ಫೀಚರ್




 ಮಾಂತ್ರಿಕ ಲೋಕದ ದಂಧೆ
(ಗೆಳೆಯ ಸೋಮಶೇಖರ ಕಿಲಾರಿ ಜತೆ ಕೊಳ್ಳೇಗಾಲಕ್ಕೆ ಹೋಗಿ ಬರೆದ ಲೇಖನ)
ಅಮಾವಾಸ್ಯೆಯ ಕಾರಿರುಳು. ಕೊಳ್ಳೇಗಾಲದಿಂದ ನಾಲ್ಕೈದು ಕಿಮೀ ದೂರದ ಬೆಟ್ಟದ ತಪ್ಪಲಲ್ಲಿ ಇರುವ ಆ ಹೋಮಕುಂಡದಿಂದ ಹೊರ ಹಾರುತ್ತಿರುವ ಕಿಚ್ಚಿನ ಕೆನ್ನಾಲಿಗೆಗೆ ಇಡೀ ಕತ್ತಲನ್ನು ನುಂಗಿಬಿಡುತ್ತೇನೆಂಬ ದಾರ್ಷ್ಟ್ಯ ಇತ್ತು. ಕೆಂಪು ಅರಿವೆ ತೊಟ್ಟ ಆ ಕುರುಚಲು ಗಡ್ಡಧಾರಿ ಮಾಂತ್ರಿಕನ ಕಣ್ಣೊಳಗೂ ಅಂಥದ್ದೇ ಒಂದು ಕಿಚ್ಚು ಕೆನೆಯುತ್ತಿತ್ತು. ಆತನ ದನಿಪೆಟ್ಟಿಗೆ ಸೀಳಿ ಬರುತ್ತಿದ್ದ  ಉದ್ಗಾರಗಳು ಕಾಡಿನೊಳಗೆ ರವರವನೆ ತಿರುಗಿ ಅಷ್ಟೇ ವೇಗದಿಂದ ವಾಪಸ್‌ ಬರುತ್ತಿತ್ತು. ಮೌನದ ಕಾರ್ಮೋಡಕ್ಕೆ  ಢೀ ಹೊಡೆಯುತ್ತಿದ್ದ  ಘೋರ ದನಿ, ಅಷ್ಟೂ  ಹೊತ್ತು ಕಿರುಚುತ್ತಿದ್ದ ಗೂಬೆಯ ಬಾಯಿಯನ್ನೂ  ಒಂದು ಕ್ಷಣ ಕಟ್ಟಿಬಿಟ್ಟಿತ್ತು.
ಆತನ ಕೈಯಲ್ಲೊಂದು ಮೂಳೆ. ಅದರ ಸುತ್ತ ಕಪ್ಪು ದಾರ... ಒಮ್ಮೆ ಕತ್ತಲೆಯಲ್ಲಿ  ಕರಗಿಹೋದ ಕಪ್ಪು ದಾರ ಇನ್ನೊಮ್ಮೆ ಬೆಂಕಿಯ ಕೆಂಪಿಗೆ ಫಳಫಳನೆ ಹೊಳೆಯುತ್ತಿತ್ತು. ಇದೆಲ್ಲವನ್ನೂ ಆ ಹುಡುಗ ತದೇಕಚಿತ್ತದಿಂದ ನೋಡುತ್ತಿದ್ದ. ಅವನ ಕಣ್ಣೊಳಗಿದ್ದ ದಿಗಿಲು ಮತ್ತು ಸೇಡಿನ ಜ್ವಾಲೆಗೆ ಬಿಳಿಮೂಳೆ ಸಹ ಕೆಂಪಾದ ಹಾಗೆ ಇತ್ತು.
ಕಾಡಕತ್ತಲೆಯ ನಡುರಾತ್ರಿಯಲ್ಲಿ  ಆ ಮಾಂತ್ರಿಕ ಉದ್ಗಾರವೆತ್ತಿದ -ಈ ಮೂಳೆಯನ್ನು  ಅವಳು ಹೋಗುವ ದಾರಿಯಲ್ಲಿಡು. ನಿನ್ನ ಬಳಿ ತೆವಳಿಕೊಂಡೇ ಬರುತ್ತಾಳೆ ನೋಡ್ತಾ ಇರು- ಎಂದು.
ಮನೆಬಿಟ್ಟು ಹೋದ ಹೆಂಡತಿಯನ್ನು ಮನೆಗೆ ಕರೆಯಿಸಿಕೊಳ್ಳಲು ಈ ಹುಡುಗ ಹಾಕಿಕೊಂಡ ಈ ಮಾಂತ್ರಿಕ ದಾರಿಯನ್ನು ನಾಗರಿಕ ಪ್ರಪಂಚ ಒಪ್ಪದೇ ಇರಬಹುದು. ಆದರೆ ಕೊಳ್ಳೇಗಾಲದ ಕತ್ತಲುಗಳಲ್ಲಿ  ಅಂಥ ನೂರಾರು ಸೇಡಿನ ಕಿಚ್ಚು  ಜ್ವಲಿಸುತ್ತಲೇ ಇರುತ್ತದೆ.
ಆ ಹುಡುಗನ ಹೆಂಡತಿ ಮತ್ತೆ ಮನೆಗೆ ಬಂದಳೇ? ಅವರ ಸಂಸಾರ ಒಂದಾಯಿತೇ, ಇಲ್ಲವೇ ಛಿದ್ರವಾಯಿತೇ? ಉಹುಂ, ಅದನ್ನು ಕೇಳುವ ವ್ಯವಧಾನ ಯಾರಿಗೂ ಇಲ್ಲ. ಹಾಗೆ ಮಾಟ ಮಾಡಿಸಿಕೊಂಡ ಹುಡುಗ ಇದಾವುದನ್ನೂ ಯಾರೊಂದಿಗೂ ಬಾಯಿ ಬಿಡಲಾರ.  ಆ ಮಂತ್ರವಾದಿಯ ಸುತ್ತಲಿನ ದಲ್ಲಾಳಿ ಧ್ವನಿಗಳು ಮಾತ್ರ ಜೈ ಜೈ ಅನ್ನುತ್ತಿರುತ್ತವೆ; ಇನ್ನೊಂದು ಕಡೆ ಅಂಥದ್ದೇ ಇನ್ನೊಂದು ವಾಮ ಹೋಮಕ್ಕೆ ಬೆಂಕಿ ಇಡುವ ಕೆಲಸ ರಹಸ್ಯವಾಗಿಯೇ ಶುರುವಾಗಿಬಿಡುತ್ತದೆ. . .
