Saturday, February 9, 2013


ವಿಕಿರಣ ಕರ್ನಾಟಕ 

ಸುಂದರ ನದಿವನಗಳ ನಾಡೇ, ಗಂಧದ ಚಂದದ ಹೊನ್ನಿನ ಗಣಿಯೇ  ಹೀಗೆಂದು ರಾಷ್ಟ್ರಕವಿ ಕುವೆಂಪು ಅವರಿಂದ ಬಣ್ಣಿಸಲ್ಪಟ್ಟಿರುವ ಕನ್ನಡ ನಾಡು ಅಪಾಯಕಾರಿ ಯುರೇನಿಯಂನ್ನೂ ತನ್ನ ಭೂಗರ್ಭದಲ್ಲಿರಿಸಿಕೊಂಡಿದೆ. ಅಷ್ಟೇ ಅಲ್ಲ, ಇಲ್ಲಿ  ಒಂದರ ಮೇಲೊಂದು ಯುರೇನಿಯಂ ಸಂಸ್ಕರಣಾ ಘಟಕಗಳೂ ತಲೆ ಎತ್ತಲಾರಂಭಿಸುತ್ತಿವೆ; ನ್ಯೂಕ್ಲಿಯರ್‌ ಘಟಕದ ತ್ಯಾಜ್ಯಕ್ಕೂ ಕರುನಾಡೇ  ಕಸದ ಬುಟ್ಟಿ ಆಗುತ್ತಿದೆ. ಯುರೇನಿಯಂ ಎಂದಾಕ್ಷಣ ಏಕೆ ಜನಸಮುದಾಯ ಬೆಚ್ಚಿಬೀಳುತ್ತದೆ? ಈ ನಿಟ್ಟಿನಲ್ಲಿ ಒಂದು ರೌಂಡಪ್‌.

ಕಳೆದ ತಿಂಗಳು ಕೋಲಾರದ ಚಿನ್ನದ ಗಣಿಯ ಸುರಂಗಗಳಿಗೆ ತಮಿಳುನಾಡಿನ ಕೂಡಂಕುಲಂ ಪರಮಾಣು ವಿದ್ಯುತ್‌ ಘಟಕದ ತ್ಯಾಜ್ಯಗಳನ್ನು ತಂದು ಸುರಿಯಲಾಗುವುದು ಎಂಬ ಸುದ್ದಿ ದಟ್ಟವಾಗಿ ಹಬ್ಬಿತ್ತು. ಜನ ರೊಚ್ಚಿಗೆದ್ದರು. ಬಂದ್‌ ನಡೆಸಿದರು. ಚುನಾವಣೆ ಹತ್ತಿರ ಬರುತ್ತಿದೆ ಎನ್ನುವ ಕಾರಣಕ್ಕೋ ಏನೋ ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ -ಇಲ್ಲ, ಹಾಗೇನೂ ಇಲ್ಲ- ಎಂದು ಸಮಜಾಯಿಷಿ ಕೊಟ್ಟಿತು. ಕೇಂದ್ರ ಸರ್ಕಾರ ಸುಪ್ರೀಂಕೋರ್ಟಿಗೆ ಸಲ್ಲಿಸಿದ್ದ  ಪ್ರಮಾಣಪತ್ರವನ್ನು ವಾಪಸ್‌ ಮಾಡಿಕೊಂಡಿತು.
ಒಂದು ವಾರ ಕಳೆದಿರಲಿಲ್ಲ. ಕೂಡಂಕುಲಂ ತ್ಯಾಜ್ಯವನ್ನು ಸುರಿಯಲು ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ  ಸ್ಥಳ ಹುಡುಕಲಾಗುತ್ತಿದೆ ಎಂದು ಅದೇ ವಕೀಲರು ಸುಪ್ರೀಂಕೋರ್ಟಿಗೆ ಮೌಖಿಕವಾಗಿ ಹೇಳಿಕೆಯೊಂದನ್ನು ನೀಡಿದರು. ಈ ವಿಷಯ ಎಲ್ಲೂ ಹೆಚ್ಚು ಸುದ್ದಿಯಾಗಲಿಲ್ಲ.
