Monday, October 11, 2010

ಆರ್ಟಿಐ ಸುಳಿವು
ಅಕ್ರಮದ 'ಅರಿವು'

ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದು ಇಂದಿಗೆ (ಅ.12) ಐದು ವರ್ಷ. ಐದು ವರ್ಷಗಳಲ್ಲಿ  ಆರ್ಟಿಐ ಕಾಯ್ದೆ ಅದೆಷ್ಟು ಸಮರ್ಪಕವಾಗಿ ಬಳಕೆಯಾಗಿದೆ ಎನ್ನುವ ಬಗ್ಗೆ ದೇಶದಲ್ಲಿ ಜಿಜ್ಞಾಸೆ ನಡೆಯುತ್ತಿದೆ. ಹಲವೆಡೆ ಅಧಿಕಾರಿಶಾಹಿಗಳು ಈ ಹಕ್ಕನ್ನು ದಮನ ಮಾಡಲು ನಿರಂತರವಾಗಿ ಪ್ರಯತ್ನಿಸುತ್ತಿವೆ. ಆರ್ಟಿಐ ಕಾರ್ಯಕರ್ತರ ಕೊಲೆಗೂ ಇಳಿದ ಪ್ರಕರಣಗಳು ನಡೆದಿವೆ. ಆರ್ಟಿಐ ಕಾಯ್ದೆಯನ್ನು ಬಳಸಿಕೊಂಡು ಜನಸಾಮಾನ್ಯರೊಬ್ಬರು ಎಂಥ ಬದಲಾವಣೆ ತರಬಹುದು ಎನ್ನಲು ಇಲ್ಲಿದೆ ನೋಡಿ ಒಂದು ಉದಾಹರಣೆ. ಇಂಥ ಬದಲಾವಣೆ ಎಲ್ಲೆಡೆ ನಡೆದರೆ? 

  •  ವೆಂಕಟರಾಯಪ್ಪ ಕಳೆದ ವರ್ಷ ತೀರಿಕೊಂಡಿದ್ದಾರೆ. ಆದರೆ ಮೊನ್ನೆ ಮೊನ್ನೆ ಅವರ ಹೆಸರಲ್ಲಿ ಇನ್ನಾರೋ ಸಣ್ಣ ರೈತರಿಗೆ ಸರಕಾರ ನೀಡುವ ಸಹಾಯಧನ ಪಡೆದಿದ್ದು ಬಹಿರಂಗವಾಗಿ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಭಾರಿ ಗದ್ದಲವಾಗಿದೆ.
  •   ಹೈಸ್ಕೂಲ್ ಮಕ್ಕಳೆಲ್ಲ ತಮಗೆ ಸ್ಕಾಲರ್ಶಿಪ್ ಬಂದಿದೆಯೇ ಎಂದು ಹೆಸರನ್ನು ಹುಡುಕುತ್ತಿದ್ದಾರೆ. ಎಷ್ಟೋ ಸಲ, ಸ್ಕಾಲರ್ಶಿಪ್ ಮಂಜೂರಾಗಿದ್ದರೂ ಅವರ ಕೈಗೆ ಸೇರಿರುವುದೇ ಇಲ್ಲ.  ಇನ್ನಾರೋ ಗುಳುಂ ಮಾಡಿರುತ್ತಾರೆ. ಈಗ ಸ್ಕಾಲರ್ಶಿಪ್ ಮಂಜೂರಾದ ವಿದ್ಯಾರ್ಥಿಗಳ ಪಟ್ಟಿಯೇ ಪ್ರಕಟವಾಗುತ್ತದೆ!
 ಇದೆಲ್ಲವೂ ಚಿಂತಾಮಣಿಯ ಜಿ.ವಿ. ಮಂಜುನಾಥ್ ಕರಾಮತ್ತು. ಆ ತಾಲ್ಲೂಕಿನಲ್ಲಿ ಅಕ್ರಮ ಬಹಿರಂಗ ಮಾಡಲು ಅವರೇನು ಒಂದು ದಿನದ ಮುದಲ್ವನ್' ಆಗಿಲ್ಲ.  ಮಾಹಿತಿ ಹಕ್ಕು ಕಾಯ್ದೆ ಮೂಲಕ ಎಲ್ಲವನ್ನೂ ಬಹಿರಂಗಪಡಿಸುತ್ತಿದ್ದಾರೆ. ಅದೂ ಒಂದು ಪತ್ರಿಕೆಯ ಮೂಲಕ.