**    *
ಕೊಳ್ಳೇಗಾಲದ ಈ ಮಾಯಾ ಬಜಾರಿನ ಮರ್ಮವೇ ಹಾಗೆ. ಸಂಕಟಗಳ ಕೆಂಡವನ್ನು ಉದರದಲ್ಲಿಟ್ಟುಕೊಂಡು ಹೋದ ಹತಾಶ ಜನರು ಒಮ್ಮೆ ಈ ಬಜಾರಿನಲ್ಲಿ ಸಿಕ್ಕಿಹಾಕಿಕೊಂಡರೆ ಮುಗಿಯಿತು. ನಿಂಬೆಹಣ್ಣಿನ ಹಾಗೆ ಸುಲಭದಲ್ಲೇ ಕ್ರಷ್‌. ಈ ಬಜಾರ್‌ ತುಂಬಾ ಮಂತ್ರವಾದಿ ಮತ್ತು ನಾಗರಿಕರ ನಡುವೆ ಕೊಂಡಿಯಾಗಿ ನಿಂತುಕೊಂಡ ದಲ್ಲಾಳಿಗಳದ್ದೇ ಬಿಸ್ನೆಸ್‌.
ಈ ಭಾಗದಲ್ಲಿ  40ಕ್ಕೂ ಹೆಚ್ಚು ಮಂದಿ ಮಾಂತ್ರಿಕರು ನೆಲೆಯೂರಿದ್ದಾರೆ. ಕೊಳ್ಳೇಗಾಲ ಪಟ್ಟಣದ ಸುತ್ತಮುತ್ತವೇ 20 ಮಂದಿ ಮಂತ್ರವಾದಿಗಳಿದ್ದರೆ, ನೆರೆಯ ಬಿಳಿಗಿರಿ ರಂಗನಬೆಟ್ಟದಲ್ಲಿ ಮೂರು ಜನ, ಮುನಿಬೆಟ್ಟ  3-4 ಮಂದಿ, ಹನೂರಿನಲ್ಲಿ ಇಬ್ಬರು, ಮಾರ್ಟ್ನಳ್ಳಿಯಲ್ಲಿ ಇಬ್ಬರು ಮಂತ್ರವಾದಿಗಳಿದ್ದಾರೆ ಎಂದು ಕೆಲವು ಮೂಲಗಳು ಹೇಳುತ್ತವೆ.
ಇವರಾರೂ, ಇಲ್ಲಿ ಮಾಟ ಮಾಡಿಸಿಕೊಡಲಾಗುತ್ತದೆ ಎಂದು ಬೋರ್ಡ್‌ ಹಾಕಿ ಕೂತುಕೊಂಡಿಲ್ಲ. ಬಹುತೇಕ ಮಂದಿ ಜೋತಿಷಿಗಳಂತೆ ಪೋಷಾಕು ಹಾಕಿಕೊಂಡಿದ್ದಾರೆ. ನಿಧಾನವಾಗಿ ಮಾತಿಗೆಳೆದರೆ ತಾವು ಮಾಟ ಮಾಡಿಸಬಲ್ಲೆವು ಎಂದು ಹೇಳಿ ಬಿಸ್ನೆಸ್‌ಗೆ ಅಣಿಯಾಗುತ್ತಾರೆ.
ಆದರೆ ಈ ಮಾಂತ್ರಿಕರ ಮೊದಲು ನಿಮ್ಮನ್ನು ಭೇಟಿಯಾಗುವುದು ದಲ್ಲಾಳಿಗಳು. ಒಬ್ಬೊಬ್ಬ ಮಾಂತ್ರಿಕನೂ ಹತ್ತಕ್ಕೂ ಹೆಚ್ಚು ಬ್ರೋಕರ್‌ಗಳನ್ನು ನೇಮಿಸಿಕೊಂಡಿರುತ್ತಾನೆ. ಗ್ರಾಹಕರನ್ನು ಒದಗಿಸಿಕೊಡುವುದರಿಂದ ಹಿಡಿದು ಯಾವ ಪೂಜೆಗೆ ಎಷ್ಟು ಕ್ರಯ ಎಂದು ಫಿಕ್ಸ್‌ ಮಾಡುವುದೂ ಈ ಬ್ರೋಕರ್‌ಗಳೇ.
ಶೇ 50ರಷ್ಟು ಹಣವನ್ನು ಪೂಜೆಗೆ ಮೊದಲು ಕೊಡಬೇಕು. ನಂತರದ ಹಣವನ್ನು ಕೆಲಸ ಆದ ಮೇಲೆ ನೀಡಬೇಕು ಎನ್ನುವ ಕಂಡೀಷನ್‌ ಹಾಕಲಾಗುತ್ತದೆ. ಒಂದು ವೇಳೆ ಕೆಲಸ ಆದ ಮೇಲೆ ಪಾರ್ಟಿ ಹಣ ಕೊಡದೇ ಇದ್ದರೆ ರಿವರ್ಸ್‌ ಮಾಟ ಮಾಡಲಾಗುತ್ತದೆ. ಆತ ಎಲ್ಲಿದ್ದರೂ ಮರಳಿ ಬಂದು ಹಣ ಕೊಟ್ಟುವ ಹಾಗೆ ಮಂತ್ರ ಪ್ರಯೋಗಿಸುತ್ತಾರೆ ಎಂದು ಮೊದಲೇ ಹೆದರಿಸುವುದೂ ಉಂಟು.
'ಬೆಂಗಳೂರಿನ ಜನರೇ ಹೆಚ್ಚು ಇನ್ನೊಬ್ಬರ ವಿರುದ್ಧ ಮಾಟ ಮಾಡಿಸಿಕೊಳ್ಳಲು ಬರುತ್ತಾರೆ. ಹಳ್ಳಿ ಜನ ತಮಗೆ ಒಳ್ಳೆಯದಾಗಲಿ ಎಂದು ಮಾತ್ರ ಪೂಜೆ ಮಾಡಿಸಿಕೊಳ್ಳುತ್ತಾರೆ. ಇನ್ನೊಬ್ಬರಿಗೆ ತೊಂದರೆ ಕೊಡುವ ಕೆಲಸ ಮಾಡುವುದಿಲ್ಲ' ಎಂದು ಮಧ್ಯವರ್ತಿ ರಾಜೇಶ್‌ ಹೇಳುತ್ತಾರೆ.
ಹಾಗೆ ನೋಡಿದರೆ ಕೊಳ್ಳೇಗಾಲದಲ್ಲಿ ಎಲ್ಲೆಲ್ಲಿ ಮಂತ್ರವಾದಿಗಳಿದ್ದಾರೆ ಎನ್ನುವ ಮಾಹಿತಿ ಸ್ಥಳೀಯ ಜನಕ್ಕೆ ಇರುವುದೇ ಇಲ್ಲ. ಅವರಿಗೆ ಅದರ ಬಗ್ಗೆ ಆಸಕ್ತಿಯೂ ಇಲ್ಲ. ಇಲ್ಲಿಗೆ ಹೆಚ್ಚಾಗಿ ಬರುವವರು ಬೆಂಗಳೂರಿನಂಥ ಸಿಟಿಗಳಿಂದಲೇ. ಬೆಂಗಳೂರಿನಿಂದ ಬಂದವರು ಎಂದು ಗೊತ್ತಾದ ತಕ್ಷಣ ಶುಲ್ಕವೂ ದುಬಾರಿಯಾಗಿಬಿಡುತ್ತದೆ.