ಅದರರ್ಥ- ಕೋಲಾರದಲ್ಲಿ ಅಣುತ್ಯಾಜ್ಯ ಸುರಿಯುವ ವಿಷಯಕ್ಕೆ ಪೂರ್ಣವಿರಾಮ ಬಿದ್ದಿಲ್ಲ ಅಂತಲೇ. ವಾಸ್ತವವಾಗಿ, ಯಾವುದೇ ಪರಮಾಣು ವಿದ್ಯುತ್‌ ಘಟಕದಲ್ಲಿ 15 ರಿಂದ 20 ವರ್ಷಗಳ ಕಾಲ ತ್ಯಾಜ್ಯವನ್ನು ಕಾಪಿಟ್ಟುಕೊಳ್ಳುವ ಅವಕಾಶ ಇದೆ. ಆ ನಂತರವಷ್ಟೇ  ತ್ಯಾಜ್ಯಗುಂಡಿ ಬೇಕಾಗಿರುವುದು. ಅದು ಕೋಲಾರದ ಚಿನ್ನದ ಗಣಿಯೂ ಆಗಿರಬಹುದು. . . ಯಾರಿಗೊತ್ತು?
ಕೋಲಾರ ಪ್ರಕರಣಕ್ಕೆ ಸದ್ಯಕ್ಕೆ ವಿರಾಮ ಬಿದ್ದಿದೆ. ಆದರೆ ಮತ್ತೊಂದೆಡೆ ಕರ್ನಾಟಕ ಪರಮಾಣು ವಿದ್ಯುತ್‌ ಉತ್ಪಾದನೆಗೆ ಬೇಕಾದ ಯುರೇನಿಯಂ ಕೇಂದ್ರಬಿಂದುವಾಗುವ ಎಲ್ಲ ಸಾಧ್ಯತೆಗಳು ಕಾಣಿಸಿಕೊಳ್ಳುತ್ತಿವೆ. ಇನ್ನು  3-4 ದಶಕಗಳಲ್ಲಿ  ಕರುನಾಡು ಯುರೇನಿಯಂ ನಾಡಾಗಿ ಪರಿವರ್ತನೆಗೊಂಡರೂ ಅಚ್ಚರಿಪಡಬೇಕಿಲ್ಲ. ಇದನ್ನು ಪುಷ್ಟೀಕರಿಸಲು ಎಂಟು ಕಾರಣಗಳು ಇಲ್ಲಿವೆ.
1. 
ಕೋಲಾರದಲ್ಲಿ ತ್ಯಾಜ್ಯ ಸುರಿಯುತ್ತಾರೆ ಎನ್ನುವ ಸುದ್ದಿ ಭಾರಿ ಕೋಲಾಹಲಕ್ಕೆ ಕಾರಣವಾಯಿತು. ಆದರೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಎಂಬ ಪುಟ್ಟ ಗ್ರಾಮದಲ್ಲಿ  ಯುರೇನಿಯಂ ಗಣಿಗಾರಿಕೆ ಹೆಚ್ಚು ಕಡಿಮೆ ಶುರುವಾಗಿಬಿಟ್ಟಿದೆ. ಆದರೆ ಇದು ಯಾವ ಕೋಲಾಹಲವನ್ನೂ ಸೃಷ್ಟಿಸಲಿಲ್ಲ.
