇದೆ. ಐದು ವರ್ಷ ನಾನು ಬಂಡೆ ತರಹ ಇರ್ತೀನಿ. ನಾವೆಲ್ಲ ಒಗ್ಗಟ್ಟಾಗಿದ್ದೇವೆ.

ಟಿ ಎನ್ ಸೀತಾರಾಮ್: ನೈಸ್ ಡೈಲಾಗ್ ಸರ್, ಇದ್ನ ನಾನು ಮುಂದಿನ ಎಪಿಸೋಡ್‌ನಲ್ಲಿ ತಗೊಳ್ಳಾ?

ಶೋಭಾ ಕರಂದ್ಲಾಜೆ: ಯಡಿಯೂರಪ್ಪನವರು ಬಿಜೆಪಿ ಸೇರಿಕೊಂಡ ಮೇಲೆ ಸಿದ್ದರಾಮಯ್ಯನವರಿಗೆ ಭಯ ಶುರುವಾಗಿದೆ. ಅದಕ್ಕೇ ಈ ಡೈಲಾಗ್.

ಸಿಎಂ ಇಬ್ರಾಹಿಂ: ಏನ್ ಮೇಡಂ ಹಂಗಂತೀರಿ? ಕಾಂಗ್ರೆಸ್‌ನವರಿಗೆ ಭಯ ಅನ್ನೋದೇ ಇಲ್ಲ. ರಾಹುಲ್ ಗಾಂಧೀನೇ ಹೇಳಿಲ್ವೆ, ಮೋದಿಗೆ ಹೆದರಲ್ಲ ಅಂತ. ಇನ್ನು ನಿಮ್ ಯಡಿಯೂರಪ್ಪ ಯಾವ ಲೆಕ್ಕ?

ಯಡಿಯೂರಪ್ಪ: ಏ... ಏನಂದೆ? ಈ ಯಡಿಯೂರಪ್ಪ ಯಾರು ಅಂತ ತೋರಿಸಿಕೊಡ್ತೀನಿ.

ಬಿದರಿ: ಹ್ಹೆ, ಹ್ಹೆ. ಕೋರ್ಟಿಗೆ ಹೋದ್ರೆ ಗೆಲ್ಲೋದು ನಾನು ಮಾತ್ರ. ನೀವಲ್ಲ. ಮರಿಬೇಡಿ.

ರ‌್ಯಾಂಬೊ: ಓಕೆ.. ಓಕೆ.. ಜಾಸ್ತಿ ಮಾತಾಡಿದ್ರೆ ನ್ಯಾಯಾಂಗ ನಿಂದನೆ ಆಗ್ತದೆ. ರಾಹುಲ್‌ಜೀ, ಐ ಹ್ಯಾವ್ ಒನ್ ಸ್ಪೆಸಿಫಿಕ್ ಕೊಶ್ಚನ್. ನೀವು ಉತ್ತರ ಕೊಡ್ಲೇಬೇಕು.

ರಾಹುಲ್: ಸೀ, ನಿಮ್ಮ ಪ್ರಶ್ನೆ ಅರ್ಥವಾಯಿತು. ಆದರೆ, ಫಸ್ಟು ಈ ವ್ಯವಸ್ಥೆ ಬದಲಾಯಿಸಬೇಕು. ಅದಕ್ಕೆ 3 ಪಾಯಿ ಂ ಟ್‌ ಗಳಿವೆ. ಮೊದಲು ಮಹಿಳೆಯರನ್ನು ಬಲಪಡಿಸಬೇಕು.

ರಮ್ಯಾ: ಥ್ಯಾಂಕ್ಯು ರಾಹುಲ್. ನಾನು ಮಂಡ್ಯದಲ್ಲಿ ಮಾಡ್ತಿರೋದು ಅದನ್ನೇ.

ಅಂಬರೀಷ್: ಹೂಂ... ಏನಮ್ಮ ಇದು? ಸುಮ್ನಿರೋಕಾಗಲ್ವ?

ಶಿವರಾಜ್‌ಕುಮಾರ್: ಎಲ್ಲಿದ್ದೀರಿ ಅಂಬಿ ಅಂಕಲ್? ಡಬ್ಬಿಂಗ್ ಬಗ್ಗೆ ಮಾತಾಡ್ತಾನೇ ಇಲ್ಲ. ನಾವೆಲ್ಲ ಡಬ್ಬಿಂಗ್ ವಿರೋಧಿಸಿ ಹೋರಾಟ ಮಾಡ್ತಾ ಇದ್ದೀವಿ. ನಾನು ನಾಲ್ಕನೇ ಕಣ್ಣು ಬಿಡೋಕೆ ರೆಡಿ... ಡಬ್ಬಿಂಗ್ ವಿರೋಧಿಗಳನ್ನೆಲ್ಲ ಜೀವಂತ ದಹನ ಮಾಡಿಬಿಡ್ತೀನಿ.

ಯೋಗರಾಜ್ ಭಟ್: ಸೂಪರ್ ಡೈಲಾಗ್! ಹಿಂದಿ ಬರುತ್ತಾ ಶಿವಣ್ಣ? ಇಬ್ರೂ ಸೇರಿ ಹಿಂದೀಲಿ ಸಿನಿಮಾ ಮಾಡೋಣ್ವಾ?

ಗುರುಪ್ರಸಾದ್: ಆಮೇಲೆ ಕನ್ನಡಕ್ಕೆ ಡಬ್ ಮಾಡೋಣ!

ಮೋದಿ: ಶಿವಣ್ಣ - ''ಜೀವಂತ ದಹನ...' ಕ್ಯಾ ಬಾತ್ ಹೇ!

ರ‌್ಯಾಂಬೊ: ಮೋದೀಜಿ... ಆರ್ ಯೂ ದೇರ್?

ಮೋದಿ: ....

ರ‌್ಯಾಂಬೊ: ಹಲೋ... ಮಿ. ನರೇಂದ್ರ ಮೋದಿ. ಕ್ಯಾನ್ ಯೂ ಹಿಯರ್ ಮಿ? ಇಂಟರ್‌ವ್ಯೆ ಕೊಡ್ತೀರಾ?

ಮೋದಿ: ಭಾಯ್‌ಂಯೋ, ಬೆಹನೋ... ಮೈ...

ರ‌್ಯಾಂಬೊ: ನೋ ಸ್ಪೀಚ್. ಓನ್ಲಿ ಇಂಟರ್‌ವ್ಯೆ

ಮೋದಿ: ನಹೀ.. ನಾನು ದೇಸೀ ಮೀಡಿಯಾಕ್ಕೆ ಇಂಟರ್‌ವ್ಯೆ ಕೊಡೊಲ್ಲ.

ಅನಂತ್‌ಕುಮಾರ್: ವಾಹ್ಹಾ.. ಇದಪ್ಪ ಗಟ್ಟಿತನ! ಮುಂದಿನ ಚುನಾವಣೆಗೆ ಈ ಡೈಲಾಗ್ ಬೇಕಾಗುತ್ತೆ ನಂಗೆ.

ಮೋದಿ: ನನ್ನನ್ನು ಯಾರೂ ಪ್ರಶ್ನೆ ಕೇಳಬಾರದು. ನಾನು ಹೇಳಿದ್ದನ್ನು ಮಾತ್ರ ಕೇಳಬೇಕು. ದಟ್ಸ್ ಫೈನಲ್.

ರಾಜ್‌ನಾಥ್‌ಸಿಂಗ್: ಹಲೋ... ಯಾರು ಪೋಸ್ಟ್ ಮಾಡ್ತಿ ರೋದು? ಮೋದೀಜಿನಾ ಅಥವಾ ಅರ್ನಬ್ ಗೋಸ್ವಾಮೀನಾ?

ಅರುಣ್ ಜೇಟ್ಲಿ: ಇಲ್ಲೇನೋ ನಡೀತಾ ಇದೆ? ಸಮ್‌ಬಡಿ ಈಸ್ ಸ್ನೂಪಿಂಗ್ ಅರ್ ಹ್ಯಾಕಿಂಗ್...

ಮೋದಿ: ಡೋಂಟ್ ಯೂಸ್ ವರ್ಡ್ ಸ್ನೂಪಿಂಗ್- ನನಗೆ ನೋವಾಗ್ತದೆ.

ರ‌್ಯಾಂಬೊ: ನೋ ಪರ್ಸನಲ್ ಪ್ಲೀಸ್. ನಾವು ಅಭಿವದ್ಧಿ ಬಗ್ಗೆ ಮಾತಾಡೋಣ.

ಕೇಜರಿವಾಲ್: ಅದಕ್ಕೆ ಮೊದಲು ನಾವು ಲಿಸ್ಟ್ ಮಾಡ ಬೇಕು. ಕರಪ್ಟ್ ರಾಜಕಾರಣಿಗಳು ಯಾರು ಅಂತ.

ರಾಹುಲ್: ಸಿಸ್ಟಮ್ಮೇ ಕರಪ್ಟಾಗಿದೆ. ಮೊದಲು ಈ ವ್ಯವಸ್ಥೆನಾ ಬದಲಿಸಬೇಕು.

ರ‌್ಯಾಂಬೊ: ನನಗೆ ಹೆಮ್ಮೆ ಅನ್ನಿಸ್ತಿದೆ. ಇಲ್ಲಿ 3 ಪಕ್ಷದ ಪ್ರಮುಖ ನಾಯಕರು ಇದ್ದೀರಿ. ಫೇಸ್-ಟು-ಫೇಸ್ ಡಿಬೇಟ್ ಮಾಡೋಣ.

ಮೋದಿ:.....

ರಾಹುಲ್: ವೈ ಐ ಯಾಮ್ ಹಿಯರ್ ಈಸ್... ಇಷ್ಟು ಹೊತ್ತು ಮಾಡಿದ್ದೇನು? ಡಿಬೇಟೇ ಅಲ್ವೇ? ಥ್ಯಾಂಕ್ಯು.

ಕೇಜರಿವಾಲ್: ನಾಟ್ ನೌ. ನಾನೀಗ ಜಂತರ್‌ಮಂತರ್‌ಗೆ ಧರಣಿಗೆ ಹೋಗ್ತಾ ಇದ್ದೀನಿ. ಆಮೇಲೆ ಸಿಗೋಣ.



Jan 18, 2014, 04.00AM IST

ಅವರ್ಯಾಕೆ ಹಂಗೆ, ಇವರ್ಯಾಕೆ ಹಿಂಗೆ?

ಅಯ್ಯೋ, ಹುಡ್ಗೀರನ್ನ ಅರ್ಥ ಮಾಡಿಕೊಳ್ಳೋಕೇ ಆಗಲ್ಲ.

ಈ ಗಂಡಸರೋ ವೇಸ್ಟ್‌ಬಾಡಿಗಳು ... ?

ನೀವೆಲ್ಲಾದರೂ ಈ ಎರಡು ಕೆಟಗರಿಯೊಳಗೆ ಬಂದರೆ, ಸಾಕಷ್ಟು ಬಾರಿ ಹೀಗಂತ ಹೀಗಳೆದಿರಬಹುದು. ಬಹುಶಃ ಕಳೆದ ತಿಂಗಳು ಪೆನ್ಸಿಲ್ವೇನಿಯಾ ವಿವಿಯಿಂದ ಬಂದ ಸಂಶೋಧನಾ ವರದಿ ಯೊಂದನ್ನು ಓದಿದರೆ ನಿಮ್ಮ 'ಬಯ್ಯೋಲಜಿ' ಕೊಂಚ ಕಡಿಮೆ ಯಾಗಬಹುದು. ಏಕೆಂದರೆ, ಇದಕ್ಕೆಲ್ಲ ಕಾರಣ ಬಯೋಲಜಿ ಎನ್ನುತ್ತಾರೆ ಅಲ್ಲಿನ ತಜ್ಞರು.

ಅವರು ಮಾಡಿದ್ದೇನು ಗೊತ್ತೇ? ಆಯ್ದ ಪುರುಷರು ಮತ್ತು ಮಹಿಳೆಯರ ಮೆದುಳನ್ನು (ಎಲ್ಲಿಂದ ಸಿಕ್ತೋ ಗೊತ್ತಿಲ್ಲ) ಸ್ಟಡಿ ಮಾಡಿದರು. ಆಗ ಅವರಿಗೆ ಗೊತ್ತಾಗಿದ್ದು ಹಲವು ಸ್ವಾರಸ್ಯಕರ ಸಂಗತಿಗಳು. ಇವರಿಬ್ಬರ ಮೆದುಳಿನ ರಚನೆಯಲ್ಲೇ ಭಾರಿ ವ್ಯತ್ಯಾಸ ಇದೆ. ಮಹಿಳೆಯರ ಎಡ ಮತ್ತು ಬಲ ಮೆದುಳಿನ ನಡುವೆ ಕನೆಕ್ಷನ್ ಜಾಸ್ತಿ ಇರುತ್ತದೆಯಂತೆ; ಆದರೆ ಪುರುಷರಲ್ಲಿ ಕ್ರಾಸ್ ಕನೆಕ್ಷನ್ ಜಾಸ್ತಿ ಇಲ್ವಂತೆ. ಹೀಗಾಗಿ ವನಿತೆಯರು ಮಲ್ಟಿಟಾಸ್ಕಿಂಗ್‌ನಲ್ಲಿ ಪರಿ ಣತರಂತೆ. ಈಗ ಗೊತ್ತಾಯ್ತ, ಮಕ್ಕಳನ್ನು ನಿಭಾಯಿಸಿ ಕೊಂಡು, ಅತ್ತ ಅತ್ತೆ- ಮಾವರನ್ನೂ ಸಂಭಾಳಿಸಿಕೊಂಡು, ಗಂಡ ಎಂಬ ಪ್ರಾಣಿಯನ್ನೂ ಪ್ರೀತಿಸಿ ಕೊಂಡು, ಆಫೀಸಿನಲ್ಲಿ ಬಾಸ್‌ನ್ನೂ ಕಂಟ್ರೋಲ್ ಇಡಲು ಸಾಧ್ಯ ಆಗಿರೋದು ಯಾಕೆ ಅಂತ!

ಆದರೆ ಪುರುಷರು ತುಂಬಾ ಅಗ್ರೆಸ್ಸಿವ್, ಮಹಿಳೆಯರು ಯಾಕೆ ಅಳುಮುಂಜಿಗಳು ಅನ್ನೋ ಪ್ರಶ್ನೇನ ಕೆಲವು ಪುರುಷ ಪತ್ರಕರ್ತರು ಆ ವಿಜ್ಞಾನಿಗಳನ್ನು ಕೇಳಿದರಂತೆ. ಅವರು ಅವರು ಹೇಳಿದ್ದಿಷ್ಟು- ಒತ್ತಡ ಬಂದಾಗ ಮನುಷ್ಯನಲ್ಲಿ ಆಕ್ಸಿಟೋಸಿನ್ ಎಂಬ ಹಾರ್ಮೋನ್ ಉತ್ಪಾದನೆಯಾಗುತ್ತದೆ. ಗಂಡಸರಲ್ಲಿ ಸಾಮಾನ್ಯ ವಾಗಿ ಉತ್ಪಾದನೆಯಾಗುವ ಟೆಸ್ಟೋಸ್ಟಿರಾನ್ ಹಾರ್ಮೋನ್, ಈ ಆಕ್ಸಿಟೋಸಿನ್ ಪ್ರಭಾವವನ್ನು ಕಡಿಮೆ ಮಾಡು ತ್ತದೆ. ಹೀಗಾಗಿ ಗಂಡಸು ಜಿದ್ದಿಗೆ ಇಳಿಯುತ್ತಾನೆ; ಮಾತೆತ್ತಿದರೆ ಜಗಳಕ್ಕೆ ಇಳಿಯುತ್ತಾನೆ. ಆದರೆ, ಮಹಿಳೆಯರಲ್ಲಿ ಉತ್ಪಾ ದನೆಯಾಗುವ ಈಸ್ಟ್ರೋಜನ್‌ನಿಂದ ಆಕ್ಸಿಟೋಸಿನ್ ಪ್ರಭಾವ ಹೆಚ್ಚುತ್ತದೆ. ಹಾಗಾಗಿ, ಕೂಲಾಗಿರುತ್ತಾರೆ; ಕೆಲವೊಮ್ಮೆ ಅಧೀರರಾಗಿಬಿಡುತ್ತಾರೆ ಅಂತ. ಈ ವರದಿಯನ್ನು ನಂಬ್ತೀರೋ ಬಿಡ್ತೀರೋ? ಅದರ ಮೇಲೆ ನಿಮ್ಮ ಲಿಂಗ ನಿರ್ಧರಿಸ ಬಹುದು. ನಂಬಿದರೆ ಮಹಿಳೆಯರು, ನಂಬದಿದ್ದರೆ ಪುರುಷರು!

ಇರ್ಲಿ ಬಿಡಿ, ಗಂಡಸರಿಗೂ ಒಂದು ಸಮಾಧಾನಕರ ವಿಷಯ ಇದೆ- ಪುರುಷರಲ್ಲಿ ಶೇ 4ರಷ್ಟು ಹೆಚ್ಚು ಮೆದುಳಿನ ಕೋಶಗಳಿರುತ್ತವೆ ಹಾಗೂ ಮೆದುಳಿನ ಅಂಗಾಂಶ ನೂರು ಗ್ರಾಂ ಹೆಚ್ಚಂತೆ. 'ಹೆಡ್ ವೆಯ್ಟ್' ಅನ್ನೋದು ಇದಕ್ಕೇನಾ? ಒಂದಂತೂ ಸತ್ಯ, ಪುರುಷರು- ಮಹಿಳೆಯರ ಮೆದುಳಿನ ರಚನೆಯೇ ಬೇರೆ ಬೇರೆ ಇರೋದರಿಂದ ಅವರ ವರ್ತನೆ ಯಲ್ಲೂ ಸಹಜವಾದ ವ್ಯತ್ಯಾಸಗಳಿವೆ. ಇವರಿಬ್ಬರ ನಡುವಿನ ಡಿಫ ರೆನ್ಸ್‌ಗಳ ಕುರಿತು ಅಲ್ಲಿಲ್ಲಿ ಓದಿದ್ದು, ಕಂಡದ್ದು, ಅನುಭವಿಸಿದ್ದರ ಸಾರ ಇಲ್ಲಿದೆ. ಓದಿ, ಮರೆತು ಬಿಡಿ..

* ನಾವು ಇಬ್ಬರು ಅನ್ಯೋನ್ಯವಾಗಿದ್ದೇವೆ ಎಂದು ಗಂಡ ಹೆಂಡತಿ ಇಬ್ಬರೂ ಹೇಳಿದರೆ ಕೊಂಚ ಅನುಮಾನಪಡಿ. (ಶಶಿ ತರೂರ್-ಪುಷ್ಕರ್‌ನ ಯಾಕೆ ನೆನಪಿಸಿ ಸ್ಕೋತೀರಿ?)

* ವಾಗ್ವಾದದಲ್ಲಿ ಹೆಂಡತಿಯದು ಸದಾ ಕೊನೆಯ ಮಾತು; ಗಂಡನ ಯಾವುದೇ ಒಂದು ಮಾತು ಹೊಸ ವಾಗ್ವಾದಕ್ಕೆ ಮುನ್ನುಡಿ.

* ಹೆಂಡತಿಯ ಬರ್ತ್‌ಡೇ ನೆನಪಲ್ಲಿಟ್ಟುಕೊಳ್ಳಲು ಏನು ಮಾಡಬೇಕು?

- ಒಂದು ಸಲ ಮರೆತುಬಿಡಿ. ಮುಂದೆ ಲೈಫಲ್ಲಿ ಆ ದಿನ ಮರೆಯದಂತೆ ಮಾಡುತ್ತಾಳೆ.

* ಗಂಡನ ಬರ್ತ್‌ಡೇ ಮರೆತರೆ ಏನು ಮಾಡಬೇಕು?

- ಡೈಲಿ ಆತನ ಮೊಬೈಲ್ ಇನ್‌ಬಾಕ್ಸ್ ನೋಡ್ತಿರಿ. 'ಹಳೇ ನಂಬರ್'ನಿಂದ ವಿಷ್ ಬರಬಹುದು

* ಈಗಿನ ಕಾಲೇಜು ಹುಡುಗೀರು ಸಿಕ್ಕಾಪಟ್ಟೆ ಬ್ರಿಲಿಯಂಟ್

- ಅವರ ಮೊಬೈಲಲ್ಲಿ ಕರೆನ್ಸೀನೇ ಇರೋದಿಲ್ಲ; ಯಾವಾಗಲೂ ಇನ್‌ಕಮಿಂಗ್ ಕಾಲೇ..

* ಕಾಲೇಜು ಹುಡುಗರೂ ಸಿಕ್ಕಾಪಟ್ಟೆ ಫಾಸ್ಟ್

- ಏಕ ಕಾಲಕ್ಕೆ ನಾಲ್ಕು ಹುಡ್ಗೀರ ಜತೆ ಮಾತಾಡಬಲ್ಲರು. ಒಬ್ಬಳಿಂದ ಪ್ರೊಜೆಕ್ಟ್ ವರ್ಕ್, ಮತ್ತೊಬ್ಬಳಿಂದ ನೋಟ್‌ಬುಕ್... ಹೀಗೆ ಕ್ಲಾಸಿಗೆ ಹೋಗದೆ ಸ್ಟಡಿ ಮಾಡ್ತಾರೆ.

* ಹೆಂಡತಿ ಖರ್ಚಿಗೆ ಬೇಕಷ್ಟು ಖರ್ಚು ಮಾಡಬಲ್ಲವ ಯಶಸ್ವೀ ಪುರುಷ; ಅಂತಹ ಗಂಡನನ್ನು ಹುಡುಕಿಕೊಂಡ ವಳು ಯಶಸ್ವೀ ಮಹಿಳೆ.

* ಹೆಂಡತಿಗೂ ಗರ್ಲ್ ಫ್ರೆಂಡ್‌ಗೂ ವ್ಯತ್ಯಾಸ- 20 ಕೆಜಿ

* ಗಂಡನಿಗೂ ಬಾಯ್‌ಫ್ರೆಂಡ್‌ಗೂ ವ್ಯತ್ಯಾಸ- 2 ಲಕ್ಷ ರೂ

* ಹೆಂಡತಿ ಕೆಎಸ್‌ಆರ್‌ಟಿಸಿ ಬಸ್ ಇದ್ದ ಹಾಗೆ

- ನೋ ಚೇಂಜ್. ಮದ್ವೆಯಾದ ಮೇಲೆ ಚೇಂಜ್ ಇಲ್ಲ; ಕಂಡಕ್ಟರನ ಹತ್ರನೂ ಯಾವಾಗಲೂ ಚೇಂಜಿರೊದಿಲ್ಲ.

ಗಂಡ ಪ್ರೈವೇಟ್ ಬಸ್ ಇದ್ದ ಹಾಗೆ

- ಕೈ ತೋರಿಸಿದಲ್ಲೆಲ್ಲ ನಿಲ್ಲಿಸುತ್ತದೆ; ಸಿಕ್ಕಸಿಕ್ಕವರನ್ನೆಲ್ಲ ಹತ್ತಿಸಿಕೊಂಡು ಹೋಗುತ್ತೆ.

* ಒಂದು ಟಿಪ್ಸ್: ಟಾಪ್ ಮೋಸ್ಟ್ ಸೀಕ್ರೆಟ್‌ನ ಮಹಿಳೆಯರಿಗೆ ಹೇಳಬೇಡಿ; ತುಂಬಾ ಎಮರ್ಜೆನ್ಸಿ ಮತ್ತು ಗಂಭೀರ ಮೆಸೇಜ್‌ನ ಪುರುಷರಿಗೆ ಕೊಡಬೇಡಿ.

* ಗಂಡ ಯಾವಾಗಲೂ ಕಸ್ಟಮರ್ ಕೇರ್ ಇದ್ದ ಹಾಗೆ. ಹೆಂಡತಿ ಜತೆ ಮಾತಿಗೇ ಸಿಗೊಲ್ಲ. ಕಾಲ್ ಮಾಡಿದ್ರೆ ಒಂದು ಒತ್ತಿ, ಎರಡು ಒತ್ತಿ ಎಂದೆಲ್ಲ ಬರುತ್ತದೆ. ಇನ್ನೇನು ಮಾತನಾ ಡಬೇಕು ಎನ್ನುವಷ್ಟರಲ್ಲಿ ಲೈನ್ ಡಿಸ್‌ಕನೆಕ್ಟ್ ಆಗ್ತದೆ.

* ಹೆಂಡತಿ ಬಸ್‌ನಲ್ಲಿರುವ ಎಫ್‌ಎಂ ರೇಡಿಯೋದಂತೆ. ತಲೆನೋವಾದರೂ ಆಫ್ ಮಾಡೊಕ್ಕಾಗಲ್ಲ.

* ಗಂಡಿನ ಮನಸ್ಸು ಹೆಣ್ಣಿಗೂ, ಹೆಣ್ಣಿನ ಮನಸ್ಸು ಗಂಡಿಗೂ ಯಾವಾಗಲೂ ಅರ್ಥ ಆಗೊಲ್ಲ.

- ಹುಡುಗ ಲವ್ ಮಾಡಿದ್ರೆ, ಇವಳು ಫ್ರೆಂಡ್‌ಶಿಪ್ ಅನ್ಕೊತ್ತಾಳೆ; ಬೇರೆ ಹುಡ್ಗೀ ಜತೆ ಫ್ರೆಂಡ್‌ಶಿಪ್ ಮಾಡಿದ್ರೆ ಇವಳೇ ಈಗ ಲವ್ ಅನ್ಕೋತಾಳೆ.

* ಹೆಂಡತಿಗೂ ಎಲ್‌ಐಸಿಗೂ ಹೋಲಿಕೆ, ವ್ಯತ್ಯಾಸ ಏನು?

ಹೋಲಿಕೆ: ಎಲ್‌ಐಸಿ ಸ್ಲೋಗನ್ ತರ ಹೆಂಡ್ತಿ ಜಿಂದಗಿ ಕೀ ಸಾಥ್ ಭೀ, ಜಿಂದಗೀ ಕೆ ಬಾದ್ ಭೀ ಅಂತಾಳೆ. ವ್ಯತ್ಯಾಸ: ಇನ್ಸೂರೆನ್ಸ್ ಪಾಲಿಸಿ ಮೆಚ್ಯೂರ್ ಆಗ್ತದೆ.

* ಗಂಡ ಯಾವಾಗಲೂ ಎಸ್‌ಬಿಐ ಡೆಬಿಟ್ ಕಾರ್ಡ್ ತರಹ. ಯಾಕೆ ಗೊತ್ತಾ?

ಎಸ್‌ಬಿಐ ಡೆಬಿಟ್ ಕಾರ್ಡ್ ಸ್ಲೋಗನ್- ವೆಲ್ ಕಮ್ ಟು ಕ್ಯಾಷ್ ಲೆಸ್ ವರ್ಲ್ಡ್ ಅಂತ. ಇವನದೂ ಅದೇ ಕತೆ.

* ಈಗ ವಧು-ವರ ಪರೀಕ್ಷೆ ಎಲ್ಲ ಉಲ್ಟಾ
ಹುಡುಗಿ ಕೇಳ್ತಾಳೆ- ಅಡುಗೆ ಮಾಡೋಕೆ ಬರುತ್ತಂತಾ?

ಹುಡುಗ ಕೇಳ್ತಾನೆ- ಎಷ್ಟು ಅರ್ನ್ ಮಾಡ್ತಾಳೆ ಅಂತೆ?

* ಗಂಡ ಸದಾ ಭವಿಷ್ಯದ ಬಗ್ಗೆ ಯೋಚನೆ ಮಾಡ್ತಾನೆ

- ಏನು ಕೇಳಿದರೂ ನಾಳೆ ಮಾಡೋಣ ಅಂತಾನೆ

* ಹೆಂಡತಿ ಯಾವಾಗಲೂ ಹಿಸ್ಟರಿ ಬಗ್ಗೆ ಯೋಚಿಸ್ತಾಳೆ

- ಮಾತೆತ್ತಿದರೆ, ತವರು ಮನೇಲಿ ಹೆಂಗಿತ್ತು ಗೊತ್ತಾ ಅಂತಾಳೆ

* ವಯಸ್ಸಾದ ಹೆಂಡತಿಗೂ ಸೇವಿಂಗ್ಸ್ ಖಾತೆಗೆ ಹೋಲಿಕೆ ಯೊಂದಿದೆ ಗೊತ್ತಾ?

- ಎರಡಕ್ಕೂ ತಿಂಗಳಿಗೊಮ್ಮೆ ಇಂಟ್ರೆಸ್ಟ್ ಬರುತ್ತೆ.

* ಚಿನ್ನ, ಮುತ್ತು ಎಂದರೆ ಇಬ್ಬರಿಗೂ ಪ್ರಾಣ- ಅರ್ಥ ಬೇರೆ.

* ಆಟಕ್ಕೂ ಲಿಂಗ ಇದ್ಯಾ? ಹೌದು ಕ್ರಿಕೆಟ್ ಹೆಣ್ಣು; ಫುಟ್‌ಬಾಲ್ ಗಂಡು.

- ಏಕೆಂದರೆ, ಕ್ರಿಕೆಟ್‌ನ್ನು ನೋಡುವವರು ಗಂಡಸರೇ ಹೆಚ್ಚು; ಫುಟ್‌ಬಾಲ್‌ನಲ್ಲಿ ಒಂದು ಬಾಲಿಗೆ ಎಷ್ಟೊಂದು ಜನ ಓಡಾಡ್ತಾರೆ! (ಹುಡುಗರೂ ಹಾಗೆನೇ ಅಲ್ವೇ)

* ಗಂಡು ಹೆಣ್ಣಿನ ಬಗ್ಗೆ ನಿಮ್ಮ ಅಭಿಪ್ರಾಯ ಹೇಳಿ ಎಂದರೆ ಗಣ್ಯರು ಏನು ಹೇಳಬಹುದು?

ಹೆಣ್ಣನ್ನ ಲವ್ ಮಾಡಿ, ಮದುವೆಯಾಗಬೇಡಿ- ರಾಹುಲ್

ಹೆಣ್ಣನ್ನ ಮದುವೆಯಾಗಿ, ಲವ್ ಮಾಡಬೇಡಿ- ಮೋದಿ

ಗಂಡಸರನ್ನ ನಂಬಬಾರದು- ಹತಿಕ್ ರೋಷನ್ ಪತ್ನಿಸುಜಾನೆ

ಗಂಡನ ಮೇಲೆ ಕಣ್ಣಿಡಿ- ನಟಿಯೊಬ್ಬಳ ಜತೆ ಸಂಪರ್ಕ ಇಟ್ಟುಕೊಂಡ ಫ್ರಾನ್ಸ್ ಅಧ್ಯಕ್ಷ ಹಾಲಂಡ್‌ನ ಹೆಂಡತಿ ಟ್ರಯರ್‌ವಿಲರ್

======
ಪೆಗ್ಗು, ಪಿಗ್ಗು ಮತ್ತು ಕನ್ನಡದ ಹಿಗ್ಗು
Jan 4, 2014, 04.42AM IST
ಮುಂದಿನ ವಾರ ಮಡಿಕೇರಿ ಜಾತ್ರೆ. ಉತ್ತರದ ಬಿಜಾಪುರದಲ್ಲಿ ಕರಗಿ ಹೋದ ಕನ್ನಡದ ಸಾಹಿತ್ಯಾಭಿಮಾನಿಗಳೆಲ್ಲ ದಕ್ಷಿಣದ ಕಾಶ್ಮೀರದಲ್ಲಿ ಸಂಗಮ ಗೊಳ್ಳು ತ್ತಾರೆ. ಕನ್ನಡದ ತೇರು ಎಳೆಯುತ್ತೇವೆ ಎಂದು ಬರುವ ವರು ಒಂದಷ್ಟು ಜನ; ಟೂರ್ ಹೊಡೆಯೋಣ ಎಂದು ಬರುವ ವರು ಇನ್ನೊಂದಿಷ್ಟು ಜನ; ಬೋರ್ ಹೊಡೆಯುತ್ತಿದೆ ಎಂದು ಬರುವವರು ಮತ್ತೊಂದಷ್ಟು ಮಂದಿ... ಪುಸ್ತಕ ಮಾರ ಲಿಕ್ಕೆ, ಕೊಳ್ಳಲಿಕ್ಕೆ ಕೆಲವರು ಬಂದರೆ, ವಾರ್ಡ್‌ರೋಬಿನಲ್ಲಿಟ್ಟ ಜುಬ್ಬಾದ ದೂಳು ಹೊಡೆದು ಪ್ರೇಕ್ಷಕರ ಗೋಳು ಹೊಯ್ಯಲಿಕ್ಕೇ ಕೆಲವರು ಬರುತ್ತಾರೆ. ಇಷ್ಟೂ ಸಾಹಿತ್ಯ ಸಮ್ಮೇಳನದಲ್ಲಿ ಭಾಗವ ಹಿ ಸಿದೆ ಎಂದು ರೆಕಾರ್ಡ್ ಬ್ರೇಕ್ ಮಾಡಲು ಬರುವವರೂ ಒಂದಷ್ಟು ಜನ.

ಯಾವಾಗಲೂ ತಣ್ಣಗೆ ಮಲಗಿಕೊಂಡಿರುವ ಕೊಡಗು ಈಗ ದಡಕ್ಕನೆ ಎದ್ದು ನಿಂತುಕೊಂಡಿದೆ. ಪಾಪ್‌ಕಾರ್ನ್, ಪಾನಿ ಪೂರಿ, ಪಿಂಟ್, ಪೋರ್ಕ್... ಹೀಗೆ ಎಲ್ಲವನ್ನೂ ಮಾರಲು ಕೂರ್ಗ್ ಸಜ್ಜಾಗಿದೆ. ಹೋಮ್‌ಸ್ಟೇ ವೈನಾಗಿದೆ; ಕಾಫಿ ಹಣ್ಣಾಗಿದೆ. ವಿಶೇಷ ಎಂದರೆ, ಅವತ್ತು ಭೀಮೆಯಲ್ಲಿ ಹರಿಬಿಟ್ಟ ಸಮ್ಮೇಳನದ ನಿರ್ಣಯ ನಾಡಿದ್ದು ಕಾವೇರಿಯಲ್ಲಿ ಮೇಲೇಳು ತ್ತದೆ. ಇದೊಂದು ನಿಜಕ್ಕೂ ಪವಾಡ! ಆ ಪವಾಡ ನೋಡಲಿ ಕ್ಕೆಂದೇ ಸಾವಿರಾರು ಜನ ಸೇರುವುದು. ಪ್ರತಿ ಸಮ್ಮೇಳನದಲ್ಲೂ ಅದದೇ ನಿರ್ಣಯ ಜೀವ ಪಡೆದುಕೊಳ್ಳುತ್ತದೆ; ಆ ನಂತರ ಸಾಯು ತ್ತದೆ. ಇನ್ನೊಂದು ಕಡೆ ಹುಟ್ಟಿಕೊಳ್ಳುತ್ತದೆ... ಪುನರಪಿ ಜನನಂ ಪುನರಪಿ ಮರಣಂ. ನಿರ್ಣಯ ಅಮರ್ ರಹೇ.

ಇರಲಿ, ಈ ಸಾಹಿತ್ಯ ಸಮ್ಮೇಳನಕ್ಕೆ ಇನ್ನೇನು ಮೂರು ದಿನ ಗಳಷ್ಟೇ ಇರುವಾಗ ಕನ್ನಡದ ಶ್ರೀಮಂತ ಸಾಹಿತಿ ಡಾ ಚೀಪು (ಚೀರನ ಹಳ್ಳಿ ಪುಟ್ಟಣ್ಣ) ಅವರು ಮಾತಿಗೆ ಸಿಕ್ಕರು. ತಮ್ಮ ಜೀವಿ ತಾವಧಿಯಲ್ಲಿ 50 ಸಮ್ಮೇಳನಗಳನ್ನು ಕಂಡ ಇವರು, ಅಷ್ಟೂ ಸಮ್ಮೇಳನಗಳಲ್ಲಿ ಕೊರೆದಿದ್ದಾರೆ. ನಂತರ ಅದನ್ನೇ ಬರೆದಿದ್ದಾರೆ. ಪುಸ್ತಕ ಮಾಡಿ ಮಾರಿದ್ದಾರೆ. ಲಾಭ ಎಷ್ಟಾಯಿತೋ ತಿಳಿ ಯದು. ಆದರೆ, ಅವರ 'ಸಮಗ್ರ ಕೃತಿ'ಯ ಸೈಜು ಮಾತ್ರ ಜಾಸ್ತಿ ಯಾಗಿದೆ. ಮುಂದಿನ ಸಮ್ಮೇಳನದಲ್ಲಾ ದರೂ ಮೆರವಣಿಗೆ ಹೋಗುವ ಅವಕಾಶ ಸಿಗುತ್ತದೆ ಎಂದು ನಿರಂತರ ಪ್ರಯತ್ನ ಮಾಡುತ್ತಿರುವ ಸಾಧಕ.

ಅವರೊಡಗಿನ ಮಾತುಕತೆ ಹೀಗಿದೆ:

ಪ್ರಶ್ನೆ: ನಮಸ್ಕಾರ. ಸ್ವಾಮಿ ನೀವು ರೈಟೋ, ಲೆಫ್ಟೋ? ಯಾವ ಸೀಮೆ ಸಾಹಿತಿ?

ಚೀಪು: ನನ್ನದು ರೈಟೂ ಅಲ್ಲ, ಲೆಫ್ಟೂ ಅಲ್ಲ... ಟೈಟು ಸಾಹಿತ್ಯ ಮತ್ತು ಸೈಟು ಸಾಹಿತ್ಯ.

ಪ್ರಶ್ನೆ: ಅಂದರೆ, ಟೈಟು ಅಂದರೆ ನೀವು ಮದ್ಯದ ಬಗ್ಗೆ ಹೇಳ್ತಾ ಇದ್ದೀರಾ?

ಚೀಪು: ಹೌದು ಸ್ವಾಮಿ. ನಾನು ಎಡದವನೂ ಅಲ್ಲ; ಬಲದವನೂ ಅಲ್ಲ 'ಮದ್ಯ'ಮ ವರ್ಗದವ. ಇದಿರಲಿ ಇದ್ದರೆ ಮದ್ಯ ಹೊಳೆಯುತ್ತದೆ ಪದ್ಯ; ಮದ್ಯ ಇಲ್ಲದೇ ಇದ್ದರೆ ಅದೆಲ್ಲವೂ ನೀ-ರಸ ಗದ್ಯ.

ಪ್ರಶ್ನೆ: ಸೈಟು ಸಾಹಿತ್ಯ ಅಂದರೆ...?

ಚೀಪು: ಅದು ಸಾಹಿತ್ಯ ಬರೆದ ಮೇಲೆ ಸರಕಾರ ಕೊಡೋ ಪುರಸ್ಕಾರ. ಒಂಥರಾ ಕೆಟಗರಿ; ನಮ್ಮ ಸಾಧನೆಗೆ ಮತ್ತೊಂದು ಗರಿ. (ಕೊಂಚ ನಡುಗಿದ ದನಿ)

ಪ್ರಶ್ನೆ: ಅದ್ಸರಿ, ಈಗ್ಯಾಕೆ ನಡುಗ್ತಾ ಇದ್ದೀರಿ?

ಚೀಪು: ಮಡಿಕೇರಿ ಎಂದರೆ ನಡುಕ ಶುರು ವಾಗಿದೆ. ತಾಪಮಾನ 8 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆಯಂತೆ. ಹೇಗಿರಲಿ ಅಲ್ಲಿ? ಹೀಗಾಗಿ, ಸಮ್ಮೇಳನ ಸಮಿತಿಗೆ ನನ್ನದ್ದೊಂದು ಆಗ್ರಹ ಇದೆ. ರಾತ್ರಿ ಮೇಲೆ ಮಲಗಲು ಸಿಂಗಲ್ ಕಾಟ್, ಡಬಲ್ ರಗ್, ತ್ರಿಬಲ್ ಎಕ್ಸ್ ರಮ್ ಕಡ್ಡಾಯವಾಗಿ ಕೊಡಬೇಕು.

ಪ್ರಶ್ನೆ: ಮೊದಲೇ ಕನ್ನಡ ಸಾಹಿತ್ಯ ಪರಿಷತ್ ಕಾಸಿಲ್ಲದೆ ಪಾಪರ್ ಪರಿಷತ್ ಆಗಿದೆ.. ಅಂಥದ್ದರಲ್ಲಿ...?

ಚೀಪು: ಇದಕ್ಕೆ ಹೆಚ್ಚಿನ ಹಣ ಬೇಕಾಗೋದಿಲ್ಲಾರೀ. ಅವ್ರ ಅಧ್ಯಕ್ಷರು ಹಾಲಂಬಿ... ಆಲ್ಕೋಹಾಲಂಬಿ ಅಲ್ಲ.. ಹಾಗಾಗಿ ಅವರಿಗೆ ತಿಳಿಯೋದಿಲ್ಲ. ಮೂರೂ ದಿನವೂ ರಾತ್ರಿ ನುಡಿಸಿರಿ ತರಹ 'ಕುಡಿಸಿರಿ' ಪ್ರೋಗ್ರಾಮ್ ಅರೇಂಜ್ ಮಾಡಲಿ. ಬಂದ ಪ್ರತಿನಿಧಿಗಳಿಗೆಲ್ಲ ಹೊಟ್ಟೆತುಂಬಾ ಕುಡಿಸಲಿ. ಆಮೇಲೆ ನೋಡಲಿ... ಯಾರೂ ಊಟ ಕೇಳೋದಿಲ್ಲ. ಎಲ್ರೂ ತೇಲ್ತಾ ಇರ್ತಾರೆ. ಮಡಿಕೇರಿ ಮೇಲ್ ಮಂಜು; ಕಿಕ್ ಮೇಲ್ ಕಿಕ್! ರಾತ್ರಿಯ ಕಿಕ್ ಮರುದಿನವೂ ಮುಂದುವರೀತದೆ. ಹಾಟ್ ಹಾಟ್ ಡಿಸ್ಕಷನ್ ನಡೀತದೆ. ವಾತಾವರಣ ಕಾವೇರುತ್ತದೆ. ಮಡಿಕೇರಿ ಚಳಿ ಓಡುತ್ತದೆ; ಕನ್ನಡ ಬಿಸಿಯಾಗುತ್ತದೆ...

ಪ್ರಶ್ನೆ: ಅದೆಲ್ಲ ಸರಿ, ಕನ್ನಡ ಸಾಹಿತ್ಯ ಪರಿಷತ್‌ನ ಆರ್ಥಿಕ ಸಂಕಷ್ಟವನ್ನು ನಿವಾರಿಸೋದು ಹೇಗೆ?

ಚೀಪು: ಹಂಗ್ ಬನ್ನಿ ದಾರಿಗೆ. ಅದ್ಕೂ ದಾರಿ ಇದೆ. ಎಲ್ಲರೂ ಒಂದಾಗಬೇಕು; ಒಂದೇ ದನಿಯಲ್ಲಿ ಮಾತಾಡಬೇಕು. ಅನಂತ್‌ ಕುಮಾರ್-ಯಡಿಯೂರಪ್ಪ ಒಂದಾಗಿಲ್ವೇ? ಹಂಗೆನೇ ಎಲ್ಲ ಸಾಹಿತಿಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಸೈಡಿಗೊತ್ತಿ ಎಲ್ಲರೂ ಕನ್ನಡಕ್ಕೆ ಜೈ ಅನ್ನಬೇಕು.

ಎಲ್ಲರೂ ಸೇರಿ ಕನ್ನಡದ ಉಳಿವಿಗೆ ಫಂಡ್ ರೈಸ್ ಮಾಡ ಬೇಕು. ಆಮ್ ಆದ್ಮಿ ಪಾರ್ಟಿ ಮಾಡ್ಲಿಲ್ವೆ? ಹಂಗೆನೇ ಎಲ್ಲೆಲ್ಲಿಂ ದಲೋ ದುಡ್ಡು ಕಲೆಕ್ಟ್ ಮಾಡಬೇಕು; ಗೊರಕೆ ಹೊಡೆ ಯೋ ರನ್ನ ಪೊರಕೆಯಿಂದ ಗುಡಿಸಿ ಓಡಿಸಬೇಕು. ಆಗ ನೋಡಿ, ಕನ್ನಡ ಸಾಹಿತ್ಯ ಪರಿಷತ್ ಮರುಜೀವ ಪಡೆದುಕೊಳ್ಳುತ್ತೆ. ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್, ರೋಷನ್ ಬೇಗ ತರಹ ಕಸಾಪಕ್ಕೂ ಮತ್ತೆ 'ಒಳ್ಳೇ ಕಾಲ' ಬರುತ್ತೆ!

ಪ್ರಶ್ನೆ: ಕನ್ನಡ ಸಾಹಿತಿಗಳು ರಾಜಕೀಯ ಮಾಡ್ತಾರೆ ಅನ್ನೋ ಮಾತಿದೆಯಲ್ಲ? ನೀವೇನಂತೀರಿ?

ಚೀಪು: ಸಾಹಿತ್ಯ ಮತ್ತು ರಾಜಕೀಯ ಬೇರೆ ಬೇರೆ ಮಾಡೊಕ್ಕಾಗಲ್ಲ. ಬಹುಶಃ ರಾಜಕಾರಣಿಗಳಿಗೆ ರಾಜಕೀಯ ಮಾಡ್ಲಿಕ್ಕೆ ಹೇಳಿ ಕೊಟ್ಟವರೇ ನಮ್ಮಂಥ ಸಾಹಿತಿಗಳು, ಬರಹಗಾರರು, ಕವಿಗಳು. ಬರಹಗಾರರಾದ ವಿನ್‌ಸ್ಟನ್ ಚರ್ಚಿಲ್, ನಮ್ಮ ಪಂಪ, ನೆರೂಡ, ಜೆಫ್ರಿ ಆರ್ಚರ್ ರಾಜಕಾರಣದಲ್ಲೂ ಪಳಗಿದವರು. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಒಂದು ಕಾಲದಲ್ಲಿ ಬರಹಗಾರರೇ. ಅದೆಲ್ಲ ಹೋಗಲಿ, ಮಹಾಭಾರತದ ಕೃಷ್ಣ ಒಬ್ಬ ಪಕ್ಕಾ ರಾಜಕಾರಣಿ ಅಲ್ವೇ? ಯುದ್ಧಭೂಮಿಯಲ್ಲಿ ನಿಂತು ಕಾವ್ಯ ಹೇಳಿದ ಮಹಾನ್ ಕವಿಯೂ ಅವನೇ ಅಲ್ಲವೇ? ನೀವೇ ಹೇಳಿ...

ಪ್ರಶ್ನೆ: ಕನ್ನಡದಲ್ಲಿ ನವ್ಯ, ನವ್ಯೋತ್ತರ ನಂತರ ಹೊಸ ಸಾಹಿತ್ಯ ಪ್ರಕಾರ ಏಕೆ ಹುಟ್ಟಿಕೊಳ್ಳುತ್ತಿಲ್ಲ ಚೀಪು ಅವರೇ?

ಚೀಪು: ಹುಟ್ಟಿಕೊಳ್ಳುತ್ತಿಲ್ಲ ಎಂದು ಹೇಳಲಾಗದು. ಫೇಸ್‌ಬುಕ್ ಸಾಹಿತ್ಯ, ಬ್ಲಾಗ್ ಸಾಹಿತ್ಯಗಳು ಜನಪ್ರಿಯವಾಗಿಲ್ಲವೇ? ಬೇರೆ ಭಾಷೆಗಳಲ್ಲೂ ಇಂಥ ಸಾಹಿತ್ಯ ಹೆಚ್ಚಾಗಿದೆ. ತರುಣ್ ತೇಜ್‌ಪಾಲ್ ಮೇಲ್‌ನಲ್ಲಿ ಸೃಷ್ಟಿಸಿದ ಅದ್ಭುತ ಕಾಲ್ಪನಿಕ ಸಾಹಿತ್ಯವನ್ನು 'ಮೇಲ್ ಸಾಹಿತ್ಯ' ಎಂದು ಕರೆಯಿರಿ. ಕಪಿಲ್ ಸಿಬಲ್ ಎಸ್‌ಎಂಎಸ್‌ನಲ್ಲಿ ಸೃಷ್ಟಿಸಿದ ಕವನವನ್ನು ಎಸ್‌ಎಂಎಸ್ ಸಾಹಿತ್ಯ ಎಂದೂ, ಶಶಿ ತರೂರ್ ಅಧಿಕಾರ ಕಳಕೊಂಡ ನುಡಿ ಯನ್ನು 'ಟ್ವಿಟರ್ ಸಾಹಿತ್ಯ' ಎಂದೂ ಬೇಕಾದರೆ ಕರೆಯಿರಿ. ಇದೆಲ್ಲ ಹೊಸ ಪ್ರಕಾರಗಳು. ಮೊನ್ನೆಯಷ್ಟೇ ಬೆಂಗಳೂರಿನ ಟೆಕಿಯೊಬ್ಬ ಮೊಬೈಲ್‌ನಲ್ಲಿ ಕಾದಂಬರಿ ಬರೆದಿರುವುದನ್ನು 'ಮೊಬೈಲ್ ಸಾಹಿತ್ಯ' ಎನ್ನಬಹುದಲ್ಲವೇ? ಕನ್ನಡದಲ್ಲೂ ಇಂಥ ಸಾಹಿತ್ಯ ಪ್ರಕಾರಗಳನ್ನು ಸೃಷ್ಟಿ ಮಾಡಿ, ನಮ್ಮ ಯುವಜನಾಂಗ ದಲ್ಲಿ ಕನ್ನಡ ಉಳಿಯುವಂತೆ ನೋಡಿಕೊಳ್ಳಬೇಕು.

ಪ್ರಶ್ನೆ: ಕನ್ನಡ ಉಳಿವಿಗೆ ಇನ್ನೇನು ಮಾಡಬೇಕು?

ಚೀಪು: ಮಿತವಾಗಿ ಬಳಸಿ!

ಪ್ರಶ್ನೆ: ಕೊನೆಯದಾಗಿ, ಮಡಿಕೇರಿ ಸಾಹಿತ್ಯ ಸಮ್ಮೇಳನಕ್ಕೆ ನಿಮ್ಮ ಸಂದೇಶ ಏನು?

ಈ ಸಂದರ್ಭದಲ್ಲಿ ನಾನು ಎರಡೇ ಎರಡು ಮಾತುಗಳನ್ನು ಹೇಳಲು ಬಯಸುತ್ತೇನೆ. ಮೊದಲನೆಯದು: ನೀವೆಲ್ಲರೂ ಒಟ್ಟಾಗಿ ಬನ್ನಿ, ಒಟ್ಟಿಕರಿ (ಅಕ್ಕಿ ರೊಟ್ಟಿ-ಸಾರು) ತಿನ್ನಿ. ಎರಡನೆಯದು ಈ ಸಮ್ಮೇಳನಕ್ಕೆ ನನ್ನ ಸ್ಲೋಗನ್- ಪೆಗ್ಗು, ಪಿಗ್ಗು ಮತ್ತು ಕನ್ನಡದ ಹಿಗ್ಗು ಎಂದು.

ಕೊನೇ ಮಾತು: ಮಡಿಕೇರಿ ಸಮ್ಮೇಳನದಲ್ಲಿ ಯಾವ ಸಾಹಿತಿಗಳಿಗೂ ಕೋಟಾ ವ್ಯವಸ್ಥೆ ಇಲ್ಲ

-ಏಕೆಂದರೆ ಅಲ್ಲಿ ವಿಪರೀತ ಕೋಟ (ಕೊಡವ ಭಾಷೆಯಲ್ಲಿ ಚಳಿ ಎಂದರ್ಥ). ಹೀಗಾಗಿ, ಬೇಕಿರುವುದು ಕೋಟ್ ಮಾತ್ರ.


‘ಕಾಲ್’ಯ ತಸ್ಮೈ ನಮಃ
Dec 1, 2013, 04.57AM IST

''ಏನು ಕಾಲವಪ್ಪ ಇದು. ನಮ್ಮ ಕಾಲದಲ್ಲಿ ಹೀಗಿರಲಿಲ್ಲ,'' ಅಂತ ಹಿರೀಕರು ತಮ್ಮ ಕೈಯಲ್ಲಿದ್ದ ಹಳೇ ಕಾಲದ ನೋಕಿಯಾ ಫೋನಿನಲ್ಲಿ ಅದೇನನ್ನೋ ನಿರುಕಿಸಿ ನೋಡುತ್ತಿದ್ದರು.

ಐ ಫೋನಿನಲ್ಲಿ ಇಮೇಲ್ ಚೆಕ್ ಮಾಡುತ್ತಿದ್ದ ಮಗನಿಗೆ ಅಪ್ಪನ ಅದೇ ಹಳೇ ರಿಂಗ್‌ಟೋನ್ ಕೇಳಿ ಕೇಳಿ ಬೇಜಾರಾಗಿತ್ತು. ''ಅದೇನು ನಮ್ಮ ಕಾಲ-ನಮ್ಮ ಕಾಲ ಅಂತೀಯಾ? ಟೈಮ್ ಈಗ್ಲೂ ಚೆನ್ನಾಗಿದೆ. ನಿಂಗೇನು ಕಮ್ಮಿ ಮಾಡಿದ್ದೀನಿ ಹೇಳು?,'' ಅಂತ ಮಗರಾಯ ವಾದ ಮುಂದಿಟ್ಟ.

ಫೋನಿನಲ್ಲಿ ಯಾವ ಬಟನ್ ಒತ್ತಬೇಕೆಂದು ಅರ್ಥವಾಗದ ಸೀನಿಯರ್, ತಮಗೆ ಗೊತ್ತಿರುವ ಯಾವುದೋ ಒಂದು ಬಟನ್ ಒತ್ತಿದರು. ''ಅಲ್ಲಪ್ಪ, ನೋಡು ನಮ್ಮ ಕಾಲದಲ್ಲಿ ಹಿರಿಯರೆಂದರೆ ಕಿರಿಯರಿಗೆ ಗೌರವ ಇತ್ತು; ಶಿಷ್ಯರ ಬಗ್ಗೆ ಗುರುವಿಗೆ ಅಭಿಮಾನ ಇತ್ತು. ಮಕ್ಕಳ ಬಗ್ಗೆ ಅಪ್ಪ-ಅಮ್ಮನಲ್ಲಿ ಪ್ರೀತಿ ಇತ್ತು; ಮಕ್ಕಳ ಫ್ರೆಂಡ್‌ಗಳನ್ನೂ ಅಪ್ಪ-ಮಕ್ಕಳು ಎಂದು ಭಾವಿಸಿಕೊಳ್ಳುತ್ತಿದ್ದರು. ಈಗ ನೋಡು, ಎಲ್ಲ ಉಲ್ಟಾ ಪಲ್ಟಾ,'' ಅಂತ ಗೊಣಗಿಕೊಂಡರು.

ಅಪ್ಪನ ಪ್ರಶ್ನೆಗಳ ಸುರಿಮಳೆಯಿಂದ ಮಗ ನಿಜಕ್ಕೂ ಕಕ್ಕಾಬಿಕ್ಕಿಯಾದ. ''ಯಾಕೆ ಏನಾಯಿತೀಗ? ನಿನ್ನನ್ನು ನಾವು ಚೆನ್ನಾಗಿ ನೋಡಿಕೊಳ್ತಾ ಇಲ್ವಾ,'' ಎಂದು ಆತಂಕದ ದನಿಯಲ್ಲಿ ಕೇಳಿದ.

''ಏನು ಚೆನ್ನಾಗಿ ನೋಡಿಕೊಳ್ತೀರೋ? ವಯಸ್ಸಾದವರಿಗೆ ಯಾರೂ ಬೆಲೆ ಕೊಡ್ತಾ ಇಲ್ಲ. ನೋಡು, ಅಲ್ಲೊಬ್ಬ ಕೇಜ್ರಿವಾಲ. ಈಗ ಸಿಎಂ ಆಗೇಬಿಡ್ತೀನಿ ಅಂತ ಹೊರಟಿದ್ದಾನೆ. ಅವನು ಈ ಮಟ್ಟಕ್ಕೆ ಬಂದಿದ್ದು ಆ ತಾತ ಅಣ್ಣಾ ಹಜಾರೆಯಿಂದ ಅನ್ನೋದು ಮರ್ತೇ ಬಿಟ್ಟಿದ್ದಾನೆ. ನೋಡು, ಇಲ್ಲೊಬ್ಬ ಮೋದಿ. ಪಿಎಂ ಆಗೇಬಿಟ್ಟಿದ್ದೀನಿ ಅಂತ ಹೊರಟಿದ್ದಾನೆ; ಪಕ್ಷದ ಹಿರೀಕ ಆಡ್ವಾಣಿಯವರಿಗೇ ಬೆಲೆ ಕೊಡ್ತಾ ಇಲ್ಲ.'' ಅಪ್ಪನ ಸಿಟ್ಟು ಕೊತಕೊತ ಕುದಿಯುತ್ತಿದ್ದುದು ಅವರ ಮಾತಿನಲ್ಲೇ ಕಾಣಿಸುತ್ತಿತ್ತು. ಮಗ ಕೊಂಚ ನಿರಾಳನಾದ; ಬಾಣ ತನ್ನತ್ತ ಬರಲಿಲ್ಲವಲ್ಲ ಎಂದು.

''ನೋಡು, ನಾವು ನಿಮ್ಮನ್ನೆಲ್ಲ ಎಷ್ಟು ಚೆನ್ನಾಗಿ ಬೆಳಿಸಿದ್ದೀವಿ. ಈಗಿನ ಅಪ್ಪ-ಅಮ್ಮಂದಿರನ್ನು ನೋಡು. ಅಲ್ಲೊಬ್ಬ ತಲವಾರರು ಮಗಳನ್ನೇ ಕೊಂದುಬಿಟ್ಟರು. ಇಲ್ಲೊಬ್ಬ ತೇಜ್‌ಪಾಲ್ ಮಗಳ ಫ್ರೆಂಡ್‌ಅನ್ನೇ ಕಾಮದ ಕಣ್ಣಿನಿಂದ ನೋಡಿದ. ಅಲ್ಲೊಬ್ಬ ಜಡ್ಜ್ ತನ್ನಲ್ಲಿಗೆ ತರಬೇತಿಗೆ ಬಂದ ಮೊಮ್ಮಗಳ ವಯಸ್ಸಿನ ಹುಡುಗಿ ಮೇಲೆಯೇ ಕಣ್ಣಿಟ್ಟ...'' ಅಂತ ಮಾತು ಮುಂದುವರಿಸಿದರು.

''ಹೆಣ್ಣು ಮಕ್ಕಳೆಂದರೆ ನಾವೆಷ್ಟು ಗೌರವ ಕೊಡ್ತಾ ಇದ್ದೆವು ಗೊತ್ತಾ? ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ ಅಂದ ಜನ ನಾವು. ಈಗ ನೋಡು, ಎಟಿಎಂನೊಳಗೆ ಮಹಿಳೆಯನ್ನು ಕೊಚ್ತಾರೆ; ಬಹಿರಂಗ ಕಾರ‌್ಯಕ್ರಮದಲ್ಲಿ ಪುಢಾರಿಯೊಬ್ಬ ನಟೀಮಣಿಯೊಬ್ಬಳನ್ನು ಚುಡಾಯಿಸುತ್ತಾನೆ. ಕಾಲ ಕೆಟ್ಟಿಲ್ಲ ಅಂತ ಹೇಗೆ ಹೇಳ್ತೀಯಾ?.'' ಅಪ್ಪ ಒಂದೇ ಸಮನೆ ಹೇಳುತ್ತಲೇ ಇದ್ದರು.

ಅದೇಕೋ ಅಪ್ಪನ ಮೂಡ್ ಸರಿ ಇಲ್ಲ ಎಂದು ಭಾವಿಸಿಕೊಂಡ ಮಗ ಸುಮ್ಮನಾಗಿಬಿಟ್ಟ.

ಆದರೆ, ಇನ್ನೊಂದು ಕಡೆಯಿಂದ ದನಿಯೊಂದು ಬಂತು. ''ಹಾಗಲ್ಲ ತಾತ, ಕಾಲ ಬದಲಾಗಿಲ್ಲ,'' ಎನ್ನುತ್ತಾ ಎಕ್ಸ್‌ಬಾಕ್ಸ್‌ನಲ್ಲಿ ಗೇಮ್ ಆಡುತ್ತಿದ್ದ ಮೊಮ್ಮಗ ಅಜ್ಜನ ಜತೆ ವಾಗ್ವಾದಕ್ಕೆ ಇಳಿದ.

''ಕೇಜ್ರಿವಾಲ್, ಮೋದಿ ಮಾಡಿದ್ದು ಹೊಸತೇನಲ್ಲ; ಅದು ತಪ್ಪೂ ಅಲ್ಲ. ಇಟ್ಸ್ ಆಲ್ ಇನ್ ದಿ ಗೇಮ್,'' ಅಂತ ತನ್ನ ಆರ್ಗ್ಯುಮೆಂಟ್‌ನ್ನು ಮುಂದಿಟ್ಟ.

ಮೊದಲೇ ಹೊಸ ಜನರೇಷನ್ ಅನ್ನು ಕಂಡರೆ ರೇಗುತ್ತಿದ್ದ ಅಜ್ಜ ಮತ್ತಷ್ಟು ಕನಲಿದ. ''ಅದ್ಹೇಗೆ ಹೇಳುತ್ತಿ, ಇದು ಸರಿ ಅಂತ?''

ಕಂಪ್ಯೂಟರ್‌ನಲ್ಲಿ ವಾರ್‌ಗೇಮ್ಸ್ ಆಡುತ್ತಿದ್ದ ಮೊಮ್ಮಗನೂ ಜಗಳದ ಮೂಡಿನಲ್ಲೇ ಇದ್ದ ಹಾಗಿತ್ತು.

''ಪುರಾಣ, ಇತಿಹಾಸಗಳಲ್ಲಿ ಅಧಿಕಾರಕ್ಕೆ ಎಷ್ಟು ಕೊಲೆ ನಡೆದಿಲ್ಲ ಹೇಳು? ಹಿರೀಕನಾದ ಅಣ್ಣ ವಾಲಿಯನ್ನು ಸುಗ್ರೀವ ಕೊಂದಿಲ್ಲವೇ? ಮೊಹಮ್ಮದ್ ಬಿನ್ ತುಘಲಕ್ ಅಧಿಕಾರಕ್ಕಾಗಿ ತನ್ನ ತಂದೆಯನ್ನೇ ಕೊಲೆ ಮಾಡಿಲ್ಲವೇ?''

''ಅಜ್ಜ, ನೀನು ತಲವಾರರ ಬಗ್ಗೆ ಹೇಳಿದೆ. ಮಕ್ಕಳನ್ನು ಕೊಂದ ಪಾಪಿ ಎಂದು ಮೂದಲಿಸಿದೆ. ಪ್ರಹ್ಲಾದನನ್ನು ಹಿರಣ್ಯಕಶಿಪು ಕೊಲ್ಲಲು ಯತ್ನಿಸಲಿಲ್ಲವೇ? ಅಮ್ಮನನ್ನು ಕೊಲ್ಲಲಿಲ್ಲ ಎಂದು ತನ್ನ ಮಕ್ಕಳನ್ನು ಜಮದಗ್ನಿ ಸುಟ್ಟು ಭಸ್ಮ ಮಾಡಿಲ್ಲವೇ? ಯಯಾತಿ ತನ್ನ ಮಗ ಪುರುವಿನ ಯೌವ್ವನವನ್ನೇ ಎರವಲು ಪಡೆದುಕೊಂಡಿಲ್ಲವೇ? ಇದು ಲಾಲಸೆಯಲ್ಲವೇ?''

''ನೀನು ತೇಜ್‌ಪಾಲ್, ಜಡ್ಜ್ ಕೇಸ್ ಬಗ್ಗೆ ಮಾತನಾಡಿದೆ. ಪುರಾಣದಲ್ಲಿ ಇಂಥ ಎಷ್ಟು ಕತೆಗಳಿಲ್ಲ. ಅರ್ಜುನ ಹೋದಲ್ಲಿ ಬಂದಲ್ಲಿ ಒಬ್ಬೊಬ್ಬರನ್ನು ಕಟ್ಟಿಕೊಂಡು ಬಂದು ನಂತರ ಮರೆತೇ ಬಿಟ್ಟಿಲ್ಲವೇ? ಚಂದ್ರ ಗುರುಪತ್ನಿ ತಾರೆಯನ್ನು ಮೋಹಿಸಿ ಆಕೆಯನ್ನು ವರಿಸಿಲ್ಲವೇ? ಸೋದರ-ಸೋದರಿಯರೆನ್ನಲಾದ ಯಮ-ಯಮಿ ನಡುವೆ ಪ್ರೇಮ ಇತ್ತಲ್ಲವೇ? ರೋಮನ್ ದೊರೆ ಕ್ಯಾಲಿಗುಲ ತನ್ನ ಸೋದರಿಯನ್ನೇ ವರಿಸಿದ ಎಂದು ಇತಿಹಾಸ ಹೇಳುವುದಿಲ್ಲವೇ? ಈಗ ಹೇಳು, ಕಾಲ ಕೆಟ್ಟಿದೆಯೇ?''

ಮೊಮ್ಮಗನ ಮಾತನ್ನು ಕೇಳಿಸಿಕೊಂಡ ಹಿರೀಕರು ಮೊಬೈಲ್‌ನ ಅದಾವುದೋ ಬಟನ್ ಒತ್ತುತ್ತಿದ್ದರು.

ಮೊಮ್ಮಗ ಮುಂದುವರಿಸಿದ. ''ಆ ಕಾಲದಲ್ಲೂ ಇಂಥವರು ಇದ್ದರು. ಈಗಲೂ ಇದ್ದಾರಷ್ಟೆ. ಆಗ ಈ ಪಾಪವನ್ನೆಲ್ಲ ದೇವರು ನೋಡುತ್ತಿದ್ದಾನೆ ಎಂದು ನೀವು ನಂಬಿಕೊಂಡಿದ್ದೀರಿ. ಈಗ ಇದೆಲ್ಲವನ್ನೂ ಕ್ಯಾಮೆರಾ ನೋಡುತ್ತದೆ ಎಂದು ನಾವು ನಂಬಿಕೊಂಡಿದ್ದೇವೆ. ಎಟಿಎಂ ನೊಳಗಿನ ಹಲ್ಲೆ, ಹೋಟೆಲ್‌ನಲ್ಲಿ ನಡೆದ ಕಾಮದಾಟ ಹೀಗೆ ಎಲ್ಲವನ್ನೂ ಕ್ಯಾಮೆರಾ ನೋಡಿಕೊಂಡಿದೆ. ಹೀಗಾಗಿ, ಎಲ್ಲ ಕಾಲದಲ್ಲೂ ಸರ್ವಾಂತರ‌್ಯಾಮಿ ಇದ್ದೇ ಇರುತ್ತಾನೆ.'' ಮೊಮ್ಮಗನ ಮಾತಿಗೆ ಅಜ್ಜ ಮತ್ತು ಅಪ್ಪ ಇಬ್ಬರೂ ದಂಗಾಗಿ ನಿಂತುಬಿಟ್ಟರು.

ಈಗ ಮಧ್ಯಪ್ರವೇಶಿಸಿದ ಅಪ್ಪ ತನ್ನ ಅಪ್ಪನಿಗೆ ಹೇಳಿದ, ''ಅಪ್ಪ, ಅದೆಲ್ಲ ಇರಲಿ. ಎಲ್ಲ ಕಾಲದಲ್ಲೂ ಇಂಥದ್ದೆಲ್ಲ ಇದ್ದೇ ಇದೆ. ನಿಂಗೇನು ಕಡಿಮೆ ಮಾಡಿದ್ದೀನಿ ಹೇಳು, ನೀ ಆರಾಮಾಗಿರು. ಮೊಬೈಲ್ ಕೊಡಿಸಿದ್ದೀನಲ್ಲ. ಮಾತಾಡ್ತಾ ಇರು,'' ಅಂತ ಹೇಳಿ ತನ್ನ ಗ್ಯಾಲಕ್ಸಿಗೆ ಬಂದ ಕಾಲೊಂದರಲ್ಲಿ ಲೀನವಾಗಿ ಮುಂದೆ ಹೊರಟ. ಮೊಮ್ಮಗ ಎಕ್ಸ್‌ಬಾಕ್ಸ್‌ನಲ್ಲಿ ಮುಳುಗಿಹೋದ.

ಸಮಕಾಲೀನರಾರೂ ಇಲ್ಲದೆ ಏಕಾಂತದಿಂದ ಕೂತ ಆ ಹಿರಿಯರು, ಅ ಮೊಬೈಲ್‌ನ ಬಟನ್‌ನ್ನು ಒತ್ತುತ್ತಲೇ ಇದ್ದರು. ಎಲ್ಲವೂ ನಾಟ್ ರೀಚೆಬಲ್. ಎಲ್ಲಿಗೂ ಕಾಲ್ ಹೋಗುತ್ತಿರಲಿಲ್ಲ. ಕಾಲವೂ ಫಾರ್ವರ್ಡ್ ಆಗುತ್ತಿರಲಿಲ್ಲ.