30ರಿಂದ 50 ಸಾವಿರ ರೂಪಾಯಿಯವರೆಗೂ ಪೀಕಿಸುತ್ತಾರೆ ದಲ್ಲಾಳಿಗಳು. ಬರೇ ತಾಯತವೊಂದಕ್ಕೆ 15 ಸಾವಿರ ರೂಪಾಯಿ ವಸೂಲಿ ಮಾಡಿದ ಉದಾಹರಣೆ ಇದೆ' ಎಂದು ಈ ದಂಧೆಯ ಹಿನ್ನೆಲೆ ಮುನ್ನೆಲೆ ಬಲ್ಲವರೊಬ್ಬರು ಹೇಳುತ್ತಾರೆ.
ಬೇಗ ಬೇಗ ಕೆಲಸ ಆಗಬೇಕಾದರೆ ಬಲಿ ಕೊಡಲೇಬೇಕು. ಎಷ್ಟು ರಕ್ತ ಕೊಡ್ತೀರೋ ಅಷ್ಟು ಕೆಲಸ ಬೇಗ ಆಗುತ್ತದೆ. ಅದೆಲ್ಲವನ್ನೂ ನನ್ನ ಗುಂಡಿಗೆಯೊಳಗೆ ಇರುವ ದೇವರು ನಿರ್ಧರಿಸುತ್ತಾನೆ' ಎಂದು ಮುನಿಮಲೆಯ ತಪ್ಪಲಲ್ಲಿ ಕುಳಿತ ಮಾಂತ್ರಿಕ ಗೋವಿಂದ ರಾಜು -ತ್ವರೆ ಮಾಡಿ' ಎನ್ನುವ ಜಾಹೀರಾತು ಧಾಟಿಯಲ್ಲೇ ಹೇಳುತ್ತಾರೆ.
ಅದರಲ್ಲೂ ಸಾಂಸಾರಿಕ ಸಮಸ್ಯೆಗಳಿಗೆ ಪರಿಹಾರ ಹುಡುಕಿಕೊಂಡು ಬರುವವರೇ ಹೆಚ್ಚು. ಉದ್ಯೋಗ ಸಂಬಂಧಿ ಸಮಸ್ಯೆ, ತಕ್ಷಣ ಹಣ ಮಾಡಬೇಕು ಎನ್ನುವ ಬಯಕೆ, ರಾಜಕೀಯ ಸ್ಥಾನಮಾನದ ಅಪೇಕ್ಷೆ, ಪ್ರೇಮ ಪ್ರಕರಣ, ಆಸ್ತಿ ವ್ಯಾಜ್ಯ, ಕೋರ್ಟ್‌ ಖಟ್ಲೆ  ಹೀಗೆ ಕೊಳ್ಳೇಗಾಲಕ್ಕೆ ಬರುವ ಪ್ರಕರಣಗಳು ಭಿನ್ನವಾಗಿಯೇ ಇರುತ್ತವೆ ಎಂದು ಸ್ಥಳೀಯರೊಬ್ಬರು ಹೇಳುತ್ತಾರೆ.
ಅದರಲ್ಲೂ ಎಲೆಕ್ಷನ್‌ ಬಂದರೆ ಮುಗಿಯಿತು. ಸ್ಥಳೀಯ ಲೀಡರ್‌ಗಳೇ ದಲ್ಲಾಳಿಗಳಾಗಿಬಿಡುತ್ತಾರೆ. ರಾಜಕಾರಣಿಗಳಿಗೆ ತಮ್ಮ ಭವಿಷ್ಯವನ್ನು ಹುಡುಕಾಡುವ, ತಮ್ಮ ಸೀಟು ಭದ್ರಪಡಿಸಿಕೊಳ್ಳುವ, ಹೊಸ ಸ್ಥಾನಮಾನ ಗಳಿಸಿಕೊಳ್ಳುವ ಧಾವಂತ. ಹೀಗಾಗಿಯೇ ಇಲ್ಲಿ ಕೋಟಿಗಟ್ಟಲೆ ಥೈಲಿ ಹರಿದಾಡುತ್ತದೆ.
'ಈ ಮೂಢನಂಬಿಕೆ ಬಗ್ಗೆ ಈ ಸುತ್ತಮುತ್ತಲಿನ ಜನಕ್ಕೆ ಜಾಗೃತಿ ಮೂಡಿಸುವ ಕೆಲಸವನ್ನು ಬಹಳ ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದೇವೆ. ಈಗ ಕೊಂಚ ತಿಳಿವಳಿಕೆ ಮೂಡುತಿದೆ' ಎಂದು ರಾಜ್ಯ ವಿಜ್ಞಾನ ಪರಿಷತ್‌ ಚಾಮರಾಜನಗರ ಜಿಲ್ಲಾ ಕಾರ್ಯದರ್ಶಿ ಶಿವಶಂಕರ್‌ ಅಭಿಪ್ರಾಯಪಡುತ್ತಾರೆ.


ಕೊಳ್ಳೇಗಾಲ ಬ್ರ್ಯಾಂಡ್‌
ಇಂದು ಕೊಳ್ಳೇಗಾಲ ಎಂದರೆ ಮಾಂತ್ರಿಕರ ಊರು ಎನ್ನುವ ಕೆಟ್ಟ ಹೆಸರು ಬಂದಿದೆ. ಇದೊಂದು ಬ್ರ್ಯಾಂಡ್‌ ಮಾದರಿಯಲ್ಲಿ  ಬೆಳವಣಿಗೆಯಾಗಿದೆ ಎಂದು ಸ್ಥಳೀಯರು ವಿಷಾದದಿಂದ ನುಡಿಯುತ್ತಾರೆ.
-ನಾನು ಕೊಳ್ಳೇಗಾಲದವನು ಎಂದು ಧೈರ್ಯದಿಂದ ಹೇಳುವ ಸ್ಥಿತಿ ಇಲ್ಲ. ಜನ ಅನುಮಾನದಿಂದಲೇ ನೋಡುತ್ತಾರೆ. ಎಲ್ಲಿದೆ ನಿಂಬೆಹಣ್ಣು ಎಂದು ಗೇಲಿ ಮಾಡುತ್ತಾರೆ. ನನಗಂತೂ ಗೊತ್ತಿಲ್ಲ. ಅಲ್ಲಿ ಎಲ್ಲಿ ಮಾಟ ಮಾಡುತ್ತಾರೆ ಎಂದು ಮೂಲತಃ ಕೊಳ್ಳೇಗಾಲದವರಾದ ಬೆಂಗಳೂರಿನಲ್ಲಿ ನೆಲೆಸಿರುವ ವಿರೂಪಾಕ್ಷ ಅಸಹಾಯಕತೆಯಿಂದ ನುಡಿಯುತ್ತಾರೆ.
