Wednesday, September 7, 2011

ಮೈ ಎಕ್ಸ್‌ಪೆರಿಮೆಂಟ್‌ ವಿತ್‌ ಮೈನಿಂಗ್‌ 
(ವೆರಿ ವೆರಿ ಸ್ಸಾರಿ... ಇನ್ನೊಬ್ಬರ ಖಾಸಗಿ ವಿಷಯಕ್ಕೆ ತಲೆಹಾಕುವುದು ನಮ್ಮ ಉದ್ದೇಶ ಅಲ್ಲ. ಆದ್ರೂನೂ... ನಮ್ಮ ಮಾಜಿಗಳಿಬ್ಬರ ಪರ್ಸನಲ್‌ ಡೈರಿಯ ಒಂದೆರಡು ಹಾಳೆಗಳು ನಮಗೆ ಸಿಕ್ಕಿಬಿಟ್ಟಿವೆ. ಸಿಕ್ಕಮೇಲೆ ಓದದೆ ಇರೋದು ಹೆಂಗೆ ಅಂತ ಕದ್ದುಮುಚ್ಚಿ ಓದಿಬಿಟ್ಟಿದ್ದೀವಿ. ನಿಮ್ಮ ಮುಂದೆನೂ ಹಂಗೆನೇ ಇಡ್ತಿದ್ದೀವಿ. ಬೇರೊಬ್ಬರ ಪರ್ಸನಲ್‌ ವಿಷ್ಯ ಬೇಡ ಅಂತಿದ್ದರೆ ಸುಮ್ನಿದ್ದುಬಿಡಿ. ಓದಿದ್ರೂನೂ ಯಾರಿಗೂ ಹೇಳ್ಬೇಡಿ!)
ಇದಿಷ್ಟು  ನಮ್ಮ ಮಾಜಿ ಮುಖ್ಯಮಂತ್ರಿಗಳ ಹಾಗೆ ನಾವು ತೆಗೆದುಕೊಳ್ಳುತ್ತಿರುವ ನಿರೀಕ್ಷಣಾ ಜಾಮೀನು.

1. ರೆಡ್ಡೀರಪ್ಪ ಪುಟಗಳಿಂದ..

ಮೊದಲೆಲ್ಲ ಡೈರಿ ಬರೆಯುವ ಅಭ್ಯಾಸ ನನಗಿರಲಿಲ್ಲ. ಪ್ರಾಮಾಣಿಕವಾಗಿ ಹೇಳ್ತೀನಿ- ಡೈರಿ ಅಂದ್ರೆ ನಂಗೆ ಗೊತ್ತಿದ್ದದ್ದು ಕೆಎಂಎಫ್‌ ಮಾತ್ರ. ಆದ್ರೆ ಮೊನ್ನೆ ಅಧಿಕಾರ ಕಳಕೊಂಡ ಮೇಲೆ ಟೈಮ್‌ ಪಾಸ್‌ ಆಗ್ತಾನೇ ಇಲ್ಲ. ಕಣ್ಣು ಮುಚ್ಚಿದರೆ ಕರಿಕೋಟ್‌, ಅಗ್ರಹಾರ.. ಹೀಗೆ ಏನೇನೋ ಕನಸು ಬೀಳುತ್ತಿದೆ. ಅದ್ಕೆ ಇರಲಿ ಅಂತ ಡೈರಿ ಬರೆಯೋಕೆ ಶುರು ಮಾಡಿದ್ದೇನೆ. ಮೊನ್ನೆ ಝಿಂದಗಿ ನ ಮಿಲೇಗಿ ದುಬಾರಾ ಎಂಬ ಸಿನಿಮಾ ನೋಡೋಕೆ ಹೋಗಿದ್ದೆ. ಯಾಕೋ ಕಿರಿಕಿರಿಯಾಗಿ ಅರ್ಧದಲ್ಲೇ ಎದ್ದು ಬಂದೆ. ಅಲ್ಲಿ  ಹೃತಿಕ್‌ ರೋಷನ್‌ ಹೇಗಾದರೂ ಮಾಡಿ ಹಣ ಮಾಡಬೇಕೆಂದು ಹೊರಡುತ್ತಾನೆ. ಜನ ಅವನನ್ನು ಹೀರೋ ಅಂತಾರೆ, ವಿಷಲ್‌ ಹಾಕ್ತಾರೆ. ಅಷ್ಟಕ್ಕೂ ಇಲ್ಲಿ  ನಾನು ಮಾಡಿದ್ದೇನು? ಆದರೆ ನಂಗೆ ವಿಲನ್‌ ಪಟ್ಟ! ಜನ ರಿಯಲ್‌ ಸ್ಟೋರಿ ಇಷ್ಟಪಡಲ್ಲ. ಇರಲಿ ಬಿಡಿ, ಇದೆಲ್ಲ ಆ ಅಪ್ಪ ಮಕ್ಕಳ ಕುತಂತ್ರ ಅನ್ನೋದು ನಂಗೆ ಗೊತ್ತು. ಇಷ್ಟಕ್ಕೂ ಯಾರು ಮಾಡಬಾರದ ಅಪರಾಧ ನಾನೇನು ಮಾಡಲಿಲ್ಲವಲ್ಲ. ಅದಾವುದೋ ಮೈನಿಂಗ್‌ ಕಂಪೆನಿಯಿಂದ ನಮ್‌ ಕಾಲೇಜಿಗೆ ಡೊನೇಷನ್‌ ಪಡಕೊಂಡೆ ಅನ್ನುವುದೇ ಕ್ರೈಮ್ಮಾ? ಈ ನೇಷನ್‌ ನಡೀತಾ ಇರೋದೇ ಡೊನೇಷನ್‌ನಿಂದ ಅನ್ನೋದು ಯಾರಿಗೆ ಗೊತ್ತಿಲ್ಲ ಹೇಳಿ? ಮೊನ್ನೆ ಕೋರ್ಟಿಗೆ ಹೋಗಿ ಮುಕ್ಕಾಲು ಗಂಟೆ ನಿಂತ್ಕೊಂಡೆನಲ್ಲ. ಆಗ ಹೇಗನ್ನಿಸಿತು ಗೊತ್ತಾ? ಕಾಲು ಸುಸ್ತಾಯಿತು. ನಮ್ಮ ರಾಜ್ಯದಲ್ಲಿ ಎಷ್ಟೋ ಮಂದಿ ಕಾರ್ಮಿಕರು ಶ್ರಮದಿಂದ ಕೆಲಸ ಮಾಡುತ್ತಾರಲ್ಲ. ಅವರೆಲ್ಲರ ನೆನಪಾಯಿತು. ನನಗೆ ಇನ್ನೂ ಕೊಂಚ ಕಾಲ ಅವಕಾಶ ಸಿಕ್ಕಿದ್ದರೆ ಈ ಶ್ರಮಿಕ ವರ್ಗಕ್ಕೆ ಅನುಕೂಲ ಮಾಡಿಕೊಡುತ್ತಿದ್ದೆ. ಇರಲಿ, ಇನ್ನೂ ಕಾಲ ಮಿಂಚಿಲ್ಲ. ಆರು ತಿಂಗಳು ಬಿಟ್ಟು ನೋಡ್ತೀನಿ. 