ಸೈಂಟಿಸ್ಟ್‌ಗಳಿಗೆ ಹೊಸ ಸವಾಲುಗಳು
Nov 17, 2013, 04.00AM IST

ಹಾಗೆ ನೋಡಿದರೆ, ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ನಾವು ಬೆಳಕಿನ ವೇಗದಲ್ಲೇ ಬೆಳೆಯುತ್ತಿದ್ದೇವೆ. ವಿಶ್ವದ ಉಗಮಕ್ಕೆ ಕಾರಣವಾದ ದೇವಕಣ ಶೋಧಿಸಿದ್ದೇವೆ; ಜೀನೋಮಗಳ ಜಾತಕ ಬಿಚ್ಚಿಟ್ಟಿದ್ದೇವೆ; ಅನ್ಯಗ್ರಹ ಗಳ ಬೇಟೆಗೆ ಹೊರಟಿದ್ದೇವೆ... ಇಷ್ಟಾದರೂ, ವಿಜ್ಞಾನ- ತಂತ್ರಜ್ಞಾನದಿಂದ ನಮಗೆ ಆಗಬೇಕಾದ್ದು ಇನ್ನೂ ಸಾಕಷ್ಟಿದೆ ಅಂತ ನಿಮಗೆ ಅನ್ನಿಸುವುದಿಲ್ಲವೇ?

ಇಲ್ಲಿ ಸದ್ಯದ ಪರಿಸ್ಥಿತಿಗೆ ತೀರಾ ಅಗತ್ಯವಾದ ಹತ್ತು ಬೇಡಿಕೆಗಳನ್ನು ಮುಂದಿರಿಸಲಾಗಿದೆ. ವಿಜ್ಞಾನಿಗಳು ಈ ಕುರಿತು ಗಮನಹರಿಸುವರೇ?

ಸುಳ್ಳು ಪತ್ತೆ ಮೈಕ್: ಈಗಲೇ ಎಲೆಕ್ಷನ್ ಭರಾಟೆ ಶುರು ವಾಗಿದೆ. ರಾಜಕಾರಣಿಗಳು ಬಾಯಿಗೆ ಬಂದಂತೆ ಮಾತನಾ ಡಲು ಆರಂಭಿಸಿದ್ದಾರೆ. ಮನಸ್ಸಿಗೆ ಬಂದ ಸುಳ್ಳನ್ನು ಹೇಳುತ್ತಿ ದ್ದಾರೆ. ಇದಕ್ಕಾಗಿ ತುರ್ತಾಗಿ ಸುಳ್ಳು ಪತ್ತೆ ಮೈಕ್‌ಗಳನ್ನು ಆವಿಷ್ಕರಿಸಬೇಕಿದೆ. ರಾಜಕಾರಣಿ ಸುಳ್ಳು ಹೇಳಿದಾಕ್ಷಣ ಈ ಮೈಕ್‌ನಲ್ಲಿ ಕರ್ಕಶವಾದ ದನಿ ಎದ್ದು, ಅವರ ಮಾತು ಯಾರಿಗೂ ಕೇಳಿಸಬಾರದು. ವಿಶ್ವವಿದ್ಯಾಲಯಗಳಲ್ಲಿ ಪಿಎಚ್‌ಡಿ ಕೃತಿಚೌರ‌್ಯ ತಪ್ಪಿಸಲು ಅಳವಡಿಸಲಾಗಿರುವ ತಂತ್ರಜ್ಞಾನವನ್ನೇ ಇಲ್ಲಿ ಬಳಸಿಕೊಳ್ಳಬಹುದು. ಕಳೆದ ವರ್ಷ ಕೊಟ್ಟ ಭರವಸೆಯನ್ನು ಮತ್ತೆ ಹೇಳುವುದು, ಇನ್ನೊಬ್ಬರು ಮಾಡಿದ ಕೆಲಸವನ್ನು ತಾನು ಮಾಡಿದ್ದೆಂದು ಹೇಳುವುದು, ಇತಿಹಾಸವನ್ನು ತನಗೆ ಬೇಕಾದಂತೆ ತಿರುಚುವುದು... ಇಂಥ ಸಂದರ್ಭಗಳಲ್ಲಿ ಈ ಮೈಕ್ ಕ್ರಿಯಾಶೀಲವಾಗಬೇಕು.

ಮೌಢ್ಯ ಟ್ರೇಸರ್: ನಂಬಿಕೆ ಯಾವುದು, ಮೂಢ ನಂಬಿಕೆ ಯಾವುದು ಎನ್ನುವ ಕುರಿತು ದೀರ್ಘ ಚರ್ಚೆ ನಡೆ ಯು ತ್ತಿದೆ. ನಂಬಿಕೆಯಿಂದ ಮೌಢ್ಯವನ್ನು ಬೇರೆ ಮಾಡು ವುದು ಮನುಷ್ಯಮಾತ್ರರಿಂದ ಕಷ್ಟವಾದ ಕೆಲಸವೇ. ಇದಕ್ಕಾ ಗಿಯೇ ಈಗ ವಿಶೇಷ ಉಪಕರಣವೊಂದರ ಅಗತ್ಯ ಇದೆ. ಎಲ್ಲ ಊರಿನ ಸ್ಥಳೀಯ ಸಂಸ್ಥೆ ಕಚೇರಿ ಬಳಿ ಎಟಿಎಂ ಮಾದ ರಿ ಯಲ್ಲಿ ಇಂಥದ್ದೊಂದು ಉಪಕರಣವನ್ನು ಸ್ಥಾಪಿಸ ಬೇಕು. ನಂಬಿಕೆ-ಮೂಢನಂಬಿಕೆಗಳ ಬಗ್ಗೆ ಅನುಮಾನ ಬಂದಾಗ, ಈ ಮೆಷಿನ್ ಮುಂದೆ ಜನ ಬಂದು ಅರಿಕೆ ಮಾಡಿ ಕೊಳ್ಳು ವಂತಾಗಬೇಕು. ಆಗ ಇದು ಇವೆರಡರ ನಡುವಿನ ವ್ಯತ್ಯಾಸ ವನ್ನು ಸಮರ್ಥವಾಗಿ ವಿಶ್ಲೇಷಿಸಿಕೊಡುವಂತಿರ ಬೇಕು.

ಎಮೋಷನಲ್ ಪಿಲ್: ಇಂಥದ್ದೊಂದು ಮಾತ್ರೆಯನ್ನು ಸಿದ್ಧಪಡಿಸಿದರೆ, ಮುಂದಿನ ಎಲೆಕ್ಷನ್ ಟೈಮಲ್ಲಿ ವಿಪರೀತ ಬೇಡಿಕೆ ಬಂದುಬಿಡಬಹುದು. ಈ ಮಾತ್ರೆ ಹೇಗಿರಬೇಕು ಎಂದರೆ, ಇದನ್ನು ತಿಂದರೆ, ಆ ವ್ಯಕ್ತಿ ತೀರಾ ಸೆಂಟಿಮೆಂಟಲ್ ಆಗಿಬಿಡಬೇಕು. ಮಾತು ಪೂರ್ತಿ ಭಾವನಾತ್ಮಕ ವಿಚಾರವೇ ಪುಂಖಾನುಪುಂಖವಾಗಿ ಬರಬೇಕು. ಕೊಂಚ ಕೊಂಚ ಕಣ್ಣೀರೂ ಬರಬೇಕು.

ಮೈಂಡ್ ಮೆಮೊರಿ ಕಾರ್ಡ್: ಹಲವು ಬಾರಿ ಒಂದು ವಸ್ತುವನ್ನು ಎಲ್ಲೋ ಇಟ್ಟು ಇನ್ನೆಲ್ಲೋ ಹುಡುಕಾಡುತ್ತೇವೆ. ಇನ್ನು ಕೆಲವು ಬಾರಿ, ಅಗತ್ಯ ಬಿದ್ದಾಗ ವಿಷಯ ಮರೆತು ಹೋಗಿ ಬಿಡುತ್ತದೆ. ಇಂಥದ್ದಕ್ಕಾಗಿ ಮೈಂಡ್ ಮೆಮೊರಿ ಕಾರ್ಡ್ ಎಂಬ ಉಪಕರಣ ಆವಿಷ್ಕರಿಸಬೇಕು. ನಮ್ಮ ಮೆದುಳಿನಲ್ಲಿ ನಡೆಯುವ ಎಲ್ಲ ಚಟುವಟಿಕೆಗಳೂ ಈ ಮೆಮೊರಿ ಕಾರ್ಡ್‌ನಲ್ಲಿ ಸ್ಟೋರ್ ಆಗಿರುತ್ತದೆ. ಪುಟ್ಟ ಚಿಪ್ ಮಾದರಿಯ ಈ ಕಾರ್ಡ್‌ನಲ್ಲಿರುವ ದಾಖಲೆಗಳನ್ನು ಯಾವಾಗ ಬೇಕಾದರೂ ಮರಳಿ ತೆಗೆಯಬೇಕು.

ಮಿರರ್ ಕ್ಯಾಮೆರಾ: ಈ ಫೇಸ್‌ಬುಕ್ ಯುಗದಲ್ಲಿ ಪ್ರೊಫೈಲ್ ಫೋಟೋಗೆ ಎಲ್ಲಿಲ್ಲದ ಬೇಡಿಕೆ. ಅದ ರಲ್ಲೂ, ಕಾಲೇಜು ಹುಡುಗ-ಹುಡುಗಿಯರು ಪ್ರೊಫೈಲ್ ಫೋಟೋಗೆ ದಿನವಿಡೀ ತಡಕಾಡಿ, ಕೊನೆಗೆ ಯಾವುದೋ ಒಂದನ್ನು ಆಯ್ಕೆ ಮಾಡಿಬಿಡುತ್ತಾರೆ. ನಿಮ್ಮ ಫೋಟೋವನ್ನು ನೀವೇ ತೆಗೆಯುವ ಹಾಗಿದ್ದರೆ? ಅದಕ್ಕಾಗಿ ಮಿರರ್ ಕ್ಯಾಮೆರಾ ವನ್ನು ಚಾಲ್ತಿಗೆ ತರಬೇಕು. ಕನ್ನಡಿ ಮುಂದೆ ನಿಂತುಕೊಂಡು ನೀವೇ ಫೋಸು ಕೊಟ್ಟರಾಯಿತು, ಅದರ ಲ್ಲಿನ ಕ್ಯಾಮೆರಾ, ರಿಮೋಟ್ ಸೆನ್ಸಿಂಗ್ ಮೂಲಕ ನೀವು ನೀಡುವ ಸನ್ನೆ ಆಧರಿಸಿ ಫೋಟೊ ತೆಗೆಯುತ್ತದೆ. ನಿಮಗೆ ಬೇಕಾದ ಸ್ಟೈಲಿನಲ್ಲಿ ನಿಮ್ಮ ಫೋಟೋ ನೀವೇ ತೆಗೆಯಬಹುದು.

ಕಸ ಪ್ರೊಸೆಸರ್: ಕಸವನ್ನು ಹೇಗೆ ವಿಲೇವಾರಿ ಮಾಡ ಬೇಕೆ ನ್ನು ವುದು ನಗರ ಪ್ರದೇಶದ ದೊಡ್ಡ ಚಿಂತೆ, ಕಾರ್ಪೊ ರೇಷನ್‌ಗೂ ದೊಡ್ಡ ತಲೆನೋವು. ಇದ ಕ್ಕಾಗಿ, ಒಂದೈದು ಲೀಟರ್ ಸಾಮರ್ಥ್ಯದ ಬಕೆಟ್ ಗಾತ್ರದ ಇನ್‌ ಸ್ಟಂಟ್ ಕಸ ಪ್ರೊಸೆಸರ್‌ನ್ನು ಆವಿಷ್ಕರಿಸಬೇಕಿದೆ. ಇದ ರೊಳಗೆ ಕಸ ಹಾಕಿ ವಿದ್ಯುತ್ ಸಂಪರ್ಕ ನೀಡಿದರೆ ಸಾಕು, ಕೇವಲ ಅರ್ಧ ಗಂಟೆಯಲ್ಲಿ ಆ ಕಸ ಗೊಬ್ಬರವಾಗಿ ಪರಿ ವರ್ತನೆ ಯಾಗಬೇಕು. ಈ ಸಾವಯವ ಗೊಬ್ಬರವನ್ನು ಕಾರ್ಪೊ ರೇಷನ್ ಖರೀದಿ ಮಾಡುವಂತೆ ನಿಯಮ ರೂಪಿಸಬೇಕು.

ವೋಟ್‌ಮೀಟರ್: ಎಲೆಕ್ಷನ್ ಬಂದಾಗ ಎಲ್ಲ ಜಾತಿ-ಧರ್ಮಗಳನ್ನು ಓಲೈಸುವಂತೆ ಯೋಜನೆ ರೂಪಿಸುವುದು ರಾಜಕಾರಣಿಗಳ ಖಯಾಲಿ. ಎಷ್ಟೋ ಸಲ ಈ ಯೋಜನೆಗಳು ನಿಜಕ್ಕೂ ವೋಟ್‌ಗಳನ್ನು ತರುತ್ತವೆಯೇ ಗೊತ್ತಿಲ್ಲ. ಇದಕ್ಕಾಗಿ, ವೋಟ್‌ಮೀಟರ್ ಎಂಬ ಉಪಕರಣ ಆವಿಷ್ಕರಿಸಬಹುದು. ಯಾವುದೇ ವ್ಯಕ್ತಿಯ ಮುಂದೆ ಈ ಮೀಟರ್ ಹಿಡಿದರೆ, ಆತ ತನ್ನ ಪಕ್ಷಕ್ಕೆ ವೋಟ್ ಹಾಕಿದ್ದಾನೆಯೇ/ಹಾಕಲಿದ್ದಾನೆಯೇ ಎಂದು ತಿಳಿದು ಬಿಡುತ್ತದೆ.

ಬಾರ್‌ಕಾರ್ಡ್: ಕೆಲವರಿಗೆ ಮದ್ಯಪಾನಕ್ಕೆ ಕಂಟ್ರೋಲೇ ಇಲ್ಲ. ಕುಡಿದ ಮೇಲೂ ಅವರ ಮೇಲೇ ಅವರಿಗೆ ಕಂಟ್ರೋಲ್ ಇರೋದಿಲ್ಲ. ಕೆಲವರು ಕುಡಿದ ಮೇಲೆ ಬೇಕಾ ಬಿಟ್ಟಿ ಖರ್ಚು ಮಾಡುತ್ತಾರೆ. ಇದಕ್ಕಾಗಿ ಮದ್ಯ ಸೇವನೆ ಯನ್ನು ಗುರುತಿಸುವ ಕ್ರೆಡಿಟ್/ ಡೆಬಿಟ್ ಕಾರ್ಡನ್ನು ಶೋಧಿಸಬಹುದು. ಬಾರ್‌ನ ವಾಸನೆಗೆ ಸ್ಪಂದಿಸುವ ಈ ಕಾರ್ಡ್ ನಿರ್ದಿಷ್ಟ ಮೊತ್ತದವರೆಗೆ ಮಾತ್ರ ಓಪನ್ ಇದ್ದು. ಹೆಚ್ಚಿನ ಮೊತ್ತದ ಮದ್ಯ ಖರೀದಿಸಲು ಹೋದರೆ ಲಾಕ್ ಆಗಬೇಕು.

ಕಾಲೇಜ್ ಆ್ಯಪ್: ಕಾಲೇಜು ಹುಡುಗರಿಗೆ ಓದಲಿಕ್ಕೇ ಪುರುಸೊತ್ತಿರೋದಿಲ್ಲ. ಬೆಳಗ್ಗೆ ಕ್ರಿಕೆಟ್, ಮಧ್ಯಾಹ್ನ ಫ್ರೆಂಡ್ಸ್, ಸಂಜೆ ಗೆಳತಿ, ರಾತ್ರಿ ಗೇಮ್ಸ್, ಫೇಸ್‌ಬುಕ್, ಟೈಮ್ ಸಿಕ್ಕರೆ ಕ್ಲಾಸ್. ಇಂಥವರಿಗಾಗಿ ಟೈಮ್ ಮ್ಯಾನೇಜ್‌ಮೆಂಟ್ ಅಪ್ಲಿಕೇಷನ್‌ವೊಂದನ್ನು ಶೋಧಿ ಸ ಬೇಕು. ಇದು ಗೆಳೆಯ / ಗೆಳತಿಯನ್ನು ಹುಡುಕಿ ಕೊಡು ವು ದರಿಂದ ಹಿಡಿದು, ಓದುವ ತನಕ ಎಲ್ಲ ಜವಾಬ್ದಾರಿ ಯನ್ನು ನಿರ್ವಹಿಸಬೇಕು.

ಆಟೋಮ್ಯಾಟಿಕ್ ಕುಕ್ಕಿಂಗ್: ವಾಷಿಂಗ್ ಮೆಷಿನ್ ಮಾದರಿಯಲ್ಲೇ ಸ್ವಯಂಚಾಲಿತ ಅಡುಗೆ ಮಾಡುವ ಯಂತ್ರ ವನ್ನು ಶೋಧಿಸುವುದು ಈಗಿನ ಅನಿವಾರ‌್ಯತೆಗಳಲ್ಲಿ ಒಂದು. ಅಡು ಗೆಗೆ ಬೇಕಾದ ಪದಾರ್ಥಗಳನ್ನು ಮೊದಲೇ ಲೋಡ್ ಮಾಡ ಬೇಕು. ಅಗತ್ಯ ರೆಸಿಪಿಯನ್ನು ಮೊದಲೇ ಫೀಡ್ ಮಾಡಲಾಗಿ ರು ತ್ತದೆ. ನೀವು ಸೆಲೆಕ್ಟ್ ಮಾಡಿದ ಖಾದ್ಯವನ್ನು ಇದು ತಯಾರಿಸಿ ಕೊಡುತ್ತದೆ. ಪತಿ- ಪತ್ನಿಯರಿಬ್ಬರೂ ದುಡಿಯಲು ಹೋಗುವ ಕುಟುಂಬ ಗಳಲ್ಲಿ ಇದಕ್ಕೆ ಎಲ್ಲಿಲ್ಲದ ಡಿಮ್ಯಾಂಡ್ ಇದ್ದೇ ಇರುತ್ತದೆ.


ನಿಮಗೂ ಇಂಥ ಕನಸು ಬೀಳುತ್ತಾ ?
Oct 20, 2013, 04.43AM IST

''ನೀವೂ ಇದ್ದೀರಿ...'' ಎಂದು ನನ್ನಾಕೆ ಕಣ್ಣು ಉಜ್ಜಿಕೊಂಡು, ಮೂಗು ಮುರಿದುಕೊಂಡು ಹೊರಗೆ ಬಂದಳು. ಆಗಷ್ಟೇ ನಿದ್ದೆಯಿಂದ ಎದ್ದು ಬಂದ ಆಕೆಯ ಕಣ್ಣಲ್ಲಿ ಅದೇನೋ ಕಳವಳ ಕಂಡೆ. ಆಕೆ ಈ 'ನೀವೂ' (ಘೆಉ) ರಾಗ ಹಾಡಿದಾಗಲೆಲ್ಲ ನನಗೂ ಕಳವಳ ಶುರುವಾಗುತ್ತದೆ. ಇನ್ನೇನೋ ಕಾದಿದೆ ಇವತ್ತು ಅಂತ.

''ಹೂಂ, ಇನ್ನೂ ಇದ್ದೇನಲ್ಲ,'' ಎಂದು ತಣ್ಣಗೇ ಹೇಳಿದೆ.

''ಹಾಗಲ್ಲ, ನೋಡಿ ಒಂದು ವಾರದಿಂದ ಒಂದೇ ತರಹ ಕನಸು ಬೀಳ್ತಾ ಇದೆ. ಅದೂ ಬೆಳಗಿನ ಜಾವ ಬೇರೆ,'' ಎಂದು ಶುರು ಮಾಡಿದಳು. ಬೆಳಗಿನ ಜಾವ ಬಿದ್ದ ಕನಸು ನಿಜವಾಗುತ್ತದೆ ಎಂದು ಅವರ ಅಜ್ಜಿ ಹೇಳಿದ್ದರಂತೆ. ಹಾಗಾಗಿಯೋ ಏನೋ, ಇವಳಿಗೆ ಕನಸು ಬೀಳುವುದು ಹೆಚ್ಚಾಗಿ ಬೆಳಗಿನ ಜಾವವೇ. ಕನಸಲ್ಲಿ ಇವತ್ತು ಹಾವು ಬಂತು, ಚೇಳು ಬಂತು ಅನ್ನೋದು, ಮರು ವಾರದಲ್ಲೇ ದೇವಸ್ಥಾನಕ್ಕೆ ಹೋಗೋದು ಕಳೆದ 20 ವರ್ಷಗಳಿಂದ ನನಗೆ ಮಾಮೂಲಿ ಸಂಗತಿಯಾಗಿಬಿಟ್ಟಿದೆ. ಇಷ್ಟು ದಿನಗಳಲ್ಲಿ ಆಕೆಯ ಕನಸಲ್ಲಿ ಒಮ್ಮೆಯೂ ನಾನು ಬಂದಿಲ್ಲ; ಹಾಗಾಗಿ, ಈ ಸಲವೂ ನಾನು ಬಂದಿರಲಿಕ್ಕಿಲ್ಲ ಅನ್ನೋ ಗ್ಯಾರಂಟಿಯಿಂದ ಕೇಳಿದೆ, ''ಏನು, ಇನ್ನಾವ ಕೋತಿ ಬಂತು, ನಿನ್ನ ಕನಸಲ್ಲಿ,'' ಅಂತ.

ಆಕೆಯ ಮುಖ ಊರಗಲವಾಯಿತು. ''ಅಯ್ಯೋ, ಅದ್ಹೆಂಗೆ ಗೊತ್ತಾಯಿತು ನಿಮಗೆ. ಹೌದು ಕಣ್ರೀ... ಒಂದು ವಾರದಿಂದ ಕನಸಲ್ಲಿ ಬರ್ತಾ ಇರೋದು ಮಾರುತಿ,'' ಅಂತಂದಳು.

ನನಗೆ ಅರ್ಥ ಆಗಲಿಲ್ಲ. ಮಂಗ ಕನಸಲ್ಲಿ ಬಂದರೆ ಏನು ಶಕುನ? ಆದರೆ ಒಂದಂತೂ ನಿಜ, ಅದೃಷ್ಟಾನೇ ಆಗಲಿ, ದುರದೃಷ್ಟಾನೇ ಆಗಲಿ, ನನ್ನ ಡೆಬಿಟ್ ಕಾರ್ಡ್‌ಗೆ ಕತ್ತರಿ ಅಂತಾನೇ ಅರ್ಥ.

''ಅದೇ ಮಾರುತಿ ಆಲ್ಟೋ 800... ಒಂದು ವಾರದಿಂದ ಅದೇ ಕನಸು ಬೀಳ್ತಾ ಇದೆ. ಬಹುಶಃ ತಗೊಳ್ಳೋಕೆ ದೇವರು ಸೂಚನೆ ಕೊಡ್ತಾ ಇದ್ದಾನೆ ಅನ್ಸುತ್ತೆ,'' ಅಂದಳು.

''ಮಾರುತಿ ಕನಸು ಬಿದ್ದರೆ ಕಾರನ್ನು ತಗೋಬೇಕು ಅಂತ ಯಾರು ಹೇಳಿದ್ರು? ಫಿಲಾಸಫರ್ ಅರಿಸ್ಟಾಟಲ್ ಹೇಳಿದ್ನಾ? ಮನೋವಿಶ್ಲೇಷಕ ಸಿಗ್ಮಂಡ್ ಫ್ರಾಯ್ಡ್ ಬುಕ್‌ನಲ್ಲಿ ಹಾಗೇನಾದ್ರೂ ಬರೆದಿದೆಯಾ? ಕಾರ್ಲ್ ಜಂಗ್ ಈ ತರಹ ಇಂಟರ್‌ಪ್ರಿಟ್ ಮಾಡಿದ್ದಾನಾ?,'' ಅಂತ ಅವಳ ದಾರಿ ತಪ್ಪಿಸಲಿಕ್ಕೆ ಪ್ರಶ್ನೆ ಮೇಲೆ ಪ್ರಶ್ನೆ ಹಾಕಿದೆ.

ಅವಳು ಕಕ್ಕಾಬಿಕ್ಕಿಯಾಗಬಹುದು ಎಂದು ನನ್ನ ಎಣಿಕೆಯಾಗಿತ್ತು. ಊಹುಂ, ಹಾಗಾಗಲಿಲ್ಲ. ಆಕೆಯ ಬಳಿ ಅದಕ್ಕೂ ಬಾಣ ಇತ್ತು.

''ನೀವೂ ಇದ್ದೀರಿ... ಅವನ್ಯಾವನೋ ಸಾಧು ಕನಸಲ್ಲಿ ಚಿನ್ನ ಕಂಡ ಮಾತ್ರಕ್ಕೆ ಇಡೀ ಸರಕಾರನೇ ಓಡೋಡಿ ಬಂತು ಚಿನ್ನ ಅಗಿಯೋಕೆ. ಮೀಡಿಯಾದವರು 24 ಗಂಟೆ ಅದನ್ನೇ ತೋರಿಸಿದರು. ಒಬ್ಬ ವಿರಾಗಿಯ ಕನಸಿಗೆ ಸರಕಾರ ಸ್ಪಂದಿಸುತ್ತದೆ ಎಂದರೆ ನಿಮ್ಮ ಅರ್ಧಾಂಗಿಯ ಕನಸಿಗೆ ಸ್ಪಂದಿಸೋಕೆ ನಿಮಗೇನಾಗಿದೆ ಧಾಡಿ...'' ಮಾರುತಿಯೇ ಮೈ ಮೇಲೆ ಬಂದಂತೆ ಗೇರ್ ಚೇಂಜ್ ಮಾಡಿ ಆಕ್ಸಿಲರೇಟರ್ ಕೊಟ್ಟಳು.

''ಅಲ್ಲ... ಹಾಗಲ್ಲ. ಕನಸಲ್ಲಿ ಕಾಣೋದೆಲ್ಲ ನಿಜ ಅಲ್ಲ... ಅದು ಕನಸಷ್ಟೇ...'' ಅಂತ ನಾನು ಏನೆಲ್ಲ ಸರ್ಕಸ್ ಮಾಡಿದರೂ ಪ್ರಯೋಜನವಾಗಲಿಲ್ಲ.

ಅದಕ್ಕೂ ಅವಳ ಬಳಿ ಉತ್ತರ ಇತ್ತು. ''ನೋಡಿ, ಗೊತ್ತಿಲ್ಲದೆ ಏನೇನೋ ಮಾತಾಡ್‌ಬೇಡಿ. ಗಣಿತಜ್ಞ ಶ್ರೀನಿವಾಸ್ ರಾಮಾನುಜನ್‌ಗೆ ಗಣಿತ ಸೂತ್ರ ಹೊಳೆದದ್ದೇ ಕನಸಿನಲ್ಲಿ ಗೊತ್ತಾ ನಿಮಗೆ? ಅಮೆರಿಕದ ಅಧ್ಯಕ್ಷ ಅಬ್ರಹಾಂ ಲಿಂಕನ್ ಅವರ ಹತ್ಯೆಗೆ ಕೆಲವು ದಿನಗಳ ಮುಂಚೆಯೇ ಅವರಿಗೆ ಅಂಥದ್ದೊಂದು ದುರಂತದ ಕನಸು ಬಿದ್ದಿತ್ತಂತೆ, ಗೊತ್ತಾ ನಿಮಗೆ? ಗೌತಮ ಬುದ್ಧ ಜನಿಸುವ ಮೊದಲು ಆತನ ಅಮ್ಮನಿಗೆ, ಮಹಾತ್ಮನೊಬ್ಬ ನಿನ್ನ ಹೊಟ್ಟೆಯಲ್ಲಿ ಜನಿಸುತ್ತಾನೆ ಎಂಬ ಕನಸು ಬಿದ್ದಿತ್ತಂತೆ... ಗೊತ್ತಾ ನಿಮಗೆ? ರಾಮಾಯಣ ಯುದ್ಧಕ್ಕೆ ಮೊದಲು ಕಪ್ಪು ಹದ್ದೊಂದರ ಮೇಲೆ ಬಿಳಿ ಹದ್ದು ಎರಗಿ ದಾಳಿ ಮಾಡುವ ಕನಸೊಂದನ್ನು ರಾವಣ ನೋಡಿದ್ದನಂತೆ ಗೊತ್ತಾ? ಜೀಸಸ್‌ಗೆ ಸಮಸ್ಯೆ ಎದುರಾಗುತ್ತದೆ ಎಂದು ಅವರ ಪಾಲಕರಿಗೆ ಮೊದಲೇ ಕನಸಿನ ಮೂಲಕ ಸೂಚನೆ ಬಂದಿತ್ತಂತೆ ಗೊತ್ತಾ ನಿಮಗೆ...?''

ಅವಳು ಮೋದಿ ತರಹ ಮಾತಾಡುತ್ತಲೇ ಇದ್ದಳು. ಎಷ್ಟು ಹೊತ್ತು ಮಾತಾಡುತ್ತಾಳೆ ನೋಡೋಣ ಅಂತ ನಾನು ಸೈರಣೆಯಿಂದ ಮನಮೋಹನ್ ಸಿಂಗ್ ತರಹ ಸುಮ್ಮನೆ ಇದ್ದೆ.

ಇನ್ನೂ ಸ್ವಲ್ಪ ಟೈಮ್ ಬಿಟ್ಟಿದ್ದರೆ ಪೂರ್ತಿ ನನ್ನನ್ನು ತೊಳೆದುಬಿಡುತ್ತಿದ್ದಳೇನೋ.

ನಾನೂ ಯೋಚಿಸಿದೆ, ಹೌದು ಅವರಿಗೆ ಅವರವರ ಕನಸು. ಬಹುಶಃ ರಾಹುಲ್-ಮೋದಿ ಕನಸಲ್ಲಿ ಬರೇ ಕುರ್ಚಿಯೇ ಕಾಣುತ್ತಿರಬಹುದು. ಎಷ್ಟು ನೀರಸವಾದ ಕನಸು ಅದು. ಆದರೆ, ಅಸಾರಾಂ ಕನಸು ಮಾತ್ರ ಪೂರ್ತಿ ರಂಗುರಂಗು. ಇನ್ನು, ಆನಂದ್ ಸಿಂಗ್ ಕನಸು ಪೂರ್ತಿ ಬ್ಲಾಕ್ ಅಂಡ್ ವೈಟ್-ಕಬ್ಬಿಣದ ಅದಿರು. ಸಚಿನ್ ರಿಟೈರ್ಡ್ ಆದ ಮೇಲೆ ಕನಸಲ್ಲೂ ಬ್ಯಾಟು-ಬಾಲು ಬರಬಹುದು. ಕಾಲೇಜು ಹುಡುಗರಿಗೆ ಕನಸಲ್ಲೂ ಕಾಡೋದು ಫೇಸ್‌ಬುಕ್, ಪ್ರಧಾನಿಗೆ ಪಾರಖ್ ಮಧ್ಯರಾತ್ರಿ ಹೆದರಿಸಬಹುದು. ಇನ್ನು, ರಾಬರ್ಟ್ ವಾದ್ರಾ ಪ್ರಧಾನಿ ಗಂಡನಾದ ಹಾಗೆ ಕನಸು ಕಾಣ್ತಾ ಇದ್ದರೆ, ಪಾಕಿಸ್ತಾನದ ವಿರುದ್ಧ ಯುದ್ಧಕ್ಕೆ ಆದೇಶ ನೀಡಿದ ಕನಸು ಮೋದಿಗೆ ಬೀಳಬಹುದು... ಎಲ್ಲರಿಗೂ ಕನಸು ಕಾಣುವ ಸ್ವಾತಂತ್ರ್ಯ ಇದೆಯಲ್ಲ ! ಕಾಣಲಿ ಬಿಡಿ.

ಆದರೆ, ನನಗೆ ಯಾಕೆ ಕನಸೇ ಬೀಳೊಲ್ಲ? ಮೆಲ್ಲನೆ, ಆಕೆಯನ್ನು ಕೇಳಿದೆ, ''ನಿನ್ನ ಕನಸಲ್ಲಿ ಹಾವು, ಕಾರು ಎಲ್ಲ ಬರುತ್ತೆ. ನನ್ನ ಕನಸಲ್ಲಿ ಯಾರೂ ಬರೋದಿಲ್ವಲ್ಲ ಯಾಕೆ?''

''ಹೂಂ... ಇನ್ನೊಂದು ವಿಷ್ಯ ಗೊತ್ತಾ ನಿಮಗೆ? ಕನಸು ಮತ್ತು ಗೊರಕೆ ಎರಡೂ ಜತೆ ಜತೆಗೆ ಬರೋದಿಲ್ಲ...,'' ಎಂದು ಸಿಡುಕುತ್ತರ ಕೊಟ್ಟಳು.

ನನಗೆ ಯಾಕೆ ಬೇಕಿತ್ತು ಈ ಕನಸಾಲಜಿ ಅಂದುಕೊಂಡೆ. ಹಾಂ, ಬೈ ದಿ ಬೈ, ಹೆಂಡತಿಯಿಂದ ಮುಖಕ್ಕೆ ಉಗುಳಿಸಿಕೊಂಡ ವಿಚಾರಾನ ಯಾರಿಗೂ ಹೇಳ್ಬೇಡಿ. ಇದನ್ನೂ ಕನಸು ಅಂತ ತಿಳ್ಕೊಂಡು ಸುಮ್ಮನಾಗಿಬಿಡಿ, ಪ್ಲೀಸ್.


ದಿಲ್ಲಿ ಗದ್ದುಗೆ: ಎರಡು ಬದಿಯ ಪಿಸುಮಾತು
Oct 6, 2013, 04.56AM IST

ವಕ್ರವ್ಯೂಹ: ದಿಲ್ಲಿ ಗದ್ದುಗೆ: ಎರಡು ಬದಿಯ ಪಿಸುಮಾತು
ಪಿಎಂ ಪೀಠದ ಮೇಲೆ ಕಣ್ಣಿಟ್ಟಿರುವ ನರೇಂದ್ರ ಮೋದಿ ದಿಲ್ಲಿಯಲ್ಲಿ ಪ್ರಚಾರ ಶುರು ಮಾಡಿದ್ದಾರೆ. ಅತ್ತ, ರಾಹುಲ್ ಗಾಂಧಿ ಸಹ ಮೊನ್ನೆ ಗುಜರಾತ್‌ಗೆ ಹೋಗಿ ಬಂದಿದ್ದಾರೆ. ಯಾರಾಗಬಲ್ಲರೋ ಪ್ರಧಾನಿ? ಅದು ಬೇರೆ ಮಾತು. ಆದರೆ, ಇವರಿಬ್ಬರಲ್ಲಿ ಯಾರು ಬೆಸ್ಟ್ ಎನ್ನುವ ಚರ್ಚೆ ಮಾತ್ರ ಎಲ್ಲ ಕಡೆ ಶುರುವಾಗಿದೆ. ಹರಟೆಕಟ್ಟೆಗಳಲ್ಲಿ, ಕಾಫಿ ಕೆಫೆಗಳಲ್ಲಿ, ರೈಲಿನ ಕಂಪಾರ್ಟ್‌ಮೆಂಟಿನಲ್ಲಿ, ಟೀವಿ ಸ್ಟುಡಿಯೋಗಳಲ್ಲಿ, ಫೇಸ್‌ಬುಕ್‌ನಲ್ಲಿ ಇವರಿಬ್ಬರದೇ ಮಾತುಗಳು, ಲೈಕ್‌ಗಳು-ಡಿಸ್‌ಲೈಕ್‌ಗಳು, ಕಮೆಂಟ್‌ಗಳು. ಇವರಿಬ್ಬರ ಕುರಿತು ಕೆಲವು ತುಣುಕು ...

ರಾಹುಲ್- ಮೋದಿ ನಡುವಿನ ಹೋಲಿಕೆ
* ಇಬ್ಬರೂ ಗಾಂಧಿಗೆ ಹತ್ತಿರದವರು. ಮೋದಿ ಹೇಳಲಿಕ್ಕೆ ಗಾಂಧಿ ಹುಟ್ಟೂರಿಗೆ ಸೇರಿದವರು; ರಾಹುಲ್ ಹೇಳಲಿಕ್ಕೆ ಗಾಂಧಿ ಸರ್‌ನೇಮ್ ಇಟ್ಟುಕೊಂಡವರು.

* ಇಬ್ಬರಿಗೂ ಸಂಸಾರದ ಸುಖ ದುಃಖಗಳು ಗೊತ್ತಿಲ್ಲ . ಈ ವಿಚಾರದಲ್ಲಿ ಇಬ್ಬರದೂ ಗುಟ್ಟು ಗುಟ್ಟು .

* ರಾಹುಲ್ ಪ್ರಧಾನಿ ಅಭ್ಯರ್ಥಿ ಎಂದು ಹೇಳುವ ಧೈರ‌್ಯ ಕಾಂಗ್ರೆಸ್ ನಾಯಕರಿಗೆ ಇನ್ನೂ ಬಂದಿಲ್ಲ ; ಮೋದಿ ಪ್ರಧಾನಿ ಅಭ್ಯರ್ಥಿ ಅಲ್ಲ ಎಂದು ಬಿಜೆಪಿಯೊಳಗೆ ಜೋರಾಗಿ ಹೇಳುವ ಧೈರ‌್ಯ ಯಾರಿಗೂ ಇಲ್ಲ.

* ಮೋದಿ ಮಾತು ಕೇಳಲು ಹತ್ತು ರೂಪಾಯಿ ಬಿಲ್ ಹಾಕುತ್ತಾರೆ; ರಾಹುಲ್ ಮಾತು ಕೇಳಿ ಸರಕಾರ ಬಿಲ್ ವಾಪಸ್ ಮಾಡುತ್ತದೆ.

* ಇಬ್ಬರೂ ರಾಷ್ಟ್ರೀಯವಾದಿಗಳು. ಮೋದಿ ಮಾತೆತ್ತಿದರೆ ಹಿಂದೂ ರಾಷ್ಟ್ರೀಯವಾದಿ ಎನ್ನುತ್ತಾರೆ. ರಾಹುಲ್ ಪಕ್ಷವೇ ರಾಷ್ಟ್ರೀಯ ಕಾಂಗ್ರೆಸ್.

* ಸೀನಿಯರ್‌ಗಳನ್ನೆಲ್ಲ ಬದಿಗೆ ತಳ್ಳಿ ಮೇಲೆ ಬಂದ ಇಬ್ಬರೂ ಪಾರ್ಟಿಯಲ್ಲಿ ಜೂನಿಯರ್‌ಗಳೇ.

ಹಾಗಾದ್ರೆ ಏನು ಡಿಫರೆನ್ಸ್?
* ಮೋದಿ 60ರ ವಯಸ್ಸಿನಲ್ಲಿ 30ರ ಹುಡುಗನಂತೆ ರೋಷಾವೇಶ ತೋರಿಸುತ್ತಾರೆ; 40ರ ರಾಹುಲ್ 60ರ ವೃದ್ಧರಂತೆ ಸೀರಿಯಸ್ ಆಗಿರ್ತಾರೆ.

* ರಾಹುಲ್ ಮಾತೆತ್ತಿದರೆ 'ಕನಸು ಕಾಣಬೇಕು' ಎಂದು ಕರೆ ಕೊಡ್ತಾರೆ; ಮೋದಿ ಪ್ರಧಾನಿ ಆಗೇಬಿಟ್ಟೆ ಎಂದು ಕನಸು ಕಾಣ್ತಾರೆ.

* ಇಬ್ಬರೂ ಪರಮ ಅಮಾಯಕರು. 'ನಾನು ಅಮಾಯಕ' ಎಂದು ಕೋರ್ಟಿನ ಮುಂದೆ ಮೋದಿ ಹೇಳಿದರೆ, 'ಅಮ್ಮ ಹೇಳಿದ ಮೇಲೆ ಗೊತ್ತಾಯಿತು' ಎಂದು ಹೇಳಿ ರಾಹುಲ್ ಅಮಾಯಕತನ ತೋರುತ್ತಾರೆ.

* ಮಾತಿನ ವಿಚಾರಕ್ಕೆ ಬಂದರೆ, ಒಬ್ಬರು ಪ್ರೊಫೆಸರ್, ಇನ್ನೊಬ್ಬರು 'ರೀಡರ್.'
***

ಫೇಸ್‌ಬುಕ್ಕಿನ ಎರಡು ಚರ್ಚೆ
ಮೋದಿ: ರಾಜಸ್ಥಾನ ಸರಕಾರದ ಭ್ರಷ್ಟಾಚಾರಕ್ಕೆ ಎಣೆ ಇಲ್ಲ. 1ರ ಮುಂದೆ ಸೊನ್ನೆ ಹಾಕಿಕೊಂಡು ಬಂದರೆ ಭೋಪಾಲ್‌ನಿಂದ ದಿಲ್ಲಿ ತನಕ ಬರುತ್ತದೆ.

ಅಹ್ಮದ್ ಪಟೇಲ್: ಇಲ್ಲ ಇಲ್ಲ... ಕಾಂಗ್ರೆಸ್ ತನಿಖೆಯಿಂದ ಇದು ಸುಳ್ಳೆಂದು ಗೊತ್ತಾಗಿದೆ.

ಸೋನಿಯಾ: ವೆರಿಗುಡ್ ಅಹ್ಮದ್... ಕ್ವಿಕ್ ಇನ್‌ವೆಸ್ಟಿಗೇಷನ್.

ಅಹ್ಮದ್ ಪಟೇಲ್: ಥ್ಯಾಂಕ್ಯೂ ಮೇಡಂ. ವಾಸ್ತವವಾಗಿ, ಸೊನ್ನೆಗಳು ದಿಲ್ಲಿ ತನಕ ಬರೋದಿಲ್ಲ. ಆಗ್ರಾ ತನಕ ಮಾತ್ರ ಮೇಡಂ.
***

ರಾಹುಲ್: ಈ ದೇಶದ ಯುವಜನರೆಲ್ಲ ಒಂದಾಗಬೇಕು. ದೇಶದ ಬಗ್ಗೆ ಕನಸು ಕಾಣಬೇಕು.

ಆಡ್ವಾಣಿ: ಅಬ್ಜೆಕ್ಷನ್... ಈ ದೇಶವನ್ನು ವಯಸ್ಸಿನ ಆಧಾರದ ಮೇಲೆ ಒಡೀಬೇಡಿ.

ಸುಷ್ಮಾ: ಯೆಸ್... ಯೆಸ್... ಹಿರಿಯರನ್ನು ನಿರ್ಲಕ್ಷಿಸಲಾಗುತ್ತಿದೆ. ನೀವೇ ಎಕ್ಸಾಂಪಲ್. ಹಾಗೆ ನೋಡಿದರೆ, ಈ ಪ್ರವೃತ್ತಿಗೆ ಕಾಂಗ್ರೆಸ್ಸೇ ಕಾರಣ.

ರಾಹುಲ್: ನಾನ್‌ಸೆನ್ಸ್!

ರಾಹುಲ್: ಕರೆಕ್ಷನ್-ಐಯಾಮ್ ಸ್ಸಾರಿ. ನನ್ನ ಭಾವನೆಯನ್ನು ಮಾತ್ರ ನೋಡಿ. ಪದಗಳನ್ನು ಅಲ್ಲ . ಓಕೆ?

ಆಡ್ವಾಣಿ: ಸುಷ್ಮಾ, ಮತ್ತೆ ಇಲ್ಲಿ ಒಡೆದು ಆಳುವ ನೀತಿ ಜಾರಿಗೆ ತರಲಾಗುತ್ತಿದೆ. ನೋಡಿ ಅಲ್ಲಿ ತೆಲಂಗಾಣ.

ಮಾಯಾವತಿ: ಆಡ್ವಾಣಿಜೀ, ಒಡೆದು ಆಳುವ ನೀತಿ ನಿಮ್ಮದು. ಆದರೆ, ಉತ್ತರ ಪ್ರದೇಶದಲ್ಲಿ ಈ ಎಸ್ಪಿಯೋರು ಹೊಡೆದು ಆಳುವ ನೀತಿ ಜಾರಿಗೆ ತಂದಿದ್ದಾರಲ್ಲ.
***

ಮಲ್ಲಿಕಾ ಗೋಳು
ಮೋದಿಯಲ್ಲಿ ನಾನು ಅಗಾಧವಾದ ಪ್ರೀತಿ ಇಟ್ಟಿದ್ದೆ . ಆದರೆ ಈಗ ಭ್ರಮನಿರಸನವಾಗಿದೆ-ಮಲ್ಲಿಕಾ ಶೆರಾವತ್.

ಏಕೆಂದರೆ, ಭೇಟಿ ಮಾಡಲು ಬಂದ ಮಲ್ಲಿಕಾ ಜತೆ ಮಾತನಾಡುತ್ತಾ ಮೋದಿ, ಅಭ್ಯಾಸಬಲದಿಂದ ''ಭಾಯಿಯೋ, ಬೆಹನೋ...'' ಎಂದು ಹೇಳಿಬಿಟ್ಟರಂತೆ.
***

ಒಂದೇ ಪ್ರಶ್ನೆ: ಬೇರೆ ಉತ್ತರ
ರಿಪೋರ್ಟರ್: ಅಭಿವೃದ್ಧಿ ಎಂದರೆ ಏನು?

ಮೋದಿ: ಡೆವಲಪ್‌ಮೆಂಟ್ ಮತ್‌ಲಬ್ ಗುಜ್‌ರಾತ್. ಏಕ್‌ಬಾರ್ ಗುಜರಾತ್‌ಗೆ ಬನ್ನಿ. ಎಲ್ಲ ಗೊತ್ತಾಗುತ್ತದೆ.

ರಾಹುಲ್: ಈ ದೇಶದಲ್ಲಿ ಬಡವರು ಕನಸು ಕಾಣುವುದೇ ಅಭಿವೃದ್ಧಿ. ಪೂರೀ ರೋಟಿ ಖಾಯೆಂಗೆ, ಸೌ ದಿನ್ ಕಾಮ್ ಕರೇಂಗೆ-ದವಾಯಿ ಲೇಂಗೆ ಔರ್ ಕಾಂಗ್ರೆಸ್‌ಗೆ ಜಿತಾಯೆಂಗೇ... ಇದೇ ಅಭಿವೃದ್ಧಿ.
***

ರಿಪೋರ್ಟರ್: ಸೆಕ್ಯುಲರ್ ಎಂದರೇನು?
ಮೋದಿ: ಬುಲ್‌ಶಿಟ್. ನಮಗೆ ಬೇಕಾದವರನ್ನು ಜತೆಗೆ ಕರೆದುಕೊಂಡು ಹೋಗುವುದೇ ಸೆಕ್ಯುಲರಿಸಂ.

ರಾಹುಲ್: ಎಂಥ ಕಾಂಪ್ಲಿಕೇಟೆಡ್ ಕೊಶ್ಚನ್. ಪ್ಲೀಸ್, ಅಮ್ಮನನ್ನು ಒಂದು ಮಾತು ಕೇಳಿ ಹೇಳಲಾ?

ರಿಪೋರ್ಟರ್: ಬಡತನ ಎಂದರೇನು?

ಮೋದಿ: ನಮ್ಮಲ್ಲಿ ಬಡತನ ಇಲ್ಲ . ಯಾರಾದರೂ ಸಣಕಲು ಇದ್ದರೆ ಅದು ಡಯಟ್‌ನಿಂದಷ್ಟೆ .

ರಾಹುಲ್: ಅದೊಂದು ಮಾನಸಿಕ ಸ್ಥಿತಿ.
***

ಕೊನೇ ಮಾತು: ಇವರಿಬ್ಬರೂ ರಾಜಕಾರಣಿಗಳಾಗದಿದ್ದರೆ ಏನಾಗುತ್ತಿದ್ದರು?

ರಾಹುಲ್-ಲೆಕ್ಚರರ್: ಏಕೆಂದರೆ, ಪಠ್ಯದಲ್ಲಿ ಏನಿದೆಯೋ ಅದನ್ನು ಓದಿ, ಕ್ಲಾಸ್ ಮುಗಿದ ಕೂಡಲೇ ಕಣ್ಮರೆಯಾಗುತ್ತಾರೆ.


ಮೋದಿ-ಗಣಿತಜ್ಞ: ಡಿವಿಷನ್‌ನಲ್ಲಿ ಮೋದಿ ಪರ್‌ಫೆಕ್ಟ್; ಏನನ್ನು ಕೊಟ್ಟರೂ ಡಿವೈಡ್ ಮಾಡ್ತಾರೆ.


ಹೌದು ಸ್ವಾಮಿ, ಬೆಂಗಳೂರು ಇರೋದೇ ಹೀಗೆ!
Sep 22, 2013, 04.00AM IST
ತಲೆ ತುಂಬಾ ಕನಸು ಹೊತ್ತುಕೊಂಡು, ಹೆಗಲಿನಲ್ಲೊಂದು ಮಣಭಾರದ ಚೀಲ ಹೇರಿಕೊಂಡು ಬೆಳಿಗ್ಗೆ ಮೆಜೆಸ್ಟಿಕ್ ನಿಲ್ದಾಣದಲ್ಲಿ ಕಣ್ಣುಜ್ಜಿಕೊಂಡು ಬಸ್ ಇಳಿಯುವ ಅದೆಷ್ಟೋ ಮಂದಿಗೆ ಬೆಂಗಳೂರು ಎಂದರೆ ಅದೇನೋ ಪುಳಕ, ಸೆಳೆತ. ಸಿನಿಮಾ ತಾರೆಯರ ಪೋಸ್ಟರ್ ನೋಡಿಕೊಂಡು, ಬಸ್ಸಿನಿಂದ ಬಸ್ಸಿಗೆ ಜಿಗಿಯುವ ಜನರ ಧಾವಂತ ನೋಡಿಕೊಂಡೇ, ಒಂದರೆಕ್ಷಣದಲ್ಲಿ ಇವರೂ ಬೆಂಗಳೂರಿ ಗರೇ ಆಗಿಬಿಡುತ್ತಾರೆ. ದಿನವೂ, ಹೊಸ ಕೆಲಸ ಹುಡುಕಿ ಕೊಂಡು ಬರುವ ಇಂಥ ಸಾವಿರಾರು ಮಂದಿಯನ್ನು ಬೆಂಗಳೂರು ತಕರಾರಿಲ್ಲದೆ ತನ್ನೊಳಗೆ ಸೇರಿಸಿಕೊಳ್ಳುತ್ತದೆ.

ಹೊಸ ತಲೆಮಾರಿನ ಹುಡುಗರಿಗೆ ಬೆಂಗಳೂರು ಮಾಯಾನಗರಿ; ಇಲ್ಲೇ ಬದುಕಿರುವವರಿಗೆ ನರಕನಗರಿ. ಉಬ್ಬಿ ಉಬ್ಬಿ ಒಡೆದುಹೋಗುವ ಬುಗ್ಗೆ ಈ ಬೆಂಗಳೂರು ಎಂದು ಗೊತ್ತಿದ್ದರೂ, ಇಲ್ಲಿನ ರಸ್ತೆಗಳ ಗುಂಡಿಗಳಿಗೆ ಜನ ಬೇಕೆಂದೇ ಬೀಳ್ತಾರೆ; ಟ್ರಾಫಿಕ್ ಜಾಮ್‌ನ ಹೊಗೆ ಕುಡಿದು, ರೋಡ್ ಸೈಡಲ್ಲಿ ರಾಗಿಮುದ್ದೆ ತಿಂದು, ಫಿಲ್ಟರ್ ಮರಳಲ್ಲಿ ಕಟ್ಟಿದ ಮನೆಯಲ್ಲಿ ಬದುಕೋ ಲಕ್ಷಾಂತರ ಮಂದಿಯ ಕನಸಿಗೆ ಬೆಂಗಳೂರು ಆಸರೆಯಾಗಿದೆ. ಮಾಲ್‌ಗಳ ಕಾರಿ ಡಾ ರಿ ನಲ್ಲಿ ವಾಕಿಂಗ್ ಮಾಡೋ ತರಳೆಯರಿಗೆ; ರಿಂಗ್‌ರೋಡಿ ನಲ್ಲಿ ಜಾಲಿ ರೈಡ್ ಮಾಡೋ ಹುಡುಗರಿಗೆ; ಪುಟ್ಟದೊಂದು ಮನೆ ಕೊಂಡು ರಿಟೈರ್ಡ್ ಲೈಫ್ ಸಾಗಿಸುವ ಹಿರಿಯರಿಗೆ... ಹೀಗೆ ಬೆಂಗಳೂರು ಎಲ್ಲರಿಗೂ ಬದುಕು ಕೊಡುತ್ತಿದೆ.

ಬೆಂಗಳೂರು ಬೆಂಗಳೂರೇ. ಇದಕ್ಕೆ ಇನ್ನಾವ ಊರಿನ ಸಾಟಿಯೂ ಇಲ್ಲ. ಇಲ್ಲಿ ಮಾತ್ರ ವಿಚಿತ್ರ ನಡೆಯಲು ಸಾಧ್ಯ.

ಬೆಂಗಳೂರು ಸ್ಪೆಷಲ್

*ಇಲ್ಲಿ ಮಾತ್ರ ಹೊಸ ಕಟ್ಟಡಾನ ಉರುಳಿಸೋ ಉದ್ಯಮ ಬೆಳೆಯುತ್ತದೆ.

*ಎಲ್ಲ ಊರಲ್ಲಿ ಫುಟ್‌ಪಾತ್‌ನಲ್ಲಿ ಜನ ನಡೆದಾಡಿದರೆ, ಇಲ್ಲಿ ಟೂ ವೀಲರ್‌ಗಳು ಓಡಾಡುತ್ತವೆ.

*ಇಲ್ಲಿ ಎಲ್ಲರಿಗೂ ದಾರಿ ಗೊತ್ತಿದೆ; ಗೊತ್ತಿಲ್ಲ ಅನ್ನೋರೇ ಇಲ್ಲ. ಫಸ್ಟ್ ರೈಟ್, ಲೆಫ್ಟ್, ಡೆಡ್ ಎಂಡ್ ರೈಟ್... ಕಡೆಗೆ, ಅಲ್ಲಿ ಯಾರನ್ನಾದರೂ ಕೇಳಿ ಅಂತ ದಾರಿ ತಪ್ಪಿಸ್ತಾರೆ.

*ಪಕ್ಕದಲ್ಲಿ ಒಬ್ಬಳು ಹುಡುಗಿ ಇದ್ದರೆ ಸಾಕು; ಮದುವೆ ಆಗಲೇಬೇಕೆಂದೇನಿಲ್ಲ. ಬಾಡಿಗೆ ಮನೆ ಸಿಗುತ್ತದೆ.

*ಎಲ್ಲ ಊರಲ್ಲಿ ಮಾಜಿ ಪ್ರಧಾನಿಗಳ ಹೆಸರಲ್ಲಿ ರೋಡ್, ಕಟ್ಟಡ ಇದ್ದರೆ ಇಲ್ಲಿ ಪೆಟ್ರೋಲ್ ಬಂಕ್ ಇದೆ.

*ನಿಮ್ಮ 'ಹೆಂಗಸರು' ಹೇಗಿದ್ದಾರೆ ಅಂತ ಕೇಳಿದರೆ ಗಾಬರಿಯಾಗಬೇಡಿ; ಇದು ಬೆಂಗಳೂರು ಭಾಷೆ.

*ಸೈಲೆಂಟಾಗಿದ್ರೆ ಸೈಡಿಗಿಟ್ಟುಬಿಡ್ತಾರೆ. ಹಾರ್ನ್ ಹಾಕಿದರೆ ಮಾತ್ರ ದಾರಿ ಸಿಗುತ್ತೆ.

*ಇಲ್ಲಿನ ಜನಕ್ಕೆ ಯಾವಾಗಲೂ ಟೆನ್ಷನ್. ಆಟೋದಲ್ಲೇ ಮಗುವನ್ನು ಮರೆತುಬಿಡ್ತಾರೆ.

*ಕಾಸುಕೊಟ್ರೆ ಆಸ್ಪತ್ರೆಯಲ್ಲಿ ಒಳ್ಳೆಯ ಚಿಕಿತ್ಸೆ ಸಿಗುತ್ತೆ; ಸರಕಾರಿ ಆಸ್ಪತ್ರೆಯಲ್ಲಿ ಮಗು ಸಹ ಸಿಗುತ್ತೆ.

*ಎಳೆನೀರು ಅಂಗಡಿ ಎಲ್ಲೋ ಕಾರ್ನರ್‌ನಲ್ಲಿರುತ್ತದೆ. ಮದ್ಯದಂಗಡಿ ಪೇಟೆಯ ಮಧ್ಯ ಮಧ್ಯ ಇರುತ್ತದೆ.

*ಎಲ್ಲೆಡೆ ಅಮ್ಮಂದಿರು ಶಾಲೆಯಿಂದ ಬರೋ ಮಕ್ಕಳಿಗೆ ಕಾಯ್ತಾರೆ. ಇಲ್ಲಿ ಮಕ್ಕಳೇ ರಾತ್ರಿ ಕೆಲಸ ಮುಗಿಸಿಕೊಂಡು ಬರೋ ಅಮ್ಮನಿಗೆ ಕಾಯ್ತಾರೆ.

*ಇಲ್ಲಿ ವರ್ಷವಿಡೀ ಹಬ್ಬ. ಗಣೇಶೋತ್ಸವ, ರಾಜ್ಯೋ ತ್ಸವ, ಅಣ್ಣಮ್ಮ ಉತ್ಸವ... ಏನೂ ಇಲ್ಲಾಂದ್ರೆ ಯಾವುದೋ ಸಿನಿಮಾ ನಟನ ಬರ್ತ್‌ಡೇ.

*ಬೆಳಗ್ಗೆ ಮನೇಲಿ ಗಂಡ-ಹೆಂಡತಿ ಮಧ್ಯೆ ಜಗಳ ಆಗುತ್ತದೆ. ಸಂಜೆ ಅವರಲ್ಲಿ ಒಬ್ಬರು ಟಿ.ವಿ. ಸ್ಟುಡಿಯೋನಲ್ಲಿ ಇರುತ್ತಾರೆ.

*ಕುಡಿಯೋಕೆ ಹೆಜ್ಜೆ ಹೆಜ್ಜೆಗೂ ಒಂದಲ್ಲ ಒಂದು ಸಿಗುತ್ತದೆ; ವಿಸರ್ಜನೆಗೆ ಕಿಲೋಮೀಟರ್ ಅಲೆದರೂ ಸಿಗದು.

*ಬೆಂಗಳೂರಿನಲ್ಲಿ ಸಿಗ್ನಲ್ ಬೀಳೋವಾಗ ಮೊದಲು ಕಾಣೋದು ಲಾಸ್ಟ್ ಲೈನಿನಲ್ಲಿ ನಿಂತುಕೊಂಡೋನಿಗೆ. ಸಿಗ್ನಲ್ ಬಿದ್ದ ತಕ್ಷಣ ಹಾರನ್ ಬೊಬ್ಬೆ ಹಾಕುತ್ತಾನೆ.

*ಇಲ್ಲಿಂದ ದಿಲ್ಲಿಗೆ ಹೋಗೋಕೆ ಎರಡು ಗಂಟೆ. ಸಿಟಿಯ ಒಂದು ಮೂಲೆಯಿಂದ ಏರ್‌ಪೋರ್ಟಿಗೆ ಹೋಗೋಕೆ ಮೂರು ಗಂಟೆ.

*ಬೇರೆ ಊರಲ್ಲಿ ಮನೆ ಎದುರು ಮರದ ಕೆಳಗೆ ವಾಹನ ನಿಲ್ಲಿಸ್ತಾರೆ. ಇಲ್ಲಿ ವಾಹನ ನಿಲ್ಲಿಸೋಕೆ ಮರ ಕಡೀತಾರೆ.

*ಊರಿಗೆ ಬಂದೋಳು ನೀರಿಗೆ ಬರ್ತಾಳೆ ಅನ್ನೋ ಗಾದೆ ಇಲ್ಲಿ, 'ಊರಿಗೆ ಬಂದೋಳು ಕಸ ಎಸೆಯೋಕೆ ಬರ್ತಾಳೆ' ಅಂತ ಬದಲಾಗಿದೆ.

*ಮೂರನೇ ಮಹಡೀಲಿ ನಾಯಿ ಸಾಕ್ತಾರೆ; ನಾಯಿ ಸತ್ರೆ ಸಮಾಧಿ ಕಟ್ತಾರೆ. ಅಪ್ಪ-ಅಮ್ಮ ಸತ್ತರೆ ಚಿತಾಗಾರದಲ್ಲಿ ಸುಟ್ಟುಬಿಡ್ತಾರೆ.

*ಮಾಲ್‌ನಲ್ಲಿ ಹೇಳಿದ ರೇಟ್ ಕೊಡೋ ಜನ ಕೆ ಆರ್ ಮಾರ್ಕೆಟ್‌ನಲ್ಲಿ 2 ರೂಪಾಯಿಗೆ ಚೌಕಾಸಿಗೆ ಇಳಿತಾರೆ.

*ಕಾಂಪೌಂಡ್ ಪಕ್ಕ ಇರುವ ಫುಟ್‌ಪಾತ್‌ನಲ್ಲಿ ನಡೀಬಾರದು. ನಡೆದರೂ ಮೂಗು ಮುಚ್ಚಿಕೊಳ್ಳಬೇಕು.

*ಇಲ್ಲಿ 15-30 ಸೈಟಿನಲ್ಲಿ ಕಟ್ಟಿದ ಮನೆಗೆ ತ್ರಿಬಲ್ ಬೆಡ್‌ರೂಮ್ ಹೌಸ್ ಎನ್ನುತ್ತಾರೆ.

*ಬೆಂಗಳೂರು ಜನ ಶ್ರೀಮಂತರು. ಏಕೆಂದರೆ, ಪೆಟ್ರೋಲ್‌ಗೆ ಮೂರು ರೂಪಾಯಿ ಜಾಸ್ತಿ ಕೊಡ್ತಾರೆ. ಮೋದಿ ಸಮಾವೇಶಕ್ಕೆ ಬೇರೆ ನಗರಗಳಿಗಿಂತ ಜಾಸ್ತಿ ಹಣ ಕೊಡ್ತಾರೆ.

ಬೆಂಗಳೂರು ಜನ: ಈ ಊರಿನ ಜನರೇ ವಿಚಿತ್ರ. ಅಂಥ ಜನರನ್ನ ಪರಿಚಯ ಮಾಡಿಕೊಳ್ಳಿ:

*ಕಿವಿಗೆ ಇಯರ್‌ಫೋನ್ ಹಾಕಿಕೊಂಡು ಫೇಸ್‌ಬುಕ್‌ನಲ್ಲಿ ಚಾಟ್ ಮಾಡಿಕೊಂಡು ಅವರಷ್ಟಕ್ಕೇ ಅವರು ನಕ್ಕರೆ - ಅವರು ಹುಡುಗಿಯರು.

*ಅಪ್ಪ ಕೊಟ್ಟ ದುಡ್ಡಿನಲ್ಲಿ ಪೆಟ್ರೋಲ್ ಹಾಕಿಸಿಕೊಂಡು ಬೈಕಿನಲ್ಲಿ ಗರ್ಲ್‌ಫ್ರೆಂಡ್ ಜತೆ ರಿಂಗ್‌ರೋಡಿನಲ್ಲಿ ರೈಡ್ ಮಾಡುತ್ತಿದ್ದರೆ - ಅವನು ಹುಡುಗ.

*ಬೇಡವಾಗಿದ್ದನ್ನು ಶಾಪಿಂಗ್ ಮಾಡೋರು ಹೆಂಗ ಸರು; ಬೇಕಾಗಿದ್ದನ್ನೂ ಮರೆತುಬಿಡುವವರು ಗಂಡಸರು.

*ಕೈಯಲ್ಲಿ ಚಿಲ್ಲರೆ ಇದ್ರೂ ಟಿಕೆಟ್ ಹಿಂದೆ ಬರೆದುಕೊಡೋನು ಬಿಎಂಟಿಸಿ ಕಂಡಕ್ಟರ್.

*ಬರ್ತೀರಾ ಅಂತ ಕೇಳಿದ್ರೆ, 'ಬರೋಲ್ಲ' ಅಂತ ಅನ್ನೋನು ಆಟೋ ಡ್ರೈವರ್.

*ಸಂಜೆ ಹೋಮ್‌ವರ್ಕ್ ಮಾಡೋಳು ಅಮ್ಮ; ಮೊಬೈಲ್ ಗೇಮ್ಸ್ ಆಡೋನು ಮಗ; ಯಾವುದಕ್ಕೂ ತಲೆ ಕೆಡಿಸಿಕೊಳ್ಳದವನು ಅಪ್ಪ.

*ಸಿಗ್ನಲ್‌ನಲ್ಲಿ ನಿಂತ ವೆಹಿಕಲ್‌ಗಳ ಫೋಟೊ ತೆಗೀತಾ ಯಾರಾದ್ರೂ ನಿಂತುಕೊಂಡಿದ್ದರೆ, ಆತ ಟ್ರಾಫಿಕ್ ಪೊಲೀಸ್.