ಗುಲ್ಬರ್ಗದ ಸೇಡಂನಿಂದ ಬಿಜಾಪುರದ ತನಕ ಇರುವ ಭೀಮಾನದಿ ಪಾತ್ರದಲ್ಲಿ  ಅತ್ಯಂತ ಸಮೃದ್ಧವಾಗಿ ಯುರೇನಿಯಂ ಇದೆ ಎನ್ನುವುದು ಖಚಿತವಾಗಿದೆ. ಅದರಲ್ಲೂ ಗೋಗಿಯಲ್ಲಿ  ದಟ್ಟ ನಿಕ್ಷೇಪ ಇರುವುದು ಸ್ಪಷ್ಟವಾಗಿದೆ. ಇಲ್ಲಿ ಕಳೆದ ಏಳೆಂಟು  ವರ್ಷಗಳ ಹಿಂದೆ ಆರಂಭವಾದ ವಿವಿಧ ಹಂತಗಳ ಪರೀಕ್ಷೆ ಈಚೆಗೆ ಕೊನೆಗೊಂಡಿದ್ದು, ಮುಂದಿನ ವರ್ಷ ಗಣಿಗಾರಿಕೆ ಆರಂಭವಾಗಲಿದೆ. ಒಟ್ಟಾರೆ 39.13 ಎಕರೆ ಜಾಗದಲ್ಲಿ  ಪೂರ್ಣ ಗಣಿಗಾರಿಕೆ ನಡೆಸಲು ಯುರೇನಿಯಂ ಕಾರ್ಪೊರೇಷನ್‌ ಆಫ್‌ ಇಂಡಿಯಾ ಲಿಮಿಟೆಡ್‌ (ಯುಸಿಐಎಲ್‌) ಮುಂದಾಗಿದೆ. ಜಾರ್ಖಂಡ್‌ನ ಜಾದುಗುಡ ಮತ್ತು  ಆಂಧ್ರಪ್ರದೇಶದ  ಪುಲಿವೆಂದುಲದ  ನಂತರ ಮೂರನೇ ಗಣಿ ಇದಾಗಿದೆ. ಆದರೆ, ಇವೆಲ್ಲದ್ದಕ್ಕಿಂತಲೂ ಅತ್ಯಂತ ಸಮೃದ್ಧವಾದ ಅದಿರು ಇಲ್ಲಿ ದೊರೆಯುತ್ತದೆ.
ಸಮೀಪದಲ್ಲೇ ಸಂಸ್ಕರಣಾ ಘಟಕವೂ ಬರಲಿದೆ. ಇದಕ್ಕಾಗಿ  ಸೈದಾಪುರ, ಡಿಗ್ಗಿ  ಹಾಗೂ ಉಮರದೊಡ್ಡಿ  ಎಂಬ ಗ್ರಾಮಗಳನ್ನೊಳಗೊಂಡಂತೆ 102.23 ಹೆಕ್ಟೇರ್‌ ಜಾಗದ ಭೂ ಸ್ವಾಧೀನಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಈ ಗಣಿ ಮೂಲಕ  ಪ್ರತಿವರ್ಷ 1,50,000 ಟನ್‌  ಯುರೇನಿಯಂ ಉತ್ಪಾದನೆಯಾಗಲಿದ್ದು, ಸಂಸ್ಕರಣೆಯ ನಂತರ 150 ಟನ್‌ ಸಾಂದ್ರೀಕೃತ ಯುರೇನಿಯಂ ಲಭ್ಯವಾಗಲಿದೆ ಎಂದು ಪರಮಾಣು ಖನಿಜಗಳ ಅನ್ವೇಷಣೆ ಮತ್ತು ಸಂಶೋಧನಾ  ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಗೋಗಿಯ ನಂತರ ಯುಸಿಐಎಲ್‌ ಕಣ್ಣು  ಸಮೀಪದ ಉಕ್ಕಿನಾಳ್‌, ದರ್ಶನಾಪುರ, ತಿಂಥಿಣಿ ಎಂಬ ಗ್ರಾಮಗಳ ಮೇಲೆ ಬೀಳಬಹುದು.
2.
ಇಷ್ಟೇ ಸಮೃದ್ಧ  ಯುರೇನಿಯಂ ನಿಕ್ಷೇಪ ಪತ್ತೆಯಾಗಿರುವುದು ಬೆಳಗಾವಿಯ ಕಲಾದಗಿ ಮುಖಜಭೂಮಿಯಲ್ಲಿ. ಬೆಳಗಾವಿಯಿಂದ ಸುಮಾರು 50 ಕಿಮೀ ದೂರ ಇರುವ ದೇಶನೂರು, ಹೋಗರ್ತಿ, ಕೊಳಾದ್ರಿ ಮತ್ತು ಕೊಲ್ದೂರು ಎಂಬಲ್ಲಿ  ಈಗಾಗಲೇ ಕೇಂದ್ರ ಪರಮಾಣು ಸಚಿವಾಲಯದ ವಿಜ್ಞಾನಿಗಳು ಸಮೀಕ್ಷೆ ಮತ್ತು ಪರೀಕ್ಷೆ ಮುಗಿಸಿದ್ದಾರೆ. ಆದರೆ ಇಲ್ಲಿ ಪೂರ್ಣ ಪ್ರಮಾಣದ ಗಣಿಗಾರಿಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿಲ್ಲ.