`ಇದು ನಂಬಿಕೆಗೆ ಸಂಬಂಧಿಸಿದ ಪ್ರಶ್ನೆ. ಇದನ್ನು ಅಲುಗಾಡಿಸಲು ಸಾಕಷ್ಟು ಸಮಯ ಬೇಕು. ಶಾಲಾ ಕಾಲೇಜು ಮಟ್ಟಗಳಲ್ಲಿ ನಿರಂತರವಾಗಿ ಜಾಗೃತಿ ಮೂಡಿಸುವ ಕೆಲಸ ನಡೆಯಬೇಕು' ಎಂದು ಮೂಲತಃ ಕೊಳ್ಳೇಗಾಲದವರೇ ಆದ ವಿಜ್ಞಾನ ಬರಹಗಾರ ಕೊಳ್ಳೇಗಾಲ ಶರ್ಮ ಅಭಿಪ್ರಾಯಪಡುತ್ತಾರೆ.
ಇತಿಹಾಸವನ್ನು ಕೆದಕುತ್ತಾ ಹೋದರೆ ಕೊಳ್ಳೇಗಾಲಕ್ಕೂ ಮಾಟಕ್ಕೂ ನಡುವಿನ ನಂಟು ಶತಕದ ಹಿಂದೆ ಹೋಗಿ ನಿಂತುಕೊಳ್ಳುತ್ತದೆ. ಹಿಂದೆ ತುಳುನಾಡಿನ ಭಾಗವಾಗಿದ್ದ ಕೊಳ್ಳೇಗಾಲಕ್ಕೆ ತುಳುನಾಡಿನ ಜನ ಬಂದು ಮೋಡಿ ಮಾಡುತ್ತಿದ್ದರಂತೆ. ಈ ಮೋಡಿ ವಿದ್ಯೆ ಅಥವಾ ಕಣ್ಕಟ್ಟು ವಿದ್ಯೆಯನ್ನು ಅತಿರಂಜನೀಯವಾಗಿ ಪ್ರದರ್ಶಿಸುತ್ತಿದ್ದರು. ಇದು ಸಹಜವಾಗಿಯೇ ಇಲ್ಲಿನ ಜನರನ್ನು ಆಕರ್ಷಿಸಿತು. ಈ ಭಾಗದಲ್ಲಿ ಹೆಚ್ಚಾಗಿ ನೆಲೆಸಿದ್ದ ದೇವಾಂಗ ಜನಾಂಗದವರು ಈ ವಿದ್ಯೆಯನ್ನು ಕಲಿತರು. ಇದಕ್ಕೆ ಕೊಂಚ ಜೋತಿಷ್ಯ, ಕೊಂಚ ವಾಮಾಚಾರ ವಿದ್ಯೆಯನ್ನು ಸೇರಿಸಿಕೊಂಡ ದೇವಾಂಗ ಸಮುದಾಯ ಇದನ್ನೇ ವೃತ್ತಿಯಾಗಿ ಸ್ವೀಕರಿಸಿಕೊಂಡಿತು. ಇಲ್ಲಿಗೆ ಸಮೀಪದ ಸತ್ತೇಗಾಲದಲ್ಲಿ ಇಂಥವರ ಸಂಖ್ಯೆ ಹೆಚ್ಚಿತು.
ಆದರೆ ಕಾಲಕ್ರಮೇಣ ದೇವಾಂಗ ಜನಾಂಗದ ಮುಂದಿನ ಪೀಳಿಗೆ ಇದನ್ನು ವೃತ್ತಿಯಾಗಿ ಮುಂದುವರೆಸಲಿಲ್ಲ. ಆದರೆ ಇಷ್ಟರಾಗಲೇ ಕೊಳ್ಳೇಗಾಲಕ್ಕೆ ಮಾಂತ್ರಿಕರ ನಾಡು ಎನ್ನುವ ಕಳಂಕ ಅಂಟಿಕೊಂಡುಬಿಟ್ಟಿತ್ತು. ಇದನ್ನು ಲಾಭ ಮಾಡಿಕೊಳ್ಳಲು ಎಲ್ಲಿಂದೆಲ್ಲಿಂದಲೋ ಬಂದ ಜನ ಶುರು ಮಾಡಿದರು.
ಕೊಳ್ಳೇಗಾಲದ ಬ್ರ್ಯಾಂಡ್‌ನೇಮ್‌ ಬಳಸಿ ವೃತ್ತಿ ಕೈಗೊಂಡರೆ ಉಳಿಗಾಲ ಎಂದು ಭಾವಿಸಿಕೊಂಡ ಹಲವರು ಇಲ್ಲಿ  ಅಂಗಡಿ  ತೆರೆದರು. ಕೆಲವರು ಕೇರಳಕ್ಕೆ ಹೋಗಿ ವಿದ್ಯೆ ಕಲಿತುಕೊಂಡು ಬಂದರೆ, ಇನ್ನು ಕೆಲವರು ಬಿಆರ್‌ ಹಿಲ್ಸ್‌ನಲ್ಲಿರುವ ಸೋಲಿಗರ ಸಾಂಪ್ರದಾಯಿಕ ವಿದ್ಯೆ ಕಲಿತರು. ಇನ್ನು ಕೆಲ ಮಂದಿ ಅರೆಬೆಂದ ವಿದ್ಯೆ ಕಲಿತು ಮಂತ್ರ ಹೇಳಲು ಚಕ್ಕಳಮಕ್ಕಳ ಕೂತುಬಿಟ್ಟರು.
'ದೇವಾಂಗ ಜನಾಂಗದ 3-4 ಮಂದಿ ಮಾತ್ರ ಈ ವೃತ್ತಿ ಮುಂದುವರೆಸಿದ್ದಾರಷ್ಟೇ. ಇಲ್ಲಿನ ಹೆಸರನ್ನು ದುರುಪಯೋಗ ಮಾಡಿಕೊಂಡ ಹಲವರು ಜನರಿಗೆ ಮೋಸ ಮಾಡುತ್ತಿದ್ದಾರೆ' ಎಂದು ಇದೇ ಸಮುದಾಯದ ಜೋತಿಷಿ ಚಂದ್ರಣ್ಣ ಹೇಳುತ್ತಾರೆ.
ಇದರ ಜತೆಗೆ ಮೊಬೈಲ್‌ ಮಾಂತ್ರಿಕರೂ ಹುಟ್ಟಿಕೊಂಡಿದ್ದಾರೆ. ಕೊಳ್ಳೇಗಾಲದ ಹೆಸರು ಹೇಳಿಕೊಂಡು ಹಲವರು ಊರೂರು ತಿರುಗುತ್ತಾ ವೃತ್ತಿ ಮಾಡುತ್ತಾರೆ. ಅಲ್ಲದೆ, ಕೊಳ್ಳೇಗಾಲ ಜೋತಿಷಿಗಳು ಎಂದು ಬೋರ್ಡ್‌ ಹಾಕಿಕೊಂಡವರು ಅನೇಕರು. ಆದರೆ ಆ ವ್ಯಕ್ತಿಗಳಿಗೂ ಕೊಳ್ಳೇಗಾಲಕ್ಕೂ ಯಾವುದೇ ಸಂಬಂಧ ಇರುವುದಿಲ್ಲ ಎಂದು ಅವರು ಹೇಳುತ್ತಾರೆ.