ಭ್ರಷ್ಟತೆ ಕಂಡಾಗ ಸಿಡಿದೆದ್ದು  ಪ್ರತಿಭಟನೆ ಮಾಡಿಕೊಂಡಿದ್ದ ಮಂಜುನಾಥ್ ಎದುರಿಸಿದ ಆಪತ್ತು ಒಂದೆರಡಲ್ಲ. ಸಮಾನಮನಸ್ಕರನ್ನು ಒಗ್ಗೂಡಿಸಿಕೊಂಡು ವೇದಿಕೆ ರೂಪಿಸಿಯೂ ಹೋರಾಡಿದರು. ಅಲ್ಲೂ ಬೆದರಿಕೆ ಕರೆ, ಕ್ಷಣಕ್ಷಣಕ್ಕೆ ಅಪಾಯ...
ಕೊನೆಗೆ ಅವರು ರೂಪಿಸಿದ ಹೋರಾಟದ ಹೊಸ ಹಾದಿ ಫಲ ಕೊಟ್ಟಿತು.
`ಅರಿವು' ಎಂಬ ದ್ವೈಮಾಸಿಕ ಪತ್ರಿಕೆ ಆರಂಭಿಸಿದರು. ಚಿಂತಾಮಣಿ ತಾಲ್ಲೂಕಿಗೆ ಸೀಮಿತವಾದ ಈ ಪತ್ರಿಕೆಯಲ್ಲಿ ಸುದ್ದಿಗಳಿರುವುದಿಲ್ಲ, ಜಸ್ಟ್ ಮಾಹಿತಿಗಳು. ಮಾಹಿತಿ ಹಕ್ಕು ಕಾಯ್ದೆಯಡಿ ತಾಲ್ಲೂಕಿನ ಎಲ್ಲ ಗ್ರಾಮಗಳಲ್ಲಿ ನಡೆಯುವ ಅಭಿವೃದ್ಧಿ  ಕಾರ್ಯಗಳ ಬಗ್ಗೆ ನಿರಂತರವಾಗಿ ಮಾಹಿತಿ ಪಡೆದುಕೊಳ್ಳುವ ಮಂಜುನಾಥ್ ಅದನ್ನು  ಪತ್ರಿಕೆಯಲ್ಲಿ ಪ್ರಕಟಿಸಲು ಆರಂಭಿಸಿದರು. ಇದರಿಂದ ತಾಲ್ಲೂಕಿನಲ್ಲಿ ನಡೆಯುವ ಹಲವು ಅಕ್ರಮಗಳು ಕಚೇರಿಯ ನಾಲ್ಕು ಗೋಡೆಯಿಂದ ಹೊರಗೆ ದಾಟಿ ಬಂದಿವೆ.
ಎರಡು ತಿಂಗಳಿಗೊಮ್ಮೆ ಹೊರಬರುವ ಈ ಪತ್ರಿಕೆಯಲ್ಲಿ ಪ್ರಕಟವಾಗುವ ಒಂದೊಂದು ಸುದ್ದಿಯೂ ರೋಚಕ, ಸೆನ್ಸೇಷನಲ್!  ಈ ಮೂಲಕ ಅವರು ಅಕ್ರಮದ ವಿರುದ್ಧ ಹೋರಾಡುತ್ತಿದ್ದಾರೆ. ಆ ಸ್ಯಾಂಪಲ್ಗಳನ್ನು ನೋಡಿ.
* ತಾಲ್ಲೂಕು ಪಂಚಾಯಿತಿ ಕಚೇರಿಯಿಂದ ಪಡೆದ ಮಾಹಿತಿ ಅನ್ವಯ 12ನೇ ಹಣಕಾಸು ಆಯೋಗದ ಅನುದಾನದ ಹಂಚಿಕೆಯನ್ನು ಪತ್ರಿಕೆಯಲ್ಲಿ ಮಂಜುನಾಥ್ ಪ್ರಕಟಿಸಿದರು. ಅದರ ಪ್ರಕಾರ 25 ಕಾಮಗಾರಿಗಳಿಗೆ 19 ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿತ್ತು. ಕ್ರಿಯಾಯೋಜನೆಯ ಪೂತರ್ಿ ವಿವರ ಪ್ರಕಟವಾಯಿತು.