‘ಸೈಕೋ ಶಂಕರ ಎಂದೇ ಅಜರಾಮರನಾಗುSep 8, 2013

ಅತ್ತ ಅಸಾರಾಮ್ ಬಾಪು ಜೈಲಿನಲ್ಲಿ ಸತ್ಸಂಗ ಮಾಡುತ್ತಿರುವಾಗಲೇ ನಮ್ಮ ನಾಡಿನ ಇನ್ನೊಬ್ಬ ಖ್ಯಾತ ಗುರೂಜಿ ಶ್ರೀ ಶ್ರೀ ಶ್ರೀ ಪ್ರಾಬ್ಲಂ ಸಾಲ್ವಾನಂದ ಸ್ವಾಮೀಜಿ ತಮ್ಮ ವಿದೇಶ ಪ್ರವಾಸ ಮುಗಿಸಿ ಮರಳಿ ಭಾರತಕ್ಕೆ ಬಂದಿದ್ದಾರೆ. ಅವರ ಪಾದ ಭಾರತಕ್ಕೆ ಸ್ಪರ್ಶಿಸುವುದೇ ತಡ, ಅವರ ಪಾದವನ್ನು ಸ್ಪರ್ಶಿಸಲು ಸಾವಿರಾರು ಮಂದಿ ಕ್ಯೂನಲ್ಲಿ ನಿಂತುಕೊಂಡಿದ್ದಾರೆ.
ಉಳ್ಳವರು ಮನೆಗೆ ಕರೆದೊಯ್ದು ಪಾದಪೂಜೆ ಮಾಡಿದರೆ, ಇಲ್ಲದವರು ಇದ್ದಲ್ಲೇ ಪಾದಕ್ಕೆ ಎರಗಿದ್ದಾರೆ. ರಾಜಕಾರಣಿಗಳು, ಉದ್ಯಮಿಗಳು, ವಿಜ್ಞಾನಿಗಳು, ಸಮಸ್ಯೆ ಉಳ್ಳವರು, ಸಮಸ್ಯೆ ಸೃಷ್ಟಿಸುವವರು... ಹೀಗೆ ಸಮಾಜದ ಎಲ್ಲ ವರ್ಗದ ಜನರ ಪ್ರಾಬ್ಲಂಗಳಿಗೆ ಅವರು ಉತ್ತರ ನೀಡುತ್ತಾರೆ.
ಈ ಸಲವೂ ಹಾಗೆಯೇ. ಸ್ವಾಮೀಜಿಗಳು ಬಂದ ಕೂಡಲೇ ಗಣ್ಯ-ಅಗಣ್ಯರು ಬಂದು ಪ್ರಶ್ನೆ ಕೇಳಿದ್ದಾರೆ. ಅಂಥ ಕೆಲವು ಪ್ರಶ್ನೋತ್ತರಗಳನ್ನು ಇಲ್ಲಿ ನೀಡಲಾಗಿದೆ.
ಸೈಕೋ ಶಂಕರ್: ನಾನು ಸೈಕೋ ಇರಬಹುದು. ಆದರೆ, ಜನ ನನ್ನನ್ನು ಸೈಕೋ, ಸೈಕೋ ಎಂದು ಹೀಗಳೆಯುವುದು ಸರೀನಾ? ನಾನು ಜೈಲಿನಿಂದ ತಪ್ಪಿಸಿಕೊಂಡು ಇಷ್ಟು ವೇಗದಲ್ಲಿ ಸಿಕ್ಕಿಹಾಕಿಕೊಳ್ಳಲು ಏನು ಕಾರಣ?
ಸ್ವಾಮೀಜಿ: ಶಂಕರ, ನಿನ್ನ ಅದೃಷ್ಟ ವಕ್ರವಕ್ರವಾಗಿದೆ. ನಿನ್ನ ಕಾರಾ'ಗ್ರಹಗತಿ'ಯಲ್ಲಿ ದೋಷ ಕಂಡುಬಂದಿರುವುದರಿಂದಲೇ ಮತ್ತೆ ಕಾರಾಗೃಹ ಸೇರಿಕೊಂಡಿರುವಿ. ಭಯ ಪಡಬೇಡ. 'ಸಹ-ವಾಸ'ದ ಬಗ್ಗೆ ಹೆಚ್ಚು ಗಮನ ಇರಲಿ. ಜೈಲರ್‌ಗಳಿಗೆ ನಿತ್ಯ ನಾಲ್ಕೈದು ಬಿಸ್ಕೆಟ್ ಹಾಕುತ್ತಿರು. ಇದರಿಂದ ನಿನಗೆ ಭವಿಷ್ಯದಲ್ಲಿ ಒಳ್ಳೆಯದಾಗುತ್ತದೆ. ಹಾಗೆಯೇ, ನ್ಯೂಮರಾಲಜಿ ಪ್ರಕಾರ ನಿನ್ನ ಹೆಸರಿನಲ್ಲಿ 'ಜೈ' ಎನ್ನುವ ಪದ ಇರುವ ತನಕ ನಿನ್ನ ಬಿಡುಗಡೆ ಕಷ್ಟಸಾಧ್ಯ. ಜನ ಏನೇ ಹೇಳಲಿ, ನೀನು 'ಸೈಕೋ ಶಂಕರ' ಎಂಬ ಹೆಸರಿನಿಂದಲೇ ಅಜರಾಮರನಾಗು. ಪರಪ್ಪನ ಅಗ್ರಹಾರ ಇರುವ ತನಕ ನೀನು ಇತಿಹಾಸದಲ್ಲಿ ಉಳಿದುಕೊಳ್ಳುತ್ತಿ. ಯಾರಾದರೂ ನಿನ್ನ ಹೆಸರಲ್ಲಿ ಸಿನಿಮಾ ಮಾಡೋಕೆ ಬಂದರೆ ಬಿಡಬೇಡ, ರಾಯಲ್ಟಿ ಕೇಳು.
***

ಒಬಾಮ: ಸಿರಿಯಾ ಮೇಲೆ ಯುದ್ಧ ಸಾರೋಣ ಅಂತ ಹೊರಟರೆ ಇವರೆಲ್ಲ ಅಡ್ಡಿ ಮಾಡ್ತಾರಲ್ಲಾ? ಯುದ್ಧ ಮಾಡಲಾ-ಬೇಡವಾ?
ಸ್ವಾಮೀಜಿ: ಅರರಾ ಒಬಾಮ, ಸಿರಿಯಾ ಸಂಗತಿಯನ್ನು ಇದ್ಯಾಕೆ ಇಷ್ಟೊಂದು ಸೀರಿಯಸ್ ಆಗಿ ತಗೊಂಡಿದ್ದೀಯೋ ಗೊತ್ತಿಲ್ಲ. 'ಯೆಸ್, ವಿ ಕ್ಯಾನ್' ಎನ್ನುವುದು ಎಲ್ಲ ಕಡೆಗೆ ಅನ್ವಯವಾಗಲಿಕ್ಕಿಲ್ಲ. ನೀನ್ಯಾಕೆ ಈಚೆಗೆ ಬುಸ್..ಬುಸ್ ಅನ್ನೋದನ್ನ ನೋಡಿದರೆ, ಆ ಹಳೇ ಅಧ್ಯಕ್ಷ ಬುಷ್ ನೆನಪಾಗ್ತಾರೆ. ಆತನೂ ಇರಾಕ್, ಅಫ್ಘಾನಿಸ್ತಾನದ ಮೇಲೆ ಯುದ್ಧ ಮಾಡಿ ಲಾಸ್ ಮಾಡಿಕೊಂಡನಲ್ಲ! ನೀನೀಗ ಮೊದಲು ನಿಮ್ಮ ದೇಶದ ಆರ್ಥಿಕ ಸ್ಥಿತಿಗತಿಯನ್ನು ಚೆನ್ನಾಗಿ ನೋಡಿಕೋ. ನೀನೊಬ್ಬ ಶಾಂತಿದೂತ ಎಂದು ಹೇಳಿ ಶಾಂತಿ ನೊಬೆಲ್ ಕೊಟ್ಟಿದ್ದನ್ನು ಮರೆಯಬೇಡ. ನಿನ್ನ ಮೇಲೆ ಶನಿಯ ವಕ್ರಗಣ್ಣು ಇರುವುದರಿಂದ ಇನ್ನೊಂದು ತಲಿಬ್ಯಾನಿ ಬೇಡ. ಆ ತಾಲಿಬಾನ್ ತಲೆನೋವೇ ಇನ್ನೂ ಕಡಿಮೆಯಾಗಿಲ್ಲ.

***
ರಮ್ಯ: ಹೆಂಗ್ಹೆಂಗೋ ಗೆದ್ದುಬಿಟ್ಟೆ. ಮುಂದ್ಹೆಂಗೆ ಅಂಕಲ್?
ಸ್ವಾಮೀಜಿ: ಪೊಲಿಟಿಕ್ಸ್ ಅನ್ನೋದು ನೀರ್‌ದೋಸೆಯಷ್ಟೇ ಸುಲಭ ಮಗಳೇ. ಹೆದರಬೇಡ. ಸಿನಿಮಾದಲ್ಲಿ ತಪ್ಪು ಡೈಲಾಗ್ ಹೇಳಿದರೆ ಕಟ್, ಕಟ್ ಎಂದರಾಯಿತು. ಇಲ್ಲಿ, ತಪ್ಪು ಮಾತನಾಡಿದರೆ, ನಾನು ಹಾಗೆ ಮಾತನಾಡಿಯೇ ಇಲ್ಲ ಎಂದರಾಯಿತು. ಸಿನಿಮಾದಲ್ಲಿ ಗೆಲ್ಲೋಕೆ ಡ್ಯಾನ್ಸ್ ಮಾಡಬೇಕು, ಆ್ಯಕ್ಟ್ ಮಾಡಬೇಕು. ಇಲ್ಲಿಯೂ ಆಕ್ಟಿಂಗ್ ಬೇಕು ನಿಜ. ಆದರೆ, ಡ್ಯಾನ್ಸ್ ಬೇಡ. ಕೈ ಮುಗಿದುಕೊಂಡು ನಿಂತರೆ ಸಾಕು. ''ನಾನು ನಿಮ್ಮ ಮನೆ ಮಗಳು, ನಾನು ನಿಮ್ಮ ಮನೆ ಮಗಳು,'' ಅನ್ನೋದನ್ನ ದಿನಕ್ಕೆ ನೂರು ಸಲ ಹೇಳು. ಮುಂದಿನ ಪಾರ್ಲಿಮೆಂಟ್ ಎಲೆಕ್ಷನ್‌ನಲ್ಲಿ ಗೆಲ್ಲೋ ತನಕ ಶ್ರೀ ಕ್ಷೇತ್ರ ಮಂಡ್ಯಕ್ಕೆ ವಾರಕ್ಕೆ ಮೂರು ಸುತ್ತು ಬಾ. ಎಲ್ಲವೂ ಒಳ್ಳೆಯದಾಗುತ್ತೆ. ಕೂಲಾಗಿರು.
***

ಮಾಸ್ಟರ್: ಗಣೇಶನ ಬಗ್ಗೆ ಬರೆದೆ...
ಸ್ವಾಮೀಜಿ: ಗೊತ್ತಾಯ್ತು, ಗೊತ್ತಾಯ್ತು ಬಿಡು ನಿನ್ನ ಸಮಸ್ಯೆ. ವಿಘ್ನರಾಜನ ಬಗ್ಗೆ ಕಾದಂಬರಿ ಬರೆದು ಅನವಶ್ಯಕ 'ವಿಘ್ನ' ತಂದುಕೊಂಡಿರಿ. ಇದರಿಂದ ನಿಮಗೆ ಲಾಭವಾಗಿದ್ದೇ ಹೆಚ್ಚಲ್ಲವೇ? ನಿಮ್ಮ ಹೆಸರನ್ನು
ನಾನೆಂದೂ ಕೇಳಿರಲಿಲ್ಲ. ಈಗ ನೀವು ಟೀವಿ ಚಾನೆಲ್‌ಗಳಲ್ಲಿ, ಪೇಪರ್‌ಗಳಲ್ಲಿ ಸುದ್ದಿಯಾಗುವ ಮಟ್ಟಕ್ಕೆ ರಾತ್ರೋರಾತ್ರಿ ಬೆಳೆದಿದ್ದೀರಿ. ಜತೆಗೆ, ಈ ನಾಡಿನ ಬುದ್ಧಿಜೀವಿಗಳ ಸಾಂಗತ್ಯ ಸಿಕ್ಕಿದೆ. ಈ ಕಾದಂಬರಿ ಬರೆಯದಿದ್ದರೆ ಇದೆಲ್ಲ ಸಾಧ್ಯವಾಗುತಿತ್ತಾ ಮಾಸ್ಟರ್? ಇನ್ನೂ ತುಂಬಾ ತೊಂದರೆಯಾದರೆ, 'ವಕ್ರತುಂಡ ಮಹಾಕಾಯ..' ಎಂಬ ಮಂತ್ರವನ್ನು ದಿನಕ್ಕೆ ನೂರೆಂಟು ಬಾರಿ ಪಠಿಸಿ.

***
ರಾಜನ್: ಗುರುಗಳೇ, ನೀವೇ ಈಗ ನನ್ನ ಪಾರು ಮಾಡಬೇಕು. ರೂಪಾಯಿ ಕುಸಿದಿದೆ, ದೇಶದ ಆರ್ಥಿಕ ಸ್ಥಿತಿಯೂ ಕೆಟ್ಟಿದೆ. ಇಂಥ ಟೈಮಲ್ಲಿ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿರುವೆ. ಈ ಸಂಕಟದಿಂದ ದೇಶವನ್ನು ಪಾರು ಮಾಡುವುದು ಹೇಗೆ? ನಾನು ಪಾರಾಗುವುದು ಹೇಗೆ?
ಸ್ವಾಮೀಜಿ: ಪ್ರಾಮಾಣಿಕವಾಗಿ ಹೇಳುವೆ, ಇದಕ್ಕೂ ನನ್ನಲ್ಲಿ ಮಂತ್ರದಂಡ ಇಲ್ಲ.
ನಿನ್ನ ಜಾತಕ ನೋಡಿದರೆ, ನಿನ್ನ ಊರಿನವರಿಂದಲೇ ಕಾಟ ಎನ್ನುವುದು ಸ್ಪಷ್ಟವಾಗಿ ಕಾಣುತ್ತದೆ.
ಬಹುಶಃ, ಅದು ಈಗಿನ ಹಣಕಾಸು ಸಚಿವರು ಇದ್ದರೂ ಇರಬಹುದು. ನಿನ್ನ ಅಧಿಕಾರಾವಧಿಯಲ್ಲಿ 'ಸಿ' ಮತ್ತು 'ಡಿ' ಎಂಬ ಅಕ್ಷರಗಳು ಬಲುವಾಗಿ ಕಾಡುವ ಲಕ್ಷಣ ಇದೆ. ಬಹುಶಃ 'ಸಿ' ಎಂದರೆ ಚಿದಂಬರಂ ಹಾಗೂ 'ಡಿ' ಎಂದರೆ ಡಾಲರ್ ಎಂದಿರಬೇಕು. ಫೇಸ್‌ಬುಕ್ ಲೈಕ್‌ಗೆಲ್ಲ ತಲೆಕೆಡಿಸಿಕೊಳ್ಳದೆ, ನಿತ್ಯ ಲಕ್ಷ್ಮಿಪೂಜೆ ಮಾಡು. ಒಳ್ಳೆಯದಾದರೂ ಆಗಬಹುದು.


ಹಬ್ಬಕ್ಕೆ ಗಣೇಶ ಯಾಕೆ ಬರೋಲ್ಲ?Aug 25, 2013

ಈ ವರ್ಷ ಚೌತಿಗೆ ಗಣೇಶ ಬರುವುದಿಲ್ಲ...
ಹೀಗಂತ ಟಿ.ವಿ.ಯಲ್ಲಿ ಶೇಕಿಂಗ್ ನ್ಯೂಸ್ ಬರುತಿತ್ತು. ಭಾದ್ರಪದ ಚೌತಿಗೆ ಇನ್ನೆರಡೇ ವಾರ ಇರುವಾಗ ಬಂದ ಈ ಸುದ್ದಿಯಿಂದ, ಮೊದಲೇ ಸಂಕಟದಲ್ಲಿರುವ ಜನ ತತ್ತರಿಸಿಬಿಟ್ಟರು. ಸಂಕಟಹರನಾದರೂ ಬಂದು ನಮ್ಮನ್ನು ಕಾಪಾಡುತ್ತಾನೆ ಎಂದು ಕಾದು ಕೂತಿದ್ದ ಜನರೆಲ್ಲ ಕಂಗಾಲಾಗಿಬಿಟ್ಟರು.
ಈಗ ಎಲ್ಲರದೂ ಒಂದೇ ಪ್ರಶ್ನೆ-ಶತಶತಮಾನಗಳಿಂದ ಭಾದ್ರಪದ ಚೌತಿಗೆ ಮಿಸ್ ಮಾಡದೇ ಬರುತ್ತಿದ್ದ ವಿನಾಯಕನಿಗೆ ಈ ವರ್ಷ ಏನಾಯಿತು? ಬಸ್ಸಿನಲ್ಲಿ, ರೈಲಿನಲ್ಲಿ, ಹರಟೆ ಕಟ್ಟೆಯಲ್ಲಿ, ಫೇಸ್‌ಬುಕ್ಕಿನಲ್ಲಿ, ಟಿ.ವಿ. ಸ್ಟುಡಿಯೋಗಳಲ್ಲಿ, ಪೇಪರ್‌ಗಳಲ್ಲೆಲ್ಲ ಅದೇ ಚರ್ಚೆ-ಗಣೇಶ ಯಾಕೆ ಬರೋದಿಲ್ಲ ಅನ್ನೋದು.
ಜ್ಯೋತಿಷಿಗಳಿಗೆ ಆಗಲೇ ಹಬ್ಬ ಶುರು. ಗಣೇಶನ ಕುಂಡಲಿ ಹಿಡಿದುಕೊಂಡು ಟಿ.ವಿ.ಗಳಲ್ಲಿ ಕೂತುಬಿಟ್ಟರು. ''ಭಾರತದ ಮೇಲೆ ಶನಿ ವಕ್ರದೆಸೆ ಬೀರಿದ್ದಾನೆ. ಹೀಗಾಗಿ, ಇವತ್ತು ಇಲ್ಲಿನ ಆರ್ಥಿಕ ಸ್ಥಿತಿ ಹದಗೆಟ್ಟಿದ್ದು, ರೂಪಾಯಿ ಕುಸಿಯುತ್ತಿದೆ; ಬೆಲೆ ಏರುತ್ತಿದೆ. ಈ ಕಾರಣದಿಂದ ಗಣೇಶ ಬರುತ್ತಿಲ್ಲ,'' ಎಂದು ಕಾವಿ-ನಾಯಕರು ತೀರ್ಮಾನಕ್ಕೆ ಬಂದುಬಿಟ್ಟರು.
ಎಲೆಕ್ಷನ್ ವಿಷಯಕ್ಕಾಗಿ ತಡಕಾಡುತ್ತಿದ್ದ ವಿರೋಧಿ ಬೆನಕ ಪಕ್ಷದ ನಾಯಕರಿಗೋ ಕಡುಬು-ಕಜ್ಜಾಯ ತಿಂದಷ್ಟು ಖುಷಿಯಾಯಿತು. ಗಜರಾಜನ 'ಪ್ರತಿಭಟನೆ'ಗೆ ಸರಕಾರದ ನೀತಿಯೇ ಕಾರಣ. ಕೂಡಲೇ ವಿಧಾನಸಭೆ ವಿಸರ್ಜಿಸಿ ಮತ್ತೆ ಚುನಾವಣೆ ಎದುರಿಸಬೇಕು ಎಂದು ಕಿರಿ-ಮರಿ ಪುಡಾರಿಗಳಿಂದ ಹಿಡಿದು 'ಧ್ವನಿ'ಕ ನಾಯಕರೆಲ್ಲರೂ ಹುಯಿಲೆಬ್ಬಿಸಿದರು.
ಪಕ್ಷದ ಅಧ್ಯಕ್ಷ ರಾಮನಾಥರು ಪತ್ರಿಕಾಗೋಷ್ಠಿ ಕರೆದು, ''ಗಣೇಶ ಬಾರದೆ ಇದ್ದರೆ ದೇಶಾದ್ಯಂತ ಬಾರದ-ಪದ ಮಾಸದಲ್ಲಿ ಗಜಯಾತ್ರೆ ಮಾಡಲಾಗುವುದು. ಪಕ್ಷದ ವತಿಯಿಂದ ಗಣೇಶನನ್ನು ಆಹ್ವಾನಿಸಿ ದೇವಾಲಯ ನಿರ್ಮಿಸಲಾಗುವುದು,'' ಎಂದು ಎಚ್ಚರಿಸಿದರು.
ಹೀಗೆ ಒಬ್ಬೊಬ್ಬರದು ಒಂದೊಂದು ಮಾತು...
''ವಿಘ್ನೇಶ್ವರನ ವಾಸಸ್ಥಳ ಕೈಲಾಸದ ಮೇಲೆ ಚೀನಾ ದಾಳಿ ಮಾಡಿರಬಹುದು. ಕೂಡಲೇ ಹರ್ಕ್ಯುಲಸ್ ವಿಮಾನ ಇಳಿಸಿ ಖಚಿತಪಡಿಸಿಕೊಳ್ಳಿ ಎಂದು 'ಗನ್'ಶ ಭಕ್ತರು ಆಗ್ರಹಿಸಿದರು.
''ಇದು ನಿಜವಾದ ಮಣ್ಣಿನ ಮಗನಿಗಾದ ಅವಮಾನ,'' ಎಂದು ಜೇಡಿ ಮಣ್ಣಿನ ಪಕ್ಷದವರೂ ದೂಳೆಬ್ಬಿಸಿದರು.
''ನಮ್ಮಲ್ಲಿ 'ಮೋದಿ'ಕ ಇದೆ, ಬನ್ನಿ,'' ಎಂದು ಗುಜರಾತಿನ ಭಕ್ತನೊಬ್ಬ ಟ್ವೀಟ್ ಮಾಡಿದ.
''ನಮ್ಮ ಚಿಕ್ಕ ಉದರಕ್ಕೆ ಹೊಡಿಬ್ಯಾಡಿ, ಲಂಬೋದರನ ಕರೆಯಿಸಿ,'' ಎಂದು ಅವಲತ್ತುಕೊಂಡು ಗಣೇಶನ ಮೂರ್ತಿ ಮಾಡೋರು, ಪೂಜೆ ಮಾಡೋರು...ಎಲ್ಲರೂ ಬೀದಿಗಿಳಿದರು.
ಹೀಗೆ, ದೇಶದಲ್ಲಿ ಎಲ್ಲರಿಗೂ ಕರಿಮುಖನ ಕರಿಯೋದೆ ಕೆಲಸ. ಇದರಿಂದ ಸರಕಾರ ಅಕ್ಷರಶಃ ನಡುಗಿಬಿಟ್ಟಿತು. ಆಡಳಿತಾರೂಢ ಮಹಾಕಾಯ ಪಕ್ಷದ ನಾಯಕರು ತಲೆಗೊಂದರಂತೆ ಸ್ಟೇಟ್‌ಮೆಂಟ್ ಕೊಡಲಾರಂಭಿಸಿದರು.
''ತುಂಡ'ನ ಅರೆಸ್ಟ್ ಮಾಡಿದ್ದೀವಲ್ಲ, ಇನ್ನು ವಕ್ರತುಂಡ ಬರದಿದ್ದರೆ ಏನಂತೆ?,'' ಎಂದು ಡಿಗ್ಗೇಶ್ ಹೇಳಿದ್ದು ವಿವಾದದ ಕಿಡಿ ಎಬ್ಬಿಸಿತು.
ಪರಿಸ್ಥಿತಿ ಹದಗೆಟ್ಟುತ್ತಿರುವುದರಿಂದ, ಈ ತನಕ ಮೌನವಾಗಿದ್ದ ಪ್ರಧಾನಿ ಮೋಹನರು ತುರ್ತು ಸಂಪುಟ ಸಭೆ ಕರೆದರು.
''ಆರ್ಥಿಕ ಸಂಕಟ ಕೊಂಚ ಮಟ್ಟಿಗೆ ಇರುವುದು ನಿಜ. ಆದರೆ, 1991ರ ಹಾಗಲ್ಲ. ನಿಮಗೆ ನಮ್ಮ ಸರಕಾರ ಆಶ್ರಯ ನೀಡುತ್ತದೆ,'' ಎಂದು ಪ್ರಧಾನಿ ಆಕಾಶವಾಣಿ ಮೂಲಕ ಕರೆ ಕೊಟ್ಟರು.
''ನಾವು ಆಹಾರ ಭದ್ರತೆ ಯೋಜನೆ ಜಾರಿ ಮಾಡುತ್ತಿದ್ದೇವೆ. ನಿಮಗೆ ಹೊಟ್ಟೆ ತುಂಬಾ ಊಟ ಕೊಡುವ ಗ್ಯಾರಂಟಿ ಕೊಡುತ್ತೇವೆ. ಇದು ನನ್ನ ಪತಿ ಮೇಲಾಣೆ,'' ಎಂದು ಮಹಾಕಾಯ ಪಕ್ಷದ ನಾಯಕಿ ಜಾನಿಯಾ ಪತ್ರಿಕಾ ಹೇಳಿಕೆ ನೀಡಿದರು.
ಊಹುಂ... ಇಷ್ಟಾದರೂ ಅತ್ತ ಕಡೆಯಿಂದ ಯಾವ ಉತ್ತರವೂ ಇಲ್ಲ. ಗಣೇಶ ಬರುತ್ತಾನೋ-ಇಲ್ಲವೋ ಎನ್ನುವ ಆತಂಕದಲ್ಲಿ ಇಡೀ ದೇಶ ಮುಳುಗಿತ್ತು.
ಗಹ ಸಚಿವ ಅಂಬರಂ ಹೇಳಿಕೆ ನೀಡಿ, ''ಪರಿಸ್ಥಿತಿಯನ್ನು ಸುಭದ್ರಗೊಳಿಸಲು ನಾವು ಎಲ್ಲ ಕ್ರಮ ಕೈಗೊಳ್ಳುತ್ತಿದ್ದೇವೆ. ಚೌತಿ ಸಮಯದಲ್ಲಿ ಎಲ್ಲವೂ ಸರಿ ಹೋಗಲಿದೆ,'' ಎಂದು ಯಥಾಪ್ರಕಾರ ಅಭಯ ನೀಡಿದರು.
ಈ ನಡುವೆ, ಗಣೇಶನ ವಸ್ತುಸ್ಥಿತಿ ಕುರಿತು ಅಧ್ಯಯನ ಮಾಡಲು ಸರಕಾರ ಇಸ್ರೊಗೆ ಆದೇಶ ನೀಡಿತು. ಆದರೆ, ಇಸ್ರೊ ಮಾತ್ರ ಇದನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಬಹಿರಂಗವಾಗಿ ಹೇಳಿ ಎಲ್ಲರನ್ನೂ ಬೆಚ್ಚಿಬೀಳಿಸಿತು. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಕರೆದ ಇಸ್ರೊ ಅಧ್ಯಕ್ಷರು, ''ಬೆಲೆಗಳೆಲ್ಲ ಗಗನಕ್ಕೇರಿರುವುದರಿಂದ ಆಕಾಶದಲ್ಲಿ ಬಿಸಿ ಬಿಸಿ ವಾತಾವರಣ ಇದೆ. ಈಚೆಗೆ ನಮ್ಮ ಜಿಎಸ್‌ಎಲ್‌ವಿ ಉಡಾವಣೆ ವಿಫಲವಾಗಲೂ ಇದೇ ಕಾರಣ. ಮೇಲಿರುವ ಗಣೇಶನಿಗೂ ಇದರ ಬಿಸಿ ತಟ್ಟಿರಬಹುದು,'' ಎಂದು ಹೇಳಿ ಕೈ ಚೆಲ್ಲಿಬಿಟ್ಟರು.
ಎಲ್ಲ ಪ್ರಯತ್ನಗಳ ನಡುವೆ, ಮಧ್ಯ ಪ್ರವೇಶಿಸಿದ ರ‌್ಯಾಟರ್ಸ್ ಅಸೋಸಿಯೇಷನ್, ''ಪೆಟ್ರೋಲ್-ಡೀಸೆಲ್ ಬೆಲೆ ಏರಿರುವುದರಿಂದ ನಿಮಗೆ ಬರಲು ತೊಂದರೆ. ಆದರೆ, ನಾವು 'ಇಲಿ'ಕಾಪ್ಟರ್ ಕಳುಹಿಸುತ್ತೇವೆ,'' ಎಂದು ಹೇಳಿತು.
ಊಹುಂ... ಇಷ್ಟಾದರೂ ಗಣೇಶನ ಉತ್ತರ ಇಲ್ಲ.
ಮೈತ್ರಿ ಪಕ್ಷಗಳೂ ಕಿರಿಕಿರಿ ಶುರು ಮಾಡಿದವು. ದೇಶದಲ್ಲಿ ತಲ್ಲಣ ಹೆಚ್ಚಾಗುತ್ತಿರುವಂತೆಯೇ, ಸರಕಾರ ವಿಧಿ ಇಲ್ಲದೆ ಎಚ್ಚೆತ್ತುಕೊಂಡಿತು. ಸರ್ವ ಪಕ್ಷಗಳ ಸಭೆಯೊಂದನ್ನು ಕರೆದು ಚರ್ಚಿಸಲಾಯಿತು. ದೀರ್ಘ ಚಿಂತನ-ಮಂಥನದ ನಂತರ, ದೇಶದಲ್ಲಿ ಎದ್ದಿರುವ ಗಜರಾಜ ವಿವಾದವನ್ನು ತಣಿಸಲು ಎಲ್ಲ ಪಕ್ಷಗಳ ಸಂಸದರ ನಿಯೋಗವೊಂದನ್ನು ಕೈಲಾಸಕ್ಕೆ ಕಳುಹಿಸಲು ಒಕ್ಕೊರಲಿನಿಂದ ನಿರ್ಧರಿಸಲಾಯಿತು.
ಈ ಸುದ್ದಿ ಕೈಲಾಸಕ್ಕೆ ಮುಟ್ಟುತ್ತಿದ್ದಂತೆಯೇ, ಗಣೇಶ ನಿಜವಾಗಿ ಬೆಚ್ಚಿಬಿದ್ದ. ಕೊನೆಗೂ ಮೌನ ಮುರಿದ; ''ನಿಮ್ಮ ದುಬಾರಿ ಭಾರತದಲ್ಲಿ ಹೊಟ್ಟೆ ತುಂಬಾ ಲಡ್ಡು ಸಿಗದಿದ್ದರೂ ಪರವಾಗಿಲ್ಲ. ಚೌತಿಗೆ ಬರುತ್ತೇನೆ. ಪ್ಲೀಸ್, ನೀವ್ಯಾರೂ ಇತ್ತ ಬರಬೇಡಿ. ಕೈಲಾಸ ಸುಂದರವಾಗಿದೆ, ಪ್ರಶಾಂತವಾಗಿದೆ,'' ಎಂಬ ನಾಲ್ಕು ವಾಕ್ಯದ ಮೆಸೇಜೊಂದನ್ನು ಕಳುಹಿಸಿದ.
ಕೊನೇಮಾತು: God- ಸರ್ವವ್ಯಾಪಿ ಮತ್ತು ದುಬಾರಿ. ಯಾಕೆ ಗೊತ್ತಾ?

ರಾತ್ರೋರಾತ್ರಿ ಬಡವನಾಗುವುದು ಹೇಗೆ?Aug 11, 2013
ಹಿರಿಯ ಲೇಖಕ ಡಾ.ಚೀರನಹಳ್ಳಿ ಪುಟ್ಟಣ್ಣ (ಚೀಪು ಎಂದೇ ಜನಜನಿತರು) ಬರೆದ ಪುಸ್ತಕವೊಂದು ಲೆಕ್ಕಕ್ಕೆ ಸಿಗದಷ್ಟು ಮಾರಾಟವಾಗಿದೆ. ಇದರ ಪರಿಣಾಮ, ಈಗ ಎಲ್ಲ ಕಡೆ ಅದೇ ಬುಕ್ ಟಾಕ್. ಪುಸ್ತಕದ ಅಂಗಡಿಗಳಲ್ಲಿ, ಸಾಹಿತ್ಯ ಸಮ್ಮೇಳನಗಳಲ್ಲಿ, ಪುಸ್ತಕ ಪ್ರದರ್ಶನಗಳನ್ನೆಲ್ಲ ಚೀಪು ಬುಕ್ ಮಾಡಿಬಿಟ್ಟಿದ್ದಾರೆ. ಬೈ ದಿ ಬೈ, ಅವರ ಪುಸ್ತಕದ ಹೆಸರು 'ರಾತ್ರೋರಾತ್ರಿ ಬಡವನಾಗುವುದು ಹೇಗೆ?' ಎಂದು.
ಅದರ ಎರಡನೇ ಅವತರಣಿಕೆಗೆ ಮತ್ತೊಬ್ಬ ಮೇರು ಸಾಹಿತಿ ಪ್ರೊ.ಲಾಗಾಪುರ ಬೀರಯ್ಯ(ಲಾಬಿ) ಮುನ್ನುಡಿ ಬರೆದಿದ್ದಾರೆ. ಡಾ.ಚೀಪು ಮತ್ತು ಪ್ರೊ.ಲಾಬಿ ಸಾರಸ್ವತ ಲೋಕದ ಕೌರವ-ಪಾಂಡವರು ಎಂದೇ ಹೆಸರುವಾಸಿ.(ಕೌರವ ಯಾರು, ಪಾಂಡವ ಯಾರು ಎನ್ನುವುದು ಇಲ್ಲಿ ಅಪ್ರಸ್ತುತ ಬಿಡಿ.) ಅವರಿಬ್ಬರು ಒಂದು ವೇದಿಕೆಯಲ್ಲಿ ಸೇರಿದರೆಂದರೆ, ಅಲ್ಲೊಂದು ಅಫ್ಘಾನಿಸ್ತಾನ ಸೃಷ್ಟಿ ಗ್ಯಾರಂಟಿ. ಸಿಡಿಗುಂಡು, ಮಾತಿನ ಬೆಂಡು, ಇಬ್ಬರೂ ರಣಚೆಂಡು! ಸಾಮಾನ್ಯವಾಗಿ ಇವರಿಬ್ಬರೂ ಪರಸ್ಪರರ ಪುಸ್ತಕಗಳಿಗೆ ಬೆನ್ನುಡಿ(ಬೆನ್ನಿನ ಹಿಂದಿನ ನುಡಿ) ಬರೆಯುವುದೇ ಹೆಚ್ಚು. ಅಂಥವರು ಈಗ ಮುನ್ನುಡಿ ಬರೆದಿದ್ದಾರೆ ಎಂದರೆ...?!
ನೀವೇ ಓದಿಬಿಡಿ... ಅಲ್ಲೂ ಚುಟುಕು-ಕುಟುಕು-ಗೇಲಿ-ಕುಹಕ ಎಲ್ಲವೂ ಹೇರಳವಾಗಿದೆ.
ನನ್ನ ಸಣ್‌ಮಿತ್ರ ಹಾಗೂ ಧೀಮಂತ ವಿಧ್ವಂಸಕ ಅಲ್ಲಲ್ಲ... ಕ್ಷಮಿಸಿ ವಿದ್ವಾಂಸ ಡಾ.ಚೀಪು ಅವರು ಬರೆದ 'ರಾತ್ರೋರಾತ್ರಿ ಬಡವನಾಗುವುದು ಹೇಗೆ?' ಎಂಬ ಕೃತಿಯು ಸಾಹಿತ್ಯ ಲೋಕದ ಒಂದು ಮೈಲಿಗಲ್ಲು. ದೇಶದಲ್ಲಿ ಬಡವರ ಸಂಖ್ಯೆ ಕುಸಿದಿದೆ ಎಂದು ಯೋಜನಾ ಆಯೋಗದ ವರದಿ ಬಂದ ಮರುದಿನವೇ ಇವರು ಈ ಪುಸ್ತಕವನ್ನು ರಾತ್ರೋರಾತ್ರಿ ಬಿಡುಗಡೆ ಮಾಡಿದರು. ಒಂದೇ ವಾರದಲ್ಲಿ ಒಂದು ಲಕ್ಷ ಪ್ರತಿಗಳು ಬಿಕರಿಯಾಗಿವೆ. ಎರಡನೇ ಮುದ್ರಣಕ್ಕೆ ನನ್ನಿಂದ ಮುನ್ನುಡಿ ಬರೆಸಿರುವುದನ್ನು ನೋಡಿದರೆ, ಬಹುಶಃ ನನ್ನನ್ನು ಒಬ್ಬ ಬಡ ಸಾಹಿತಿ ಎಂದು ಗುರುತಿಸಿರಬೇಕು.
ಈ ಕೃತಿ ಓದಿ ಎಷ್ಟು ಮಂದಿ ಬಡವರಾದರೋ ಗೊತ್ತಿಲ್ಲ. ಆದರೆ, ಡಾ.ಚೀಪು ಅವರಂತೂ ರಾತ್ರೋರಾತ್ರಿ 'ಡಾ.ಕಾಸ್ಟ್ಲಿ' ಆಗಿಬಿಟ್ಟಿದ್ದಾರೆ. ಬಡವರು ಎನಿಸಿಕೊಳ್ಳಬೇಕಾದರೆ, ಅವರು ದಿನಕ್ಕೆ 32 ರೂಪಾಯಿಗಿಂತ ಕಡಿಮೆ ಆದಾಯ ಹೊಂದಿದವರೇ ಆಗಿರಬೇಕು ಎಂಬ ಹೊಸ ವ್ಯಾಖ್ಯಾನದಿಂದ, ಬಡವರೆನಿಸಿಕೊಂಡಿದ್ದ ಹಲವರು ದಿಢೀರ್ 'ಶ್ರೀಮಂತ'ರಾಗಿಬಿಟ್ಟರು. ಹೀಗಾಗಿ, ಬಡಾ ಭಾರತದಲ್ಲಿ ಸರಕಾರದ ಹೊಸ ಹೊಸ ಸೌಲಭ್ಯ ಪಡೆಯಲು ತಾವು ಬಡವರಾಗಬೇಕಲ್ಲ ಎಂಬ ಹೊಸ ಚಿಂತೆ ಎಲ್ಲರಲ್ಲೂ ಮೊಳೆತಿದೆ. ಬಡವರಾಗಲು ಪೈಪೋಟಿ ಶುರುವಾಗಿದೆ. ಕೊನೆಗೆ ರೂಪಾಯಿ ಕೂಡ ತಾನು ಬಡವ ಎಂದು ತೋರಿಸಿಕೊಳ್ಳಲು ಸೊರಗುತ್ತಿದೆ!
ನಾನು ಈ ಹಿಂದೆ 'ಮೂರು ದಿನದಲ್ಲಿ ಹಿಂದಿ ಕಲಿಯುವುದು ಹೇಗೆ?' ಎನ್ನುವ ಪುಸ್ತಕ ಓದಿ ಹಿಂದಿ ಕಲಿತಿದ್ದೆ. ನಮ್ಮ ಮಾಜಿ ಪ್ರಧಾನಿ ದೇವೇಗೌಡರೂ ಅಂಥದ್ದೇ ಬುಕ್ಕೊಂದನ್ನು ಓದಿ ಹಿಂದಿ ಕಲಿತಿದ್ದರು ಎಂದು ಎಲ್ಲೋ ಓದಿದ ನೆನಪಿದೆ. ಅಂಥದ್ದೇ ವರ್ಗಕ್ಕೆ ಸೇರುವ ಕೃತಿ ಇದಾಗಿದೆ. ನೆಪೋಲಿಯನ್ ಹಿಲ್ ಅವರ 'ಥಿಂಕ್ ಅಂಡ್ ಗ್ರೋ ರಿಚ್', ಫೆಲಿಕ್ಸ್ ಡೆನಿಸ್ ಅವರ 'ಹೌ ಟು ಗೆಟ್ ರಿಚ್' ಮತ್ತಿತರ ಪುಸ್ತಕಗಳಿಗೆ ಇದು ಸಡ್ಡು ಹೊಡೆಯುವಂತಿದೆ.
ಈ ನಡುವೆ, ಕಾಂಗ್ರೆಸ್‌ನ 'ಪ್ಲೇ'ಬಾಯ್ ರಾಹುಲ್ ಗಾಂಧಿ, 'ಬಡತನ ಎನ್ನುವುದು ಮಾನಸಿಕ ಸ್ಥಿತಿ' ಎಂದು ಹೇಳುವ ಮೂಲಕ ಅದಕ್ಕೊಂದು ಹೊಸ ವ್ಯಾಖ್ಯೆ ನೀಡಿದ್ದಾರೆ. ಅದರರ್ಥ: 'ದೇಶದಲ್ಲಿ ಬಡತನ ವಾಸ್ತವ ಅಲ್ಲ, ಅದು ಬರೀ ಮನಸ್ಸಿಗೆ ಸಂಬಂಧಿಸಿದ ವಿಚಾರ. ನಿಜವಾದ ಬಡತನವನ್ನು ಕಾಂಗ್ರೆಸ್ ಎಂದೋ ಒದ್ದೋಡಿಸಿಬಿಟ್ಟಿದೆ' ಎಂದು.
ಹಾಗೆಯೇ, ಈಚೆಗೆ ಬಿಜೆಪಿಯ ಪೋಸ್ಟರ್ ಬಾಯ್ ಗುಜರಾತ್‌ನಲ್ಲಿ ಅಪೌಷ್ಟಿಕತೆ ಬಗ್ಗೆ ಮಾತನಾಡಿ, 'ಅದು ಮಧ್ಯಮ ವರ್ಗದವರ ಡಯೆಟ್‌ನಿಂದಾಗಿದ್ದು' ಎಂಬರ್ಥದಲ್ಲಿ ನೀಡಿದ್ದ ಹೇಳಿಕೆ ಸಹ ಗುಜರಾತ್‌ನಲ್ಲಿ ಬಡತನ ನಿವಾರಣೆಯಾಗಿದೆ ಎನ್ನುವುದರ ಸೂಚನೆಯಾಗಿದೆ.
ಇದನ್ನೆಲ್ಲ ಗಮನಿಸಿದರೆ, ದೇಶದಲ್ಲಿ ಬಡತನ ಇಲ್ಲ ಎನ್ನುವುದು ಖಾತರಿಯಾಗಿದೆ. ಹಾಗೆಂದು ಸುಮ್ಮನೆ ಕೂರುವ ಹಾಗಿಲ್ಲ. ಮುಂದಿನ ಚುನಾವಣೆಗಳಲ್ಲಿ 'ನಿವಾರಣೆ' ಮಾಡಲು ಬಡತನ ಬೇಕು; ವಿಶ್ವಬ್ಯಾಂಕಿನ ನೆರವು ಪಡೆಯಲಿಕ್ಕಾದರೂ ಬಡವರನ್ನು ಸೃಷ್ಟಿಸುವ ಅಗತ್ಯ ಈಗ ಬಿದ್ದಿದೆ. ಅದಕ್ಕೆ ಈ ಕೃತಿ ಸಹಾಯ ಮಾಡಬಹುದು ಎನ್ನುವುದು ನನ್ನ ಆಶಯ.
ಈ 'ಬಡ'ಮೇಲು ಕೃತ್ಯದಿಂದ ಬಡತನದ ಲೈನ್ ಆಫ್ ಕಂಟ್ರೋಲ್ ಉಲ್ಲಂಘನೆಯಾಗುತ್ತಿದೆ. ನಮ್ಮ ರಾಜ್ಯದಲ್ಲಿರುವ ಬಿಪಿಎಲ್ ಕಾರ್ಡುದಾರರ ಸಂಖ್ಯೆ ನೋಡಿದರೇ ತಿಳಿಯುತ್ತದೆ, ಬಡವರೆನಿಸಿಕೊಳ್ಳಲು ಇರುವ ಹಪಹಪಿ. ಹಾಗೆಂದು, ಮಧ್ಯಮ ವರ್ಗದವರು, ಶ್ರೀಮಂತರು ಬಡತನದತ್ತ ಹೆಜ್ಜೆ ಹಾಕುವುದೇನೂ ಬಿಜೆಪಿಯಿಂದ ಕೆಜೆಪಿಗೆ ಮತ್ತು ಕೆಜೆಪಿಯಿಂದ ಕಾಂಗ್ರೆಸ್‌ಗೆ ಹೋಗುವಷ್ಟು ಸರಳ ಅಲ್ಲ. ಅದಕ್ಕೂ ಒಂದಷ್ಟು ಕಸರತ್ತು, ತಂತ್ರಗಾರಿಕೆಗಳು ಬೇಕು ಎನ್ನುವುದನ್ನು ಈ ಕೃತಿ ವಿಷದೀಕರಿಸಿದೆ.
ಇದರಲ್ಲಿರುವ ಒಂದೊಂದು ಅಧ್ಯಾಯ ರೋಚಕವಾಗಿದೆ. ಬಿಪಿಎಲ್ ಕಾರ್ಡು ಪಡೆಯುವುದು ಹೇಗೆ? ಅನ್ನಭಾಗ್ಯ, ಆಹಾರ ಭದ್ರತಾ ಯೋಜನೆಯಂಥ ಸ್ಕೀಮಿಗೆ ಹೆಸರು ಸೇರಿಸುವುದು ಹೇಗೆ? ಅದಕ್ಕೆ ಯಾರನ್ನು ಹಿಡಿಯಬೇಕು, ಎಷ್ಟು ಹಣ ಕೊಟ್ಟರೆ 'ಬಡತನ' ಸಿಗುತ್ತದೆ ಎಂಬಿತ್ಯಾದಿ ವಿಷಯಗಳ ಬಗ್ಗೆ ಈ ಕೃತಿಯಲ್ಲಿ ಪ್ರತ್ಯೇಕ ಅಧ್ಯಾಯಗಳಿವೆ.
ನಿಮಗೂ ಬಡತನದ 'ಬೂಕ್' ಇದ್ದರೆ ಈ ಬುಕ್ ಓದಿ.
ತಮ್ಮ ವಿಶ್ವಾಸಿ,
ಪ್ರೊ.ಲಾಬಿ

ಕೊನೇ ಮಾತು:
* ಈ ದೇಶದಲ್ಲಿ ನಿರಂತರವಾಗಿ ಚಾಲ್ತಿಯಲ್ಲಿರುವ ಘೋಷವಾಕ್ಯಗಳಿವು...
* ಬಡತನ ಹಟಾವೊ-ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ನಾಯಕರು
* ಇದೇ ನನ್ನ ಕೊನೇ ಚುನಾವಣೆ-ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು
* ರಾಮಮಂದಿರ ಕಟ್ಟಿಯೇ ಕಟ್ತೀವಿ-ಚುನಾವಣೆ ಸಮಯದಲ್ಲಿ ಬಿಜೆಪಿ ನಾಯಕರು.


ಬಡಾ ಭಾರತದ ಗರೀಬಿ ಹಟಾವೊJul 28, 2013, 04.57AM IST
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದಲ್ಲಿ ಭಯಂಕರ ಬಂದೋಬಸ್ತ್. ಪೊಲೀಸರಲ್ಲಿ ಚಡಪಡಿಕೆ. ಪ್ರಯಾಣಿಕರಿಗೆ ತಳಮಳ. ಪ್ರೆಸ್‌ನವರಲ್ಲಿ ಕುತೂಹಲ. ಎಲ್ಲರ ಕಣ್ಣು ರನ್‌ವೇನತ್ತ ನೆಟ್ಟಿರುವಾಗಲೇ ಓಡೋಡಿಕೊಂಡು ಬರುತ್ತಿದ್ದಾರೆ, ಅರೆಬರೆ ವಿಚಿತ್ರ ಡ್ರೆಸ್‌ನಲ್ಲಿದ್ದ ಗೆಸ್ಟ್. ಕೆಳಗೆ ಜೀನ್ಸ್ ಪ್ಯಾಂಟ್, ಮೇಲೆ ಬರೀ ಮೈ, ಕೈಯಲ್ಲೊಂದು ಎಲೆಕ್ಟ್ರಾನಿಕ್ ಗಿಟಾರ್.
ಯಾರಿವನು, ಯಾರಿವನು ಎನ್ನುವಷ್ಟರಲ್ಲೇ ಲಾಂಜ್‌ನಲ್ಲಿ ಕೂತಿದ್ದ ಚಿಂತಕನೊಬ್ಬ, ''ನೋಡಿ, ಬಟ್ಟೆ ಇಲ್ಲದ ಬಡವರೂ ಏರೋಪ್ಲೇನ್ ಹತ್ತುವ ಹಾಗಾಯಿತು. ದಿಸ್ ಈಸ್ ಇಂಡಿಯಾ,'' ಎಂದ. ಅಲ್ಲೇ ಕಾರಿಡಾರ್‌ನಲ್ಲಿ ಸಿಗರೇಟ್ ಸೇದುತ್ತಿದ್ದ ಹುಡುಗಿಯೊಬ್ಬಳು ಕಣ್ಣು ಮಿಟುಕಿಸಿ 'ತಂಚ್ ಮಾಲ್' ಎಂದು 'ಡಿಗ್ಗಿ ಡೈಲಾಗ್' ಹೊಡೆದಳು. (ಕಾಂಗ್ರೆಸ್‌ನ ದಿಗ್ವಿಜಯ ಸಿಂಗ್ ಸಚಿವೆ ಮೀನಾಕ್ಷಿ ನಟರಾಜನ್‌ಗೆ ತಂಚ್ ಮಾಲ್-ಉತ್ತಮ ಉತ್ಪನ್ನ-ಎಂದು ಸೆಕ್ಸಿ ಡೈಲಾಗ್ ಹೊಡೆದಿದ್ದು ಈ ನಮ್ಮ ಗೆಸ್ಟ್‌ಗಂತೂ ಗೊತ್ತಿರಲಿಲ್ಲ ಬಿಡಿ) ಡೋಂಟ್ ಕೇರ್ ಅಂದುಕೊಂಡೇ ಮುಂದೆ ಹೋದರು.
ಅಷ್ಟರಲ್ಲಿ, ಜನಸಂದಣಿಯಿಂದ ಬಂದ ವ್ಯಕ್ತಿಯೊಬ್ಬ ಗೆಸ್ಟ್‌ನ ಗುರುತು ಹಿಡಿದು, ''ಹಾಯ್, ಹೌ ಆರ್ ಯೂ ಸರ್,''ಎಂದು ಶೇಕ್‌ಹ್ಯಾಂಡ್ ನೀಡಿದ. ವೆಜ್ ಎಂದು ಭಾವಿಸಿಕೊಂಡು ಎಗ್ ಪಫ್ ತಿಂದವರಂತೆ ಮುಖ ಕಿವುಚಿಕೊಂಡರು ನಮ್ಮ ಗೆಸ್ಟ್.
ಆ ಗೆಸ್ಟ್ ಬೇರಾರೂ ಅಲ್ಲ, ಸನ್ಮಾನ್ಯ ನಾರದ ಮಹರ್ಷಿ. ಗುರುತು ಹಿಡಿದ ವ್ಯಕ್ತಿ ಒಬ್ಬ ಪತ್ರಕರ್ತ. ಈತನ ಕೆಲಸವೂ ಹಾಗೆಯೇ-ಅಲ್ಲಿಂದಲ್ಲಿಗೆ, ಇಲ್ಲಿಂದಲ್ಲಿಗೆ ತಂದಿಡುವುದೇ ಆಗಿರುವುದರಿಂದ ಕುಲಬಾಂಧವರ ಗುರುತು ಬೇಗ ಹಿಡಿದಿರಬೇಕು.
***
ನಾರದರು ಭಾರತಕ್ಕೆ ಬಂದು ಸಾಕಷ್ಟು ವರ್ಷ ಗಳಾಗಿದ್ದವು. ಜಗತ್ತನ್ನೆಲ್ಲ ಸುತ್ತಾಡಿಕೊಂಡೇ ಸ್ವಲ್ಪ ಮಾಡರ್ನ್ ಆಗಿದ್ದಾರೆ. ಯಾವ ವೀಸಾದ ಹಂಗೂ ಇಲ್ಲ. ವೀಸಾಕ್ಕಾಗಿ ಯಾರೂ ಲಾಬಿ ಮಾಡುವುದಿಲ್ಲ, ಯಾರೂ ವಿರೋಧವನ್ನೂ ಮಾಡುವುದಿಲ್ಲ.
ಆಗಷ್ಟೇ ಲಂಡನ್‌ನಲ್ಲಿ ರಾಯಲ್ ಬೇಬಿಯನ್ನು ನೋಡಿಕೊಂಡು ಬಂದ ಮಹರ್ಷಿಗೆ ಈಗಿನ ಭಾರತ ನೋಡುವ ಬಯಕೆಯಾಗಲು ಕಾರಣವೂ ಇತ್ತು. ಭಾರತದಲ್ಲಿ ಬಡತನ ವಿಪರೀತ ಕಡಿಮೆಯಾಗಿದೆ ಎಂಬ ವರದಿ ಓದಿದ್ದರು. ಸಮೃದ್ಧ ಭಾರತ ನೋಡಿಕೊಂಡು ಬರೋಣ ಎಂದು ಬಂದಿದ್ದರು.
***
ಹಾಗೆಯೇ ನಡೆದುಕೊಂಡು ಹೋಗುವಾಗ ಅಲ್ಲೊಂದು ಸ್ಲಮ್. ಊಟಕ್ಕಾಗಿ ಕಾತರಿಸಿ ಕೂತುಕೊಂಡಿದ್ದ ಗಂಡಸರು, ಹೆಂಗಸರು, ಮಕ್ಕಳು. ಅಲ್ಲಿಗೆ ದಾಂಡಿಗರ ಗುಂಪೊಂದು ಬಂತು. ಬಂದವರೇ ಕೇಳಿದರು, ''ಯಾರ‌್ರೀ ಇಲ್ಲಿ ಬಿಪಿಎಲ್ಲು ಬಡವರು?''
ರೇಷನ್ ಕಾರ್ಡ್ ಕೊಡ್ತಾರೇನೋ ಎಂದು ಖುಷಿಖುಷಿ ಯಿಂದ ಎಲ್ಲರೂ ಕೈ ಎತ್ತಿದರು.
''ಬಡವರು ಅಂತೀರೇನೋ ಭಡವರಾ? ನಿಮ್ಮನ್ನೆಲ್ಲ ಮೇಲಕ್ಕೆತ್ತಿದ್ದೀವಿ. ಬಡತನದ ರೇಖೆಯನ್ನು ಕೆಳಗಿಳಿಸಿದ್ದೀವಿ. ಇನ್ಮುಂದೆ ನೀವು ಬಡವರು ಅನ್ಕೋಬಾರದು,'' ಎಂದು ಹೇಳಿ ಮುಂದೆ ಹೋಯಿತು. ಬಹುಶಃ ಅದು ಕಾಂಗ್ರೆಸ್ಸಿಗರ ಗುಂಪೇ ಇರಬೇಕು ಎಂದುಕೊಂಡರು ನಾರದರು.
ಕೆಲವೇ ಹೊತ್ತಿನಲ್ಲಿ, ಮತ್ತೊಂದು ಗುಂಪು ಬಂತು. ಹಣೆಗೆ ಉದ್ದುದ್ದ ಕುಂಕುಮ ಬಳಿದುಕೊಂಡಿದ್ದರು.
''ಸ್ಸಾಮಿ, ನೀವಾದ್ರೂ ನಮ್ಕಡೆ ನೋಡ್ತೀರಾ? ಬೆಲೆ ಏರಿಕೆಯ ಬಿಸಿ ತಡೆಯಲಾಗುತ್ತಿಲ್ಲ,'' ಎಂದು ಒಂದು ಆರ್ತನಾದ ಕೇಳಿಸಿತು.
ಕುಂಕುಮದ ಗುಂಪಿನಿಂದ ಕಂಚಿನ ಕಂಠವೊಂದು ಕೇಳಿಸಿತು, ''ನಿಮ್ಮ ಸಮಸ್ಯೆ ನಮಗೆ ಅರ್ಥವಾಗಿದೆ. ಹೆದರಿಕೊಳ್ಳಬೇಡಿ. ಈ ಸಲ ನಾವು ಅಧಿಕಾರಕ್ಕೆ ಬಂದರೆ ರಾಮರಾಜ್ಯ ಮಾಡ್ತೀವಿ, ರಾಮಮಂದಿರ ಕಟ್ಟಿಯೇ ಕಟ್ತೀವಿ. ಅಷ್ಟರ ತನಕ ರಾಮಜಪ ಮಾಡ್ತಾ ಇರಿ.''
ಇಷ್ಟು ಹೇಳಿ ಆ ಗುಂಪು ಅಲ್ಲಿಂದ ಅಂತರ್ಧಾನ ವಾಯಿತು. ಇವರೇ ಬಿಜೆಪಿಯವರು ಅಂಥ ನಾರದರಿಗೆ ತಿಳಿಯಲು ಹೆಚ್ಚು ಸಮಯ ಹಿಡಿಯಲಿಲ್ಲ.
ಹಾಗೆಯೇ ಮುಂದೆ ಹೋದಾಗ, 'ಹರೇ ರಾಮ, ಹರೇ ಕಷ್ಣ' ಎಂಬ ರಾಗವಾದ ದನಿ ಕೇಳಿಸಿತು.
ಅರೆರೆ, ರಾಮ-ಕಷ್ಣ ಇನ್ನೂ ಇದ್ದಾರಲ್ವೇ ಎಂದು ಕರ್ಣ-ಕಣ್ಣರಳಿಸಿ ನೋಡಿದರು ಮಹರ್ಷಿಗಳು. ಕೇಸರಿ ಬಟ್ಟೆ ತೊಟ್ಟ ಗುಂಪೊಂದು ಹೋಗುತಿತ್ತು. ಧೈರ‌್ಯ ಮಾಡಿ ಇವರನ್ನು ಮಾತನಾಡಿಸಿದರು, ''ನಿಮ್ಮನ್ನು ಅಮೆರಿಕದಲ್ಲಿ ನೋಡಿದ ಹಾಗಿದೆಯಲ್ಲ? ಅವರೇ ನೀವೇನಾ? ನೀವು ಅವರೇನಾ?''
ಗುಂಪಿನಿಂದ ಹೊರಬಂದ ಸಂತರೊಬ್ಬರು ಹೇಳಿದರು, ''ಹೌದು. ನಾವು ಅವರೇ. ಭಾರತದ ಮಕ್ಕಳ ಹಸಿವು ನೀಗಿಸಲು ಅಲ್ಲಿಂದ ಕಾಸು ತಂದು ಇಲ್ಲಿ ಊಟ ಕೊಡ್ತಾ ಇದ್ದೇವೆ,'' ಎಂದು.
ಭಾರತದ ಬಡತನ ನೀಗುತ್ತಿರುವ ಕಾರಣ ತಿಳಿದು ಪುಳಕಿತರಾದರು ನಾರದರು.
***
ಹಾಗೆಯೇ ಮುಂದೆ ಹೋಗುತ್ತಿದ್ದಾಗ ಟಿ.ವಿ.ಯಲ್ಲಿ ಬ್ರೇಕಿಂಗ್ ನ್ಯೂಸ್ ಬರುತಿತ್ತು; 'ಜೂನಿಯರ್ ಎಂಜಿನಿಯರ್ ಮನೆ ಮೇಲೆ ಲೋಕಾಯುಕ್ತ ದಾಳಿ; ಕೋಟ್ಯಂತರ ಮೌಲ್ಯದ ಚಿನ್ನಾಭರಣ ವಶ'. ನಾರದರ ಮುಖದಲ್ಲಿ ಸಮದ್ಧ ಭಾರತ ಕಂಡ ಹೆಮ್ಮೆಯ ನಗು ಮೂಡಿತು.
ಇನ್ನೊಂದೆಡೆ ಭಾರತದ ವಿದೇಶಾಂಗ ಸಚಿವರು ಮಾತ ನಾಡುತ್ತಿದ್ದರು; ''ಭಾರತದಲ್ಲಿ ಆದಷ್ಟು ಬೇಗ ಬಡತನ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಜಗತ್ತಿನೆಲ್ಲೆಡೆ ಮೂಡಿದೆ. ಕೆಲವೇ ವರ್ಷಗಳಲ್ಲಿ ನಮ್ಮ ದೇಶದಲ್ಲಿ ಬಡವರ ಸಂಖ್ಯೆ ಅಪಾರವಾಗಿ ಇಳಿದಿದೆ. ಹೀಗಾಗಿ, ದಕ್ಷಿಣ ಆಫ್ರಿಕಾದ ಸೂಡಾನ್, ಸೋಮಾಲಿಯಾ ದಂಥ ದೇಶ ಗಳಿಂದ ಬಡವರನ್ನು ಆಮದು ಮಾಡಿ ಕೊಂಡು, ಅವರನ್ನು ಬಡತನ ರೇಖೆಯಿಂದ ಮೇಲಕ್ಕೇರಿಸಿ ವಾಪಸ್ ಕಳುಹಿಸುವ ಫಾರಿನ್ ಎಕ್ಸ್ ಚೇಂಜ್ ಯೋಜನೆ ಜಾರಿಗೆ ತರಲಾಗುವುದು.''
***
ಮನೆಯೊಂದರಲ್ಲಿ ಗಲಾಟೆ ಕೇಳಿಸುತಿತ್ತು; ''ಇವತ್ತು ಅಡುಗೆ ಮಾಡೋಕೆ ಏನೂ ಇಲ್ಲ. ಹೋಗಿ, ಒಂದು ರೂಪಾಯಿಗೆ ಅಕ್ಕಿ, 5 ರೂಪಾಯಿಗೆ ಊಟ ತಗೋಂಬನ್ನಿ,'' ಎಂದು ಹೆಂಡತಿ ಕಾಲು ಚಾಚಿ ಕೂತಳು. ಗಂಡ ಕೈ ಚಾಚಿಕೊಂಡು ಹೊರಟ.

ಅದರರ್ಥ ಹಾಗಲ್ಲ, ಹೀಗೆ...!Jul 14, 2013, 04.04AM IST
ಇಬ್ಬರು ಗಳಸ್ಯ-ಕಂಠಸ್ಯ ಮಿತ್ರರನ್ನು ಒಡೆಯಲು ಒಂದು ಕಾಳು ಅಕ್ಕಿ ಸಾಕು!
ಎ' ಮತ್ತು 'ಬಿ' ಇಬ್ಬರು ಕುಚುಕು-ಕುಚುಕು ಗೆಳೆಯರು ಎಂದಿಟ್ಟುಕೊಳ್ಳಿ. ಅವರಿಬ್ಬರನ್ನು ಬೇರ್ಪಡಿಸಲು ಸಾಧ್ಯವೇ ಇಲ್ಲ ಎನ್ನುವಷ್ಟು ಅನ್ಯೋನ್ಯತೆ. ಅಂಥವರಲ್ಲಿ 'ಎ'ಯನ್ನು ದೂರಕ್ಕೆ ಕರೆದೊಯ್ದು ಒಂದೇ ವಾಕ್ಯ ಹೇಳಿ ಸಾಕು, 'ಒಂದು ಬತ್ತದಲ್ಲಿ ಒಂದೇ ಅಕ್ಕಿ ಕಾಳು' ಅಂತ. ಅಲ್ಲಿಗೆ ನಿಮ್ಮ ಕೆಲಸ ಮುಗಿಯಿತು. 'ಬಿ'ಯಲ್ಲಿ ಅನುಮಾನ ಶುರುವಾಗುತ್ತದೆ. ಹೇಗೆ ಅಂದಿರಾ?
'ಎ'ಯನ್ನು ಕರೆದು 'ಬಿ' ಕೇಳುತ್ತಾನೆ, 'ಅವನೇನು ಗುಟ್ಟು ಹೇಳಿದ' ಅಂತ. ಸಹಜವಾಗಿಯೇ 'ಎ' ಹೇಳುತ್ತಾನೆ, 'ಏನೂ ಹೇಳಿಲ್ಲ, ಒಂದು ಬತ್ತದಲ್ಲಿ ಒಂದೇ ಅಕ್ಕಿ ಕಾಳು' ಅಂತ. ಒಬ್ಬನನ್ನೇ ಕರೆದುಕೊಂಡು ಹೋದಾಗಲೇ 'ಬಿ'ಯಲ್ಲಿ ಹುಟ್ಟಿಕೊಂಡ ಶಂಕೆ ಮತ್ತಷ್ಟು ಬಲವಾಗುತ್ತದೆ. ನನ್ನಲ್ಲಿ 'ಎ' ಏನನ್ನೋ ಮುಚ್ಚಿಡುತ್ತಿದ್ದಾನೆ ಎಂಬ ಅನುಮಾನ ಹೆಮ್ಮರವಾಗಿ ಬೆಳೆಯುತ್ತದೆ. ಅದು ಅಕ್ಕಿಯ ಪವರ್.

ಸಿದ್ದರಾಮಯ್ಯ ಅವರ 'ಅಕ್ಕಿ' ವಿಚಾರ ಬಿಡಿ. ಅದು ಯಾರನ್ನು ಒಡೆಯುತ್ತದೋ, ಇನ್ನಾರನ್ನೋ ಜೋಡಿಸುತ್ತದೋ ಎನ್ನುವುದು ಕಾಂಗ್ರೆಸ್‌ಗೆ ಬಿಟ್ಟ ಸಂಗತಿ. ಇಲ್ಲಿ ಹೇಳಲು ಹೊರಟಿರುವುದು ಮಾತಿನ ಶಕ್ತಿ ಬಗ್ಗೆ ಮಾತ್ರ.
ಮಾತುಗಳಲ್ಲಿ ಎಷ್ಟೋ ಬಾರಿ ನಿಜವಾದ ಅರ್ಥಕ್ಕಿಂತ ಬೇರೆಯದೇ ಅರ್ಥ ಇರುತ್ತದೆ. ಕೆಲವರ ಪ್ರತಿ ಮಾತಿನಲ್ಲೂ ಭಿನ್ನವಾದ ಅರ್ಥ ಧ್ವನಿಸುತ್ತಿರುತ್ತದೆ. ಅವರ ಮಾತಿನ ಅರ್ಥ ಅದಾಗಿರುವುದಿಲ್ಲ, ಇನ್ನೇನೋ. ಕೆಲವರ ಮಾತನ್ನು ಹೇಗೆ ಗ್ರಹಿಸಿಕೊಳ್ಳಬೇಕು ಅಂತ ನೋಡೋಣ...

'ಬಿಜೆಪಿ ಜತೆ ಮೈತ್ರಿ ಇಲ್ಲ. ಯಾರೂ ನಮ್ಮನ್ನು ಈ ತನಕ ಸಂಪರ್ಕಿಸಿಲ್ಲ'-ಬಿ.ಎಸ್.ಯಡಿಯೂರಪ್ಪ
ಅದರರ್ಥ: ಬಿಜೆಪಿ ನಾಯಕರೇ, ಬೇಗ ಬಂದು ಡೀಲಿಂಗ್ ಮುಗಿಸ್ರಪ್ಪ...

'ಯಡಿಯೂರಪ್ಪ ಅವರ ಬಿಜೆಪಿ ಸೇರ್ಪಡೆಗೆ ನನ್ನ ಅಭ್ಯಂತರ ಇಲ್ಲ'-ಮಾಜಿ ಸಿಎಂ ಜಗದೀಶ ಶೆಟ್ಟರ್.
ಅದರರ್ಥ: ಯಡಿಯೂರಪ್ಪನವರೇ, ನಾಳೆ ನೀವು ಪಕ್ಷಕ್ಕೆ ಬಂದ್ರೆ ನಂಗೇನೂ ತೊಂದರೆ ಮಾಡಬೇಡೀಪ್ಪ.

'ನನ್ನ ಹಾಗೂ ಸಿದ್ದರಾಮಯ್ಯ ಮಧ್ಯೆ ಭಿನ್ನಾಭಿಪ್ರಾಯಗಳಿಲ್ಲ'-ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್
ಅದರರ್ಥ: ಭಿನ್ನಮತ ಇದ್ದೇ ಇದೆ, ಹೇಳಿಕೊಳ್ಳಲಾಗದೆ ಒದ್ದಾಡ್ತಾ ಇದ್ದೀನಿ.

'ಪರಮೇಶ್ವರ್ ಅವರನ್ನ ಉಪ ಮುಖ್ಯಮಂತ್ರಿ ಮಾಡೋ ವಿಚಾರ ಹೈ ಕಮಾಂಡ್‌ಗೆ ಬಿಟ್ಟಿದ್ದು'-ಮುಖ್ಯಮಂತ್ರಿ ಸಿದ್ದರಾಮಯ್ಯ
ಅದರರ್ಥ: ನನ್ನದ್ದಂತೂ ಒಪ್ಪಿಗೆ ಇಲ್ಲ. ಬೇಕಿದ್ರೆ ಹೈಕಮಾಂಡ್ ಹತ್ರ ಮಾತಾಡ್ಲಿ.

'ಸಿದ್ದರಾಮಯ್ಯ ಜಾತಿ ರಾಜಕೀಯ ಮಾಡ್ತಾ ಇದ್ದಾರೆ'- ವಿರೋಧಿ ನಾಯಕ ಎಚ್ ಡಿ ಕುಮಾರಸ್ವಾಮಿ
ಅದರರ್ಥ: ಈಗಿನಿಂದಲೇ ಈ ಥರ ಹೇಳಿಕೆ ಕೊಡೋಕೆ ಶುರು ಮಾಡಿದ್ರೆ, ಮುಂದಿನ ಎಲೆಕ್ಷನ್ ಟೈಮಲ್ಲಿ ಸ್ಟೇಜ್ ಸೆಟ್ ಆಗುತ್ತೆ.

ಆಫೀಸಿನಲ್ಲಿ ನಿಮ್ಮ ಬಾಸ್ ನಿಮ್ಮನ್ನು ಕರೆದು, 'ವೆಲ್‌ಡನ್. ಒಳ್ಳೆಯ ಕೆಲಸ ಮಾಡಿದ್ರಿ' ಅಂತಾರೆ.
ಅದರರ್ಥ: ನಿನಗೆ, ಇನ್ನು ಬೇರೆ ಬೇರೆ ಕೆಲಸ ಕೊಡ್ತೀನಿ.

'ನಾಳೆ ಮೀಟಿಂಗ್ ಮಾಡಿ ಡಿಸೈಡ್ ಮಾಡೋಣ'-ಹೀಗಂತಾರೆ ಮ್ಯಾನೇಜರ್.
ಅದರರ್ಥ: ನಾನು ಡಿಸೈಡ್ ಮಾಡಿಯಾಗಿದೆ. ನಾಳೆ ಮೀಟಿಂಗ್‌ನಲ್ಲಿ ಹೇಳ್ತೀನಿ.

'ನೀವು ಕೊಟ್ಟ ಅಸೈನ್‌ಮೆಂಟ್ ಶುರು ಮಾಡಿದ್ದೀನಿ'-ಉದ್ಯೋಗಿ ತನ್ನ ಬಾಸ್‌ಗೆ ಹೀಗಂತಾನೆ.
ಅದರರ್ಥ: ನಾಳೆಯಿಂದ ಕೆಲಸ ಶುರು ಮಾಡ್ತೀನಿ.

'ನಾವು ಒಂದೇ ಟೀಮ್ ಆಗಿ ಕೆಲಸ ಮಾಡೋಣ'- ಟೀಮ್ ಲೀಡರ್ ಹೇಳೋ ಮಾತು.
ಅದರರ್ಥ: ಪ್ರಾಜೆಕ್ಟ್ ಫೇಲ್ ಆದ್ರೆ ನನ್ನೊಬ್ಬನಿಗೆ ಯಾಕೆ ಇಕ್‌ಬೇಕು? ಎಲ್ಲರೂ ಇಕ್ಕಿಸಿಕೊಳ್ಳೋಣ.

'ಓಕೆ ಸರ್, ನಾಳೆ ಸಿಗೋಣವೇ...?'
-ಅದರರ್ಥ: ಮಾತಾಡೋಕೆ ಟೈಮಿಲ್ಲ. ಫಸ್ಟ್ ಹೊರಡಿ.

