Saturday, July 19, 2014

ಬಕಾಸುರ ಬೆಂಗಳೂರು
ದಿನವಿಡೀ ಚಕ್ರ ಕಟ್ಟಿಕೊಂಡು ಓಡಾಡಿದ್ದ ಬೆಂಗಳೂರು ಶಿವಾ ಎಂದು ರಾತ್ರಿ ಬೆಳಕಿನಡಿಯೇ ಮಲಗಿಬಿಟ್ಟಿದೆ. ಎಣಿಸೋಣವೆಂದರೆ ತಾರೆಗಳಿಲ್ಲ; ಜೋಗುಳಕ್ಕೆ ಸಂಗೀತವಿಲ್ಲ. ಹಾರುತ್ತಿರುವ ವಿಮಾನದ ಲೈಟು ನೋಡಿ, ಫ್ಲೈ ಓವರ್‌ನಲ್ಲಿ ಓಡುತ್ತಿರುವ ವೆಹಿಕಲ್‌ಗಳ ಶಬ್ದಕ್ಕೆ ಕಿವಿ ಆನಿಸಿ ಗಂಟೆ ಲೆಕ್ಕ ಹಾಕುತ್ತಿದೆ ಬೆಂಗಳೂರು. ಬೆಳಕಾಗಿಬಿಡುತ್ತದೆಯಲ್ಲ ಎಂಬ ಚಿಂತೆ.
ಏಕೆಂದರೆ- ಮತ್ತದೇ ನಾಳೆ ಅಲ್ಲವೇ? ಅದೇ ಚಾಕರಿ,
ಹೊಟ್ಟೆ-ಬಟ್ಟೆ ಬಗ್ಗೆ ಯೋಚಿಸುತ್ತಿರುವಾಗಲೇ ಬೆಂಗಳೂರಿಗೆ ಯಾವುದೋ ಹೊತ್ತಲ್ಲಿ ನಿದ್ದೆ ಬಂದುಬಿಡುತ್ತದೆ.
ಇದೇ ಹೊತ್ತಿಗೇ, ನಾಳೆಯನ್ನು ಕಟ್ಟಲು ಬೆಂಗಳೂರು ಜತೆ ಸಾವಿರ ಊರು-ನೂರು ದೇಶ ಸೇರಿಕೊಂಡುಬಿಡುತ್ತದೆ
ಅಕ್ಕಿ ಹೊತ್ತುಕೊಂಡ ಪಂಜಾಬ್ ರಿಜಿಸ್ಟ್ರೇಷನ್‌ನ ಲಾರಿ ಏದುಸಿರುಬಿಟ್ಟುಕೊಂಡು ಬರುತ್ತದೆ; ಮೋರಿ ವಾಸನೆ ತಡೆಯದೆ ಮೂಗಿಗೆ ಬಟ್ಟೆ ಕಟ್ಟಿಕೊಂಡ ಡ್ರೈವರ್ ತಮಿಳು ಹಾಡು ಕೇಳುತ್ತಿರುತ್ತಾನೆ. ದುಬೈ ಅತ್ತರು ಪೂಸಿಕೊಂಡ ಉತ್ತರದಾಕೆ ಕಣ್ಣು ಮಿಟುಕಿಸುತ್ತಾಳೆ; ಫ್ಲೈಟಿನಲ್ಲಿ ಬೆಚ್ಚನೆ ಬಂದಿಳಿದ ಅಮೆರಿಕದ ಆಪಲ್‌ಗೆ ರೊಮಾಂಟಿಕ್ ಕನಸುಗಳಿವೆಯೋ ಗೊತ್ತಿಲ್ಲ. ಗುಜರಾತ್‌ನಿಂದ ಬರುವ ನ್ಯಾನೊ ಕಾರುಗಳಿಗೆ ಈ ರೋಡಿಗಿಳಿಯಬೇಕಲ್ಲ ಎಂಬ ವರಿ. ಇಂಟರ್‌ಸಿಟಿಯಲ್ಲಿ ಬರುವ ಬಿಜಾಪುರ ರೈತನಿಗೆ ದ್ರಾಕ್ಷಿಯೋ, ವೈನೋ ಮಾರಾಟವಾದರೆ ಸಾಕು ಎನ್ನುವ ಕಳವಳ.
ಒಂಟಿಯಲ್ಲ
ಬೆಂಗಳೂರು ಒಂಟಿಯಲ್ಲ. ಎಲ್ಲೆಲ್ಲಿಂದಲೋ ಜನ ಬರುವ ಹಾಗೆಯೇ ಒಂದೊಂದು ಸರಕುಗಳನ್ನೂ ತರುತ್ತಾರೆ. ಎಲ್ಲರಿಗೂ ಬೆಂಗಳೂರು ಬದುಕಿಗೆ ಕಾಂಟ್ರಿಬ್ಯೂಟ್ ಮಾಡುವ ತವಕ. ತಮ್ಮ ಬದುಕನ್ನೂ ಗಟ್ಟಿ ಮಾಡಿಕೊಳ್ಳುವ ‘ರವಸೆ.
ಉಹುಂ, ಹಾಗಂತ ಬೆಂಗಳೂರು ಗಮ್ಮತ್ತು ನಿದ್ದೆ ಮಾಡುವ ಹಾಗೇನೂ ಇಲ್ಲ. ಸತ್ಯಮಂಗಲದಿಂದ ಬರುವ ಮಲ್ಲಿಗೆ ಹೂ ಒಂದಿಷ್ಟು ತಡವಾಗಿಬಿಟ್ಟರೆ ಸಾವಿರ ಮಹಿಳೆಯರ ಹೊಟ್ಟೆಗೆ ಹಿಟ್ಟಿಲ್ಲ; ಲಕ್ಷ ಮಹಿಳೆಯರ ಜುಟ್ಟಿಗೆ ಹೂವಿಲ್ಲ ಎಂದಾಗಿಬಿಡುತ್ತದೆ. ಗುಲ್ಬರ್ಗದಲ್ಲಿ ತೊಗರಿ ಬೆಳೆ ಮಳೆಗೆ ನಾಶವಾದರೆ, ಬೆಂಗಳೂರು ಲಬೋ ಲಬೋ ಎನ್ನುತ್ತದೆ.
ಹಾಲಿನ ಲಾರಿಯ ಹೆಡ್‌ಲೈಟ್ ಬೆಂಗಳೂರಿನ ನಿದ್ದೆಯನ್ನು ಓಡಿಸಿಬಿಡುತ್ತದೆ. ದಿನಕ್ಕೆ 14 ಲಕ್ಷ ಲೀಟರ್ ಹಾಲು 3 ಲಕ್ಷ ಲೀಟರ್ ಮೊಸರು ಬೇಕೇ ಬೇಕು- ಈ ಬೆಂಗಳೂರಿಗೆ. ಊರಿನ ಗೋವಳರೆಲ್ಲ ಎಷ್ಟು ಹಾಲು ಕರೆದರೂ ಬೆಂಗಳೂರು ಹೊಟ್ಟೆ ತುಂಬಿಸುವುದು ಕಷ್ಟವೇ. ದೂರದ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರುಗಳೆಲ್ಲ ಜತೆ ಸೇರಿಬಿಡುತ್ತವೆ- ಬೆಂಗಳೂರಿಗೆ ಹಾಲು ಕೊಡಲು.
ಬೆಂಗಳೂರು ಎದ್ದು ಕಣ್ಣುಜ್ಜಿಕೊಳ್ಳುವಷ್ಟರಲ್ಲಿ ಹೂವಿನ ಗಮಗಮ ಶುರುವಾಗಿಬಿಡುತ್ತದೆ. ಹಬ್ಬದ ಟೈಮೆಂದರೆ ಮುಗಿಯಿತು ಬಣ್ಣದ ಗುಡ್ಡೆ ಹರಿದುಬರುತ್ತದೆ. ಹಬ್ಬದ ಸೀಸನ್‌ನಲ್ಲಿ ದಿನಕ್ಕೆ 50ರಿಂದ 70 ಸಾವಿರ ಕೆಜಿ ಹೂವು ಬೇಕೇಬೇಕು. ರೋಸ್ ಕಂಡರೆ ಎವರ್‌ಯೂತ್ ಬೆಂಗಳೂರು ಎದೆಗೂಡಲ್ಲಿ ಅದೇನೋ ತನನಂ ತನನಂ. ದಿನಕ್ಕೆ 5000 ಕೆಜಿ ರೋಸ್ ಬಿಕರಿಯಾಗಿಬಿಡುತ್ತದೆ. ಕಡಪದಿಂದ ಬರುವ ಸೇವಂತಿ, ಗೌರಿಬಿದನೂರಿನ ಕನಕಾಂಬರ, ಮದುರೈ, ಸೇಲಂನ ಮಲ್ಲಿಗೆ, ಮದ್ದೂರು, ಮೈಸೂರಿನ ಕಾಕಡಗಳು ಹೊಸ ಗಂ‘ ನೀಡುತ್ತದೆ. ಬೋರಿಂಗ್ ಲೈಫ್ ನೋಡಿ ಸುಮ ನಕ್ಕುಬಿಡುತ್ತದೆ; ಹೂವನ್ನೇ ನಂಬಿಕೊಂಡ ಗ್ರಾಮಾಂತರದ ಸಾವಿರಾರು ರೈತರು ಮುಖದಲ್ಲಿ ಹೂವು ಅರಳುತ್ತದೆ; ಮಾರಾಟವನ್ನೇ ನಂಬಿಕೊಂಡ ಶ್ರಮಿಕ ಮಹಿಳೆಯರ ಬದುಕೂ ಅರಳುತ್ತದೆ.

ವೆಜ್ಜೋ-ನಾನ್‌ವೆಜ್ಜೋ?
ಬೆಂಗಳೂರು ಬಕನ ಹಾಗೆ. ಎಷ್ಟು ಕೊಟ್ಟರೂ ತಿನ್ನಬಲ್ಲುದು. ದಿನಕ್ಕೆ 600 ಟನ್ ಅಕ್ಕಿ ಬೇಕು. 1,500 ನ್ ತರಕಾರಿ ಬೇಕು. ಸುಮಾರು 100 ಟನ್ ಮಾಂಸ ಬೇಕು.
ತರಕಾರಿ ತಿನ್ನುವುದರಲ್ಲಿ ಬೆಂಗಳೂರು ಸದಾ ಮುಂದು. ಹಾಪ್‌ಕಾಮ್ಸ್ ಒಂದರ ಮೂಲಕವೇ ಪ್ರತಿ ದಿನ 100 ಮೆಟ್ರಿಕ್ ಟನ್ ತರಕಾರಿ ಇಲ್ಲಿಗೆ ಬರುತ್ತಿದೆ. ಅಂದರೆ ಇದು ಒಟ್ಟು ಮಾರುಕಟ್ಟೆಯ ಶೇ 8ರಷ್ಟು ಮಾತ್ರ.
30,000 ಹಾಕರ್‌ಗಳು ಇಲ್ಲಿ ಹೊಟ್ಟೆ ಹೊರೆಯುತ್ತಿದ್ದಾರೆ. ಇವರಲ್ಲಿ ಶೇ 70ಕ್ಕೂ ಹೆಚ್ಚು ‘ಾಗ ತರಕಾರಿಯನ್ನೇ ಮಾರಿ ಬದುಕು ಕಂಡುಕೊಂಡಿದ್ದಾರೆ. ಬೆಂಗಳೂರಿನಲ್ಲಿ ತರಕಾರಿ ಕೊಳ್ಳುವವರು ಶೇ 83ರಷ್ಟು ‘ಾಗ ಹಾಕರ್‌ಗಳನ್ನು ಮತ್ತು ಮನೆ ಪಕ್ಕದ ಮಾರುಕಟ್ಟೆಯನ್ನೇ ಆಶ್ರಯಿಸಿಕೊಂಡಿದ್ದಾರೆ ಎಂದು ನ್ಯಾಷನಲ್ ಅಲಯನ್ಸ್ ಸ್ಟ್ರೀಟ್ ವೆಂಡರ್ಸ್ ಇಂಡಿಯಾ ಸಂಸ್ಥೆ ನಡೆಸಿದ ಸಮೀಕ್ಷೆ ಹೇಳುತ್ತದೆ.
ಬೆಂಗಳೂರು ಬರೇ ವೆಜ್ ಅಲ್ಲ. ಇಡಿ ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವ ಮಾಂಸದ ಪೈಕಿ ಶೇ 30ರಷ್ಟನ್ನು ಬೆಂಗಳೂರೇ ಕಬಳಿಸುತ್ತಿದೆ.
ಒಂದು ವರ್ಷದ ಹಿಂದಿನ ಅಂಕಿ ಅಂಶ ನೋಡುವುದಾದರೆ ಬೆಂಗಳೂರು ಪ್ರತಿವರ್ಷ 33,312 ಟನ್ ಮಾಂಸ ಹಾಗೂ 5,825 ಟನ್ ಕೋಳಿ ಮಾಂಸ ತಿನ್ನುತ್ತಿದೆ. 2009ರ ಲೆಕ್ಕದ ಪ್ರಕಾರ 13,800 ಟನ್ ಮಟನ್, 925 ಟನ್ ಬೀಫ್ ಬೆಂಗಳೂರು ತಿಂದಿದೆ.
ಬನಾನ ಸಿಟಿ
ಬೆಂಗಳೂರನ್ನು ನೀವು ಗಾರ್ಡನ್ ಸಿಟಿ ಅಂತ ಹೇಗೆ ಕರೀತೀರೋ, ಹಾಗೆಯೇ ಬನಾನ ಸಿಟಿ ಅಂತಾನೂ ಕರೀಬಹುದು. ಏಕೆಂದರೆ ಬೆಂಗಳೂರು ಒಂದು ದಿನದಲ್ಲಿ ತಿಂದು ಬಿಸಾಡೋ ಬಾಳೆಹಣ್ಣಿನ ಸಿಪ್ಪೆಯನ್ನೇ ರಾಶಿ ಹಾಕಿದರೆ ಯಶವಂತಪುರ ಮಾರುಕಟ್ಟೆ 10 ದಿನ ವಿಸರ್ಜಿಸುವ ಕಸದ ತೂಕಕ್ಕೆ ಸಮವಾಗುತ್ತದೆ!
ಅಂದರೆ ದಿನಕ್ಕೆ 500 ಟನ್ ಬಾಳೆಹಣ್ಣು ಸಿಪ್ಪೆಯನ್ನು ಬೆಂಗಳೂರು ಎಸೆಯುತ್ತಿದೆ. ದಟ್ ಮೀನ್ಸ್, ಬೆಂಗಳೂರು ದಿನಕ್ಕೆ ಬರೊಬ್ಬರಿ 4,000 ಟನ್ ಬಾಳೆ ಹಣ್ಣು ತಿನ್ನುತ್ತಿದೆ. ಈಗ ಹೇಳಿ, ಇದು ಬೆಂಗಳೂರು ಬನಾನ ಸಿಟಿ ಅಲ್ಲವೇ? ಕನಕಪುರ, ರಾಮನಗರ, ಮೈಸೂರು, ತುಮಕೂರಿನಿಂದ ಬರುವ ಏಲಕ್ಕಿ ಬಾಳೆ, ತಮಿಳುನಾಡಿನಿಂದ ಬರುವ ಪಚ್ಚೆ ಬಾಳೆ, ತಿರುಚಿರಾಪಳ್ಳಿಯಿಂದ ಬರುವ ಪುವತ್ ಬಾಳೆ ಬೆಂಗಳೂರಿನ ಫೇವರಿಟ್.
ಸಿಂಗೇನ ಅಗ್ರಹಾರ ಹೋಲ್‌ಸೇಲ್ ಮಾರ್ಕೆಟ್‌ಗೆ ದಿನಾ ದೆಹಲಿ- ಕಾಶ್ಮೀರದಿಂದ  ಸುಮಾರು 500 ಟನ್ ಸೇಬು ಹಣ್ಣುಬರುತ್ತದೆ.
ಹಣ್ಣು ಮಾರುಕಟ್ಟೆಯಲ್ಲಿ ಬೆಂಗಳೂರೇ ನಂಬರ್ ಒನ್. ತೋಟಗಾರಿಕಾ ಇಲಾಖೆ ಲೆಕ್ಕದ ಪ್ರಕಾರ ದಿನಕ್ಕೆ 50ರಿಂದ 60 ಕೋಟಿ ರೂ ಹಣ್ಣಿನ ವಹಿವಾಟು ಇಲ್ಲಿ ನಡೆಯುತ್ತದೆ!
ಹಾಗೆಯೇ, ಗುಲ್ಬರ್ಗದಿಂದ ತೊಗರಿ ಬೇಳೆ, ಕೊಡಗಿನಿಂದ ಕಾಫಿ, ಮಂಗಳೂರಿನಿಂದ ತೆಂಗಿನ ಎಣ್ಣೆ, ಗೋಡಂಬಿ, ತುಮಕೂರು-ಶಿರಾ, ತಿಪಟೂರಿನಿಂದ ಎಳೆನೀರು, ಮಂಡ್ಯ, ಮದ್ದೂರಿನಿಂದ ಕಬ್ಬು, ಗುಜರಾತ್, ರಾಜಸ್ಥಾನಗಳಿಂದ ದಿನಸಿ, ಕೋಲಾರದಿಂದ ಟೊಮೆಟೋ, ಗ್ರಾಮಾಂತರದಿಂದ ಕೊತ್ತಂಬರಿ ಸೊಪ್ಪು.. ಹೀಗೆ ಒಂದೊಂದು ಜಿಲ್ಲೆಯೂ ಬೆಂಗಳೂರಿನ ಹೊಟ್ಟೆ ತುಂಬಿಸುತ್ತದೆ.
ಬೆಂಗಳೂರೆಂದರೆ ಹಾಗೆಯೇ.. ಊರಿಗೆಲ್ಲ ನೆರಳು ಕೊಡುತ್ತದೆ; ತಾನೂ ಬದುಕುತ್ತದೆ. ಇನ್ನೊಬ್ಬರಿಗೂ ಬದುಕು ಕೊಡುತ್ತದೆ. ಕಾಲಿಗೆ ಚಕ್ರ ಕಟ್ಟಿಕೊಂಡು ದಿನವಿಡೀ ಓಡಾಡುವ ಬೆಂಗಳೂರು ಎಲ್ಲರಿಗೂ ಹೊಟ್ಟೆಗೆ ಸಿಕ್ಕಿತ್ತಾ ಎಂದು ನೋಡುತ್ತದೆ. ಸಂಜೆಯ ಹೊತ್ತಿಗೆ 2,500 ಟನ್ ತ್ಯಾಜ್ಯ ವಿಸರ್ಜಿಸಿ ಮತ್ತೆ ನಿದ್ದೆಗೆ ಒರಗುತ್ತದೆ.. ನಾಳೆ ಹೇಗೆ ಎಂಬ ಚಿಂತೆಯೊಂದಿಗೆ.
ನಸುಕಿನಲ್ಲಿ ಸಾಮಗ್ರಿಗಳನ್ನು ಖಾಲಿ ಮಾಡಿಕೊಂಡು ಜಡಜಡ ಶಬ್ದ ಮಾಡಿಕೊಂಡು ಹೊರ ಹೋಗುವ ಲಾರಿಗೆ ಎದುರಿನಲ್ಲಿ ವಾಬ್ಲರ್ ಹಕ್ಕಿಯೊಂದು ಸಿಗುತ್ತದೆ. ದೂರದ ಯುರೇಷಿಯಾದಿಂದ ಅದು ಬೆಂಗಳೂರಿಗೆ ಬರುತ್ತಿದೆ!
ಬೆಂಗಳೂರೆಂದರೆ ಹಾಗೆಯೇ ಎಲ್ಲರಿಗೂ ನೆರಳು ಕೊಡುತ್ತದೆ.