ಕೊಳ್ಳೇಗಾಲದ ನಡುರಾತ್ರಿಗಳಲ್ಲಿ ಲಕ್ಷಗಟ್ಟಲೆ ಬಿಸ್ನೆಸ್‌ ಆಗುತ್ತಿದೆ; ಕೊಳ್ಳೇಗಾಲ ಬ್ರ್ಯಾಂಡ್‌ನೇಮ್‌ನಿಂದ ಸಾವಿರಾರು ಮಂದಿ ಬದುಕು ಹೊರೆದುಕೊಳ್ಳುತ್ತಿದ್ದಾರೆ; ಕೊಳ್ಳೇಗಾಲ ಹೆಸರು ಹೇಳಿಯೇ ಇನ್ನೆಷ್ಟೋ ಮಂದಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ, ಕೊಳ್ಳೇಗಾಲ ಕೃಪೆಯಿಂದಲೇ ಅಧಿಕಾರಕ್ಕೆ ಬಂದೆ ಎಂದು ಎಷ್ಟೋ ಮಂದಿ ಮೀಸೆ ತಿರುಗಿಸುತ್ತಿದ್ದಾರೆ. ಇಷ್ಟಾದರೂ ಕೊಳ್ಳೇಗಾಲದ ಪ್ರಜ್ಞಾವಂತ ಜನಸಾಮಾನ್ಯ ಮಾತ್ರ ಇನ್ನೂ ಮಾಟದ ಕರಿನೆರಳಿನಡಿ ಕಣ್ಣುಮುಚ್ಚಿ ಕೂತುಬಿಟ್ಟಿದ್ದಾನೆ; 60 ಸಾವಿರ ಜನಸಂಖ್ಯೆ ಇರುವ ಈ ಪುಟ್ಟ ಪಟ್ಟಣ ಮಾಂತ್ರಿಕ ಲೋಕದೊಳಗೆ ಸಿಲುಕಿಕೊಂಡಿದೆ.


ಮಾಟಗಾರರ ಸುತ್ತ ಮೋಡಿಗಾರರು


ಅದು ಹಂದಿಗೂಡಿನಂತಹ ಬಸ್‌ಸ್ಟ್ಯಾಂಡ್‌. ಮಧ್ಯದಲ್ಲಿ ಪ್ರಯಾಣಿಕರ ನಿಲುಗಡೆಗೆ ಮುರುಕಲು ಶೀಟಿನ ಸೂರು. ಸುತ್ತೆಲ್ಲ ಎಲೆ ಅಡಿಕೆ ಜಗಿದು ಉಗಿದ ಗುರುತು. ಎಡಬದಿಯಲ್ಲಿ ಶೌಚಾಲಯ, ಅದರ ಮಗ್ಗುಲಲ್ಲಿ ಬೀಡಿ, ಸಿಗರೇಟ್‌ ಮಾರಾಟ ಮಳಿಗೆಗಳು. ಉತ್ತರದಲ್ಲಿ ಪುಟ್ಟ ದೇವರ ಕಟ್ಟೆ. ಅದರ ಪಕ್ಕಕ್ಕೆ ತಿರುಗಿದರೆ ಗಣಪತಿ ದೇವಸ್ಥಾನ. ಎದುರುಗಡೆ ಹೂ ಮಾರುವವರ ಸಾಲು. ಹೂವಿನ ಪರಿಮಳ ಮೀರಿ ಮೂಗಿಗೆ ರಾಚುವ ಸುತ್ತಲಿನ ಚರಂಡಿ ವಾಸನೆ. ಮುಖ-ಮೂಗು ಕಿವುಚಿಕೊಂಡು ದಿಟ್ಟಿಸುವ ಹೊತ್ತಿಗೆ ತರುಣನೊಬ್ಬ ಬಳಿಸಾರಿ ಬಂದ.
`ತಾವು ಬೆಂಗಳೂರಿನವರಲ್ವೇ?' ಎಂದ. ತುಸು ಗಾಬರಿಯಿಂದ ಚುಟುಕಾಗಿ `ಹೌದು' ಎಂದದ್ದಾಯಿತು. `ಇಲ್ಲಿಗೆ ಬಂದದ್ದು ಪೂಜೆ ಉದ್ದೇಶಕ್ಕೆ ತಾನೆ?' ಎನ್ನುವ ಮರು ಪ್ರಶ್ನೆ ಆತನಿಂದ ಬಂತು. ನಮಗೆ ಅಚ್ಚರಿ. `ಪೂಜೆಗೆ ಅಲ್ಲ ಮಾರಾಯ... ನಾವು ಪತ್ರಿಕೆಯವರು... ಮಾಟಮಂತ್ರದ ಬಗ್ಗೆ...' ಎಂದು ಮಾತು ಮುಗಿಸುವ ಮೊದಲೇ `ಗೊತ್ತಾಯ್ತು ಗೊತ್ತಾಯ್ತು...ನಿಲ್ಲಿ' ಎನ್ನುತ್ತಾ ಮೊಬೈಲ್‌ ಎತ್ತಿಕೊಂಡು ಯಾರಿಗೋ ಕರೆ ಮಾಡಿದ. ಹತ್ತು ನಿಮಿಷದಲ್ಲಿ ಗೂಡ್ಸ್‌ ಆಟೋವೊಂದು ಬಸ್‌ ನಿಲ್ದಾಣದ ಮುಂದಿನ ಮುಖ್ಯರಸ್ತೆಯಲ್ಲಿ ಪ್ರತ್ಯಕ್ಷವಾಯಿತು. `ಕೊಳ್ಳೇಗಾಲದ ಫೇಮಸ್‌ ಮಂತ್ರವಾದಿ ಬಳಿ ನಿಮ್ಮನ್ನು ಕರೆದೊಯ್ಯುವೆ. ನಿಮ್ಮ ಎಂತಹದ್ದೇ ಕಷ್ಟ ಇದ್ರೂ ಚಿಟಿಕೆ ಹೊಡೆಯುವಷ್ಟರಲ್ಲಿ ಮಂಗಮಾಯ ಮಾಡ್ತಾನೆ' ಎಂದ. ನಾವು ಪತ್ರಿಕೆಯವರು. ಮಾಟಮಂತ್ರದ ಬಗ್ಗೆ  ಮಾಹಿತಿ ಸಂಗ್ರಹಿಸಲು ಬಂದಿದ್ದೇ ವಿನಾ ಮೋಡಿ ಮಾಡಿಸಲು ಅಲ್ಲ ಎಂದು ಮನವರಿಕೆ ಮಾಡಿಕೊಡಲು ಯತ್ನಿಸಿದರೂ ಆ ತರುಣ ಕಿವಿಗೊಡಲೇ ಇಲ್ಲ. `ಅಯ್ಯೋ ಕಂಡಿವ್ನಿ  ಸುಮ್ಕಿರಿ... ಪತ್ರಕರ್ತರಿಗೆ ಕಷ್ಟ ಇರಲ್ವಾ' ಎನ್ನುವ ರೀತಿ ಆಟೋದೊಳಗೆ ನಮ್ಮನ್ನು ಕೂರಿಸಿದ. ಅಷ್ಟರಲ್ಲಿ ಹಿಂದಿನಿಂದ ಮತ್ತೊಂದು ಆಟೋ ಹಾರ್ನ್‌ ಮಾಡಿತು. ತುಸು ನಿಲ್ಲಿಸಿ, ಅದರತ್ತ ಓಡಿದ ತರುಣ ನಿಮಿಷದ ಬಳಿಕ ವಾಪಸ್‌ ಬಂದು, `ಬನ್ನಿ ಆ ಆಟೋ ಹತ್ತೋಣ' ಎಂದು ಇಳಿಸಿದ. ಆ ಆಟೋದಲ್ಲಿ ಆಗಲೇ ಇನ್ನೊಬ್ಬ ಕಟ್ಟುಮಸ್ತಾದ ಯುವಕ ಕುಳಿತಿದ್ದ.