ಈ ಭಾಗದಲ್ಲಿ  ಸುಮಾರು 50,000 ಮಂದಿ ನೆಲೆಸಿದ್ದು, ಇವರ ಸ್ಥಳಾಂತರಕ್ಕೆ ರಾಜ್ಯ ಸರ್ಕಾರ ಪ್ರಾಥಮಿಕ ಯೋಜನೆಯನ್ನೂ ರೂಪಿಸಿದೆ. ಖಾನಾಪುರ ತಾಲೂಕಿನ ವಿಶೇಷ ಅರಣ್ಯ ವಲಯದಲ್ಲಿ ಪುನರ್ವಸತಿ ಕಲ್ಪಿಸುವುದಾಗಿ ಜಿಲ್ಲಾಡಳಿತ ಹಿಂದೆ ಹೇಳಿತ್ತು.
-ಕಲಾದಗಿ ಭಾಗದಲ್ಲಿ  ಯುರೇನಿಯಂ ನಿಕ್ಷೇಪ ಇರುವುದು ನಿಜ. ಆದರೆ ಅದರ ಗಣಿಗಾರಿಕೆ ಆರ್ಥಿಕವಾಗಿ ಸಾಧುವೇ ಎನ್ನುವುದನ್ನು  ಇನ್ನಷ್ಟೇ ಪರಿಶೀಲಿಸಬೇಕಿದೆ. ಅಲ್ಲಿ ಇನ್ನೊಂದು ಗೋಗಿ ಸಿಕ್ಕರೂ ಸಿಗಬಹುದು ಎಂದು ಪರಮಾಣು ಖನಿಜಗಳ ಅನ್ವೇಷಣೆ ಮತ್ತು ಸಂಶೋಧನಾ  ನಿರ್ದೇಶನಾಲಯದ ಪ್ರಾದೇಶಿಕ ನಿರ್ದೇಶಕ ಡಾ. ಆರ್‌.ಮೊಹಾಂತಿ ಹೇಳುತ್ತಾರೆ.

3
ಕರ್ನಾಟಕಕ್ಕೂ ಯುರೇನಿಯಂಗೂ ಇಂದು ನಿನ್ನೆಯ ನಂಟಲ್ಲ.  1978ರಿಂದಲೇ ರಾಜ್ಯದಲ್ಲಿ ಯುರೇನಿಯಂಗಾಗಿ ಹುಡುಕಾಟ ನಡೆಯುತ್ತಲೇ ಇದೆ. ಇದಲ್ಲದೆ, ಪಶ್ಚಿಮ ಘಟ್ಟ ಪ್ರದೇಶಕ್ಕೆ ಹೊಂದಿಕೊಂಡಿರುವ ಬಲ್ಕುಂಜಗುಡ್ಡೆ, ಚಿಕ್ಕಮಗಳೂರಿನ ಕಳಸಾಪುರ,  ಉತ್ತರ ಕನ್ನಡದ ಅರೇಬೈಲ್‌ ಗ್ರಾಮ ಹಾಗೂ ಸುರಪುರ ತಾಲೂಕಿನ ತಿಂಥಿಣಿ ಪ್ರದೇಶದಲ್ಲಿ  ಸಮೀಕ್ಷೆ  ನಡೆದಿದೆ. ಸಮೀಕ್ಷೆ ನಡೆದಾಗಲೆಲ್ಲ ಸಾರ್ವಜನಿಕರು, ಪರಿಸರವಾದಿಗಳು ದನಿ ಎತ್ತಿದ್ದರು. ಅರೇಬೈಲ್‌ನಲ್ಲಿ  ಗಣಿಗಾರಿಕೆ ಸಮೀಕ್ಷೆ ನಡೆದಾಗ ಸಾಹಿತಿ ಡಾ. ಶಿವರಾಮ ಕಾರಂತರ ನೇತೃತ್ವದಲ್ಲಿ  ಪ್ರತಿರೋಧ ವ್ಯಕ್ತವಾಗಿತ್ತು. ಸದ್ಯಕ್ಕೆ ಈ ಯಾವುದೇ ಭಾಗದಲ್ಲಿ ಗಣಿಗಾರಿಕೆ ಮಾಡುವ ಉದ್ದೇಶ ಇಲ್ಲ. ಅದು ಆರ್ಥಿಕವಾಗಿ ಲಾಭದಾಯಕವಲ್ಲ ಎಂದು ಪರಮಾಣು ಖನಿಜಗಳ ಅನ್ವೇಷಣೆ ಮತ್ತು ಸಂಶೋಧನಾ  ನಿರ್ದೇಶನಾಲಯ ಹೇಳಿದೆ.