ಎಲ್ಲ ಹಣ್ಣುಗಳಿಗೂ ಬೆಂಗಳೂರು ಮ್ಯಾಲ್ ಕಣ್ಣು!
ಹಣ್ಣಿನ ಮಾರಾಟಕ್ಕೆ ಇಡೀ ದೇಶದಲ್ಲೇ ಬೆಂಗಳೂರು ಬೆಸ್ಟ್ ಪ್ಲೇಸ್ ಎನ್ನುತ್ತದೆ ಫಲೋದ್ಯಮ. ಇಂದು ಹೊರರಾಜ್ಯಗಳಿಂದ ಮಾತ್ರವಲ್ಲ, ಹೊರದೇಶಗಳಿಂದಲೂ ಹಣ್ಣು ಹಂಪಲು ಆಮದಾಗುತ್ತಿದೆ. ಬನ್ನಿ, ಬೆಂಗಳೂರು ಫ್ರುಟ್ ಮಾರ್ಟ್‌ಗೆ ಒಂದು ಸುತ್ತು ಬರೋಣ...
*ಬೆಂಗಳೂರಿನಲ್ಲಿ  ವಾಷಿಂಗ್ಟನ್ ಆಪಲ್ ಮಾರಾಟ ಹೆಚ್ಚುತ್ತಿದೆ.  ಇನ್ನು  ಆಸ್ಟ್ರೇಲಿಯಾ, ಜಪಾನ್, ಚೀನಾದಿಂದಲೂ ಸೇಬು ಬರುತ್ತಿದೆ. ಅಮೆರಿಕ, ಯುಕೆಯಿಂದ ಮರಸೇಬು, ಫ್ಲೋರಿಡಾ, ಕ್ಯಾಲಿಫೋರ್ನಿಯಾದಿಂದ ಕಿತ್ತಳೆ ಬರುತ್ತಿದೆ. ಫ್ರೆಷ್ ಕ್ಯಾಲಿಫೋರ್ನಿಯಾ ಗ್ರೇಪ್ಸ್, ಕ್ಯಾಲಿಫೋರ್ನಿಯಾ ಪ್ರುನ್ಸ್, ಕ್ಯಾಲಿಫೋರ್ನಿಯಾ ಪ್ರೀಚಸ್, ನೆಕ್ಟೇರಿಯನ್ಸ್, ಪ್ಲಮ್‌ಗಳ ಮಾರಾಟ ಈಗ ಬೆಂಗಳೂರಿನಲ್ಲಿ ತೀವ್ರಗತಿಯಿಂದ ಸಾಗುತ್ತಿದೆ ಎಂದು ವಿದೇಶಿ ಹಣ್ಣುಗಳ ಮಾರಾಟ ಪ್ರವರ್ತಕ ಕಂಪೆನಿ ಎಸ್‌ಸಿಎಸ್ ಸಮೂಹ ಸಂಸ್ಥೆಯ ನಿರ್ದೇಶಕ ಸುಮಿತ್ ಶರಣ್ ಹೇಳುತ್ತಾರೆ.
ಮೊದಲು ಬೆಂಗಳೂರಿನಲ್ಲಿ  ‘ಾರತೀಯ ಹಣ್ಣುಗಳು ಮಾತ್ರ ಲ‘್ಯವಿದ್ದವು. ಈಗ ಸಂಘಟಿತ ರಿಟೇಲಿಂಗ್‌ನ ಪರಿಣಾಮ ವಿದೇಶಿ ಹಣ್ಣುಗಳು ಲ‘್ಯವಾಗುತ್ತಿವೆ. ಹೆಚ್ಚುತ್ತಿರುವ ಆದಾಯ, ವಿದೇಶ ಪ್ರವಾಸದ ಫಲ,ನಗರೀಕರಣ, ಬದಲಾಗುತ್ತಿರುವ ಲೈಫ್‌ಸ್ಟೈಲ್‌ನಿಂದಾಗಿ ವರ್ಷವಿಡೀ ವಿದೇಶಿ ಹಣ್ಣುಗಳು ದೊರೆಯುವಂತಾಗಿವೆ ಎಂದು ಅವರು ವಿಶ್ಲೇಷಿಸುತ್ತಾರೆ.
ಪ್ರತಿದಿನ ಬೆಂಗಳೂರಿಗೆ ಎರಡು ಕಂಟೇನರ್ ತುಂಬಾ ವಿದೇಶಿ ಹಣ್ಣು ಬರುತ್ತದೆ. ಇದರ ಬೆಲೆ ಎಷ್ಟಪ್ಪಾ ಎಂದರೆ 80 ಲಕ್ಷ ರೂಪಾಯಿ. ಅಂದರೆ, ನಿತ್ಯ 80 ಲಕ್ಷ  ರೂ. ವಿದೇಶಿ ಹಣ್ಣು ಇಲ್ಲಿ ಖರ್ಚಾಗುತ್ತದೆ ಎಂದಾಯಿತು. ‘ಬೆಂಗಳೂರಿನ ಶ್ರೀಮಂತ ಜನ ವಿದೇಶಿ ಹಣ್ಣಿಗೆ ಮುಗಿಬೀಳುತ್ತಾರೆ. ದುಡ್ಡಿನ ಮುಖ ನೋಡೊಲ್ಲ. ಆಸ್ಟ್ರೇಲಿಯಾ ಚೆರ‌್ರಿ ಬೆಲೆ ಕೆಜಿಗೆ 1800 ರೂ ಇದ್ದರೂ ತಲೆಕೆಡಿಸಿಕೊಳ್ಳೋದಿಲ್ಲ’ ಎಂದು ರಸೆಲ್ ಮಾರ್ಕೆಟ್ ಫ್ರುಟ್ ಮರ್ಚೆಂಟ್ಸ್ ಅಸೋಸಿಯೇಷನ್‌ನ ಪ್ರ‘ಾನ ಕಾರ‌್ಯದರ್ಶಿ ಇದ್ರೀಸ್ ಚೌ‘ರಿ ಹೇಳುತ್ತಾರೆ.
ಬೆಂಗಳೂರು ಹಣ್ಣು ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದೆ ಎಂದು ತೋಟಗಾರಿಕಾ ಇಲಾಖೆಯ ಹೆಚ್ಚುವರಿ ನಿರ್ದೇಶಕ ಡಾ.ಎಸ್.ವಿ.ಹಿತ್ತಲಮನಿ ಹೇಳುತ್ತಾರೆ.
* ಸೀಸನ್‌ನಲ್ಲಿ ಪ್ರತಿದಿನ ಬೆಂಗಳೂರಿಗೆ 100 ಟನ್ ಸಪೋಟಾ ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗದಿಂದ ಬರುತ್ತದೆ. ಹಿರಿಯೂರು, ಹೊಸದುರ್ಗ, ಚಿತ್ರದುರ್ಗ, ಕೊಪ್ಪಳದಿಂದ ದಾಳಿಂಬೆ ಬರುತ್ತದೆ. ಇದು ದಿನಕ್ಕೆ 50 ಟನ್ ಗ್ಯಾರಂಟಿ.
* ಬೆಂಗಳೂರು ಬ್ಲೂ  ದ್ರಾಕ್ಷಿ ಗ್ರಾಮಾಂತರ ಜಿಲ್ಲೆ, ಚಿಕ್ಕಬಳ್ಳಾಪುರದಿಂದ ಬರುತ್ತಿದ್ದು, ದಿನಕ್ಕೆ ಕನಿಷ್ಠ 100 ಟನ್ ಖರ್ಚಾಗುತ್ತಿದೆ.
* ಪಪ್ಪಾಯಕ್ಕೆ ಎಲ್ಲಿಲ್ಲದ ಡಿಮಾಂಡ್. ಸೀಸನ್‌ನಲ್ಲಿ ಇದು ದಿನಕ್ಕೆ  ಸಾವಿರ ಟನ್ ಖರ್ಚಾಗುವುದೂ ಉಂಟು. ಅನಂತಪುರ, ಚಿತ್ರದುರ್ಗ ತುಮಕೂರು, ಹಿರಿಯೂರಿನಿಂದ ಬರುತ್ತದೆ.
*ಸೊರಬ, ಬನವಾಸಿ, ಕೊಡಗು, ಉಡುಪಿ, ಮೂಡಬಿದಿರೆಯಿಂದ ಬರುವ ಪೈನಾಪಲ್ ಸೀಸನ್‌ನಲ್ಲಿ 800 ಟನ್ ಖರ್ಚಾಗುವುದೂ ಉಂಟು.
* ಕರ್ನೂಲು, ಕಡಪ, ಗಡ್ವಾಲ್, ಚಿತ್ರದುರ್ಗ, ಬಳ್ಳಾರಿ, ರಾಯಚೂರಿನಿಂದ ಮೂಸಂಬಿ ಬರುತ್ತದೆ. ದಿನಕ್ಕೆ 800ರಿಂದ 1000 ಟನ್ ಬೇಡಿಕೆ ಇದೆ.
* ನಾಗಪುರ ಮತ್ತು ಕೊಡಗಿನಿಂದ ಬರುವ ಕಿತ್ತಳೆ ದಿನಕ್ಕೆ 1000 ಟನ್ ಖರ್ಚಾಗುತ್ತದೆ.
* ಹಿಮಾಚಲ ಪ್ರದೇಶ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶಗಳಿಂದ ಬರುವ ಕಿವಿ ಹಣ್ಣು, ಊಟಿ, ಕೊಡೈಕೆನಾಲ್‌ನಿಂದ ಬರುವ ಬೆಣ್ಣೆ ಹಣ್ಣು, ಮಹಾಬಲೇಶ್ವರದ ಸ್ಟ್ರಾಬೆರ‌್ರಿ, ಸೊಲ್ಲಾಪುರದಿಂದ ಬರುವ ಗೋರೆಹಣ್ಣಿಗೆ ಈಗ ಡಿಮಾಂಡ್ ಹೆಚ್ಚುತ್ತಿದೆ