'ಆ ವಿಚಾರಾನ ಡಿಸ್ಕಸ್ ಮಾಡಿ, ನಾನೇ ಕಾಲ್ ಮಾಡ್ತೀನಿ.'
-ಅದರರ್ಥ: ಮತ್ತೆ ಮತ್ತೆ ಕಾಲ್ ಮಾಡಿ ಜೀವ ತಿನ್‌ಬೇಡಿ.

'ಟೇಕ್ ಕೇರ್, ಬೇಗ ಬರ್ತೀನಿ'-ಆಫೀಸಿಗೆ ಹೊರಟಾಗ ಹೆಂಡತಿಗೆ ಗಂಡ ಹೇಳೋ ಮಾತು.
ಅದರರ್ಥ: ಬರೋಕೆ ಲೇಟಾಗುತ್ತೆ. ಕೇರ್‌ಫುಲ್ಲಾಗಿರು.

'ಐ ಲವ್ ಯೂ... ಹನಿ...'-ಆಫೀಸಿನಿಂದಲೇ ಗಂಡ ಹೆಂಡತಿಗೆ ಹೇಳೋ ಮಾತು.
-ಅದರರ್ಥ: ರಾತ್ರಿ ಬೇಗ ಬರ್ತೀನಿ.

'ಪಕ್ಕದ್ ಮನೆ ಆಂಟಿ ಇವತ್ತು ತುಂಬಾ ಚೆನ್ನಾಗಿ ಕಾಣ್ತಿದ್ರು'-ಹೆಂಡತಿ ಗಂಡನಿಗೆ ಹೇಳಿದ ಮಾತು.
-ಅದರರ್ಥ: ಅವರು ಉಟ್ಟುಕೊಂಡಿದ್ದ ಸೀರೆ ನಂಗೆ ತುಂಬಾ ಮ್ಯಾಚ್ ಆಗ್ತದೆ.

'ಇವತ್ತು ಆಫೀಸಲ್ಲಿ ತುಂಬಾ ಕೆಲ್ಸ ಇದ್ಯಾ?'-ಆಫೀಸಿಗೆ ಹೊರಟಾಗ ಹೆಂಡತಿಯ ಸವಿನುಡಿ.
-ಅದರರ್ಥ: ಸಂಜೆ ಬೇಗ ಬನ್ನಿ, ಅಡುಗೆ ಮಾಡೋಕೆ ಬೇಜಾರು. ಹೋಟ್ಲಿಗೆ ಹೋಗೋಣ.

'ಐ ಮಿಸ್ ಯೂ...'-ಗರ್ಲ್‌ಫ್ರೆಂಡಿಗೆ ಎಸ್ಸೆಮ್ಮೆಸ್.
-ಅದರರ್ಥ: ಹಾಗೇನಿಲ್ಲ... ತುಂಬಾ ಬೋರಾಗ್ತಿದೆ.

'ಕಾಲೇಜಿಗೆ ನಾನೇ ಡ್ರಾಪ್ ಮಾಡ್ಲಾ ಮಗಳೇ'-ಅಪ್ಪನ ಮಾತು.
-ಅದರರ್ಥ: ಡೈರೆಕ್ಟಾಗಿ ಕಾಲೇಜಿಗೆ ಹೋಗು, ಎಲ್ಲೆಲ್ಲೋ ಅಡ್ಡಾಡಕ್ ಹೋಗ್ಬೇಡ.

'ಬೇಡ, ಬೇಡ. ನನ್ ಫ್ರೆಂಡ್‌ನ ಹೊಸ ಸ್ಕೂಟರಲ್ಲಿ ಹೋಗ್ತೀನಿ'-ಮಗಳ ಉತ್ತರ.
-ಅದರರ್ಥ: ನಿನ್ನ್ ಮೂತಿಗೆ ನಂಗೂ ಒಂದು ಹೊಸ ಸ್ಕೂಟರ್ ತೆಗೆಸಿ ಕೊಡಕ್ಕಾಗ್ಲಿಲ್ಲ.

'ನಂಗ್ಯಾಕೋ, ಇವತ್ತು ಜ್ವರ ಬಂದ ಹಾಗಾಗ್ತಿದೆ'- ಪ್ರೈಮರಿ ಸ್ಕೂಲ್ ಹುಡುಗ.
-ಅದರರ್ಥ: ಹೋಮ್‌ವರ್ಕ್ ಆಗಿಲ್ಲ; ಸ್ಕೂಲಿಗೆ ಹೋಗೋಲ್ಲ.

ಇಂಥ ಸಾಕಷ್ಟು ಮಾತುಗಳು ನಿತ್ಯ ಸಿಗಬಹುದು. ಅದಕ್ಕೆ ಬೇರೆ ಬೇರೆ ಅರ್ಥಗಳೂ ಇರಬಹುದು. ಸೂಕ್ಷ್ಮವಾಗಿ ಗಮನಿಸಿ. ಮಾತಿನೊಳಗರ್ಥವನು ಇಟ್ಟವರಾರು? ಅಕ್ಕಿಯೊಳಗನ್ನವನು ಇಟ್ಟವರಾರು? (ಮತ್ತೆ ಸಿದ್ದರಾಮಯ್ಯ ಅವರನ್ನ ನೆನಪಿಸಿಕೋಬೇಡಿ)
ಬೈ ದಿ ಬೈ, ಈ ಬರಹದ ಹಿಂದೆ ಬೇರೇನೂ ಅರ್ಥ ಇಲ್ಲ.


ಪ್ರಳಯಭೂಮಿಯಲ್ಲಿ ರಿಪೋರ್ಟರ್ ರಾಂಬೊJun 30, 2013, 04.03AM IST

ಹೆಲಿಕಾಪ್ಟರ್ ಏರಿ ಕೂತಿದ್ದ ರಿಪೋರ್ಟರ್ ರಾಂಬೊ ಬಗ್ಗಿ ಬಗ್ಗಿ ನೋಡುತ್ತಾನೆ. ಇಡೀ ಉತ್ತರಾಖಂಡ ಛಿದ್ರಛಿದ್ರವಾಗಿದೆ. ನೆಲ ನದಿಯಾಗಿದೆ, ನದಿ ಸಾಗರವಾಗಿದೆ. ಲಕ್ಷಾಂತರ ಜನ ತೊಪ್ಪೆಯಾಗಿದ್ದಾರೆ, ದಾರಿ ತಪ್ಪಿಸಿಕೊಂಡಿದ್ದಾರೆ. ಹೆಸರು ಇಲ್ಲದ ಸಾವಿರಾರು ದೇಹಗಳು ವಿಳಾಸ ಇಲ್ಲದ ಕಡೆ ಹೋಗಿವೆ...
ಪ್ರಚಂಡ ವರದಿಗಾರ ರ‌್ಯಾಂಬೊ ಈವರೆಗೆ ಎಂತೆಂಥದ್ದೋ ಘಟನೆಗಳನ್ನು ಕಣ್ಣಾರೆ ಕಂಡಿದ್ದಾನೆ. ಕಾರ್ಗಿಲ್ ಗುಡ್ಡಗಳಲ್ಲಿ ಗುಂಡಿನ ಮೊರೆತ ಕೇಳಿದ್ದಾನೆ. ಆದರೆ, ಗಿರಿಕಂದರಗಳಲ್ಲಿ ಜನರ ನರಳಾಟ ಕೇಳಿರಲಿಲ್ಲ. ಆಶ್ರಯ ಮನೆ ಕೊಡಲು ಕಾಸು ಪೀಕುವ ಅವ್ಯವಹಾರದ ಸುದ್ದಿ ಮಾಡಿದ್ದಾನೆ; ಸಂತ್ರಸ್ತರಿಗೆ ಆಶ್ರಯ ನೀಡಲು ಕಾಸು ಪೀಕಿ-ಕೊಳ್ಳುವ ಸಣ್ಣತನವನ್ನು ನೋಡಿರಲಿಲ್ಲ. ಪಾರ್ಲಿಮೆಂಟಿನಲ್ಲಿ ವೃದ್ಧ ರಾಜಕಾರಣಿಗಳು ಕುರ್ಚಿ ಉಳಿಸಲು ನಡೆಸುವ ಕಾಳಗವನ್ನು ನೋಡಿದ್ದಾನೆ; ಜೀವ ಉಳಿಸಿಕೊಳ್ಳಲು ಹಿರಿಜೀವಗಳು ನಡೆಸುವ ಹೊಯ್ದಾಟವನ್ನು ನೋಡಿರಲಿಲ್ಲ. ರಿಪೋರ್ಟರ್ ರ‌್ಯಾಂಬೊಗೆ ಇದು ವಿಭಿನ್ನ ಅನುಭವ. ಇಲ್ಲಿ ಒಂದೊಂದು ಜೀವಗಳದ್ದು ಒಂದೊಂದು ಕತೆ. ಆ ಕತೆಗಳನ್ನೆಲ್ಲ ಹೆಕ್ಕಿ ಹೆಕ್ಕಿ ಕಳುಹಿಸಬೇಕೆಂಬ ಸಂಪಾದಕರ ಸೂಚನೆಯನ್ನು ಮತ್ತೆ ಮತ್ತೆ ನೆನಪಿಸಿಕೊಂಡ ಆತ, ಕತೆಗಳನ್ನು ಹುಡುಕುತ್ತಾ ಹೊರಟ. ಒಬ್ಬೊಬ್ಬರನ್ನೇ ಮಾತನಾಡಿಸುತ್ತಾ ಮುಂದುವರಿದ.
ಎದುರಿಗೆ ಸಿಕ್ಕವರು ಆಸ್ತಿಕ ದಂಪತಿ. ಅಲ್ಲಿದ್ದವರೆಲ್ಲ ತಂತಮ್ಮ ಭಾಷೆಯಲ್ಲೇ ಮಾತನಾಡುತ್ತಿದ್ದರು. ಆದರೆ ಈ ದಂಪತಿ ಮಾತ್ರ ಎಲ್ಲರ ಜತೆಗೆ ಬಟ್ಲರ್ ಇಂಗ್ಲಿಷ್‌ನಲ್ಲಿ ಮಾತನಾಡುತ್ತಿದ್ದರು. ಇಷ್ಟೇ ಸಾಕಾಯಿತು, ಇವರು ಕನ್ನಡಿಗರೇ ಇರಬೇಕು ಎಂದು ತಿಳಿದುಕೊಂಡ ರ‌್ಯಾಂಬೊ, ಹೋಗಿ ತನ್ನನ್ನು ಪರಿಚಯಿಸಿಕೊಂಡ.
''ಸಾರ್ ನಮಸ್ಕಾರ. ನಾನು ರಿಪೋರ್ಟರ್ ರ‌್ಯಾಂಬೊ. ನೀವೆಲ್ಲಾ ಹೇಗಿದ್ದೀರಿ?''
''ಓಹೋ, ಫೈನ್. ನಿಮ್ಮನ್ನು ದಿನಾ ಟೀವಿಲಿ ನೋಡ್ತಾ ಇದ್ವು. ಇವತ್ತು ಎದುರಿಗೇ ಬಂದುಬಿಟ್ಟಿದ್ದೀರಿ!''
''ವಾಪಸ್ ಊರಿಗೆ ಹೋಗೋದಕ್ಕೆ ಎಲ್ಲ ವ್ಯವಸ್ಥೆ ಆಗಿದೆಯಾ?''
''ನೋಡಿ, ಆಗ ಬಂತಲ್ಲ ಹೆಲಿಕಾಪ್ಟರ್ ಆಂಧ್ರಪ್ರದೇಶ ಸ್ಟೇಟ್‌ನವರದು; ಅದಕ್ಕಿಂತ ಮುಂಚೆ ಬಂತು ನೋಡಿ, ಅದು ಗುಜರಾತ್‌ನವರದು. ನಮ್ಮ ಹೆಲಿಕಾಪ್ಟರ್ ಈಗ ಬರುತ್ತಂತೆ..''
''ನೀವು ಎಷ್ಟು ದಿನದಿಂದ ವೇಯ್ಟ್ ಮಾಡ್ತಾ ಇದ್ದೀರಿ?''
''ನಮ್ಕತೆ ಇರಲಿ. ಅಲ್ಲೊಬ್ಬ ಇದ್ದಾನೆ ನೋಡಿ ಈಶಾನ್ಯದ ಮನುಷ್ಯ. ಅವನ ಬಗ್ಗೆ ಯಾರೂ ಕೇರ್ ಮಾಡ್ತಾ ಇಲ್ಲ. ಡಯಾಬಿಟಿಸ್ ಇಲ್ಲ, ಬಿಪಿ ಇಲ್ಲ.. ಹಾಗಂತ ಇಲ್ಲೇ ಬಿಟ್ಟು ಹೋಗಿದ್ದಾರೆ. ಕೈಯಲ್ಲಿ ಕಾಸಿಲ್ಲ, ತಿನ್ನೋಕೆ ಫುಡ್ಡಿಲ್ಲ. ದೊಡ್ಡ ರಾಜ್ಯದವನೂ ಅಲ್ಲ ನೋಡಿ ...''
ಎಲ್ಲವನ್ನೂ ನೋಟ್ ಮಾಡಿಕೊಂಡ ರ‌್ಯಾಂಬೊ. ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ, ಆ ಕನ್ನಡಿಗ ವದ್ಧೆ ಬಂದು ಕೇಳಿದಳು, ''ಬ್ರಹ್ಮಾಂಡ ಸ್ವಾಮೀಜಿ ಹೇಳಿದ ಪ್ರಳಯ ಇದೇನಾ? ಅವರು ಹೇಗಿದ್ದಾರೆ?,'' ಅಂತ. ರ‌್ಯಾಂಬೊ ಸುಮ್ಮನಾದ.
***

ಎದುರಿಗೇ ಸಿಕ್ಕವರು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ. ರ‌್ಯಾಂಬೊ ಹೋಗಿ ತನ್ನ ಹೆಸರು ಹೇಳಿಕೊಂಡ. ತಕ್ಷಣ ಕೆಂಡಾಮಂಡಲರಾದ ಮೋದಿ, ''ರ‌್ಯಾಂಬೊ ಮೈ ಹೂಂ. ಹೌ ಕ್ಯಾನ್ ಯೂ ಇಮಿಟೇಟ್ ಮಿ,'' ಎಂದು ಗುಡುಗಿದರು.
''ಇಲ್ಲ ಸರ್, ನಾನು ದಿನಾ 15 ರಿಪೋರ್ಟ್ ಕೊಡ್ತಾ ಇದ್ದೆ. ಅದ್ಕೆ ನಮ್ಮ ಎಡಿಟರ್ ಇಟ್ಟ ಹೆಸರು ಅದು..''
''ಮೊನ್ನೆ 15,000 ಗುಜರಾತಿಗಳನ್ನು ನಾನು ಇಲ್ಲಿಂದ ಪಾರು ಮಾಡಿದ್ದಕ್ಕೆ ನನ್ನನ್ನೂ ರ‌್ಯಾಂಬೊ ಅಂತ ಕರೀತಾ ಇದ್ದಾರೆ ಜನ. ಆ ಕಾಂಗ್ರೆಸ್‌ನವರು ಇದನ್ನ ಸಹಿಸೊಲ್ಲ. ಅಲ್ಲೂ ಕೊಂಕು ಮಾಡ್ತಾರೆ.''
''ಅದ್ಸರಿ ಸರ್, ನೀವು ನಾಳೆ ಪ್ರೈಮ್ ಮಿನಿಸ್ಟ್ರು ಆಗೋಕೆ ಹೊರಟಿರೋರು. ಬರೇ ಗುಜರಾತಿಗಳನ್ನು ಮಾತ್ರ ಸೇವ್ ಮಾಡಿದ್ರಲ್ಲ, ಇದು ಸರೀನಾ? ನಿಮ್ ಸ್ಪೀಡಿಗೆ ಎಲ್ರನ್ನೂ ಪಾರು ಮಾಡಬಹುದಿತ್ತಲ್ಲ,'' ಅಂತಂದ ರ‌್ಯಾಂಬೊ.
''ಹೇ, ಅದು ಹೇಗೆ ಸಾಧ್ಯ. ಈ ದೇಶಕ್ಕೆ ಮೋದಿಯಂಥ ನಾಯಕ ಬೇಕು ಅಂತ ತೋರಿಸೋದು ಹೇಗೆ? ನಾಳೆ ನನ್ನನ್ನು ಪಿಎಂ ಮಾಡಿ ನೋಡ್ಲಿ, ಆಗ ಮಾತ್ರ ದೇಶಾನ ಉಳಿಸ್ತೀನಿ. ವೋಟ್ ಕೊಟ್ಟವರ ಜೀವ ಉಳಿಸ್ತೀನಿ,'' ಎಂದು ಹೇಳಿ ಎಡಗೈ ಬೀಸಿ ಹೊರಟೇಬಿಟ್ಟರು.
ರ‌್ಯಾಂಬೊಗೆ ತಕ್ಷಣ ಸಂಪಾದಕರು ನೆನಪಾದರು. 'ವೋಟ್ ಕೊಡಿ, ಹುಷಾರ್' ಎಂಬ ಟೈಟಲ್‌ನ ಸ್ಪೆಷಲ್ ಸ್ಟೋರಿ ಕಳುಹಿಸಿದ.
***

ನಂತರ ಎದುರಿಗೆ ಸಿಕ್ಕವರು ಕಾಂಗ್ರೆಸ್‌ನ ಎವರ್‌ಗ್ರೀನ್ ಯೂತ್ ರಾಹುಲ್ ಗಾಂಧಿ.
''ನಮಸ್ಕಾರ ಸರ್. ನೀವ್ಯಾಕೆ ಬಂದ್ರಿ ಸರ್ ಇಲ್ಲಿಗೆ?''
''ಅಮ್ಮ ಹೇಳಿ ಕಳಿಸಿದ್ರು. ಅದ್ಕೆ ಬಂದೆ. ಮೋರ್ ಓವರ್, ನಾನಿಲ್ಲಿಗೆ ಬಂದಿರುವುದು ರ‌್ಯಾಂಬೊ ತರಹ ಅಲ್ಲ, ಒಬ್ಬ ಸಾಮಾನ್ಯ ಸಿಟಿಜನ್ ಅಗಿ.''
''ಅಂದ್ರೆ, ನೀವು ಈ ದುರಂತಾನ ರಾಜಕೀಯಕ್ಕೆ ಬಳಸಿಕೊಳ್ತಾ ಇಲ್ವಾ?''
''ಛೆ, ಛೆ... ಎಲ್ಲಾದ್ರೂ ಉಂಟಾ? ಅಮ್ಮ ಹೇಳಿದ್ರು ಅಂತ ಬಂದೆ. ಜತೆಗೆ 3-4 ಟ್ರಕ್ ತುಂಬಾ ಅಕ್ಕಿನೂ ತಂದಿದ್ದೀನಿ. ಇಲ್ಲೆಲ್ಲಾದರೂ ಸಿಕ್ಕಿ ಹಾಕಿಕೊಂಡರೆ ಬೇಕಲ್ಲ?''
***

ಕೊನೇ ಮಾತು: ಕರ್ನಾಟಕ ಕಾಂಗ್ರೆಸ್ ಸರಕಾರ, ಸಚಿವ ಸಂತೋಷ್ ಲಾಡ್‌ರನ್ನು ಕಳುಹಿಸಿದೆ-ಎಲ್ಲರನ್ನೂ ವಾಪಸ್ ಕರಕೊಂಡು ಬರೋಕೆ.
ಬಿಜೆಪಿಯಿಂದ ಸ್ವತಃ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಹೊರಟಿದ್ದಾರೆ-ಯಡಿಯೂರಪ್ಪ ಅವರನ್ನ ವಾಪಸ್ ಕರಕೊಂಡು ಬರೋಕೆ.

ಸುಳ್ಳು-ಸತ್ಯಗಳ ಕೋಟೆಯೊಳಗೆ..
Jun 16, 2013,
ಸುಳ್ಳು ಮತ್ತು ಸತ್ಯಗಳ ನಡುವಿನ ಅಂತರ ಹೆಚ್ಚೇನಲ್ಲ. ಒಂದೇ ಒಂದು ವಾಕ್ಯ ಅಥವಾ ಒಂದೇ ಒಂದು ಪದವಷ್ಟೇ. ಕೆಲವೊಮ್ಮೆ ಯಾವುದು ನಿಜ, ಯಾವುದು ಸುಳ್ಳು ಎಂದು ತಿಳಿದುಕೊಳ್ಳಲಾಗದಷ್ಟು ಕಗ್ಗಂಟಾಗಿರುತ್ತದೆ. ವ್ಯಾಲೆಂಟೈನ್ಸ್ ಡೇಯಂದು ಆತ ಆಕೆಗೆ ಹೇಳಿದ 'ಐ ಲವ್ ಯೂ' ಪದ ನಿಜವೋ, ಸುಳ್ಳೋ ಎಂದು ಗೊತ್ತಾಗಲು ಸಾಕಷ್ಟು ಸಮಯ ಬೇಕು. ಬೇಕಿದ್ದರೆ, ಹತ್ತು ವರ್ಷಗಳ ಹಿಂದೆ 'ಐ ಲವ್ ಯೂ' ಎಂದು ಇನ್ನಾರದೋ ಕಿವಿಯಲ್ಲಿ ಉಸುರಿದ ವ್ಯಕ್ತಿಗಳನ್ನು ಕೇಳಿ ನೋಡಿ, ಅವರು ಹೇಳಿದ್ದು ನಿಜವೋ, ಸುಳ್ಳೋ ಎಂದು ಗೊತ್ತಾಗಿಬಿಡುತ್ತದೆ. ಸಮೀಕ್ಷೆಯೊಂದರ ಪ್ರಕಾರ, 'ಐ ಲವ್ ಯೂ' ಎನ್ನುವುದೇ ಜಗತ್ತಿನ ಅತಿ ದೊಡ್ಡ ಸುಳ್ಳಂತೆ.
ಆದರೆ ಒಂದಂತೂ ನಿಜ; ಸುಳ್ಳು ಎನ್ನುವುದು ಇರಲಿಲ್ಲವಾಗಿದ್ದರೆ ಸತ್ಯವಾಗಿಯೂ ಈ ಲೋಕ ಇಷ್ಟೊಂದು ರೋಚಕವಾಗುತ್ತಿರಲಿಲ್ಲ. ಅಂಥದ್ದೊಂದು ಸುಳ್ಳು-ಸತ್ಯದ ಲೋಕಕ್ಕೆ ಬನ್ನಿ.

ಎಲ್ಲರೂ ಕ್ಷಮಿಸಿಬಿಡುವ ಸುಳ್ಳು
ಕೆಲವೊಂದು ಸುಳ್ಳುಗಳಿಗೆ ಸಾರ್ವತ್ರಿಕ ಕ್ಷಮೆ ಇರುತ್ತದೆ. ಅದು ಸುಳ್ಳು ಎಂದರೂ ಗೊತ್ತಿರುತ್ತದೆ. ಆದರೂ ಅದನ್ನು ಅಷ್ಟೊಂದು ಸೀರಿಯಸ್ಸಾಗಿ ತೆಗೆದುಕೊಳ್ಳೋದಿಲ್ಲ.
* ನಿಮಗೇ ಕಾಲ್ ಮಾಡೋಣ ಅಂತ ಹೊರಟಿದ್ದೆ. ಅಷ್ಟ್ರಲ್ಲಿ ನೀವೇ ಮಾಡಿಬಿಟ್ರಿ.
-ಥಟಕ್ಕನೆ ಬರೋ ಸುಳ್ಳು
* ಫ್ರೆಂಡ್ ಮಮತಾ ಜತೆ ಕೊಶ್ಚನ್ ಡಿಸ್ಕಷನ್ ಮಾಡ್ತಾ ಇದ್ದೆ.
-ಕಾಲೇಜು ಹುಡುಗಿ ಅಪ್ಪ, ಅಮ್ಮನಿಗೆ ಹೇಳೋ ಸುಳ್ಳು
* ಟ್ರಾಫಿಕ್‌ನಲ್ಲಿ ಸಿಕ್ಕಿಕೊಂಡಿದ್ದೇನೆ; ತಡವಾಗಿ ಬರ್ತೀನಿ
-ನೌಕರನೊಬ್ಬ ತನ್ನ ಬಾಸ್‌ಗೆ ಹೇಳೋ ಜನರಲ್ ಸುಳ್ಳು.
* ನಿಮ್ಮ ಕಂಪೆನಿಯಲ್ಲಿ ಕೆಲಸ ಮಾಡುವ ಹಂಬಲ ನನ್ನದು
-ಅಭ್ಯರ್ಥಿ ಅರ್ಜಿಯಲ್ಲಿ ಹೇಳೋ ಡೈಲಾಗ್
* ಚೆನ್ನಾಗಿ ಕೆಲಸ ಮಾಡಿದ್ರೆ 6 ತಿಂಗಳಲ್ಲೇ ಕನ್‌ಫರ್ಮ್ ಮಾಡ್ತೀನಿ.
-ಆಯ್ಕೆಯಾದ ಅಭ್ಯರ್ಥಿಗೆ ಬಾಸ್ ಹೇಳೊ ಮಾತು.

ಮಾರ್ಕೆಟಿಂಗ್ ಸುಳ್ಳು
ಕೆಲವು ಸುಳ್ಳುಗಳು ಮಾರುಕಟ್ಟೆಯಲ್ಲಿ ಜನಜನಿತ. ಇದೂ ಸುಳ್ಳು ಎಂದು ಎಲ್ಲರಿಗೂ ತಿಳಿದಿದ್ದರೂ ಮಾರ್ಕೆಟಿಂಗ್ ತಂತ್ರದ ಹೆಸರಲ್ಲಿ ಎಲ್ಲವೂ ಮರೆಮಾಚಿಬಿಡುತ್ತದೆ.
* ಎರಡು ದಿನದೊಳಗೆ ಹೇಳಿ; ಇನ್ನೆರಡು ಪಾರ್ಟಿ ನೋಡಿ ಹೋಗಿದ್ದಾರೆ.
-ರಿಯಲ್ ಎಸ್ಟೇಟ್ ವ್ಯಾಪಾರಿಗಳು ಇದನ್ನು ಹೇಳಲೇಬೇಕು!
* ಈ ರೇಟಲ್ಲಿ ಇದಕ್ಕಿಂತ ಒಳ್ಳೆ ಕ್ವಾಲಿಟಿ, ಸಿಕ್ರೆ ಇದು ನಿಮಗೆ ಫ್ರೀ
-ವ್ಯಾಪಾರಿ ಹೇಳೋ ಮಾತು. ಆದ್ರೆ ಫ್ರೀ ಕೊಟ್ಟದ್ದಿಲ್ಲ.
* ನಾನು ಇದೇ ಊರಿನವನು. ನಿಮಗೆ ಯಾವಾಗ ಬೇಕಿದ್ರೂ ಸಿಗ್ತೇನೆ
-ಮತ ಮಾರುಕಟ್ಟೆಯಲ್ಲಿ ಅಭ್ಯರ್ಥಿ ಮರಳು ಮಾಡೋ ಸುಳ್ಳು
* ಈ ಕ್ರೀಮ್ ಹಚ್ಕೊಂಡೇ ಅವಳು ಮಿಸ್ ವರ್ಲ್ಡ್ ಆದಳು.
-ಪ್ರಸಾಧನ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಡೈಲಾಗ್

ಬೆಣ್ಣೆ ಸುಳ್ಳು
ನಿರ್ದಿಷ್ಟ ವ್ಯಕ್ತಿಯನ್ನು ಮೆಚ್ಚಿಸಲು, ಓಲೈಸಲು ಇಂಥ ಸುಳ್ಳು ಬಳಕೆಯಾಗುತ್ತದೆ. ಕೆಲವರಲ್ಲಿ ಅದೆಲ್ಲಿ ಇರುತ್ತದೋ ಇಂಥ ಸುಳ್ಳುಗಳು; ಬೇಕೆಂದಾಗ ರಪರಪನೆ ಉದುರಿಬಿಡುತ್ತವೆ.
* ಓಹೋ, ಭಾಳ ಸ್ಲಿಮ್ ಆಗಿದ್ದೀರಿ ಮೇಡಂ.
-ಇವರು ಕೃಶದೇಹಿಗಳನ್ನೂ ಮಾತಿನಿಂದಲೇ ಉಬ್ಬಿಸಿಬಿಡುತ್ತಾರೆ.
* ಜನಪ್ರಿಯ ಮುಖ್ಯಮಂತ್ರಿಗಳ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತಿದ್ದೇನೆ
-ಹಾಗೆ ಹೇಳದಿದ್ದರೆ ಕ್ಯಾಬಿನೆಟ್‌ನಲ್ಲಿ ಉಳಿಯುವುದು ಕಷ್ಟ ಎಂದು ಈ ಡೈಲಾಗ್ ಹೇಳೋ ಮಿನಿಸ್ಟ್ರಿಗೆ ಗೊತ್ತಿರುತ್ತದೆ.
* ನಿಮ್ಮ ಕೈ ಅಡುಗೆ ತಿನ್ನದೆ ಭಾಳ ದಿನ ಆಯಿತು ಆಂಟಿ
-ಹಸಿವಾಗ್ತಿದೆ, ಏನಾದ್ರೂ ಕೊಡಿ ಅಂತನ್ನೋ ಬದಲು ಉದುರಿಸೋ ಸುಂದರ ಡೈಲಾಗ್ ಇದು.
* ನೀವಲ್ಲದೇ ಬೇರಾರಿಂದಲೂ ಈ ಕೆಲ್ಸ ಆಗೊಲ್ಲ.
-ಕೆಲಸ ಆಗುವ ಮೊದಲು ಕತ್ತೆ ಕಾಲು ಹಿಡಿಯೋ ಜಾಯಮಾನದವರ ಸುಳ್ಳು

ಗಂಟಲಲ್ಲೇ ಉಳಿದುಕೊಳ್ಳುವ ಸತ್ಯ
ಕೆಲ ಸತ್ಯಗಳು ಹಾಗೆಯೇ. ಯಾರಿಗೂ ಹೇಳೋ ಹಾಗಿಲ್ಲ, ಬಿಡೋ ಹಾಗಿಲ್ಲ.
* ಥುತ್ತೆರಿಕೆ, ಎಲ್ಲಕ್ಕೂ ಹೈಕಮಾಂಡ್‌ನ ಕೇಳ್ಬೇಕು. ಆ ಮೇಡಂಗೆ ಜೈಕಾರ ಹಾಕ್ತಾನೇ ಇರಬೇಕು. ಯಾವ ಹಣೇಬರಹಾ ರೀ...
-ಮುಖ್ಯಮಂತ್ರಿ ಸಿದ್ದರಾಮಯ್ಯ ಹೀಗೆ ಅಂದುಕೊಂಡರೂ ಬಹಿರಂಗವಾಗಿ ಹೇಳೊಕ್ಕಾಗಲ್ಲ.
* ಒಂದೇ ಒಂದ್ಸಲ ನನ್ನ ಪಿಎಂ ಮಾಡೋಕೆ ಇಷ್ಟೆಲ್ಲ ಒದ್ದಾಡ್ತಾರಲ್ಲ ಈ ಆರ್‌ಎಸ್‌ಎಸ್‌ನವರು.
-ಬಿಜೆಪಿ ನಾಯಕ ಆಡ್ವಾಣಿ ಮನಸ್ಸಿನಲ್ಲಿ ಇಂಥ ಆಲೋಚನೆ ಬಂದರೂ ಎಲ್ಲರೆದುರು ಹೇಳೊಕ್ಕಾಗಲ್ಲ
* ಇಲ್ಲ, ನಾನೇ ದುಡ್ಡು ಎತ್ತಿಟ್ಟುಕೊಂಡಿದ್ದೀನಿ. ಸುಮ್ನೆ ಹುಡುಕಾಡ್ಬೇಡಿ
-ಗಂಡ ತನ್ನ ಪರ್ಸ್‌ನಿಂದ ಕಾಣೆಯಾದ ದುಡ್ಡನ್ನು ಹುಡು ಕಾಡುತ್ತಿರುವಾಗ ಹೆಂಡತಿ ಮನಸ್ಸಲ್ಲಿ ಇಂಥ ಡೈಲಾಗ್ ಬಂದರೂ, ಬಾಯಿಗೆ ಅದು ಬರಲಾರದು.

ಎಂದೂ ಒಪ್ಪಿಕೊಳ್ಳದ ಸತ್ಯ
ಸತ್ಯ ಎಂದು ಗೊತ್ತಿದೆ. ಆದರೆ ಇದನ್ನು ಬರಂಗವಾಗಿ ಹೋಗಲಿ, ಮನಸ್ಸಿನೊಳಗೂ ಒಪ್ಪಿಕೊಳ್ಳೋಕೆ ಜನ ರೆಡಿ ಇರೋದಿಲ್ಲ.
* ಈ ತಪ್ಪಿಗೆ ನಾನೇ ಕಾರಣ. ಅವಳ ಮಾತು ಕೇಳಿದ್ರೆ ಹೀಗಾಗ್ತಿರಲಿಲ್ಲ
-ಗಂಡನೊಬ್ಬ ಒಪ್ಪಿಕೊಳ್ಳದ ಸತ್ಯ
* ಅವರು ಲಂಚ ಕೊಡದೇ ಇದ್ರೆ ಈ ಸೈಟ್ ಎಲ್ಲಿ ಸಿಕ್ತಾ ಇತ್ತು?
-ಸರಕಾರಿ ಅಧಿಕಾರಿಯೊಬ್ಬರು ಹೇಳಿಕೊಳ್ಳದ ಸತ್ಯ
* ನಾನೊಬ್ಬ ಅಸಹಾಯಕ ಪಿಎಂ. ಎಲ್ಲ ಮೇಡಂ ಹೇಳಿದ ಹಾಗೆ.
-ಪ್ರಧಾನಿ ಮನಮೋಹನ್ ಸಿಂಗ್ ಹೇಳಲಾಗದ ಮಾತು.

E- ಲೋಕದ ಈ ಮಂದಿMay 19, 2013, 04.43AM IST
ಪ್ರತಿಬಾರಿ ಚುನಾವಣೆ ಮುಗಿದಾಗ ರಾಜಕೀಯ ಅಂಗಣದಲ್ಲಿ ಹೊಸ ಹೊಸ ಬ್ರಾಂಡ್‌ಗಳು ಉದ್ಭ ವಿ ಸಿ ಬಿಡುತ್ತದೆ. ಹಲವು ಬಾರಿ ಹಳೇ ಬ್ರಾಂಡ್‌ನ್ನು ಜನ ಮುಲಾಜಿಲ್ಲದೆ ಎಸೆದುಬಿಡುತ್ತಾರೆ. ಇನ್ನು ಕೆಲವೊಮ್ಮೆ ಎಲ್ಲೂ ಕಾಣಿಸದಿದ್ದ ಬ್ರಾಂಡ್‌ವೊಂದು ದಿಢೀರ್ ಪ್ರತ್ಯಕ್ಷವಾಗಿಬಿಡಬಹುದು. ಬ್ರಾಂಡ್‌ವಾರ್‌ನಲ್ಲಿ ನಮ್ಮ ನಾಯಕರನ್ನು ಯಾವುದಾ ದರೂ ಎಲೆಕ್ಟ್ರಾನಿಕ್ ವಸ್ತುಗಳಿಗೆ ಹೋಲಿಸಿದರೆ ಯಾರು ಯಾವ ರೀತಿ ಕಾಣಬಹುದು?
ಬನ್ನಿ, ನಮ್ಮ ನಾಯಕರ ಗುಣಾವಗುಣಗಳನ್ನು ಎಲೆಕ್ಟ್ರಾನಿಕ್ ಲೋಕದ ವಸ್ತುಗಳ ಜತೆ ಹೋಲಿಸೋಣ.
ಗೆದ್ರಾಮು: ಕಂಪ್ಯೂಟರ್‌ನ ಹಾರ್ಡ್‌ಡಿಸ್ಕ್. ತುಂಬಾ ಹಾರ್ಡ್ ಎನಿಸುವ ಕಾರಣಕ್ಕೆ ಮಾತ್ರ ಇವರು ಹಾರ್ಡ್ ಡಿಸ್ಕ್ ಅಲ್ಲ. ಸರಕಾರವೆಂಬ ಕಂಪ್ಯೂಟರ್‌ನ್ನು ನಿರ್ವಹಿಸುವ ಜವಾಬ್ದಾರಿ ಈ ಹಾರ್ಡ್‌ಡಿಸ್ಕ್ ಮೇಲಿದೆ. ಸ್ಟೋರೇಜ್ ಕೆಪಾಸಿಟಿ ಚೆನ್ನಾಗಿದೆ. ಕೆಲವು ಬಾರಿ ನಿಧಾನ ಎನಿಸಿದರೂ ಈವರೆಗಿನ ಕಾರ‌್ಯಕ್ಷಮತೆ ಉತ್ತಮವಾಗಿದೆ. ಬಾಹ್ಯ ವಸ್ತುಗಳನ್ನು ಸುಲಭವಾಗಿ ಒಳಸೇರಿಸಿಕೊಳ್ಳುವು ದಿಲ್ಲ. ಇದರ ಮುಖ್ಯವಾದ ದೌರ್ಬಲ್ಯವೆಂದರೆ- ಮದರ್‌ಬೋರ್ಡ್ (ಕಾಂಗ್ರೆಸ್‌ನ ಮೇಡಂ ಹೈಕಮಾಂಡ್) ಇಲ್ಲದೆ ಈ ಹಾರ್ಡ್‌ಡಿಸ್ಕ್ ಕೆಲಸ ಮಾಡುವುದಿಲ್ಲ.
ಯಡಿಯೂರು: ಅತ್ಯಂತ ಶಕ್ತಿಶಾಲಿ ಡಾಲ್ಬಿ ಸೌಂಡ್ ಹೊಂದಿರುವ ಸಾನಿಕ್ ಸ್ಪೀಕರ್. ಯಾವುದೇ 'ಆಪರೇ ಟಿಂಗ್ ಸಿಸ್ಟಮ್' ಇರಲಿ (ಬಿಜೆಪಿಯಲ್ಲಿರಲಿ ಅಥವಾ ಕೆಜೆಪಿಯಲ್ಲೇ ಇರಲಿ) ಅದಕ್ಕೆ ಹೊಂದಿಕೊಂಡು ಕಾರ್ಯ ನಿರ್ವಹಿಸುತ್ತದೆ. 3 ವ್ಯಾಟ್ ಔಟ್‌ಪುಟ್‌ನ ಈ ಸ್ಪೀಕರ್‌ನ ವೈಬ್ರೇಷನ್‌ಗೆ ಹಿಂದೆ ವಿಧಾನಸೌಧವನ್ನೇ ನಡುಗಿಸಿದ ಇತಿಹಾಸ ಇದ್ದು, ಈಗ ಆಡಳಿತಾರೂಢ ಪಕ್ಷವಾದ
ಬಿಜೆಪಿ ಯನ್ನೇ ಬುಡಮೇಲು ಮಾಡಿದೆ. ಸಾಮಾನ್ಯ ತೆಂಗಿನಕಾಯಿ ಗಾತ್ರದಲ್ಲಿರುವ ಈ ಸ್ಪೀಕರ್, 80 ಡೆಸಿಬಲ್ ಸಾಮರ್ಥ್ಯದ ಔಟ್‌ಪುಟ್ ನೀಡುತ್ತದೆ. ಇದರ ಮುಖ್ಯ ದೌರ್ಬಲ್ಯ ಎಂದರೆ ಕೆಲವು ಬಾರಿ ಶಬ್ದ ಮಾತ್ರ ಜೋರು ಇರುತ್ತದೆ, ಪರಿಣಾಮ ಮಾತ್ರ ಶೂನ್ಯವಾಗಿರುತ್ತದೆ.
ಸುಮಾರಸ್ವಾಮಿ: ಒಂದು ವ್ಯವಸ್ಥೆಯೊಳಗೆ ನಿಧಾನವಾಗಿ ಹೊಕ್ಕು ಅದನ್ನು ದುರ್ಬಲಗೊಳಿಸುವ ಪರಿಣಾಮಕಾರಿ ವೈರಸ್. ತಾನು ಕಿಂಗ್‌ಮೇಕರ್ ವೈರಸ್ ಎಂದು ಹೇಳಿಕೊಳ್ಳುವ ಇದು, ಸಂಪೂರ್ಣ ಪರಾವಲಂಬಿ. ಇನ್ನೊಂದು ಪೂರಕ ವೈರಸ್ ಇದ್ದರೆ ಮಾತ್ರ ನೇರವಾಗಿ ದಾಳಿ ಮಾಡುತ್ತದೆ. ಹಿಂದೆ ಕಾಂಗ್ರೆಸ್ ಸರಕಾರವನ್ನು ಉರು ಳಿಸಿ ಬಿಜೆಪಿ ಎಂಬ ವೈರಸ್ ಜತೆಗೂಡಿ ಸರಕಾರ ಸ್ಥಾಪಿಸಿತ್ತು. ನಂತರ ಅದೇ ಬಿಜೆಪಿ ಸರಕಾರವನ್ನು ಉರುಳಿಸಲು ಹೊಂಚು ಹಾಕಿತ್ತು. ತನ್ನ ಎದುರಾಳಿಯ ದೌರ್ಬಲ್ಯಗಳ ದಾಖಲೆ ಗಳನ್ನು ಕಲೆ ಹಾಕಿ ನಂತರ ಬೆದರಿಕೆ ಹಾಕುವ ಮೂಲಕ ನಿಧಾನವಾಗಿ ದಾಳಿ ಮಾಡುತ್ತದೆ.
ಶ್ರೀಭೀಮುಲು: ನಾಲ್ಕು ರೆಕ್ಕೆಗಳಿರುವ ವಿಶಿಷ್ಟ ಫ್ಯಾನ್ ಇದು. ಕಬ್ಬಿಣದ ಅದಿರು ಇರುವ ಪ್ರದೇಶದಲ್ಲಿ ಅತಿ ವೇಗದಲ್ಲಿ ತಿರುಗುವ ಇದು ಬಹುತೇಕ ಸಂದರ್ಭಗಳಲ್ಲಿ ಧೂಳು ಎಬ್ಬಿಸುವುದೂ ಉಂಟು, ತಾಪಮಾನ ಹೆಚ್ಚಾದಾಗ ಕೂಲ್ ಮಾಡುವುದೂ ಉಂಟು. ಬಳ್ಳಾರಿ ಮೂಲದ ಈ ಫ್ಯಾನ್‌ನ ಬಿಡಿಭಾಗಗಳು ಹೈದರಾಬಾದ್‌ನಲ್ಲಿ ತಯಾರಿ ಸಲಾ ಗಿದ್ದು, ರಾಯಲ್ ಸೀಮೆಯ ಜನರ ಮೆಚ್ಚಿನ ಫ್ಯಾನ್ ಇದು. ಹೆಚ್ಚು ದುಡ್ಡು ಸುರಿಸುತ್ತದೆ ಎನ್ನುವ ನಂಬಿಕೆಯಿಂದ ಕೆಲವರು ಈ ಫ್ಯಾನ್‌ಗೆ ನೇಣು ಹಾಕಿಕೊಂಡದ್ದೂ ಉಂಟು.
ಸನಂತ್‌ಕುಮಾರ್: ತನ್ನ ಪಾಡಿಗೆ ಸದ್ದಿಲ್ಲದೆ ಕೆಲಸ ಮಾಡುತ್ತಿರುವ ಬೇಹುಗಾರಿಕಾ ಸರ್ವಿಲೆನ್ಸ್ ಕ್ಯಾಮೆರಾ. ಎಲ್ಲಿಯೂ ಯಾರ ಕಣ್ಣಿಗೂ ಕಾಣಿಸದೆ ದಿಲ್ಲಿಯಲ್ಲೇ ಕುಳಿತುಕೊಂಡು ಕರ್ನಾಟಕದ ಬಿಜೆಪಿಯೊಳಗಿನ ಎಲ್ಲ ಚಟುವಟಿಕೆಗಳನ್ನು ರೆಕಾರ್ಡ್ ಮಾಡುತ್ತಾ ಹೋಗುತ್ತದೆ. ರಾಜ್ಯದಲ್ಲೂ ಈ ಕ್ಯಾಮೆರಾಕ್ಕೆ ಫೀಡ್ ಮಾಡುವ ಹಲವು ಉಪ ಕ್ಯಾಮೆರಾಗಳಿದ್ದು, ಇವುಗಳು ತೆಗೆದ ಚಿತ್ರಗಳೂ ಈ ಕ್ಯಾಮೆರಾದಲ್ಲಿ ಶೇಖರಗೊಳ್ಳುತ್ತಿರುತ್ತವೆ. ತಾನು ತೆಗೆದ ಚಿತ್ರಗಳನ್ನು ಸೂಕ್ತ ಕಾಲದಲ್ಲಿ ಅದು ಬಳಸಿಕೊಳ್ಳುತ್ತದೆ. ಯಾರಿಗೂ ತಿಳಿಯದ ಹಾಗೆ. ಹಿಂದೆ ಈ ಕ್ಯಾಮೆರಾದ ಕಣ್ಣು ಬೆಂಗಳೂರಿನ ವಿಧಾನಸೌಧದ ಸಿಎಂ ಚೇಂಬರ್ ಮೇಲೆಯೇ ನೆಟ್ಟಿತ್ತು ಎಂದು ಹೇಳಲಾಗಿದೆ. ಆದರೆ ಈಗ ಅದು ಔಟ್ ಆಫ್ ಫೋಕಸ್ ಆಗಿದೆ.
ಕಿಷ್ನು: ಒಂದು ಕಾಲದಲ್ಲಿ ವೀಕ್ಷಕರನ್ನು ಸೆಳೆದ ವಿಶಾಲ ವಾದ ಎಲ್‌ಸಿಡಿ ಸ್ಕ್ರೀನ್. 1600ಗಿ900 ರೆಸೊಲ್ಯೂ ಷನ್ ಇರುವ ಈ ಸ್ಕ್ರೀನ್ ಅತ್ಯುತ್ತಮ ಗುಣಮಟ್ಟದ ಚಿತ್ರಗಳನ್ನು ನೀಡುತ್ತದೆ. ಅತ್ಯಂತ ಶುಭ್ರವಾದ ಹಾಗೂ ಶ್ರೀಮಂತವಾದ ಅನುಭವ ನೀಡುವ ಇದು ದೇಶ- ವಿದೇಶಗಳ ಚಿತ್ರಣವನ್ನು ನಿಮ್ಮ ಕಣ್ಣ ಮುಂದೆ ಅದ್ಭುತವಾಗಿ ಕಟ್ಟಿ ಕೊಡುತ್ತದೆ. ಆದರೆ ಈಚೆಗೆ ಸುಧಾರಿತ ತಂತ್ರಜ್ಞಾನಗಳು ಬಂದಿರುವುದರಿಂದ ಅವುಗಳ ಮುಂದೆ ಈ ಸ್ಕ್ರೀನ್ ಕೊಂಚ ಮಂಕಾದಂತೆ ಕಾಣಿಸಿಕೊಳ್ಳುತ್ತಿದೆ. ಈಚೆಗೆ ನಡೆದ ಚುನಾವಣೆ ಗಳಲ್ಲಿ ಇದು ಹೆಚ್ಚಾಗಿ ಪ್ರದರ್ಶನ ಕಂಡಿಲ್ಲ. ಪ್ರದರ್ಶನ ಕಂಡ ಕೆಲವೆಡೆ ಹಿಂದಿನ ಬ್ರೈಟ್‌ನೆಸ್ ಉಳಿಸಿ ಕೊಂಡಿರಲಿಲ್ಲ ಎನ್ನುವ ಮಾತೂ ಕೇಳಿಬಂದಿದೆ.
ಜಗ್ಗಿ ಸಿಟ್ರು: ಪರಿಪೂರ್ಣ ಸಾಫ್ಟ್‌ವೇರ್. ಸಾಫ್ಟ್ ಎಂಬ ಕಾರಣಕ್ಕೆ ಮಾತ್ರ ಇವರು ಸಾಫ್ಟ್‌ವೇರ್ ಅಲ್ಲ. ಯಾರೋ ಬರೆದ ಪ್ರೋಗ್ರಾಮಿಂಗ್ ಪ್ರಕಾರ ಕಾರ‌್ಯನಿರ್ವ ಹಿಸುವ ಕಾರಣ ಈ ಸಾಫ್ಟ್‌ವೇರ್ ನಿಗದಿಪಡಿಸಿದ ಕೆಲಸವನ್ನಷ್ಟೇ ಮಾಡಬಲ್ಲದು. ಆಟೋಮೇಷನ್ ಸೇವೆ ಹೊಂದಿರುವುದರಿಂದ ಕೆಲ  ಕಾಲ ರಿಮೋಟ್ ಕಂಟ್ರೋಲ್ ಮೂಲಕ ಆಡಳಿತವನ್ನೂ ಮಾಡಿತ್ತು ಈ ಸಾಫ್ಟ್‌ವೇರ್.
ಪಕ್ಷೇತರ ನಾಯಕರು: ಈಚೆಗೆ ನಡೆದ ಚುನಾವಣೆಯಲ್ಲಿ ಗೆದ್ದು ಬಂದ ಪಕ್ಷೇತರ ಶಾಸಕರು ಪೆನ್‌ಡ್ರೈವ್ ಇದ್ದ ಹಾಗೆ. ಯಾವುದೇ ಕಂಪ್ಯೂಟರ್‌ಗೂ ಅಡ್ಜಸ್ಡ್ ಆಗುವ ಸಾಮರ್ಥ್ಯ ಹೊಂದಿವೆ. ಅದರಲ್ಲೂ ಅಧಿಕಾರಕ್ಕೆ ಬರುವ ಪಕ್ಷದ ಡ್ರೈವ್‌ನೊಳಗೆ ತೂರಿಕೊಳ್ಳುವ ಪ್ರಯತ್ನದಲ್ಲಿರುವ ಈ ಪೆನ್‌ಡ್ರೈವ್‌ಗಳು, ತಾವು ಕಾಂಗ್ರೆಸ್‌ನ ಹಸ್ತದಲ್ಲಿರುವ 'ಥಂಬ್' ಡ್ರೈವ್ (ಹೆಬ್ಬೆರಳು) ಎಂದು ಹೇಳಿಕೊಳ್ಳುತ್ತಿರುವುದು ವಿಶೇಷ. ಹಿಂದಿನ ಬಿಜೆಪಿ ಸರಕಾರದಲ್ಲಿ ಇಂಥ ಪೆನ್‌ ಡ್ರೈವ್‌ ಗಳು ಸುಲಭವಾಗಿ ಅಧಿಕಾರ ಗಿಟ್ಟಿಸಿಕೊಂಡಿ ದ್ದವು. ಇವುಗಳ ಮೂಲಕ ವೈರಸ್ ನುಸುಳುವುದೂ ಸುಲಭ.

ಕೊನೇ ಮಾತು: ಸರಕಾರವನ್ನು ಬಟ್ಟೆಗೆ ಹೋಲಿಸಿದರೆ ಹಿಂದಿನ ಸರಕಾರಕ್ಕೂ ಈಗಿನ ಸರಕಾರಕ್ಕೂ ಇರುವ ಅಂತರ ಏನು?
-ಅದು 'ರೆಡ್ಡಿ' ಮೇಡ್ ಉಡುಪು, ಇದು 'ಸಿದ್ದ' ಉಡುಪು.

ಇದು ಚಕ್ರವ್ಯೂಹ.. ಒಬ್ಬರನ್ನೊಬ್ಬರು..Apr 7, 2013, 04.45AM IST

ಈ ಚುನಾವಣಾ ಚಕ್ರದೊಳಗೆ ಯಾರು ಗೆಲ್ತಾರೆ; ಯಾರು ಬೀಳ್ತಾರೆ ಅನ್ನೋದು ಊಹೆಗೆ ಸಿಗುವ ಸಂಗತಿಯಲ್ಲ. ಗೆದ್ದವರು ಐದು ವರ್ಷ ಮೆರೀತಾರೆ; ಎಲ್ಲವನ್ನ ಮರೀತಾರೆ. ಸೋತವರು ಬಗ್ಗಿಬಿಡುತ್ತಾರೆ; ನೆಟ್ಟಗಾಗೋದು ಇನ್ನೊಮ್ಮೆ ಗೆದ್ದಾಗಲೇ. ಇಂದು ಸೋತವ ನಾಳೆ ಗೆದ್ದುಬಿಡಬಹುದು. ನಾಳೆ ಗೆಲ್ಲುವವ ಹಿಂದೊಮ್ಮೆ ಮಣ್ಣು ಮುಕ್ಕಿದ್ದಿರಬಹುದು. ಇದು ಹೀಗೆಯೇ ಪೂರ್ಣ ಸರ್ಕಲ್. ತಿರುಗುತ್ತಾನೇ ಇರುತ್ತೆ.
ಈ ಸರ್ಕಲ್‌ನಲ್ಲಿ ನಾಳೆ ಏನಾಗುತ್ತೆ ಉಹುಂ, ಯಾರಿಗೂ ಗೊತ್ತಿಲ್ಲ. ನಿನ್ನೆ ಏನಾಗಿತ್ತು... ಅದರ ಬಗ್ಗೆಯೂ ಧ್ಯಾನ ಇಲ್ಲ. ಇಂದು ನಿಲ್ಲಬೇಕು, ಗೆಲ್ಲಬೇಕು ಅನ್ನೋದಷ್ಟೇ ಧ್ಯಾನ. ಆದರೂ ಹಾಗೇ ಸುಮ್ಮನೆ ನಾಳೆ ಏನಾಗುತ್ತೆ ಅಂತ ಇಣುಕಿ ನೋಡೋಣವಾ?
ಈ ಕೆಳಗೆ ಒಂದಷ್ಟು ಚೂರು ಪಾರು ಸುದ್ದಿಗಳಿವೆ. ಇದು ಪೂರಾ ಊಹೆಯ ಸುದ್ದಿ. ನಾಳೆ ಹೀಗೆಯೇ ನಡೆದರೆ ಆಶ್ಚರ‌್ಯ ಪಡಬೇಕಾಗಿಲ್ಲ. ಏಕೆಂದರೆ, ಇದು ಚಕ್ರ- ಪೊಲಿ ಟಿಕಲ್ ಸರ್ಕಲ್.

ಕೈ ನಾಯಕರಿಗೆ ಬುಲಾವ್
ರಾಜ್ಯದಲ್ಲಿ ನಡೆಯುತ್ತಿ ರುವ ಭಿನ್ನಮತ, ಬಂಡಾಯ, ನಾಯ ಕರ ಪ್ರತಿಷ್ಠೆಯ ಮೇಲಾಟದಿಂದ ಸಿಟ್ಟಿಗೆದ್ದಿರುವ ಹೈಕ ಮಾಂಡ್ ರಾಜ್ಯದ ಪ್ರಮುಖ ನಾಯಕರಿಗೆ ಬುಲಾವ್ ನೀಡಿದೆ.
ಮೊದಲ ಹಂತದ ಮುಖ್ಯಮಂತ್ರಿ ಮಲ್ಲಿಕಾರ್ಜುನ ಖರ್ಗೆ, ಎರಡನೇ ಹಂತದ ಮುಖ್ಯಮಂತ್ರಿ ಸಿದ್ದರಾ ಮಯ್ಯ ಹಾಗೂ ಈಗಾಗಲೇ ಈ ಸಂಬಂಧ ಸಾಲಿನಲ್ಲಿ ನಿಂತಿರುವ ಜಿ. ಪರಮೇಶ್ವರ್ ಅವರು ಶನಿವಾರ ಬೆಳಗ್ಗೆ ವಿಶೇಷ ವಿಮಾನದ ಮೂಲಕ ದಿಲ್ಲಿಗೆ ಧಾವಿಸಿ ದರು. ತಾನೇ ಮುಖ್ಯಮಂತ್ರಿಯಾಗ ಬೇಕೆಂದು ಹಠ ಹಿಡಿದು ಕೂತಿರುವ ಎಸ್.ಎಂ.ಕಷ್ಣ ಅವರನ್ನು ಹೈಕ ಮಾಂಡ್ ಮಾತುಕತೆಗೆ ಕರೆಯದೇ ಇರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಸರಕಾರ ಅಸ್ತಿತ್ವಕ್ಕೆ ಬಂದು ಒಂದು ವರ್ಷವಾಗುವಷ್ಟ ರಲ್ಲೇ ಕೆಲವು ಶಾಸಕರು ರೆಸಾರ್ಟ್ ರಾಜಕೀ ಯಕ್ಕೆ ಮುಂದಾಗಿರುವುದರಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆ ಯಾ ಗಿದ್ದು, ಇದು ಸದ್ಯದಲ್ಲೇ ಎದುರಾಗುವ ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರಬಹುದು ಎಂಬ ಹಿನ್ನೆಲೆಯಲ್ಲಿ ಹೈಕಮಾಂಡ್ ಈ ತುರ್ತು ಸಭೆ ಕರೆದಿದೆ.
ಕಳೆದ ವರ್ಷ ಸರಕಾರ ರಚನೆಯ ಹಂತದಲ್ಲೂ ಭಿನ್ನಮತ ಭುಗಿಲೆದ್ದು, ಕೊನೆಗೆ ಇಬ್ಬರು ಪ್ರಮುಖ ನಾಯಕ ರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ಅವರನ್ನು ಮೊದಲ ಮತ್ತು ಎರಡನೇ ಹಂತದ ಸಿಎಂ ಎಂದು ಘೋಷಣೆ ಮಾಡಿದ್ದನ್ನು ನೆನಪಿಸಿಕೊಳ್ಳಬಹುದು.

ಬಿಜೆಪಿಯೇ ಸಮರ್ಥ ಪಕ್ಷ
ಯಡಿಯೂರಪ್ಪ ರಾಜ್ಯದಲ್ಲಿ ಕಾಂಗ್ರೆಸ್ ನಾಯಕರ ಕಚ್ಚಾಟದಿಂದ ಆಡಳಿತ ಸ್ತಬ್ಧವಾಗಿದ್ದು, ಕೂಡಲೇ ವಿಧಾನಸಭೆ ವಿಸರ್ಜಿಸಿ ಹೊಸ ಜನಾದೇಶ ಪಡೆಯಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಕಳೆದ ಚುನಾವಣೆಯಲ್ಲಿ ಹೀನಾಯ ಸೋಲನ್ನಪ್ಪಿದ ಕೆಜೆಪಿಯನ್ನು ಬಿಜೆಪಿ ಜತೆ ಮರುವಿಲೀನ ಗೊಳಿಸಿ ದ್ದಲ್ಲದೆ, ಬಿಜೆಪಿಯ ರಾಜ್ಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದರು.
ಕಾಂಗ್ರೆಸ್ ಆಡಳಿತದಿಂದ ಜನ ಬೇಸತ್ತಿದ್ದಾರೆ. ಈ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ಮಾಡಲು ಬಿಜೆಪಿ ಮಾತ್ರ ಶಕ್ತ ಎಂದು ಹೇಳಿದ ಅವರು, ಅನಂತ್‌ಕುಮಾರ್ ಮತ್ತು ತಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಅದೆಲ್ಲವೂ ಮಾಧ್ಯಮಗಳ ಸಷ್ಟಿ ಎಂದು ಹೇಳಿದರು. ಮುಂದಿನ ಚುನಾವಣೆಯನ್ನು ಬಿಜೆಪಿ ಒಗ್ಗಟ್ಟಾಗಿ ಎದುರಿ ಸಲಿದೆ. ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸುತ್ತಾರೆ. ನಮ್ಮ ಪಕ್ಷ ಇನ್ನೊಮ್ಮೆ ಅಧಿಕಾರ ಹಿಡಿದು ಯಡಿಯೂರಪ್ಪ ಮತ್ತೆ ಸಿಎಂ ಆಗೋದರಲ್ಲಿ ಅನುಮಾನವೇ ಇಲ್ಲ ಎಂದರು.

ಗೊಂದಲದಲ್ಲಿ ಜಯಲಕ್ಷ್ಮಿ
ಕೆಜೆಪಿ ಪಕ್ಷ ಈಚೆಗೆ ಬಿಜೆಪಿ ಜತೆ ವಿಲೀನಗೊಂಡಿದ್ದರಿಂದ ತಮ್ಮ ಮುಂದಿನ ಹೆಜ್ಜೆ ಏನಿರಬೇಕು ಎನ್ನುವ ಬಗ್ಗೆ ಮಾಜಿ ನರ್ಸ್ ಜಯಲಕ್ಷ್ಮಿ ಗೊಂದಲಕ್ಕೆ ಸಿಲುಕಿಕೊಂಡಿದ್ದಾರೆ.
'ಬಿಜೆಪಿ ಪಕ್ಷದ ಜತೆ ವಿಲೀನಗೊಳಿಸುವ ವೇಳೆ ತನ್ನನ್ನು ಯಡಿ ಯೂರಪ್ಪ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ' ಎಂದು ಕಿಡಿಕಾರಿದ ಜಯಲಕ್ಷ್ಮಿ, 'ಬಿಜೆಪಿಯಲ್ಲಿ ರೇಣುಕಾಚಾರ‌್ಯ ಇರುವ ತನಕ ನಾನು ಅಲ್ಲಿ ವಿಲೀನಗೊಳ್ಳಲು ಸಾಧ್ಯವಿಲ್ಲ' ಎಂದು ಸ್ಪಷ್ಟಪಡಿಸಿದರು. ಕಿಸ್ ಪ್ರಕರಣ ಮತ್ತು ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಪರಿಚಿತರಾದ ಜಯ ಲಕ್ಷ್ಮಿ, ವಿಧಾನಸಭಾ ಚುನಾವಣೆ ವೇಳೆ ಬಿಎಸ್‌ಆರ್ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದರು. ಕೆಲವೇ ತಿಂಗಳ ಅವಧಿಯಲ್ಲಿ ಆ ಪಕ್ಷವನ್ನು ತೊರೆದು ಯಡಿಯೂರಪ್ಪ ನಾಯಕತ್ವದ ಕೆಜೆಪಿ ಪಕ್ಷಕ್ಕೆ ಸೇರಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ರೆಡ್ಡಿ ಮತ್ತೊಂದು ಬಾಂಬ್
ಕುಮಾರಸ್ವಾಮಿ ಅವರ 150 ಕೋಟಿ ಗಣಿಕಪ್ಪ ಪ್ರಕರಣವನ್ನು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ, ಇನ್ನೊಮ್ಮೆ ಪ್ರಸ್ತಾಪಿಸಿದ್ದು, ಇದರಿಂದ ಬಿಎಸ್‌ಆರ್ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ವಿಲೀನ ಪ್ರಕ್ರಿಯೆಗೆ ಹಿನ್ನಡೆಯಾಗಿದೆ.
ಕಳೆದ ಒಂದು ವರ್ಷದಿಂದಲೂ, ಶ್ರೀರಾಮುಲು ನೇತ ತ್ವದ ಬಿಎಸ್‌ಆರ್ ಕಾಂಗ್ರೆಸ್ ಪಕ್ಷ ಜೆಡಿಎಸ್ ಜತೆ ವಿಲೀ ನ ಗೊಳ್ಳುವ ಪ್ರಕ್ರಿಯೆ ನಡೆದಿತ್ತು. ಈಚೆಗೆ ಜೈಲಿನಿಂದ ಬಿಡುಗಡೆ ಯಾದ ಜನಾರ್ದನ ರೆಡ್ಡಿ, ಕಷ್ಟಕಾಲದಲ್ಲಿರುವ ತಮಗೆ ಅಂದು ಪಡೆದಿದ್ದ 150 ಕೋಟಿ ಗಣಿಕಪ್ಪವನ್ನು ವಾಪಸ್ ಮಾಡಿದರೆ ಮಾತ್ರ ವಿಲೀನ ಸಾಧ್ಯ ಎಂದು ಹೇಳಿದ್ದು, ಕುಮಾರಸ್ವಾಮಿ ಅವರನ್ನು ಕೆರಳಿಸಿದೆ ಎಂದು ಮೂಲಗಳು ತಿಳಿಸಿವೆ.

ಪೂಜಾಗಾಂಧಿ ನಿವೃತ್ತಿ
ಕಳೆದ ಐದು ವರ್ಷಗಳಲ್ಲಿ ಬಹುತೇಕ ಎಲ್ಲ ರಾಜಕೀಯ ಪಕ್ಷಗಳ ನಾಯಕರಾಗಿ ದುಡಿದ 'ಹಿರಿಯ' ರಾಜಕಾರಣಿ ಮತ್ತು ಮಾಜಿ ನಟಿ ಪೂಜಾ ಗಾಂಧಿ ರಾಜಕೀಯ ನಿವತ್ತಿ ಪಡೆದಿರುವುದಾಗಿ ಘೋಷಿಸಿದ್ದಾರೆ. ಬಿಎಸ್‌ಆರ್ ಕಾಂಗ್ರೆಸ್ ಮತ್ತು ಜೆಡಿಎಸ್ ವಿಲೀನ ಪ್ರಕ್ರಿಯೆ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ಕಸಿವಿಸಿ ಗೊಂಡಿ ರುವ ಪೂಜಾ, 'ಮತ್ತೆ ನಾನು ಜೆಡಿಎಸ್‌ಗೆ ಸೇರಲಾರೆ' ಎಂದು ಖಚಿತಪಡಿಸಿದರು. 'ರಾಜಕೀಯ ದಲ್ಲಿ ದ್ದು ಕೊಂಡು ನಾನು ನಿಜವಾಗಿಯೂ ನಟನೆ ಕಲಿತಿದ್ದೇನೆ' ಎಂದು ಹೇಳಿದ ಅವರು ಮುಂದಿನ ದಿನಗಳಲ್ಲಿ ತಾವು ನಟನಾ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದಾಗಿ ತಿಳಿಸಿದರು.