4
 ಕೋಲಾರದ ಅಂತರ್ಜಲದಲ್ಲಿ ಈಗಲೂ ಯುರೇನಿಯಂ ಇದೆ ಎನ್ನುವುದು ತಿಳಿದಿದೆಯೇ?  ಈಚೆಗೆ ಬಾಬಾ ಅಟಾಮಿಕ್‌ ರೀಸರ್ಚ್‌ ಸೆಂಟರ್‌ ಹಾಗೂ ಸೆಂಟರ್‌ ಫಾರ್‌ ಎನ್‌ವಿರಾನ್‌ಮೆಂಟ್‌ ಅಂಡ್‌ ಎನರ್ಜಿ ರೀಸರ್ಚ್‌ ಸ್ಟಡೀಸ್‌ನ  ಸಹಯೋಗದಲ್ಲಿ  ವಿಜ್ಞಾನಿಗಳು ನಡೆಸಿದ ಸಮೀಕ್ಷೆಯಲ್ಲಿ ಈ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ 11 ತಾಲೂಕುಗಳಲ್ಲಿನ  52 ಕೊಳವೆ ಬಾವಿಗಳಲ್ಲಿ  ಈ ಅಧ್ಯಯನ ಮಾಡಲಾಗಿದೆ. ಇಲ್ಲಿ ಯುರೇನಿಯಂ ಅಂಶ ಪ್ರತಿ ಲೀಟರ್‌ಗೆ 0.3ರಿಂದ 1442.9 ಮೈಕ್ರೊ ಗ್ರಾಮ್‌ ತನಕ ಇದೆ. ಆದರೆ ವಿಶ್ವ ಆರೋಗ್ಯ ಸಂಸ್ಥೆ ಸೂಚಿಯ ಪ್ರಕಾರ ಪ್ರತಿ ಲೀಟರ್‌ಗೆ 2ರಿಂದ 30 ಮೈಕ್ರೋಗ್ರಾಮ್‌ಗಿಂದ ಕಡಿಮೆ ಇದ್ದರೆ ಮಾತ್ರ ಅದು ಕುಡಿಯಲು ಯೋಗ್ಯ. ಕೋಲಾರ ಸುತ್ತಮುತ್ತ ಗ್ರಾನೈಟ್‌ ಕಲ್ಲುಗಳು ಇರುವುದರಿಂದ ಯುರೇನಿಯಂ ಅಂಶ ಇರುವುದು  ಸಹಜ ಎಂದು ತಜ್ಞರು ಹೇಳುತ್ತಾರೆ.

5.