 ತರಕಾರಿ ಹೊಸಕೋಟೆಯಿಂದ
ಬೆಂಗಳೂರು ತಿನ್ನುವ ಬೀನ್ಸ್ ಹೊಸಕೋಟೆಯದ್ದು, ಟೊಮೆಟೋ ಹೊಸಕೋಟೆಯಿಂದ ಬಂದಿದೆ, ಕ್ಯಾರೆಟ್ ಹೊಸಕೋಟೆಯಿಂದಲೇ... ಹೀಗೆ ಯಾವ ಹೆಸರು ಹೇಳಿದರೂ ಹೊಸಕೋಟೆ ಹೆಸರು ಮೊದಲಿಗೆ ಬಂದುಬಿಡುತ್ತದೆ.
ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕು ಬೆಂಗಳೂರು ಜನರಿಗೆ ತರಕಾರಿ ಪೂರೈಸುತ್ತಿದೆ. ಬೆಂಗಳೂರಿಗೆ ಎಲ್ಲೆಲ್ಲಿಂದ ತರಕಾರಿ ಸಪ್ಲೈ ಆಗುತ್ತಿದೆ ಎಂದು ನೋಡೋಣ...
ಬೀನ್ಸ್ ಹೊಸಕೋಟೆ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಹಾಸನ, ದಾಬಸ್‌ಪೇಟೆಯಿಂದ ಬಂದರೆ, ಟೊಮೆಟೋ, ಕೋಲಾರ, ಚನ್ನಪಟ್ಟಣ, ದೊಡ್ಡಬಳ್ಳಾಪುರ, ಮಾಗಡಿಯಿಂದ ಬರುತ್ತದೆ. ಕೊತ್ತಂಬರಿ ಸೊಪ್ಪು ಚಿಂತಾಮಣಿ, ಕೋಲಾರದಿಂದ ಪೂರೈಕೆಯಾದರೆ, ಕ್ಯಾರೆಟ್ ಹೊಸಕೋಟೆ, ಕೋಲಾರ, ಚಿಕ್ಕಬಳ್ಳಾಪುರ, ಊಟಿಯಿಂದ ಬರುತ್ತದೆ.
ಬೆಂಡೆಕಾಯಿ ತಮಿಳುನಾಡಿನಿಂದ ಬಂದರೆ, ನಿಂಬೆಹಣ್ಣು ಆಂ‘್ರದ ಗುಂಟೂರಿನಿಂದ ಹಾಗೂ ನುಗ್ಗೇಕಾಯಿ ತಮಿಳುನಾಡಿನಿಂದ ಬರುತ್ತದೆ. ಬೂದುಕುಂಬಳ ಕಾಯಿ ಚಿಂತಾಮಣಿ, ಕೋಲಾರ ಮುಂಬೈ, ಮಹಾರಾಷ್ಟ್ರದಿಂದ ಬರುತ್ತದೆ.
ಮೈಸೂರಿನಿಂದ ಸೌತೆಕಾಯಿ, ಪಡುವಲಕಾಯಿ, ದಪ್ಪ ಮೆಣಸು ಬಂದರೆ, ಎಳೆ ಮೆಣಸಿನ ಕಾಯಿ ಅರಕಲಗೂಡು, ಮಾಗಡಿಯಿಂದ ಸಪ್ಲೈ ಆಗುತ್ತದೆ. ಒಂದು ದಿನಕ್ಕೆ ಬೆಂಗಳೂರಿಗೆ 1,500 ಟನ್‌ಗೂ ಹೆಚ್ಚು ತರಕಾರಿ ಪೂರೈಕೆಯಾಗುತ್ತದೆ ಎಂಬ ಅಂದಾಜಿದೆ.
ಪ್ರತಿ ದಿನ ಬೆಂಗಳೂರಿಗೆ 500 ಟನ್ ಈರುಳ್ಳಿ ಬರುತ್ತಿದೆ. ಇದು ಬಹುತೇಕ ಚಿತ್ರದುರ್ಗ, ಹೊಸದುರ್ಗ ಹಾಗೂ ಮಹಾರಾಷ್ಟ್ರಗಳಿಂದ ಬರುತ್ತಿದೆ.



ಶೇ 45ರಷ್ಟು ಬೆಳವಣಿಗೆ
ಬೆಂಗಳೂರಿನ ರಿಟೇಲ್ ಬಿಸಿನೆಸ್ ಪ್ರತಿವರ್ಷಕ್ಕೆ ಶೇ 45ರಷ್ಟು ಹೆಚ್ಚುತ್ತಿದೆ. ದೇಶಕ್ಕೆ ಯಾವುದೇ ಹೊಸ ಉತ್ಪನ್ನ ಬಂದರೆ ಮೊದಲಿಗೆ ಬಿಡುಗಡೆಯಾಗುವ ನಗರ ಬೆಂಗಳೂರು ಎಂಬ ಹೆಗ್ಗಳಿಕೆ ಪ್ರಾಪ್ತವಾಗಿದೆ. ವಿವಿ‘ ರಿಟೇಲ್ ಶಾಪ್‌ಗಳಲ್ಲಿ ಪ್ರತಿದಿನ 30,000 ಬಿಲ್‌ಗಳು ಇಶ್ಯೂ ಆಗುತ್ತಿದೆ!


ದಿನಕ್ಕೆ 200 ಹೆಕ್ಟೇರ್ ಬೆಳೆ ಬೆಂಗಳೂರಿಗೆ
ರಾಜ್ಯದ ಇತರೆ ಜಿಲ್ಲೆಗಳಿಂದಲೇ ಸಾಕಷ್ಟು ಅಕ್ಕಿ ಪೂರೈಕೆಯಾದರೂ ಆಂ‘್ರ, ಪಂಜಾಬ್‌ಗಳಿಂದಲೂ ಅಕ್ಕಿ ಬರುತ್ತದೆ. ಒಂದು ದಿನಕ್ಕೆ 600 ಟನ್ ಅಕ್ಕಿ ಬೇಕೆಂದರೆ, ಅಂದಾಜು ದಿನಕ್ಕೆ 200 ಹೆಕ್ಟೇರ್ ನೆಲದಲ್ಲಿ ಬೆಳೆದ ‘ತ್ತ ಬೆಂಗಳೂರಿಗೇ ಬೇಕು. ಅಂದರೆ ವರ್ಷಕ್ಕೆ 73,000 ಹೆಕ್ಟೇರ್‌ನ ಬೆಳೆಯನ್ನೆಲ್ಲ ಬೆಂಗಳೂರು ತಿನ್ನುತ್ತಿದೆ ಎಂದಾಯಿತು. ಅಷ್ಟು ಜನ ರೈತರಿಗೂ ಕೆಲಸ ಸಿಕ್ಕಿತು; ಮ‘್ಯವರ್ತಿಗಳಿಗೂ ಉದ್ಯೋಗ ಬಂತು. ಈ ಕಾಸ್ಮೊಪಾಲಿಟನ್ ಸಿಟಿಯಲ್ಲಿ 60 ಬಗೆಯ ಅಕ್ಕಿ ಮಾರಾಟವಾಗುತ್ತಿದೆ!

ಬಾಕ್ಸ್..
ಮೂರು ಟನ್ ಖರ್ಜೂರ
ಹೆಲ್ತ್ ಕಾನ್ಷಿಯಸ್ ಬೆಂಗಳೂರಿಗೆ ಜಾಸ್ತಿ. ಹೀಗಾಗಿಯೇ ಡ್ರೈ ಫ್ರೂಟ್‌ಗಳ ಮಾರಾಟವೂ ‘ರದಲ್ಲಿ ಸಾಗುತ್ತದೆ. ಅದರಲ್ಲೂ ಖರ್ಜೂರ ಮಾರಾಟ ಎಷ್ಟಾಗುತ್ತದೆ ಎಂಬ ಅನುಮಾನವಿದ್ದರೆ ಕೇಳಿ- ತಿಂಗಳಿಗೆ ಬರೋಬ್ಬರಿ ಮೂರು ಟನ್ ಖರ್ಜೂರ ಬಿಕರಿಯಾಗುತ್ತದೆ. ಮದೀನಾ, ಜೋರ್ಡಾನ್ ಕಣಿವೆ, ಇರಾಕ್‌ನಿಂದ ಡೇಟ್ಸ್ ಬರುತ್ತದೆ.

ದೇಶದ ನಾಲ್ಕನೇ ದೊಡ್ಡ ನಗರ
ದೇಶದ ನಿವ್ವಳ ಆಂತರಿಕ ಉತ್ಪನ್ನ (ಜಿಡಿಪಿ) ಲೆಕ್ಕಾಚಾರ ನೋಡುವುದಾದರೆ ಬೆಂಗಳೂರು ದೇಶದ ನಾಲ್ಕನೇ ಅತಿ ದೊಡ್ಡ  ನಗರವಾಗಿದೆ. ಬೆಂಗಳೂರು ನಗರ ದೇಶದ ಜಿಡಿಪಿಗೆ 83 ಶತಕೋಟಿ ಡಾಲರ್‌ನಷ್ಟು ಕೊಡುಗೆ ನೀಡುತ್ತಿದೆ. ಮೊದಲ ಸ್ಥಾನದಲ್ಲಿ ಮುಂಬೈ (209 ಶತಕೋಟಿ ಡಾಲರ್) ಇದ್ದರೆ ನಂತರದ ಸ್ಥಾನಗಳಲ್ಲಿ  ನವದೆಹಲಿ (167 ಶತಕೋಟಿ ಡಾಲರ್), ಕೋಲ್ಕತ್ತ (150 ಶತಕೋಟಿ ಡಾಲರ್) ಇವೆ. ಬೆಂಗಳೂರಿನ ಇತರೆ ಹೆಗ್ಗಳಿಕೆ ಎಂದರೆ ‘ಾರತದಲ್ಲೇ ಅತಿ ಹೆಚ್ಚು ಕೋಟ್ಯಪತಿಗಳ ನಗರ. 10 ಲಕ್ಷಕ್ಕಿಂತ ಹೆಚ್ಚು ಆದಾಯ ಇರುವ ಹೆಚ್ಚು ಕುಟುಂಬಗಳು ಇರುವ ನಗರವೂ ಹೌದು.

ಅದೇ ರೆಡ್‌ಲೈಟ್, ಅದೇ ಡಿಸ್ಕೌಂಟ್, ಅದೇ ಮೀಟಿಂಗು, ಅದೇ ಟೆನ್‌ಷನ್, ಅದೇ ಆಕ್ಸಿಡೆಂಟು, ಅದೇ ಕ್ಯೂ.. ಎಲ್ಲವೂ ಅದದೇ. ಗೊತ್ತಿದ್ದರೂ ಅದೇ ಬದುಕಿಗೆ ಮತ್ತೆ ರೆಡಿಯಾಗಬೇಕಲ್ಲ?

Saturday, February 9, 2013

ಕೊನೆಯ ಸಂಘರ್ಷ!
`ಅಯ್ಯೋ ಇಷ್ಟಕ್ಕೆಲ್ಲ ಇವನು ಸತ್ತನಲ್ಲ..?' ಎಂದು ಎಲ್ಲವೂ ಮುಗಿದುಹೋದ ನಂತರ ತೋರಿಕೆಯ ಸಂತಾಪ ಹೇಳುವ ಮಂದಿಗೆ ನಿಜವಾಗಿಯೂ ಸತ್ತ ವ್ಯಕ್ತಿಯೊಳಗಿನ ಸಂಘರ್ಷದ ಅರಿವೇ ಇರುವುದಿಲ್ಲ.  ಆತ್ಮಹತ್ಯೆಗೆ ಬಹಿರಂಗವಾಗಿ ಕಾರಣಗಳು ಸಿಗಬಹುದು. ಆದರೆ, `ಆತ್ಮಹಂತಕ'ನೊಳಗೆ ನಡೆಯುತ್ತಿರುವ ಮಾನಸಿಕ ಮತ್ತು ದೈಹಿಕ ಸಂಘರ್ಷಗಳಿಗೆ ನಿರ್ದಿಷ್ಟ ವ್ಯಾಖ್ಯೆ ಕೊಡಲು ಯಾವ ತಜ್ಞರಿಂದಲೂ ಸಾಧ್ಯವಾಗಿಲ್ಲ.


ದೀರ್ಘಕಾಲದಿಂದ ಟೆನ್‌ಷನ್‌ನಲ್ಲಿದ್ದ  ವ್ಯಕ್ತಿ ಕೊನೆಗೂ ಆತ್ಮಹತ್ಯೆ ನಿರ್ಧಾರ ಕೈಗೊಂಡ ಕ್ಷಣದಲ್ಲಿ  ಅತ್ಯಂತ ನಿರಾಳನಾಗಿರುತ್ತಾನೆ. ಹೊಯ್ದಾಟ ನಿಂತು ಮನಸು ಪ್ರಫುಲ್ಲಗೊಳ್ಳುತ್ತದೆ; ತಲ್ಲಣಗಳು ಕೊನೆಗೊಂಡು ಶಾಂತತೆ ಮೂಡುತ್ತದೆ. ಯುದ್ಧ  ಮುಗಿದ ನಂತರದ ಮೌನ ಹೊದ್ದ ರಣರಂಗದಂತಿರುತ್ತದೆ ಆತನ ಮನ... ಸಾವಿನ ಮನೆಯ ಹೊಸ್ತಿಲ ಬಳಿ ಹೆಜ್ಜೆ ಇಟ್ಟವರಿಗೆ ಒಂದೆರಡು ಸಾಂತ್ವನದ ಮಾತು; ಒಂದೇ ಒಂದು ಸಹಾಯ ಹಸ್ತ ಸಿಕ್ಕರೆ ಜೀವವೊಂದು ಉಳಿಯುತ್ತದೆ.




ವಿಕಿರಣ ಕರ್ನಾಟಕ 

ಸುಂದರ ನದಿವನಗಳ ನಾಡೇ, ಗಂಧದ ಚಂದದ ಹೊನ್ನಿನ ಗಣಿಯೇ  ಹೀಗೆಂದು ರಾಷ್ಟ್ರಕವಿ ಕುವೆಂಪು ಅವರಿಂದ ಬಣ್ಣಿಸಲ್ಪಟ್ಟಿರುವ ಕನ್ನಡ ನಾಡು ಅಪಾಯಕಾರಿ ಯುರೇನಿಯಂನ್ನೂ ತನ್ನ ಭೂಗರ್ಭದಲ್ಲಿರಿಸಿಕೊಂಡಿದೆ. ಅಷ್ಟೇ ಅಲ್ಲ, ಇಲ್ಲಿ  ಒಂದರ ಮೇಲೊಂದು ಯುರೇನಿಯಂ ಸಂಸ್ಕರಣಾ ಘಟಕಗಳೂ ತಲೆ ಎತ್ತಲಾರಂಭಿಸುತ್ತಿವೆ; ನ್ಯೂಕ್ಲಿಯರ್‌ ಘಟಕದ ತ್ಯಾಜ್ಯಕ್ಕೂ ಕರುನಾಡೇ  ಕಸದ ಬುಟ್ಟಿ ಆಗುತ್ತಿದೆ. ಯುರೇನಿಯಂ ಎಂದಾಕ್ಷಣ ಏಕೆ ಜನಸಮುದಾಯ ಬೆಚ್ಚಿಬೀಳುತ್ತದೆ? ಈ ನಿಟ್ಟಿನಲ್ಲಿ ಒಂದು ರೌಂಡಪ್‌.