-ಮರುದಿನ ತಾಪಂ ಕಚೇರಿಗೆ ಜನರೇ ಮುಗಿಬಿದ್ದರು, ನಮ್ಮೂರಿನಲ್ಲಿ ಅಂಗನವಾಡಿ ಕಟ್ಟಡವೇ ಇಲ್ಲ. ಅದರ ದುರಸ್ತಿಗೆ 78 ಸಾವಿರ ಕೊಟ್ಟಿದ್ದೀರಿ. ಈ ಹಣ ಏನು ಮಾಡುತ್ತೀರಿ ಎಂಬ ಪ್ರಶ್ನೆ. ಮತ್ತೊಬ್ಬರು- ನಮ್ಮೂರಿನ ಅಂಗನವಾಡಿಗೆ ಸುಣ್ಣ ಬಳಿಯಲು ಖಚರ್ಾಗಿದ್ದು 3,000 ರೂಪಾಯಿ. ಇಷ್ಟೊಂದು ದೊಡ್ಡ ಮೊತ್ತ ತೋರಿಸಿದ್ದೀರಿ.  ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳ ಸುರಿಮಳೆ.
ಸಿಡಿದೆದ್ದ ಜನರಿಗೆ ಹೆದರಿದ ತಾಲ್ಲೂಕು ಪಂಚಾಯಿತಿ ಅಂಥ ಕಾಮಗಾರಿಗಳನ್ನು ಕೈ ಬಿಟ್ಟರು, 13 ಲಕ್ಷ ರೂಪಾಯಿ ಉಳಿಯಿತು. ನುಂಗಣ್ಣರು ಬೆಪ್ಪಣ್ಣರಾದರು!
* ಸಣ್ಣ ರೈತರಿಗೆ ಸಕರ್ಾರ ನೀಡುವ 1,000 ರೂಪಾಯಿ ಸಹಾಯಧನ ಈ ವರ್ಷ ಯಾರ್ಯಾರಿಗೆ ಸಂದಿದೆ ಎನ್ನುವ ಮಾಹಿತಿಯನ್ನು ಅರಿವು ಪ್ರಕಟಿಸಿತು.
ಆ ಪಟ್ಟಿಯಲ್ಲಿ  ಮಾಜಿ ಶಾಸಕರ ಸಂಬಂಧಿ, ದೊಡ್ಡ ರೈತರ ಹೆಸರೂ ಇತ್ತು, ನಿಧನರಾದ ರೈತರ ಹೆಸರೂ ಇತ್ತು ಅರ್ಹ ರೈತರು ರೊಚ್ಚಿಗೆದ್ದರು.
* ಹಿಂದುಳಿದ ವರ್ಗಗಳ ವಿದ್ಯಾಥರ್ಿಗಳಿಗೆ ನೀಡುವ ವಿದ್ಯಾರ್ಥಿ ವೇತನವನ್ನು ಪಡೆದುಕೊಂಡ ವಿದ್ಯಾಥರ್ಿಗಳ ಪಟ್ಟಿ ಒಮ್ಮೆ ಪ್ರಕಟವಾಯಿತು.
ಅಚ್ಚರಿಯ ಸುರಿಮಳೆ. ಎಷ್ಟೊ ಮಂದಿ ವಿದ್ಯಾಥರ್ಿಗಳೇ ಅಲ್ಲ. ಫೋರ್ಜರಿ ಸಹಿಗೆಲ್ಲ ವಿದ್ಯಾಥರ್ಿ ವೇತನ. ಈ ಹಗರಣದ ವಿರುದ್ಧ ಈಗಲೂ ವಿದ್ಯಾರ್ಥಿಗಳೂ ಹೋರಾಟ ಮಾಡುತ್ತಿದ್ದಾರೆ.
* ಗ್ಯಾಸ್ ಕನೆಕ್ಷನ್ ಪಡೆದುಕೊಳ್ಳಬೇಕಾದರೆ ನಿಜವಾದ ಶುಲ್ಕ 1,926 ರೂಪಾಯಿ. ಆದರೆ ಚಿಂತಾಮಣಿಯ ಹಲವು ಗ್ಯಾಸ್ ಏಜೆನ್ಸಿಗಳಲ್ಲಿ 5,000ಕ್ಕೂ ಹೆಚ್ಚು ಹಣ ಪಡೆಯುತ್ತಿದ್ದರು, ಈ ಬಗ್ಗೆ ಹೋರಾಡಿದರು ಮಂಜುನಾಥ್. ದುಬಾರಿ ಹಣ ಕೊಟ್ಟು ಕೈ ಸುಟ್ಟುಕೊಂಡ ಜನರ ದಂಡೇ ಏಜೆನ್ಸಿ ಮುಂದೆ ಜಮಾಯಿಸಿತು, ಈಗ ಎಲ್ಲವೂ ಸರಿ ಹೋಗಿದೆ.