ಈಸಬೇಕು ಇದ್ದು ಜೈಸಬೇಕು
Mar 24, 2013
ಎಲೆಕ್ಷನ್ ಅನ್ನೋದು ಒಂಥರಾ ಮದುವೆ, ಸಂಸಾರ ಇದ್ದ ಹಾಗೆ. ಎಂಡ್ ರಿಸಲ್ಟ್ ಏನಾಗುತ್ತೆ ಅನ್ನೋದು ಊಹೆಗೂ ನಿಲುಕದು. ಒಂದೋ ಮದುವೆ ಸಕ್ಸಸ್ ಆಗಿ ಸುಖದಿಂದ ಬಾಳಬಹುದು; ಇಲ್ಲವೇ ಬಿಜೆಪಿಯವರ ಥರ ಕಚ್ಚಾಡಿಕೊಂಡೇ ಹೇಗೋ ಏಗಿಕೊಂಡು 'ಜೀವನ' ಮುಗಿಸಬಹುದು. ಇಲ್ಲಾ ಬಿಜೆಪಿ-ಜೆಡಿಎಸ್ ಮೈತ್ರಿ ಸರಕಾರದ ತರಹ ಅರ್ಧದಲ್ಲೇ ಸಂಸಾರ ಮುರಿದುಬೀಳಬಹುದು. ಒಬ್ಬನಿಗೆ ತುಂಬಾ ಹೆಂಡ್ತಿಯರಿದ್ದರೆ ಡಿಎಂಕೆ, ತೃಣಮೂಲ ಕಾಂಗ್ರೆಸ್‌ಗಳಂತೆ ದಿನಾ ಒಂದಲ್ಲ ಒಂದು ರಗಳೆ ಇರಬಹುದು.. . ಎಲ್ಲ ಊಹಾತೀತ..
ನಮ್ಮಲ್ಲೂ ಈಗ ಎಲೆಕ್ಷನ್ ಘೋಷಣೆಯಾಗಿದೆ. ಹುಡುಗಿ ಸಿಗದೆ ವರ್ಷಾನುಗಟ್ಟಲೆ ಕಾದು ಕಾದು ಬಸವಳಿದ ಹುಡುಗರ ಥರ ಕಾಂಗ್ರೆಸ್ ಪುಡಾರಿಗಳು ಓಡಾಟ ಶುರು ಮಾಡಿದ್ದಾರೆ. ಇನ್ನು ಬಿಜೆಪಿಯವರು ಈಗಷ್ಟೇ ಸಂಸಾರದ ಎಲ್ಲ ಕಷ್ಟಗಳನ್ನು ಕಂಡು ಸೋತುಹೋದ ಹೆಣ್ಣಿನ ಹಾಗೆ ಕುಗ್ಗಿ ಹೋಗಿದ್ದಾರೆ. ಡಿವೊರ್ಸ್ ಪಡಕೊಂಡು ಮತ್ತೊಬ್ಬ ಹುಡುಗಿ ಜತೆ ಮದುವೆಗೆ ಹೊರಟ ವಿಚ್ಛೇದಿತನಲ್ಲಿ ಕಾಣುವ ಉತ್ಸಾಹ ಕೆಜೆಪಿ, ಬಿಎಸ್‌ಆರ್ ಕಾಂಗ್ರೆಸ್‌ನವರಲ್ಲಿ ಕಾಣಿಸಿಕೊಂ ಡಿದೆ. ಈ ವರ್ಷವಾದರೂ ಮದುವೆಯಾಗುತ್ತಾ ಅಂತ ಇದ್ದ ಬದ್ದ ಹುಡುಗಿಯರತ್ತ ಆಸೆಕಣ್ಣಿಂದ ನೋಡುವ, ವಯಸ್ಸು ಮೀರಿದ ಹುಡುಗನದ್ದೇ ಭಾವ ಜೆಡಿಎಸ್‌ನಲ್ಲಿ.
***

ಅದು ಅದ್ಧೂರಿ ಮದುವೆ ಸಮಾರಂಭ. ಇಡೀ ಕಲ್ಯಾಣ ಮಂಟಪದಲ್ಲೇ ಸಂಭ್ರಮವೋ ಸಂಭ್ರಮ. ಕೋಟಿಗಟ್ಟಲೆ ರೂಪಾಯಿ ಖರ್ಚು ಮಾಡಲಾಗಿದೆ. ಸಾವಿರಾರು ಸಂಬಂಧಿಕರು ಮದುವೆ ಕಣ್ತುಂಬಿಕೊಳ್ಳಲು ಬಂದಿದ್ದಾರೆ. ಹುಡುಗಿಯ ಕಂಗಳಲ್ಲಿ ಕಂಡ ನಾಚಿಕೆಗೆ ಜಾರಿಬಿದ್ದ ಹುಡುಗ ಮಂಡಿಗೆ ಮೆಲ್ಲುತ್ತಿದ್ದಾನೆ. ಇವಳ ಜತೆ ಸಿನಿಮಾ, ಮಾಲ್, ಪಾರ್ಕ್ ಅಂತ ತಿರುಗಾಡಿದ ಕ್ಷಣಗಳನ್ನೆಲ್ಲ ನೆನಪಿಸಿಕೊಳ್ಳುತ್ತಾನೆ.
ಆದರೆ. . . ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಆ ಹುಡುಗಿ ಸಿಡಿದೆದ್ದುಬಿಡುತ್ತಾಳೆ. ನಾನು ಈ ಹುಡುಗನನ್ನ ಮದುವೆಯಾಗೋದಿಲ್ಲ, ಬೇರೆ ಹುಡುಗನ ಲವ್ ಮಾಡ್ತಾ ಇದ್ದೀನಿ ಅಂತಾಳೆ. ಮದುವೆ ನಿಂತುಹೋಗುತ್ತದೆ. ಬೇರೊಂದು ಹುಡುಗನ ಜತೆ ಮದುವೆಗೆ ಸಿದ್ಧತೆ ನಡೆಯುತ್ತದೆ. ಪೇಚು ಮೋರೆ ಹಾಕಿಕೊಂಡ ಹುಡುಗ, ಈ ಹುಡುಗಿ ತಪ್ಪಿದ್ದೇ ಒಳ್ಳೆಯದಾಯಿತೆಂದು ಹೇಳಿಕೊಂಡು ತಿರುಗಾಡುತ್ತಾನೆ.
ಇಂಥ ಘಟನೆಗಳು ನಮ್ಮ ನಡುವೆ ಈಚೆಗೆ ಸಾಕಷ್ಟು ವರದಿಯಾಗುತ್ತಿವೆ. ಈ ಘಟನೆಗಳಿಂದಲೇ ನಮ್ಮ ರಾಜಕಾರಣಿಗಳು ಸ್ಫೂರ್ತಿ ಪಡೆದರೋ ಗೊತ್ತಿಲ್ಲ. ಇಲ್ಲಿ ಹುಡುಗ ಪಕ್ಕಾ ಬಿಜೆಪಿ. ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಕೈ ಕೊಟ್ಟ ಹುಡುಗಿ ಕೆಜೆಪಿ. ಜತೆ ಜತೆಗೇ ಇದ್ದು ಕಡೆಗೆ ಕೈ ಕೊಟ್ಟವಳು.
***

ಅವನು ಈಗ ಸೆಲೆಬ್ರಿಟಿ. ಸೆಲೆಬ್ರಿಟಿಯಾಗುವ ಮುಂಚೆಯೇ ಆಕೆಯನ್ನು ಮದುವೆಯಾಗಿದ್ದ. ಅಷ್ಟೂ ದಿನ ಈ ದುನಿಯಾದಲ್ಲಿ ಅವಳ ಜತೆಯೇ ಬಾಳ್ವೆ ಸಾಗಿಸಿದ. ಆ ಸಂಸಾರದಲ್ಲಿ ಎಲ್ಲವನ್ನೂ ಪಡಕೊಂಡ. ಕಾಲ ಕ್ರಮೇಣ ಆತನಿಗೆ ರಾಜ್ಯದಲ್ಲಿ ಸಕಲ ಗೌರವ, ಮರ್ಯಾದೆ ಸಿಕ್ಕಿತು. ಅದೇನಾಯಿತೋ ಗೊತ್ತಿಲ್ಲ- ಆತನ ಸಂಸಾರದಲ್ಲಿ ಅಲ್ಲೋಲ ಕಲ್ಲೋಲ ಉಂಟಾಯಿತು. ಡಿವೋರ್ಸ್ ಕೊಡಲು ಹೊರಟ. 'ಆಕೆ ಸರಿಯಾಗಿ ನೋಡಿಕೊಳ್ಳುತ್ತಿಲ್ಲ' ಎಂದೆಲ್ಲ ಟಿವಿಯಲ್ಲಿ ರಾಗ ಎಳೆದ. ಮತ್ತಾವುದೋ ಆಕರ್ಷಣೆ ಆತನನ್ನು ಸೆಳೆಯಿತು.
ಇದೊಂದು ನೈಜ ಘಟನೆ. ಇಂಥ ಸಂಸಾರದ ಘಟನೆಗೂ ನಮ್ಮ ರಾಜಕಾರಣಿಗಳ ವರ್ತನೆಗೂ ಬಹಳ ಹೋಲಿಕೆ ಇದೆ. ಒಂದು ಪಕ್ಷದಲ್ಲಿ ಅಷ್ಟೂ ವರ್ಷ ಇದ್ದು ಎಲ್ಲ ಲಾಭ ಪಡಕೊಂಡು, ಗೌರವ ಸ್ಥಾನಮಾನ ಪಡಕೊಂಡು ಕೊನೆಗೆ 'ಈ ಪಕ್ಷದಲ್ಲಿ ಉಸಿರುಕಟ್ಟುವ ವಾತಾವರಣ' ಇದೆ ಎಂದು ಹೊರಟುಬಿಡುತ್ತಾರಲ್ಲ. ಇದೇ ಪಕ್ಷದಲ್ಲಿ ಇದ್ದರೆ ಗೆಲ್ಲಲಾಗದು ಎಂದು ಕಾಂಗ್ರೆಸ್‌ಗೆ ಜಂಪ್ ಮಾಡಿದ ಬಿಜೆಪಿ ಸಚಿವರನ್ನೆಲ್ಲ ಒಮ್ಮೆ ನೆನಪಿಸಿಕೊಳ್ಳಿ. ಇಲ್ಲಿಯೂ ಇನ್ನಾವುದೋ ಆಕರ್ಷಣೆ ಇವರನ್ನು ಸೆಳೆಯಿತು.
***

ಇಬ್ಬರದು ಅಪರಿಮಿತ ಪ್ರೇಮ. ಒಬ್ಬರನ್ನೊಬ್ಬರು ಬಿಟ್ಟಿರಲಾಗದ ನಂಟು. ಯಾರಿಗೂ ತಿಳಿಯದೆ ರಿಜಿಸ್ಟರ್ ಮದುವೆಯೂ ಆಗಿಬಿಟ್ಟರು. ಆದರೆ ಗಂಡ ಹೆಂಡತಿಯ ಹಾಗೆ ಇರಲು ಇಬ್ಬರಿಂದಲೂ ಸಾಧ್ಯವಾಗಿಲ್ಲ. ಜಗಳ ಮಾಡಿಕೊಂಡರು. ಇಬ್ಬರೂ ದೂರವಾದರು. ದೂರವೇನೂ ಆಗಿಬಿಟ್ಟರು. ಆದರೂ ಒಳಗಿಂದೊಳಗೆ ಇಬ್ಬರಿಗೂ ಪರಸ್ಪರ ಹೆಲ್ಪ್ ಬೇಕು. ಕೊನೆಗೆ ಇಬ್ಬರೂ ಒಂದು ತೀರ್ಮಾನಕ್ಕೆ ಬಂದರು. ಜತೆಗೆ ಸಂಸಾರ ಮಾಡುವುದು ಬೇಡ. ಫ್ರೆಂಡ್ಸ್ ಆಗಿರೋಣ ಅಂತ.
ಅದೇಕೋ ಬಿಜೆಪಿ ಮತ್ತು ಜೆಡಿಎಸ್ ಕತೆ ನೋಡಿದರೆ ಹಾಗೆಯೇ ಅನ್ನಿಸುತ್ತದೆ! ಮದುವೆಯಾಗಿ ಡಿವೋರ್ಸ್ ಪಡೆದುಕೊಂಡು ಈಗ ಫ್ರೆಂಡ್ಸ್ ಆಗಿರೋಣ ಅಂತ ನಿರ್ಧಾರಕ್ಕೆ ಬಂದ ಜೋಡಿಗಳ ಹಾಗೆ.
ಎಲ್ಲ ರಾಜಕೀಯಕ್ಕೂ ಸಂಸಾರವೇ ಮೂಲ. ಸಂಸಾರದ ಅಂಟು, ನಂಟು. ರಾಜಕೀಯದ ಗಂಟು ಎಲ್ಲದ್ದಕ್ಕೂ ಒಂದಲ್ಲ ಒಂದು ಬಗೆಯ ಸಂಬಂಧ ಇದೆ. ಎರಡೂ ಸಾಗರದ ಹಾಗೆ. ಇಳಿಯೋದು ಕಷ್ಟ; ಬಿದ್ದರೆ ಏಳೋದು ಕಷ್ಟ. ಎರಡೂ ಕಡೆಯೂ ಈಸಬೇಕು ಇದ್ದು ಜೈಸಬೇಕು...

ಕೊನೇ ಮಾತು: 2008ರ ಚುನಾವಣೆಯಲ್ಲಿ ಹೆಚ್ಚು ಕೇಳುತ್ತಿದ್ದ ಸ್ಲೋಗನ್- ವಚನ ಭ್ರಷ್ಟರು (ಕೊಟ್ಟ ಮಾತನ್ನು ಈಡೇರಿಸದವರು)
ಈ ಸಲದ ಚುನಾವಣೆಯಲ್ಲಿ.. . ಪಚನ ಭ್ರಷ್ಟರು (5 ವರ್ಷ ತಿಂದದ್ದನ್ನು ಜೀರ್ಣಿಸಿಕೊಳ್ಳಲಾಗದವರು).

ಅಂತರಂಗ, ಬಹಿರಂಗ ಸುದ್ದಿಯಾಗಬೇಕುMar 9, 2013, 04.31AM IST
ಕಲೆಕ್ಷನ್ ಕಾಲ ಮುಗೀತಾ ಬಂತು; ಇನ್ನೇನಿದ್ದರೂ ಎಲೆಕ್ಷನ್ ಕಾಲ. ಲೋಕಲ್‌ಗಳೆಲ್ಲ ಎಲೆಕ್ಷನ್ ಮುಗಿಸಿ ರೆಸ್ಟ್ ತಗೋತ್ತಿದ್ದಾರೆ. ಇನ್ನು ಸ್ಟೇಟ್ ಲೀಡರ್‌ಗಳು ಎದ್ದು ನಿಲ್ಲಬೇಕು. ಸೆಂಟ್ರಲ್ ಲೀಡರ್‌ಗಳೂ ಮಾತನಾಡಲು ಶುರು ಮಾಡಿದ್ದಾರೆ.
ಚುನಾವಣೆ ಬರುವಾಗಲೆಲ್ಲ ಎಲ್ಲರಿಗೂ ನೆನಪಾಗೋದು ಸ್ವಾಮಿಗಳು, ಜೋತಿಷಿಗಳು, ಮಂತ್ರವಾದಿಗಳು. ಇವರೆಲ್ಲರ ಸಮಸ್ಯೆಗಳಿಗೆ ಉತ್ತರ ಕೊಡಲಿಕ್ಕೆಂದೇ ಇದ್ದಾರೆ ನಮ್ಮ ಪ್ರಾಬ್ಲಂ ಸಾಲ್ವಾನಂದ ಸ್ವಾಮೀಜಿ. ಘಟಾನುಘಟಿ ರಾಜಕಾರಣಿಗಳು, ಗಣ್ಯರು ಈ ಸ್ವಾಮೀಜಿಯವರನ್ನು ಗುಟ್ಟು ಗುಟ್ಟಾಗಿ ಭೇಟಿ ಮಾಡಿದರೆ ಯಾವ ಪ್ರಶ್ನೆ ಕೇಳಬಹುದು? ಯಾವ ಉತ್ತರ ಸಿಗಬಹುದು . . . ಓವರ್ ಟು ಪ್ರಾಬ್ಲಂ ಸಾಲ್ವಾನಂದ ಸ್ವಾಮೀಜಿ.

* ನಿಜ ಹೇಳಿ ಸ್ವಾಮೀಜಿ, ನಾನು ಪ್ರಧಾನಿಯಾಗ್ತೀನಾ? ಆ ನೈಟ್‌ವಾಚ್‌ಮನ್ ಕೂರೋ ಜಾಗಕ್ಕೆ ಹೋಗೋದು ಯಾವಾಗ?
- ನರೇಂದ್ರ ಮೋದಿ, ಪ್ರಧಾನಿ ಪಟ್ಟದ ಆಕಾಂಕ್ಷಿ

ಸಾಧಾರಣವಾಗಿ ಗೋಚಾರದಲ್ಲಿ ಶುಕ್ರ ಮತ್ತು ಶನಿ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸುವಾಗ ದಶಾ ಮತ್ತು ಭುಕ್ತಿಯಲ್ಲಿ ಭಾರಿ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಇದು -ಕುಜ-ರಾತ್ ಗ್ರಾಚಾರ ಫಲದ ಮೇಲೆ ಪ್ರಭಾವ ಬೀರುತ್ತದೆ. ಅರ್ಥವಾಗಿಲ್ವೇ? ಎಲೆಕ್ಷನ್ ಟೈಮಲ್ಲಿ ಈ ರಾಶಿಪಲ್ಲಟಗಳು ಸಾಮಾನ್ಯ. ಹೀಗಾಗಿ ನಿಮ್ಮ ಅಭಿಮಾನಿಗಳು ಹೇಗೆ ನಿಮ್ಮನ್ನು ಅತೀ ಎತ್ತರಕ್ಕೆ ಒಯ್ಯುತ್ತಿದ್ದಾರೋ, ಅಷ್ಟೇ ಕೆಳಗೆ ನಿಮ್ಮ ಶತ್ರುಗಳು ತಳ್ಳುತ್ತಿದ್ದಾರೆ. ಜಾತಕಫಲದ ಪ್ರಕಾರ -ಲಾಲ್-ಸೆ ಎನ್ನುವ ಪದ ನಿಮ್ಮನ್ನು ತುಂಬಾ ಕಾಡುತ್ತಿದೆ. ಇದು ಲಾಲ್ ಕಿಲಾಕ್ಕೆ ಸಂಬಂಧಿಸಿದ್ದೋ, ಲಾಲ್ ಕೃಷ್ಣ ಅಡ್ವಾಣಿಗೆ ಸಂಬಂಧಿಸಿದ್ದೋ ಸ್ಪಷ್ಟವಾಗುತ್ತಿಲ್ಲ. 7, ರೇಸ್‌ಕೋರ್ಸ್ ರಸ್ತೆಗೆ ನಿಮ್ಮ ರೇಸ್ ಸಹಜವೇ. ಈ ಹಠದಲ್ಲಿ ಗೆಲ್ಲಬೇಕಾದರೆ ನಿಮ್ಮ ಕನ್ನಡಕವನ್ನು ಬದಲಿಸಿಕೊಳ್ಳಿ. ಈ ಚಷ್ಮಾ ಧರಿಸಿಕೊಂಡರೆ ಜಗತ್ತೆಲ್ಲ ಕೇಸರಿ ಯಾಗಿಯೇ ಕಾಣಿಸುತ್ತದೆ. ಹಾಗಾಗಿ, ಸಹಜವಾದ ಬೇರೆ ಕನ್ನಡಕ ಧರಿಸಿಕೊಳ್ಳಿ.ಸಂಯಮದ ಹಾಗೂ ಸ್ಟಾಂಡರ್ಡ್ ಮಾತಿನ ಬಗ್ಗೆ ನಾನು ವಾರಕ್ಕೊಮ್ಮೆ ಮಾಡುವ -ಸ್ಪೀಚ್ ಥೆರಪಿ-ಗೆ ಭೇಟಿ ನೀಡಿ. ಎಲ್ಲದ್ದಕ್ಕೂ ಮಿಗಿಲಾಗಿ, -ಓಂ ನ.ಮೋ ...- ಎಂದು ನಿತ್ಯ ಜಪ ಮಾಡುವವರ ಬದ್ಧತೆ ಬಗ್ಗೆ ಎಚ್ಚರಿಕೆ ಇಟ್ಟುಕೊಳ್ಳಿ. ಬೆಸ್ಟ್ ಆಫ್ ಲುಕ್!

* ಸ್ವಾಮೀಜಿ, ಎಲ್ರೂ ಯಾಕ್ಹೀಗೆ ಕಾಟ ಕೊಡ್ತಾ ಇದ್ದಾರೆ?
- ಮನಮೋಹನ್ ಸಿಂಗ್, ಹಾಲಿ ಪ್ರಧಾನಿ
ಮೊದಲಿಗೆ ತಡವಾಗಿ ಹ್ಯಾಪಿ ವಿಮೆನ್ಸ್ ಡೇ. ಮೇಡಂಗೂ ತಿಳಿಸಿಬಿಡಿ. ಮಿತವಾಗಿ ಮಾತನಾಡಿ ಎಂದು ನಿಮ್ಮ ಹಿರಿಯರು ಹೇಳಿಕೊಟ್ಟ ಮಾತನ್ನೂ -ಮಿತವಾಗಿಯೇ- ಬಳಸಿ. ಗುಡುಗೆಲ್ಲ ಮಳೆಯಾಗೋದಿಲ್ಲ ಎನ್ನುವ ನಿಮ್ಮ ಮಾತು ನಿಜ. ಆದರೆ ಕೆಲವು ಬಾರಿ ಗುಡುಗೇ ಜನರಲ್ಲಿ ಹೊಸ ಆಶಾಕಿರಣ ಮೂಡಿಸಬಲ್ಲುದು ಎನ್ನುವುದನ್ನು ಮರೆಯಬೇಡಿ. ನಿಮ್ಮ ಸ್ಥಾನಕ್ಕೇನೂ ಭಯ ಇಲ್ಲ ಬಿಡಿ. ಕಳೆದ ತಿಂಗಳ ತನಕ -ರಾಹು-ಲ್ ಗ್ರಹಗತಿ ನಿಮ್ಮ ಗ್ರಹದ ಮೇಲೆ ಆತಂಕ ಉಂಟು ಮಾಡುವ ಅಪಾಯ ಇತ್ತು. ಈಗ ಆ ಗ್ರಹ ಬೇರೆ ಕಡೆಗೆ ಮುಖ ಮಾಡಿರುವ ಹಾಗೆ ಕಾಣುತ್ತದೆ. ದಿನಾ ಬೆಳಿಗ್ಗೆ ಬೇಗ ಎದ್ದು ನೂರು ಬಾರಿ ಎ, ಎ್ ಎಂದು ಜಪ ಮಾಡಿ ಸರ್ದಾರ್-ಜಿ-. ಗಾಂಧಿ ಕುಟುಂಬದ ಈ ಜಪದಿಂದ ಅಧಿಕಾರದಲ್ಲಿರುವಷ್ಟು ದಿನ ಸಮಸ್ಯೆ ಇಲ್ಲ.

* ಮದ್ವೆಯಾಗ್ಲಾ, ಪ್ರೈಮ್ ಮಿನಿಸ್ಟ್ರು ಆಗ್ಲಾ . . . ಥೂ ಯಾವುದೂ ಬೇಡ ಅನ್ನಿಸ್ತಾ ಇದೆ. ಮೂಡೇ ಇಲ್ಲ ಗುರೂಜಿ. . .
- ರಾಹುಲ್ ಗಾಂಧಿ, ಪ್ರಧಾನಿ ಪಟ್ಟ ವಿರಾಗಿ
ಕ್ರೀಸಿಗೇ ಇಳಿಯದೆ ರಿಟೈರ್‌ಮೆಂಟ್ ಘೋಷಿಸಿದ ರಿಸರ್ವ್ ಬ್ಯಾಟ್ಸ್‌ಮನ್ ಥರ ಇದೆ ನಿಮ್ಮ ಮಾತು. ಒಂದಷ್ಟು ದಿನ ಆಟ ಆಡಿ ಆಮೇಲೆ ರಿಟೈರ್ಡ್ ಆಗ್ತಾ ಇದ್ದರೆ ನಿಮಗೆ ಭಾರತ ರತ್ನ ಕೊಡಲು ರೆಕಮಂಡ್ ಮಾಡಬಹುದಾಗಿತ್ತು. ಓಕೆ, ಇರ್ಲಿ ಬಿಡಿ. ಫ್ಯಾಮಿಲಿ ವಿಚಾರದಲ್ಲಿ ನಿಮ್ಮ ನಿಲುವು ಸಲ್ಲದು. ಒಂದ್ಸಲನಾದರೂ ಮದುವೆ ಮಾಡಿಕೊಳ್ಳಿ. ಇದು ನಿಮ್ಮ ಕುಟುಂಬದ ಪ್ರಶ್ನೆಯಲ್ಲ. ಇಡೀ ದೇಶದ ಎದುರಿನ ಸಮಸ್ಯೆ. ಗಾಂಧಿ ಕುಟುಂಬ ಇಲ್ಲದೇ ಇದ್ದರೆ ಕಾಂಗ್ರೆಸ್‌ನ್ನ ಕಾಪಾಡೋರು ಯಾರು? ನೆಹರು, ಇಂದಿರಾ ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆದರೆ ನಿಮಗೂ, ನಿಮ್ಮ ಪಕ್ಷಕ್ಕೂ ಶ್ರೇಯಸ್ಸು. ಫ್ಯಾಮಿಲಿ ಬಗ್ಗೆ ಹೆಚ್ಚೇನೂ ಹೆದರಬೇಡಿ. ನಾವೆಲ್ಲ ಕೌಟುಂಬಿಕ ಜೀವನವನ್ನು ಅನುಭವಿಸಿ ಈಗ ಸ್ವಾಮೀಜಿಗಳಾದವರು. ಆಮೇಲೆ ನಿಮಗೂ ಈ ಅವಕಾಶ ಇದೆ. ಈಗಲೇ ದಾಡಿ ಬಿಡಬೇಡಿ. ಪ್ರಧಾನಿಯಾಗೋದಿಲ್ಲ ಎನ್ನುವ ಅರ್ಥದ ನಿಮ್ಮ ಹೇಳಿಕೆ ಕೇಳಿ ಕಾಂಗ್ರೆಸ್ಸಿಗರೆಲ್ಲ ಕಂಗಾಲಾಗಿದ್ದಾರೆ. ಇನ್ನು ಮುಂದೆ ಯಾರ ಕೈ ಹಿಡಿಯಬೇಕು, ಯಾರ ಕಾಲು ಹಿಡಿಯಬೇಕು ಎಂಬಿತ್ಯಾದಿ ಸಣ್ಣಪುಟ್ಟ ಸಮಸ್ಯೆಗಳು ಪಕ್ಷದೊಳಗೆ ಶುರುವಾಗಿಬಿಡುತ್ತವೆ. ಕಾಂಗ್ರೆಸ್ ಹೇಳ ಹೆಸರಿಲ್ಲದ ಹಾಗಾಗುತ್ತದೆ. ಕೋಟ್ಯಂತರ ಮಂದಿ ಉದ್ಯೋಗ ಹೋಗುತ್ತದೆ... ಇದೆಲ್ಲ ಯೋಚನೆ ಮಾಡಿ. ಗೊಂದಲ ಬೇಡ.

* ಮೋದಿಗಿಂತ ಜಾಸ್ತಿ ಕೆಲಸ ಮಾಡಿದೋನು ನಾನೇ. ಆದರೆ ನನ್ನ ಹೆಸರನ್ನು ಯಾರೂ ಹೇಳ್ತಾ ಇಲ್ವಲ್ಲ. ಮುಂದೆ ಸಿಎಂ ಆದರೆ ನಿಮ್ಮ ಮಠಕ್ಕೂ ಕಾಸು ಕೊಡ್ತೀನಿ. ಪರಿಹಾರ ಕೊಡಿ. . .
- ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಪಟ್ಟದ ಮರು ಆಕಾಂಕ್ಷಿ
ತೆಂಗಿನಕಾಯಿ ಕಲ್ಪವೃಕ್ಷದ ಕೊಡುಗೆ ನಿಜ. ಹಾಗಂತ ಎಲ್ಲ ತೆಂಗಿನಕಾಯಿಗಳೂ ದೇವರ ನೈವೇದ್ಯಕ್ಕೆ ಹೋಗಲ್ಲ. ಎಲ್ಲದ್ದಕ್ಕೂ ಅದೃಷ್ಟ ಬೇಕು. ಅದೇನೇ ಇದ್ರೂಈ ವಯಸ್ಸಿನಲ್ಲೂ ನಿಮ್ಮ ಛಲ, ಹೋರಾಟ ಮನೋಭಾವಕ್ಕೆ ಮೆಚ್ಚಲೇಬೇಕು. ಆ ರಾಹುಲ್ ನೋಡಿ, ಆ ವಯಸ್ಸಲ್ಲೇ ದಾಡಿ ಬಿಡ್ತಾನೆ. ಹೆದರಬೇಡಿ, ನಿಮ್ಮ ಹೋರಾಟ ಮುಂದುವರೆಸಿ. ಇಷ್ಟಾದರೂ ನಿಮಗೆ ಸಲ್ಲಬೇಕಾದ ಗೌರವ, ಮನ್ನಣೆ, ಪ್ರಚಾರ ಸಿಗದೇ ಇರುವುದನ್ನು ನೋಡಿದರೆ ನಿಮ್ಮ ಜನ್ಮಲಗ್ನದಲ್ಲೇ ದೋಷ ಇದೆ ಅಂತನ್ನಿಸುತ್ತದೆ. ನಿಮ್ಮ ಜತೆಗೆ ಇರುವ ಸಾಡೇಸಾಥಿಗಳ ಬಗ್ಗೆ ಎಚ್ಚರಿಕೆ ಇರಲಿ. ಬಿಜೆಪಿ ರಾಶಿಯಲ್ಲಿ ನೀಚ ಸ್ಥಾನ ಪಡೆದಿರುವ ಹಲವು ಗ್ರಹಗಳು ಕೆಜೆಪಿ ರಾಶಿಗೆ ಪ್ರವೇಶಿಸುತ್ತವೆ. ಆ ರಾಶಿಯಲ್ಲಿ ಉಚ್ಛವಾಗಿರುವ ಗ್ರಹಾಧಿಪತಿಗಳು ಅಲ್ಲೇ ಉಳಿದುಕೊಳ್ಳುವುದರಿಂದ ಉಂಟಾಗುವ ಗ್ರಹ ಪಲ್ಲಟದ ಪ್ರಭಾವ ನಿಮ್ಮ ಮೇಲಾಗಬಹುದು. ಯಾವುದಕ್ಕೂ ಇರಲಿ ಅಂತ -ನಮೋ ಮೇಡಂ- ಎನ್ನುತ್ತಿರಿ. ಮುಂದಿನ ದಿನಗಳಲ್ಲಿ ಯಾರು ಕಲ್ಪವೃಕ್ಷವಾಗಬಹುದೋ ಅಂತ ಹೇಳಲಾಗದು. ಕಾಂಗ್ರೆಸ್‌ನವರೇ ಕೈ ಹಿಡೀಬಹುದು; ಇಲ್ಲಾ ಬಿಜೆಪಿಯವರೇ ಬನ್ನಿ ಅನ್ನಬಹುದು. ರೆಡಿಯಾಗಿ.

* ನಾನು ಸಿಎಂ ಆಗ್ತೀನಿ ಅನ್ನೋದು ತಪ್ಪಾ? ಯಾವಾಗ ಕೇಳಿದ್ರೂ ಪ್ಲೀಸ್ ಟ್ರೈ ಆಫ್ಟ್ ಸಮ್‌ಟೈಮ್ ಅಂತಾರೆ? ಇದೇ ನನ್ ಲಾಸ್ಟ್ ಎಲೆಕ್ಷನ್.
- ಸಿದ್ದರಾಮಯ್ಯ, ಸಿಎಂ ಸ್ಥಾನದ ಕಾಯಂ ಆಕಾಂಕ್ಷಿ
ಛೆ, ಛೆ.. ಯಾರು ಹಂಗಂದರು. ಯಾರೋ ಮೂಲ ಕಾಂಗ್ರೆಸ್‌ನವರೇ ಹೇಳಿರಬೇಕು. ಅದಕ್ಕೆಲ್ಲ ತಲೆ ಕೆಡಿಸ್ಕೋಬೇಡಿ. ಸಿಎಂ ಆಗ್ತೀರೋ, ಬಿಡ್ತೀರೋ ಅನ್ನೋದು ಹಣೆಬರಾದ ಮಾತು. ಆದರೆ ಆಗ್ತೀನಿ ಅಂತಂದುಕೊಂಡೇ ಕೆಲಸ ಮಾಡಿ. ಡೈಲಿ ಪ್ರೆಸ್‌ಮೀಟ್ ಕರೆದು ಎಲ್ಲರನ್ನೂ ಬೈತಾ ಇರಿ. ದಿಲ್ಲಿ ಮೇಡಂನ ಮಾತ್ರ ಹೊಗಳ್ತಾ ಇರಿ. ಬೈ ದಿ ಬೈ, ಸ್ವಲ್ಪ ಬೆಳಿಗ್ಗೆ ಬೇಗ ಏಳೋಕೆ ಅಭ್ಯಾಸ ಮಾಡಿ.

* ಒಂದು ಮಠ ಪರ್ಚೇಸ್ ಮಾಡೋಕೆ ಇಷ್ಟೆಲ್ಲ ಸಮಸ್ಯೆನಾ? ಇದಕ್ಕೆ ಜನ ಯಾಕ್ ಅಡ್ಡಿ ಮಾಡ್ತಾರೆ? ನಾನ್ಯಾವಾಗ ಜಗದ್ಗುರು ಆಗಲಿ?
- ನಿತ್ಯಾನಂದ ಸ್ವಾಮಿ, ಮಠಾಧಿಪತಿ ಪಟ್ಟ ಆಕಾಂಕ್ಷಿ
ಸ್ವಾಮಿಗಳೇ ನೀವು ನಮ್ಮ ಕುಲಬಾಂಧವರು. ಮತ ಖರೀದಿ ಎಷ್ಟು ಸಾಮಾನ್ಯವಾಗಿಬಿಟ್ಟಿದೆಯೋ, ಈ ಮಠ ಖರೀದಿ ಕೂಡ ಅಷ್ಟೇ ಸಾಮಾನ್ಯವಾಗಬೇಕೆನ್ನುವುದು ನಮ್ಮ ಬಯಕೆ. ಒಂದು ರಾಜಕೀಯ ಪಕ್ಷವನ್ನು ಇನ್ನೊಬ್ಬರಿಗೆ ಮಾರಾಟ ಮಾಡೋದಾದ್ರೆ ಮಠವನ್ನು ಯಾಕೆ ಮಾರಬಾರದು. ಅಲ್ಲಿಯೂ ಅವರು ಮಾಡೋದು ಜನಸೇವೆ; ನಾವು ಮಾಡೋದೂ ಅದನ್ನೇ ಅಲ್ವೇ? ಮೊದಲಿಗೆ ಈ ಕರ್ಮಠರನ್ನೆಲ್ಲ ಮಠದಿಂದ ಹೊರಗೆ ಹಾಕಬೇಕು. ಅದುವೇ ಅಂತರಂಗ ಸುದ್ಧಿ, ಬಹಿರಂಗ ಸುದ್ದಿ. ಇವೆರಡೂ ಮಾಧ್ಯಮಗಳಲ್ಲಿ ಸುದ್ದಿಯಾದರೆ ಮಾತ್ರ ಆ-ಶ್ರಮ ಸಾರ್ಥಕ.


ಓಹ್ ಮೈ ಕಣ್ಣಡಾ. ..!Feb 9, 2013,

ಬಿಜಾಪುರ ಭರ್ತಿಯಾಗಿದೆ. ಖಾದಿ ಜುಬ್ಬಾ ಹಾಕಿಕೊಂಡು ಹೆಗಲಿಗೆ ಬ್ಯಾಗ್ ಜೋತು ಬೀಳಿಸಿಕೊಂಡ ಜಾತಿಯವರೆಲ್ಲ ಬಿಜಯಂಗೈದಿದ್ದಾರೆ. ಕನ್ನಡಕ್ಕಾಗಿ ಪ್ರಾಣ ಬಿಡೋ, ಕನ್ನಡಕ್ಕಾಗಿ ಬಾಯಿ ಬಾಯಿ ಬಿಡೋ, ಓದಿದ್ದನ್ನೆಲ್ಲ ನಿಂತ ನಿಂತಲ್ಲೇ ಭಾಷಣ ಬಿಗಿಯೊ *ಕಿಸಿ*ಬಾಯಿ ದಾಸರು, ಸಾಹಿತ್ಯ ಎಂದರೆ ಗಂಟೆಗಟ್ಟಲೆ ತೆರೆದ ಬಾಯಿ ಮುಚ್ಚದಿರೋ ಮಂದೀನೂ ಬಂದಿದ್ದಾರೆ. ಓಓಡಿ ಫಾರಂ ಹಿಡಿದುಕೊಂಡು ಓಡಾಡೋ ಅಭಿಮಾನಿಗಳು, ಒಮ್ಮೆ ಗುಮ್ಮಟ ನೋಡೋಣ ಅಂತ ಬಂದ ಪ್ರವಾಸಿಗರು, ಗೋಲ್‌ಗುಂಬಜ್ ಪ್ರತಿಧ್ವನಿ ಥರ ಹೇಳಿದ್ದನ್ನೇ ಹೇಳೋ ಮೇಷ್ಟ್ರುಗಳು, ಒಂದಷ್ಟು ಬುಕ್‌ಗಳನ್ನ ಕೊಂಡು ಮನೆಯ ಬೀರುವಿನಲ್ಲಿ ಇಡೋ ಹುಡುಗರು, ಮೌನವಾಗಿಯೇ ಕವನ ಗೀಚುವ ಸೈಲೆಂಟ್*ಶಾಯಿ*ಗಳು, ಅವ್ಯವಸ್ಥೆಯ ಸುದ್ದಿಯನ್ನೇ ಅರಸಿಕೊಂಡು ಹೋಗೋ ಅರಸಿಕ ಪತ್ರಕರ್ತರು, ಕನ್ನಡ ಎನೆ ಕುಣಿದಾಡುವುದು ಎನ್ನ ಕಿಸೆ ಎನ್ನುವ ಕನ್ನಡ ರಕ್ಷಕರು. . .ಎಲ್ಲರೂ ಬಂದಿದ್ದಾರೆ ಬಿಜಾಪುರಕ್ಕೆ.
ಇದೆಲ್ಲವನ್ನು ... ಸರ್ಕಲ್‌ನಲ್ಲಿ ನಿಂತು ನೋಡುತ್ತಿದ್ದ ರಿಪೋರ್ಟರಿಣಿಗೂ ಫುಲ್ ಥ್ರಿಲ್. ಇದು ಅಕೆಯ ಮೊದಲ ಸಾಹಿತ್ಯ ಸಮ್ಮೇಳನದ ಕವರೇಜ್.
ಎಲ್ಲಿ ನೋಡಿದರಲ್ಲಿ ಕನ್ನಡದ ಬಾವುಟ, ಮನೆ ಮುಂದೆ ರಂಗೋಲಿ, ಜಗಮಗಿಸುವ ವೇದಿಕೆ, ಒಬ್ಬೊಬ್ಬರ ಹೆಸರಿನ ದ್ವಾರ, ಎದೆಗೆ ಬಿಲ್ಲೆ ಅಂಟಿಸಿಕೊಂಡು ಅತ್ತಿಂದಿತ್ತ, ಇತ್ತಿಂದತ್ತ ಓಡಾಡುತ್ತಿರೋ ಆಯೋಜಕರು, ಕಂಡಕಂಡಲ್ಲಿ ಕಸ ಎತ್ತಿ ಬಿಸಾಡೋ ಸ್ವಯಂ ಸೇವಕರು, ಕ.ಸಾ.ವನ್ನೇ (ಕನ್ನಡ ಸಾಹಿತ್ಯ) ಎತ್ತಿ ಬಿಸಾಕಿರೋ ಮರಿಕಿರಿ ಸಾಹಿತಿಗಳು.. ಅಬ್ಬಬ್ಬಾ ದಶ್ಯಗಳು ಒಂದೇ ಎರಡೇ. ರಿಪೋರ್ಟರಿಣಿ ಮೈಕ್ ಎತ್ತಿಕೊಂಡು ಹೊರಟೇಬಿಟ್ಟಳು!

***
ಎದುರಿಗೆ ಸಿಕ್ಕವರು ನಾಡಿನ ಧೀಮಂತ ಸಾಹಿತಿ, ಪ್ರತಿ ಸಲ ಸಮ್ಮೇಳನಾಧ್ಯಕ್ಷರಾಗಲು ಪ್ರಯತ್ನಿಸಿ ಸೋತ ಡಾ. ಚೀಪು.
ತನ್ನನ್ನು ಟೀವಿ ಪ್ರತಿನಿಧಿ ಎಂದು ಪರಿಚಯಿಸಿಕೊಂಡ ರಿಪೋರ್ಟರಿಣಿ 'ಸಾರ್, ಒಂದು ಬೈಟು ಕೊಡ್ತೀರಾ' ಅಂತ ಕೇಳಿದಳು.
ಅಷ್ಟಕ್ಕೇ ಪುಳಕಿತರಾಗಿಬಿಟ್ಟ ಡಾ.ಚೀಪು, 'ಬೈಟು ಏಕೆ ಫುಲ್ಲೇ ಕುಡಿಯೋಣ. ಬನ್ನಿ ಹೋಟ್ಲಿಗೆ'
'ಉಹುಂ, ಆ ಬೈಟು ಟೀ ಅಲ್ಲ ಸಾರ್. ಬೈಟು ಎಂದರೆ ಟೀವಿ ಭಾಷೆಯಲ್ಲಿ ನಿಮ್ಮದ್ದೊಂದು ಚಿಕ್ಕ ಮಾತು- ಮೈಕ್ ಮುಂದೆ'
'ಅಯ್ಯೋ ಅದ್ಯಾಕಮ್ಮ, ಇಷ್ಟು ರಿಕ್ವೆಸ್ಟ್. ಆಗ್ಲೇ ಹೇಳ್‌ಬಾರ್ದಿತ್ತಾ? ಯಾವ ವಿಷ್ಯದ ಬಗ್ಗೆ ಮಾತಾಡ್ಲಿ? ಕನ್ನಡ ಸಾಹಿತ್ಯದ ವರ್ತಮಾನದ ಸ್ಥಿತಿಗತಿ, ಕನ್ನಡ ಭಾಷೆಯ ಭವಿಷ್ಯ, ಕನ್ನಡ ಮನಸ್ಸಿನ ತವಕ- ತಲ್ಲಣಗಳು.. ಯಾವ ವಿಷ್ಯ ಬೇಕು?'
'ಉಹುಂ ಸಾರ್. ಸ್ವಲ್ಪ ಕಾಂಟ್ರೊವರ್ಸಿ ಮಾತ್ನಾಡಿ. ದಿನವಿಡೀ ತೋರಿಸ್ತೀವಿ. ನಿಮಗೆ ಮುಂದಕ್ಕೆ ಅವಾರ್ಡ್ ಗಿವಾರ್ಡ್‌ಗೆ ಅನುಕೂಲ ಆಗ್ಬೋದು. ನಾನು ಪ್ರಶ್ನೆ ಕೇಳ್ತೀನಿ. ನೀವು ಉತ್ತರ ಕೊಡಿ'
'ಸರಿ ಸರಿ'
'ನಿಮ್ಮ ಹೆಸರು ಡಾ. ಚೀಪು ಏಕೆ. ಚೀಪ್ ಅಂತ ಅನ್ನಿಸಲ್ವಾ?'
'ಚೀ ಅಂದರೆ ಚೀರನಹಳ್ಳಿ, ಪು ಎಂದರೆ ಪುಟ್ಟಣ್ಣ ಅಂತ. ಜನ ಪ್ರೀತಿಯಿಂದ ಚೀಪು, ಚೀಪು ಅಂತಾರೆ. ಇದು ಜನರೇ ಕೊಟ್ಟ ಗೌರವ. ಕನ್ನಡಕ್ಕೊಬ್ಬನೇ ಚೀಪು'
''ಓಕೆ ಓಕೆ. ಸದ್ಯದ ಕನ್ನಡ ಸಾಹಿತ್ಯದ ಗುಣಮಟ್ಟ ಕುಸಿಯುತ್ತಿದೆ ಎನ್ನುತ್ತಾರಲ್ಲಾ?'
'ಹೇಳ್ತೀನಿ ಕೇಳಿ. ಸಾಹಿತ್ಯ ಎನ್ನುವುದು ಬಿಕರಿಯಾಗೋ ಸರಕಲ್ಲ. ಅದರೊಳಗೊಂದು ಅಂತರ್ಗತ ಒಳನೋಟ ಇರಬೇಕು. ಬದುಕಿನ ದರ್ಶನ ಇರಬೇಕು. ಸಮಕಾಲೀನ ಜಗತ್ತಿನ ಸಮಾನಾಂತರ ಸ್ಪಂದನೆ ಇರಬೇಕು. ಭಾವಾರ್ದ್ರತೆ ಇರಬೇಕು.. .'
'ಸಾರ್,, ಸಾರ್.. . ಅರ್ಥ ಆಗಿಲ್ಲ. ಸಿಂಪಲ್ಲಾಗಿ ಹೇಳಿ'
'ಅದ್ಕೇ ನಿಮಗೆ ಪತ್ರಕರ್ತರು ಅನ್ನೋದು. ಸಿಂಪಲ್ಲಾಗಿ ಹೇಳೋದಾದರೆ- ನೋಡಿ ನನ್ನ ಸಾಹಿತ್ಯ. ಅದು ನನ್ನ ಸಮಕಾಲೀನರ ಬದುಕಿನ ಬಗ್ಗೆ ಬರೆದ ವಿಮರ್ಶಾ ಕತಿಗಳು. ಅದೇ ಆ ಲಾಬೀ ಬರೆದ ಕತಿಗಳು_ ಪೊಳ್ಳು'
'ಲಾಬೀ ಅಂದ್ರೆ. .
'ಅದೇ ಕಣ್ರೀ ಲಾಳಾಪುರ ಬೀರಯ್ಯ. ಆತನ ಸಾಹಿತ್ಯ ಓದಿದ್ದೀರಾ? ಓದ್ಲಿಲ್ಲಾಂದ್ರೆ ಓದಕ್ಕೇನೂ ಹೋಗ್ಬೇಡಿ. ಅದರಲ್ಲೇನೂ ಇಲ್ಲ. ಬರೇ ಬೂದಿ..! ಲಾಬೀ ಮಾಡ್ಕೊಂಡೇ ಅವಾರ್ಡ್ ಮೇಲೆ ಅವಾರ್ಡ್ ತಕ್ಕೊಂಡ್ರು. ನಂಗೆ ಲಾಬೀ ಮಾಡೋಕೆ ಬರೊಲ್ಲ. ಯಾಕಂದ್ರೆ ನಾನು ಡಾಕ್ಟರ್ ಚೀಪು.' (ಹೆಮ್ಮೆಯಿಂದ)
ಟೀವಿಯಲ್ಲಿ ಆಗಲೇ ಸ್ಕ್ರಾಲ್ ಬರುತ್ತಾ ಇತ್ತು- ಲಾಬೀ ವಿರುದ್ಧ ಚೀಪು ಚೀತ್ಕಾರ_.

***

ಹಾಗೆ ನಡೆದುಕೊಂಡು ಮುಂದೆ ಹೋದ ರಿಪೋರ್ಟರಿಣಿಗೆ ಎಸಿ ಕಾರಿನೊಳಗೆ ಕೂತುಕೊಂಡು ಲ್ಯಾಪ್‌ಟಾಪ್‌ನಲ್ಲಿ ಒಬ್ಬರು ಕವನ ಬರೀತಾ ಇರೋದು ಕಾಣಿಸಿತು. 'ಸಾರ್ ನಮಸ್ತೆ. ನೀವೂ ಸಾಹಿತಿನಾ?'
'ಹೌದು ಹೌದು. ನಾನು ಕಾರ್ಪೊರೇಟ್ ಸಾಹಿತಿ'
'ಅಂದ್ರೆ_?
'ಇದು ಹೊಸ ಜಾತಿ. ನಾವು ಬೋರ್ಡ್ ರೂಮಲ್ಲಿ, ಎಸಿ ಚೇಂಬರಲ್ಲಿ ಕೂತುಕೊಂಡು ಸಾಹಿತ್ಯ ಬರೀತೀವಿ'
'ಅಲ್ಲಾ, ಈ ಸಾಹಿತ್ಯ ಅನ್ನೋದು ಮಣ್ಣಲ್ಲಿ ಹುಟ್ಟೋದು, ಜನರ ಮಧ್ಯೆ ಹುಟ್ಟೋದು, ಜನಮಾನಸದಲ್ಲಿ ಹರಡೋದು . . . ಅಂತೆಲ್ಲಾ ಹೇಳ್ತಾರಲ್ಲ'
'ಅದೆಲ್ಲ ಮಣ್ಣು! ಸಾಹಿತ್ಯ ಅನ್ನೋದು ಕೀ ಬೋರ್ಡಿನಲ್ಲಿ ಹುಟ್ಟೋದು. ಪ್ರಿಂಟರ್‌ನಲ್ಲಿ ಮೂಡಿಬರೋದು. ಬ್ಲಾಗ್, ಫೇಸ್‌ಬುಕ್, ಫ್ಲಿಕರ್, ಅಮೆಜಾನ್ ಡಾಟ್‌ಕಾಮ್‌ಗಳಲೆಲ್ಲ ಹರಡೋದು. ಅವರದ್ದೆಲ್ಲ ಬೂಸಾ ಸಾಹಿತ್ಯ. ನಮ್ಮದು ಮೌಸಾ (—) ಸಾಹಿತ್ಯ'
***

ಊಟದ ಹೊತ್ತಿನಲ್ಲಿ ರಿಪೋರ್ಟರಿಣಿ ಜನರನ್ನು ಮಾತನಾಡಿಸಿದಳು. ಎಲ್ಲರದೂ ಒಂದೇ ಕಂಪ್ಲೇಂಟ್.
ಸಾಹಿತ್ಯ ಗೋಷ್ಠಿಯ ಹಾಗೆಯೇ ಇದೆ ಊಟಾನೂ ಅಂತ.

ಅಂದ್ರೆ..?

'ಸಪ್ಪೆ, ಸಪ್ಪೆ.. ಒಂದಿಷ್ಟೂ ಖಾರಾನೇ ಇಲ್ಲ'

ಈ ಕುರಿತು ಸಂಘಟಕರನ್ನು ಕೇಳಿದಳು ಆಕೆ. ಅವರು ಖಾರದಿಂದಲೇ ಮಾತನಾಡಿದರು.

ಯಾರು ಹೇಳಿದರು ಖಾರ ಇಲ್ಲ ಅಂತ. ಭಾಷಣದುದ್ದಕ್ಕೂ ಫುಲ್-ಕಾರ ಇತ್ತು.

ಸರ-ಕಾರ, ಸನ್ಮಾನ ಸ್ವೀ-ಕಾರ, ಅಸಹ-ಕಾರ, ಧಿ-ಕ್ಕಾರ. . .

***

ಗುಮ್ಮಟ ನಗರದ ಮಟ- ಮಟ ಮಧ್ಯಾಹ್ನ ವೇದಿಕೆಯಲ್ಲಿ ಸಾಹಿತಿಯೊಬ್ಬರು ಪ್ರಖರ ಭಾಷಣ ಮಾಡ್ತಾ ಇದ್ದರು. ಗಂಟೆಗಳು ಉರುಳಿದರೂ ಭಾಷಣ ಮುಗೀತಾನೇ ಇರಲಿಲ್ಲ. ಭಾಷಣದ ವಿಷಯ ಆಗಿಂದಾಗ್ಗೆ ಮರುಕಳಿಕೆ, ಕೆಲವರಿಗೆ ಆಗಿಂದಾಗ್ಗೆ ಆಕಳಿಕೆ.. ಮೊಸರನ್ನ ಊಟ ಮಾಡಿದವರಿಗೆ ಅಲ್ಲೇ ನಿದ್ದೆ. ಇದನ್ನು ನೋಡಿದ ಭಾಷಣಕಾರರು ಸಮ್ಮೇಳನಾಧ್ಯಕ್ಷರ ಹೇಳಿಕೆಯನ್ನು ಆಗಾಗ್ಗೆ ಹೇಳುತ್ತಿದ್ದರು.

ನಿದ್ದೆ ಮಾಡಬೇಡಿ ಕನ್ನಡಿಗರೇ. ಕನ್ನಡ ಅಪಾಯದಲ್ಲಿದೆ' ಎಂದು.

ಏನಾಯಿತು ಎಂದು ದಡಬಡನೆ ಎದ್ದು ನೋಡಿದರೆ ಕಣ್ಣಡಾ ಭಾಷಣ ಮುಂದುವರೀತಾನೇ ಇತ್ತು

ಇನ್ನೊಂದು ವೇದಿಕೆಯಲ್ಲಿ ಶಾಲು ಹೊದಿಸಿಕೊಂಡು ಫಲ ತಾಂಬೂಲ ಸ್ವೀಕರಿಸಿಕೊಂಡು ಸನ್ಮಾನ್ಯ ಸಾಹಿತಿಯೊಬ್ಬರು ಭಾಷಣ ಮಾಡಲು ಶುರು ಮಾಡಿದರು.

'ಈ ಸಂದರ್ಭದಲ್ಲಿ ನಾನು ಹೇಳೋದ್ದಿಷ್ಟೇ. ಕನ್ನಡದಲ್ಲಿ ಓದುಗರ ಸಂಖ್ಯೆ ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ನಾವು ಅಂದರೆ ಸಾಹಿತಿಗಳು ಅನಿಸಿಕೊಂಡವರೆಲ್ಲ ಅತ್ಯಂತ ಎಚ್ಚರಿಕೆಯಿಂದ ಬರೆಯಬೇಕಾಗುತ್ತದೆ. ಇವತ್ತು ನೋಡಿ, ನನ್ನ ಮಗ ಅಮೆರಿಕದಲ್ಲಿದ್ದಾನೆ. ಮಗಳು ಲಂಡನ್‌ನಲ್ಲಿದ್ದಾಳೆ. ಇಬ್ಬರಿಗೂ ಕನ್ನಡ ಬರಲ್ಲ. ಹಾಗಾಗಿ, ನೀವು ಇಲ್ಲಿಯೇ ಕರ್ನಾಟಕದಲ್ಲಿ ನೆಲೆಸಿರುವವರು ಕನ್ನಡವನ್ನು ಕಲಿತು ಸಾಹಿತ್ಯ ಖರೀದಿ ಮಾಡಬೇಕು. ಕನ್ನಡದ ಉಳಿವು ನಿಮ್ಮಿಂದ_ ಭಾಷಣ ಮುಂದುವರೀತಾನೇ ಇತ್ತು.

***

50 ವರ್ಷಗಳ ಹಿಂದೆ ನಡೆದ ಸಾಹಿತ್ಯ ಸಮ್ಮೇಳನದ ಆಶಯ:

-ಆಡಳಿತದಲ್ಲಿ ಕನ್ನಡ ಸಂಪೂರ್ಣ ಜಾರಿಯಾಗಬೇಕು

2013ರಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದ ಆಶಯ

-ಆಡಳಿತದಲ್ಲಿ ಕನ್ನಡ ಸಂಪೂರ್ಣ ಜಾರಿಯಾಗಬೇಕು

***

ಕೊನೇ ಮಾತು:

ಈ ಸಾಹಿತ್ಯ ಸಮ್ಮೇಳನದಲ್ಲಿ ಈ ಸಲಾನೂ ಒಂದೇ ನಿರ್ಣಯ ಕೈಗೊಳ್ತಾರಂತೆ. ಏನದು?

- ಇನ್ಮುಂದೆ ಯಾವುದೇ ನಿರ್ಣಯ ಕೈಗೊಳ್ಳಬಾರದು. ಎಲ್ಲ ವೇಸ್ಟ್ ವೇಸ್ಟ್ ಅಂತ.

 Jan 26, 2013

ಟಿಕೆಟ್... ಟಿಕೆಟ್... ಮುಂದೆ ಬನ್ನಿ
ಎಲ್ಲರೂ ಒಳ್ಳೆಯವರಾಗಿಬಿಟ್ಟಿದ್ದಾರೆ. ಏನು ನಯ, ನಾಜೂಕು, ನಗು, ವಿನಯ, ವಿಧೇಯತೆ. .. ಅಬ್ಬಬ್ಬಾ! ನಿನ್ನೆ ಮೊನ್ನೆ ಕಂಡ್ರೂ ಕಾಣದಂತೆ ಹೋಗ್ತಿದ್ದೋರು ಇವತ್ತು ಕಾಣದೇ ಇದ್ರೂ ನಗ್ತಾರೆ; ಫೋನ್ ಮಾಡಿ ಮಾತಾಡಿಸ್ತಾರೆ...ಯಾವ ಮದ್ವೆಗೆ ಹೋದ್ರೂ ಸಿಗ್ತಾರೆ. ಎರಡೂ ಕೈನ್ನೂ ಫೆವಿಕಾಲ್ ಹಾಕೊಂಡಿರೋ ಥರ ಅಂಟಿಸಿಕೊಂಡುಬಿಟ್ಟಿದ್ದಾರೆ. ಬೆನ್ನು ಮೂಳೆ ಬಗ್ಗಿಹೋಗಿದೆ.

ವಾಕಿಂಗ್‌ನಲ್ಲಿ ಸಿಕ್ರೂ ನೀರು ಬರುತ್ತಾ ಅಂತ ಕೇಳ್ತಾರೆ; ದೇವಸ್ಥಾನದಲ್ಲಿ ಸಿಕ್ಕಾಗಲೂ ಆರೋಗ್ಯ ಹೇಗಿದೆ ಅಂತ ಕೇಳ್ತಾರೆ ರೇಷನ್ ಸಿಕ್ಕಿಲ್ಲಾಂದ್ರೆ ಫೋನ್ ಮಾಡಿ ಅಂತಾರೆ; ನಿಮ್ಮೂರಿನ ರೋಡ್ ರೆಡಿಯಾಯ್ತಾ ಅಂತ ಅವ್ರ ಅವ್ರಾಗೇ ಕೇಳ್ತಾರೆ; ಮಗಳಿಗೆ ಇನ್ನೂ ಕೆಲ್ಸ ಸಿಗಲಿಲ್ವಾ, ಛೆ, ಒಂದು ಮಾತ್ ಹೇಳ್‌ಬಾರ್ದಿತ್ತಾ ಅಂತ ಲೊಚಗುಡ್ತಾರೆ; ಸಾವಿನ ಮನೆಗೆ ಬಂದು ತಮ್ಮ ಕಿಸಿಗೆ ಕೈ ಹಾಕೊತ್ತಾರೆ.. . ಅದ್ಯಾಕೋ ಏನೋ ಈಗೀಗ ಸುಮ್ ಸುಮ್ನೆ ನಗ್ತಾರೆ; ಜುಮ್ ಜುಮ್ನೆ ಮಿಂಚ್ತಾರೆ!

ಜನ ಎಷ್ಟೊಂದು ಒಳ್ಳೆಯವರಾಗಿಬಿಟ್ಟಿದ್ದಾರೆ! ಇದ್ಯಾಕೆ ಹಿಂಗೆಲ್ಲ ಬದಲಾಗ್ತಾರೆ? ಕೆಟ್ ಕಾಲ ಇದಪ್ಪ ಅಂತ ಬೈಕೊಂಡು ಓಡಾಡಿಕೊಂಡ ಜನಾನೂ ದಂಗಾಗಿಬಿಟ್ಟಿದ್ದಾರೆ ಈ ಸಡನ್ ಚೇಂಜ್ ನೋಡಿ. ಅಂದ್ರೆ ಇದು ಕೆಟ್ ಕಾಲ ಅಲ್ವಾ? ಉಹುಂ. . . ಟಿ-ಕೆಟ್ ಕಾಲ!
***

ಟಿಕೆಟ್ ಕೊಡಿ ಟಿಕೆಟ್ ಅಂತ ಬೇಡೋ ಕಾಲ ಇದು. ಎಲ್ಲೆಲ್ಲೋ ಇದ್ದ ಖಾದಿ ಖದರ್‌ಗಳೆಲ್ಲ ಮೊಳಕೆಯೊಡೆದುಬಿಟ್ಟಿವೆ. ಹಾಲಿಗಳು, ಮಾಜಿಗಳು, ಭಾವಿಗಳು ಹೀಗೆ ಎಲ್ಲರೂ ಟಿಕೆಟ್ ಪ್ಲೀಸ್ ಎಂದು ಪಾರ್ಟಿ ಅಧ್ಯಕ್ಷರಿಗೆ ಚಸ್ಕಾ-ಮಸ್ಕಾ ಹೊಡೀತಾ ಇದ್ದಾರೆ. ಇಷ್ಟೂ ದಿನ ರಂಕು ಪೆಟ್ಟಿಗೆಯಲ್ಲಿದ್ದ ಮಾತುಗಳನ್ನೆಲ್ಲ ಹೊರತೆಗೆದು ರಪರಪನೆ ಒಬ್ಬೊಬ್ಬರತ್ತ ಎಸೆಯುತ್ತಿದ್ದಾರೆ. ಜನ ಕ್ಲೀನ್ ಬೌಲ್ಡ್!

ಇವರಿಗೆಲ್ಲ ಮಾತೇ ಚಿನ್ನ. ಕಾಂಗ್ರೆಸ್‌ನವರಿಗಂತೂ ಟಿಕೆಟ್ ಪಡೆಯಲೂ 'ಮಾತೆ'ಯ ಕೃಪೆ ಬೇಕು; ಮತದಾರರ ಮನ ಗೆಲ್ಲಲೂ ಮಾತೇ ಬೇಕು. ಹೊಸ ಪಕ್ಷ ಕೆಜೆಪಿಯಲ್ಲೂ ಟಿಕೆಟ್ ಕೌಂಟರ್‌ನಲ್ಲಿ ಕೂರೋದೂ 'ಮಾತೆ' ಅನ್ನೋ ಮಾತಿದೆ.

ಈವರೆಗೆ ಕೂತುಕೊಂಡವರು, ಅಡ್ಡಾಡಿಕೊಂಡ ಅಡ್ನಾಡಿಗಳು, ಎಲ್ಲೋ ಮಲಗಿಕೊಂಡವರು ಎಲ್ಲರೂ ಎದ್ದು ರೆಡಿಯಾಗಿದ್ದಾರೆ- ನಿಂತುಕೊಳ್ಳೋಕೆ... ಎಲೆಕ್ಷನ್‌ನಲ್ಲಿ.
***

ನಾಲ್ಕೈದು ವರ್ಷ ಕೆಲಸ ಇಲ್ಲದೆ ಊರಿಡೀ ತಿರುಗಾಡುತ್ತಿದ್ದ ಆತನಿಗೆ ಈಗ ಪುಳಕ. ಎಲ್ಲಾದರೂ ಒಂದು ಒಂದು ಕಡೆ ಟಿಕೆಟ್ ಸಿಗಬಹುದೋ ಅಂತ ತರಹ ತರಹ ಕಾತರ. ನಿಲ್ಲಬೇಕು. ಗೆಲ್ಲಬೇಕು, ಮೆಲ್ಲ ಮೆಲ್ಲ ಮೆಲ್ಲಬೇಕು ಎಂಬ ದೂರಾಲೋಚನೆ ಅವನದು. ಮೀಡಿಯಾದವರು ಇವನನ್ನ ಮೇಲಿಂದ ಮೇಲೆ ಪ್ರಶ್ನೆ ಮಾಡ್ತಾರೆ.
*ನೀವು ಏನ್ ಕೆಲ್ಸ ಮಾಡ್ತಾ ಇದ್ದೀರಿ?
-ನಾನ್ ಸಮಾಜ ಸೇವಕ
*ಎಲೆಕ್ಷನ್‌ಗೆ ಯಾಕೆ ನಿಂತುಕೋತೀರಿ-
ಸಮಾಜ ಸೇವೆ ಮಾಡ್ಲಿಕ್ಕೆ
*ಅದೆಲ್ಲ ಸರಿ, ಹೊಟ್ಟೆಪಾಡಿಗೆ ಏನು ಮಾಡ್ತೀರಿ?
-ಅದ್ಕೇ ಸಮಾಜ ಸೇವೆ ಮಾಡ್ತಿರೋದು!
***

ಅದು ಬಿಜೆಪಿ ಆಫೀಸ್. ಟಿಕೆಟ್ ಕೌಂಟರ್ ಓಪನ್ ಆಗಿತ್ತು. ಗಡಿಬಿಡಿಯಲ್ಲೇ ಎಲೆಕ್ಷನ್‌ಗೆ ರೆಡಿಯಾಗಿತ್ತು ಪಕ್ಷ. ಯಾರು ಪಕ್ಷದಲ್ಲಿ ಉಳ್ಕೊತಾರೆ, ಯಾರು ಬಿಟ್ಟು ಹೋಗ್ತಾರೆ ಎನ್ನುವ ಗೊಂದಲ ಹಾಗೆಯೇ ಮುಂದುವರೆದಿತ್ತು. ಹಾಗಾಗಿ ಪಕ್ಷದೊಳಗೆ ಯಾರೂ ಯಾರನ್ನೂ ನಂಬದ ಸ್ಥಿತಿ. ಬಿಜೆಪಿ ಟಿಕೆಟ್‌ಗೆ ಅಷ್ಟೊಂದು ಸ್ಪರ್ಧೆಯೂ ಇರಲಿಲ್ಲ.
ಆಫೀಸಿನ ಫೋನ್ ರಿಂಗಾಯಿತು.
ಅತ್ತಕಡೆಯಿಂದ ಬಂದ ದನಿ_
*ಸಾರ್, ನಾನು ಬೋರಹಳ್ಳಿಯಿಂದ ಸಿದ್ದಪ್ಪ ಮಾತಾಡ್ತಾ ಇದ್ದೀನಿ. ಎಲೆಕ್ಷನ್‌ಗೆ ನಿಂತುಕೋಬೇಕು ಅಂತ ಇದ್ದೀನಿ. ನಿಮ್ ಪಕ್ಷದಿಂದ ಟಿಕೆಟ್ ಸಿಗುತ್ತಾ?
ಟಿಕೆಟ್ ಬಾಯ್‌ಗೆ ಕೋಪ ನೆತ್ತಿಗೇರಿತು.
*ಯಾರೋ ನೀನು? ತಲೆ ಗಿಲೆ ಕೆಟ್ಟಿದಿಯಾ? ಅಂತ ಸಿಟ್ಟಿನಲ್ಲೇ ಕೇಳಿದ.
*ಏನ್ಸಾರ್ ಅದು ಕಂಪಲ್ಸರೀನಾ? ಸ್ಸಾರಿ ಸರ್ ಗೊತ್ತಿರ್ಲಿಲ್ಲ
* ಅಂತ ಫೋನ್ ಇಟ್ಟ ಸಿದ್ದಪ್ಪ.
***

ಮುಖ್ಯಮಂತ್ರಿಗಳು ವಿಚಲಿತರಾಗಿ ಕೂತಿದ್ದರು. ಒಬ್ಬೊಬ್ಬರೇ ಎಂಎಲ್‌ಎಗಳು ನಾವು ರಾಜೀನಾಮೆ ಕೊಡ್ತೀವಿ, ನಾವು ಬಿಟ್ಟು ಹೋಗ್ತೀವಿ ಅಂತ ಬಂದುಬಂದು ಹೇಳ್ತಾ ಇದ್ದರು. ಇದೆಲ್ಲ ನೋಡಿ ನೋಡಿ ಮುಖ್ಯಮಂತ್ರಿಗಳ ಸಿಟ್ಟು ವಿಪರೀತಕ್ಕೆ ಏರಿತ್ತು. ಆದರೂ ಏನೂ ಮಾಡಲಾಗದ ಅಸಹಾಯಕತೆ ಅವರದು.
ಅಷ್ಟರಲ್ಲಿ ಶಾಸಕರ ಒಂದು ತಂಡ ಇವರನ್ನು ಭೇಟಿಯಾಗಲು ಬಂದಿತು.
*ಸಾರ್, ನಾವೆಲ್ಲ ರಿಸೈನ್ ಮಾಡೋಣ ಅಂತ ಇದ್ದೀವಿ
*ಸೀಎಂ ಕೊತಕೊತ ಕುದಿದರು. ಆದರೆ ಏನು ಮಾಡೋದು?
*ನಿಮಗೆ ಭವಿಷ್ಯ ಕೊಟ್ಟ ಪಕ್ಷಕ್ಕೆ ಹೀಗೆಲ್ಲಾ ದ್ರೋಹ ಮಾಡಬೇಡಿ. ಯಾರ‌್ಯಾರ ಮಾತನ್ನೆಲ್ಲ ಕೇಳ್ಬೇಡಿ. ಆದ್ರೂನೂ ಹೀಗೆ ಆಟ ಆಡ್ತಾ ಇದ್ದರೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ
* ಅಂತ ಕನ್‌ವಿನ್ಸ್ ಮಾಡಲು ಪ್ರಯತ್ನಿಸಿದರು.
ಆದರೂ ಶಾಸಕರು ಜಪ್ಪೆನ್ನಲಿಲ್ಲ.
ಕೊನೆಗೆ ಸಿಎಂ ಕೇಳಿದರು-
*ನೀವು ರಾಜೀನಾಮೆ ಕೊಡೋದು ನಿಜಾನಾ? ಅಲ್ಲಾ_ ತಮಾಷೆಗಾ?
*ನಿಜಾ ಸಾರ್
* ಅಂತ ಶಾಸಕರು ಒಕ್ಕೊರಲಿನಿಂದ ಹೇಳಿದರು.
ಸ್ವಲ್ಪ ಧೈರ‌್ಯ ಮಾಡಿಕೊಂಡಂತೆ ಕಂಡುಬಂದ ಸಿಎಂ-
*ನಿಜಾನಾ? ನಾನೇನೋ ತಮಾಷೆಗೆ ಅಂದುಕೊಂಡಿದ್ದೆ. ನಂಗೆ ತಮಾಷೆ ಕಂಡ್ರೆ ಆಗಲ್ಲ* ಅಂದುಬಿಟ್ಟರು.
***

ಇಬ್ಬರು ನಾಯಕರ ಹೆಂಡ್ತೀರು ಜಗಳಕ್ಕೆ ಇಳಿದರು. ಒಬ್ಬಾತನ ಹೆಂಡತಿ ಹೇಳಿದಳು-
'ನಿನ್ ಗಂಡ ಮಹಾ ಭ್ರಷ್ಟಾಚಾರಿ. ದಿನಾ ಪೇಪರ್ ನೋಡಿದ್ರೆ ನಿನ್ ಗಂಡಂದೇ ಗುಣಗಾನ ಇರುತ್ತೆ. ನುಂಗಿ ನೀರು ಕುಡಿದು ಗುಂಡಾಂತರ ಮಾಡಿಬಿಟ್ಟಿದ್ದಾನೆ' ಅಂತ ಏರುದನಿಯಲ್ಲಿ ಬೀದಿಯಲ್ಲಿ ನಿಂತು ಹೇಳಿದಳು.
ಇನ್ನೊಬ್ಬಾಕೆ ಸುಮ್ನಿರ್ತಾಳಾ?
'ಓಹೋಹೋ ನೀನೇನು ಭಾಳಾ ಸಾಚಾ? ನಿನ್ ಗಂಡನೇನು ಅಪರಂಜಿ ಅಂತ ತಿಳ್ಕೊಂಡಿಯಾ? ನಿನ್ ಗಂಡನ ಮೇಲೆ ಮೊನ್ನೆ ಕರಪ್ಷನ್ ಕೇಸಾಗಿದ್ದು ಗೊತ್ತಿಲ್ವಾ. ಇಡೀ ರಾಜ್ಯನೇ ಟೀವೀಲಿ ನೋಡಿದೆ' ಅಂತ ತಿರುಗೇಟು ನೀಡಿದಳು.
'ನಿನ್ ಗಂಡನ ಜತೆ ನಮ್ದನ್ನು ಕಂಪೇರ್ ಮಾಡ್‌ಬೇಡ. ನಿಮ್ಮವರ ಕತೆ ಇಡೀ ಲೋಕಕ್ಕೇ ಗೊತ್ತು. ಸಿಬಿಐಯವರು ತನಿಖೆ ಮಾಡ್ತಾ ಇದ್ದಾರೆ. ನಮ್ದು ಬಿಡು ಜಸ್ಟ್ ಪೆಟ್ಟಿ ಕೇಸ್. ಲೋಕಾಯುಕ್ತದಲ್ಲಿ ತನಿಖೆ ನಡೀತಾ ಇದೆಯಷ್ಟೇ' ಅಂತ ಅಂದುಬಿಟ್ಟಳು ನಂಬರ್ ಒನ್‌ನ ಹೆಂಡತಿ.
***

ಯಾವ ಪಕ್ಷದವರು ಹೆಚ್ಚು ಕರಪ್ಟ್ ಅಂತ ಒಂದು ಪ್ರಶ್ನೆ ಬಂತು. ಮೂರು ಪಕ್ಷಗಳ ನಾಯಕರನ್ನು ಕರೆದ ಲೋಕಾಯುಕ್ತರು ಒಂದು ಬಕೆಟ್ ನೀರನ್ನು ಕೊಟ್ಟು ಒಂದು ತಿಂಗಳಲ್ಲಿ ಈ ನೀರನ್ನು ಹೇಗೆ ಬಳಸಿದ್ದೀರಿ ಎಂದು ತೋರಿಸಿಕೊಡಿ ಎಂದರು.
ತಿಂಗಳು ಮುಗಿಯಲು ಇನ್ನು ಒಂದು ದಿನ ಇರುವಾಗಲೇ ಕಾಂಗ್ರೆಸ್‌ನವ ಖಾಲಿ ಬಕೆಟ್ ಹಿಡಿದುಕೊಂಡು ಬಂದ. ಆತ ಅದರಲ್ಲಿದ್ದ ನೀರನ್ನು ಮಗ್‌ನಲ್ಲಿ ಎತ್ತಿ ಎತ್ತಿ ತನಗೆ ಬೇಕಾದವರಿಗೆ ಎಲ್ಲ ಹಂಚಿಬಿಟ್ಟಿದ್ದ.
ಹದಿನೈದು ದಿನ ಮುಗಿದ ಮೇಲೆ ಜೆಡಿಎಸ್‌ನವ ಬಂದ. ಆತ ಫುಲ್ ಬಕೆಟ್‌ನ್ನೇ ತನ್ನ ಫ್ಯಾಮಿಲಿ ಜಮೀನಿನ ಕಡೆ ಚೆಲ್ಲಿಬಿಟ್ಟಿದ್ದ.
ಹೇಳಿ ಎರಡು ದಿನವಾಗುವ ಮೊದಲೇ ಖಾಲಿ ಬಕೆಟ್ ಹಿಡಿದುಕೊಂಡು ಬಿಜೆಪಿಯವ ಬಂದಿದ್ದ. ಅವನು ಬಕೆಟ್‌ಗೇ ಒಂದು ಪೈಪ್ ಹಾಕಿ ತನ್ನ ಮನೆಗೇ ಬಿಟ್ಟುಕೊಂಡಿದ್ದ.
***

ಕಾಂಗ್ರೆಸ್‌ನ ಇಬ್ಬರೂ ನಾಯಕರು ವಾಕಿಂಗ್ ಹೋಗ್ತಾ ಇದ್ದರು. ನಡೆಯುವಾಗಲೂ ಕಾಲೆಳೆದುಕೊಳ್ಳುವುದು ಅವರ ಅಭ್ಯಾಸ. ಅದರಲ್ಲೂ ಇಬ್ಬರೂ ಒಂದೇ ಕ್ಷೇತ್ರದಿಂದ ಸ್ಪರ್ಧಿಸಬೇಕೆಂದು ಪಣತೊಟ್ಟವರು. ಹಾಗೆ ವಾಕ್ ಹೋಗುತ್ತಿರುವಾಗ ಒಂದು ಕೋಟಿ ರೂಪಾಯಿ ಬಂಡಲ್‌ವೊಂದು ರೋಡಲ್ಲಿ ಬಿದ್ದಿರುವುದು ಏಕಕಾಲಕ್ಕೆ ಇಬ್ಬರ ಕಣ್ಣಿಗೆ ಬಿತ್ತು. ಇಬ್ಬರೂ ಅದನ್ನು ಎತ್ತಿಕೊಂಡರು. ಅದನ್ನು ಏನು ಮಾಡುವುದು ಎಂಬ ಚರ್ಚೆ ಶುರುವಾಯಿತು.
ಒಬ್ಬ ಹೇಳಿದ - ಜನಸೇವೆಗೆ ಬಳಸೋಣ ಅಂತ
ಇನ್ನೊಬ್ಬ ಹೇಳಿದ- ಪಾರ್ಟಿ ಫಂಡ್‌ಗೆ ಕೊಡೋಣ. ಇಬ್ಬರಲ್ಲಿ ಒಬ್ಬರು ಟಿಕೆಟ್ ಪಡೆಯೋಣ ಅಂತ.
ಹೀಗೆ ಮಾತು ಮುಂದುವರೀತಾನೇ ಇತ್ತು. ಒಮ್ಮತಕ್ಕೆ ಬರಲಾಗಲೇ ಇಲ್ಲ. ಅಷ್ಟರಲ್ಲಿ ಅಲ್ಲಿಗೆ ಜೆಡಿಎಸ್‌ನವನು ಬಂದ.
' ಇದನ್ನು ಹಾಗೆಲ್ಲಾ ಖರ್ಚು ಮಾಡಬೇಡಿ. ಮೂರು ಜನ ಹಂಚಿಕೊಳ್ಳೋಣ. ಮುಂದಿನ ಎಲೆಕ್ಷನ್‌ನಲ್ಲಿ ನಿಮ್ಮಲ್ಲಿ ಯಾರಿಗೇ ಟಿಕೆಟ್ ಸಿಕ್ಕರೂ ನಾವು ಅಭ್ಯರ್ಥಿ ಇಳಿಸಲ್ಲ. ಮೈತ್ರಿ ಮಾಡಿಕೊಳ್ಳೋಣ' ಅಂತಂದ.
ಕಾಂಗ್ರೆಸ್‌ನವರೂ ಒಪ್ಪಿಕೊಂಡರು.
Jan 12, 2013
ಚಂದಾದಾರರು ಬಿಝಿಯಾಗಿದ್ದಾರೆ. . .
'ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ' ಎನ್ನುವ ಬಸವಣ್ಣ ಅವರ ಮಾತನ್ನು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಲೆಟರ್ ಲೆಟರ್‌ಶಃ ಪಾಲಿಸಲು ಹೊರಟಿದ್ದಾರೆ. ಇಡೀ ಸರ್ಕಾರವನ್ನೇ ಜಂಗಮೀಕರಣ ಮಾಡುತ್ತಿದ್ದಾರಂತೆ. ಅದರರ್ಥ ಜಂಗಮವಾಣಿ- ಮೊಬೈಲ್ ಫೋನ್ ಮೂಲಕ ಆಡಳಿತ ಮಾಡಲು ಶೆಟ್ಟರ್ ಹೊರಟಿದ್ದಾರೆ. ಇದು ಆಡಳಿತವನ್ನು ಚುರುಕುಗೊಳಿಸುವ ಪ್ರಯತ್ನ ಎನ್ನುವುದು ಆಡಳಿತಾರೂಢರ ವ್ಯಾಖ್ಯಾನ. ಅಂದರೆ ಸರ್ಕಾರಕ್ಕೆ ಒಂದಿಷ್ಟು 'ಚಲನಶೀಲತೆ' ಬಂದಿದೆ ಎಂದು ಹೇಳಿದ ಹಾಗಾಯಿತು. ಹಾಗಿದ್ದರೆ, ಸರ್ಕಾರ ಇಷ್ಟು ದಿನ ನಿಂತುಕೊಂಡಿತ್ತೇ? ಮಲಗಿಕೊಂಡಿತ್ತೇ? ಈ ಪ್ರಶ್ನೆಗೆ ಆ ಸೀಟಲ್ಲಿ ಕೂತವರೇ ಉತ್ತರ ಕೊಡಬೇಕು ಅಷ್ಟೇ.