ಕಳೆದ ತಿಂಗಳು ಕೋಲಾರದ ಚಿನ್ನದ ಗಣಿಯ ಸುರಂಗಗಳಿಗೆ ತಮಿಳುನಾಡಿನ ಕೂಡಂಕುಲಂ ಪರಮಾಣು ವಿದ್ಯುತ್‌ ಘಟಕದ ತ್ಯಾಜ್ಯಗಳನ್ನು ತಂದು ಸುರಿಯಲಾಗುವುದು ಎಂಬ ಸುದ್ದಿ ದಟ್ಟವಾಗಿ ಹಬ್ಬಿತ್ತು. ಜನ ರೊಚ್ಚಿಗೆದ್ದರು. ಬಂದ್‌ ನಡೆಸಿದರು. ಚುನಾವಣೆ ಹತ್ತಿರ ಬರುತ್ತಿದೆ ಎನ್ನುವ ಕಾರಣಕ್ಕೋ ಏನೋ ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ -ಇಲ್ಲ, ಹಾಗೇನೂ ಇಲ್ಲ- ಎಂದು ಸಮಜಾಯಿಷಿ ಕೊಟ್ಟಿತು. ಕೇಂದ್ರ ಸರ್ಕಾರ ಸುಪ್ರೀಂಕೋರ್ಟಿಗೆ ಸಲ್ಲಿಸಿದ್ದ  ಪ್ರಮಾಣಪತ್ರವನ್ನು ವಾಪಸ್‌ ಮಾಡಿಕೊಂಡಿತು.
ಒಂದು ವಾರ ಕಳೆದಿರಲಿಲ್ಲ. ಕೂಡಂಕುಲಂ ತ್ಯಾಜ್ಯವನ್ನು ಸುರಿಯಲು ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ  ಸ್ಥಳ ಹುಡುಕಲಾಗುತ್ತಿದೆ ಎಂದು ಅದೇ ವಕೀಲರು ಸುಪ್ರೀಂಕೋರ್ಟಿಗೆ ಮೌಖಿಕವಾಗಿ ಹೇಳಿಕೆಯೊಂದನ್ನು ನೀಡಿದರು. ಈ ವಿಷಯ ಎಲ್ಲೂ ಹೆಚ್ಚು ಸುದ್ದಿಯಾಗಲಿಲ್ಲ.
ಅದರರ್ಥ- ಕೋಲಾರದಲ್ಲಿ ಅಣುತ್ಯಾಜ್ಯ ಸುರಿಯುವ ವಿಷಯಕ್ಕೆ ಪೂರ್ಣವಿರಾಮ ಬಿದ್ದಿಲ್ಲ ಅಂತಲೇ. ವಾಸ್ತವವಾಗಿ, ಯಾವುದೇ ಪರಮಾಣು ವಿದ್ಯುತ್‌ ಘಟಕದಲ್ಲಿ 15 ರಿಂದ 20 ವರ್ಷಗಳ ಕಾಲ ತ್ಯಾಜ್ಯವನ್ನು ಕಾಪಿಟ್ಟುಕೊಳ್ಳುವ ಅವಕಾಶ ಇದೆ. ಆ ನಂತರವಷ್ಟೇ  ತ್ಯಾಜ್ಯಗುಂಡಿ ಬೇಕಾಗಿರುವುದು. ಅದು ಕೋಲಾರದ ಚಿನ್ನದ ಗಣಿಯೂ ಆಗಿರಬಹುದು. . . ಯಾರಿಗೊತ್ತು?
ಕೋಲಾರ ಪ್ರಕರಣಕ್ಕೆ ಸದ್ಯಕ್ಕೆ ವಿರಾಮ ಬಿದ್ದಿದೆ. ಆದರೆ ಮತ್ತೊಂದೆಡೆ ಕರ್ನಾಟಕ ಪರಮಾಣು ವಿದ್ಯುತ್‌ ಉತ್ಪಾದನೆಗೆ ಬೇಕಾದ ಯುರೇನಿಯಂ ಕೇಂದ್ರಬಿಂದುವಾಗುವ ಎಲ್ಲ ಸಾಧ್ಯತೆಗಳು ಕಾಣಿಸಿಕೊಳ್ಳುತ್ತಿವೆ. ಇನ್ನು  3-4 ದಶಕಗಳಲ್ಲಿ  ಕರುನಾಡು ಯುರೇನಿಯಂ ನಾಡಾಗಿ ಪರಿವರ್ತನೆಗೊಂಡರೂ ಅಚ್ಚರಿಪಡಬೇಕಿಲ್ಲ. ಇದನ್ನು ಪುಷ್ಟೀಕರಿಸಲು ಎಂಟು ಕಾರಣಗಳು ಇಲ್ಲಿವೆ.
1. 
ಕೋಲಾರದಲ್ಲಿ ತ್ಯಾಜ್ಯ ಸುರಿಯುತ್ತಾರೆ ಎನ್ನುವ ಸುದ್ದಿ ಭಾರಿ ಕೋಲಾಹಲಕ್ಕೆ ಕಾರಣವಾಯಿತು. ಆದರೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಎಂಬ ಪುಟ್ಟ ಗ್ರಾಮದಲ್ಲಿ  ಯುರೇನಿಯಂ ಗಣಿಗಾರಿಕೆ ಹೆಚ್ಚು ಕಡಿಮೆ ಶುರುವಾಗಿಬಿಟ್ಟಿದೆ. ಆದರೆ ಇದು ಯಾವ ಕೋಲಾಹಲವನ್ನೂ ಸೃಷ್ಟಿಸಲಿಲ್ಲ.
ಗುಲ್ಬರ್ಗದ ಸೇಡಂನಿಂದ ಬಿಜಾಪುರದ ತನಕ ಇರುವ ಭೀಮಾನದಿ ಪಾತ್ರದಲ್ಲಿ  ಅತ್ಯಂತ ಸಮೃದ್ಧವಾಗಿ ಯುರೇನಿಯಂ ಇದೆ ಎನ್ನುವುದು ಖಚಿತವಾಗಿದೆ. ಅದರಲ್ಲೂ ಗೋಗಿಯಲ್ಲಿ  ದಟ್ಟ ನಿಕ್ಷೇಪ ಇರುವುದು ಸ್ಪಷ್ಟವಾಗಿದೆ. ಇಲ್ಲಿ ಕಳೆದ ಏಳೆಂಟು  ವರ್ಷಗಳ ಹಿಂದೆ ಆರಂಭವಾದ ವಿವಿಧ ಹಂತಗಳ ಪರೀಕ್ಷೆ ಈಚೆಗೆ ಕೊನೆಗೊಂಡಿದ್ದು, ಮುಂದಿನ ವರ್ಷ ಗಣಿಗಾರಿಕೆ ಆರಂಭವಾಗಲಿದೆ. ಒಟ್ಟಾರೆ 39.13 ಎಕರೆ ಜಾಗದಲ್ಲಿ  ಪೂರ್ಣ ಗಣಿಗಾರಿಕೆ ನಡೆಸಲು ಯುರೇನಿಯಂ ಕಾರ್ಪೊರೇಷನ್‌ ಆಫ್‌ ಇಂಡಿಯಾ ಲಿಮಿಟೆಡ್‌ (ಯುಸಿಐಎಲ್‌) ಮುಂದಾಗಿದೆ. ಜಾರ್ಖಂಡ್‌ನ ಜಾದುಗುಡ ಮತ್ತು  ಆಂಧ್ರಪ್ರದೇಶದ  ಪುಲಿವೆಂದುಲದ  ನಂತರ ಮೂರನೇ ಗಣಿ ಇದಾಗಿದೆ. ಆದರೆ, ಇವೆಲ್ಲದ್ದಕ್ಕಿಂತಲೂ ಅತ್ಯಂತ ಸಮೃದ್ಧವಾದ ಅದಿರು ಇಲ್ಲಿ ದೊರೆಯುತ್ತದೆ.
ಸಮೀಪದಲ್ಲೇ ಸಂಸ್ಕರಣಾ ಘಟಕವೂ ಬರಲಿದೆ. ಇದಕ್ಕಾಗಿ  ಸೈದಾಪುರ, ಡಿಗ್ಗಿ  ಹಾಗೂ ಉಮರದೊಡ್ಡಿ  ಎಂಬ ಗ್ರಾಮಗಳನ್ನೊಳಗೊಂಡಂತೆ 102.23 ಹೆಕ್ಟೇರ್‌ ಜಾಗದ ಭೂ ಸ್ವಾಧೀನಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಈ ಗಣಿ ಮೂಲಕ  ಪ್ರತಿವರ್ಷ 1,50,000 ಟನ್‌  ಯುರೇನಿಯಂ ಉತ್ಪಾದನೆಯಾಗಲಿದ್ದು, ಸಂಸ್ಕರಣೆಯ ನಂತರ 150 ಟನ್‌ ಸಾಂದ್ರೀಕೃತ ಯುರೇನಿಯಂ ಲಭ್ಯವಾಗಲಿದೆ ಎಂದು ಪರಮಾಣು ಖನಿಜಗಳ ಅನ್ವೇಷಣೆ ಮತ್ತು ಸಂಶೋಧನಾ  ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಗೋಗಿಯ ನಂತರ ಯುಸಿಐಎಲ್‌ ಕಣ್ಣು  ಸಮೀಪದ ಉಕ್ಕಿನಾಳ್‌, ದರ್ಶನಾಪುರ, ತಿಂಥಿಣಿ ಎಂಬ ಗ್ರಾಮಗಳ ಮೇಲೆ ಬೀಳಬಹುದು.
2.
ಇಷ್ಟೇ ಸಮೃದ್ಧ  ಯುರೇನಿಯಂ ನಿಕ್ಷೇಪ ಪತ್ತೆಯಾಗಿರುವುದು ಬೆಳಗಾವಿಯ ಕಲಾದಗಿ ಮುಖಜಭೂಮಿಯಲ್ಲಿ. ಬೆಳಗಾವಿಯಿಂದ ಸುಮಾರು 50 ಕಿಮೀ ದೂರ ಇರುವ ದೇಶನೂರು, ಹೋಗರ್ತಿ, ಕೊಳಾದ್ರಿ ಮತ್ತು ಕೊಲ್ದೂರು ಎಂಬಲ್ಲಿ  ಈಗಾಗಲೇ ಕೇಂದ್ರ ಪರಮಾಣು ಸಚಿವಾಲಯದ ವಿಜ್ಞಾನಿಗಳು ಸಮೀಕ್ಷೆ ಮತ್ತು ಪರೀಕ್ಷೆ ಮುಗಿಸಿದ್ದಾರೆ. ಆದರೆ ಇಲ್ಲಿ ಪೂರ್ಣ ಪ್ರಮಾಣದ ಗಣಿಗಾರಿಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿಲ್ಲ.
ಈ ಭಾಗದಲ್ಲಿ  ಸುಮಾರು 50,000 ಮಂದಿ ನೆಲೆಸಿದ್ದು, ಇವರ ಸ್ಥಳಾಂತರಕ್ಕೆ ರಾಜ್ಯ ಸರ್ಕಾರ ಪ್ರಾಥಮಿಕ ಯೋಜನೆಯನ್ನೂ ರೂಪಿಸಿದೆ. ಖಾನಾಪುರ ತಾಲೂಕಿನ ವಿಶೇಷ ಅರಣ್ಯ ವಲಯದಲ್ಲಿ ಪುನರ್ವಸತಿ ಕಲ್ಪಿಸುವುದಾಗಿ ಜಿಲ್ಲಾಡಳಿತ ಹಿಂದೆ ಹೇಳಿತ್ತು.
-ಕಲಾದಗಿ ಭಾಗದಲ್ಲಿ  ಯುರೇನಿಯಂ ನಿಕ್ಷೇಪ ಇರುವುದು ನಿಜ. ಆದರೆ ಅದರ ಗಣಿಗಾರಿಕೆ ಆರ್ಥಿಕವಾಗಿ ಸಾಧುವೇ ಎನ್ನುವುದನ್ನು  ಇನ್ನಷ್ಟೇ ಪರಿಶೀಲಿಸಬೇಕಿದೆ. ಅಲ್ಲಿ ಇನ್ನೊಂದು ಗೋಗಿ ಸಿಕ್ಕರೂ ಸಿಗಬಹುದು ಎಂದು ಪರಮಾಣು ಖನಿಜಗಳ ಅನ್ವೇಷಣೆ ಮತ್ತು ಸಂಶೋಧನಾ  ನಿರ್ದೇಶನಾಲಯದ ಪ್ರಾದೇಶಿಕ ನಿರ್ದೇಶಕ ಡಾ. ಆರ್‌.ಮೊಹಾಂತಿ ಹೇಳುತ್ತಾರೆ.

3
ಕರ್ನಾಟಕಕ್ಕೂ ಯುರೇನಿಯಂಗೂ ಇಂದು ನಿನ್ನೆಯ ನಂಟಲ್ಲ.  1978ರಿಂದಲೇ ರಾಜ್ಯದಲ್ಲಿ ಯುರೇನಿಯಂಗಾಗಿ ಹುಡುಕಾಟ ನಡೆಯುತ್ತಲೇ ಇದೆ. ಇದಲ್ಲದೆ, ಪಶ್ಚಿಮ ಘಟ್ಟ ಪ್ರದೇಶಕ್ಕೆ ಹೊಂದಿಕೊಂಡಿರುವ ಬಲ್ಕುಂಜಗುಡ್ಡೆ, ಚಿಕ್ಕಮಗಳೂರಿನ ಕಳಸಾಪುರ,  ಉತ್ತರ ಕನ್ನಡದ ಅರೇಬೈಲ್‌ ಗ್ರಾಮ ಹಾಗೂ ಸುರಪುರ ತಾಲೂಕಿನ ತಿಂಥಿಣಿ ಪ್ರದೇಶದಲ್ಲಿ  ಸಮೀಕ್ಷೆ  ನಡೆದಿದೆ. ಸಮೀಕ್ಷೆ ನಡೆದಾಗಲೆಲ್ಲ ಸಾರ್ವಜನಿಕರು, ಪರಿಸರವಾದಿಗಳು ದನಿ ಎತ್ತಿದ್ದರು. ಅರೇಬೈಲ್‌ನಲ್ಲಿ  ಗಣಿಗಾರಿಕೆ ಸಮೀಕ್ಷೆ ನಡೆದಾಗ ಸಾಹಿತಿ ಡಾ. ಶಿವರಾಮ ಕಾರಂತರ ನೇತೃತ್ವದಲ್ಲಿ  ಪ್ರತಿರೋಧ ವ್ಯಕ್ತವಾಗಿತ್ತು. ಸದ್ಯಕ್ಕೆ ಈ ಯಾವುದೇ ಭಾಗದಲ್ಲಿ ಗಣಿಗಾರಿಕೆ ಮಾಡುವ ಉದ್ದೇಶ ಇಲ್ಲ. ಅದು ಆರ್ಥಿಕವಾಗಿ ಲಾಭದಾಯಕವಲ್ಲ ಎಂದು ಪರಮಾಣು ಖನಿಜಗಳ ಅನ್ವೇಷಣೆ ಮತ್ತು ಸಂಶೋಧನಾ  ನಿರ್ದೇಶನಾಲಯ ಹೇಳಿದೆ.