* ಪ್ರಕೃತಿ ವಿಕೋಪ ನಿಯಡಿ ಶೆಟ್ಟಿಹಳ್ಳಿಯಲ್ಲಿ ಜುಟ್ಟುವಿನ ಕೆರೆ ಏರಿ ದುರಸ್ತಿಗೆ 2 ಲಕ್ಷ ರೂಪಾಯಿ ನಿಗದಿಪಡಿಸಲಾಗಿದೆ ಎಂಬ ಮಾಹಿತಿ ಬಿತ್ತರವಾಯಿತು,
-ಮುಂದಿನ ಸಂಚಿಕೆಯಲ್ಲಿ ಆ ಊರಿನ ಓದುಗರು ಪತ್ರ ಬರೆದರು- ನಮ್ಮೂರಲ್ಲಿ ಆ ಹೆಸರಿನ ಕೆರೆಯೇ ಇಲ್ಲವಲ್ಲ ಎಂದು!
ಇವೆಲ್ಲ ಸ್ಯಾಂಪಲ್ಗಳಷ್ಟೇ.
ಮಂಜುನಾಥ್ ಬರೇ ಪತ್ರಿಕೆಯಲ್ಲಿ ಮಾಹಿತಿ ಹಾಕಿ ಸುಮ್ಮನೆ ಕೂರೋದಿಲ್ಲ. ಅನ್ಯಾಯದ ವಿರುದ್ಧ ಹೋರಾಡಲು ಜನರಿಗೆ ಮಾರ್ಗದರ್ಶನವನ್ನೂ ನೀಡುತ್ತಾರೆ. ಇದಕ್ಕಾಗಿ `ಮಾಹಿತಿ ಕೇಂದ್ರ'ವನ್ನೂ ಆರಂಭಿಸಿದ್ದಾರೆ.
ಈ ಪತ್ರಿಕೆಯ ಪ್ರಕಾಶಕರಾದ ಶ್ರೀನಿವಾಸಪುರದ ಪಿ.ಎಸ್.ರೆಡ್ಡಿ ಇಂಥ ಪತ್ರಿಕೆಯನ್ನು ಕೋಲಾರ ಜಿಲ್ಲಾ ಮಟ್ಟದಲ್ಲಿ  ತರಲು ಉದ್ದೇಶಿಸಿದ್ದಾರೆ.
`ಜನರಿಗೆ ತಿಳುವಳಿಕೆ ಬಂದು ಅವರೇ ಹೋರಾಡುವಂತಾಗಬೇಕು. ಹಾಗಾದಾಗ ಮಾತ್ರ ಭ್ರಷ್ಟಾಚಾರ ತೊಡೆಯಲು ಸಾಧ್ಯ' ಎನ್ನುತ್ತಾರೆ ಮಂಜುನಾಥ್. ಈಗ ಚಿಂತಾಮಣಿಯಲ್ಲಿ ಕೊಂಚ ಮಟ್ಟಿಗೆ ಪಾರದರ್ಶಕತೆ ಬಂದಿದೆ.



Wednesday, October 6, 2010

ಅಳುವುದು ಸುಲಭ; ಆಳುವುದು ಕಷ್ಟ!
-ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು
-ರಾಜ್ಯ ಕಂಡ ಅತ್ಯಂತ ದುರ್ಬಲ ಮುಖ್ಯಮಂತ್ರಿ
ಇದು ಬಹುಶಃ  ರಾಜಕೀಯ ದುರಂತ ಇರಬೇಕು. ಒಬ್ಬ ವ್ಯಕ್ತಿಗೇ ಇಂಥ ಎರಡೆರಡು ವಿರೋಧಾಭಾಸದ `ಬಿರುದಾಂಕಿತ'!
ಸಮರ್ಥ ವಿರೋಧ ಪಕ್ಷದ ನಾಯಕನೊಬ್ಬ ಸಮರ್ಥ ಆಡಳಿತಗಾರನಾಗಲಾರ ಎನ್ನುವ ವಿಪರ್ಯಾಸವನ್ನು ಮುಖ್ಯಮಂತ್ರಿ ಯಡಿಯೂರಪ್ಪ  ಸಾಬೀತುಪಡಿಸಿಬಿಟ್ಟಿದ್ದಾರೆ. ಅವರೊಬ್ಬ ದುರ್ಬಲ ಮುಖ್ಯಮಂತ್ರಿ ಎನ್ನುವುದನ್ನು  ವಿರೋಧಿಗಳು ಹೇಳಿದ್ದರೆ ಅದು ಸಹಜ ಟೀಕೆ ಎಂದು ತಳ್ಳಿಹಾಕಬಹುದಿತ್ತು. ಆದರೆ ಇದನ್ನು ಅವರ ಪಕ್ಷದವರೇ ಒಳಗೊಳಗೆ ಹೇಳಿಕೊಳ್ಳುತ್ತಿರುವುದರಿಂದ ಇದೊಂದು ನಿರ್ವಿವಾದ ಅಂಶ.