ಬೆಂಗಳೂರಿನ ಗಾಳಿ ಮತ್ತು ನೀರು ಯುರೇನಿಯಂ ಮುಕ್ತವಾಗಿಲ್ಲ. ಇಲ್ಲಿ ನೀವು ಕುಡಿಯುವ ನೀರು ಮತ್ತು ಗಾಳಿಯಲ್ಲಿ  ರೇಡಿಯೋವಿಕಿರಣ ರೇಡಾನ್‌ ಇರುವುದು  ಅಧ್ಯಯನಗಳಿಂದ ಖಚಿತವಾಗಿದೆ. ಬಾಬಾ ಅಟಾಮಿಕ್‌ ರೀಸರ್ಚ್‌ ಸೆಂಟರ್‌ ಮತ್ತು ಬೆಂಗಳೂರು ವಿವಿಯ ಪರಿಸರ ವಿಜ್ಞಾನ ವಿಭಾಗ ಜಂಟಿಯಾಗಿ ನಡೆಸಿದ ಅಧ್ಯಯನದಲ್ಲಿ  ಬೆಂಗಳೂರಿನ ಅಂತರ್ಜಲದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ರೇಡಾನ್‌ ಇದೆ ಎನ್ನುವುದು ಗೊತ್ತಾಗಿದೆ. ಪ್ರೊ. ಆರ್‌.ಕೆ.ಸೋಮಶೇಖರ್‌ ನೇತೃತ್ವದ ಈ ಅಧ್ಯಯನ ತಂಡ ಬೆಂಗಳೂರಿನ ವಿವಿಧ ಮೂಲಗಳಿಂದ 78 ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಅಭ್ಯಸಿಸಿತು. ರೇಡಾನ್‌ ಅಂಶ ಪ್ರತಿ ಲೀಟರ್‌ಗೆ 11.1 ಬೆಕ್ವೆರಲ್‌ ಗಿಂತ ಹೆಚ್ಚಿರುವುದು ದಾಖಲಾಗಿದೆ. ಯುರೇನಿಯಂ ಸಮೃದ್ಧ ಕಲ್ಲುಗಳಿಂದ ಈ ರೇಡಾನ್‌ ಉತ್ಪತ್ತಿಯಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿಯೇ ನಗರದಲ್ಲಿ  ಹೊಟ್ಟೆ ಕ್ಯಾನ್ಸರ್‌ ಹೆಚ್ಚುತ್ತಿದೆ ಎಂದು ತಜ್ಞರು ಅಂದಾಜಿಸುತ್ತಾರೆ.

6
ಚಿಕ್ಕಮಗಳೂರು ಜಿಲ್ಲೆಯಲ್ಲೂ ರೇಡಾನ್‌ ಮತ್ತು  ರೇಡಿಯೋ ವಿಕಿರಣ ಅಂಶಗಳು ಇವೆ ಎಂದರೆ ನಂಬುವಿರಾ? ಶಿವಮೊಗ್ಗ, ಸಿರಾ ಹಾಗೂ ಮೈಸೂರಿನ ಭೌತ ವಿಜ್ಞಾನದ  ಅಧ್ಯಾಪಕರಾದ ಎಸ್‌.ಮಂಜುನಾಥ್‌. ಎ.ಜಯಶೀಲನ್‌ ಹಾಗೂ ಪಿ. ವೆಂಕಟರಮಣಯ್ಯ ಅವರನ್ನೊಳಗೊಂಡ ತಂಡವೊಂದು ಈಚೆಗೆ ಚಿಕ್ಕಮಗಳೂರು ಜಿಲ್ಲೆಯ ಮಣ್ಣಿನ ಸ್ಯಾಂಪಲ್‌ನ್ನು ಪರೀಕ್ಷಿಸಿತು.
ರೇಡಾನ್‌ 226, ರೇಡಾನ್‌ 228, ಪೊಲೋನಿಯಂ 210 ಹಾಗೂ ಸೀಸ 210ಗಳು ಹೊರಸೂಸುವ ಗಾಮಾ ಪ್ರಮಾಣ ಹೆಚ್ಚಿರುವುದು ಈ ಅಧ್ಯಯನದಲ್ಲಿ ಬೆಳಕಿಗೆ ಬಂದಿದೆ. ಕೃಷಿಭೂಮಿಯಲ್ಲಿ ಈ ಪ್ರಮಾಣ ಹೆಚ್ಚಿದ್ದು, ಬಹುಶಃ ಇದು ಗ್ರಾನೈಟ್‌ ಮತ್ತು ಯುರೇನಿಯಂ ಅಂಶದಿಂದಲೇ ವಿಸರ್ಜನೆಯಾಗುತ್ತಿದೆ ಎಂದು ಅಧ್ಯಯನ ಅಂದಾಜು ಮಾಡಿದೆ. ಇಲ್ಲಿ ಕುಡಿಯುವ ನೀರಿನಲ್ಲಿ 0.2ರಿಂದ 27.9 ಮೈಕ್ರೊಗ್ರಾಮ್‌ನಷ್ಟು ಯುರೇನಿಯಂ ಅಂಶ ಪತ್ತೆಯಾಗಿದೆ.