4
 ಕೋಲಾರದ ಅಂತರ್ಜಲದಲ್ಲಿ ಈಗಲೂ ಯುರೇನಿಯಂ ಇದೆ ಎನ್ನುವುದು ತಿಳಿದಿದೆಯೇ?  ಈಚೆಗೆ ಬಾಬಾ ಅಟಾಮಿಕ್‌ ರೀಸರ್ಚ್‌ ಸೆಂಟರ್‌ ಹಾಗೂ ಸೆಂಟರ್‌ ಫಾರ್‌ ಎನ್‌ವಿರಾನ್‌ಮೆಂಟ್‌ ಅಂಡ್‌ ಎನರ್ಜಿ ರೀಸರ್ಚ್‌ ಸ್ಟಡೀಸ್‌ನ  ಸಹಯೋಗದಲ್ಲಿ  ವಿಜ್ಞಾನಿಗಳು ನಡೆಸಿದ ಸಮೀಕ್ಷೆಯಲ್ಲಿ ಈ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ 11 ತಾಲೂಕುಗಳಲ್ಲಿನ  52 ಕೊಳವೆ ಬಾವಿಗಳಲ್ಲಿ  ಈ ಅಧ್ಯಯನ ಮಾಡಲಾಗಿದೆ. ಇಲ್ಲಿ ಯುರೇನಿಯಂ ಅಂಶ ಪ್ರತಿ ಲೀಟರ್‌ಗೆ 0.3ರಿಂದ 1442.9 ಮೈಕ್ರೊ ಗ್ರಾಮ್‌ ತನಕ ಇದೆ. ಆದರೆ ವಿಶ್ವ ಆರೋಗ್ಯ ಸಂಸ್ಥೆ ಸೂಚಿಯ ಪ್ರಕಾರ ಪ್ರತಿ ಲೀಟರ್‌ಗೆ 2ರಿಂದ 30 ಮೈಕ್ರೋಗ್ರಾಮ್‌ಗಿಂದ ಕಡಿಮೆ ಇದ್ದರೆ ಮಾತ್ರ ಅದು ಕುಡಿಯಲು ಯೋಗ್ಯ. ಕೋಲಾರ ಸುತ್ತಮುತ್ತ ಗ್ರಾನೈಟ್‌ ಕಲ್ಲುಗಳು ಇರುವುದರಿಂದ ಯುರೇನಿಯಂ ಅಂಶ ಇರುವುದು  ಸಹಜ ಎಂದು ತಜ್ಞರು ಹೇಳುತ್ತಾರೆ.

5.
ಬೆಂಗಳೂರಿನ ಗಾಳಿ ಮತ್ತು ನೀರು ಯುರೇನಿಯಂ ಮುಕ್ತವಾಗಿಲ್ಲ. ಇಲ್ಲಿ ನೀವು ಕುಡಿಯುವ ನೀರು ಮತ್ತು ಗಾಳಿಯಲ್ಲಿ  ರೇಡಿಯೋವಿಕಿರಣ ರೇಡಾನ್‌ ಇರುವುದು  ಅಧ್ಯಯನಗಳಿಂದ ಖಚಿತವಾಗಿದೆ. ಬಾಬಾ ಅಟಾಮಿಕ್‌ ರೀಸರ್ಚ್‌ ಸೆಂಟರ್‌ ಮತ್ತು ಬೆಂಗಳೂರು ವಿವಿಯ ಪರಿಸರ ವಿಜ್ಞಾನ ವಿಭಾಗ ಜಂಟಿಯಾಗಿ ನಡೆಸಿದ ಅಧ್ಯಯನದಲ್ಲಿ  ಬೆಂಗಳೂರಿನ ಅಂತರ್ಜಲದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ರೇಡಾನ್‌ ಇದೆ ಎನ್ನುವುದು ಗೊತ್ತಾಗಿದೆ. ಪ್ರೊ. ಆರ್‌.ಕೆ.ಸೋಮಶೇಖರ್‌ ನೇತೃತ್ವದ ಈ ಅಧ್ಯಯನ ತಂಡ ಬೆಂಗಳೂರಿನ ವಿವಿಧ ಮೂಲಗಳಿಂದ 78 ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಅಭ್ಯಸಿಸಿತು. ರೇಡಾನ್‌ ಅಂಶ ಪ್ರತಿ ಲೀಟರ್‌ಗೆ 11.1 ಬೆಕ್ವೆರಲ್‌ ಗಿಂತ ಹೆಚ್ಚಿರುವುದು ದಾಖಲಾಗಿದೆ. ಯುರೇನಿಯಂ ಸಮೃದ್ಧ ಕಲ್ಲುಗಳಿಂದ ಈ ರೇಡಾನ್‌ ಉತ್ಪತ್ತಿಯಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿಯೇ ನಗರದಲ್ಲಿ  ಹೊಟ್ಟೆ ಕ್ಯಾನ್ಸರ್‌ ಹೆಚ್ಚುತ್ತಿದೆ ಎಂದು ತಜ್ಞರು ಅಂದಾಜಿಸುತ್ತಾರೆ.

6
ಚಿಕ್ಕಮಗಳೂರು ಜಿಲ್ಲೆಯಲ್ಲೂ ರೇಡಾನ್‌ ಮತ್ತು  ರೇಡಿಯೋ ವಿಕಿರಣ ಅಂಶಗಳು ಇವೆ ಎಂದರೆ ನಂಬುವಿರಾ? ಶಿವಮೊಗ್ಗ, ಸಿರಾ ಹಾಗೂ ಮೈಸೂರಿನ ಭೌತ ವಿಜ್ಞಾನದ  ಅಧ್ಯಾಪಕರಾದ ಎಸ್‌.ಮಂಜುನಾಥ್‌. ಎ.ಜಯಶೀಲನ್‌ ಹಾಗೂ ಪಿ. ವೆಂಕಟರಮಣಯ್ಯ ಅವರನ್ನೊಳಗೊಂಡ ತಂಡವೊಂದು ಈಚೆಗೆ ಚಿಕ್ಕಮಗಳೂರು ಜಿಲ್ಲೆಯ ಮಣ್ಣಿನ ಸ್ಯಾಂಪಲ್‌ನ್ನು ಪರೀಕ್ಷಿಸಿತು.
ರೇಡಾನ್‌ 226, ರೇಡಾನ್‌ 228, ಪೊಲೋನಿಯಂ 210 ಹಾಗೂ ಸೀಸ 210ಗಳು ಹೊರಸೂಸುವ ಗಾಮಾ ಪ್ರಮಾಣ ಹೆಚ್ಚಿರುವುದು ಈ ಅಧ್ಯಯನದಲ್ಲಿ ಬೆಳಕಿಗೆ ಬಂದಿದೆ. ಕೃಷಿಭೂಮಿಯಲ್ಲಿ ಈ ಪ್ರಮಾಣ ಹೆಚ್ಚಿದ್ದು, ಬಹುಶಃ ಇದು ಗ್ರಾನೈಟ್‌ ಮತ್ತು ಯುರೇನಿಯಂ ಅಂಶದಿಂದಲೇ ವಿಸರ್ಜನೆಯಾಗುತ್ತಿದೆ ಎಂದು ಅಧ್ಯಯನ ಅಂದಾಜು ಮಾಡಿದೆ. ಇಲ್ಲಿ ಕುಡಿಯುವ ನೀರಿನಲ್ಲಿ 0.2ರಿಂದ 27.9 ಮೈಕ್ರೊಗ್ರಾಮ್‌ನಷ್ಟು ಯುರೇನಿಯಂ ಅಂಶ ಪತ್ತೆಯಾಗಿದೆ.

7
 ಇದೆಲ್ಲವೂ ಕರ್ನಾಟಕ ಯುರೇನಿಯಂ ಸಮೃದ್ಧ ಎಂದು ಸೂಚಿಸಿದರೆ, ಮಾನವನಿರ್ಮಿತ ಯುರೇನಿಯಂ ಸಂಸ್ಕರಿತ ಘಟಕಗಳಿಗೂ ಕರ್ನಾಟಕ ನೆಚ್ಚಿನ ತಾಣವಾಗಿದೆ. ಭಾರಿ ವಿರೋಧದ ನಡುವೆ ಉತ್ತರ ಕನ್ನಡ ಜಿಲ್ಲೆಯ ಕೈಗಾದಲ್ಲಿ ನ್ಯೂಕ್ಲಿಯರ್‌ ವಿದ್ಯುತ್‌ ಉತ್ಪಾದನಾ ಘಟಕ ಆರಂಭವಾಗಿದೆ. ಇದರಿಂದ ಜನಜೀವನಕ್ಕೆ ಯಾವುದೇ ಅಪಾಯ ಇಲ್ಲ; ವಿಕಿರಣ ಜನಜೀವನಕ್ಕೆ ತಟ್ಟದ ಹಾಗೆ ಎಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದು ಪರಮಾಣು ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಆದರೆ ಕೈಗಾ ಸುತ್ತಮುತ್ತಲಿನ ಜನರಲ್ಲಿ ಭಯ ಮಾತ್ರ ವಿಪರೀತವಾಗಿದೆ. ಆ ಭಾಗದಲ್ಲಿ ಕ್ಯಾನ್ಸರ್‌ ಪ್ರಮಾಣ ಹೆಚ್ಚಾಗಿದೆ ಎನ್ನುವ ವರದಿಗಳು ಜನರನ್ನು ತಲ್ಲಣಗೊಳಿಸಿವೆ. ಆ ಕ್ಯಾನ್ಸರ್‌ಗೂ ಕೈಗಾ ಘಟಕಕ್ಕೂ ಸಂಬಂಧ ಇದೆ ಎನ್ನುವುದನ್ನು ಯಾವುದೇ ಅಧ್ಯಯನಗಳು ಶ್ರುತಪಡಿಸಿಲ್ಲ. ಆದರೂ, ಉತ್ತರ ಕನ್ನಡ ಜಿಲ್ಲೆಯ ಜನ ಮಡಿಲಲ್ಲಿ ಬೆಂಕಿಯನ್ನು ಇಟ್ಟುಕೊಂಡಂತೆ ಒಳಗೊಳಗೆ  ಬೇಯುತ್ತಿದ್ದಾರೆ. ನಾಳೆ ಏನೋ ಎಂಬ ಚಿಂತೆ

8
ಹೆಚ್ಚಿನ ಜನರಿಗೆ ಗೊತ್ತಿಲ್ಲ. ಮೈಸೂರಿನಿಂದ 20 ಕಿಮೀ ದೂರದ ರಟ್ನಹಳ್ಳಿ ಎಂಬಲ್ಲಿ ರೇರ್‌ ಮೆಟೀರಿಯಲ್‌ ಪ್ಲಾಂಟ್‌ ಎನ್ನುವ ಘಟಕ ಇದೆ. ಇದು ಅದರ ಕೋಡ್‌ನೇಮ್‌. ಅಣು ವಿದ್ಯುತ್‌ ಇಲಾಖೆ ಸ್ಥಾಪಿಸಿರುವ ಈ ಘಟಕದಲ್ಲಿ  ಯುರೇನಿಯಂ ಸಮೃದ್ಧೀಕರಣ ಪ್ರಕ್ರಿಯೆ ನಡೆಯುತ್ತದೆ. ಅಂದರೆ ಒಂದು ಬಾರಿ ಬಳಸಿ ಶಕ್ತಿ ಕಳೆದುಕೊಂಡ ಯುರೇನಿಯಂಗೆ ಮತ್ತೆ ಶಕ್ತಿ ತುಂಬುವ ಕೆಲಸ.  ಹಾಗೆಯೇ, ಜಾರ್ಖಂಡ್‌ನಲ್ಲಿ ಗಣಿಗಾರಿಕೆಯಾದ ಯುರೇನಿಯಂನ್ನು ಹೈದರಾಬಾದ್‌ಗೆ ಶುದ್ಧೀಕರಣಕ್ಕೆ ಕಳುಹಿಸಲಾಗುತ್ತದೆ. ಬಳಿಕ ಅದನ್ನು ಮೈಸೂರಿಗೆ  ತಂದು ನ್ಯೂಕ್ತಿಯರ್‌ ಗ್ರೇಡ್‌ ಯುರೇನಿಯಂ ಆಗಿ ಪರಿವರ್ತಿಸಲಾಗುತ್ತದೆ.  ಅಂದರೆ, ಯುರೇನಿಯಂ ಅಂಶವನ್ನು ವೃದ್ಧಿಸಲಾಗುತ್ತದೆ.  ಅದಿರಿನಲ್ಲಿ ಶೇ 0.3ರಷ್ಟು ಯುರೇನಿಯಂ ಅಂಶ ಇದ್ದರೆ, ಈ ಘಟಕದಲ್ಲಿ ಅದನ್ನು ಶೇ 30ರಿಂದ 45 ರಷ್ಟು ಹೆಚ್ಚಿಸಲಾಗುತ್ತದೆ. ಈಗ ಈ ಘಟಕವನ್ನು ವಿಸ್ತರಿಸಲು ಸರ್ಕಾರ ಉದ್ದೇಶಿಸಿದೆ.
ಆದರೆ ಮೈಸೂರಿನ ಜನತೆಯ ಆತಂಕ ಅದಲ್ಲ. ನಾಳೆ ಪ್ರಾಕೃತಿಕ ವಿಕೋಪ ಸಂಭವಿಸಿದರೆ ಯುರೇನಿಯಂ ಲೀಕ್‌ ಆಗುವುದಿಲ್ಲವೇ ಎನ್ನುವ ಕಳವಳ ಜನರದ್ದು. ಹೀಗಾಗಿಯೇ 1980ರ ದಶಕದಲ್ಲಿ ಇದು ತಲೆ ಎತ್ತಿದಾಗ ಹಲವರು ಇದನ್ನು ಪ್ರತಿರೋಧಿಸಿದರು. ಸಿಎಫ್‌ಟಿಐಆರ್‌ ವಿಜ್ಞಾನಿ ಡಾ. ಎಚ್‌ ಎ ಪಾರ್ಪಿಯಾ , ಪ್ರೊ. ರಾಮಲಿಂಗ ಹಾಗೂ ಸಾಕೇತ್‌ ರಾಜನ್‌ (ನಂತರ ನಕ್ಸಲ್‌ ನಾಯಕನಾಗಿ ಸಾವನ್ನಪ್ಪಿದ) ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಚಿತ್ರದುರ್ಗದಲ್ಲಿ ಇಂಥದ್ದೇ  ಇನ್ನೊಂದು ಯುರೇನಿಯಂ ಸಮೃದ್ಧೀಕರಣ ವಿಶೇಷ ಘಟಕವನ್ನು ತೆರೆಯಲು ಪರಮಾಣು ಇಲಾಖೆ ಉದ್ದೇಶಿಸಿದೆ. ಇಲ್ಲಿ ವೃದ್ಧಿಯಾಗುವ ಯುರೇನಿಯಂ 1,000 ಮೆಗಾವಾಟ್‌ ವಿದ್ಯುತ್‌ ಉತ್ಪಾದನಾ ಘಟಕಕ್ಕೆ ಸಾಕಾಗುತ್ತದೆ.
ಒಟ್ಟಾರೆ, ಮುಂದಿನ ದಿನಗಳಲ್ಲಿ ಕರುನಾಡ ಮೇಲೆ ಯುರೇನಿಯಂ ಭೀತಿ ಅಪ್ಪಳಿಸುವುದಂತೂ ಖಚಿತ. ಆದರೆ ಆ ಭೀತಿ ಭಾವವನು ಹೋಗಲಾಡಿಸುವವರು ಯಾರು?