ಯಾವುದಾದರೂ ಸಂಕಟಕ್ಕೆ ಸಿಕ್ಕಿಹಾಕಿಕೊಂಡಾಗಲೆಲ್ಲ  `ಇದು ನನಗೆ ಇನ್ನೊಂದು ಅಗ್ನಿ ಪರೀಕ್ಷೆ' ಎಂದು ಹೇಳುತ್ತಿದ್ದ ಯಡಿಯೂರಪ್ಪ ತಮ್ಮ ರಾಜಕೀಯ ಪ್ರಬುದ್ಧತೆ ತೋರಲು ಅಡಿಗಡಿಗೆ ಸೋತರು. ಒಮ್ಮೆಯೂ ಅವರು ತನ್ನ  ಧೋರಣೆಯಲ್ಲಿ ಇರಬಹುದಾದ ಸಮಸ್ಯೆಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲೂ ಹೋಗಲಿಲ್ಲ. ವಿರೋಧ ಪಕ್ಷದ ಸ್ಥಾನಕ್ಕೆ ಹೇಗೆ ಭಾವುಕತೆ, ರೊಚ್ಚು ತುಂಬಿದರೋ ಅದನ್ನೇ ಮುಖ್ಯಮಂತ್ರಿ ಸೀಟಿಗೂ ಅಂಟಿಸಿದರೆ ಸಾಕು ಸುಲಭವಾಗಿ ಐದು ವರ್ಷ ಆಡಳಿತ ನಡೆಸಬಹುದು ಎಂದು ತಿಳಿದುಕೊಂಡಿದ್ದರೋ ಏನೋ. ಆದರೆ ಆ ಸೀಟು ಡಿಮಾಂಡ್‌ ಮಾಡುವುದೇ ಬೇರೆಯ ಸ್ವಭಾವವನ್ನು ಎಂಬುದನ್ನು  ಮರೆತೇಬಿಟ್ಟರು.ಕೆಟ್ಟದ್ದಾಗಿ ಅಳುವುದರಿಂದ ಸಿಂಪಥಿ ಗಳಿಸಬಹುದು; ಆದರೆ ಕೆಟ್ಟದ್ದಾಗಿ ಆಳುವುದರಿಂದ ಅಲ್ಲ;
ಬಿಡಿಸಿ ನಿವಾಳಿಸಿ ಎಸೆಯಬಹುದಾಗಿದ್ದ ಬಲೆಯಲ್ಲೂ  ಯಡಿಯೂರಪ್ಪ ಬಿದ್ದು  ತೊಳಲಾಡಿಬಿಟ್ಟರು. ಇಲ್ಲದಿದ್ದರೆ ಯಾವುದೇ ಬಲ ಇಲ್ಲದ ರೇಣುಕಾಚಾರ್ಯರಂಥ ಶಾಸಕರೊಬ್ಬರ ಮರ್ಜಿಗೆ ಸರ್ಕಾರ ಬೀಳಬೇಕಿತ್ತೇ? ಜಸ್ಟ್‌ ತಮಗೆ ಮಂತ್ರಿಗಿರಿ ಬೇಕೆನ್ನುವ ಕಾರಣದಿಂದ ರೆಸಾರ್ಟ್‌ಗಳಲ್ಲಿ ಅಡಗಿ ಕುಳಿತು ಅವರು ಸರ್ಕಾರವನ್ನು ಹೆದರಿಸುತ್ತಾರೆಂದರೆ... ಅದು ರೇಣುಕಾಚಾರ್ಯ ಅವರ ಸಾಮರ್ಥ್ಯವಂತೂ ಖಂಡಿತಾ ಅಲ್ಲ. ಮುಖ್ಯಮಂತ್ರಿ ದೌರ್ಬಲ್ಯವಲ್ಲವೇ?