7
 ಇದೆಲ್ಲವೂ ಕರ್ನಾಟಕ ಯುರೇನಿಯಂ ಸಮೃದ್ಧ ಎಂದು ಸೂಚಿಸಿದರೆ, ಮಾನವನಿರ್ಮಿತ ಯುರೇನಿಯಂ ಸಂಸ್ಕರಿತ ಘಟಕಗಳಿಗೂ ಕರ್ನಾಟಕ ನೆಚ್ಚಿನ ತಾಣವಾಗಿದೆ. ಭಾರಿ ವಿರೋಧದ ನಡುವೆ ಉತ್ತರ ಕನ್ನಡ ಜಿಲ್ಲೆಯ ಕೈಗಾದಲ್ಲಿ ನ್ಯೂಕ್ಲಿಯರ್‌ ವಿದ್ಯುತ್‌ ಉತ್ಪಾದನಾ ಘಟಕ ಆರಂಭವಾಗಿದೆ. ಇದರಿಂದ ಜನಜೀವನಕ್ಕೆ ಯಾವುದೇ ಅಪಾಯ ಇಲ್ಲ; ವಿಕಿರಣ ಜನಜೀವನಕ್ಕೆ ತಟ್ಟದ ಹಾಗೆ ಎಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದು ಪರಮಾಣು ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಆದರೆ ಕೈಗಾ ಸುತ್ತಮುತ್ತಲಿನ ಜನರಲ್ಲಿ ಭಯ ಮಾತ್ರ ವಿಪರೀತವಾಗಿದೆ. ಆ ಭಾಗದಲ್ಲಿ ಕ್ಯಾನ್ಸರ್‌ ಪ್ರಮಾಣ ಹೆಚ್ಚಾಗಿದೆ ಎನ್ನುವ ವರದಿಗಳು ಜನರನ್ನು ತಲ್ಲಣಗೊಳಿಸಿವೆ. ಆ ಕ್ಯಾನ್ಸರ್‌ಗೂ ಕೈಗಾ ಘಟಕಕ್ಕೂ ಸಂಬಂಧ ಇದೆ ಎನ್ನುವುದನ್ನು ಯಾವುದೇ ಅಧ್ಯಯನಗಳು ಶ್ರುತಪಡಿಸಿಲ್ಲ. ಆದರೂ, ಉತ್ತರ ಕನ್ನಡ ಜಿಲ್ಲೆಯ ಜನ ಮಡಿಲಲ್ಲಿ ಬೆಂಕಿಯನ್ನು ಇಟ್ಟುಕೊಂಡಂತೆ ಒಳಗೊಳಗೆ  ಬೇಯುತ್ತಿದ್ದಾರೆ. ನಾಳೆ ಏನೋ ಎಂಬ ಚಿಂತೆ

8
ಹೆಚ್ಚಿನ ಜನರಿಗೆ ಗೊತ್ತಿಲ್ಲ. ಮೈಸೂರಿನಿಂದ 20 ಕಿಮೀ ದೂರದ ರಟ್ನಹಳ್ಳಿ ಎಂಬಲ್ಲಿ ರೇರ್‌ ಮೆಟೀರಿಯಲ್‌ ಪ್ಲಾಂಟ್‌ ಎನ್ನುವ ಘಟಕ ಇದೆ. ಇದು ಅದರ ಕೋಡ್‌ನೇಮ್‌. ಅಣು ವಿದ್ಯುತ್‌ ಇಲಾಖೆ ಸ್ಥಾಪಿಸಿರುವ ಈ ಘಟಕದಲ್ಲಿ  ಯುರೇನಿಯಂ ಸಮೃದ್ಧೀಕರಣ ಪ್ರಕ್ರಿಯೆ ನಡೆಯುತ್ತದೆ. ಅಂದರೆ ಒಂದು ಬಾರಿ ಬಳಸಿ ಶಕ್ತಿ ಕಳೆದುಕೊಂಡ ಯುರೇನಿಯಂಗೆ ಮತ್ತೆ ಶಕ್ತಿ ತುಂಬುವ ಕೆಲಸ.  