ಹಿರೇಮಠರ ಮಾತು 
ಬಳ್ಳಾರಿ ಅಕ್ರಮ ಗಣಿಯೊಳ ಹೊಕ್ಕು ಅಲ್ಲಿ ನಡೆಯುತ್ತಿದ್ದ ಲೂಟಿಕೋರರ ರುದ್ರನರ್ತನವನ್ನು ಕಣ್ಣಾರೆ ಕಂಡ ಎಸ್‌.ಆರ್‌.ಹಿರೇಮಠರು ಹೆದರಿ ನಿಲ್ಲಲಿಲ್ಲ. ಎದೆಯೊಳಗೆ ಧಗಧಗಿಸುತ್ತಿದ್ದ ಹೋರಾಟದ ಕಿಚ್ಚು ಹಾಗೆ ಸುಮ್ಮನಿರಲು ಬಿಡುವಂಥದ್ದೂ ಅಲ್ಲ. ಗಣಿವ್ಯೂಹದೊಳಗಿನ ಹಳವಂಡಗಳ ಒಂದೊಂದೇ ದಾಖಲೆಗಳನ್ನು ಕಲೆ ಹಾಕಿ ಸುಪ್ರೀಂಕೋರ್ಟ್‌ವರೆಗೆ ಹೋಗಿ ಮುಟ್ಟಿಸಿದರು. ಅಕ್ರಮಿಗಳನ್ನು ಸಿಬಿಐ ಕಟಕಟೆಗೆ ತಂದು ನಿಲ್ಲಿಸುವವರೆಗೆ ವಿರಮಿಸಲಿಲ್ಲ. ಈಗ ಜನಾರ್ದನ ರೆಡ್ಡಿ ಒಳಗಿದ್ದಾರೆ;ಯಡಿಯೂರಪ್ಪ ಒಳಗೆ ಹೋಗಲು ಕಾಯುತ್ತಿದ್ದಾರೆ.. ಹೋರಾಟ ಹೇಗೆ ಸಾಗಿಬಂತು? ಅದರ ಹಿಂದಿನ ರಣತಂತ್ರಗಳೇನು? ಹಿರೇಮಠ್‌ ಅವರ ಮಾತಿನಲ್ಲೇ ಕೇಳಿ. . .


ಇನ್ನೂ ಮಹಾಭಾರತ ಪೂರ್ಣಗೊಂಡಿಲ್ಲ..
ಎಸ್‌.ಆರ್‌.ಹಿರೇಮಠ
2008- ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ತಾಂಡವವಾಡುತ್ತಿದ್ದ ಸಮಯವದು. ನೈಸರ್ಗಿಕ ಸಂಪತ್ತು ಲೂಟಿಯಾಗುತ್ತಿರುವ ಬಗ್ಗೆ ಮಾಧ್ಯಮಗಳಲ್ಲೂ ಸಾಕಷ್ಟು ಚರ್ಚೆ ನಡೆಯುತ್ತಿತ್ತು. ಇದೇ ವೇಳೆ ಬಳ್ಳಾರಿ ಜಿಲ್ಲೆಯ ಸಂಡೂರು, ಹೊಸಪೇಟೆಗಳಲ್ಲಿ ಅವ್ಯಾಹತವಾಗಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಕೆಲವು ಸ್ನೇಹಿತರು ದಾಖಲೆ ಸಹಿತ ನಮ್ಮ ಗಮನಕ್ಕೆ ತಂದರು. ನೈಸರ್ಗಿಕ ಸಂಪತ್ತನ್ನು ರಕ್ಷಿಸುವುದು ನಮ್ಮ ಸಂಸ್ಥೆ ಸಮಾಜ ಪರಿವರ್ತನ ಸಮುದಾಯದ (ಎಸ್‌ಪಿಎಸ್‌) ಮುಖ್ಯ ಧ್ಯೇಯ ಕೂಡ.
ಪರಿಸರದ ಮೇಲೆ ಸರ್ಕಾರದ ನಿಯಂತ್ರಣ ಇರಬಾರದು. ಬದಲಾಗಿರುವ ಸಾಮಾಜಿಕ- ಆರ್ಥಿಕ ಪರಿಸ್ಥಿತಿಯಲ್ಲಿ ಪರಿಸರದ ಮೇಲೆ ಸಮುದಾಯದ ನಿಯಂತ್ರಣ ಇರಬೇಕು ಎನ್ನುವುದು ನಮ್ಮ ಇಂಗಿತ. ಈ ಅಭಿಪ್ರಾಯವನ್ನು ಇಟ್ಟುಕೊಂಡೇ ನಾವು ಬೇರೆ ಬೇರೆ ಕ್ಷೇತ್ರಗಳಿಂದ ಬಂದ ಸಮಾನ ಮನಸ್ಕರು ಒಂದು ಕಡೆ ಸೇರಿಕೊಂಡೆವು.
ಸಮಾಜದ ಮೇಲೆ ದೂರಗಾಮಿ ದುಷ್ಪರಿಣಾಮ ಬೀರಬಲ್ಲ ಅಕ್ರಮಗಳ ವಿರುದ್ಧ ಕಾನೂನುಬದ್ಧವಾಗಿ ಹೋರಾಡುತ್ತಿದ್ದೆವು. ಕೆಲವು ವರ್ಷಗಳ ಹಿಂದೆಯಷ್ಟೇ ಛತ್ತೀಸ್‌ಗಢದ ಬಸ್ತಾರ್‌ ಅರಣ್ಯದಲ್ಲಿ ಟಿಂಬರ್‌ ಮಾಫಿಯಾದ ವಿರುದ್ಧ ಸುಪ್ರೀಂಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದೆ. ಆ ಪ್ರಕರಣದ ಗಾಢ ಅನುಭವ ನನ್ನದ್ದಾಗಿದ್ದರಿಂದಲೋ ಏನೋ, ಬಳ್ಳಾರಿ ಗಣಿಗಾರಿಕೆ ವಿಷಯವನ್ನು ಸಂಡೂರಿನ ನಾಗರಿಕ ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳು ನನ್ನ ಗಮನಕ್ಕೆ ತಂದರು. ಅಲ್ಲಿ ನಡೆಯುತ್ತಿದ್ದ ಅರಣ್ಯ ನಾಶ, ಗಣಿಗಾರಿಕೆ ಕುರಿತು ದಾಖಲೆ ಸಹಿತ ಹಲವು ಸ್ವಯಂ ಸೇವಕರು ನನ್ನನ್ನು  ಸಂಪರ್ಕಿಸಿದರು. ಸ್ಥಳೀಯರೇ ನಿಂತು ಹೋರಾಡಬೇಕು, ನಾನು ನಿಮಗೆ ಸಹಕರಿಸುತ್ತೇನೆ ಎಂದು ಹೇಳಿ ಅವರೆಲ್ಲರ ಸಹಾಯದಿಂದ ಬಳ್ಳಾರಿ ಜಿಲ್ಲೆಯ ಗಣಿಗಾರಿಕೆ ಇತಿಹಾಸ, ಅಲ್ಲಿನ ಪರಿಸರ ನಾಶ, ನಿಯಮಗಳನ್ನು ಮೀರಿ ನಡೆಯುತ್ತಿರುವ ಗಣಿಗಾರಿಕೆ ಎಲ್ಲವನ್ನೂ ಅಧ್ಯಯನ ಮಾಡಿದೆವು. ಅಲ್ಲಿ ರೆಡ್ಡಿ ಸೋದರರದ್ದು ಮಾತ್ರ ಅಕ್ರಮ ಗಣಿಗಾರಿಕೆ ಆಗಿರಲಿಲ್ಲ. ಅನಿಲ್‌ ಲಾಡ್‌, ಎಂಎಸ್‌ಪಿಎಲ್‌, ಕಲ್ಯಾಣಿ, ಜಿಂದಾಲ್‌ ಹೀಗೆ ಎಲ್ಲರಿಗೂ ಖನಿಜದ ಲಾಭ ಮುಖ್ಯವಾಗಿತ್ತೇ ಹೊರತು ಪರಿಸರದ ಬಗ್ಗೆ ಯಾರಿಗೂ ಚಿಂತೆ ಇರಲಿಲ್ಲ. ಇಲ್ಲಿ ಕೋಟಿಗಟ್ಟಲೆ ಅವ್ಯವಹಾರ ನಡೆದಿರುವ ಅನುಮಾನ ಶುರುವಾಯಿತು.
ಮೊದಲ ಹೆಜ್ಜೆ
ಇದರ ವಿರುದ್ಧ ಹೋರಾಟ ಎಂದು ಮಹಾಭಾರತ ಯುದ್ಧದಂಥ ತೀವ್ರತಮವಾದ ಹೋರಟ ಬೇಕು ಎಂದು ನನಗೆ ಅನ್ನಿಸಿತು. ಎಲ್ಲದ್ದಕ್ಕೂ ಮೊದಲು ಜನರನ್ನು ಸೇರಿಸಬೇಕಾಗುತ್ತದೆ. ಜನರಿಗೆ ತಿಳುವಳಿಕೆ ನೀಡಬೇಕಾಗುತ್ತದೆ. ಹೀಗಾಗಿ, 2008ರ ನವೆಂಬರ್‌ 16 ರಂದು ಸಂಡೂರಿನಲ್ಲಿ  ಜಾಗೃತಿ ರೇಖಾ ಎಂಬ ಸತ್ಯಾಗ್ರಹವನ್ನು ಹಮ್ಮಿಕೊಂಡೆವು. ಇದರಲ್ಲಿ ಸುಮಾರು 350 ಜನ ಭಾಗವಹಿಸಿದ್ದರು. ಮರುದಿನವೇ ಹೊಸಪೇಟೆಯಲ್ಲಿ ಅಂಥದ್ದೇ ಕಾರ್ಯಕ್ರಮ ಹಮ್ಮಿಕೊಂಡೆವು. ಸಂಕಲ್ಪ ಸಭಾ ಎಂಬ ಸಭೆ ನಡೆಸಿ ತಹಶೀಲ್ದಾರ್‌ ಮೂಲಕ ಪ್ರಧಾನಿ ಹಾಗೂ ಮುಖ್ಯಮಂತ್ರಿಗಳಿಗೆ ಅಕ್ರಮ ಗಣಿಗಾರಿಕೆ ಬಗ್ಗೆ ಮನವಿ ಸಲ್ಲಿಸಿದೆವು. ಇದು ಮಹಾಭಾರತದ ಮೊದಲ ಹೆಜ್ಜೆ.
ಹೀಗೆ ಒಂದೊಂದೇ ಹೆಜ್ಜೆ ಇಟ್ಟುಕೊಂಡು ಹೋಗಬೇಕೆಂದು ನಮಗೆ ಬಹಳ ಸ್ಪಷ್ಟವಾಗಿ ಗೊತ್ತಿತ್ತು. ಏಕೆಂದರೆ ನಾವು ಎದುರು ಹಾಕಿಕೊಳ್ಳುತ್ತಿರುವುದು ಸಾಮಾನ್ಯ ವ್ಯಕ್ತಿಗಳನ್ನಲ್ಲ ಎಂದು ಅರಿವೂ ನಮಗಿತ್ತು. 2009ರ ಜನವರಿ 25ರಂದು ಬಳ್ಳಾರಿ ಜಿಲ್ಲಾಧಿಕರಿ ಕಚೇರಿ ಎದುರು ಭಾರಿ ಪ್ರತಿಭಟನೆ ಮಾಡಿದೆವು. ಅದರಲ್ಲಿ ಸುಮಾರು 5,000ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.
ಮೇ ತಿಂಗಳಲ್ಲಿ ಎಸ್‌ಪಿಎಸ್‌ ಮತ್ತು ನಾಗರಿಕ ಹಿತರಕ್ಷಣಾ ವೇದಿಕೆ ಜಂಟಿಯಾಗಿ ಕಾರ್ಯಾಗಾರವನ್ನು ಆಯೋಜಿಸಿತು. ಇದರಲ್ಲಿ ಹಂಪಿ ಕನ್ನಡ ವಿವಿ ಮತ್ತು ಗುಲ್ಬರ್ಗ ವಿವಿಯ ವಿಸ್ತರಣಾ ಕೇಂದ್ರದ ತಜ್ಞರು ಆಗಮಿಸಿ ವಿವಿಧ ಕಡೆಗಳಿಂದ ಬಂದಿದ್ದ ಯುವ ಕಾರ್ಯಕರ್ತರಿಗೆ ಮಾಹಿತಿಗಳನ್ನು ನೀಡಿದರು.
ಜನಾಂದೋಲನದ ಜತೆಗೆ ಕಾನೂನು ಹೋರಾಟ ಮಾಡುವುದು ನಮ್ಮ ಮುಖ್ಯ ಗುರಿ. ಸುಪ್ರೀಂಕೋರ್ಟಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ನಿರ್ಧರಿಸಿದೆವು. ಇದೇನು ಸರಳವಲ್ಲ. ಎಲ್ಲ ಅಗತ್ಯ ದಾಖಲೆಗಳನ್ನು ಕಲೆಹಾಕಬೇಕು. ಒಂದಿಷ್ಟೂ ಜಾರದಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ನನ್ನ ಜತೆಗೆ ಪ್ರೊ. ವಿಷ್ಣು ಕಾಮತ್‌, ಡಾ. ರವೀಂದ್ರನಾಥ ರಾಮಚಂದ್ರರಾವ್‌ ಕೊಂಗೊವಿ ಮತ್ತಿತರರು ಸಾಕಷ್ಟು ಅಧ್ಯಯನ ನಡೆಸಿದರು. ಆ ಹೊತ್ತಿಗೆ ಲೋಕಾಯುಕ್ತರಾಗಿದ್ದ ಸಂತೋಷ್‌ ಹೆಗಡೆ ಅವರು ತಮ್ಮ ಮೊದಲ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು. ಅದರಲ್ಲಿ ಅಕ್ರಮದ ಬಗ್ಗೆ ಸಾಕಷ್ಟು ಮಾಹಿತಿ ಇದ್ದವು. ಇದರ ಜತೆಗೆ ಮೈನ್ಸ್‌ ಅಂಡ್‌ ಮಿನರಲ್ಸ್‌ ರೆಗ್ಯುಲೇಷನ್‌ ಕಾಯ್ದೆ, ರಾಷ್ಟ್ರೀಯ ಖನಿಜ ನೀತಿ, 2004ರಲ್ಲಿ ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್‌ ಸಂಶೋಧನಾ ಸಂಸ್ಥೆ (ನೀರಿ) ನೀಡಿದ ವರದಿ, ರಾಜ್ಯ ಸರ್ಕಾರ ನೀಡಿದ ಲೈಸೆನ್ಸ್‌, ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳು ಗಣಿ ಅಕ್ರಮದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ವರದಿ. . .  ಹೀಗೆ ನೂರಾರು ದಾಖಲೆಗಳನ್ನು ಕಲೆ ಹಾಕಿದೆವು.