ಇದೊಂದು 'ಸಕಾಲ'ದ ನಿರ್ಧಾರ. ತನ್ನನ್ನೇ ಲಿಂಗಾಯತ ನಾಯಕ ಎಂದು ಬಿಂಬಿಸಿದ್ದಕ್ಕೋ, ತನ್ನ ನೇತತ್ವದಲ್ಲೇ ಚುನಾವಣೆ ನಡೆಯಲಿದೆ ಎಂದು ಬಿಜೆಪಿ ಕೋರ್ ಕಮಿಟಿ ನಿರ್ಧರಿಸಿದ್ದಕ್ಕೋ ಏನೋ ಒಟ್ಟಾರೆ ಮುಖ್ಯಮಂತ್ರಿ ಶೆಟ್ಟರ್ ಹೆಚ್ಚು ಹೆಚ್ಚು 'ಚಲನಶೀಲ'ರಾಗಿದ್ದಾರೆ. ಅಧಿಕಾರ ಹೋದರೆ ಚಾಮರಾಜನಗರದಿಂದ ಹೋಗಲಿ, ಯಡಿಯೂರಪ್ಪ ಅವರಿಂದ ಬೇಡ ಎನ್ನುವ ನಿರ್ಧಾರಕ್ಕೆ ಬಂದು ಅಲ್ಲಿಗೂ ಹೋಗಿ ಬಂದಿದ್ದಾರೆ; ಬಿಜೆಪಿಯನ್ನು ಯಾರಿಂದಲೂ ನಾಶ ಮಾಡಲಾಗುವುದಿಲ್ಲ ಅಂತ ಸಿಡಿದೇಳುವಷ್ಟು ಧೈರ‌್ಯ ತೆಗೆದುಕೊಂಡಿದ್ದಾರೆ ಸೈಲೆಂಟ್ ಶೆಟ್ಟರ್.
***

ಸದಾ ಸೈಲೆಂಟ್ ಮೋಡ್‌ನಲ್ಲಿರುವ ಶೆಟ್ಟರ್ ವೈಬ್ರೇಟ್ ಮೋಡ್‌ಗೆ ಬರುತ್ತಿರುವುದನ್ನು ನೋಡಿದರೆ ಇದರ ಹಿಂದೆ ಹೈಕಮಾಂಡ್ ಹಕೀಕತ್ತು ಇದೆ ಎನ್ನುವುದು ಸ್ಪಷ್ಟವಾಗುತ್ತದೆ. ನಾಟ್ ರೀಚೆಬಲ್ ಆಗಿದ್ದ ಬಿಜೆಪಿ ಸರ್ಕಾರವನ್ನು ನೆಟ್‌ವರ್ಕ್ ವ್ಯಾಪ್ತಿಗೆ ತರಲು ಆ ಪಕ್ಷದ ನಾಯಕರು ಹೆಣಗಾಡುತ್ತಿದ್ದಾರೆ ಎಂದು ಗೊತ್ತಾಗುತ್ತದೆ. ಪಕ್ಷ ರೀಚೇಬಲ್ ಆಗುತ್ತೋ, ಇಲ್ಲಾ ಬ್ಯಾಟರಿಯೇ ಡಿಸ್‌ಛಾರ್ಜ್ ಆಗುತ್ತದೋ ಗೊತ್ತಿಲ್ಲ. ಎಲ್ಲಾ 'ಕಾಲ್'ಯಾ ತಸ್ಮೈ ನಮಃ. ಇ-ಆಡಳಿತದ ನಂತರ ಎಂ-ಆಡಳಿತದ ಕಾಲ ಇದು.

ಅದೇನೇ ಇದ್ದರೂ ಜನಕ್ಕೆ ಮೊಬೈಲ್‌ನಲ್ಲೇ ಸರ್ಕಾರಿ ಕೆಲಸದ ಮಾಹಿತಿ ಸಿಗುವುದಾದರೆ ಅದು ಒಳ್ಳೆಯದೇ ಅಲ್ಲವೇ? ಕೊಟ್ಟ ಅರ್ಜಿ ಎಲ್ಲಿದೆ ಎಂದು ವಿಚಾರಿಸಿಕೊಂಡು ಸರ್ಕಾರಿ ಕಚೇರಿಯ ಕಂಬ ಕಂಬಗಳ ನಡುವೆ ತಿಂಗಳಾನುಗಟ್ಟಲೆ ಅಲೆಯೋ ಬದಲು 'ಕರಾಗ್ರೇ ವಸತೇ ಮೊಬೈಲ್'ನ ಇನ್‌ಬಾಕ್ಸ್‌ನಲ್ಲೇ ಎಲ್ಲ ಮಾಹಿತಿ ಸಿಗುವ ಹಾಗಿದ್ದರೆ...? ಒಂದು ಕಾಲ್‌ಗೆ ಕಾಲಬುಡಕ್ಕೇ ಸೇವೆ.. ಅಬ್ಬಬ್ಬಾ ಇದಪ್ಪ ಜಂಗಲ್‌ರಾಜ್‌_ ಅಲ್ಲಲ್ಲ ಜಂಗಮ್‌ರಾಜ್!

ಬಿಜೆಪಿಯ ಬೇಲ್ ಆಡಳಿತಕ್ಕಿಂತ ಮೊ-ಬೇಲ್ ಆಡಳಿತ ಬೆಟರ್ ಅಲ್ವೇ?
***

ಈ ಎಂ- ಆಡಳಿತದಲ್ಲಿ ವಿಧಾನಸೌಧವೇ ಒಂದು ಕಸ್ಟಮರ್ ಕೇರ್ ಕೇಂದ್ರ ಎಂದು ಭಾವಿಸುವುದಾದರೆ ಒಬ್ಬ ಆಮ್ ಆದ್ಮಿ ಮಾಡಿದ ಕರೆಗೆ ಯಾವ ರೀತಿ ಉತ್ತರ ಸಿಗಬಹುದು? ಮಿನಿಸ್ಟರ್‌ಗಳು ಹೇಗೆ ಸ್ಪಂದಿಸಬಹುದು?

ರೆಕಾರ್ಡೆಡ್ ಧ್ವನಿ ಬರುತ್ತದೆ- 'ಕರ್ನಾಟಕ ಸರ್ಕಾರದ ಕಾಲ್ ಸೆಂಟರ್‌ಗೆ ಸ್ವಾಗತ. ನಿಮ್ಮ ಸೇವೆಗೆ ನಾವು ಸದಾ ಸಿದ್ಧ'

'ನಿಮಗೆ ಬಿಜೆಪಿ ಮಿನಿಸ್ಟ್ರು ಬೇಕೆಂದಾದಲ್ಲಿ ಒಂದು ಒತ್ತಿರಿ. ಕೆಜೆಪಿ ಮಿನಿಸ್ಟ್ರು ಬೇಕೆಂದಾದಲ್ಲಿ ಎರಡು ಒತ್ತಿರಿ; ಎಡೆಬಿಡಂಗಿ ಮಿನಿಸ್ಟ್ರು ಬೇಕೆಂದಾದಲ್ಲಿ ಮೂರು ಒತ್ತಿರಿ. ಮೂರೂ ಬಿಟ್ಟವರು ಬೇಕೆಂದಾದಲ್ಲಿ ನಾಲ್ಕು ಒತ್ತಿರಿ'

ನಂಬರ್ ಒಂದು ಒತ್ತಿದರೆ- 'ನೀವು ಬಯಸಿದ ಮಿನಿಸ್ಟ್ರು ಎಲೆಕ್ಷನ್‌ಗೆ ರೆಡಿಯಾಗ್ತಾ ಇದ್ದಾರೆ. ದಯವಿಟ್ಟು ನಂತರ ಪ್ರಯತ್ನಿಸಿ'

ನಂಬರ್ 2 ಒತ್ತಿದರೆ- 'ನೀವು ಕರೆ ಮಾಡಿದ ಮಿನಿಸ್ಟ್ರು ಯಡಿಯೂರಪ್ಪ ಹಿಂದೆ ಹೋಗಿದ್ದಾರೆ. ಸದ್ಯಕ್ಕೆ ಸಿಗುವ ಸಾಧ್ಯತೆ ಇಲ್ಲ'

ನಂಬರ್ 3 ಒತ್ತಿದರೆ- ಒಂದು ಕೈಯಲ್ಲಿ ಕ್ಯಾಲ್ಕುಲೇಟರ್ ಹಿಡಿದುಕೊಂಡು ಲೆಕ್ಕ ಹಾಕುತ್ತಿರುವ ಇವರು ಇನ್ನೊಂದು ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಕೆಜೆಪಿ-ಬಿಜೆಪಿ ಇಬ್ಬರ ಜತೆಗೂ ಡೀಲಿಂಗ್ ಮಾಡುತ್ತಿದ್ದಾರೆ. ಅವರೇ ಒಂದು ತೀರ್ಮಾನಕ್ಕೆ ಬಂದ ಮೇಲೆ ಸಿಗುತ್ತಾರೆ. ಕಾದು ನೋಡಿ.

ನಂಬರ್ 4 ಒತ್ತಿದರೆ- ದಯವಿಟ್ಟು ಕ್ಷಮಿಸಿ. ನೀವು ಬಯಸುತ್ತಿರುವ ವ್ಯಕ್ತಿ ವಿಧಾನಸೌಧಕ್ಕೆ ಬಾರದೆ ನಾಲ್ಕೂವರೆ ವರ್ಷಗಳಾದವು. ರೆಸಾರ್ಟ್, ಪಬ್, ಬಾರ್‌ಗಳಲ್ಲೆಲ್ಲಾದರೂ ಹುಡುಕಿ. ಲಕ್ ಇದ್ದರೆ ಸಿಗಬಹುದು.

ಕರ್ನಾಟಕ ಸರ್ಕಾರ ಕಸ್ಟಮರ್ ಕೇರ್‌ಗೆ ಫೋನ್ ಮಾಡಿದ್ದಕ್ಕೆ ಧನ್ಯವಾದಗಳು. ನಿಮಗೆ ನಾನು ಇನ್ನೇನು ಸಹಾಯ ಮಾಡಲಿ?
***

ಈ ಮಧ್ಯೆ ಎಂ-ಆಡಳಿತ ಜಾರಿಗೆ ಬಂದಿದೆ ಎನ್ನುವ ಸುದ್ದಿಯೇ ಎಷ್ಟೋ ಮಂದಿ ಮಂತ್ರಿಗಳಿಗೆ, ಶಾಸಕರಿಗೆ ಗೊತ್ತಿಲ್ಲವಂತೆ. ಏನು ಎಂ ಎಂದರೆ ಎಂದು ಕೆಲವರು ಕೇಳಿದರೆ, ಮನಿ ಇರಬೇಕು ಅಂತ ಕೆಲವರು ಅಂದುಕೊಳ್ತಿದ್ದಾರಂತೆ. ಮನಿ ಇಲ್ಲದೆ ಆಡಳಿತಾನೇ ಇಲ್ಲ ಅನ್ನೋದು ಎಲ್ಲ ಶಾಸಕರಿಗೆ, ಮಂತ್ರಿಗಳಿಗೆ ಈಗಲೇ ಅರಿವಾಗಿಬಿಟ್ಟಿದೆ. ಅದಕ್ಕೇ ಇರಬೇಕು- ಬಿಜೆಪಿಯವರು ಅಧಿಕಾರ ಬಿಡೋದೂ ಇಲ್ಲ; ಕೆಜೆಪಿಯವರು ಸರ್ಕಾರ ಬೀಳಿಸೋದೂ ಇಲ್ಲ. ಎಲ್ಲ ಎಂ- ಆಡಳಿತ!
***

ಆಡಳಿತಾರೂಢ ಬಿಜೆಪಿ ಶಾಸಕರಿಗೆ ನಿಜಕ್ಕೂ ಈಗ ಎಂ-ಆಡಳಿತಾನೇ. ಯಾಕಂದ್ರೆ ಯಾವಾಗಲೂ ಮೊಬೈಲ್ ಬಿಝಿ. ಯಾವ ಎಂಎಲ್‌ಎಗೆ ಕರೆ ಮಾಡಿದರೂ ಚಂದಾದಾರ ಬಿಝಿ ಎನ್ನುವ ಇನಿದನಿ ಕೇಳುತ್ತದೆ. ಆ ಮೊಬೈಲ್ ಒಂದೋ ಕೆಜೆಪಿ ನಾಯಕರ ಮನವೊಲಿಕೆಗೋ, ಇಲ್ಲಾ ಬಿಜೆಪಿ ನಾಯಕರ ಮನವೊಲಿಕೆಗೆ ಎಂಗೇಜ್ ಆಗಿದೆ.. ಇದೂ ಎಂ-ಆಡಳಿತ.
***

ಬಿಜೆಪಿಯವರ ಕಾಲ್ ಪೂರಾ ಎಂಗೇಜ್ ಆಗಿದ್ದರೆ, ಕಾಂಗ್ರೆಸ್‌ನವರೇನು ಕಮ್ಮಿ? ಅವರ ಕಾಲೂ ಎಂಗೇಜ್ ಆಗಿದೆ. ಕಾಂಗ್ರೆಸ್‌ನಲ್ಲೂ ಚಲನಶೀಲತೆ ಕಾಣಿಸಿಕೊಂಡಿದೆ. ಇಷ್ಟೂ ದಿನ ಸರ್ಕಾರದ ಹಾಗೆಯೇ ಮಲಗಿದ್ದ ಕಾಂಗ್ರೆಸ್ ನಾಯಕರಲ್ಲಿ ಹೊಸ ಶಕ್ತಿ ಬಂದಿದೆ.

ಭಾರ ಭಾರವಾದ ಹೆಜ್ಜೆ ಹಾಕಿಕೊಂಡು ಕೈ ಪಾರ್ಟಿಯವರು ಕಷ್ಣೆ ಕಡೆಗೆ ಹೋಗ್ತಾ ಇದ್ದಾರಂತೆ. ಕಾವೇರಿಯಲ್ಲಿ ಹೊಗೆ ಕಾಣಿಸಿಕೊಳ್ಳುವಾಗ ಕಷ್ಣೆ ಕಡೆ ಹೋಗುವುದೇ ಕ್ಷೇಮ ಎಂದು ಅವರು ಅಂದುಕೊಂಡಿರಬೇಕು. ನಡಿಗೆ ಕಷ್ಣಾ ನದಿ ತಟದಲ್ಲಾದರೂ ಇವರ ಕಣ್ಣೆಲ್ಲ ಬೆಂಗಳೂರಿನ ವಿಧಾನಸೌಧದ ಮೇಲೆಯೇ ಇದ್ದ ಹಾಗಿದೆ. ಎಷ್ಟು ಬೇಗ ಬೆಂಗಳೂರಿಗೆ ಹೋಗ್ತೀವಿ ಅಂತಾನೇ ಲೆಕ್ಕಾಚಾರ ಹಾಕಿಕೊಂಡಿದ್ದಾರೆ.

ಕೈಗಳ ಎಷ್ಟೊಂದು ಕಾಲುಗಳು ನೋಡಿ ಇಲ್ಲಿ... ಸೋತ ಕಾಲುಗಳು, ತುಳಿದ ಕಾಲುಗಳು, ಅಳುಕಿದ ಕಾಲುಗಳು, ಉಳುಕಿದ ಕಾಲುಗಳು, ಒದ್ದ ಕಾಲುಗಳು, ಬಿದ್ದ ಕಾಲುಗಳು. . . ಎಲ್ಲ ಕಾಲುಗಳು ಒಂದೇ ಕಡೆಗೆ ಹೆಜ್ಜೆ ಹಾಕುತ್ತಿವೆ. ಆದರೆ ಗುರಿ ಮಾತ್ರ ಬೇರೆ ಬೇರೆ. ಕೆಲವಕ್ಕೆ ಹೆದ್ದಾರಿಯ ಕನಸು; ಇನ್ನು ಕೆಲವಕ್ಕೆ ಕಾಲುಹಾದಿಯಾದರೂ ಸಾಕು. ಒಟ್ಟಾರೆ ಏಳು ವರ್ಷಗಳ ನಂತರ ಇನ್ನೊಮ್ಮೆ ಅಧಿಕಾರ ಬೇಕು.
***

ಮುಖ್ಯಮಂತ್ರಿ ಕನಸು ಕಟ್ಟಿಕೊಂಡಿರುವ ಸಿದ್ದರಾಮಯ್ಯಗೂ ಗೊತ್ತು, ಪರಮೇಶ್ವರಗೂ ಗೊತ್ತು. ಕಾಲಿನಿಂದ ನಡೆಯೋದರ ಜತೆಗೆ ಕಾಲು ಎಳಿಯೋದು ಗೊತ್ತಿರಬೇಕು ಅಂತ, ಈ ವಾಕ್ ಪೊಲಿಟಿಕ್ಸ್ ಎಲ್ಲ ಸಿಎಂ ಹುದ್ದೆ ತಂದುಕೊಡೋದಿಲ್ಲ ಅಂತ. ಅಲ್ಲಿ ನಡೆಯೋದು ಬ್ಯಾಕ್ ಪೊಲಿಟಿಕ್ಸ್ ಅಷ್ಟೇ. ಹಿಂದೆ ಕೈ ಕಟ್ಟಿ ನಿಂತುಕೊಂಡು ಹೈಕಮಾಂಡ್ ಜತೆ ಮಧುರ ವಾಕ್ ಸಂಬಂಧ ಇಟ್ಟುಕೊಳ್ಳೇಬೇಕು.

ಅದು ಸಿಎಂ ಕನಸು ಕಾಣುವವರಿಗೆ ಬಿಟ್ಟ ವಿಚಾರ ಬಿಡಿ.
***

ಇಂಥದ್ದೇ ಪಾದಯಾತ್ರೆ ಮಾಡಿ ಮಾಡಿ 'ಧಣಿ'ದಿರುವ ಶ್ರೀರಾಮುಲು ಮಾತ್ರ ನಮ್ದು 150 ಸೀಟು ಅಂತ ಹೇಳಿಕೊಳ್ತಾ ಇದ್ದಾರೆ. ಬರೇ ನಡಿಗೆಯಿಂದಲೇ ಅಧಿಕಾರಕ್ಕೆ ಬರೋ ಹಾಗಿದ್ರೆ ದೇವೇಗೌಡ್ರು ಸುಮ್ನೆ ಕೂತಿರುತ್ತಿದ್ರಾ? ಆಗಲೇ ಹಾಸನಕ್ಕೆ ನಡಿಯೋಕೆ ಶುರು ಮಾಡ್ತಿದ್ರು. ಯಡಿಯೂರಪ್ಪ ಯಾಕೆ ನಡಿಯೋಕೆ ಹೊರಟಿಲ್ಲ?
ಆದರೆ ರಾತ್ರಿ ಹೆಣ್ಣುಮಕ್ಕಳು ಒಂಟೊಂಟಿಯಾಗಿ ನಡೀಬಾರದು. ಜತೆಗೆ ಯಾರಾದ್ರೂ ಗಂಡಸರು ಇರಬೇಕು ಅಂತ ನಮ್ಮ ಕೆಲವು ನಾಯಕರು ಹೇಳ್ತಾ ಇರೋವಾಗ್ಲೇ ರಾತ್ರಿ ಹೆಣ್ಣು ಮಕ್ಕಳು ಬಸ್ಸಲ್ಲೂ ಹೋಗಬಾರದು ಅನ್ನೋದು ಪ್ರೂವ್ ಮಾಡಿಬಿಟ್ಟಿದ್ದಾರೆ ನಡತೆ ತಪ್ಪಿದ ಮಂದಿ.
ನಡಿಗೆ, ನಡತೆ. .. ಬಗ್ಗೆ ದೇಶಾನೇ ಚರ್ಚೆ ಮಾಡ್ತಿದೆ. ಅಣ್ಣಾ ಅಂತ ಕರೆದ್ರೆ ರೇಪ್ ನಿಲ್ಲುತ್ತೆ ಅಂತ ಗುರುಗಳು ಹೇಳ್ತಿರೋವಾಗಲೇ ಇದು ಭಾರತನೋ, ಇಂಡಿಯಾನೋ ಅಂತ ಸಂಘದವರು ಗಲಿಬಿಲಿಗೊಂಡಿದ್ದಾರೆ. ಒಟ್ಟಾರೆ ಚಲನ'ಶೀಲ'ತೆಯೇ ಬೀದಿಗೆ ಬಿದ್ದಿದೆ

Dec 29, 20122012ರ ನಾಲ್ಕು ನೀತಿ ಪಾಠ
ಓಹ್ ಮೈ ಗಾಡ್! ಅಂತೂ 2012 ಎಷ್ಟು ಬೇಗ ಮುಗಿಯಿತು!
ಪ್ರತಿ ಸಲ ಹೊಸ ವರ್ಷ ಎದುರಾಗುವಾಗ ಹಳೇ ವರ್ಷಕ್ಕೆ ವಿದಾಯ ಹೇಳುವುದು ಹೀಗೆಯೇ. ಒಂದಷ್ಟು ನಿಟ್ಟುಸಿರು, ಬಿಸಿಯುಸಿರು, ಖುಷಿಯುಸಿರು, ನಶೆಯುಸಿರಿನ ಮೂಲಕ ಕಳೆದುಹೋಗುವ ವರ್ಷಕ್ಕೊಂದು ಸಲಾಮ್ ಹೇಳುತ್ತೇವೆ.
ಅದರಲ್ಲೂ 2012 ಒಂದು ಬಗೆಯಲ್ಲಿ ದೈವೀದತ್ತ ವರ್ಷ. ಎಷ್ಟೋ ವರ್ಷ ವರ್ಷಗಳಿಂದ ಹುಡುಕಾಡುತ್ತಿದ್ದ ಸಷ್ಟಿಯ ಮೂಲ ಕಾರಣಕರ್ತ ದೇವಕಣ ಈ ವರ್ಷ ಕಾಣಸಿಕ್ಕಿತು; ಬೌಂಡರಿ ಭಾರತದ ದೇವರು ಒಂಡೇ ಕ್ರಿಕೆಟ್ ಆಟ ಮುಗಿಸಿ ಪೆವಿಲಿಯನ್‌ಗೆ ಮರಳಿಬಿಟ್ಟ; ಜ್ಯೋತಿಷಿಗಳ ಪ್ರಳಯ ಭವಿಷ್ಯದಿಂದ ಆ ದೇವರು ನಮ್ಮನ್ನು ಉಳಿಸಿಬಿಟ್ಟ; 'ದೇವರ ಚಿತ್ರ' ನೋಡಿ ಅಷ್ಟು ಮಂದಿ ಶಾಸಕರು ಸಿಕ್ಕಿಬಿದ್ದರು... ಎಲ್ಲವೂ ದೇವರಾಟ ! ಈ ದೇವರಾಟದೊಳಗೂ ಹುಲು ಮಾನವರಾದ ನಾವು ಕಲಿಯುವುದು ಸಾಕಷ್ಟಿದೆ. ಒಂದೊಂದು ಘಟನೆಗಳೂ ನಮಗೆ ಒಂದೊಂದು ನೀತಿಪಾಠ. 2012ರಲ್ಲೂ ಅಂಥ ಹಲವು ಘಟನೆಗಳನ್ನು ನಾವು ನೋಡಿದ್ದೇವೆ. ಅವುಗಳೊಳಗೆ ಅಡಗಿರುವ ನೀತಿಯಾದರೂ ಏನು? ಅಂಥ ನಾಲ್ಕು ನೀತಿಪಾಠವನ್ನು ನೋಡೋಣ.

1.

ಅವರಿಬ್ಬರು ಮಸ್ತ್ ಮಸ್ತ್ ಚಡ್ಡಿ ದೋಸ್ತಿಗಳು. ಇಬ್ಬರ ಗುರಿಯೂ ಒಂದೇ. ಅದು ಬೆಂಗಳೂರಿಗೆ ಹೋಗುವುದು. ಶಿವಮೊಗ್ಗದಿಂದ ಇಬ್ಬರೂ ಜತೆಗೇ ಹೊರಟರು. ದಾರಿ ಖರ್ಚಿಗೆ ಇರಲಿ ಎಂದು ಒಂದಷ್ಟು ಕಡ್ಲೆಕಾಯಿ ಕೊಂಡರು. ಒಂದು ಕಾಯಿ ಒಡೆದು ಅದರೊಳಗಿನ ಎರಡು ಬೀಜವನ್ನು ಹಂಚಿ ತಿನ್ನುವಷ್ಟು ಅಂಡರ್‌ಸ್ಟಾಂಡಿಂಗ್ ಅವರ ಮಧ್ಯೆ ಇತ್ತು. ತಿನ್ನುವಾಗಲೂ ಜತೆಗೆ, ನಡೆಯುವಾಗಲೂ ಜತೆಗೆ. ಬೆಂಗಳೂರಿಗೆ ಹೋಗಿ ಕಡ್ಲೆಕಾಯಿ ಹೊಲ ಖರೀದಿಸಬೇಕೆನ್ನುವುದು ಅವರ ಬಯಕೆಯಾಗಿತ್ತು.
ನೆಲಮಂಗಲ ಹತ್ತಿರ ಬರುವಾಗ ಇಬ್ಬರ ಹಸಿವು ಹೆಚ್ಚತೊಡಗಿತು. ಆತ ಈತನಿಗೆ ಹೇಳದೆ ಒಂದು ಕಾಯಿಯ ಎರಡೂ ಬೀಜ ತಿನ್ನತೊಡಗಿದ. ಈತನೂ ಹಾಗೆಯೇ ಮಾಡಿದ. ಯಾರಿಗೂ ಗೊತ್ತಾಗಿಲ್ಲವಲ್ಲ ಎಂದು ಇಬ್ಬರಲ್ಲೂ ಒಳಗೊಳಗೆ ಖುಷಿ. ಕಷ್ಟದಲ್ಲೇ ಮೇಲೆ ಬಂದ ಅವರು ಬೆಂಗಳೂರಿನಲ್ಲಿ ಹೊಲ ಖರೀದಿ ಮಾಡಿದರು. ಆತ ಇದಕ್ಕೆ ಮ್ಯಾನೇಜರ್ ಆದ. ಈತ ಮೊದಲಿಗೆ ನೀರು ಪೂರೈಸುತ್ತಿದ್ದ. ಆ ನಂತರ ಆದಾಯದ ಉಸ್ತುವಾರಿ ನೋಡಿಕೊಂಡ. ಇಬ್ಬರಲ್ಲೂ ಭಯಂಕರ ಹಸಿವು ಕಾಣಿಸತೊಡಗಿತು. ಆತ ಕಡ್ಲೆಕಾಯಿ ಕದ್ದು ಕದ್ದು ಮನೆಗೆ ಕಳುಹಿಸತೊಡಗಿದ; ಈತನೂ ಕದ್ದು ಇನ್ನೆಲ್ಲೋ ಇಡತೊಡಗಿದ. ಇಬ್ಬರಲ್ಲೂ ಒಂದು ಸಮಾಧಾನ- ಅಬ್ಬಾ ಯಾರ ಕಣ್ಣಿಗೂ ಬಿದ್ದಿಲ್ಲವಲ್ಲ ಅಂತ.
ಅದೇಕೋ ಏನೋ ಇಬ್ಬರ ಮಧ್ಯೆ ಇರಿಸುಮುರುಸು ಶುರುವಾಯಿತು. ಒಂದು ದಿನ ಆತ ಯಾವುದೋ ಚಿಲ್ಲರೆ ವಿಚಾರಕ್ಕೆ ಈತನ ಕಪಾಳಕ್ಕೆ ಬಿಗಿದ. ಈತನ ಕೋಪ ನೆತ್ತಿಗೇರಿತು. ಕೂಡಲೇ ತನ್ನಲ್ಲಿದ್ದ ಪಟ್ಟಿಯನ್ನು ತೆಗೆದು 'ನೋಡು, ನೀನು ತಿಂದ ಕಡ್ಲೆಕಾಯಿ ಡೀಟೇಲ್ಸ್ ಇಲ್ಲಿದೆ' ಎಂದು ಹೆದರಿಸಿದ. ಆತ ಥರಥರನೆ ನಡುಗಿಬಿಟ್ಟ.
ಇನ್ನೊಮ್ಮೆ ಈತ ಆತನ ವಿರುದ್ಧ ತಿರುಗಿಬಿದ್ದ. ಈಗ ಆತನೂ ಅಂಥದ್ದೇ ಇನ್ನೊಂದು ಪಟ್ಟಿಯನ್ನು ಹೊರತೆಗೆದು 'ನೀನು ಕಡ್ಲೆಕಾಯಿ ತಿಂದಿದ್ದು ನನ್ಗೆ ಗೊತ್ತಿಲ್ಲ ಅಂದ್ಕೊಂಡ್ಯಾ' ಅಂತ ಕೇಳಿದ. ಈತನಿಗೆ ಶಾಕ್.
ಈಗ ಚಡ್ಡಿ ದೋಸ್ತಿಗಳಿಬ್ಬರು ಕಿತ್ತಾಡಿಕೊಂಡಿದ್ದಾರೆ. ಕಡಲೆಕಾಯಿ ಪ್ರಸಂಗ ಲೋಕಾಯುಕ್ತರ ಬಳಿ ಇದೆ.

ನೀತಿ: ಹತ್ತಿರ ಗೆಳೆಯರು ಇರುವಾಗ ಕದ್ದು ತಿನ್ನಬಾರದು; ತಿಂದಿದ್ದು ಯಾರಿಗೂ ತಿಳಿದಿಲ್ಲ ಎಂದು ಭ್ರಮಿಸಲೂ ಬಾರದು.

2.

ಅದೊಂದು ದಟ್ಟಾರಣ್ಯ. ವಿವಿಧ ವರ್ಗದ ಪ್ರಾಣಿಗಳು, ಪಕ್ಷಿಗಳು, ಕ್ರಿಮಿ ಕೀಟಗಳು ಎಲ್ಲರೂ ಸುಖವಾಗಿ ಬಾಳುತ್ತಿದ್ದವು. ಆ ಅರಣ್ಯವನ್ನು ವಿಸ್ತರಿಸಲಾಗಿ ಬಹತ್ ಅರಣ್ಯ ಎಂದು ಹೆಸರಿಡಲಾಯಿತು. ಅದರ ಆಡಳಿತ ನಿರ್ವಹಣೆಗೆ ಪ್ರಾಣಿ-ಪಕ್ಷಿಗಳ ಸಂಖ್ಯೆ ಆಧರಿಸಿ ವಾರ್ಡ್‌ಗಳನ್ನು ರಚಿಸಲಾಯಿತು. ಪ್ರತಿ ವಾರ್ಡ್‌ನ ಪ್ರತಿನಿಧಿಯಾಗಿ ಹಾವುಗಳನ್ನು ಚುನಾಯಿಸಲಾಯಿತು.
ಎಲೆಕ್ಷನ್‌ಗೆ ಮೊದಲು ತಗ್ಗಿಬಗ್ಗಿ ನಡೆಯುತ್ತಿದ್ದ ಹಾವುಗಳು ಗೆದ್ದ ಮೇಲೆ ಭುಸ್‌ಭುಸ್ ಎನ್ನಲು ಶುರು ಮಾಡಿದವು. ಸದಾ ಹೆಡೆ ಎತ್ತಿಕೊಂಡೇ ತಿರುಗಾಡಲಾರಂಭಿಸಿದ ಅವುಗಳು ಅಮಾಯಕ ಪ್ರಾಣಿಗಳನ್ನು ಹೆದರಿಸಿ ಬೆದರಿಸಿ ಸುಲಿಗೆ ಮಾಡತೊಡಗಿದವು.
ತಾವು ಪ್ರತಿನಿಧಿಗಳು ಎನ್ನುವುದನ್ನೇ ಮರೆತ ಹಾವುಗಳು ದಿನೇ ದಿನೇ ಸೊಕ್ಕತೊಡಗಿದವು. ಕಾಡಿನ ಆಡಳಿತವೇ ಕೆಟ್ಟು ಹೋಯಿತು. ಹಲವು ಕಡೆ ಕುಡಿಯಲು ನೀರಿಲ್ಲದ ಸ್ಥಿತಿ ಬಂತು. ಎಲ್ಲ ಕಡೆ ಕಸದ ರಾಶಿ ರಾಶಿ. ಇಲ್ಲೇ ಮನೆ ಮಾಡಿಕೊಂಡ ಹಾವು ಕಾಡು ಪೂರ್ತಿ ತಮ್ಮ ಸಂತಾನವನ್ನು ವದ್ಧಿಸತೊಡಗಿದವು. ಹಾವಿನ ಸಂಖ್ಯೆ ಹೆಚ್ಚಿತು. ಕಸದಲ್ಲಿ ಇಲಿ ಹೆಗ್ಗಣಗಳು, ಕ್ರಿಮಿ ಕೀಟಗಳೂ ಹುಟ್ಟಿಕೊಂಡವು. ಹುಳಹುಪ್ಪಟೆಗಳನ್ನು ತಿಂದು ಬದುಕುವ ಪಕ್ಷಿಗಳ ಸಂಖ್ಯೆಯೂ ಹೆಚ್ಚಿತು.

ಈ ಸುದ್ದಿ ನ್ಯೂಯಾರ್ಕ್ ಟೈಮ್ಸ್‌ನಂಥ ಪತ್ರಿಕೆಗಳಲ್ಲೂ ವರದಿಯಾಯಿತು. ಬೇರೆ ಊರಿಂದ ಹದ್ದು ಗಿಡುಗಗಳೂ ಓಡೋಡಿ ಬಂದವು. ಹಾವುಗಳನ್ನು ಹಿಡಿದು ತಿನ್ನಲು ಶುರು ಮಾಡಿದವು. ಹಾವಿಗೆ ಆಗ ತಿಳಿಯಿತು- ತನಗಿಂತಲೂ ಬಲಾಢ್ಯರಿದ್ದಾರೆ ಎಂದು.

ನೀತಿ: ಬೆಟ್ಟಕ್ಕೊಂದು ಬೆಟ್ಟ ಅಡ್ಡ ಇದೆ.

3

ಆ ಊರಲ್ಲೇ ಅದು ದೊಡ್ಡ ಫ್ಯಾಮಿಲಿ. ಎಲ್ಲರೂ ಸೇರಿದರೆ 100ಕ್ಕೂ ಹೆಚ್ಚು ಜನ ಆಗಿಬಿಡುತ್ತಾರೆ.
ಅವತ್ತು ಮನೆಯಲ್ಲಿ ಮದುವೆ ಕಾರ‌್ಯಕ್ರಮ. ಇಡೀ ಕುಟುಂಬ ಸೇರಿತ್ತು. ನೆಂಟರು, ಊರವರು, ಹೊರ ಊರವರು ಎಲ್ಲರೂ ನೆರೆದಿದ್ದರು. ಇಡೀ ಮದುವೆ ಮನೆಯಲ್ಲಿ ಸಂಭ್ರಮವೋ ಸಂಭ್ರಮ.
ಇನ್ನೇನು ಮುಹೂರ್ತ ಬಂತು ಎನ್ನುವಷ್ಟರಲ್ಲಿ ಅಲ್ಲೊಂದು ಕಡೆ ಹುಡುಗರ ಕೇಕೆ ಕೇಳಿಸಿತು. ಯಾವುದರ ಪರಿವೆಯೂ ಇಲ್ಲದೆ ಆ ಹುಡುಗರು ಮೊಬೈಲ್ ಹಿಡಿದುಕೊಂಡು ಅದೇನೋ ಆಟವಾಡುತ್ತಿದ್ದರು, ಕೆಲವರು ಅಂದರು ಬ್ಲೂ ಫಿಲಂ ನೋಡುತ್ತಿದ್ದಾರೆ ಎಂದು. ಏನಾಯಿತೆಂದು ಯಾರಿಗೂ ಗೊತ್ತಿಲ್ಲ. ಮದುವೆ ಮನೆಯಲ್ಲಿ ಗದ್ದಲವೋ ಗದ್ದಲ. ಎಲ್ಲರೆದುರು ಕುಟುಂಬದ ಮಾನ ಹರಾಜಾಯಿತು,
ಕೊನೆಗೆ ಊರ ಪಟೇಲರ ನೇತತ್ವದಲ್ಲಿ ತನಿಖಾ ಸಮಿತಿ ರಚಿಸಲಾಯಿತು. ಇಳಿ ವಯಸ್ಸಿನ ಪಟೇಲರು ಮೊಬೈಲ್‌ನ್ನು ವಶಪಡಿಸಿಕೊಂಡು ಎಲ್ಲ ಬ್ಲೂಫಿಲಂಗಳನ್ನೂ ನೋಡಿದರು. ಊರಿನ ಮರ‌್ಯಾದೆ ಕಾಪಾಡಲು ಯಾವ ರೀತಿ ತೀರ್ಪು ಕೊಡಬೇಕು ಎಂದು ಗೊಂದಲಕ್ಕೆ ಸಿಕ್ಕರು. ಕೊನೆಗೆ ಕುಟುಂಬದ ಎಲ್ಲ ಸದಸ್ಯರಿಗೂ, ಮೊಬೈಲ್ ನೋಡಿದವರಿಗೂ ಸಮನ್ಸ್ ಕಳುಹಿಸಲಾಯಿತು. ಮೊಬೈಲ್‌ನಲ್ಲಿ ಕೆಟ್ಟ ಸಿನಿಮಾ ಯಾವುದೂ ಇರಲಿಲ್ಲ ಎಂದು ಕುಟುಂಬದ ಎಲ್ಲ ಸದಸ್ಯರೂ ಸಮಿತಿ ಮುಂದೆ ಸಾಕ್ಷಿ ನುಡಿದರು.
ತಿಂಗಳಾನುಗಟ್ಟಲೆ ವಿಚಾರಣೆ ನಡೆಸಿ ಕೊನೆಗೆ ಪಟೇಲರು, ಅಂಥ ಯಾವುದೇ ಘಟನೆ ನಡೆದೇ ಇಲ್ಲ ಎಂಬುದಾಗಿ ತೀರ್ಪು ಕೊಟ್ಟರು

ನೀತಿ: ಒಗ್ಗಟ್ಟಿನಲ್ಲಿ ಬಲವಿದೆ.

4

ಆ ಕಾಡಿಗೆ ಒಂದು ವದ್ಧ ಸಿಂಹ ರಾಜ. ಲೆಕ್ಕಾಚಾರದಲ್ಲಿ ಬಲು ಎಕ್ಸ್‌ಪರ್ಟ್. ಗರ್ಜಿಸುವುದನ್ನು ನಿಲ್ಲಿಸಿ ಎಷ್ಟೋ ವರ್ಷವಾಗಿತ್ತು. ಕಾಡಿನ ಆಡಳಿತ ಮಂಡಳಿಯಲ್ಲಿ ಹುಲಿ, ನರಿ, ಮಂಗ, ಜಿಂಕೆ ಹೀಗೆ ಹಲವು ಪ್ರಾಣಿಗಳಿದ್ದವು.
ಒಮ್ಮೆ ತನ್ನ ಸಂಪುಟದ ಕೆಲವು ಪ್ರಾಣಿಗಳ ಜತೆ ಅದು ಕಾಡಿನಲ್ಲಿದ್ದ ಕಲ್ಲಿದ್ದಲು ಗಣಿಯೊಳಗೆ ಇಳಿಯಿತು. ಗಣಿಯಿಂದ ಎಷ್ಟು ಕಲ್ಲಿದ್ದಲು ಬರುತ್ತದೆ, ಅದರಿಂದ ಎಷ್ಟು ಲಾಭ ಬರುತ್ತದೆ ಎಂದೆಲ್ಲ ಲೆಕ್ಕಾಚಾರ ಹಾಕಿತು. ಹೊರಗೆ ಬಂದು ನೋಡಿದರೆ ಮೈಯೆಲ್ಲಾ ಕಲ್ಲಿದ್ದಲ್ಲಿನಿಂದ ಕಪ್ಪು ಕಪ್ಪಾಗಿತ್ತು. ಸಿಂಹ ಕಲ್ಲಿದ್ದಲು ತಿಂದಿದೆ ಎಂದು ಕಾಡಿನ ಪತ್ರಿಕೆಗಳಲ್ಲೆಲ್ಲ ಸುದ್ದಿಯಾಯಿತು. ಆದರೆ ಸಿಂಹ ಮಾತ್ರ ಗರ್ಜಿಸಲೇ ಇಲ್ಲ. ಸೈಲೆಂಟಾಗಿಯೇ ಇತ್ತು.
ಸಿಂಹ ಮೌನವಾಗಿರುವಾಗಲೇ ಸಂಪುಟದ ಇನ್ನು ಕೆಲವು ಪ್ರಾಣಿಗಳು ಯಾವ್ಯಾವುದೋ ಹಗರಣಗಳಲ್ಲಿ ಸಿಕ್ಕಿ ಹಾಕಿಕೊಂಡವು. ಇಷ್ಟಾದರೂ ಸಿಂಹ ಬಾಯಿ ತೆರೆಯಲಿಲ್ಲ. ಸಿಂಹ ದುರ್ಬಲ ಪ್ರಾಣಿ ಎಂದು ಕೆಲವು ಪತ್ರಿಕೆಗಳು ಬರೆದವು. ಇನ್ನೊಮ್ಮೆ ಕಾಡಿಗೆ ಬೇರೆ ಕಾಡಿನಿಂದ ಬಂದ ಪ್ರಾಣಿಗಳು ಚಿಲ್ಲರೆ ಅಂಗಡಿ ತೆರೆಯುವ ಪ್ರಸ್ತಾವನೆಯನ್ನು ಸಿಂಹ ಮುಂದಿಟ್ಟಿತು. ಆಗ ಸಿಂಹಕ್ಕೆ ಸಪೋರ್ಟ್ ಕೊಟ್ಟ ಹಲವು ಪ್ರಾಣಿಗಳು ವಿರೋಧ ವ್ಯಕ್ತಪಡಿಸಿದವು. ಆಗಲೂ ಸಿಂಹ ಸೈಲೆಂಟಾಗಿತ್ತು.

ನೀತಿ: ಅಧಿಕ ಮಾತು ಹೇಗೆ ಅಪಾಯಕಾರಿಯೋ, ಅಧಿಕ ಮೌನ ಸಹ. ಕಾಡಿನ ರಾಜ ತುಂಬಾ ಸೈಲೆಂಟಾಗಿದ್ದರೆ ಅದು ಸಿಂಹ ಹೌದೋ ಅಲ್ಲವೋ ಎನ್ನುವ ಅನುಮಾನ ಬರುತ್ತದೆ.

ಕೊನೇ ಮಾತು: 2012ರ ವಿಶೇಷತೆ ಏನು?
-ಇದು ಲೀಪ್ ಯಿಯರ್. ದುರದಷ್ಟಕ್ಕೆ ರೇಪ್ ಯಿಯರ್ ಆಗಿಬಿಟ್ಟಿತು.




Dec 15, 2012
ಪ್ರಳಯಕಾಲೇ ವಿಪರೀತ ಬುದ್ಧಿಮುಂದಿನ ಶನಿವಾರ ಈ ಹೊತ್ತಿಗೆ ಏನು ಬೇಕಾದರೂ ಆಗಬಹುದು. ನಾವು ಅದಕ್ಕೆ ತಯಾರಾಗಿರಬೇಕಷ್ಟೇ. ಈ ದೇಶದಲ್ಲಿ ಆ ಹೊತ್ತಿಗೆ ಸುಮಾರು 3,46,000 ಮಕ್ಕಳು ಹುಟ್ಟಬಹುದು; 1,01,300 ಮಂದಿ ಸಾವನ್ನಪ್ಪಬಹುದು. 150ಕ್ಕೂ ಹೆಚ್ಚು ದಂಪತಿ ಕಚ್ಚಾಡಿಕೊಂಡು ಡಿವೋರ್ಸ್‌ಗೆ ಅರ್ಜಿ ಹಾಕಬಹುದು. ಸಂಸತ್ತಿನಲ್ಲಿ ಮಾಯಾ-ಮುಲಾಯಂ ಮಾರಾಮಾರಿ ನಡೆದುಹೋಗಬಹುದು; ಸಿರಿಯಾದಲ್ಲಿ ಬಂಡುಕೋರರು ಶಿಳ್ಳೆ ಹೊಡೆಯಬಹುದು; ಕರ್ನಾಟಕದಲ್ಲಿ ಒಂದಷ್ಟು ಶಾಸಕರು ಬಿಜೆಪಿಯಿಂದ ಕೆಜೆಪಿಗೋ ಅಥವಾ ಕೆಜೆಪಿಯಿಂದ ಇನ್ನೆಲ್ಲಿಗೋ, ಆ ಕಡೆಯಿಂದ ಈ ಕಡೆಗೋ, ಈ ಕಡೆಯಿಂದ ಆ ಕಡೆಗೋ, ಎಲ್ಲೆಲ್ಲಿಗೋ ಉರುಳುರುಳಿ ಹೋಗಬಹುದು. 168 ಗಂಟೆಗಳು ಸದ್ದಿಲ್ಲದೆ ಉರುಳುತ್ತಿರುವಾಗಲೇ ಕರ್ನಾಟಕದ ಜಗದೀಶ್ ಶೆಟ್ಟರ್ ಸರ್ಕಾರ ಉರುಳಿಯೇ ಹೋಗಿರಬಹುದು. ಬೈ ದಿ ಬೈ, ಗುಜರಾತ್‌ನಲ್ಲಿ ಸೋನಿಯಾ- ನರೇಂದ್ರ ಮೋದಿ ಇಬ್ಬರೂ ಮತ್ತಷ್ಟು ಹೊಸ ಹೊಸ ಬೈಗುಳ ಪದಗಳನ್ನು ಆವಿಷ್ಕರಿಸಿರಬಹುದು; ಮೋದಿಯೇ ಮತ್ತೆ ಮುಖ್ಯಮಂತ್ರಿಯಾಗಬಹುದು.

ಇದನ್ನೇ ನಾವು-ನೀವೆಲ್ಲ ಪ್ರಳಯ ಎಂದು ಭಾವಿಸುವುದಾದರೆ ಹಾಗೆಯೇ ಅಂದುಕೊಂಡುಬಿಡೋಣ.
ಇಂಥದ್ದೊಂದು ಪ್ರಳಯ ಭೀತಿಯಿಂದ ಬಹುತೇಕ ಮಂದಿ ಒಳಗೊಳಗೆ ನಡುಗುತ್ತಿದ್ದಾರೆ. ಆದರೆ ಯಡಿಯೂರಪ್ಪ ಮಾತ್ರ ಹಾಗಲ್ಲ. ನಿತ್ಯ ಕೋಟಿ ಕೋಟಿ ಕ-ಜಪ ಮಾಡುತ್ತಾ ಒಂಟಿಕಾಲಲ್ಲಿ ನಿಂತುಬಿಟ್ಟಿದ್ದಾರೆ ಕಜಪ ಅನ್ನೋ ಕುದುರೆ ಮೇಲೇರಿ. ಇಷ್ಟೂ ದಿನ 'ಕೊಟ್ಟ ಕುದುರೆಯನು ಏರಲರಿಯದೆ ಬೇರೊಂದ ಬಯಸುವವವ ವೀರನೂ ಅಲ್ಲ ಧೀರನೂ ಅಲ್ಲ' ಎಂದು ಹೇಳಿಕೊಂಡು ತಿರುಗಾಡುತ್ತಿದ್ದ ಯಡಿಯೂರಪ್ಪ ಅವರು ಈಗ್ಯಾಕೆ ಬೇರೆ ಕುದುರೆ ಏರುತ್ತಿದ್ದಾರೆ? ಬಹುಶಃ, ಅಪ್ಪಿ ತಪ್ಪಿ ಪ್ರಳಯವೇನಾದರೂ ಆಗಿಬಿಟ್ಟರೆ ಸರ್ವನಾಶವಾಗೋದು ಬಿಜೆಪಿ ಮಾತ್ರ ಅಂತ ಯಾರೋ ಗಿಳಿ ಶಾಸ್ತ್ರಿಗಳು ಹೇಳಿರಬೇಕು.
ಅದು ಸರಿ, ಒಂದು ವೇಳೆ ಪ್ರಳಯನೇ ಆಗಿಲ್ಲಾಂತ ಇಟ್ಟುಕೊಳ್ಳ್ರಿ. . . ಆಗಲೂ ನಾಶ ಆಗೋದು ಭಾರತೀಯ ಜನತಾ ಪಕ್ಷ ಮಾತ್ರ ಅಂತ ಆ ಪಕ್ಷದ ಬೇಲಿ ಮೇಲೆ ಕೂತಿರುವ ಸಾವಿರಾರು ಗಿಳಿಗಳು ಹೇಳಿಕೊಳ್ತಾ ಇವೆ ಬಿಡಿ.
* * *

ಆದರೆ ಅದಲ್ಲ ವಿಚಿತ್ರ- ಈ ಚಿತ್ರನಟಿ ಪೂಜಾ ಗಾಂಧಿ ಯಾಕೆ ಕು-ಜಪ (ಕುಮಾರ ಜಪ) ಬಿಟ್ಟು ಕ-ಜಪ ಮಾಡೋಕೆ ಶುರು ಮಾಡಿರೋದು? ಈ ಪ್ರಶ್ನೆ ಸಾರಾಸಗಾಟಾಗಿ ಎಲ್ಲರನ್ನೂ ಕಾಡುತ್ತಿದೆ. ಜೆಡಿಎಸ್‌ಗೆ ಇಷ್ಟೊಂದು ನಿರ್ದಾಕ್ಷಿಣ್ಯವಾಗಿ 'ಬೆನ್ನು ತೋರಿಸಿ' ಇನ್ನೊಂದು ಮನಿಗೆ ಹಾರಿರುವುದರ ಬಗ್ಗೆ ರಾಜಕೀಯ ಪಂಡಿತರೆಲ್ಲ ಒಂದೊಂದು ಲೆಕ್ಕಾಚಾರ ಹೊಸೆ ಯು ತ್ತಿರಬಹುದು. ಆದರೆ, ಉತ್ತರ ಸಿಂಪಲ್. ಪೂಜಾಗೆ 'ಬೆನ್ನು ತೋರಿಸೋದು' ಅಭ್ಯಾಸ ಆಗಿದೆಯಷ್ಟೇ!
ಆದರೆ ಈ ಗಾಂಧಿಯ ಆದರ್ಶದ ಬೆನ್ನ ಹಿಂದೆ ಹಲವು ಸಿನಿತಾರೆಯರು ಬಿದ್ದಿದ್ದಾರೆ. ಶ್ರುತಿ, ಮಾಲಾಶ್ರೀ, ರಕ್ಷಿತಾರೆಲ್ಲ ಒಬ್ಬೊಬ್ಬರಾಗಿ ದಿಢೀರಾಗಿ ಬಿಎಸ್‌ವೈಗೆ ಜೈ ಜೈ ಅನ್ನೋಕೆ ಶುರು ಮಾಡಿದ್ದಾರಂತೆ. ವೈ, ವೈ, ವೈ? ಏನಿದರ ಹಕೀಕತ್ತು. ಯಾಕಮ್ಮ ಅಂತ ಜನ ಕೇಳುವ ಮೊದಲೇ ಇವರೇ 'ಅಭಿವೃದ್ಧಿ, ಅಭಿವೃದ್ಧಿ ಅಭಿವೃದ್ಧಿ ' ಅಂತ ಡೈಲಾಗ್ ಉರು ಹೊಡೀತಾ ಇದ್ದಾರಂತೆ ಅಂತ ಒಂದು ಸುದ್ದಿ.
ಇದ್ದರೂ ಇರಬಹುದು. ಅವತ್ತು ಕೋಡಿಮಠದ ಸ್ವಾಮೀಜಿ 'ಮುತ್ತಿನ ಹಕ್ಕಿಗಳು ಮಾತಾಡ್ತಾವೆ' ಅಂತ ಹೇಳಿರೋದು ಈ ನಟಿಮಣಿಯರ ರಾಜಕೀಯ ಪ್ರವೇಶವನ್ನು ಊಹಿಸಿಯೇ ಇರಬಹುದು. (ರಾಜ್ಯದ ರಾಜಕೀಯದಲ್ಲಿ ಮಹಿಳೆಯರ ಪ್ರಾಬಲ್ಯ ಹೆಚ್ಚಾಗುತ್ತದೆ ಎಂದು ಕೋಡಿ ಸ್ವಾಮೀಜಿಗಳು ಕಳೆದ ವರ್ಷ ಭವಿಷ್ಯ ಹೇಳಿದ್ದು ಭಾರಿ ಸುದ್ದಿಯಾಗಿತ್ತು) ಆದರೆ ತಾನೇ ಆ 'ಮುತ್ತಿನ' ಹಕ್ಕಿ ಎಂದು ಭ್ರಮಿಸಿಕೊಂಡು ಕರ್ನಾಟಕದ 'ಕಿಕ್' ಮಿನಿಸ್ಟ್ರ್ 'ಕಿಸ್'ಕ್ಕಂತ ನಕ್ಕರೆ ಯಾರು ಏನು ಮಾಡೊಕ್ಕಾಗುತ್ತೆ?
* * *

ಈ ನಟೀಮಣಿಯರಿಗೆಲ್ಲ ಗಾಂಧಿ ಆದರ್ಶ ಆದರೆ, ಇನ್ನು ಕೆಲವರಿಗೆ ಮೋದಿಯೇ ಆದರ್ಶ. ಅದರಲ್ಲೂ ಮೊನ್ನೆ ಮೊನ್ನೆ ಅವರು 3ಡಿ ಮೂಲಕ ಗುಜರಾತ್‌ನ 53 ಕಡೆ ಏಕಕಾಲದಲ್ಲಿ ಪ್ರಚಾರ ಮಾಡಿರುವುದನ್ನು ನೋಡಿ ಹಲವರು ಫುಲ್ ಥ್ರಿಲ್ ಆಗಿದ್ದಾರಂತೆ. ಮೋದಿ, ಮುಸ್ಲಿಂ ಹಾಗೂ ಮಹಾತ್ಮ ಗಾಂಧಿ ಎಂಬ 3 -ಎಂ-ಗಳಲ್ಲೇ ಗುಜರಾತ್ ಎಲೆಕ್ಷನ್ ಗಿರಕಿ ಹೊಡೆಯುತ್ತಿರಬೇಕಾದರೆ, ಅಷ್ಟೇ ಅಲ್ಲ 3-ಡಿ-ಯೂ ಇದೆ ಅಂತ ಮೋದಿ ಹೇಳ್ತಾ ಇದ್ದಾರೆ. 2002ರಲ್ಲಿ ಕೋಮುದ್ವೇಷದ ಕಿ'ಡಿ' ಇದ್ದರೆ, 2007ರಲ್ಲಿ 'ಈ'ಛಿಛ್ಝಿಟಞಛ್ಞಿಠಿ ಸ್ಲೋಗನ್ ಇತ್ತು. ಈಗ ಮೂರನೇ ಸಲ 3-'ಡಿ'
ಈ ಟೆಕ್ನಾಲಜಿ ನಮಗೂ ಬೇಕು ಅಂತ ಅನೇಕರು ದುಂಬಾಲು ಬಿದ್ದಿದ್ದಾರಂತೆ. ಈ ಪಟ್ಟಿಯಲ್ಲಿ ಕರ್ನಾಟಕ ಮತ್ತು ತಮಿಳುನಾಡಿನ ಮಾಜಿ ಮುಖ್ಯಮಂತ್ರಿಗಳು ಫಸ್ಟ್‌ನಲ್ಲಿದ್ದಾರಂತೆ. ಎರಡೆರಡು ಮನೆಯನ್ನು ಏಕಕಾಲಕ್ಕೆ ಮ್ಯಾನೇಜ್ ಮಾಡಬಹುದಲ್ಲ? ಅದು 3ಡಿ ಅನುಕೂಲ. ಹೀಗಾಗಿ ಇವರಿಗೆ ಮೋದಿಯೇ ಆದರ್ಶ.
* * *

ಆದರೆ ಒಂದು ನಿಜ, ಯಾರ‌್ಯಾರಿಗೆ ಯಾರ‌್ಯಾರು ಆದರ್ಶರಾಗುತ್ತಾರೋ ಯಾವ್ಯಾವ ಕ್ಷಣದಲ್ಲಿ ಆದರ್ಶರಾಗುತ್ತಾರೋ ಗೊತ್ತಿಲ್ಲ.