2009ರಲ್ಲಿ  ನೆರೆ ಕಂಡ ಒಂದೇ ತಿಂಗಳಲ್ಲಿ  ರೆಡ್ಡಿ ಸೋದರರ ಬಂಡಾಯಕ್ಕೆ ಮುಖ್ಯಮಂತ್ರಿ ಕಡಿವಾಣ ಹಾಕಿದ್ದರೆ ಇಷ್ಟೊಂದು ಅಧ್ವಾನ ಎದುರಿಸುವ ಅಗತ್ಯವಂತೂ ಇರುತ್ತಿರಲಿಲ್ಲ. ಆದರೆ ಅಲ್ಲಿಂದ ಅವರು ಹೆಜ್ಜೆ ಹೆಜ್ಜೆಗೆ ಮಂಡಿಯೂರುತ್ತಲೇ ಬಂದರು. ಸ್ವಾಭಿಮಾನಕ್ಕಿಂತ ಅಧಿಕಾರದ ಕುರ್ಚಿ ದೊಡ್ಡದ್ದು ಎನ್ನುವ ತಮ್ಮ ಅಂತರಾಳದ ಅಭಿಮತವನ್ನು ಜಗಜ್ಜಾಹೀರು ಮಾಡಿಬಿಟ್ಟರು.
ಯಾವುದೇ ಒಬ್ಬ  ಸ್ಟ್ರಾಂಗ್‌ ಮುಖ್ಯಮಂತ್ರಿ ತಮ್ಮದೇ ಪಕ್ಷದ ಶಾಸಕರಿಗೆ ಅಂಜಿಕೊಂಡು ಕೂರುವ ಅಗತ್ಯ ಹೇಗೆ ಇಲ್ಲವೋ ಹಾಗೆಯೇ ಶಾಸಕರನ್ನು ಪೂರ್ಣ ಕಡೆಗಣಿಸಿ ದೌಲತ್ತು ಮಾಡುವುದೂ ಅಸಂಬದ್ಧ. ಇದೇ ಯಡಿಯೂರಪ್ಪ ಅವರ ದ್ವಂದ್ವ. ಒಂದು ಕಡೆ ತಮ್ಮ ಪಕ್ಷದ ಶಾಸಕರನ್ನು ಪೂರ್ಣ ಕಡೆಗಣಿಸಿ ನಿರಂಕುಶ ಪ್ರಭು ಆಗಿಬಿಟ್ಟರೆ, ಇನ್ನೊಂದು ಕಡೆ ಕೆಲವರ ಬ್ಲಾಕ್‌ಮೇಲ್‌ಗೆ ಬೆದರಿ ಅವರು ಹೇಳಿದ್ದಕ್ಕೆಲ್ಲ ಸಹಿ ಹಾಕಿಬಿಡುವ ಕಾರಕೂನರಾಗಿಬಿಟ್ಟರು. ಇದೆರಡನ್ನೂ ಸರಿದೂಗಿಸಿಕೊಂಡು ಹೋಗದೇ ಇದ್ದುದೇ ಇಂದು ಯಡಿಯೂರಪ್ಪ ಸಂಕಟಕ್ಕೆ ಕಾರಣ.
ಸಂಪುಟ ಪುನರ್ರಚನೆ ಬೇಡ ಎಂದು ಯಾರೋ ಶಾಸಕ ಬಹಿರಂಗ ಹೇಳಿಕೆ ನೀಡುತ್ತಾನೆ ಎಂದರೆ, ನನಗೆ ಮಂತ್ರಿಗಿರಿ ಕೊಡದಿದ್ದರೆ ನನ್ನ ದಾರಿ ನೋಡಿಕೊಳ್ಳುತ್ತೇನೆ ಎಂದು ಇನ್ನೊಬ್ಬ ಶಾಸಕ ಕತ್ತಿ ಝಳಪಿಸುತ್ತಾನೆ ಎಂದರೆ, ಅದೆಲ್ಲಿಂದಲೋ ಕುಳಿತು ಈ ಸರ್ಕಾರ ನೆಟ್ಟಗಿಲ್ಲ ಎಂದು ಒಬ್ಬ ಶಾಸಕ ಮಾಧ್ಯಮಕ್ಕೆ ಬೈಟ್‌ ಕೊಡುತ್ತಾನೆ ಎಂದರೆ, ಅಧಿಕಾರಿ ಟ್ರಾನ್ಸ್‌ಫರ್‌ನ್ನು  ಇನ್ನೊಬ್ಬ ಮಂತ್ರಿ ಕ್ಯಾನ್ಸಲ್‌ ಮಾಡಿಸುತ್ತಾನೆ ಎಂದರೆ, ಭಾರಿ ಹಗರಣದಡಿ ಸಿಲುಕಿಯೂ ಬಚಾವಾಗುತ್ತಾರೆ ಎಂದರೆ... ಅದು ಮುಖ್ಯಮಂತ್ರಿಯ ಅಸಹಾಯಕತೆಯನ್ನಲ್ಲದೆ ಇನ್ನೇನನ್ನು ಹೇಳೀತು?