ರಣನೀತಿ
ದಾಖಲೆಗಳನ್ನು  ಕಲೆಹಾಕಿದ ನಂತರ ನಾವು ಇದನ್ನು ಯಾವ ರೀತಿ ಮಂಡಿಸಬೇಕು ಎನ್ನುವುದರ ಬಗ್ಗೆ  ಚರ್ಚೆ ಆರಂಭಿಸಿದೆವು. ಅದಕ್ಕೊಂದು ರಣನೀತಿ ಬೇಕಾಗಿತ್ತು. ಸ್ವಲ್ಪ ಯಾಮಾರಿದರೂ ನಮ್ಮ ಪ್ರಯತ್ನವೆಲ್ಲ ನೀರಿಗೆ ಹಾಕಿದ ಹೋಮದಂತಾಗಿಬಿಡುತ್ತಿತ್ತು.
ಅಷ್ಟೂ ದಿನ ಕರ್ನಾಟಕದಲ್ಲಿ ನಮ್ಮದು ಯಾವುದೇ ಗಣಿಗಾರಿಕೆ  ಇಲ್ಲ ಎಂದು ಜನಾರ್ದನ ರೆಡ್ಡಿ ಹೇಳುತ್ತಿದ್ದರೆ, ಕರ್ನಾಟಕದಲ್ಲಿ ಅಕ್ರಮ ನಡೆಯುತ್ತಿಲ್ಲ ಎಂದು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ವಾದಿಸುತ್ತಿದ್ದರು. ಹೀಗಾಗಿ, ನಾವು ಆಂಧ್ರದ ಅಕ್ರಮವನ್ನೇ ಆಧಾರವಾಗಿಟ್ಟುಕೊಂಡು ಸಿಬಿಐಯನ್ನು ಕರ್ನಾಟಕಕ್ಕೆ ಎಳೆದು ತಂದು ಇವರನ್ನೆಲ್ಲ ಕಟಾಂಜನದಲ್ಲಿ ನಿಲ್ಲಿಸಬೇಕಾಗಿತ್ತು. ಕರ್ನಾಟಕದ ಅಕ್ರಮದ ಬಗ್ಗೆ ನಾವು ಮೊದಲಿಗೆ ಪ್ರಸ್ತಾಪಿಸುವ ಹಾಗೆ ಇರಲಿಲ್ಲ. ಇದಕ್ಕಾಗಿ 4 ತಿಂಗಳು ತಪಸ್ಸನ್ನೇ ಮಾಡಿದೆವು. ನಾನು ಮತ್ತು ಗೆಳೆಯ ನಾಗಮಣಿ ಒಂದೊಂದೇ ತನಿಖೆ ಶುರು ಮಾಡಿದೆವು.  ಎರಡೂ ರಾಜ್ಯಕ್ಕೆ ಹೊಂದಿಕೊಂಡಿರುವ ಬಳ್ಳಾರಿ ಮೀಸಲು ಅರಣ್ಯದಲ್ಲಿ  ನಡೆದ ಒತ್ತುವರಿ, ರಸ್ತೆ ನಿರ್ಮಾಣ, ಸುಗಲಮ್ಮ ದೇವಸ್ಥಾನ ಧ್ವಂಸಗಳ ಬಗ್ಗೆ  ದಾಖಲೆ ಕಲೆ ಹಾಕಿದೆವು. ಆಂಧ್ರಕ್ಕೆ ಸೇರಿರುವ ಓಬಳಾಪುರದಲ್ಲಿ 29.21 ಲಕ್ಷ ಟನ್‌; ಅನಂತಪುರ ಮೈನಿಂಗ್‌ನಲ್ಲಿ 11 ಲಕ್ಷ ಟನ್‌ ಖನಿಜ ಸಂಗ್ರಹಿಸಿದ್ದೇವೆ ಎಂದು ಓಎಂಸಿ ಹೇಳಿಕೊಂಡಿತ್ತು. ಇದು ಹೇಗೆ ಸಾಧ್ಯ?  ಅಲ್ಲಿ ಅಷ್ಟೊಂದು ಖನಿಜ ಸಿಗುವುದಿಲ್ಲ; ಸಿಕ್ಕರೂ ಗುಣಮಟ್ಟದ್ದಿಲ್ಲ. ಹೀಗಾಗಿ ಇವೆಲ್ಲ ಕರ್ನಾಟಕದಿಂದ ಅಕ್ರಮವಾಗಿ ಸಾಗಾಟವಾದದ್ದು ಎನ್ನುವುದನ್ನು ಸಾಬೀತುಪಡಿಸುವ ಹೊಣೆ ನಮ್ಮ ಮೇಲೆ ಇತ್ತು.
ಇದೇ ಹೊತ್ತಿಗೆ ಆಂಧ್ರದಲ್ಲಿ  ರಾಜಕೀಯ ಸ್ಥಿತಿ ಬದಲಾಗಿತ್ತು. ಅಲ್ಲಿ ಗಣಿಗಾರಿಕೆ ಬಗ್ಗೆ ತನಿಖೆ ನಡೆಸಲು ಮೂವರು ಸದಸ್ಯರ ಸಮಿತಿ ರಚಿಸಲಾಗಿತ್ತು. ಅದರ ವರದಿ ಆಧರಿಸಿ ಆಂಧ್ರ ಸರ್ಕಾರ ಸುಪ್ರೀಂಕೋರ್ಟಿಗೆ ಎಸ್‌ಎಲ್‌ಪಿ ಸಲ್ಲಿಸಿತು. ಗಣಿಗಾರಿಕೆ ನಿಷೇಧವೂ ಆಯಿತು.
ಈ ಬೆಳವಣಿಗೆಯನ್ನೇ ನಾವು ಕಾಯುತ್ತಿದ್ದೆವು. ತಕ್ಷಣ ನಾವೂ ಸುಪ್ರೀಂಕೋರ್ಟಿಗೆ ರಿಟ್‌ ಹಾಕಿದೆವು. ತನಿಖೆ ವ್ಯಾಪ್ತಿಗೆ ಕರ್ನಾಟಕವನ್ನೂ ಸೇರಿಸಿ ಎಂದು ಕೋರಿಕೊಂಡೆವು. ನಮ್ಮ ಅರ್ಜಿ ಅರಣ್ಯಪೀಠದಲ್ಲಿ ಏಳನೇ ಸರದಿಯಲ್ಲಿತ್ತು. ಪರಿಸ್ಥಿತಿ ನಮ್ಮ ಪರವಾಗಿಲ್ಲ ಎನ್ನುವುದು ಅರಿವಿಗೆ ಬಂತು. ಮುಖ್ಯ ನ್ಯಾಯಮೂರ್ತಿ ಬದಲಾಗುವವರೆಗೆ ನಮ್ಮ ಯಾವುದೇ ಪ್ರಯತ್ನ ಫಲ ಕೊಡುವುದಿಲ್ಲ ಎಂದು ಗೊತ್ತಾದ ಕೂಡಲೇ ಒಂದೆರಡು ತಿಂಗಳು ಸುಮ್ಮನೆ ಕುಳಿತೆವು.
ಮುಖ್ಯ ನ್ಯಾಯಮೂರ್ತಿಗಳಾಗಿ ಎಸ್‌.ಎಸ್‌.ಕಪಾಡಿಯಾ ಅಧಿಕಾರ ಸ್ವೀಕರಿಸಿದ್ದು ನಮ್ಮ ಆತ್ಮಸ್ಥೈರ್ಯವನ್ನು ಹೆಚ್ಚಿಸಿತು. ಅವರು ಒಬ್ಬ ನಿಷ್ಪಕ್ಷಪಾತ ಮತ್ತು ಸಮರ್ಥ ನ್ಯಾಯಮೂರ್ತಿ. ಏಳನೇ ಸ್ಥಾನದಲ್ಲಿರುವ ನಮ್ಮ ಅರ್ಜಿಗೆ ಮೊದಲ ಆದ್ಯತೆ ಕೊಡಿ ಎಂದು ಕೋರ್ಟಿಗೆ ಮತ್ತೆ ಮೊರೆ ಹೋದೆವು. ಇಲ್ಲದಿದ್ದರೆ ಪ್ರಕರಣ ವಿಚಾರಣೆಗೆ ಬರುವಾಗ ಐದೋ, ಹತ್ತೋ ವರ್ಷವಾಗಬಹುದು. ಅಷ್ಟರೊಳಗೆ ಗಣಿಕಳ್ಳರು ಎಲ್ಲ ಸಂಪನ್ಮೂಲವನ್ನು  ಖಾಲಿ ಮಾಡುವ ಅಪಾಯವಿದೆ. ಆದ್ದರಿಂದ ಕನಿಷ್ಠ  ಪ್ರಕರಣದ ವಿಚಾರಣೆಯನ್ನು ಕೇಂದ್ರ ಉನ್ನತಾಧಿಕಾರ ಸಮಿತಿಗೆ ವಹಿಸಿಕೊಡಿ ಎಂದು ನಾವು ಮಾಡಿದ ಮನವಿಗೆ ಸಿಜೆ ಸ್ಪಂದಿಸಿದರು. ಬಳ್ಳಾರಿಯಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ಸಿಇಸಿಯನ್ನು ರಚಿಸಿ ಸಿಜೆ ಕಪಾಡಿಯಾ ಆದೇಶಿಸಿದರು.