ಮೊನ್ನೆ, ಮಹಾತ್ಮ ಗಾಂಧೀಜಿಯವರೇ ನನ್ನ ರಾಜಕೀಯ ಗುರು ಎಂದು ರಾಹುಲ್‌ಬಾಬಾ ದಿಢೀರಾಗಿ ಹೇಳಿಬಿಟ್ಟಿದ್ದಾರೆ. ಮೋದೀಜಿ ನಾಡಲ್ಲಿ ಯಾಕೆ ರಾಹುಲ್‌ಗೆ ಗಾಂಧೀಜಿ ನೆನಪಾದರೋ? ಪಾಪ, ಹುಡುಗ. ಇನ್ನೂ ರಾಜಕೀಯ ಅಷ್ಟಾಗಿ ಗೊತ್ತಿಲ್ಲ ಅಂತ ಸೋನಿಯಾ ಮಾಫಿ ಮಾಡಬಹುದು.
ಒಂದು ಕಾಲದಲ್ಲಿ ಎದುರಾಳಿಗಳಾದವರೇ ಈಗ ಗುರುಗಳಾಗಬಹುದು. ನಮ್ಮ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನೇ ನೋಡಿ 'ಈ ಸರ್ಕಾರ ಭದ್ರವಾಗಿದೆ, ಯಾವ ಕಾರಣಕ್ಕೂ ಉರುಳೋದಿಲ್ಲ' ಅಂತ ನಗ್ತಾ ನಗ್ತಾ ಹೇಳ್ತಾ ಇದ್ದಾರೆ. ವಿರೋಧಿ ನಾಯಕ ಸಿದ್ದರಾಮಯ್ಯ ಕುಟುಕಿದರೂ, ಕೆಣಕಿದರೂ ಸಿಎಂ ನಗ್ತಾನೇ ಇರ್ತಾರೆ. ಇವರಿಗೇ ಮಾಜಿ ಸಿಎಂ ಸದಾನಂದ ಗೌಡ್ರೇ ಗುರುಗಳು ಇರಬೇಕು.
ಇನ್ನೊಂದು ಕಡೆ, 'ದೋಣಿ ಸಾಗದು ಮುಂದೆ ಹೋಗದು' ಎನ್ನುವ ಸ್ಥಿತಿ ಬಂದರೂ ಕ್ರಿಕೆಟ್ ನಾವಿಕ ದೋನಿ ಮಾತ್ರ ತಲೆಕೆಡಿಸಿಕೊಳ್ತಾನೇ ಇಲ್ಲ. ನಾಯಕತ್ವವನ್ನು ಅವುಚಿ ಹಿಡ್ಕೊಂಡು ಸೈಲೆಂಟಾಗಿದ್ದಾರೆ. ಥೇಟ್ ಪ್ರೈಮ್ ಮಿನಿಸ್ಟ್ರು ಮನಮೋಹನ್ ಸಿಂಗ್ ಥರಾನೇ.
ಇನ್ನೊಂದು ವಿಷ್ಯ 'ಮೀಡಿಯಾಗಳು ಬರೆದ ಮಾತ್ರಕ್ಕೆ ನಾನ್ಯಾಕೆ ರಾಜೀನಾಮೆ ನೀಡಬೇಕು. ನಾನೇನು ತಪ್ಪು ಮಾಡಿಲ್ಲ. ಇದೆಲ್ಲ ವಿರೋಧಿಗಳ ಕುತಂತ್ರ' - ಈ ಡೈಲಾಗ್ ಕೇಳಿದ ತಕ್ಷ ಯಡಿಯೂರಪ್ಪ ಸಾಹೇಬ್ರ ಡೈಲಾಗ್ ಎಂದು ಥಟ್ ಅಂತ ನೀವು ಹೇಳಬಹುದು. ಉಹುಂ, ಇದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರ ಉವಾಚ. ಯಡಿಯೂರಪ್ಪ ಅವರ ಭಾಷಣ ಕೇಳಿ ಕೇಳಿ ಈಗ ತಾವು ಅದನ್ನೇ ಅನುಕರಿಸ್ತಾ ಇದ್ದಾರೆ. ಅಂದರೆ, ಗಡ್ಕರಿಗೂ ಯಡಿಯೂರಪ್ಪ ಆದರ್ಶ ಅಂದ ಹಾಗಾಯಿತು!
* * *

ಯಡಿಯೂರಪ್ಪ ಅಂದಾಕ್ಷಣ ಬಿಜೆಪಿಯವರಿಗೆ ರೋಮಾಂಚನವಾಗುತ್ತದೆ. ಭಯದಿಂದಲೋ, ಖುಷಿಯಿಂದಲೋ ಗೊತ್ತಿಲ್ಲ (ಈ ಬಗ್ಗೆ ಸ್ಪಷ್ಟೀಕರಣ ನೀಡಲು ಈಶ್ವರಪ್ಪ ಅವರೇ ಸೂಕ್ತ ವ್ಯಕ್ತಿ) ಆದರೆ ಪಕ್ಷಕ್ಕೆ ಇವರೇ ಪ್ರಳಯಾಂತಕ ಆಗಿಬಿಡುತ್ತಾರೆ ಅಂತನ್ನೋದು ಬಿಜೆಪಿಯವರ ಸರ್ವಾನುಮತದ ಅಭಿಪ್ರಾಯ. ಪ್ರಳಯ ಆಗುತ್ತೋ, ಬಿಡುತ್ತೋ ಬಿಜೆಪಿಯವರು ಮಾತ್ರ ಅದಕ್ಕೆ ಸಜ್ಜಾಗಿದ್ದಾರೆ. ಪ್ರಳಯ ಆದ್ರೆ ಆಗಲಿ ಬಿಡಿ- ಧೂಳಿನಿಂದ ಎದ್ದು ಬರುತ್ತೇನೆ ಅಂತ ಜೆಡಿಎಸ್‌ನ ದೇವೇಗೌಡ್ರು ಅಂದುಕೊಳ್ತಾ ಇರಬಹುದು. ಬಿಎಸ್‌ಆರ್ ಪಕ್ಷದವರು - ಆಂಧ್ರದಲ್ಲಿ ಪ್ರಳಯ ಆದ್ಮೇಲೆ ನೋಡೋಣ ಅಂತ ಸುಮ್ಮನಿದ್ದಾರಂತೆ. ಅರೆರೆ, ಪ್ರಳಯ ಇನ್ನೂ ಆಗಿಲ್ಲ- ಸಿದ್ದರಾಮಯ್ಯ ಆಗಲೇ ಪಂಚೆ ಕಟ್ಕೊಂಡು ರೆಡಿಯಾಗಿಬಿಟ್ಟಿದ್ದಾರೆ; ಕೃಷ್ಣ ಎಲ್ಲಿ ಹೋದ್ರು?
* * *

ಕೊನೇ ಮಾತು: ಪ್ರಳಯ ಆಗುತ್ತೋ ಬಿಡುತ್ತೋ ನಂತರದ ಮಾತು. ಆದರೆ ಯುಪಿಎ ಸರ್ಕಾರಕ್ಕೆ ಮಾತ್ರ ಪ್ರಳಯ ತರೋದು ಯಾವುದು ಗೊತ್ತಾ?
-ಅದೇ 'ಮಾಯಾ'ನ್ ಕ್ಯಾಲೆಂಡರ್. ಒಂದಲ್ಲ ಒಂದು ತರಲೆ ಮಾಡ್ತಾನೆ ಇರ್ತಾರಲ್ಲ ಆ ಮಾಯಾವತಿ!
Dec 1, 2012,
ಸೀಕ್ರೆಟ್ ಡೈರಿಯ ಹಾಳೆಯಲಿ...(ವೆರಿ ವೆರಿ ಸ್ಸಾರಿ. ಇನ್ನೊಬ್ಬರ ಪರ್ಸನಲ್ ವಿಷ್ಯಕ್ಕೆ ತಲೆ ಹಾಕೋದು ಸರಿಯಲ್ಲ ಅಂತ ನಮಗೂ ಗೊತ್ತು. ಆದರೆ, ನಮ್ಮ ಮಾ.ಮು. ಸೆಡ್ಯೂರಪ್ಪ ಅವರ ಪರ್ಸನಲ್ ಮತ್ತು ಸೀಕ್ರೆಟ್ ಡೈರಿಯ ಹಾಳೆಗಳು ನಮಗೆ ಸಿಕ್ಕಿಬಿಟ್ಟಿವೆ. ಬೇಡ, ಬೇಡ ಅಂದ್ರೂನೂ ಅದನ್ನು ಕದ್ದು ಮುಚ್ಚಿ ಓದಿಯಾಗಿದೆ. ಟೈಮಿದ್ದರೆ ನೀವೂ ಓದ್ಕೊಂಬಿಡಿ. ಒಂದು ಕಂಡೀಷನ್... ಓದಿದ ಮೇಲೆ ಇದನ್ನ ಯಾರಿಗೂ ಹೇಳ್ಬೇಡಿ ಅಷ್ಟೇ...ಏನಿದ್ರೂನೂ ಅದು ಇನ್ನೊಬ್ಬರ ಪರ್ಸನಲ್ ವಿಷ್ಯ ಅಲ್ವೇ?)

ನನಗೆ ಡೈರಿ ಬರೆಯೋ ಅಭ್ಯಾಸ ಅಂತ ಏನೂ ಇರ‌್ಲಿಲ್ಲ. ಒಂದ್ಸಲ ಜೈಲಿಗೆ ಹೋಗಿ ಬಂದ್ಮೇಲೆ ಈ ಅಭ್ಯಾಸ ಬೆಳೆಸಿಕೊಂಡೆ. ಈಗ ನಾನು ಹೇಳಿದ್ದು, ಮಾಡಿದ್ದೆಲ್ಲವನ್ನೂ ಬರೆದಿಟ್ಟುಕೊಳ್ತಾ ಇದ್ದೇನೆ. ಈಚೆಗೆ ನಾನು ಏನು ಮಾತಾಡ್ತಾ ಇದ್ದೇನೆ ಅನ್ನೋದೇ ಕೆಲವೊಮ್ಮೆ ಮರೆತು ಹೋಗಿಬಿಡುತ್ತಾ ಇದೆ. ಅವತ್ತು ನಾನು ಅಡ್ವಾಣಿ- ವಾಜಪೇಯಿ ಅವರಿಬ್ಬರೂ ನನ್ನ ಎರಡು ಕಣ್ಣುಗಳಿದ್ದ ಹಾಗೆ ಅಂತ ಹೇಳ್ತಾ ಇದ್ದೆನಂತೆ. ಹಾಗಂತ ಮೀಡಿಯಾದವರು ಬರ್ಕೊತಾ ಇದ್ದಾರೆ. ನನಗಂತೂ ನೆನಪಿಲ್ಲ. ನನ್ನತ್ರ ಹಾಗೆ ಹೇಳಿದ ಬಗ್ಗೆ ಯಾವ ರೆಕಾರ್ಡೂ ಇಲ್ಲ. ನಾನಾಗ ಡೈರಿ ಬರೀತಾ ಇರ್ಲಿಲ್ಲ ಅಲ್ವಾ?

ಡೈರಿ ಬರೀಲಿಕ್ಕೆ ಶುರು ಮಾಡಿದ ಮೇಲೆ ಎಲ್ಲ ಕರೆಕ್ಟಾಗಿ ರೆಕಾರ್ಡ್ ಆಗ್ತಾ ಇದೆ. ಸದಾನಂದು ನನಗೆ ಎಲ್ಲಿ ಏನು ಮಾತು ಕೊಟ್ಟರು, ಯಾವಾಗ ನಗುನಗುತ್ತಾ ಕೈ ಕೊಟ್ಟರು. ಈಶ್ವರು ನನಗೆ ಯಾವ ಚೂರೀಲಿ ಬೆನ್ನಿಗೆ ಇರಿದ್ರು? ಆ ಮಹಾನುಭವ ಶೆಟ್ಟರು ನಮ್ಮವರೇ ಆಗಿದ್ರೂನು ನನ್ನನ್ನ ಹೇಗೆ ಆಟ ಆಡಿಸ್ತಾ ಇದ್ದಾರೆ? ಸದಾ ನಂಜೊತೆಗೇ ಇರ್ತಿದ್ದ ಆ ಸೋಮಣ್ಣ, ಕಟ್ಟಾ, ಕೃಷ್ಣಯ್ಯ ಶೆಟ್ಟಿ, ಯೋಗೇಶ್ವರ್ ಎಲ್ಲ ಯಾಕೆ ದೂರ ಸರೀತಾ ಬಂದರು ಅನ್ನೋದೆಲ್ಲ ಗೊತ್ತು. ಎಲ್ಲವನ್ನೂ ಡೈರೀಲಿ ಬರೀತಾ ಇದ್ದೀನಿ. ಇದೆಲ್ಲವನ್ನೂ ಜನರ ಮುಂದೆ ಇಡ್ತೇನೆ. . . ಟೈಮ್ ಬರಬೇಕು ಅಷ್ಟೇ.

ಹೇಳಿ ಕೇಳಿ, ಇದು ರಾಮನ ಭಂಟ ಆಂಜನೇಯನ ನಾಡು. ಈ ನಾಡಿನ ಜನ ಯಾರಿಗೂ ದ್ರೋಹ ಮಾಡೋದನ್ನ ಕ್ಷಮಿಸೊಲ್ಲ. ಅವತ್ತು ಆ ಅಪ್ಪ- ಮಕ್ಕಳು ನನಗೆ ದ್ರೋಹ ಮಾಡಿದ್ರು. . . ಅವರ ಕತೆ ಏನಾಯಿತು ಅಂತ ಎಲ್ಲರಿಗೂ ಗೊತ್ತಿದೆ. ಈಗ ನೋಡಿ, ನಮ್ಮವರೇ ನನಗೆ ಬೆನ್ನಿಗೆ ಚೂರಿ ಹಾಕಿದರು. ಇವರನ್ನೆಲ್ಲ ಜನ ಕ್ಷಮಿಸ್ತಾರಾ?

ನಾನು ಹುಟ್ಟು ಹಾಕಲು ಹೊರಟ ಹೊಸ ಪಕ್ಷ ಆಗೊಲ್ಲ, ಹೋಗಲ್ಲ ಅಂತ ಎಲ್ಲರೂ ಮಾತಾಡ್ತಾ ಇದ್ದಾರೆ. ಬಿಜೆಪಿಯ ಕಲ್ಯಾಣ್‌ಸಿಂಗ್, ಉಮಾಭಾರತಿ ಕತೆ ಹೇಳ್ತಾರೆ. ಕರ್ನಾಟಕದಲ್ಲಿ ಅರಸು, ಬಂಗಾರಪ್ಪ, ಗುಂಡೂರಾವ್ ಸ್ಟೋರಿನ ನೆನಪಿಸ್ತಾರೆ. ಅದೆಲ್ಲವೂ ನಂಗೊತ್ತು. ಪಾರ್ಟಿ ಕಟ್ಟಿಕೊಂಡು ಓಡಾಡೋದು ಸುಲಭದ ಮಾತೇನಲ್ಲ. ಒಂದಂತೂ ನಿಜ. ಪ್ರಾಮಾಣಿಕವಾಗಿ ಹೇಳೋದಾದ್ರೆ, ಈ ಹೊಸ ಪಕ್ಷ ಕಟ್ಟುವ ಉತ್ಸಾಹವೇನೂ ನನಗೆ ಇಲ್ಲ. ಬಿಜೆಪಿಯಲ್ಲೇ ಉಳ್ಕೊಳ್ಳೊಕೇ ಈಗಲೂ ರೆಡಿ ಇದ್ದೆ. ಅದಕ್ಕೆ ಒಂದಷ್ಟು ಕಂಡೀಷನ್ ಹಾಕಿದ್ದೆ. ಒಂದು- ಪಕ್ಷದ ಹೈಕಮಾಂಡ್ ನಾಯಕರೇ ಮುಂದೆ ನಿಂತುಕೊಂಡು ನನ್ನ ಮೇಲಿರುವ ಎಲ್ಲ ಕೇಸ್‌ಗಳನ್ನ ವಾಪಸ್ ಮಾಡಿಸಬೇಕು. ಇನ್ನೊಂದು- ಬಿಜೆಪಿಯಿಂದ ಅಡ್ವಾಣಿ, ಅನಂತು, ಸದಾನಂದು, ಈಶ್ವರು.. ಹೀಗೆ ಹಲವು ನಾಯಕರನ್ನು ಉಚ್ಚಾಟಿಸಬೇಕು. (ಲಿಸ್ಟ್ ಇನ್ನೂ ದೊಡ್ಡದ್ದಿದೆ) ಮತ್ತೆ, ಗುಜರಾತಿನ ಮೋದಿಯವರನ್ನ ಪ್ರೈಮ್ ಮಿನಿಸ್ಟ್ರು ಮಾಡಬೇಕು ಅಂತ...

ಅದೇಕೋ ಏನೋ, ಅನಂತು ಹೆಸರು ಕೇಳಿದ್ರೆ ರಕ್ತ ಕೊತ ಕೊತ ಕುದೀತದೆ. ಬ್ಲಡ್ ಪ್ರೆಷರ್ ಏರಿಬಿಡುತ್ತೆ. ಎದುರುಗಡೆ ಇರುವ ಚೇರ್, ಟೇಬಲ್‌ಗಳಿಗೆಲ್ಲ ಜೀವ ಬಂದಿದೆಯೇನೋ ಅನ್ನಿಸಿಬಿಡುತ್ತೆ.

ಇವರೆಲ್ಲ ನನ್ನನ್ನು ಅಧಿಕಾರದಿಂದ ಕೆಳಗೆ ಇಳಿಸಿ ಆಟ ಆಡಿಸ್ತಿರೋದನ್ನ ನೋಡಿದರೆ ಬೇರೆ ಪಕ್ಷಕ್ಕೆ ಹೋಗೋಣ ಅಂತನ್ನಿಸಿದ್ದು ಮಾತ್ರ ನಿಜ. ಉಳಿದದ್ದೆಲ್ಲ ನನ್ನ ಕಂಟ್ರೋಲ್‌ಗೆ ಸಿಗದೆ ಮುಂದೆ ಹೋಗ್ತಾ ಇದೆ. ಈಗ ಹೊಸ ಪಕ್ಷದ ಎದುರಲ್ಲಿ ಬಂದು ನಿಂತುಕೊಂಡಿದ್ದೇನೆ. ಅನಿವಾರ‌್ಯವಾಗಿ ಹಾವೇರಿಗೆ ಧುಮುಕುತ್ತಿದ್ದೇನೆ. ಏನಾಗುತ್ತೋ ನೋಡಬೇಕು. ಮುಳುಗುತ್ತೇನೋ, ತೇಲುತ್ತೇನೋ ಅನ್ನೋದನ್ನ ಆ ವೈಷ್ಣೋದೇವಿಯೇ ನೋಡಿಕೊಳ್ತಾಳೆ; ಆರು ಕೋಟಿ ಕನ್ನಡಿಗರ ಆಶೀರ್ವಾದ ಇರೋ ತನಕ ಈ ಸೆಡ್ಯೂರಪ್ಪನ ಏನೂ ಮಾಡೋಕೆ ಆಗಲ್ಲ.

ಇನ್ನೊಬ್ಬರು ನನ್ನ ಹಳೇ ಮಿತ್ರ ಈಶೂನ ನೆನಪಿಸಿಕೊಂಡಾಗ ಮೈ ಉರಿಯುತ್ತೆ. ಅವ್ರ ನೆಮ್ಮದಿ ಹಾಳು ಮಾಡಬೇಕಾದರೆ ಇರೋದು ಒಂದೇ ದಾರಿ. ಸುಮ್ ಸುಮ್ನೆ ಸಿದ್ದರಾಮಣ್ಣನ ಹೊಗಳ್ತಾ ಇರ್ಬೇಕು. ಅದನ್ನೇ ಮಾಡ್ತಾ ಇದ್ದೀನಿ. ಸಾಧ್ಯ ಆದ್ರೆ ಸಿದ್ದರಾಮಣ್ಣನ ಸಿಎಂ ಮಾಡೋಕೋ ರೆಡಿ ಇದ್ದೀನಿ.

ಇವರೆಲ್ಲರೂ ನಮ್ಮ ಪಕ್ಷದ ಧೀಮಂತ ನಾಯಕರ ಕಿವಿ ಚುಚ್ಚಿದರು. ನನ್ನನ್ನ ಅಮಾನವೀಯವಾಗಿ ಕಿತ್ತು ಹಾಕಿದರು. ನಾನೇನು ಅಂಥ ತಪ್ಪು ಮಾಡಿದೆ? ಏನೋ ನಮ್ಮ ಮಕ್ಳ ಕಾಲೇಜಿಗೆ ಡೊನೇಷನ್ ಪಡ್ಕೊಂಡೆ. ಈ ನೇಷನ್ನೇ ನಡೀತಾ ಇರೋದು ಡೊನೇಷನ್‌ನಿಂದ. ಹೈಕಮಾಂಡ್ ನಾಯಕರಿಗೆ ಎಷ್ಟೆಷ್ಟು ಡೊನೇಷನ್ ಕೊಟ್ಟೆ ಅಂತನ್ನೋದನ್ನಾದರೂ ನೆನಪಿಟ್ಕೊಬಾರದಾ? ಹೋಗ್ಲಿ ಬಿಡಿ, ನಮ್ಮ ನಾಯಕ ನಿತಿನ್ ಗಡ್ಕರಿ ಥರಾ ಕಾರ್ ಡ್ರೈವರ್‌ಗೆ, ಅಕೌಂಟೆಂಟ್‌ಗೆ ಎಲ್ಲ ಕೊಟ್ನಾ. ಏನೋ ನಮ್ಮ ಮಕ್ಳು, ಸಂಸಾರ ಚೆಂದಾಗಿರಲಿ ಅಂತ ಸೊಲ್ಪ ಸೊಲ್ಪ ಇಟ್ಕೊಂಡೆ. ಅದ್ನೆ ಇಷ್ಟು ದೊಡ್ಡ ಇಶ್ಯೂ ಮಾಡೋದಾ?

ಆ ವಿಚಾರದಲ್ಲಿ ಸೋನಿಯಾ ಮೇಡಂ ನಿಜಕ್ಕೂ ಅಪರಂಜಿ. ಅಳಿಯನ ಮೇಲೆ ಎಂತೆಂಥ ಆರೋಪ ಬಂದ್ರೂ ಸೈಲೆಂಟಾಗಿದ್ರು. ಸಿಕ್ರೆ ಅಂಥ ಅತ್ತೆ ಸಿಗಬೇಕು. ಪಾಪ, ಪ್ರೈಮ್ ಮಿನಿಸ್ಟ್ರು ಮನಮೋಹನ್ ಸಿಂಗ್‌ರನ್ನ ಎಷ್ಟು ಚೆನ್ನಾಗಿ ನಡಸ್ಕೊತಾ ಇದ್ದಾರೆ. ನಮ್ಮ ಹೈಕಮಾಂಡೋ.. ಛೀ.. ನಾನು ಸಿಎಂ ಆಗಿದ್ದಾಗ ಎಷ್ಟು ಕಿರಿಕ್ ಕೊಟ್ರು. ಡೆಲ್ಲಿಗೆ ಹೋಗಿ ನಾನು ಕಣ್ಣೀರು ಹಾಕಿಬಿಟ್ಟೆ. ಅದೆಲ್ಲ ಎಲ್ಲಿ ಮರೆಯೋಕಾಗುತ್ತೆ? ಕಣ್ಣು ಮುಚ್ಚಿದರೆ ಸಾಕು ಆ ಕಣ್ಣೀರು, ಆಯಮ್ಮ ಮಿನಿಸ್ಟ್ರು ಎಲ್ಲರೂ ಕಣ್ಣ ಮುಂದೆ ಬರ್ತಾರೆ.

ಅವರದು ಮಹಿಳೆಯರನ್ನು ಗೌರವಿಸುವ ಪಕ್ಷವಂತೆ. ಯತ್ರ ನಾರ‌್ಯಸ್ತು ಪೂಜ್ಯತೇ ರಮಂತೇ ತತ್ರ ದೇವತಾ ಎಂದು ಹೇಳಿಕೊಳ್ಳುವ ಆ ಪಾರ್ಟಿಯವರು ನಮ್ಮ ಕ್ಯಾಬಿನೆಟ್‌ನ ಒಬ್ಬ ಮಹಿಳಾ ಸಚಿವರನ್ನು ಎಷ್ಟು ನಿರ್ದಾಕ್ಷಿಣ್ಯವಾಗಿ ಕಿತ್ತು ಹಾಕಿದರು ಅನ್ನೋದು ಮರೆಯೋಕಾಗುತ್ತೆಯೇ?

ಈ ತುಂಡು ಹೈಕ್ಳ ಸಾವಾಸ ಸಾಕಾಗಿದೆ ಕಣ್ರೀ. ಅದಕ್ಕಾಗಿ ಹೊಸ ಪಕ್ಷ ಕಟ್ತಾ ಇದ್ದೀನಿ. ಯಾರು ಬೇಕಾದ್ರು ಸೇರಿಸಿಕೊಳ್ತೀನಿ. ಬಟ್ ಒಂದು ಕಂಡೀಷನ್ ಭಂಡರಾಗಿರಬೇಕು ಅಷ್ಟೇ. ಭಂಡತನ ಅಂದರೆ ಅಂತಿಂಥ ಭಂಡತನ ಅಲ್ಲ. ನಾಳೆ ಬಿಜೆಪಿ ಜತೆ ಹೋಗ್ಬೇಕು ಅಂದಾಗ ಸೈ ಅನ್ಬೇಕು, ಕಾಂಗ್ರೆಸ್‌ಗೂ ಜೈ ಅನ್ಬೇಕು. ಅಂಥ ಭಂಡರನ್ನು ಸೆಲೆಕ್ಟ್ ಮಾಡಲಿಕ್ಕಾಗಿಯೇ ರೇಣುಕಾಚಾರ‌್ಯ ಸೆಲೆಕ್ಷನ್ ಕಮಿಟೀನ ರೆಡಿ ಮಾಡಿದ್ದೀನಿ. . .

ಕೊನೇಮಾತು: ನಮ್ಮ ದೇಶದ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಮುಖ್ಯಮಂತ್ರಿ ಇನ್ನಿಬ್ಬರ ಡೈರಿಗಳ ಕೆಲವು ಹಾಳೆಗಳೂ ಸಿಕ್ಕಿವೆ.

- ಆದರೆ ಪುಟಗಳೆಲ್ಲ ಖಾಲಿ ಖಾಲಿ..
Nov 17, 2012,
ನಾಯಕರ 'ಮೇಲ್‌ ' ಆಟ
ಬಿಜೆಪಿಯಲ್ಲಿ ಗಂಡಸರೇ ಇಲ್ಲ ಅಂತ ಸಂಸತ್ ಸದಸ್ಯರೊಬ್ಬರು ಹೇಳಿದ್ದೇ ತಡ, ಗಂಡಸರು ಯಾರು ಅನ್ನೋದನ್ನ ತೋರುಸ್ತೀವಿ ಅಂತ ಆ ಪಕ್ಷದ ಅಧ್ಯಕ್ಷರು ಬಹಿರಂಗವಾಗಿ ಹೇಳಿದ್ದಾರೆ. ಇಷ್ಟಕ್ಕೂ ಅದ್ಯಾಕೆ ಈಗ ಇದ್ದಕ್ಕಿದ್ದ ಹಾಗೆ ಆ ಪಕ್ಷದಲ್ಲಿ ಇಂಥದ್ದೊಂದು ಸಮಸ್ಯೆ ಶುರುವಾಯಿತೋ ಗೊತ್ತಿಲ್ಲ. ಒಳಗೊಳಗೊಳಗೊಳಗೊಳಗೆ ಇರಬೇಕಾದ ಇಂಥ ವಿಷಯಗಳನ್ನೆಲ್ಲ ಇವರು ಇಷ್ಟೊಂದು ಬಟಾಬಯಲು ಮಾಡ್ತಿರೋದನ್ನ ನೋಡಿದರೆ, ಪಾಪ ಸಮಸ್ಯೆ ಗಂಭೀರವಾಗಿಯೇ ಇರಬೇಕು ಅಂತ ಅನ್ನಿಸುತ್ತದೆ. ಅಥವಾ ಬಿಜೆಪಿಯವರಿಗೆ 'ಹಿಡನ್ ಅಜೆಂಡಾ' ಇರುತ್ತೆ ಅಂತಾರಲ್ಲ, ಅದೇ ಇದಿರಬಹುದಾ? ಏನೋಪ!
* * *
ಅದಿರಲಿ, ಗಂಡಸರೆಲ್ಲ ಕರ್ನಾಟಕ ಜನತಾ ಪಕ್ಷಕ್ಕೆ (ಕೆಜೆಪಿ) ಹೋಗ್ತಾ ಇದ್ದಾರೆ; ಗಂಡಸರು ಅಲ್ಲದವರು ಮಾತ್ರ ಭಾರತೀಯ ಜನತಾ ಪಕ್ಷದಲ್ಲಿ (ಬಿಜೆಪಿ) ಉಳಕೊಳ್ಳುತ್ತಾರೆ ಎನ್ನುವುದು ಈ ಮಾತಿನ ಅರ್ಥವೇ? ಹಾಗೆಂದು ಅರ್ಥ ಮಾಡಿಕೊಳ್ಳುವುದಾದರೆ ನಮ್ಮನ್ನಾಳುವವರು ಗಂಡಸರೋ, ಅಲ್ಲವೋ - ಅಂದರೆ ಬಿಜೆಪಿಯೋ, ಕೆಜೆಪಿಯೊ. . . ಹ್ಹು ಹ್ಹು.. ಒಟ್ಟಾರೆ ಕನ್‌ಫ್ಯೂಷನ್.
ಯಡಿಯೂರಪ್ಪ ಹೇಳಿದ ಹಾಗೆ ಈಗ ನಮ್ಮ ರಾಜ್ಯದಲ್ಲಿ ಇರುವುದು ಬಿಜೆಪಿ-ಕೆಜೆಪಿ ಸಮ್ಮಿಶ್ರ ಸರ್ಕಾರ ಅಂತ ಭಾವಿಸಿಕೊಳ್ಳುವುದಾದರೆ ಇದೊಂದು ಥರ ದಾಂಪತ್ಯ ಸರ್ಕಾರವೇ ಇರಬೇಕು. ಗಂಡ ಹೆಂಡಿರು ಎಂದ ಮೇಲೆ ಅಲ್ಲಿ ಪ್ರೀತಿ ಇರುತ್ತೆ, ಜಗಳ ಇರುತ್ತೆ. ಹೊಡೆದಾಟ ಇರುತ್ತೆ, ಒಮ್ಮೊಮ್ಮೆ ಕೊಲೆಯೂ ಆಗುತ್ತೆ. ಹಾಗಂತ ಇದನ್ನು ಒಂಥರಾ ಮನೆ ಜಗಳ ಅಂತ ಬಣ್ಣಿಸಿಕೊಂಡು ಸುಮ್ಮನಿರೋಕೂ ಆಗಲ್ಲ. ಏಕೆಂದರೆ, ಈ ಗಂಡ-ಹೆಂಡತಿ ಜಗಳ ಉಂಡು ತೇಗೋ ತನಕ. ಕರ್ನಾಟಕವನ್ನು ನುಂಗಿ ನೀರು ಕುಡಿದ ಮೇಲೆ ಇವರು ಜಗಳ ಆಡಿದರೆಷ್ಟು, ಬಿಟ್ಟರೆಷ್ಟು?
* * *
ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಎಲ್ಲಿಯೂ ಹೆಚ್ಚು ಮಾತನಾಡದೇ ಇರೋದನ್ನ ನೋಡಿದರೆ ಪಾಪ ಗಂಡಸಿನ ಥರಾನೇ ಕಾಣಿಸ್ತಾರೆ. ಹಂಗಿದ್ರೆ ಬಿಜೆಪಿಯಲ್ಲಿ ಗಂಡಸರಿದ್ದಾರೆ ಎಂದ ಹಾಗಾಯಿತು. ಅರೆ, ಮತ್ಯಾಕೆ ಬಿಜೆಪಿ ಬಗ್ಗೆ ಇಷ್ಟೊಂದು ಜೆಂ-ಢರ್ ಕಟಕಿ?

ಇದೆಲ್ಲ ಬಿಜೆಪಿಯವರ ಲೆಗ್ 'ಪುಲ್ಲಿಂಗ' ಅಂತ ಅಂದುಕೊಂಡು ಸುಮ್ಮನಾಗೋಣ ಬಿಡಿ.
ನಾವೇನು ತೆಪ್ಪಗಿರಬಹುದು. ಆದರೆ ಅದೇ ಪಕ್ಷದ ಕಿಸ್ಸಿಂಗ್ ಕುಮಾರರು, ಬ್ಲೂ ಫಿಲಂ ಬಾಲರು, ರೇಪ್‌ಕೇಸ್ ರಸಿಕರು ಸುಮ್ಮನಾಗ್ತಾರಾ? ನಾವೇನು ಗಂಡಸರಲ್ವಾ ಅಂತ ಸಾಕ್ಷಿ ಸಮೇತ ಮುಂದೆ ಬಂದರೆ ಹೈಕಮಾಂಡ್ ಮಾತ್ರ ಲಬೋ ಲಬೋ.
* * *
ಯಾರು ಗಂಡಸು, ಯಾರು ಹೆಂಗಸು ಎನ್ನುವ ಗೊಂದಲದಲ್ಲೇ ಸಿಕ್ಕಿ ಹಾಕಿಕೊಂಡಿರುವ ನಮ್ಮನ್ನಾಳುವ ಯಾವ ನಾಯಕರಿಗೂ 'ನಾನೊಬ್ಬ ಪ್ರಾಮಾಣಿಕ' ಎಂದು ಎದೆತಟ್ಟಿ ಹೇಳುವ ಧೈರ‌್ಯ ಈಗ ಇಲ್ಲ. ಇದಕ್ಕೆ ಇವರ ಮುಖಕ್ಕೆ ಅಂಟಿಕೊಂಡಿರುವ ಹಗರಣ, ಕರಪ್ಷನ್‌ಗಳು ಮಾತ್ರ ಕಾರಣ ಅಲ್ಲ. ಎಲ್ಲರಿಗೂ ಈ ಕ್ಷಣದಲ್ಲಿ ಪಾಪ ಅಥ್ಲೀಟ್ ಪಿಂಕಿ ಪ್ರಾಮಾಣಿಕ್ ನೆನಪಿಗೆ ಬರುತ್ತಾರೆ. ಹೇಗೆ 'ಪ್ರಾಮಾಣಿಕ' ಅಂತನ್ನೋದು?
* * *
ರೂ'ಲಿಂಗ' ಪಕ್ಷದ ಈ ಜೆಂಡರ್ ಪ್ರಾಬ್ಲಂ ಡೆಂಘೀ ಜ್ವರ ತರಹ ರಾಜ್ಯದ ಮನೆ ಮನೆಗೆ ಹರಡುವ ಸಾಧ್ಯತೆ ಇದೆ. ಆಡಳಿತ ನಡೆಸುತ್ತಿರುವ ಬಿಜೆಪಿಯಲ್ಲಿ ಗಂಡಸರಿಲ್ಲ ಅನ್ನೋ ವಾದವನ್ನು ಮನೆ ಮನೆಯ ಹೆಂಗಸರೆಲ್ಲ ಗಟ್ಟಿಯಾಗಿ ಅಪ್ರೂವ್ ಮಾಡಬಹುದು. ರಾಜ್ಯವನ್ನೇ ಹೆಂಗಸರು ಆಳ್ತಾರೆ; ಅಂದ ಮೇಲೆ ಮನೇನಾ ನಮಗೆ ಆಳೋಕೆ ಆಗಲ್ಲವೇ, ನಮಗೆ ಅಧಿಕಾರ ಕೊಡಿ ಅಂತ ಏನಾದ್ರೂ ಸಾಮೂಹಿಕವಾಗಿ ಕೇಳಿಬಿಟ್ರೆ... ಯಡಿಯೂರಪ್ಪ ಥರ ಅಧಿಕಾರ ರುಚಿ ಹಿಡಿದುಕೊಂಡ ಪುರುಷ ಮಹಾಶಯರೆಲ್ಲ ಬೇರೊಂದು ಪಕ್ಷ ಕಟ್ಟಲು ಹೊರಟುಬಿಟ್ಟಾರು. ಆಗ ಎಲ್ಲ ಕಡೆ ಪಕ್ಷಾಂತರ . . . ಅಲ್ಲಲ್ಲ... ಗಂಡಾಂತರ!
* * *
ಆದರೆ ಎಲ್ಲ ಹೆಂಗಳೆಯರಿಗೆ ಸಮಾಧಾನ ತರುವ ವಿಚಾರ ಒಂದಿದೆ. ಅದೆಂದರೆ, ಆಂಟಿ ಕರಪ್ಷನ್ ತಂಡದ ನಾಯಕ ಅರವಿಂದ ಕೇಜರಿವಾಲ್ ತಾವು ಬಿಜೆಪಿ ಮತ್ತು ಕಾಂಗ್ರೆಸ್‌ನವರನ್ನು ಕಚ್ಚುವ ಡೆಂಘೀ ಸೊಳ್ಳೆ ಎಂದು ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ. ತಾವು ಹೆಣ್ಣು ಸೊಳ್ಳೆಯೋ, ಗಂಡು ಸೊಳ್ಳೆಯೋ ಎಂದು ಸ್ಪಷ್ಟವಾಗೇನೂ ಹೇಳುವ ಸಾಹಸ ಏನೂ ಮಾಡಲಿಲ್ಲ. ಬಟ್, ಡೆಂಘೀ ಜ್ವರ ತರುವುದು ಎಡಿಸ್ ಈಜಿಪ್ಟಿ ಎಂಬ ಸೊಳ್ಳೆ ಹೆಣ್ಣು ಎನ್ನುವುದರಲ್ಲಿ ಡೌಟೇ ಇಲ್ಲ. ಹೀಗಾಗಿ, ಕೇಜರಿವಾಲ್ ಹೆಣ್ಣು ಸೊಳ್ಳೆಗೆ ತಮ್ಮನ್ನು ಹೋಲಿಸಿಕೊಂಡು ಗಂಡಸು ನಾಯಕರಿಗೆಲ್ಲ ಡೆಂಘೀ ಜ್ವರ ಹುಟ್ಟಿಸಿಬಿಟ್ಟಿದ್ದಾರೆ.

ಏಕೋ ಏನೋ, ಆ ಜ್ವರಕ್ಕೆ ಮೊದಲಿಗೆ ನಡುಗಿದ್ದು ದಿಗ್ವಿಜಯ ಸಿಂಗೇ ಇರಬೇಕು. ಕೇಜರಿವಾಲ್ ಮತ್ತು ರಾಖಿ ಸಾವಂತ್ ಇಬ್ಬರನ್ನು ಒಂದೇ ಮಾತಿನಲ್ಲಿ ಹೋಲಿಸಿ ನಿವಾಳಿಸಿಬಿಟ್ಟಿದ್ದಾರೆ. ಇಬ್ಬರೂ ಎಕ್ಸ್‌ಪೋಸ್ ಮಾಡೋಕೆ ಹೋಗ್ತಾರೆ... ಒಳಗೆ ನೋಡಿದರೆ ಖಾಲಿ ಖಾಲಿ ಎಂದು ಸಿಂಗ್ ನೀಡಿರುವ ಹೇಳಿಕೆಯೂ ಒಂಥರಾ ಅಔಉ - ಆಟನೇ ಅಲ್ವೇ?

ಗುಜರಾತ್‌ನ ಪ್ರೈಮ್ ಮಿನಿಸ್ಟ್ರು ನರೇಂದ್ರ ಮೋದಿ ಈಚೆಗೆ ಕೇಂದ್ರದ ಮಂತ್ರಿ ಶಶಿ ತರೂರ್ ಮಾಜಿ ಪ್ರೇಯಸಿ, ಹಾಲಿ ಹೆಂಡತಿ ಸುನಂದಾ ಪುಷ್ಕರ ಬಗ್ಗೆ 50 ಕೋಟಿ ಗರ್ಲ್ ಫ್ರೆಂಡ್ ಅಂತ ಕರೆದಿರುವುದನ್ನು ನೆನಪಿಸಿಕೊಳ್ಳಿ. ಹಳ್ಳಿಯ ಹೆಣ್ಣುಮಕ್ಕಳು ಆಕರ್ಷಕರಾಗಿ ಕಾಣಿಸ್ತಾ ಇಲ್ಲ ಅಂತ ಉತ್ತರ ಪ್ರದೇಶದ ಪ್ರೈಮ್ ಮಿನಿಸ್ಟ್ರು ಮುಲಾಯಂ ಸಿಂಗ್ ಯಾದವ್ ಹೇಳಿರೋದು, ಹಳೆಯ ಹೆಂಡತಿ ಆಕರ್ಷಣೆ ಕಳಕೊಳ್ಳುತ್ತಾಳೆ ಎಂದು ಕೇಂದ್ರದ ಮಂತ್ರಿ ಶ್ರೀ ಪ್ರಕಾಶ್ ಜೈಸ್ವಾಲ್ ಹೇಳಿದ್ದರು. ಇದು ಎಲ್ಲವೂ ಅಔಉ - ಆಟನೇ!

ಇದೆಲ್ಲ ನೋಡಿದರೆ ನಮ್ಮ ಪೊಲಿಟಿಕ್ಸ್‌ನಲ್ಲಿ ಇನ್ನೂ ಪುರುಷರ ಸಾಮ್ರಾಜ್ಯನೇ ಇದೆ ಎಂದ ಹಾಗಾಯಿತು. ಮೀಸಲಾತಿ ಕೊಡೋದಕ್ಕೂ 'ಮೀಸೆ'ಲಾತಿಗಳ ವಿರೋಧ ಅಂತ ಕೆಲ ಮಹಿಳಾ ನಾಯಕರ ದನಿ ಮಾತ್ರ ಯಾರಿಗೂ ಕೇಳಿಸ್ತಾ ಇಲ್ಲ. ಮಹಿಳಾ ಸಾಮರ್ಥ್ಯದ ಮೇಲೆ ಇಷ್ಟೆಲ್ಲ ದಾಳಿ ನಡೆಯುತ್ತಿದ್ದರೂ ಮಹಿಳಾ ಸಂಘಟನೆಗಳು ಮಾತ್ರ ಸೈಲೆಂಟಾಗಿರೋದನ್ನ ನೋಡಿದರೆ ಒಂದು ಡೌಟ್ ಬರುತ್ತೆ. . . ಮಹಿಳಾ ಸಂಘಟನೆಗಳಲ್ಲಿ ಯಾರೂ 'ಗಂಡಸರೇ' ಇಲ್ವೇ? ಏನೋಪ..?
* * *
ಎಲ್ಲ ನಾಯಕರು ತಾವು ಗಂಡಸರು ಎಂದು ಸಾಬೀತುಪಡಿಸಲು ಪೈಪೋಟಿ ಮಾಡ್ತಾ ಇರಬೇಕಾದರೆ ಕಾಂಗ್ರೆಸ್ ಹೈಕಮಾಂಡ್‌ನ 'ಗಂಡಸು' ಸೋನಿಯಾಗಾಂಧಿ ಮಾತ್ರ ತಮ್ಮದು ಮಹಿಳೆಯರ ಪಾರ್ಟಿ ಅಂತ ಕಳೆದ ವಾರ ರುಜುವಾತುಪಡಿಸೋಕೆ ಹೋಗಿದ್ದರು. ರಾಯ್‌ಬರೇಲಿಯ ಫ್ಯಾಷನ್ ಕಾಲೇಜೊಂದರ ಹುಡುಗಿಯರಿಗೆ ಇಂದಿರಾಗಾಂಧಿ ಥರಾನೇ ಸ್ಮೈಲ್ ಕೊಡಿ; ಇಂದಿರಾ ಗಾಂಧಿ ಥರಾನೇ ಡ್ರೆಸ್ ಮಾಡಿ ಎಂದು ಟಿಪ್ಸ್ ಕೊಟ್ಟಿದ್ದಾರಂತೆ. ಅರೆರೆ, ಈ ಹೊತ್ತಲ್ಲದ ಹೊತ್ತಲ್ಲಿ ಇಂದಿರಾ ಯಾಕೆ ನೆನಪಾಗ್ತಾರೆ ಅಂದಿರಾ? ಬಹುಶಃ ಸೋನಿಯಾನೂ ಮಹಿಳಾ ವೋಟ್‌ಬ್ಯಾಂಕ್ ಮೇಲೆ ಕಣ್ಣಿಟ್ಟಿದ್ದಾರಾ ಅಂತ ಅನುಮಾನ ಬರುತ್ತದೆ. ಯಾಕೋ ಕಾಂಗ್ರೆಸ್‌ನ್ನು ಉಳಿಸಲು ಅತ್ತೆ ಮತ್ತೆ ಹುಟ್ಟಿ ಬರಲಿ ಅಂತ ಸೊಸೆಗೆ ಅನ್ನಿಸಿರಬೇಕು... ಗಂಡುಮಗ ರಾಹುಲ್ ಗಾಂಧಿಯಿಂದ ಕಾಂಗ್ರೆಸ್ ಉಳಿಯುತ್ತೆ ಅನ್ನೋ ಗ್ಯಾರಂಟಿ ಇಲ್ವೇನೋ?



Nov 3, 2012
ಬಡಾ ನಾಯಕರ ಬಂಬಾಟ್ ಬ್ರಾಂಡ್ನಮಗೆ- ನಿಮಗೆ ದಿನವೂ ಒಂದಲ್ಲ ಒಂದು ರೀತಿಯಲ್ಲಿ ಎದುರಾಗುತ್ತಿರುವ ಈ ವ್ಯಕ್ತಿಗಳು ಒಮ್ಮಿಂದೊಮ್ಮೆಗೆ ಬ್ರಾಂಡ್‌ಗಳಾಗಿ ಬಂದು ಬಿಟ್ಟರೆ. . . ? ನಮ್ಮ ನಡುವೆ ಇರುವ ವಿಭಿನ್ನ ಕ್ಯಾರೆಕ್ಟರ್‌ಗಳನ್ನು ಒಂದು ಕ್ಷಣ ಅವರ ಕ್ಯಾರೆಕ್ಟರ್‌ಗೆ ತಕ್ಕಂತ ಉತ್ಪನ್ನಗಳ ರೂಪದಲ್ಲಿ ಕಲ್ಪಿಸಿ ನೋಡಿ. ಕೆಲವು ಹೊಸ ಉತ್ಪನ್ನಗಳು ಮತ್ತು ಬಂಬಾಟ್ ಬ್ರಾಂಡ್ ನೇಮ್‌ಗಳು ಸಿಕ್ಕಿಬಿಡುತ್ತವೆ.

ಯಡ್ಡಿ ಸ್ಮಾರ್ಟ್ ನೋಟ್ಆ್ಯಪಲ್, ಸ್ಯಾಮ್ಸಂಗ್ ಮೊಬೈಲ್, ಟ್ಯಾಬ್, ನೋಟ್‌ಗಳ ನಂತರ ಹೊಸದಾಗಿ ಮಾರ್ಕೆಟ್‌ಗೆ ಬಂದಿರುವ ಉತ್ಪನ್ನ ಇದು. ಈ ನೋಟ್‌ಪ್ಯಾಡಿನೊಳಗೆ ಡಿಸ್ಕ್ ಇನ್‌ಬಿಲ್ಟ್. ಹೀಗಾಗಿ, ಡಿಸ್ಕ್‌ಗಳನ್ನು ಬದಲಾಯಿಸುವ ಕೆಲಸ ಇಲ್ಲ. ಸ್ವಿಚ್ ಆನ್ ಮಾಡಿದ ತಕ್ಷಣ ಪ್ಲೇ ಆಗುತ್ತದೆ. ನೀವು ಏನೇ ಕ್ಲಿಕ್ ಮಾಡಿದರೂ ಇದು ಹೇಳುವುದು ಆಗಲೇ ಫೀಡ್ ಆಗಿರುವುದನ್ನು ಮಾತ್ರ. ನನಗೆ ಬೆನ್ನಿಗೆ ಚೂರಿ ಹಾಕಿದರು' ಇದು ವಚನಭ್ರಷ್ಟತೆ', ಜನ ಪಾಠ ಕಲಿಸ್ತಾರೆ', ನಾನೇನು ತಪ್ಪು ಮಾಡಿದೆ' ಹೀಗೆ ಹೇಳಿದ್ದನ್ನೇ ಹೇಳುತ್ತಿರುತ್ತದೆ. ವೀಡಿಯೋ ಕ್ಲಿಯರ್ ವೈಟ್. 20,000 ಕೋಟಿ ಗಿಗಾಹರ್ಟ್ಸ್ ಪ್ರೊಸೆಸರ್. ಆಡಿಯೋ ಡಿಜಿಟಲ್ ಔಟ್‌ಪುಟ್ ಇದೆ. ಇದನ್ನು ಕೊಂಡರೆ ರೇಣುಕಾ ಟಾಕಿಂಗ್ ಟಾಮ್ ಹಾಗೂ ಡೆಲ್ಲಿ ಧನಂಜಯ್ ಗೇಮ್ಸ್ ಫ್ರೀ.
ಎಸ್ಸೆಂ ಕ್ರಿಷ್ ಸುಗಂಧದ್ರವ್ಯಕಳೆದುಹೋಗಿರುವ ಮತಗಳನ್ನು ಸೆಳೆಯಲು ಕಾಂಗ್ರೆಸ್ ಈ ಸೆಂಟ್‌ನ್ನು ದೆಹಲಿಯಿಂದ ತರಿಸಿಕೊಂಡಿದೆ. ತುಂಬಾ ಹಳೆಯ ಬ್ರಾಂಡ್ ಆಗಿರುವ ಇದನ್ನು ಈಗ ಮತ್ತೆ ಬೆಂಗಳೂರು ಮಾರ್ಕೆಟ್‌ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಬೇರೆ ಬೇರೆ ದೇಶಗಳಿಗೆ ಯಶಸ್ವಿಯಾಗಿ ರಫ್ತಾಗಿ ಹೆಸರು ಪಡೆದುಕೊಂಡು, ಕೆಲವೆಡೆ ತೋಪೆದ್ದು ಬಂದಿರುವ ಈ ಪ್ರೊಡಕ್ಟ್‌ನ್ನು ಹಚ್ಚಿಕೊಂಡರೆ ವೋಟ್‌ಗಳು, ಕಾರ‌್ಯಕರ್ತರು ಓಡೋಡಿ ಹತ್ತಿರ ಬರುತ್ತಾರೆ ಎನ್ನುವುದು ಕಾಂಗ್ರೆಸ್ ಮಾರ್ಕೆಟಿಂಗ್ ಏಜೆನ್ಸಿ ನಂಬಿಕೆ. ಹಿಂದೆ ಈ ಪರ್‌ಫ್ಯೂಮ್‌ನಲ್ಲಿ ಮಂಡ್ಯದ ಮಣ್ಣಿನ ಪರಿಮಳ ಬರುತ್ತಿತ್ತು. ಪಾರ್ಟಿಗೆ ಹೋಗುವವರು, ಶ್ರೀಮಂತರು, ಸಿಟಿ ಜನ ಇದನ್ನು ಹೆಚ್ಚಾಗಿ ಬಳಸುತ್ತಾರೆ. ಆದರೆ ಇದರ ಎಕ್ಸ್‌ಪೈರಿ ಡೇಟ್ ಮುಗಿದಿದೆ ಎಂದು ಕೆಲವರು ಹೇಳುತ್ತಾರೆ. ಇದರ ಜತೆಗೆ ಡೀಕೆ ಎಂಬ ಇನ್ನೊಂದು ಪರ್‌ಫ್ಯೂಮ್ ಬಾಟಲ್ ಫ್ರೀ ಇದೆ. ಅದರಲ್ಲಿ ಕನಕಪುರದ ಕಲ್ಲಿನ ಪರಿಮಳ ಬರುತ್ತದೆಯಂತೆ.
ಮೋದೀಸ್ ಬೈನಾಕ್ಯುಲರ್ಗುಜರಾತ್‌ನಲ್ಲಿ ತಯಾರಾಗಿರುವ ಈ ಬೈನಾಕ್ಯುಲರ್ ಈಗ ಹೆಚ್ಚು ಸುದ್ದಿಯಲ್ಲಿದೆ. ಅಹಮದಾಬಾದ್‌ನಲ್ಲಿ ಕುಳಿತುಕೊಂಡೇ ದೆಹಲಿಯಲ್ಲಿರುವ ಪ್ರಧಾನಮಂತ್ರಿ ಕುರ್ಚಿಯನ್ನು ಇದರಿಂದ ನೋಡಲು ಸಾಧ್ಯವಂತೆ. ಇಮೇಜ್ ಕ್ವಾಲಿಟಿ ಕಲರ್‌ಫುಲ್ಲಾಗಿದ್ದು, ಕೇಸರಿ ಬಣ್ಣ ಹೆಚ್ಚು ಸ್ಪಷ್ಟವಾಗಿ ಕಾಣುತ್ತದೆ. ಅಮೆರಿಕದಲ್ಲಿ ಇದನ್ನು ಬ್ಯಾನ್ ಮಾಡಲಾಗಿದೆಯಾದರೂ, ಭಾರತದೊಳಗೆ ಆನ್‌ಲೈನ್ ಮಾರಾಟ ಮಾತ್ರ ಚೆನ್ನಾಗಿದೆ. ಇದರ ಇನ್ನೊಂದು ಸ್ಪೆಷಲಾಟಿ ಎಂದರೆ, ಈ ಬೈನಾಕ್ಯುಲರ್ ಮೂಲಕ ಯಾವುದೇ ಮಹಿಳೆಯರನ್ನು ನೋಡಿದರೆ ಅವರು ಬಡವರೇ ಶ್ರೀಮಂತರೇ ಎಂದು ಗೊತ್ತಾಗಿಬಿಡುತ್ತದೆ. ಸಣಕಲು ಮಹಿಳೆಯರನ್ನು ನೋಡಿದರೆ ಸಾಕು ಅವರು ಬಡವರೇ ಇಲ್ಲ ಡಯಟ್ ಮಾಡಿದವರೇ ಎಂದು ತಿಳಿಯುತ್ತದೆ. ಹಾಗೆಯೇ ಕೇಂದ್ರ ಸಚಿವ ಶಶಿ ತರೂರ್ ಗರ್ಲ್‌ಫ್ರೆಂಡ್ 50 ಕೋಟಿ ಬೆಲೆಬಾಳುತ್ತಾರೆ ಎಂದು ಗೊತ್ತಾಗಿದ್ದೂ ಇದೇ ಬೈನಾಕ್ಯುಲರ್‌ನಿಂದ.
ಕೇಜರಿ ಆಂಟಿವೈರಸ್ಸದ್ಯಕ್ಕೆ ಮಾರುಕಟ್ಟೆಯಲ್ಲಿ ಡಿಮಾಂಡಿರುವ ಡಾಕ್ಯುಮೆಂಟೇಷನ್ ಆಂಟಿವೈರಸ್ ಸಾಫ್ಟ್‌ವೇರ್ ಪ್ರೊಡಕ್ಟ್. ರಾಜಕಾರಣಿಗಳ ಭ್ರಷ್ಟಾಚಾರವನ್ನು ಹುಡುಕಿ ತರುವ ಈ ವೈರಸ್ ಡಾಕ್ಯುಮೆಂಟ್‌ಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡುತ್ತದೆ. ಸದ್ಯಕ್ಕಂತೂ ಈ ಆಂಟಿವೈರಸ್‌ಗೆ ಆನ್‌ಲೈನ್‌ನಲ್ಲಿ ಹೆಚ್ಚು ಬೇಡಿಕೆ ಇದೆ. ಇಡೀ ಭಾರತದಿಂದ ಭ್ರಷ್ಟಾಚಾರದ ವೈರಸ್‌ನ್ನು ಹೊರಹಾಕಬೇಕೆಂದು ಪಣ ತೊಟ್ಟಿರುವ ಈ ಪ್ರೊಡಕ್ಟ್ ಈಚೆಗೆ ಸಲ್ಮಾನ್ ಖುರ್ಷಿದ್, ಗಡ್ಕರಿ ಹೀಗೆ ಹಲವರ ಹಗರಣಗಳ ವೈರಸ್‌ನ್ನು ಹೊರಗೆ ಹಾಕಿತ್ತು. ಇದರ ಡೇಟಾಬೇಸ್‌ನ ವಿಶ್ವಾಸಾರ್ಹತೆ ಮತ್ತು ಭದ್ರತೆ ಬಗ್ಗೆ ಸಾಕಷ್ಟು ಅಪವಾದಗಳೂ ಕೇಳಿಬರುತ್ತಿದೆ. ಇಂಡಿಯಾ ಆಂಟಿ ಕರಪಕ್ಷನ್ (ಐಎಸಿ) ಕಂಪೆನಿ ಸಿದ್ಧಪಡಿಸಿರುವ ಕೇಜರಿ ಪ್ರೊಡಕ್ಟ್ , ಕೇಸರಿ ಕಂಪೆನಿಯ ಅಂಗಸಂಸ್ಥೆಯದ್ದು ಎಂಬ ಮಾತೂ ಕೇಳಿಬರುತ್ತಿದೆ.
ಎಸ್-ಎಸ್ ಸೈಲೆನ್ಸರ್ದೇಶ ಮತ್ತು ರಾಜ್ಯದ ಪೊಲಿಟಿಕ್ಸ್‌ನಲ್ಲಿ ಬರೇ ಸದ್ದುಗದ್ದಲ. ಇದನ್ನು ತಡೆಯಲು ಎಸ್‌ಎಸ್ ಸೈಲೆನ್ಸರ್ ಮಾರುಕಟ್ಟೆಗೆ ಬಂದಿದೆ. ಇದು ಪಂಜಾಬ್‌ನ ಸಿಂಗ್ ಮತ್ತು ಹುಬ್ಬಳ್ಳಿಯ ಶೆಟ್ಟರ್ ಎಂಬ ಎರಡು ಪ್ರತ್ಯೇಕ ಕಂಪೆನಿಗಳು ಜತೆಗೂಡಿ ಸಿದ್ಧಪಡಿಸಿರುವ ಉತ್ಪನ್ನವಾಗಿದೆ. ಆದರೆ, ಮಾರುಕಟ್ಟೆಯಲ್ಲಿ ಹೆಚ್ಚಾಗಿ ಕ್ಲಿಕ್ ಆಗುತ್ತಿಲ್ಲ. ರಾಜಕೀಯದ ವಿಪರೀತ ಬಿಸಿಯನ್ನು ತಡೆದುಕೊಳ್ಳಬಲ್ಲ (ಶಾಖ ನಿರೋಧಕ) ಇದು ಫ್ರಿಕ್ಷನ್ ಫ್ರೀ. ಯಾರು ಎಷ್ಟೇ ದೊಡ್ಡದ್ದಾಗಿ ದನಿ ಎಬ್ಬಿಸಿದರೂ ಇದು ಸೈಲೆಂಟಾಗಿದ್ದುಕೊಂಡೇ ಇರುತ್ತದೆ. ಆದರೆ ಬಾಳಿಕೆ ಬಗ್ಗೆ ಯಾರೂ ಗ್ಯಾರಂಟಿ ಕೊಡುವುದಿಲ್ಲ.ಆದರೆ ಇರುವಷ್ಟು ದಿನ ಯಾರಿಗೂ ತೊಂದರೆ ಕೊಡದೆ ಕೆಲಸ ಮಾಡುತ್ತದೆ ಎಂದಷ್ಟೇ ಹೇಳಲಾಗುತ್ತದೆ.
ದರ್ಶನೋಪ್ರೊಟೊ ಟಾನಿಕ್ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಈಗ ಇದು ಲಭ್ಯವಿದೆ. ಈ ಟಾನಿಕ್‌ನ್ನು ನಿರಂತರವಾಗಿ ಕುಡಿಯುವುದರಿಂದ ಆದ ಲಾಭದ ಬಗ್ಗೆ ಅಧ್ಯಯನ ಮಾಡಿರುವ ರಾಜ್ಯ ಸರ್ಕಾರ ಇದನ್ನು ರಾಜ್ಯದ ಜನತೆಗೆ ಉಚಿತವಾಗಿ ನೀಡುವ ಬಗ್ಗೆ ಯೋಚಿಸುತ್ತಿದೆ. ವಿಪರೀತ ಕೋಪ, ಅಸಹನೆ ಇದ್ದವರು ಇದನ್ನು ಸತತವಾಗಿ ಕುಡಿದರೆ ತಾಳ್ಮೆ ಬರುತ್ತದೆಯಂತೆ. ಹೆಂಡತಿಯನ್ನು ದ್ವೇಷಿಸಿ, ಪರಸ್ತ್ರೀಯನ್ನು ಮೋಹಿಸುವ ಮನೋಭಾವ ಇರುವ ಗಂಡಸರು ಇದನ್ನು ಕುಡಿಯುವುದರಿಂದ ಹೆಂಡತಿ ಮೇಲೆ ವಿಪರೀತ ಪ್ರೀತಿ ಬರುತ್ತದೆಯಂತೆ.
ಸೈಡ್ ಎಫೆಕ್ಟ್: ಕೆಲವು ಮಹಿಳಾ ಸಂಘಟನೆಗಳು ವಿನಾ ಕಾರಣ ನಿಮ್ಮ ವಿರುದ್ಧ ತಿರುಗಿಬೀಳಬಹುದು.
ಸ್ಪೆಷಲ್ ಮಾಲ್ಟ್ ವಿಸ್ಕಿಇತರೆ ಸ್ಕಾಚ್ ವಿಸ್ಕಿಗಿಂತ ತುಂಬಾ ಡಿಫರೆಂಟ್ ಆಗಿರುವ ಇದು ಮೊದಲಿಗೆ ಸ್ವೀಟ್ ಆಗಿರುತ್ತದೆ. ನಂತರ ನಂತರ ಹುಳಿ ಮತ್ತು ಖಾರದ ಅನುಭವ ಕೊಡುತ್ತದೆ. ಇದನ್ನು ಕುಡಿದರೆ ಜಗತ್ತಿನೆಲ್ಲೆಡೆ ಪ್ರವಾಸ ಮಾಡುವ ಎನರ್ಜಿ ಬರುತ್ತದೆ. ಕುಡಿಕುಡಿಯುತ್ತಲೇ ಕ್ಯಾಲೆಂಡರ್ ಬಾಲೆಯರು ಕಣ್ಣಮುಂದೆ ಜೀವಂತವಾಗಿ ಕಾಣಿಸಿಕೊಳ್ಳುತ್ತಾರೆ. ಡಿಪ್ರೆಷನ್ ನಿವಾರಣೆಗೆ ಹೇಳಿ ಮಾಡಿಸಿದ್ದೂ ಎನ್ನಲಾಗಿದೆ. ಎಷ್ಟು ಸಾಲ ಇದ್ದರೂ ಆ ಚಿಂತೆ ಇರುವುದಿಲ್ಲ; ತಿಂಗಳಾನುಗಟ್ಟಲೆ ಸಂಬಳ ಇರದಿದ್ದರೂ ಈ ವಿಸ್ಕಿ ಮೂಲಕವೇ ಸಾಕಷ್ಟು ದಿನ ಬದುಕು ಸಾಗಿಸಬಹುದು. ಇದರ ಜತೆಗೆ ಉಚಿತವಾಗಿ ಸಿಗುವ ಸಿದ್ಧಾರ್ಥ ಸ್ಪೆಷಲ್ ಸೇವಿಸಿದರೆ ಎಂಥ ಸಂಕಟದ ಕಾಲದಲ್ಲೂ ಪಬ್‌ನಲ್ಲಿ ಲಲನೆಯರ ಜತೆ ಕುಳಿತು ಟ್ವೀಟ್ ಮಾಡುವ ದಮ್ ಬರುತ್ತದೆ.
ರಾಹುಲ್ ಸ್ಲಿಪ್ಪರಿಬಾಲ್ದಿನದಿಂದ ದಿನಕ್ಕೆ ಜನಪ್ರಿಯಗೊಳ್ಳುತ್ತಿರುವ ಈ ವೀಡಿಯೋ ಗೇಮ್ ಯುಪಿಎ ಸರ್ಕಾರ ಉಚಿತವಾಗಿ ನೀಡುವ ಎಲ್ಲ ಮೊಬೈಲ್‌ಗಳಲ್ಲೂ ಇನ್‌ಸ್ಟಾಲ್ ಆಗಿದೆ. ಕೈಗೆ ಸಿಗದ ಬಾಲ್‌ನ್ನು ಅಟ್ಟಿಸಿಕೊಂಡು ಹೋಗುವುದು, ಅದು ಜಾರಿಕೊಳ್ಳುವುದು, ಮತ್ತೆ ಅದು ಮುಂದೆ ಓಡುವುದು.. ಹೀಗೆ ಈ ಮಕ್ಕಳಾಟ ತುಂಬಾ ಮಜವಾಗಿದೆ. ಸುಲಭವಾಗಿ ಡೌನ್‌ಲೋಡ್ ಆಗುವ ಇದರ ಸೌಂಡ್ ವ್ಯವಸ್ಥೆ ಮಾತ್ರ ಅಷ್ಟು ಸರಿ ಇಲ್ಲ. ಕೆಲವೊಮ್ಮೆ ಸೈಲೆಂಟಾಗಿಬಿಡುತ್ತದೆ.


Oct 20, 2012
ಚಿಲ್ಲರೆ ಬಾತ್; ಮ್ಯಾಂಗೋ ಶೇಕ್ಮಾನ್ಯ ಮಾತುಗಾರ ಬಾಂಧವರೇ,
ಈ ಬನಾನ ದೇಶದಲ್ಲಿ ನೇತಾಕಿಕೊಂಡಿರುವ ಮ್ಯಾಂಗೊ ಮನುಷ್ಯರ ಸಪ್ರೇಮ ಪ್ರಣ್-ಆಮ್‌ಗಳು.

ಈ ವಾಧ್ರಾ ಹೇಳೋ ತನಕ ನಮಗೂ ನಮ್ಮ ಒರಿಜಿನಲ್ ತಳಿ ಬಗ್ಗೆ ಗೊತ್ತೇ ಇರಲಿಲ್ಲ. ಈ ದೇಶದ ಜನ ನಾವೆಲ್ಲ ಕುರಿಗಳು ಅಂತ ಅಂದ್ಕೊಂಡಿದ್ದೆವು. ಇನ್ನು ಈಚೆಗೆ ಮಾಜಿ ಮಿನಿಸ್ಟ್ರು ಶಶಿ ತರೂರು ಹೇಳಿದ ಮೇಲೆ ನಾವು ಕ್ಯಾಟಲ್ ಕ್ಲಾಸ್ ಅಂತ ಕೊಂಚ ಹೆಮ್ಮೆ ಪಟ್ಟುಕೊಂಡೆವು. ಆದರೆ ಭಾರತ ಬನಾನ ರಿಪಬ್ಲಿಕ್ (ದುರ್ಬಲ ದೇಶ) ಹಾಗೂ ಇಲ್ಲಿನ ಜನಸಾಮಾನ್ಯರು ಆಮ್ (ಮಾವಿನಕಾಯಿ) ಆದ್ಮಿಗಳು ಎಂದು ಹೇಳಿ ವಾಧ್ರಾ ನಮ್ಮೆಲ್ಲರ ಕಣ್ತೆರೆಸಿದ್ದಾರೆ. ಹೀಗಾಗಿ, ಮಾ(ವು)ನವ ಉಗಮದ ಕುರಿತ ರಾಬರ್ಟನ ವಿಕಾಸವಾಧ್ರಾಕ್ಕೆ ಇಡೀ ದೇಶ ತಲೆ ಬಾಗಿಸಿದೆ (ಇದನ್ನು ಕೆಲವರು ತಲೆ ತಗ್ಗಿಸಿದೆ ಅಂತಾನೂ ಹೇಳ್ತಾರೆ. ಏನೇ ಇದ್ದರೂ ತಲೆಯಂತೂ ಬಗ್ಗಿರೋದು ಖರೆ)
ಭಾರತ ಬಾಳೆ ತೋಟದಿಂದಲೇ ಬಾಳುವೆ ಮಾಡುತ್ತಿರುವ ರಾಜಕಾರಣಿಗಳಾದ ನೀವು ನಿಜಕ್ಕೂ ಗ್ರೇಟ್ ಕಣ್ರೀ. ರಸಪುರಿ, ಬಾದಾಮಿ, ಮಲಗೋಂವ, ತೋತಾಪುರಿ ಹೀಗೆ ವೆರೈಟಿ ವೆರೈಟಿ ಮಾವುಗಳನ್ನೆಲ್ಲ ಮತಮಂಡೀಲಿ ಸೇರಿಸಿ ತೂಕಗಟ್ಟಲೆ ವ್ಯಾಪಾರ ಮಾಡಿ ಲಾಭ ಮಾಡೋ ನಿಮ್ಮನ್ನು ನೋಡಿಯೇ ದೊಡ್ಡವರು ನಮ್ಮದು ಸರ್ವ ಜನಾಂಗದ ಶಾಂತಿಯ ತೋಟ ಅಂತ ಅಂದಿರೋದು. ಮಂತ್ರದಿಂದ ಮಾವಿನಕಾಯಿ ಉದುರಲ್ಲ ಎನ್ನುವ ಮಾತು ಎಷ್ಟು ಸತ್ಯವೋ ಗೊತ್ತಿಲ್ಲ; ಆದರೆ ನಿಮ್ಮ ಮಾತಿಗೆ ಮಾತ್ರ ನಮ್ಮಂಥ ಮಾವುಗಳ ಮತಗಳು ದೊಪದೊಪನೆ ಉದುರಿಬಿಡುತ್ತವೆಯಲ್ಲ? ನೀವೆಲ್ಲ ಮಾತುಗಾರರು; ವಾಕ್ ಚಾಲಾಕಿಗಳು. ಸೋ, ಮಾತಿನಲ್ಲೇ ಮಾವಿನ ಕಾಯಿ ಬೆಳೆಸ್ತೀರಿ; ಕುಯ್ಕೊಂಡುಬಿಡ್ತೀರಿ. ಅವತ್ತು ಪ್ರಧಾನಿ ಮನಮೋಹನ್ ಸಿಂಗ್ ಮರದಲ್ಲಿ ಹಣ ಬೆಳೆಯೋದಿಲ್ಲ ಎಂದಾಗಲೂ ನಂಬಿಬಿಟ್ಟೆವು- ಅದು ನಿಜವೇನೋ ಅಂತ. ಈಗ ಮತಗಳು ಮರದಲ್ಲಿ ಬೆಳೆಯುತ್ತಿವೆ ಅಂತ ಹೇಳಿದಾಗಲೂ ನಂಬ್ತಾ ಇದ್ದೀವಿ... ಇರ್ಬೊದೇನೋ?
*
ಇಷ್ಟಕ್ಕೂ ಈಚೆಗೆ ನಿಮ್ಮಲ್ಲಿ ಕೆಲವರ ಮಾತು ಫುಲ್‌ಮಜಾ (ಬೈ ದಿ ಬೈ ಮ್ಯಾಂಗೋದ ಮಾಜಾ ಅಲ್ಲ) ಕೊಡ್ತಾ ಇದೆ. ಒಬ್ಬೊಬ್ಬ ಮಂತ್ರಿಗಳು ಒಂದೊಂದು ಸ್ಟೇಟ್‌ಮೆಂಟ್ ಕೊಡ್ತಾ ದಸರಾ ಹಾಸ್ಯೋತ್ಸವಕ್ಕೆ ಶುರುವಿಟ್ಟಿದ್ದಾರೆ.
ಮೊನ್ನೆ ಮೊನ್ನೆ ಕೇಂದ್ರ ಆರೋಗ್ಯ ಸಚಿವ ಗುಲಾಮ್ ನಬಿ ಆಜಾದ್ ಡೆಂಘೀ ಜ್ವರ ನಿವಾರಣೆಗೆ ಹೊಸದೊಂದು ಡ್ರೆಸ್‌ಕೋಡ್ ಹೆಣೆದಿದ್ದರು. ಡೆಂಘೀ ಬರೋದು ಸೊಳ್ಳೆ ಕಚ್ಚೋದರಿಂದ. ಸೊಳ್ಳೆ ಕಚ್ಚದೆ ಇರೋ ಹಂಗೆ ಮಾಡೋದು ಹೇಗೆ? ಒಬ್ಬೊಬ್ಬರು ಒಂದೊಂದು ಐಡಿಯಾ ಕೊಡ್ತಾ ಇದ್ದರೆ, ನಮ್ ಹೆಲ್ತ್ ಮಿನಿಸ್ಟ್ರು ಮಾತ್ರ ಎಲ್ಲರೂ ದಪ್ಪದ್ದಾದ ಡ್ರೆಸ್ ಹಾಕಿದರೆ ಡೆಂಘೀ ಬರಲ್ಲ ಅಂತ ಫರ್ಮಾನು ಹೊರಡಿಸಿಬಿಟ್ರು. ಹೌದಲ್ವೇ...? ದಪ್ಪ ಡ್ರೆಸ್ ಹಾಕಿದ್ರೆ ಸೊಳ್ಳೆ ಕಚ್ಚೊಲ್ಲ; ಡೆಂಘೀ ಬರಲ್ಲ..!
ಅಪೌಷ್ಟಿಕತೆಯಿಂದ ನರಳುವ ನಮ್ಮ ದೇಶದ ಜನರೂ ಇಂಥದ್ದೇ ಡ್ರೆಸ್ ಹಾಕಿದ್ರೆ ಸಣಕಲು ಶರೀರವನ್ನು ಮುಚ್ಚಿಟ್ಟುಕೊಳ್ಳಲೂಬಹುದು. ಇನ್ನು ಪಡಿತರದಲ್ಲಿ ಸರ್ಕಾರವೇ ಎಲ್ಲರಿಗೂ ದಪ್ಪ ಬಟ್ಟೆಗಳನ್ನು ಕೊಟ್ಟರೆ ಜನರ ಅಸನ-ವಸನ ಎರಡೂ ಸಮಸ್ಯೆ ನೀಗಿಬಿಡುತ್ತೆ.