ಬಿಜೆಪಿ `ಸಹಿಷ್ಣುತೆ'
ಇನ್ನೊಂದು ದುರಂತ ಎಂದರೆ: ಶಿಸ್ತನ್ನು ಗುತ್ತಿಗೆಗೆ ಪಡೆದುಕೊಂಡಿದ್ದೇವೇನೋ ಎನ್ನುವ ಪೋಸ್‌ ಕೊಡುತ್ತಿದ್ದ ಬಿಜೆಪಿ ಯಡಿಯೂರಪ್ಪ ಸರ್ಕಾರದ ಇಷ್ಟೊಂದು ಅಶಿಸ್ತು- ಅಪಸ್ಯವಗಳನ್ನು  ಸಹಿಸಿಕೊಂಡಿವೆ. ಅಂದರೆ, ಸಂಘಟನೆ  `ಸಹಿಷ್ಣುತೆ'ಯನ್ನು ಮೈಗೂಡಿಸಿಕೊಂಡಿದೆ ಎಂದು ವ್ಯಾಖ್ಯಾನಿಸಿಕೊಳ್ಳಬಹುದೇ?
ಬಿಜೆಪಿಯಂಥ ಒಂದು ರಾಷ್ಟ್ರೀಯ ಪಕ್ಷ ಅನಾಯಕತ್ವಕ್ಕೆ ಈಡಾದರೆ ಏನಾಗಬಲ್ಲುದು ಎಂಬುದಕ್ಕೆ ಕರ್ನಾಟಕದ ಪೊಲಿಟಿಕ್ಸ್‌ಗಿಂತ ಬೇರೆ ನಿದರ್ಶನ ಏಕೆ ಬೇಕು? ದಕ್ಷಿಣ ಭಾರತದ ಹೆಬ್ಬಾಗಿಲು ಎಂದು ಭರ್ಜರಿ ಪ್ರಚಾರ ಗಿಟ್ಟಿಸಿಕೊಂಡ ಬಿಜೆಪಿ ಧುರೀಣರು ಇವತ್ತು ಅವರದ್ದೇ ಪಕ್ಷದ ಶಾಸಕರಿಂದ ಅದೇ ಹೆಬ್ಬಾಗಿಲು ಮುಚ್ಚುತ್ತಿರುವುದನ್ನು ನೋಡಿ ಸುಮ್ಮನೆ ಕೂತುಬಿಟ್ಟಿದ್ದಾರೆ.
ಆಪರೇಷನ್‌ ಕಮಲದಂಥ ಚಟುವಟಿಕೆಯನ್ನು  ಒಂದಷ್ಟು  ಜನ ಒಪ್ಪಿಕೊಳ್ಳಬಹುದು. ಆದರೆ, ಆ ಒಪ್ಪಿಗೆ ಲಕ್ಷ್ಮಣ ರೇಖೆಯನ್ನು  ದಾಟಿದಾಗಲೂ ಪಕ್ಷದ ಹೈಕಮಾಂಡ್‌ ಸುಮ್ಮನಿತ್ತು. ರೆಡ್ಡಿ ದೂಳು ಇಡೀ ಕರ್ನಾಟಕವನ್ನು ಮುಚ್ಚಿಕೊಂಡಾಗಲೂ ಬಿಜೆಪಿ ನಾಯಕರು ಬಾಯಿ ಮುಚ್ಚಿಕೊಂಡಿದ್ದರು. ಹಗರಣಗಳ ಮೇಲೆ ಹಗರಣ ಸುರಿದಾಗಲೂ ಶಿಸ್ತಿನ ಪಕ್ಷದ ಸುಮ್ಮನಿತ್ತು, ಭ್ರಷ್ಟಾಚಾರ ತಾರಕಕ್ಕೆ ಹೋದಾಗಲೂ ಬಿಜೆಪಿ ಗಪ್‌ಚುಪ್‌... ಆ ಮೌನಗಳೇ ಇವತ್ತು ಬಿಜೆಪಿಯನ್ನು ಇಷ್ಟೊಂದು ಇಕ್ಕಟ್ಟಿಗೆ ಸಿಲುಕಿಸಿದೆ.