ದಿಗಿಲ್‌ ಭುಗಿಲ್‌:
ಕೊಳ್ಳೇಗಾಲದಿಂದ ಮೈಸೂರಿಗೆ ಹೋಗುವ ರಸ್ತೆ. ಚಾಲಕ ಸೇರಿ ಆಟೋದಲ್ಲಿದ್ದ ಆ ಮೂವರು ತರುಣರು ಮಳವಳ್ಳಿಯ ಟಿಪಿಕಲ್‌ ಭಾಷೆಯಲ್ಲಿ ಏನೆನೋ ಹರಟುತ್ತ ಖುಷಿ ಹಂಚಿಕೊಳ್ಳುತ್ತಿದ್ದರು. ಸ್ವಲ್ಪ  ದೂರು ಸಾಗಿದ ಬಳಿಕ ಮೈಸೂರು ರಸ್ತೆ ಬಿಟ್ಟು ಎಡಕ್ಕೆ ತಿರುಗಿದ ಆಟೋ ಹದಿನೈದು ನಿಮಿಷದಲ್ಲಿ ಮಾಂಬಳ್ಳಿ ಪೊಲೀಸ್‌ ಠಾಣೆ ಎದುರು ನಿಂತಿತು. ಯಾಕೆ ಇಲ್ಲಿ ನಿಲ್ಲಿಸಿದ್ದು ಎಂದು ಪ್ರಶ್ನಿಸುವ ಮೊದಲೇ ಇನ್ನೂ ಮೂವರು ದಾಂಡಿಗರು ಆಟೋದೊಳಕ್ಕೆ ನುಗ್ಗಿದರು. ಎಲ್ಲರೂ 25ರಿಂದ 30 ವರ್ಷದೊಳಗಿನವರು. ಮಾಂಬಳ್ಳಿಯ ಕಿರುಗಲ್ಲಿಯೊಂದರೊಳಕ್ಕೆ ಟರ್ನ್‌ ಪಡೆದ ಆಟೋ ದೂರದಲ್ಲಿ ಕಾಣುವ ಬೆಟ್ಟದತ್ತ ಸಾಗಿತು. ಅದಾಗಲೇ ಸೂರ್ಯ ಮುಳುಗಿ ಕಡುಗತ್ತಲೆ ಆವರಿಸತೊಡಗಿತ್ತು. ಆ ಗ್ಯಾಂಗಿನ ಲೀಡರ್‌ನಂತಿದ್ದ  ದಡಿಯನೊಬ್ಬ ನಮ್ಮತ್ತ ದಿಟ್ಟಿಸಿ `ನಿಮ್ಮನ್ನು ಎಲ್ಲೋ ನೋಡಿದಂತಿದೆಯಲ್ಲ?' ಎನ್ನುತ್ತಾ ಮಾತು ಶುರು ಮಾಡಿದ.
`ನೀವು ಪತ್ರಿಕೆಯವರಲ್ವೇ ... ಎಲ್ಲಿ ನಿಮ್‌ ಕಾರ್ಡ್‌ ಕೊಡಿ' ಎಂದು ಐಡಿ ಚೆಕ್‌ ಮಾಡಿದ. ವಿಸಿಟಿಂಗ್‌ ಕಾರ್ಡ್‌ ಪಡೆದ. ಬಳಿಕ  `ಸ್ವಾಮಿಗಳು ತುಂಬಾ ಪವರ್‌ಫುಲ್‌. ಇವತ್ತು ಶುಕ್ರವಾರ ನೋಡಿ... ಅವರು ಸಖತ್‌ ಬಿಝಿ. ದರ್ಶನ ಕೊಡಲು ಸಾಧ್ಯವೇ ಇಲ್ಲ ಅಂದ್ರು. ಆದರೆ ಪಾಪಾ ತಾವು ಬೆಂಗಳೂರಿಂದ ಬಂದಿದ್ದಲ್ವಾ... ದುಡ್ಡು ತಂದಿದಾರೆ, ಯೋಚಿಸಬೇಡಿ ಸಾಮಿ ಅಂತ ರಿಕ್ವೆಸ್ಟ್‌ ಮಾಡಿ ಒಪ್ಪಿಸಿದ್ದಾಯಿತು' ಎಂದು ಟಾಂಗ್‌ ಕೊಟ್ಟ. ಕಬ್ಬಿನ ಗದ್ದೆಗಳ ಮಧ್ಯದ ಕಿರುದಾರಿಯಲ್ಲಿ ವಾಲಾಡುತ್ತ ಆಟೋ ಸಾಗಿದ್ದಾಗಲೇ ಆ ಭಯಾನಕ ಮಂತ್ರವಾದಿಯ ಪವಾಡಗಳ ಕುರಿತು ಹೇಳತೊಡಗಿದ:
`ಹಿಂದೊಮ್ಮೆ ತುಂಬ ಕಷ್ಟದಲ್ಲಿರೋ ಫ್ಯಾಮಿಲಿ ಬಂದಿತ್ತು. ಅವರಿಗೆ ಕುರಿ ಬಲಿಕೊಡಲು ಸ್ವಾಮಿ ಹೇಳಿದರು. ಆದ್ರೆ ಆ ಫ್ಯಾಮಿಲಿ ಯಜಮಾನ ಕುರಿ ಬದಲಿಗೆ ಕೋಳಿ ತಂದ. ಅದರ ರುಂಡ ಕತ್ತರಿಸಿ ದೈಯಕ್ಕೆ ರಕ್ತ ಅರ್ಪಿಸಲು ಸ್ವಾಮಿಗಳು ಕತ್ತಿ ಬೀಸಿದರು. ಸ್ವಾಮಿಗಳ ಮರ್ಜಿ ಮೀರಿ ಆ ಕತ್ತಿ ಕೋಳಿ ಕತ್ತಿನ ಬದಲು ಅದನ್ನು ಹಿಡಿದವನ ಕೈ ತುಂಡರಿಸಿಬಿಟ್ಟಿತು! ...ನೋಡಿ ದುಡ್ಡಿನ ವಿಷಯದಲ್ಲಿ ಕಾಂಪ್ರೊಮೈಸ್‌ಗೆ ಇಳಿದರೆ ಏನೆಲ್ಲಾ ಆಗುತ್ತೆ' ಎಂದು ಪರೋಕ್ಷ ಬೆದರಿಕೆ ಹಾಕಿದ. ಇಂತಹ ಬೆವರಿಳಿಸುವ ಹಲವು ನಿದರ್ಶನಗಳನ್ನು ಕೇಳುವ ಹೊತ್ತಿಗೆ ಆಟೋ ಬೆಟ್ಟದ ಮಡಿಲಿಗೆ ಬಂದು ನಿಂತಿತು. ಅದು ಮಲೆ ಮುನಿ ಬೆಟ್ಟ. ಗವ್‌ ಎನ್ನುವ ಕತ್ತಲೆ. ಬೆಟ್ಟದ ತುದಿಯಿಂದ ಗೂಬೆಗಳ ಕೂಗು. ಗದ್ದೆಗಳ ಮಡಿಲಿಂದ ನವಿಲುಗಳ ಕೀರಲು ಧ್ವನಿ. ಇದೆಲ್ಲವನ್ನು ಭೀತ ಮನಸ್ಸಿನಿಂದ ಗ್ರಹಿಸುತ್ತಿರುವಾಗಲೇ ಕಡ್ಡಿಯಂತಹ ಒಂದು ಆಕೃತಿ ಆ ಕತ್ತಲಲ್ಲಿ ಸೈಕಲ್‌ ತಳ್ಳಿ ಕೊಂಡು ಬಂದು ಬದಿಗೆ ನಿಲ್ಲಿಸಿ ಯಾರನ್ನೂ ಮಾತಾಡಿಸದೆ ಸರಸರ ಬೆಟ್ಟದ ಮಡಿಲ ಮಲೆ ಮುನೀಶ್ವರ ಸ್ವಾಮಿ ದೇವಸ್ಥಾನದತ್ತ ಹೆಜ್ಜೆ ಹಾಕಿತು. `ಅವರೇ ಮಂತ್ರವಾದಿ' ಎಂದು ಪಕ್ಕದ ತರುಣ ಉಸುರಿದ.