ಹಾಗೆಯೇ, ಜಾರ್ಖಂಡ್‌ನಲ್ಲಿ ಗಣಿಗಾರಿಕೆಯಾದ ಯುರೇನಿಯಂನ್ನು ಹೈದರಾಬಾದ್‌ಗೆ ಶುದ್ಧೀಕರಣಕ್ಕೆ ಕಳುಹಿಸಲಾಗುತ್ತದೆ. ಬಳಿಕ ಅದನ್ನು ಮೈಸೂರಿಗೆ  ತಂದು ನ್ಯೂಕ್ತಿಯರ್‌ ಗ್ರೇಡ್‌ ಯುರೇನಿಯಂ ಆಗಿ ಪರಿವರ್ತಿಸಲಾಗುತ್ತದೆ.  ಅಂದರೆ, ಯುರೇನಿಯಂ ಅಂಶವನ್ನು ವೃದ್ಧಿಸಲಾಗುತ್ತದೆ.  ಅದಿರಿನಲ್ಲಿ ಶೇ 0.3ರಷ್ಟು ಯುರೇನಿಯಂ ಅಂಶ ಇದ್ದರೆ, ಈ ಘಟಕದಲ್ಲಿ ಅದನ್ನು ಶೇ 30ರಿಂದ 45 ರಷ್ಟು ಹೆಚ್ಚಿಸಲಾಗುತ್ತದೆ. ಈಗ ಈ ಘಟಕವನ್ನು ವಿಸ್ತರಿಸಲು ಸರ್ಕಾರ ಉದ್ದೇಶಿಸಿದೆ.
ಆದರೆ ಮೈಸೂರಿನ ಜನತೆಯ ಆತಂಕ ಅದಲ್ಲ. ನಾಳೆ ಪ್ರಾಕೃತಿಕ ವಿಕೋಪ ಸಂಭವಿಸಿದರೆ ಯುರೇನಿಯಂ ಲೀಕ್‌ ಆಗುವುದಿಲ್ಲವೇ ಎನ್ನುವ ಕಳವಳ ಜನರದ್ದು. ಹೀಗಾಗಿಯೇ 1980ರ ದಶಕದಲ್ಲಿ ಇದು ತಲೆ ಎತ್ತಿದಾಗ ಹಲವರು ಇದನ್ನು ಪ್ರತಿರೋಧಿಸಿದರು. ಸಿಎಫ್‌ಟಿಐಆರ್‌ ವಿಜ್ಞಾನಿ ಡಾ. ಎಚ್‌ ಎ ಪಾರ್ಪಿಯಾ , ಪ್ರೊ. ರಾಮಲಿಂಗ ಹಾಗೂ ಸಾಕೇತ್‌ ರಾಜನ್‌ (ನಂತರ ನಕ್ಸಲ್‌ ನಾಯಕನಾಗಿ ಸಾವನ್ನಪ್ಪಿದ) ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಚಿತ್ರದುರ್ಗದಲ್ಲಿ ಇಂಥದ್ದೇ  ಇನ್ನೊಂದು ಯುರೇನಿಯಂ ಸಮೃದ್ಧೀಕರಣ ವಿಶೇಷ ಘಟಕವನ್ನು ತೆರೆಯಲು ಪರಮಾಣು ಇಲಾಖೆ ಉದ್ದೇಶಿಸಿದೆ. ಇಲ್ಲಿ ವೃದ್ಧಿಯಾಗುವ ಯುರೇನಿಯಂ 1,000 ಮೆಗಾವಾಟ್‌ ವಿದ್ಯುತ್‌ ಉತ್ಪಾದನಾ ಘಟಕಕ್ಕೆ ಸಾಕಾಗುತ್ತದೆ.
ಒಟ್ಟಾರೆ, ಮುಂದಿನ ದಿನಗಳಲ್ಲಿ ಕರುನಾಡ ಮೇಲೆ ಯುರೇನಿಯಂ ಭೀತಿ ಅಪ್ಪಳಿಸುವುದಂತೂ ಖಚಿತ. ಆದರೆ ಆ ಭೀತಿ ಭಾವವನು ಹೋಗಲಾಡಿಸುವವರು ಯಾರು?


No comments:

Post a Comment