ಬಿಜೆಪಿ ನಾಯಕರು ಈಗ ಕಾಂಗ್ರೆಸ್‌-ಜೆಡಿಎಸ್‌ ನಾಯಕರನ್ನು ಬಯ್ಯಬಹುದು. ಬೆಂದ ಮನೆಯಲ್ಲಿ ಗಳ ಹಿರಿಯುವ ಕೆಲಸಕ್ಕೆ ಈ ನಾಯಕರು ಕೈ ಹಾಕಿದ್ದೂ ನಿಜ. ಆದರೆ, ಅದಕ್ಕೆ ಅವಕಾಶ ಮಾಡಿಕೊಟ್ಟಿದ್ದನ್ನು ಮರೆಮಾಚಲಾಗದು. ಬಿಜೆಪಿ ಮತ್ತು ಯಡಿಯೂರಪ್ಪ  ಈಗ ಕನ್ನಡಿ ಮುಂದೆ ನಿಂತುಕೊಂಡರೆ ರಾಜ್ಯಕ್ಕೆ ಒಳಿತು.

Friday, October 1, 2010

ಭೂ ಹಗರಣದ ಸುದ್ದಿ ಓದಿ ದಣಿದವರಿಗೆ ಈ ಜೋಕ್‌..
`ನಾನು ಮುಖ್ಯಮಂತ್ರಿಯಾಗಲಾ?
ಬ್ರಹ್ಮ ಸೃಷ್ಟಿ ಕಾರ್ಯ ಮುಗಿಸಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ. ಒಂದಷ್ಟು ಜನರ ಗುಂಪೊಂದು ಆತನ ಬಳಿ ಬಂತು.
`ಅರೆ ಏನಾಯಿತು ನಿಮಗೆಲ್ಲ. ನಿಮ್ಮನ್ನು ಅವತ್ತೇ ಮ್ಯಾನುಫ್ಯಾಕ್ಚರ್‌ ಮಾಡಿ ಕಳಿಸಿದೆನಲ್ಲ?'
ಆ ಗುಂಪು ಹೇಳಿತು- `ಕ್ವಾಲಿಟಿ ಚೆಕ್‌ನಲ್ಲಿ ರಿಜೆಕ್ಟ್‌ ಆಗಿ ಬಂದಿದ್ದೇವೆ ಸರ್‌. ಏನು ಮಾಡೋದು?'
ಬ್ರಹ್ಮನಿಗೆ  ಫುಲ್‌ ತಲೆಬಿಸಿ. ಮತ್ತೊಮ್ಮೆ ಎಲ್ಲರನ್ನೂ ಪರೀಕ್ಷಿಸಿದ.
`ಓಹೋ, ನಿಮಗೆ ಐರನ್‌ ಕಂಟೆಂಟ್‌ ಕೊರತೆ ಇದೆ. ಹೋಗಿ ನೀವು ಕಬ್ಬಿಣ ತಿಂದು ಬದುಕಿ' ಎಂದು ಕಳುಹಿಸಿಕೊಟ್ಟ. ಅವರು ಬಳ್ಳಾರಿ ಮಂತ್ರಿಗಳಾದರು.
'ಇದೊ ನಿಮಗೆ ಸೈಟ್‌ ಸಮಸ್ಯೆ ಇದ್ದ ಹಾಗಿದೆ. ರಿಯಲ್‌ ಎಸ್ಟೇಟ್‌ ಬಿಸಿನೆಸ್‌ ಮಾಡಿಕೊಂಡು ಬದಕ್ಕಳಿ' ಎಂದ. ಅವರೆಲ್ಲ  ಸೈಟ್‌ ವ್ಯಾಪಾರ ಮಾಡಿಕೊಂಡು ಬೆಂಗಳೂರಿನ ಮಂತ್ರಿಗಳಾದರು.
'ಅಯ್ಯಯ್ಯೋ, ನಿಮ್‌ ಮೇಲೆ ನಿಮಗೆ ಕಂಟ್ರೋಲ್‌ ಇರಲ್ಲವಲ್ಲ.. ನಿಮಗೇನು ಮಾಡ್ಲಿ...?' ಎಂದು ಬ್ರಹ್ಮ ಚಿಂತೆ ಮಾಡುವಷ್ಟರಲ್ಲೇ ಆ ವ್ಯಕ್ತಿ ಅಂದ- `ನಾನು ಮುಖ್ಯಮಂತ್ರಿಯಾಗಲಾ?' ಅಂತ.