ನಟ ಭಯಂಕರ:
ದೇವಸ್ಥಾನದ ಸುತ್ತ ಬಿದ್ದಿದ್ದ ಒಣ ಕಟ್ಟಿಗೆಗಳನ್ನು  ಆಯ್ದು ತಂದು ಹೋಮ ಕುಂಡದಲ್ಲಿ ಹಾಕಿದ ಆ ಮಂತ್ರವಾದಿ ಗರ್ಭಗುಡಿಯತ್ತ ಸಾಗಿ ಅಲ್ಲಿಯೇ ನೇತು ಹಾಕಿದ್ದ ಗಂಟೆಗಳನ್ನು ಢಣ ಢಣ ಎನ್ನಿಸಿ ದೇವರಿಗೆ ಒಂದಷ್ಟು ಧೂಪ ಹಾಕಿ ಕುಂಡದ ಬಳಿಸಾರಿ ಆಸೀನನಾದ. `ನಾನು ಅಆ ಕಲಿತಿಲ್ಲ. ಆದರೆ ಸಕಲ ವಿದ್ಯೆಗಳನ್ನು ಬಲ್ಲೆ. ಬೇಕೆಂದಾಗ ಆ ದೇವರನ್ನು ಆವಾಹನೆ ಮಾಡಿಕೊಳ್ಳಬಲ್ಲೆ. ನನ್ನ ಎದೆಯಲ್ಲಿ 101 ಗಂಡು ದೇವರು, 301 ಹೆಣ್ಣು ದೇವರು ಪ್ರತಿಷ್ಠಾಪನೆಯಾಗಿವೆ. ಇದಾಗಿ ಮೋಡಿ ವಿದ್ಯೆ ಮೂಲಕ ಜನರ ಬೇಕು ಬೇಡಗಳನ್ನು  ಈಡೇರಿಸಬಲ್ಲೆ' ಎಂದ.
ಹೆಸರು ಕೇಳಿದಾಗ `ಗೋವಿಂದರಾಜ' ಎಂದು, ಅದಕ್ಕೆ ಅಷ್ಟುದ್ದನೆಯ ಹಿನ್ನೆಲೆ ಹೇಳಿದ. ಏನೇನು ಮಾಟ-ಮಂತ್ರ ಮಾಡುವಿರಿ ಎಂದು ಪ್ರಶ್ನಿಸಿದಾಗ `ನಿಮಗೇನು ಬೇಕು ಹೇಳಿ? ದೆವ್ವ ಬಿಡಿಸುತ್ತೇನೆ, ಮುರಿದು ಬಿದ್ದ ಲವ್‌ ಕೂರಿಸುತ್ತೇನೆ, ದೇವರ ಕಾಟ ತಪ್ಪಿಸುತ್ತೇನೆ, ಬೇಕಿದ್ದವರಿಗೆ ಒಳ್ಳೆಯದನ್ನೂ ಬೇಡದವರಿಗೆ ಕೆಟ್ಟದ್ದನ್ನೂ ಮಾಡುತ್ತೇನೆ, ಇಷ್ಟದ ಹುಡುಗಿ ಒಲಿಯುವಂತೆ ಮಾಡುತ್ತೇನೆ. ಇಂತಹ ಅದೆಷ್ಟೋ ಜನ ನನ್ನ ಬಳಿ ಬಂದು ಧನ್ಯರಾಗಿದ್ದಾರೆ' ಎಂದು ಪಕ್ಕದಲ್ಲಿದ್ದ ದಡಿಯನ ಮುಖ ನೋಡಿದ. ಆತ `ಹೌದು ಸಾಮಿ, ಮೊನ್ನೆ ಗದುಗಿನ ಫ್ಯಾಮ್ಲಿ ಹೋಂಡಾ ಸಿಟಿ ಕಾರಿನಲ್ಲಿ ಬಂದು ಸ್ವಾಮ್ಯಾರಿಂದ ಮೋಡಿ ಮಾಡಿಸಿಕೊಂಡು 30 ಸಾವಿರ ರೂಪಾಯಿ ಕೊಟ್ಟು ಹೋಯ್ತು' ಎಂದ.
ಬೇಡದವರಿಗೆ ಯಾವ ರೀತಿ ಮೋಡಿ ಹಾಕುತ್ತೀರಿ ಹೇಳಿ ಎಂದಾಗ; `ಮೊದಲು ಬೇಡದವನ ಕೂದಲು, ಆತನ ಎಂಜಲು ಮತ್ತು ಮಾಸಿದ ಆತನ ಬಟ್ಟೆಯ ಒಂದು ತುಂಡನ್ನು ತೆಗೆದುಕೊಂಡು ಬರಬೇಕು.