2. ಸುಮಾರಣ್ಣ  ಪುಟಗಳಿಂದ.. 

ಯಾವುದೋ ಮೈನಿಂಗ್‌ ಕಂಪೆನಿಗೆ ಸಹಾಯ ಮಾಡಿದ್ದೀನಿ ಅಂತ ಹೇಳಿ ಸಂತೋಷ ಹೆಗಡೆಯವರು ನನಗೆ ಕಪ್ಪು ಚುಕ್ಕೆ ಹಾಕಿದ್ದಾರೆ. ಅಷ್ಟಕ್ಕೆ ನಿಲ್ಸಿದ್ರೆ ಪರವಾಗಿರಲಿಲ್ಲ. ಅವರು ನನ್ನ ಎರಡನೇ ಮನೆ ಬಗ್ಗೆ ಮಾತಾಡಿದ್ದಾರೆ. ನನ್ನ ಮೊದಲನೇ ಮನೆ ಬಗ್ಗೆ  ಮಾತಾಡಿದ್ರೆ ನಂಗೆ ಇಷ್ಟೊಂದು ಸಿಟ್ಟು ಬರುತ್ತಿರಲಿಲ್ಲ. ಅವರು ಮಾತಾಡಿದ್ದು 2ನೇ ಮನೆ ಬಗ್ಗೆ! ಅದೇಕೋ ಏನೋ ನಂಗೆ ಮನೆ, ಮನಿ, ಮೈನಿಂಗು.. ಎಲ್ಲ ಒಂದೇ ಥರ ಕೇಳಿಸುತ್ತೆ ಈಚೆಗೆ. ರಾಜಕಾರಣಿಗಳಿಗೆ ಮನೆ ಮತ್ತು ಮನಿ ಎರಡೂ ಹೆಚ್ಚಿದಷ್ಟೂ ಅನುಕೂಲ. ಮನಿ ಕಡಿಮೆ ಇದ್ದರೆ ಗೆಲ್ಲೋದೆಂಗೆ? ಮನೆ ಒಂದೇ ಇದ್ರೆ ಪ್ರೈಮ್‌ ಮಿನಿಷ್ಟ್ರುಆಗೋದೆಂಗೇ? ಅದೆಲ್ಲ ಎಲ್ಲಿ ಇವರಿಗೆ ಗೊತ್ತಾಗುತ್ತೆ ಬಿಡಿ. ಎಲ್ಲದ್ದಕ್ಕೂ ಕಾಲ ಉತ್ತರ ಹೇಳುತ್ತೆ. ನಾನು ಬೆಳೆಸಿದವರೇ ನನಗೆ ದ್ರೋಹ ಮಾಡ್ತಿದ್ದಾರೆ. ಯಡಿಯೂರಪ್ಪ ಅವರನ್ನ  ಡೆಪ್ಯುಟಿ ಸಿಎಂ, ಸಿಎಂ ಮಾಡಿದ್ದಾರು? ಹೋಗಲಿ, ಹೆಗಡೆಯವರನ್ನು ಲೋಕಾಯುಕ್ತ ಮಾಡಿದ್ದು ಯಾರು? ಇವರೇ ಈಗ ನನ್ನ ವಿರುದ್ಧ ನಿಂತಿದ್ದಾರೆ. ಇದೊಂದು ಥರಾ ಮಣ್ಣಿಗೆ ಮಾಡ್ದ ದ್ರೋಹ. ಯಾಕೆ ಗೊತ್ತಾ- ನಾನು ಮಣ್ಣಿನ ಮೊಮ್ಮಗ ಅಲ್ವಾ?  (ಉಳಿದ ಪುಟಗಳು ಸಿಕ್ಕಿಲ್ಲ. ಈ ಎರಡೂ ಡೈರಿಗಳ ಎಲ್ಲ ಪುಟ ಸಿಕ್ಕದ ನಂತರ ಮೈ ಎಕ್ಸ್‌ಪೆರಿಮೆಂಟ್‌ ವಿತ್‌ ಮೈನಿಂಗ್‌ ಅನ್ನೋ ಪುಸ್ತಕ ತರೋ ಆಲೋಚನೆ ಇದೆ)