ಸ್ವಯಂ ವಾದ
ನನಗೆ ವಾದ ಮಂಡನೆಗೆ ನೆರವಾಗುತ್ತಿದ್ದವರು ಹಿರಿಯ ನ್ಯಾಯವಾದಿ ಪ್ರಶಾಂತ್‌ ಭೂಷಣ್‌. ಒಂದು ಹಂತದಲ್ಲಿ ಅವರು 2ಜಿ ಪ್ರಕರಣದಲ್ಲಿ ಬಿಝಿಯಾಗಿದ್ದರು. ಹಾಗಾಗಿ, ನನಗೆ ವಾದ ಮಂಡಿಸಲು ಉತ್ತೇಜಿಸಿದರು. ಕೆಲವು ಲಾ ಪಾಯಿಂಟ್‌ಗಳನ್ನು ನಾನು ಹೇಳಿಕೊಡುತ್ತೇನೆ. ಉಳಿದಂತೆ ಸತ್ಯವನ್ನೇ ಹೇಳುತ್ತಾ ಬಂದರೆ ಸಾಕು ಎಂದು ನನ್ನನ್ನು ಹುರಿದುಂಬಿಸಿದರು. ಆಗಲೇ ಬೇರೆ ಬೇರೆ ಪ್ರಕರಣಗಳಲ್ಲಿ  4 ಪಿಐಎಲ್‌ ಹಾಕಿದ್ದ ಅನುಭವ ಇದ್ದುದರಿಂದ ವಾದ ಮಂಡಿಸುವುದು ನನಗೆ ಕಷ್ಟ ಎಂದು ಅನ್ನಿಸಲಿಲ್ಲ.
ಸಿಇಸಿ ಮುಂದೆ ನಾನು ವಾದ ಮಂಡಿಸಬೇಕಾಗಿತ್ತು. ಅವರ ಪರವಾಗಿದ್ದ 3-4 ವಕೀಲರು ನನ್ನನ್ನು ಹರಿದು ತಿನ್ನುವ ಹಾಗೆ ನೋಡುತ್ತಿದ್ದರು. ನಾನು ತಣ್ಣಗೆ ವಾದ ಮಂಡಿಸಿದೆ. ಸುಮಾರು 500 ಪುಟಗಳ ಸಮಗ್ರ ದಾಖಲೆಗಳನ್ನು ಸಿಇಸಿ ಮುಂದೆ ಸಲ್ಲಿಸುವ ಮೂಲಕ ರೆಡ್ಡಿ ಒಡೆತನದಲ್ಲಿರುವ ನಾಲ್ಕು ಗಣಿಗಾರಿಕೆ ಲೀಸ್‌ನ್ನು ರದ್ದುಪಡಿಸಬೇಕು ಎಂದು ವಾದಿಸಿದೆ. ಗಣಿಗಾರಿಕೆ ನಿಷೇಧವನ್ನು ಮೊದಲಿಗೆ ಸಿಇಸಿ ನ್ಯಾಯಮೂರ್ತಿಗಳು ಒಪ್ಪಿಕೊಂಡಿರಲಿಲ್ಲ. ನಿಷೇಧಿಸದಿದ್ದರೆ ಸಕ್ರಮದ ಹೆಸರಿನಲ್ಲಿ ಅಕ್ರಮಗಳು ಮುಂದುವರೆಯಬಹುದೆಂಬ ಆತಂಕವನ್ನು ಸಕಾರಣವಾಗಿ ವಿವರಿಸಿದೆ.
ಕಡೆಗೂ 2011ರ ಏಪ್ರಿಲ್‌ 15ರಂದು 2003ರಿಂದ 2009ರವರೆಗೆ ಸುಮಾರು 304.91 ಲಕ್ಷ ಮೆಟ್ರಿಕ್‌ ಟನ್‌ಅದಿರು ಅಕ್ರಮ ಸಾಗಣೆಯಾಗಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಸಿಇಸಿ ಮಧ್ಯಂತರ ವರದಿಯಲ್ಲಿ ಹೊರಹಾಕಿತು. ಯಡಿಯೂರಪ್ಪ ಮುಖ್ಯಮಂತ್ರಿ ಅವಧಿಯಲ್ಲಿ ಸಕ್ರಮಕ್ಕಿಂತ (61 ಲಕ್ಷ ಟನ್‌) ಅಕ್ರಮ (71 ಲಕ್ಷ ಟನ್‌) ಅದಿರು ರಫ್ತಾಗಿದ್ದು, ಹಿಂದೆಂದೂ ಇಷ್ಟು ದೊಡ್ಡ ಪ್ರಮಾಣದ ಅವ್ಯವಹಾರವನ್ನು ನೋಡಿಲ್ಲ ಎಂದು ಸ್ವತಃ ನ್ಯಾಯಮೂರ್ತಿಗಳು ಹೇಳಿದರು.
ಸಿಇಸಿ ತನ್ನ ತನಿಖೆ ಆರಂಭಿಸಿತ್ತು. ಈ ನಡುವೆ 2011ರ ಜುಲೈ 27ರಂದು ಲೋಕಾಯುಕ್ತ ಸಂತೋಷ್‌ ಹೆಗಡೆ ತಮ್ಮ ವರದಿ ಸಲ್ಲಿಸಿದ್ದರು. ಆ ವರದಿಯಲ್ಲಿ ತುಮಕೂರು, ಚಿತ್ರದುರ್ಗದಲ್ಲಿನ ಅಕ್ರಮಗಳ ಬಗ್ಗೆಯೂ ಪ್ರಸ್ತಾಪವಿತ್ತು. ಸಿಇಸಿಯವರಿಗೆ ಈ ವಿಷಯವನ್ನು ಮನವರಿಕೆ ಮಾಡಿಕೊಡಬೇಕಾಗಿತ್ತು. ಹೀಗಾಗಿ 4-5 ದಿನಗಳಲ್ಲಿ ಲೋಕಾಯುಕ್ತ ವರದಿಯನ್ನು ಕೋರ್ಟಿಗೆ ಸಲ್ಲಿಸಿ, ತನಿಖೆ ವ್ಯಾಪ್ತಿಯನ್ನು ಈ ಜಿಲ್ಲೆಗಳಿಗೂ ವಿಸ್ತರಿಸಬೇಕೆಂದು ಕೋರಿಕೊಂಡೆ.
ಸಾಕಷ್ಟು ದಿನಗಳ ವಾದ-ಪ್ರತಿವಾದಗಳ ನಂತರ, ಆಂಧ್ರಪ್ರದೇಶದಲ್ಲಿ ನಡೆಯುತ್ತಿದ್ದ ಸಿಬಿಐ ತನಿಖೆಯನ್ನು ಕರ್ನಾಟಕಕ್ಕೂ ವಿಸ್ತರಿಸುವಲ್ಲಿ ಸಫಲನಾದೆ. ಇದು ಬೆಣ್ಣೆಯಿಂದ  ಕೂದಲು ತೆಗೆಯುವಂಥ ಸೂಕ್ಷ್ಮತೆಯ ಕೆಲಸ. ನಮ್ಮ ರಾಜ್ಯಕ್ಕೂ ಸಿಬಿಐ ಕಾಲಿಟ್ಟಿತ್ತು. ಅಲ್ಲಿಗೆ ನನ್ನ ಒಂದು ಹಂತದ ಕೆಲಸ ಮುಗಿದಿತ್ತು. ಜನಾರ್ದನ ರೆಡ್ಡಿ ಬಂಧನವೂ ಆಯಿತು. ವಿಚಾರಣೆ ನಡೆಯುತ್ತಿದೆ.
ಆದರೆ, ಮಹಾಭಾರತ ಮುಗಿದಿರಲಿಲ್ಲ. ರೆಡ್ಡಿಯನ್ನು ಸಿಬಿಐ ತೆಕ್ಕೆಗೆ ಎಳೆದುಕೊಳ್ಳುವಾಗ ಅನಾಯಾಸವಾಗಿ ಸಿಕ್ಕಿಬಿದ್ದಿದ್ದು  ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ. ಆಗಲೇ ಸಿರಾಜುದ್ದೀನ್‌ ಬಾಷಾ ಅವರ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿತ್ತು. ಸಂತೋಷ್‌ ಹೆಗಡೆ ವರದಿಯಲ್ಲೂ ಯಡಿಯೂರಪ್ಪ ಅಕ್ರಮಗಳ ಪ್ರಸ್ತಾಪವಿತ್ತು. ನಾನು ಹೆಚ್ಚೇನೂ ಮಾಡಲಿಲ್ಲ. ಈ ವರದಿಗಳನ್ನು ಸುಪ್ರೀಂಕೋರ್ಟಿನ ಸಿಇಸಿಗೆ ಸಲ್ಲಿಸಿದೆ. ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ಹೆಚ್ಚು ಕಷ್ಟವೇನೂ ಆಗಲಿಲ್ಲ. ನ್ಯಾಯಾಲಯ ನಮ್ಮ ವಾದಕ್ಕೆ ಸಮರ್ಪಕವಾಗಿಯೇ ಸ್ಪಂದಿಸಿತು. ಈವರೆಗೆ ನಡೆದ ಸುಮಾರು 140ಕ್ಕೂ ಹೆಚ್ಚು ಡಿನೋಟಿಫಿಕೇಷನ್‌ ಪ್ರಕರಣ ತನಿಖೆಗೆ ಒಳಪಡುತ್ತದೆ.
ಮಹಾಭಾರತ ಇನ್ನೂ ಮುಗಿದಿಲ್ಲ. ಬೇಲೆಕೇರಿ ಬಂದರು ಹಗರಣವನ್ನೂ ತನಿಖೆಗೆ ಒಳಪಡಿಸುವುದು ಮುಂದಿನ ಗುರಿ. ಈ ಪ್ರಕರಣದ ವಿಚಾರಣೆ ಆಗಸ್ಟ್‌ನಲ್ಲಿ ಬರಲಿದೆ. ಇದರಲ್ಲಿ  ಜನಾರ್ದನ ರೆಡ್ಡಿ ಪತ್ನಿ, ಶ್ರೀರಾಮುಲು ಪತ್ನಿ ಒಡೆತನದ ಕಂಪೆನಿ, ಶಾಸಕ ನಾಗೇಂದ್ರ ಅವರ ಹಗರಣ, ಅದಾನಿ ಎಂಟರ್‌ಪ್ರೈಸಸ್‌, ಮಲ್ಲಿಕಾರ್ಜುನ ಶಿಪ್ಪಿಂಗ್‌ ಮುಂತಾದ 20 ಕಂಪೆನಿಗಳ ಅಕ್ರಮ ವಿಚಾರಣೆಗೆ ಬರುತ್ತದೆ.
ಇಷ್ಟರ ನಡುವೆ, ಕನಕಪುರ- ಚಾಮರಾಜನಗರದಲ್ಲಿನ ಗ್ರಾನೈಟ್‌ ಗಣಿಗಾರಿಕೆ ಕುರಿತು ಕೋರ್ಟ್‌ ಮೆಟ್ಟಿಲೇರಬೇಕೆಂಬ ಒತ್ತಡ ಬರುತ್ತಿದೆ. ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರ ಅಕ್ರಮಗಳ ಕುರಿತು ತನಿಖೆಯಾಗಬೇಕೆಂದು ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸುತ್ತಿದ್ದೇನೆ.
ನನಗೆ ಇಲ್ಲಿ ರೆಡ್ಡಿ, ಯಡಿಯೂರಪ್ಪ ಯಾರೂ ಮುಖ್ಯರಲ್ಲ. ಅವರೆಲ್ಲರೂ ನಿಮಿತ್ತ ಮಾತ್ರ. ಮುಖ್ಯ ಗಣಿ ಪ್ರದೇಶದ ಜನರ ಬದುಕು. ಅದಕ್ಕಾಗಿ ಪುನಶ್ಚೇತನ ಕೆಲಸ ಆರಂಭವಾಗುವ ಹಂತದಲ್ಲಿದೆ. ಇನ್ನು ಮುಂದೆ ಯಾರೂ ಸಹ ಇಂಥ ಅಕ್ರಮಗಳಿಗೆ ಕೈ  ಹಾಕಬಾರದು ಎನ್ನುವುದು ನನ್ನ ಉದ್ದೇಶ. ಹಾಗೆ ನೋಡಿದರೆ ನನ್ನದು ದೊಡ್ಡ ಸಾಹಸವೇನಲ್ಲ. ಬೇರೆಯವರು ಸಿದ್ಧಪಡಿಸಿದ ವರದಿ, ಕೊಟ್ಟ ದಾಖಲೆಗಳನ್ನು ಒಂದು ಕಡೆ ಜೋಡಿಸಿ ಎಲ್ಲಿಗೆ ತಲುಪಿಸಬೇಕೋ ಅಲ್ಲಿಗೆ ತಲುಪಿಸಿದ್ದೇನೆ ಅಷ್ಟೇ. ಇಂಥ ಹೋರಾಟ ನನ್ನಿಂದ ಒಬ್ಬನಿಂದಲೇ ಆಗುವ ಕೆಲಸ ಅಲ್ಲ. ಇಷ್ಟರವರೆಗೆ ನೀವು ನೋಡಿದ್ದು ಮಹಾಭಾರತದ ಒಂದು ಭಾಗ ಮಾತ್ರ. ನೀವೆಲ್ಲರೂ ಕೈ ಜೋಡಿಸಿ ಇದನ್ನು ಪೂರ್ಣಗೊಳಿಸಬೇಕು.


ಬಾಕ್ಸ್‌...

ಹಿರೇಮಠರಿಗೆ ಆದಾಯ ಎಲ್ಲಿಂದ?
ರಾಜ್ಯದ ಅತಿರಥ ಮಹಾರಥ ರಾಜಕಾರಣಿಗಳನ್ನು ಎದುರು ಹಾಕಿಕೊಂಡು ಸುಪ್ರೀಂಕೋರ್ಟ್‌ ತನಕ ಹೋಗಿ ಹೋರಾಡುತ್ತಿರುವ ಎಸ್‌.ಆರ್‌.ಹಿರೇಮಠರಿಗೆ ಆದಾಯ ಎಲ್ಲಿಂದ ಎನ್ನುವ ಪ್ರಶ್ನೆ ನಿಮಗೂ ಉದ್ಭವಿಸಿರಬಹುದು. ಅದಕ್ಕೆ ಅವರು ಕೊಡುತ್ತಿರುವ  ಉತ್ತರ ಇದು:
ನನ್ನ ನ್ಯಾಯಪರ ಹೋರಾಟಕ್ಕೆ ಮೂರು ಬಗೆಯಲ್ಲಿ ಸಂಪನ್ಮೂಲ ಸಂಗ್ರಹಿಸುತ್ತಿದ್ದೇನೆ.
ಹಳ್ಳಿಗರ ಸೇವೆ: ಯಾವುದೇ ಹೋರಾಟಕ್ಕೆ ಆಯಾ ಹಳ್ಳಿ ಜನರ ಸಹಕಾರ ಬೇಕು. ನಮಗೆ ಇರಲು ಶಾಲೆಯೋ, ಗುಡಿಯನ್ನು ಕೊಟ್ಟರೆ ಸಾಕು. ಅಲ್ಲಿಯೇ ಇದ್ದು ಜನಸಂಘಟನೆ ಮಾಡುತ್ತೇವೆ. ಮನೆ ಮನೆಯಿಂದಲೂ ಜನ ರೊಟ್ಟಿ ಕೊಟ್ಟು ಕಳುಹಿಸುತ್ತಾರೆ. ಯುವಕರು, ಯುವತಿಯರು, ಸ್ವಯಂ ಸೇವಾ ಸಂಸ್ಥೆಗಳ ಸದಸ್ಯರು ಮಾಹಿತಿ ಸಂಗ್ರಹ ಮಾಡಿಕೊಡುತ್ತಾರೆ.
ಮಧ್ಯಮ ವರ್ಗ: ಯಾರೋ ಒಬ್ಬ ಶ್ರೀಮಂತನಿಂದ ಹಣ ಸಂಗ್ರಹಿಸಿದರೆ ಅದಕ್ಕೆ ಜನಶಕ್ತಿ ಬರುವುದಿಲ್ಲ. ಹೀಗಾಗಿ ನಾನು ಮಧ್ಯಮವರ್ಗದ ಜನರಿಂದ ಹಣ ಪಡೆದುಕೊಂಡಿದ್ದೇನೆ. ಎಲ್ಲ ಲೆಕ್ಕವೂ ಇದೆ. ಅಕ್ರಮ ಗಣಿ ವಿರುದ್ಧದ ಹೋರಾಟಕ್ಕೆ ಬೆಂಗಳೂರಿನ ಪ್ರೊಫೆಸರ್‌ಡಾ. ವಿಷ್ಣು ಕಾಮತ್‌ನನಗೆ ಸಹಕಾರ ಕೊಟ್ಟಿದ್ದಾರೆ. ವಕೀಲ ಮೋಹನ್‌ಕಾತರಕಿ ಅವರು ಈ ವರ್ಷ 20,000 ರೂ ಕೊಟ್ಟಿದ್ದಾರೆ. ಖರ್ಚು ವೆಚ್ಚವನ್ನು ಲೆಕ್ಕಾಚಾರದಿಂದಲೇ ಮಾಡುತ್ತೇನೆ. ಸಾಧಾರಣವಾಗಿ ದೆಹಲಿಗೆ ಹೋಗುವುದು ರೈಲಿನಲ್ಲೇ. ಅಲ್ಲಿ ಗಾಂಧಿ ಶಾಂತಿ ಪ್ರತಿಷ್ಠಾನದಲ್ಲಿ ದಿನಕ್ಕೆ 175 ರೂ ಕೊಟ್ಟು ಉಳಿದುಕೊಳ್ಳುತ್ತೇನೆ. ಗಣಿ ವಿರುದ್ಧದ ಹೋರಾಟದಲ್ಲಿ ವಕೀಲ ಶಾಂತಿಭೂಷಣ್‌ಉಚಿತ ವಕಾಲತು ಮಾಡಿದ್ದಾರೆ. ಪಿಐಎಲ್‌ಸಲ್ಲಿಸಲು ಜಸ್ಟೀಸ್‌ಪಿ.ಎನ್‌.ಭಗವತಿ ಪ್ರತಿಷ್ಠಾನ ಹಣ ಕೊಟ್ಟಿದೆ.
ನಾನು ಹನ್ನೊಂದು ವರ್ಷ ಅಮೆರಿಕದಲ್ಲಿದ್ದೆ. ಅಲ್ಲಿನ ಭಾರತೀಯರು ಇಂಥ ಕೆಲಸಕ್ಕೆ ಹಣ ಕೊಡುತ್ತಾರೆ. 1979ರಿಂದಲೇ ನಮ್ಮ ಸಂಸ್ಥೆಗೆ ವಿದೇಶಿ ಭಾರತೀಯರು ದೇಣಿಗೆ ಕೊಟ್ಟಿದ್ದಾರೆ. ಹೀಗೆ ಈ ತ್ರಿವೇಣಿ ಸಂಗಮದ ದೇಣಿಗೆಯಿಂದಲೇ ಹೋರಾಡುತ್ತಿದ್ದೇನೆ.