ಸೂರ್ಯ ಹುಟ್ಟುವ ಮೊದಲು ತಾಜಾ ಕಪ್ಪೆಯೊಂದನ್ನು ಹಿಡಿಯುತ್ತೇನೆ. ಬಳಿಕ ನಾಲಿಗೆ ಮಡಚಿಕೊಂಡು ಉಸಿರು ಬಿಗಿ ಹಿಡಿದು ಕೂದಲು-ಬಟ್ಟೆ-ಎಂಜಲನ್ನು ಆ ಕಪ್ಪೆ ಬಾಯಿಗೆ ತುರುಕುತ್ತೇನೆ. ಅದಾಗಿ ಸೂಜಿಯಿಂದ ಆ ಕಪ್ಪೆಯ ಬಾಯಿ ಹೊಲೆದು ಹುತ್ತವೊಂದಕ್ಕೆ ಬಿಡುತ್ತೇನೆ. ಆಗ ನೋಡಿ ಆ ಎದುರಾಳಿ ಯಂಗೆ ಮಾತ್‌ ಕಳ್ಕೊಳ್ತಾನೆ ಅಂತ. ಕಪ್ಪೆ ಹೋದಂಗೆ ಆತನೂ ಪೋಯ' ಎಂದು ಹುಬ್ಬು ಕುಣಿಸಿದ.
ಈ ಮಂತ್ರವಾದಿ ಹೇಳುವ ಪ್ರಕಾರ: ಇಲ್ಲಿಗೆ ಲೋಕಲ್‌ನವರು ಬರೋದು ಕಮ್ಮಿಯಂತೆ. ಬೆಂಗಳೂರಿನವರೇ ಹೆಚ್ಚು. ಅದರಲ್ಲೂ  ಲವ್ವಿನ ವಿಷಯ, ಸೇಡು ತೀರಿಸಿಕೊಳ್ಳುವ ವಿಷಯ ಹೇಳಿಕೊಂಡು ಬರುವವರೇ ಹೆಚ್ಚಂತೆ.
ರೌದ್ರಾವತಾರಿ:
`ಸ್ವಾಮಿ ಇವರು ಬೆಂಗಳೂರಿಂದ ಬಂದವ್ರೆ. ತಮ್ಮ ಮೋಡಿ ವಿದ್ಯೆ ವಸಿ ಪ್ರದರ್ಶಿಸಿ. ಚೆನ್ನಾಗಿ ದುಡ್ಡು ಕೊಡ್ತಾರೆ' ಎಂದು ದಡಿಯ ಪುಸಲಾಯಿಸಿದ್ದೇ ತಡ ಸಡನ್‌ ಎದ್ದು ನಿಂತ  ಸ್ವಾಮಿ, `ಆ ಕತ್ತಿ, ಮುಳ್ಳಿನ ಮೆಟ್ಟು ತೆಗೆದುಕೊಂಡು ಬನ್ನಿ' ಎಂದು ಅಲ್ಲಿಯೇ ನಿಂತಿದ್ದ ತರುಣರಿಗೆ ಆದೇಶಿಸಿದ. ನಮಗೆ ಅದೇನು ವಿದ್ಯೆ ಎನ್ನುವ ಗಾಬರಿ.
`ನೋಡ್ತಾ ಇರಿ, ಸ್ವಾಮಿ ಮೈಮ್ಯಾಲೆ ಆ ದೇವ್ರು ಯಂಗೆ ಬರ್ತದೆ ಅಂತ. ಆಗ ಮುಟ್ಟಿದರೆ ತುಂಡರಿಸುವ ಕತ್ತಿಯಿಂದ ಮೈಮ್ಯಾಲೆಲ್ಲ ಹೊಡೆದುಕೊಳ್ತಾರೆ. ಹೊಟ್ಟೆಯೊಳಗೆ ತಿವಿದುಕೊಳ್ತಾರೆ. ಗಂಟ್ಲು  ಇರಿತಾರೆ. ಇರಿ ಸ್ವಲ್ಪ' ಎನ್ನುತ್ತಲೇ ನಮ್ಮನ್ನು ಬದಿಗೆ ಕರೆದು, `ಆ ಕತ್ತಿ ತರಬೇಕು. ಪೂಜೆ ಸಾಮಗ್ರಿ ಬೇಕು. ಅದಕ್ಕೆಲ್ಲ ದುಡ್ಡುಬೇಕು. ಎರಡು ಸಾವಿರ ಕೊಡಿ' ಎಂದು ಗ್ಯಾಂಗಿನ ತರುಣನೊಬ್ಬ ಕೇಳಿದ. ವಂಚನೆಯ ಜಾಲ ಬಿಗಿಗೊಂಡಿತು.
ಕೊನೇ ಯತ್ನ:
ಕೋಳಿ, ಕತ್ತು, ಕತ್ತಿ, ಕೈ ತುಂಡು... ಏನೇನೋ ಹೇಳಿ ಥ್ರೆಟ್‌ ಮಾಡಿ ದುಡ್ಡು ವಸೂಲಿಗೆ ನಿರಂತರ ಯತ್ನಿಸುತ್ತಲೇ ಇತ್ತು ಗ್ಯಾಂಗ್‌. ಏನೇನೋ ಸಬೂಬು ಹೇಳಿ ಕೊನೆಗೆ ಯಾವುದೂ ಬೇಡವೆಂದು ನಾವು ವಾಪಸ್‌ ಆಟೋ ಹತ್ತಿದೆವು. ಅವರೂ ಹತ್ತಿದರು. ಅಡ್ಡದಾರಿ ಎಲ್ಲೆಲ್ಲೋ ನುಗ್ಗಿ ಬಂದ ಆಟೋ ಬಸ್‌ ನಿಲ್ದಾಣದ ಮುಂದೆ ನಿಂತಾಗ ರಾತ್ರಿ 12 ಸಮೀಪಿಸಿತ್ತು. `ಆಟೋ ಚಾರ್ಜ್‌ ಸಾವಿರ ರೂಪಾಯಿ ಆಯಿತು' ಎಂದು ಹೇಳುವ ಮೂಲಕ ನಮ್ಮಿಂದ ದುಡ್ಡು ಸುಲಿಯುವ ಕೊನೆ ಯತ್ನವನ್ನು ಗ್ಯಾಂಗ್‌ ಮಾಡಿತು. ನಾವು ಕೊಸರಾಡತೊಡಗಿದಾಗ ನಮ್ಮೊಂದಿಗೆ ಲಾಡ್ಜ್‌ನಲ್ಲಿ ತಾವೂ ರಾತ್ರಿ ಉಳಿಯುವ ಬೆದರಿಕೆ ಹಾಕಿದರು. ಅನ್ಯದಾರಿ ಕಾಣದೆ ಇನ್ನೂರು ರೂಪಾಯಿ ಕಡಿಮೆ ಮಾಡಿ ಉಳಿದ ದುಡ್ಡು ಕೊಟ್ಟೆವು.  ಆ ಉಳಿದ ಮೊತ್ತವನ್ನೂ ಚುಪ್ತಾ ಮಾಡುವ ಹಟತೊಟ್ಟಂತೆ ಕಂಡ ಇಬ್ಬರು ದಾಂಡಿಗರು ನಮ್ಮೊಂದಿಗೆ ಊಟಕ್ಕೆ ಬಂದು ಸರಿಯಾಗಿ ಎಳೆದು ಜಾಗ ಖಾಲಿ ಮಾಡಿದರು. ಅಲ್ಲಿಗೆ ನಾವು ನಿಟ್ಟುಸಿರು ಬಿಟ್ಟದ್ದಾಯಿತು.
....

hhhh