ಅರೆರೆ, ಇಂಥ ಐಡಿಯಾ ನಮ್ಗ್ಗೆ ಯಾಕೆ ಹೊಳೀಲಿಲ್ಲ?
ಇದೇ ಮಿನಿಸ್ಟ್ರು ಹಿಂದೆ, ಜನಸಂಖ್ಯೆ ತಡೀಲಿಕ್ಕೆ ತಡರಾತ್ರಿ ತನಕ ಟಿವಿ ನೋಡ್ಬೇಕು ಅಂತ ಹೇಳಿರೋದು ಇನ್ನೂ ನೆನಪಿದೆ. ಟೀವಿ ನೋಡ್ತಾ ಇದ್ರೆ ಜನ 'ಎಲ್ಲ' ಮರ್ತುಬಿಡ್ತಾರೆ ಅನ್ನೋದು ಆಜಾದ್ ಥಿಯರಿ.
*
ಇನ್ನೊಂದು ಕಡೆ ಮತ್ತೊಬ್ಬ ಮಿನಿಸ್ಟ್ರು ಬೇನಿ ಪ್ರಸಾದ್ ವರ್ಮ ಹಗರಣಗಳ ಬಗ್ಗೆ ಇನ್ನೊಂದು ಹೊಸ ಥಿಯರಿ ಇಟ್ಟಿದ್ದಾರೆ. ಕಾನೂನು ಮಂತ್ರಿ ಸಲ್ಮಾನ್ ಖುರ್ಷಿದ್ ಅವರ ಹೋಮ್ ಮಿನಿಸ್ಟರ್‌ಗೆ ಸೇರಿದ ಎನ್‌ಜಿಒ ಒಂದರಲ್ಲಿ 71 ಲಕ್ಷ ರೂಪಾಯಿ ಹಗರಣ ನಡೆದಿದೆ ಎಂಬ ಆರೋಪಗಳೆಲ್ಲ ಜುಜುಬಿ ಅಂದುಬಿಟ್ಟಿದ್ದಾರೆ. 71 ಲಕ್ಷ ಬರೇ ಚಿಲ್ಲರೆ ಸಂಗತಿ ಅಂತ ಹೇಳಿದ್ದು ಹಗರಣಗಳಿಗೆ ಹೊಸ ವ್ಯಾಖ್ಯಾನ ಕೊಟ್ಟಂತಾಗಿದೆಯಂತೆ. ಅಂದರೆ, ಹಗರಣ ಅನ್ನಬೇಕಾದರೆ ಮಿನಿಮಮ್ 100 ಕೋಟಿ ಲಫಡಾ ಆಗಿರಬೇಕು ಅಂತ ನುಂಗಿದವರು, ನುಂಗಲು ಹೊರಟವರೆಲ್ಲ ಒಕ್ಕೊರಲಿನಿಂದ ಹೇಳ್ತಾ ಇದ್ದಾರಂತೆ... ಅಷ್ಟರೊಳಗೆ ಹಣ ಏನಾದರೂ ಹೆಚ್ಚು ಕಡಿಮೆ ಮಾಡ್ಕೊಂಡವರನ್ನು ಪ್ರಾಮಾಣಿಕರು ಎಂದು ಪರಿಗಣಿಸಬೇಕು ಎಂಬ ಒತ್ತಡ ಕೇಳಿಬರೋದು ಹೆಚ್ಚು ದಿನವಿಲ್ಲ ಬಿಡಿ.
*
ಬೇನಿ ಪ್ರಸಾದ್ ವರ್ಮ ಚಿಲ್ರೆ ವಿಷ್ಯ ಮಾತಾಡಿರೋದರಲ್ಲಿ ವಿಶೇಷತೆ ಏನಿಲ್ಲ ಬಿಡಿ. ಆದರೆ ಸ್ವತಃ ನಮ್ಮ ಪ್ರಧಾನಿ ಮನಮೋಹನ್ ಸಿಂಗ್ ಅವರೇ 'ಚಿಲ್ರೆ' ಮಾತಾಡ್ತಾರೆ...! ಮೀಡಿಯಾದವರು ಸಿಕ್ಕರೆ ಅವರು ಮಾತಾಡೋದೆ ಚಿಲ್ಲರೆ ಚಿಲ್ಲರೆ ಅಂತ ಮಾತ್ರ!
*
ಬರೇ ಸಿಂಗ್ ಅಲ್ಲ; ಇಡೀ ಯುಪಿಎ ಸರ್ಕಾರನೇ ಚಿಲ್ಲರೆ ಎಂದರೆ (ಚಿಲ್ಲರೆ ಮಳಿಗೆಗಳಲ್ಲಿ ವಿದೇಶಿ ಹೂಡಿಕೆ) ಬೆಚ್ಚಿಬೀಳ್ತಾ ಇದೆ. ಚಿಲ್ಲರೆ ಅಂದರೆ ಸಾಕು ಅತ್ತ ಪಶ್ಚಿಮ ಬಂಗಾಳದಿಂದ ಮಮತಾ, ಉತ್ತರ ಪ್ರದೇಶದಿಂದ ಮುಲಾಯಂ, ಮಾಯಾ, ಇತ್ತ ತಮಿಳುನಾಡಿನಿಂದ ಎಂ.ಕರುಣಾನಿಧಿ.. ಒಟ್ಟೊಟ್ಟಿಗೆ ಎಲ್ಲ ಕಡೆ ಇರುವ *ಎಂ*ಗಳು ಎಗರಿ ಎಗರಿ ಬೀಳ್ತಾ ಇವೆ. ಹೋಗ್ಲಿ ಬಿಡಿ, ಯಾಕೆ ಚಿಲ್ರೆ ಸಹವಾಸ ಅಂತ ಸುಮ್ನಿದ್ರೆ ಸಾಕು *ಮೇಡಂ ಸೋನಿಯಾ* ಗುರಾಯಿಸ್ತಾರೆ. ಮತ್ತೆ ಎಂ-ಕಾಟ; ಸಂಕಟ!
ಕೆಲವರಿಗೆ ಮಾತೇ ಸಂಕಟ ಆದರೆ, ಪಿಎಂಗೆ 'ಮಾತೆ'ಯೇ ಪ್ರಾಬ್ಲಂ!
*
ಚಿಲ್ರೆ ವಿಷಯ ಅಲ್ಲಿರಲಿ- ನಾಣ್ಯದ ವಿಷ್ಯಕ್ಕೆ ಬನ್ನಿ.
ನಮ್ಮ ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಆಕಾಂಕ್ಷಿ ಕೆ.ಎಸ್.ಈಶ್ವರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಬ್ಬರೂ ಒಂದೇ ಊರಿನವರು; ಒಂದೇ ಪಕ್ಷದವರು, ಒಂದು ಕಾಲದ ಸ್ನೇಹಿತರು. ಈಗ ಒಂದೇ ನಾಣ್ಯದ ಎರಡು ಮುಖಗಳು. ಯಾಕೆ ಗೊತ್ತಾ?
ಪರಸ್ಪರ ಮುಖ ನೋಡೊಲ್ಲ!
*
ಇದೆಲ್ಲ ನಮಗೆ ಹೆಂಗೆ ಗೊತ್ತಾಯ್ತದೆ? ನಾವು ಬಾಳೆ ತೋಟದ ಜಸ್ಟ್ ಆಮ್ ಆದ್ಮಿಗಳು.
ಇಷ್ಟೆಲ್ಲಾ ಆದ್ರೂ ಬಾಳೆ ತೋಟದಲ್ಲಿ ಮಾವು ಹೆಂಗೆ ಬಂತು ಅನ್ನೋದು ಮಾತ್ರ ಗೊತ್ತಾಗಿಲ್ಲ ಅಲ್ವಾ? ಸಖತ್ ಖುಳ ಮಾವ ಸಿಕ್ರೆ ಲೋಕದ ಜನರೆಲ್ಲ ಮಾವು ಥರಾನೇ ಕಾಣಿಸ್ತದೆ ಅನ್ನೋದು ಯಾರೋ ಕೆಲವು ಹತಾಶ ವ್ಯಕ್ತಿಗಳು ವಾಧ್ರಾ ಬಗ್ಗೆ ಆಡಿರೋ ಕುಹಕ ನುಡಿ.
ಇಂತಿ ನಿಮ್ಮಾವು
ಆಮ್ ಆದ್ಮಿ

ಕೊನೇ ಮಾತು:ತಮ್ಮ ಭಾವ ರಾಬರ್ಟ್ ವಾಧ್ರಾ ಬಗ್ಗೆ ಭಾರಿ ಭಾರಿ ಹಗರಣಗಳ ಸುದ್ದಿಯಾಗ್ತಾ ಇದ್ದಾಗ ಮನೆಯಲ್ಲೇ ಕೂತಿದ್ದ ರಾಹುಲ್ ಗಾಂಧಿ ಏನು ಹೇಳ್ತಾ ಇದ್ದಾರೆ?
-ಯಾರ 'ಭಾವ'ನಿಗೂ ಧಕ್ಕೆ ತರಬಾರ್ದು ಕಣ್ರೀ...


Oct 6, 2012
ಬಿಜೆಪಿಗೆ ನೀರು ಬಿಡಿಕಷ್ಟ ಅಂದ್ರೇನೇ ಹಾಗೆ. ಬಂದ್ರೆ ಮೇಲಿಂದ ಮೇಲೆ ಬರ‌್ತಾನೇ ಇರುತ್ತೆ- ಭಾರತಕ್ಕೆ ನಕಲಿ ನೋಟು ಬರೋ ಹಾಗೆ. ಈಗ ನೋಡಿ, ಕಾವೇರಿ ನೀರು ಬಿಟ್ಟರೆ ರಾಜ್ಯಕ್ಕೆ ಕಷ್ಟ; ಬಿಡದೇ ಇದ್ದರೆ ಶೆಟ್ಟರ್‌ಗೆ ಕಷ್ಟ. ಯಡಿಯೂರಪ್ಪ ಪಕ್ಷ ಬಿಟ್ಟರೆ ಬಿಜೆಪಿಗೆ ಕಷ್ಟ; ಬಿಡದೆ ಇದ್ದರೂ ಬಿಜೆಪಿಯವರಿಗೇ ಕಷ್ಟ!
ಇಂಥ ಟೈಮಲ್ಲಿ 'ಸಂಕಟ ಸೂತ್ರ' ಅಂತ ನೆನಪಾಗೋದೇ ಸ್ವಾಮೀಜಿಗಳು, ಗುರೂಜಿಗಳು. ಅಂಥ ಖ್ಯಾತ 'ನಾಮ ಇಟ್ಟ' ಗುರೂಜಿ ಶ್ರೀ ಶ್ರೀ ಪ್ರಾಬ್ಲಂ ಸಾಲ್ವಾನಂದ ಅವರು ಇಲ್ಲಿ ವಿಶೇಷ ಅಂಕಣದ ಮೂಲಕ ವಿವಿಧ ಗಣ್ಯರ ಸಮಸ್ಯೆಗಳಿಗೆ ಉತ್ತರಿಸಿದ್ದಾರೆ. (ವಿ.ಸೂ: ಶ್ರೀಗಳು ಈವರೆಗೆ ಟೀವಿಯಲ್ಲೆಲ್ಲೂ ಕಾಣಿಸಿಕೊಂಡಿಲ್ಲವಾದ್ದರಿಂದ ನಂಬಬಹುದೇನೋ)

* ಗುರೂಜಿ, ನಂದೇನು ತಪ್ಪಿದೆ? ನೀರು ಬಿಡೋದು ತಪ್ಪಾ? ಬಿಡದೇ ಇರೋದು ತಪ್ಪಾ? ಏನು ಮಾಡ್ಲಿ?-ಜಗದೀಶ ಶೆಟ್ಟರ್, ಮುಖ್ಯಮಂತ್ರಿಗಳು
ಎಂದಿಗೂ ದೇವರು, ಸ್ವಾಮಿಗಳನ್ನು ನಂಬದ ನೀವೇ ಈ ಪ್ರಶ್ನೆ ಕೇಳಿದ್ದೀರಿ ಎಂದರೆ ಭಾರಿ ಸಂಕಟಕ್ಕೆ ಸಿಲುಕಿಕೊಂಡಿರಬೇಕು ಅಲ್ಲವೇ? ಇರಲಿ, ಚಿಂತೆ ಬೇಡ. ನೀವು ಈಗಾಗಲೇ ಆರಂಭಿಸಿರುವ ಮೌನವ್ರತವನ್ನು ಹಾಗೆಯೇ ದಿಟ್ಟೆದೆಯಿಂದ ಮುಂದುವರೆಸಿ. ನೀರು ಬಿಟ್ಟರೂ ಓಕೆ, ಈ ಟೈಮಲ್ಲಿ ಬಾಯಿ ಮಾತ್ರ ಯಾವ ಕಾರಣಕ್ಕೂ ಬಿಡಬೇಡಿ. ಆದರೆ ಮಧ್ಯೆ ಮಧ್ಯೆ ನಾಡಿನ ರಕ್ಷಣೆಗೆ ನಮ್ಮ ಸರ್ಕಾರ ಬದ್ಧ' ಎಂಬ ಜಪವನ್ನು ದಿನಕ್ಕೆ ಕನಿಷ್ಠ ಎರಡು ಬಾರಿಯಾದರೂ ಮಾಡಿ. ಉಳಿದಂತೆ ಸುಮ್ಮನಿದ್ದುಬಿಡಿ, ಎಲ್ಲವೂ ತನ್ನಿಂತಾನೇ ಸರಿ ಹೋಗುತ್ತೆ. ಸದ್ಯಕ್ಕಂತೂ ನಿಮ್ಮ ಮನೆ ಹೆಸರು ಕಾವೇರಿಯೇ ಆಗಿರೋದರಿಂದ ಆಕೆಯ ಆಶೀರ್ವಾದ ಇದ್ದೇ ಇದೆ.

* ಬಿಜೆಪಿ ಬಿಡಲು ಹೊರಟಿದ್ದೇನೆ. ಯಾರನ್ನು ನಂಬಲಿ? ಯಾರು ಶತ್ರು, ಯಾರು ಮಿತ್ರ?-ಯಡಿಯೂರಪ್ಪ, ಮಾಜಿ ನಿಕಟಪೂರ್ವ ಮುಖ್ಯಮಂತ್ರಿ
ನನ್ನ ಪ್ರಕಾರ ಮಿತ್ರ-ಶತ್ರು ಎನ್ನುವ ಕಲ್ಪನೆಯೇ ಸರಿಯಲ್ಲ. ಹಿಂದೆ ಬೆಂಕಿಗೂ ನೀರಿಗೂ ಆಗಿಬರೊಲ್ಲ ಎನ್ನುವ ಮಾತಿತ್ತು. ಈಗ ನೋಡಿ, ಅಲ್ಲಿ ನೀರು ಬಿಟ್ಟರೆ, ಇಲ್ಲಿ ರೋಡಿಗೆ ಬೆಂಕಿ ಬೀಳುತ್ತೆ. ಅವುಗಳ ನಡುವೆಯೂ ಗೆಳೆತನ ಬಂದಿದೆ. ಹೀಗಾಗಿ, ಅಂದಿನ ಶತ್ರು ಈಗ ಮಿತ್ರರಾಗಬಹುದು. ಕಾವೇರಿ ಮಾತೆಯನ್ನು ನಂಬಿ; ಜತೆಗೆ ಕಾಂಗ್ರೆಸ್‌ನ ಮೇಡಂ ಮೇಲೂ ನಂಬಿಕೆ ಇಡಿ. ಭವಿಷ್ಯದಲ್ಲಿ ಯಾವ ರೀತಿಯಲ್ಲಾದರೂ ಅನುಕೂಲವಾಗಬಹುದು. ಒಂದು ನೆನಪಿಟ್ಟುಕೊಳ್ಳಿ, ಭವಿಷ್ಯದಲ್ಲಿ ಹಂಚಿಕೆ ಬಗ್ಗೆ ಎಚ್ಚರಿಕೆ ಇರಲಿ. ಹಿಂದಿನ ಥರ ಎಡವಟ್ಟು ಮಾಡಿಕೊಳ್ಳಬೇಡಿ. ಈಗ ನೀವು ಶೆಟ್ಟರ್ ಥರಾನೇ ಧೈರ್ಯ ಮಾಡಿ ನೀರು ಬಿಡಿ- ಅಂದರೆ, ಬಿಜೆಪಿಗೆ ನೀರು ಬಿಡಿ; ಕೈಯಲ್ಲಿ ಎಳ್ಳೂ ಇರಲಿ.

* ಭಾಳ ಕಷ್ಟದಲ್ಲಿದ್ದೀನಿ. ವಿಮಾನ ನೌಕರರು ಸ್ಟ್ರೈಕ್ ಮಾಡ್ತಾ ಇದ್ದಾರೆ... ಗುರೂಜಿ.-ವಿಜಯ ಮಲ್ಯ, ಕಿಕ್‌ಫಿಷರ್ ಒಡೆಯ
ಒಹೋ, ಗೊತ್ತಾಯ್ತು... ನಿಮ್ಮ 'ಹಾರಾಟ' ಕಡಿಮೆಯಾಗಿದೆಯಲ್ಲವೇ? ನಿಮ್ಮ ಜಾತಕದಲ್ಲಿ ಶನಿ 'ಮದ್ಯ'ದ ಸ್ಥಾನದಲ್ಲಿರುವುದರಿಂದ ಕೊಂಚ ಸಮಸ್ಯೆಯಾಗಿದೆ. ಅಮಲೆಯರು, ಅಬಲೆಯರು, ಲಲನೆಯರ ಸಂಗದಿಂದ ಕಿಕ್ಕೇರಬಹುದೇ ಹೊರತು ವಿಮಾನವೇನೂ ಏರದು. ಸ್ವಲ್ಪ ದಿನ ಇದೆಲ್ಲದರಿಂದ ದೂರ ಇರಿ. ಕನಿಷ್ಠ ಒಂದು ತಿಂಗಳಾದರೂ ಅಮಲೇರಿಸುವ ಯಾವುದೇ ಪದಾರ್ಥಗಳನ್ನು ಮುಟ್ಟಲೂಬೇಡಿ. ಬಿಯರ್ ಪ್ರೊಡಕ್ಷನ್ ಜತೆಗೆ ನೀರು ಉತ್ಪಾದನೆ ಸಾಧ್ಯವಾಗುತ್ತಾ ನೋಡಿ. ಕರ್ನಾಟಕಕ್ಕೂ- ತಮಿಳುನಾಡಿಗೂ ಉಪಯೋಗವಾಗಬಹುದು

* ನನ್ನ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸ್ತಾರಂತೆ. ಉಳ್ಕೋತ್ತೀನಾ?- ಮನಮೋಹನ ಸಿಂಗ್, ಪ್ರಧಾನಿ
ನಿಮ್ಮ ಜಾತಕದಲ್ಲಿ ಮೇಡಂಗಳ ಕಾಟ ಅನ್ನೋದು ಸ್ಪಷ್ಟವಾಗಿ ಕಾಣಿಸ್ತಾ ಇದೆ. ನಿಮಗೆ ಮಮತಾ ಮೇಡಂ ಕೊಡ್ತಿರೋ ಕಾಟ, ನಿಮ್ಮ ಮೌನ ತೊಳಲಾಟ ನೋಡಿದ್ರೆ ಗೊತ್ತಾಗ್ತಿದೆ ಭಾಳ ಕಷ್ಟದಲ್ಲಿದ್ದೀರಿ ಅಂತ. ಇನ್ನೊಬ್ಬರು ಮೇಡಮ್ಮೂ ನಿಮಗೆ ಕಾಟ ಕೊಡ್ತಿರಬೇಕಲ್ವಾ? ಪಾಪ, ಅದನ್ನು ನೀವು ಹೇಗೆ ಹೇಳ್ತೀರಿ? ಅವರೇ ನಿಮ್ಮ ಲೀಡರ್ ತಾನೇ? ಒಂದು ಕಿವಿಮಾತು: ಸದ್ಯಕ್ಕೆ ಎಲ್ಲೂ ಟಿಎಂಸಿ ಎಂಬ ಪದವನ್ನು ಬಳಕೆ ಮಾಡಬೇಡಿ..ಅದು ತೃಣಮೂಲ ಕಾಂಗ್ರೆಸ್ ಇರಬಹುದು ಅಥವಾ ಕಾವೇರಿ ನೀರಿನ ವಾದಕ್ಕೆ ಸಂಬಂಧಿಸಿದ್ದಿರಬಹುದು. ಎರಡೂ ನಿಮಗೆ ಆಪತ್ಕಾರಿ.

* ನಾನೇನು ಅಂಥ ಮಾತನ್ನಾಡಿದೆ? ಹೆಂಡತಿಯರು ವಯಸ್ಸಾದ ಹಾಗೆ ಆಕರ್ಷಣೆ ಕಳೆದುಕೊಳ್ಳುತ್ತಾರೆ ಎಂದಷ್ಟೇ ಹೇಳಿದೆನಲ್ಲ? ಎಲ್ರೂ ವಾದ ಮಾಡ್ತಿದ್ದಾರಲ್ಲ?-ಜೈಸ್ವಾಲ್, ಕಲ್ಲಿದ್ದಲು ಮಂತ್ರಿ
ಅಯ್ಯಯ್ಯೋ, ಏಕೆ ಸುಮ್‌ಸುಮ್ನೆ ಹೆಂಡತಿಯರ ಬಾಯಿಗೆ ಕೋಲ್ ಹಾಕ್ತೀರಿ ಮಿ. ಕೋಲ್ ಮಿನಿಸ್ಟರ್? ಮೊನ್ನೆ ಮೊನ್ನೆಯಷ್ಟೇ ಹೆಂಡತಿಯರಿಗೆ ಗಂಡಂದಿರು ಸಂಬಳ ಕೊಡಬೇಕು ಅನ್ನೋ ಬಿಲ್ ಸುದ್ದಿ ಕೇಳಿ 3-4 ಕೆಜಿ ಉಬ್ಬಿ ಹೋಗಿರೋ ಹೆಂಡತಿಯರೆಲ್ಲ ಒಂದಾಗಿಬಿಟ್ರೆ ನಿಮ್ಮಂಥ ಗಂಡಂದಿರ ಗತಿ? ತಕ್ಷಣ ಜಾಣ್ಮೆಯಿಂದ ಬಹಿರಂಗ ಹೇಳಿಕೆ ಕೊಟ್ಟುಬಿಡಿ- ಹೆಂಡತಿಯರು ವಯಸ್ಸಾದ ಹಾಗೆ ಆಕರ್ಷಣೆ ಹೆಚ್ಚಿಸಿಕೊಳ್ಳುತ್ತಾರೆ ಅಂತ. ನಿಮ್ಮ ನಿಮ್ಮ ಹೆಂಡತಿ ಅಂತ ನೀವೇನೂ ಹೇಳಿರೋದಿಲ್ಲವಲ್ಲ?

ಯಾಕೆ ಮೇಲಿಂದ ಮೇಲೆ ಸೋಲು ಬರುತ್ತಿದೆ? ನನ್ನ ಹೆಲಿಕಾಪ್ಟರೂ ಟೇಕಾಫ್ ಆಗ್ತಾ ಇಲ್ಲ. ನನ್ನ ಕ್ಯಾಪ್ಟನ್‌ಗಿರಿಗೇ ಕುತ್ತು ಬರುತ್ತಿದೆಯಲ್ಲ?- ಎಂ.ಎಸ್.ಧೋನಿ, ಮಾಜಿ ಗೆಲುವಿನ ಸರದಾರ
ಅವತ್ತು ಕುರಿಮರಿಯನ್ನು ಬಲಿಕೊಟ್ಟಿದ್ದು ನೆನಪಿದೆಯಾ ತಮ್ಮ?ಆದರೆ ಇವತ್ತು ನೀನೇ ಕುರಿಮರಿ ತರಹ ಈ ಪ್ರಶ್ನೆ ಕೇಳ್ತಾ ಇದ್ದೀಯ. ಅವತ್ತು ಕುರೀನ ಬಲಿ ಕೊಡೋ ಬದಲು, ಫೀಲ್ಡಲ್ಲಿ ಎದುರಾಳಿಗಳನ್ನು ಸಮರ್ಥವಾಗಿ ಬಲಿ ಕೊಡ್ತಾ ಬಂದಿದ್ರೆ ಸಾಕಿತ್ತು. ಹೋಗಲಿ ಬಿಡು, ಇನ್ನಾದರೂ ಹೆಲಿಕಾಪ್ಟರ್‌ಗೆ ಎಣ್ಣೆ ಹಾಕಿ ಕ್ಲೀನ್ ಮಾಡಿಸು. ಎಲ್ಲ ಸರಿ ಹೋಗುತ್ತೆ.

ಕೊನೇ ಮಾತು:ಬೇಳೆ ಬೇಯಿಸಲು ನೀರು ಬೇಕೇ ಬೇಕಾ?
- ಉಹುಂ, ಹಾಗೇನಿಲ್ಲ. ಕಾವೇರಿ ವಾದ ನೋಡಿದರೆ ಗೊತ್ತಾಗಲ್ವೆ? ನೀರಿಲ್ಲದೆ ಇದ್ದರೂ ರಾಜಕಾರಣಿಗಳು ಬೇಳೆ ಬೇಯಿಸಿಕೊಳ್ತಾರೆ.

 

Sep 30, 2012
ನಿಮ್ಮೂರಲ್ಲಿ ಹೊಸ ಪಾರ್ಟಿ ಬರುತ್ತಾ?ಅವತ್ತು ಮಧ್ಯರಾತ್ರಿ ನಿಜಕ್ಕೂ ಸ್ವಾತಂತ್ರ್ಯ ಸಿಕ್ಕಿಬಿಟ್ಟಿತು. ರಾಜ್ಯದ ಮಹಾತ್ಮ ಗಾಂಧಿ ಪ್ರತಿಮೆಗಳಿಗೆಲ್ಲ ದಡಬಡನೆ ಎದ್ದು ವಾಕ್ ಶುರು ಮಾಡಿಬಿಟ್ಟವು. ಕೈಯಲ್ಲಿ ಕೋಲು ಹಿಡಿದುಕೊಂಡು, ಕನ್ನಡಕ ಸರಿಪಡಿಸಿಕೊಂಡು ಬಿರಬಿರನೆ ಹೆಜ್ಜೆ ಹಾಕಿದವು. ಎಲ್ಲರ ನಡಿಗೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ಕಡೆಗೆ...
ಅವತ್ತು ಅಖಿಲ ಕರ್ನಾಟಕ ಗಾಂಧೀಜಿ ಪ್ರತಿಮೆಗಳ ಬಹತ್ ಸಮಾವೇಶ. ಬೀದರ್‌ನಿಂದ ಹಿಡಿದು ಬೆಂಗಳೂರಿನ ತನಕ ನೂರಾರು ಪ್ರತಿಮೆಗಳು ಜಮಾಯಿಸಿದ್ದವು. ಒಂದೊಂದು ಪ್ರತಿಮೆಗಳಿಗೆ ಒಂದೊಂದು ಚಿಂತೆ. ಕೆಲವಕ್ಕೆ ದೇಶದ ಮರ‌್ಯಾದೆಯ ಚಿಂತೆ; ಇನ್ನು ಕೆಲವಕ್ಕೆ ಗಾಂಧಿ ಗೌರವದ ಚಿಂತೆ. ಕಣ್ಣೆದುರೇ ಏನೆಲ್ಲ ನಡೆದರೂ ಪ್ರತಿಭಟಿಸಲಾಗದಲ್ಲ ಎಂಬ ಹಳಹಳಿಕೆ ಎಲ್ಲರದೂ. ನಡುರಾತ್ರಿಯಲ್ಲಿ ಗಂಟೆಗಟ್ಟಲೆ ಚರ್ಚೆ ನಡೆಯಿತು. ದೇಶದ ಎಲ್ಲ ಸಮಸ್ಯೆಗೆ ಪರಿಹಾರ ಸೂತ್ರ ಹುಡುಕಲಾಯಿತು. ಕೊನೆಗೂ, ಭಾರತವನ್ನು ಉಳಿಸಲು ರಾಜಕೀಯ ಪಕ್ಷವನ್ನು ಕಟ್ಟುವುದು ಅನಿವಾರ‌್ಯ ಎಂಬ ಒಂದು ಸಾಲಿನ ನಿರ್ಣಯ ಕೈಗೊಳ್ಳಲಾಯಿತು.
ಪ್ರಾಮಾಣಿಕರಿಗೆ, ಶ್ರಮಿಕರಿಗೆ, ಸರಳ ಜೀವಿಗಳಿಗೆ, ಸತ್ಯಸಂಧರಿಗೆ ಮಾತ್ರ ಈ ಪಕ್ಷಕ್ಕೆ ಪ್ರವೇಶ ಎಂದು ಎಲ್ಲ ಪ್ರತಿಮೆಗಳು ಘೋಷಿಸಿದವು.
* * *
ಅಷ್ಟೇ, ಫೇಸ್‌ಬುಕ್, ಟ್ವಿಟರ್‌ಗಳಲ್ಲೆಲ್ಲ ಗಾಂಧಿ ಪಾರ್ಟಿ ಬಗ್ಗೆ ಗುಲ್ಲು ಶುರುವಾಯಿತು. ಒಬ್ಬೊಬ್ಬರು ಒಂದೊಂದು ಸಲಹೆ ಕೊಟ್ಟರು. ದೇಶದ ಟಿವಿಗಳಲ್ಲೆಲ್ಲ *ಪ್ರತಿಮಾ-ತು* ಬಗ್ಗೆ ಪ್ಯಾನೆಲ್ ಡಿಸ್ಕಷನ್ ನಡೆದು ಎಲ್ಲರ ಗಂಟಲು ಒಣಗಿದವು. ಮಾಧ್ಯಮ ಮಂದಿ ಸಿಕ್ಕಸಿಕ್ಕವರಲ್ಲಿ ಪ್ರತಿಕ್ರಿಯೆ ಕೇಳಿದರು. ನಿಮ್ಮೂರಲ್ಲಿ ಹೊಸ ಪಾರ್ಟಿ ಬರುತ್ತಾ ಅಂತ ಎಲ್ರೂ ಕೇಳಲು ಶುರುಮಾಡಿದರು. ಎಲ್ಲೂ ಜಾಗ ಇಲ್ಲದ ಪುಡಾರಿಗಳು ಹಳೆಯ ಖಾದಿ ತೆಗೆದು ಇಸ್ತ್ರಿ ಹಾಕಿ ಮಿಂಚಿದರು. ಗಾಂಧೀಜಿ ತಮ್ಮ ಜೀವಿತಾವಧಿಯಲ್ಲಿ ಇಷ್ಟೊಂದು ಪ್ರತಿಕ್ರಿಯೆ ಪಡೆದೇ ಇರಲಿಲ್ಲ. ಆದರೆ ಈಗ ಅಂಥದ್ದೊಂದು ಅದ್ಭುತ ಪ್ರತಿಕ್ರಿಯೆ. ಎಲ್ಲರೂ ಮಾತನಾಡುವವರೇ. ಅಂಥದ್ದರಲ್ಲಿ ನಮ್ಮ ಗಣ್ಯರು ಏನು ಹೇಳಿದ್ದಾರೆ.... ಕೆಲವು ಹೀಗಿವೆ:
ಮನಮೋಹನ್ ಸಿಂಗ್: ಅತ್ಯಂತ ಸಕಾಲಿಕ ನಿರ್ಧಾರ. ಗಾಂಧಿ ಪಾರ್ಟಿಗೆ ನನ್ನ ಸಹಮತವಿದೆ. ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಈ ದೇಶಕ್ಕೆ ಗಾಂಧಿಯಂಥ ಯುವ ನಾಯಕರು ಬರಲೇಬೇಕು. ಮಿ. ರಾಹುಲ್ ಗಾಂಧಿ ಯು ಆರ್ ವೆಲ್‌ಕಮ್.
ಎಲ್.ಕೆ.ಅಡ್ವಾಣಿ: ಗಾಂಧಿ ಪಾರ್ಟಿ ಬೇಕೋ, ಬೇಡವೋ ಎನ್ನುವುದು ಅಪ್ರಸ್ತುತ. ಆದರೆ ಇಂಥ ದುರ್ಬಲ ಪ್ರಧಾನಿಯನ್ನು ಮಾತ್ರ ಈ ದೇಶ ಈವರೆಗೆ ಕಂಡಿಲ್ಲ.
ಯಡಿಯೂರಪ್ಪ: ಹಾಂ, ಹೌದೌದು. ಪ್ರಾಮಾಣಿಕರಿಗೆ, ಸತ್ಯಸಂಧರಿಗೆ ಈಗ ಎಲ್ಲೂ ಬೆಲೆ ಇಲ್ಲ. ಇಂಥದ್ದೊಂದು ಹೊಸ ಪಕ್ಷದ ಅಗತ್ಯ ತುಂಬಾ ಇದೆ.
ಸೋನಿಯಾ ಗಾಂಧಿ: ಯಾವುದಕ್ಕೂ ಹೆದರಬೇಡಿ; ಎಲ್ಲವೂ ಸರಿಹೋಗುತ್ತದೆ.
ಕುಮಾರಸ್ವಾಮಿ: ಪೂಜಾ... ಪೂಜಾ... ತ್ಚು ತ್ಚು... ನೀವು ಮಹಾತ್ಮ ಗಾಂಧಿ ಬಗ್ಗೆ ಮಾತಾಡ್ತಾ ಇದ್ದೀರಲ್ಲ. ಇವತ್ತು ಇರ್ತಿದ್ರೆ ಅವರೂ ಕರಪ್ಟ್ ಆಗ್ತಿದ್ದರು.
ಪರಮೇಶ್ವರ: ಈ ಬಗ್ಗೆ ಹೈಕಮಾಂಡ್ ಜತೆ ಚರ್ಚೆ ಮಾಡಿ ಮಾತನಾಡುವೆ.
ಶೆಟ್ಟರ್: ಈ ಕುರಿತು ನಾನು ಪ್ರತಿಕ್ರಿಯೆ ಕೊಡಲಾರೆ
ರೇಣುಕಾ: ರಾಜ್ಯದಲ್ಲಿ ಸಾರಾಯಿ ನಿಷೇಧ ಮಾಡಿ ಗಾಂಧಿ ಆದರ್ಶ ಮೆರೆದ ಸನ್ಮಾನ್ಯ ಯಡಿಯೂರಪ್ಪನವರು ಕರ್ನಾಟಕದ ಗಾಂಧಿ
ಈಶ್ವರಪ್ಪ: ಗಾಂಧೀಜಿ ಯಾಕೆ ಬರ್ತಾರೆರೀ ಇಲ್ಲಿಗೆ....? ಏನು ಪ್ರಶ್ನೆ ಕೇಳ್ತೀರ‌್ರೀ...? ಡೌಟೇ ಇಲ್ಲ ಯಡಿಯೂರಪ್ಪ ಅವರೇ ನಮ್ಮ ನಾಯಕರು. ಹೋಗಿ.. ಹೋಗಿ...
ಮೋದಿ: ಸೋನಿಯಾ ಗಾಂಧಿ ಪರದೇಶಿ ಇಟಲಿಯವರು; ಮಹಾತ್ಮ ಗಾಂಧಿ ಸ್ವದೇಶಿ ಗುಜರಾತ್‌ನವರು...
ನಿತೀಶ್‌ಕುಮಾರ್: ಗುಜರಾತ್‌ನವರು ಗಾಂಧೀಜಿ ಹೆಸರನ್ನು ದುರ್ಬಳಕೆ ಮಾಡುವುದನ್ನು ನಾವು ಸಹಿಸುವುದಿಲ್ಲ.
ರಾಹುಲ್ ಗಾಂಧಿ: ಏನು.. ಏನು..? ಗಾಂಧಿ ಪಾರ್ಟಿ ಬರುತ್ತಾ? ನಂಗೊತ್ತಿಲ್ಲಪ್ಪ...
* * *
ಗಾಂಧೀಜಿ ಪಕ್ಷ ಬರುತ್ತಾ ಬಿಡುತ್ತಾ ಅನ್ನೋದು ಕಾಲ್ಪನಿಕ ವಿಚಾರ. ಆದರೆ ಒಂದಂತೂ ನಿಜ. ಈಗ ಎಲ್ಲೆಡೆ ಪಕ್ಷದ್ದೇ ಹವಾ. ಅದು ಜನಸಾಮಾನ್ಯರು *ಪಕ್ಷದ ತಿಥಿ* (ಮಹಾಲಯ ಪಕ್ಷ) ಸಿದ್ಧತೆಯಲ್ಲಿದ್ದರೆ, ರಾಜಕಾರಣಿಗಳಿಗಂತೂ ಹೊಸ ಪಕ್ಷದ ಹುಟ್ಟಿನದ್ದೇ ಯೋಚನೆ. ರಾಜ್ಯದಲ್ಲಿ ಈ ವರ್ಷ ಹೊಸ ಹೊಸ ಪಾರ್ಟಿಗಳ ಪರ್ವ. ಶ್ರೀರಾಮುಲು ಆಗಲೇ ಪಕ್ಷ ಕಟ್ಟಿ ಎಲೆಕ್ಷನ್‌ಗೆ ರೆಡಿಯಾಗಿಬಿಟ್ಟಿದ್ದಾರೆ. ಇನ್ನು ಯಡಿಯೂರಪ್ಪ ಹೊಸ ಪಾರ್ಟಿ ಕಟ್ಟಲು ಹೊರಟಿದ್ದಾರೆ. ಅವರ ಗುಂಪಿನಲ್ಲಿ ಫುಲ್ ಪಾರ್ಟಿ ಮೂಡ್. ಹಾಗಾಗಿಯೇ ನಿತ್ಯರಾತ್ರಿ ಒಬ್ಬೊಬ್ಬ ಮಂತ್ರಿ- ಶಾಸಕರ ಮನೆಯಲ್ಲೂ ಪಾರ್ಟಿ!
ಆದರೆ ಕಾಂಗ್ರೆಸ್ ಪಾರ್ಟಿ ವಿಚಾರ ಗೊತ್ತಾ? ಮೊನ್ನೆ ಮೊನ್ನೆ ಬೀದಿ ಕಾಳಗ ಮಾಡುತ್ತಿದ್ದ ಇಬ್ಬರು ನಾಯಕರು ಈಗ ಕೈ ಜೋಡಿಸಿದ್ದಾರೆ. ನನ್ನನ್ನೇ ಅಧ್ಯಕ್ಷ ಮಾಡಿ ನೋಡಿ, ಆಮೇಲೇನಾಗುತ್ತೆ ಅಂತಿದ್ದ ಶಾಮನೂರು ನೊಟೀಸ್ ಪಡಕೊಂಡಿದ್ದು ಹಳೇ ಕತೆ. ಈಗ ಕೆಪಿಸಿಸಿ ಆಫೀಸಿಗೆ ಹೋಗಿ ಪರಮೇಶ್ವರನ್ನು ಅಪ್ಪಿ-ತಬ್ಬಿ ಶೋ ಕೊಟ್ಟಿದ್ದನ್ನು ನೋಡಿ ಅಲ್ಲೇ ಇದ್ದ ಗಾಂಧಿ ಫೊಟೋ ಕಿಸಕ್ಕನೆ ನಕ್ಕಿತಂತೆ- ಯಾವುದು ಸತ್ಯ ಯಾವುದು ಸುಳ್ಳು ಅಂತ ಗೊತ್ತಾಗದೆ.
ದೂರದಲ್ಲಿದ್ದ ಎಸ್.ಎಂ.ಕಷ್ಣ ಕಣ್ಣು ಮಿಟುಕಿಸಿದರೆ, ಇಲ್ಲೇ ಎಲ್ಲೋ ಇದ್ದ ಸಿದ್ದರಾಮಯ್ಯ ಕಕ್ಕಾಬಿಕ್ಕಿಯಾದರಂತೆ. ಅಷ್ಟರಲ್ಲಿ, ಕಷ್ಣಾ ನೀ ಬೇಗನೆ ಬಾರೋ ಎಂಬ ಹಿನ್ನೆಲೆ ಸಂಗೀತ ಕೇಳಿಸಿದ್ದು ಎಲ್ಲಿಂದ ಅಂತ ಗೊತ್ತಾಗಲಿಲ್ಲ.

ಕೊನೇ ಮಾತು:ಬಿಜೆಪಿ ಬಿಡಲು ಪ್ರಯತ್ನಿಸುತ್ತಿರುವ ಯಡಿಯೂರಪ್ಪ ಯಾಕೆ ಆರ್ಟ್ ಆಫ್ ಲಿವಿಂಗ್ ಸೇರಿಕೊಂಡರು?
ಆರ್ಟ್ ಆಫ್ *ಲೀವಿಂಗ್* ಬಗ್ಗೆ ಟ್ರೈನಿಂಗ್ ತಗೊಳೋಕೆ.

 Sep 15, 2012
ಸ್ವಲ್ಪ ಅಡ್ಜಸ್ಟ್ ಮಾಡ್ಕೊಬೇಕಪ್ಪ...!ಬೆಂಗಳೂರಿನ ಜನಾನೇ ಹಾಗೆ. ಎಲ್ಲದ್ದಕ್ಕೂ ಥಟಕ್ಕನೆ ಅಡ್ಜಸ್ಟ್ ಆಗಿಬಿಡ್ತಾರೆ. ನೀರಿಗೆ ಹಾಕಿದ್ರೂ ಬದುಕ್ತಾರೆ; ನೀರಿಲ್ಲಾಂದ್ರೂ ಓಕೆ ಓಕೆ. ಉಸಿರಾಟಕ್ಕೆ ಕಸದ ವಾಸನೆನೂ ಸೈ, ಟ್ರಾಫಿಕ್ ಹೊಗೆನೂ ಸರಿ. ಏನು ಜನಾರೀ ಇವರು... ಎಲ್ಲದ್ದಕ್ಕೂ ರೆಡಿ. ಹೋಗ್ಲಿ, ನಿತ್ಯ ಓಡಾಡೋ ಬಸ್‌ಗಳನ್ನೇ ನಿಲ್ಲಿಸಿಬಿಟ್ರೆ...?
ಸರ್ಕಾರ ಮಾಡಿದ್ದ ಇಂಥದ್ದೊಂದು *ಲಿಟ್-ಬಸ್ ಟೆಸ್ಟ್*ನಲ್ಲಿ ಬೆಂಗಳೂರು ಜನ ಪಾಸಾಗಿಬಿಟ್ರು!
ಒಂದಷ್ಟು ಜನ ವಿರೋಧ ಪಕ್ಷದವರ ಥರ ಬೈಕೊಂಡು ಬೈಕೊಂಡೇ ಬೈಕೇರಿದರು. ಸಿಲಿಕಾನ್ ಕಣಿವೆಯ ಟೆಕಿಗಳಿಗೆ ಬಸ್ ನಿಂತಿರೋದೇ ಗೊತ್ತಾಗಿಲ್ಲ. ಇನ್ನು, ಉಳ್ಳವರು, ಸಿಸ್ಟಮ್ಮೇ ಸರಿ ಇಲ್ಲ ಅಂತಂದುಕೊಂಡು ಟ್ಯಾಕ್ಸಿ, ಆಟೋ, ಕಾರು ಏರಿಬಿಟ್ಟರು. ಇಲ್ದೋರು, ಟಿಪಿಕಲ್ ಇಂಡಿಯನ್ ಥರಾ ರೋಡಲ್ಲೇ (ಫುಟ್‌ಪಾತ್ ಇಲ್ವಲ್ಲ) ಗೊಣಗಿಕೊಂಡು ಹೆಜ್ಜೆ ಹಾಕಿದರು. ಹೇಗೂ ನಮ್ಮ ಸಂವಿಧಾನ ವಾಕ್ (walk) ಸ್ವಾತಂತ್ರ್ಯ ಕೊಟ್ಟಿದೆ. ಎಷ್ಟು ಬೇಕಾದ್ರು ನಡೀಬಹುದು; ಏನು ಬೇಕಾದ್ರೂ ಮಾತಾಡಬಹುದು.
ಬೆಂಗಳೂರಿನಲ್ಲಿ ಆಡಳಿತ ಚಕ್ರಾನೇ ನಿಂತುಕೊಂಡಿದ್ದನ್ನು ನೋಡಿಯೂ ಜನ ಸುಮ್ನಿದ್ದಾರೆ. ಅಂತಹದ್ದರಲ್ಲಿ ಈ ಅಶೋಕ- ಚಕ್ರ ನಿಂತುಬಿಟ್ರೆ ಹೆದರಿಬಿಡ್ತಾರಾ? ನೋ ಛಾನ್ಸ್. ಇನ್ನೊಂದೆರಡು ದಿನ ಸ್ಟ್ರೈಕ್ ಹೀಗೇ ಮುಂದುವರೆದರೆ ಬಸ್ಸಿಲ್ಲದ ಬೆಂಗಳೂರಿಗೆ ಜನ ಅಡ್ಜಸ್ಟ್ ಆಗಿಬಿಡ್ತಾರೆ. ಈಗ ಉದ್ಯಾನನಗರಿಯಲ್ಲಿ ಮರಗಳು, ಕೆರೆಗಳು ಇದ್ವು, ಪಕ್ಷಿಗಳು ಹಾರಾಡ್ತಿದ್ದವು ಅಂತ ಜನ ಮರ್ತಿಲ್ವೆ? ಹಾಗೇನೆ ಮುಂದೊಂದು ದಿನ ಇಲ್ಲಿ ಬಸ್‌ಗಳು ಓಡಾಡ್ತ ಇದ್ವು ಅನ್ನೋದನ್ನ ಸಹ ಮರೀಬಹುದು. ಅಷ್ಟು ಗಟ್ಟಿ ಜನ ಬೆಂಗಳೂರಿಯನ್ಸ್.

* * *
ಜನ ಮಾತ್ರ ಅಲ್ಲ. ನಮ್ಮ ಸರ್ಕಾರನೂ ಸಹ ಅಷ್ಟೇ ಸ್ಟ್ರಾಂಗ್! ರಾಜ್ಯದಲ್ಲಿ ಯಾರು ಏನೇ ಬೇಡಿಕೆ ಇಟ್ರೂ ಒಂದಿಷ್ಟೂ ಅಲುಗಾಡಲ್ಲ. ಅಂಗವಿಕಲರು ಮಾಶಾಸನ ಸಿಗ್ತಾ ಇಲ್ಲ ಅಂತಂದ್ರೂನು ಅಲುಗಾಡಲ್ಲ; ಪೆನ್‌ಷನ್ ಕೊಡಿ ಅಂತ ದುಂಬಾಲು ಬಿದ್ರೂ... ಉಹುಂ, ಅಲುಗಾಡಲ್ಲ. ಸಾರಿಗೆ ನೌಕರರು ಮುಷ್ಕರ ಮಾಡ್ತೀವಿ ಅಂತ ಹೇಳಿದಾಗಲೂ ಜಪ್ಪಯ್ಯ ಸರ್ಕಾರ ಅಲುಗಾಡೋದೇ ಇಲ್ಲ. ಕೂತಲ್ಲೇ ಕೂತುಬಿಟ್ಟಿದೆ.
ಇದಕ್ಕೇ ಇರಬೇಕು ಯಡಿಯೂರಪ್ಪ ಆಗಾಗ ಹೇಳ್ತಾ ಇರೋದು ನಮ್ಮನ್ನು ಅಲುಗಾಡಿಸೋಕೆ ಯಾರಿಂದಲೂ ಸಾಧ್ಯ ಇಲ್ಲ ಅಂತ!
* * *
ಎಲ್ಲವೂ ಅಡ್ಜಸ್ಟ್‌ಮೆಂಟ್. ಮನೆಯಿಂದ ಹಿಡಿದು ವಿಧಾನ ಸೌಧದ ತನಕ ಅಡ್ಜಸ್ಟ್‌ಮೆಂಟ್ ಇದ್ದರೆ ಮಾತ್ರ ಎಲ್ಲವೂ ನಡಿಯುತ್ತೆ; ಓಡುತ್ತೆ. ಗಂಡ ಹೆಂಡತಿ ಮಧ್ಯೆ ಅಡ್ಜಸ್ಟ್‌ಮೆಂಟ್ ಇಲ್ಲದಿದ್ದರೆ ಸಂಸಾರದ ಬಂಡಿ ಬಂದ್. ಇಲ್ಲೂ ಅಷ್ಟೇ, ಮಿನಿಸ್ಟ್ರಿಗೆ ಸಾರಿಗೆ ಯೂನಿಯನ್‌ನವರೋ ಅಥವಾ ಯೂನಿಯನ್‌ಗೆ ಮಿನಿಸ್ಟ್ರು ಹೆಂಗೋ ಏನೋ ಅಡ್ಜಸ್ಟ್ ಮಾಡಿಕೊಂಡರೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್ ಓಡುತ್ತೆ.
ಬಸ್‌ಗಳೆಲ್ಲ ಮುನಿಸಿಕೊಂಡು ನಿಂತಾಗ ರೈಲು ಮಿನಿಸ್ಟ್ರು ಮುನಿಯಪ್ಪ ರಾಜ್ಯದಲ್ಲಿ ಹೆಚ್ಚುವರಿ ಬೋಗಿನೋ, ರೈಲೊ ಬಿಡಬಹುದಿತ್ತಲ್ಲ ಅಂತಂದುಕೊಂಡ್ರಾ? ಹಂಗಂತ ಕೇಳೋಕೆ ಹೋಗ್‌ಬೇಡಿ. ಈಗ್ಲೂ ರೈಲು ಬಿಡ್ತಾ ಇದ್ದೀನಲ್ಲ ಅಂತ ಹೇಳಿಬಿಟ್ರೆ ಏನು ಮಾಡ್ತೀರಿ?
ಏನೊ, ಸ್ವಲ್ಪ ಅಡ್ಜಸ್ಟ್ ಮಾಡ್ಕೊಬೇಕಪ್ಪ!

* * *
ರಾಜಕೀಯದಲ್ಲಂತೂ ಅಡ್ಜಸ್ಟ್‌ಮೆಂಟ್ ಇರಲೇಬೇಕು. ನೋಡಿ ಬೇಕಿದ್ರೆ, ನಮ್ಮ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಈಗ ಯಡಿಯೂರಪ್ಪಗೆ ಅಡ್ಜಸ್ಟ್ ಆಗಿಕೊಂಡು ಹೋಗಿಲ್ವಾ? ಕೇಂದ್ರದಲ್ಲಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್‌ಗೆ ಇಡೀ ಯುಪಿಎ ಅಡ್ಜಸ್ಟ್ ಆಗಿಲ್ವಾ? ಇನ್ನು ನಮ್ದು, ನಿಮ್ದೆಲ್ಲ ಯಾವ ಲೆಕ್ಕ?
ಆದರೆ.. ಉಹುಂ, ರಾಹುಲ್ ಗಾಂಧಿಗೆ ಮಾತ್ರ ಯಾಕೋ ರಾಜಕೀಯ ಸರಿ ಹೊಂದ್ತಾ ಇಲ್ಲ ಅಂತ ಬ್ರಿಟನ್‌ನ ಎಕೊನಾಮಿಸ್ಟ್ ಪತ್ರಿಕೆ ಹೇಳಿಬಿಟ್ಟಿದೆ. ಸಂಕೋಚ ಸ್ವಭಾವದ ರಾಹುಲ್‌ಗೆ ತನ್ನ ಜವಾಬ್ದಾರಿಯ ದಾಹ ಇಲ್ಲ; ಅವರಲ್ಲಿ ರಾಜಕಾರಣಿಯ ಗುಣಲಕ್ಷಣಗಳಿಲ್ಲ ಎಂದು ಆ ಪತ್ರಿಕೆ ಹೇಳಿದೆ. ಆದರೆ ಕೈ ಪಾರ್ಟಿ ಅದಕ್ಕೆಲ್ಲ ತಲೆಕೆಡಿಸಿಕೊಳ್ಳುವುದಿಲ್ಲ (ಬರೇ ಕೈ ಮಾತ್ರ ಕೆಡಿಸಿಕೊಳ್ಳುವ ಜಾಯಮಾನ ಇರಬೇಕು ಅವರದು). ರಾಹುಲ್ ಬೇಕೇ ಬೇಕು ಎಂದು ವರಾತ ಹಿಡಿದಿದ್ದಾರೆ. ಅವರು ಸರ್ಕಾರದಲ್ಲಿ ಭಾಗಿಯಾಗಬೇಕು, ಪಕ್ಷದಲ್ಲಿ ಇನ್ನಷ್ಟು ಹೆಚ್ಚಿನ ಹೊಣೆ ಹೊರಬೇಕು ಅಂತ ಸ್ವತಃ ಪಿಎಮ್ಮು ಹೇಳ್ತಾ ಇರೋವಾಗಲೇ ರಾಹುಲ್ ಮಾತ್ರ ಘೋರ ಸೈಲೆಂಟ್.
ಆದರೆ ಡಿಗ್ಗಿ ಮಾಮ ಏನೂ ಪ್ರತಿಕ್ರಿಯೆ ಕೊಡದೇ ಇರೋದನ್ನ ನೋಡಿದರೆ ಏಕೋ ಡೌಟ್ ಬರ್ತಾ ಇದೆ. ಕಾಂಗ್ರೆಸ್ ಪಾರ್ಟಿನಲ್ಲಿ ರಾಹುಲ್ ಅಡ್ಜಸ್ಟ್ ಆಗ್ತಾ ಇಲ್ವಾ ಅಂತ?! (ಸಿದ್ದರಾಮಯ್ಯರನ್ನ ಯಾಕೆ ನೆನಪಿಸ್ಕೋತೀರಾ?)

* * *
ರಾಹುಲ್ ಬರ್ತಾರೊ, ಬಿಡ್ತಾರೊ ಗೊತ್ತಿಲ್ಲ. ಅದು ಪ್ಯೂರ್‌ಲಿ ಫ್ಯಾಮಿಲಿ ಮ್ಯಾಟರ್. ಅಮ್ಮ-ಮಗನ ವಿಷ್ಯ. ಆದರೆ ಇಷ್ಟರ ಮಧ್ಯೆ, ಗುಜರಾತ್ ಪಿಎಮ್ಮು ನರೇಂದ್ರ ಮೋದಿ ಮಾತ್ರ ಸ್ವಾಮಿ ವಿವೇಕಾನಂದರನ್ನೇ ಅಡ್ಜಸ್ಟ್ ಮಾಡಿಕೊಂಡುಬಿಟ್ಟಿರೋದು ಗ್ರೇಟ್. ವಿವೇಕಾನಂದ ಬ್ಯಾನರ್ ಇಟ್ಟುಕೊಂಡು ಪ್ರಚಾರ ಶುರು ಮಾಡಿದ್ದಾರಂತೆ; ಅವರ ಚಿತ್ರ ಹಾಗೂ ಸಂದೇಶಗಳನ್ನು ಪ್ರಿಂಟಿಸಿರುವ ವಾಲಿಬಾಲ್, ಕ್ರಿಕೆಟ್ ಕಿಟ್‌ಗಳನ್ನು ಗುಜರಾತ್ ಹುಡುಗರಿಗೆ ಕೊಡ್ತಾ ಇದ್ದಾರಂತೆ.
ಗುಜರಾತ್‌ನಲ್ಲಿ ಈಗ ವಿವೇಕಾನಂದರ ಈಗ MODIfied ಸ್ಲೋಗನ್ ಕೇಳಿಸ್ತಾ ಇದೆಯಂತೆ- ಏಳು, ಎದ್ದೇಳು- ಪಿಎಂ ಆಗೊ ತನಕ ವಿರಮಿಸದಿರು ಅಂತ.
ಅಲ್ಲಿಗೆ ಮೋದಿ ಪಕ್ಷೇತರ ವಿವೇಕಾನಂದರನ್ನೇ ಆಪರೇಷನ್ ಕಮಲ ಮಾಡಿಕೊಂಡುಬಿಟ್ರು ಅಂದ ಹಾಗಾಯಿತು!

* * *
ಡೆಮಾಕ್ರಸಿ ಅಂತಂದ್ರೆ ಎಲ್ಲ ಅಡ್ಜಸ್ಟ್ ಮಾಡಿಕೊಳ್ಳಲೇಬೇಕು. ಸ್ವಾಮಿ ವಿವೇಕಾನಂದ ಬಿಜೆಪಿ ಪ್ರಚಾರಕ್ಕೆ ಬಳಕೆಯಾಗ್ತಾರೆ ಅನ್ನೋದು ಗೊತ್ತಾದಾಗಲು ಜೈ ಅನ್ನಬೇಕು; ವ್ಯಂಗ್ಯಚಿತ್ರಕಾರ ರಾಷ್ಟ್ರೀಯ ಗುರುತನ್ನು ತಿರುಚಿದಾಗ ನೋಡಿ ಸುಮ್ಮನಿರಬೇಕು; ಕುಡಿಯಲು ನೀರಿಲ್ಲದ್ದಾಗ ಶಾಸಕರು ಟ್ಯಾಂಗೊ ಡ್ಯಾನ್ಸ್ ಮಾಡೊ ಸುದ್ದೀನ ಕೇಳಿ ಸಹಿಸಿಕೊಳ್ಳಬೇಕು; ದೇವೇಗೌಡ- ಯಡಿಯೂರಪ್ಪ ಆಲೂಗಡೆ ಎಸಿತಾ ಇರೋದನ್ನ ನೋಡಿ ಅಹಾ ಎನ್ನಬೇಕು; ಇಂಧನ ಬೆಲೆ ಹೀಗೆ ಏರೋತ ಇರೋದನ್ನ ನೋಡಿ ಮೌನಿಯಾಗಿರಬೇಕು....
ಎಲ್ಲ ಅಡ್ಜಸ್ಟ್ ಮಾಡಿಕೋಬೇಕು.

* * *

ಕೊನೇ ಮಾತು:
ಬಸ್... ಬಸ್...
- ಇದು ರಾಜ್ಯದ ಜನರು ಬಿಜೆಪಿ ಸರ್ಕಾರದ ಆಡಳಿತ ನೋಡಿ ಮಾಡುತ್ತಿರುವ ಕೋರಿಕೆ. ಹಿಂದಿಯಲ್ಲಾದರೂ ಓದಿಕೊಳ್ಳಿ, ಇಂಗ್ಲಿಷ್‌ನಲ್ಲಾದರೂ ಓದಿಕೊಳ್ಳಿ. ಎಲ್ಲಾ ಒಂದೇ.


Aug 30, 2012
ವೈ ದಿಸ್ 'ಕೋಲ್'ವೇರಿ ಡಿ?
ಯಾಕೋ ಎಲ್ಲ ಕಡೆ ಕಪ್ಪು ಕಪ್ಪು. ಆಕಾಶ ನೋಡಿದರೂ ಕಪ್ಪು. ಪ್ರಧಾನಿ ಮುಖವೂ ಕಪ್ಪು. ಯುಪಿಎ ಸರ್ಕಾರದ ಎಲ್ಲರ ಮುಖದಲ್ಲೂ ಕಲ್ಲಿದ್ದಲ ಕಪ್ಪು. ಬ್ಲಾಕ್‌ಮನಿ ಬಗ್ಗೆ ಮಾತಾಡಿ ಮಾತಾಡಿ ಸುಮ್ಮನಾದ ಅಡ್ವಾಣಿ ಮುಖದಲ್ಲೂ ಬೇಸರದ ಕಪ್ಪು. ಇದೆಲ್ಲದರ ಜತೆಗೆ ನಮ್ಮ ಸಿಎಂ ಶೆಟ್ಟರ್ ಮುಖವೂ ಕಪ್ಪಿಟ್ಟುಬಿಟ್ಟಿದೆ- ಈ ಯಡಿಯೂರಪ್ಪ ಎಲ್ಲೋದ್ರೂನೂ ಜತೆಗೆ ಬರ್ತಾರಲ್ಲ ಅಂತ!.
ಬಹುಶಃ ಕರಿಮುಖ ಗಣೇಶ ಹಬ್ಬ ಬರೋ ಟೈಮಾಯಿತು ಅಂತಿರಬೇಕು- ಹಾಗಾಗಿ ಎಲ್ಲರದೂ ಕರಿ-ಮುಖ!

***
ಜಾರ್ಖಂಡ್‌ನ ಕೋಲ್, ಕಲ್ಮಾಡಿಯ ಖೇಲ್. ಬಳ್ಳಾರಿಯ ಬೇಲ್, ಸಿಬಿಐ ಸವಾಲ್. . ಹೀಗೆ ಎಲ್ಲ ಪಕ್ಷಗಳಿಗೂ ಮಸಿ ಅಂಟಿಕೊಂಡುಬಿಟ್ಟಿದೆ. ಇದನ್ನು ತೊಳೆಯೋದು ಹೇಗೆ ಅಂತ ಎಲ್ಲರೂ ಯೋಚನೆ ಮಾಡ್ತಿರೋವಾಗಲೇ ನೀರು ಸಿಗ್ತಾ ಇಲ್ಲ ಅನ್ನೋದು ಗೊತ್ತಾಗಿಬಿಟ್ಟಿದೆ. ನೀರು ಇಲ್ಲಾಂದ್ರೂ ಪರವಾಗಿಲ್ಲ, ಬರ ಇದೆಯಲ್ಲ ಅಂತ ಫಸ್ಟ್ ಫ್ಲಾಷ್ ಆಗಿರೋದು ಬಿಜೆಪಿಯವರಿಗೆ. ಯಡಿಯೂರಪ್ಪ ಹೊರಟೇಬಿಟ್ರು. ಜತೆಗೆ ಸಿಎಂ, ಡಿಸಿಎಂ, ಮಿನಿಷ್ಟ್ರು, ಎಂಎಲ್ಲೆಗಳು ಭರದ ಪ್ರವಾಸ ಹೊರಟುಬಿಟ್ರು ನೀರಿಲ್ಲದ ಊರಿಗೆ ಮುಖ ತೊಳೆಯೋಕೆ.
ಒಣಗಿದ ಕೆರೆಯಿಂದ ಎದ್ದು ಬರಲು ಕಮಲ ಹೊರಟರೆ, ಕೈ ಸುಮ್ನಿರುತ್ತಾ? ನೇರವಾಗಿ ಕಸಕ್ಕೇ ಕೈ ಹಾಕಿಬಿಟ್ಟಿದೆ!
ಇಡೀ ಬೆಂಗಳೂರು ಕಸದಿಂದ ನಾರಿಕೊಂಡು ಎಲ್ಲರೂ ಮೂಗುಮುಚ್ಚಿಕೊಂಡು ಪ್ರಾಣಾಯಾಮ ಮಾಡ್ತಿದ್ದಾರೆ. ಕಸದ ರಾಶಿ ಸುತ್ತಾ ಮುತ್ತ ಇಲಿ, ಹೆಗ್ಗಣಗಳು, ಹಾವುಗಳೆಲ್ಲ ಬರ್ತಾ ಇವೆ. ಅಂಥ ಹೊತ್ತಲ್ಲಿ ಕಸದ ಸುತ್ತಮುತ್ತ ಕಾಂಗ್ರೆಸ್ ನಾಯಕರೂ ಬಂದಿದ್ದಾರೆ!
ತಾನು ಕಳಕೊಂಡಿರುವ ವೋಟ್‌ಬ್ಯಾಂಕ್ ಇಲ್ಲೆಲ್ಲೋ ಕಸದ ರಾಶಿ ಮಧ್ಯೆ ಇದೆಯಾ ಅಂತ ಹುಡುಕಾಡ್ತಿದೆ ಕಾಂಗ್ರೆಸ್. ಕೈ ಕಸವಾದರೆ ಬಾಯಿಗೆ ಮೊಸರು ಅಂತ ಸೋನಿಯಾ ಹೇಳಿ ಕಳುಹಿಸಿದ್ದಾರೋ ಗೊತ್ತಿಲ್ಲ.
ಆದರೆ ಇದೆಲ್ಲ ನೋಡಿಕೊಂಡು ಜೆಡಿಎಸ್ ಮಾತ್ರ 'ಕಸ'ಕ್ ಅಂತ ನಗ್ತಾ ಇದೆ. ಬೆಂಗಳೂರಲ್ಲಿ ಏನು ಸರ್ಕಸ್ ಮಾಡಿದ್ರು ತಮಗೆ ವೋಟ್ ಸಿಗಲ್ಲ ಅಂತ ಅವರಿಗೆ ಗೊತ್ತಿದೆಯಲ್ಲ!
** *
ಪ್ರಾಣಾಯಾಮ ಅಂದಾಗ ನೆನಪಾಗೋದೇ ಅದೇ ಬ್ಲಾಕ್‌ಮನಿ ಫೈಟರ್ ಬಾಬಾ ರಾಮ್‌ದೇವ್. ಬಿಬಿಎಂಪಿ ಆಡಳಿತ ಪಕ್ಷದ ಸದಸ್ಯರಿಗೂ ಬಾಬಾ ನೆನಪಾಗಲಿ ಅನ್ನೋದು ಈ ನಗರದ ಎಲ್ಲರ ಆಶಯ. ಉಹುಂ, ಕಪ್ಪುದುಡ್ಡಿನ ವಿರುದ್ಧ ಗುಡುಗೋಕೆ ಅಲ್ಲ. ಬೆಂಗಳೂರು ಜನಕ್ಕೆ ಉಸಿರಾಡದೆ ಬದುಕೋದು ಹೆಂಗೆ ಅಂತ ಕಲಿಸೋಕೆ.
** *
ಎಂಥ ವೈರುಧ್ಯ ನೋಡಿ; ಕಸದ ಬಗ್ಗೆ ನೋಡ್ರೀ ಅಂತ ಜನ ಅಂದ್ರೆ ಈ ಬಿಜೆಪಿಯೋರ ತಲೇಲಿ ಬರೇ ಕಸಬ್‌ದ್ದೇ ಗುಂಗು. ಕಾಂಗ್ರೆಸ್‌ನವರು ಇನ್ನೂ ಸೊಫೆಸ್ಟಿಕೇಟೆಡ್. ನಮ್ಮೂರ ಬರದ ಬಗ್ಗೆ ಮಾತಾಡಿ ಅಂದರೆ, ದಿಲ್ಲಿ ಕಾಂಗ್ರೆಸ್‌ನವರ ಬಾಯ್ತುಂಬಾ ಸೈಬರದ ಮಾತು. ಪ್ರಧಾನಿ ಮಾತ್ರ ಯಥಾ ಪ್ರಕಾರ 'ಮೌನ'ಮೋಹನ್ ಸಿಂಗ್!
***
ಎಲ್ಲ ಪಕ್ಷದೋರು ಒಂದೇ ಕಣ್ರೀ. ಕಪ್ಪು ಅಂಟಿಸಿಕೊಂಡಾಗ ಯಾರು ಯಾವ ಪಕ್ಷದೋರು ಅಂತಾನೇ ಗೊತ್ತಾಗಲ್ಲ. ಎಲ್ಲ ಬಣ್ಣಾನ ಮಸಿ ನುಂಗ್ತು ಅನ್ನೋ ಹಾಗೆ ಎಲ್ಲ ಪೊಲಿಟಕಲ್ ಪಾರ್ಟಿಗಳನ್ನೂ ಮಸಿ ನುಂಗ್ತಾ ಇದೆ. ಅದು ಗಣಿ ಮಸಿ. ಕಲ್ಲಿದ್ದಲ್ಲ ಗಣಿಯಿಂದ ಹಿಡಿದು ಕಬ್ಬಿಣದ ಗಣಿ ತನಕ ಎಲ್ಲ ಪಕ್ಷಗಳು ಒಂದೊಂದಾಗಿ ಅದೇ ಗಣಿಗೆ ದೊಪದೊಪನೆ ಬೀಳುತ್ತಿವೆ. ಮುಂದಿನ ಎಲೆಕ್ಷನ್‌ನಲ್ಲಿ ಎಲ್ಲರ ಸ್ಲೋಗನ್ನೂ ಒಂದೇ.. 'ನಾನೇ ಸಾಕಿದ ಗಣಿ...'