Sunday, September 26, 2010

ಹನಿ... ಹನಿ... ಹನಿ...

ಬೆಂದಕಾಳೂರು ತೊಯ್ದು ತೊಪ್ಪೆಯಾಗಿದೆ. ಭೋರನೆ ಸುರಿದ ಮಳೆಯ ಸಂಕಷ್ಟದ ನಡುವೆಯೂ ಅಲ್ಲೊಂದು ಇಲ್ಲೊಂದು ಬಿದ್ದ ಹನಿ ಇಲ್ಲಿದೆ.
*    *    *   
ಅಂದು..
ಸರ್‌, ಕಾರ್ಪೊರೇಷನ್ನಾ?
ಹೌದ್ರೀ
ನಮನೇಲಿ ಮೂರು ದಿನದಿಂದ ನೀರಿಲ್ಲ.
ಇಂದು..
ಸರ್‌, ಕಾರ್ಪೋರೇಷನ್ನಾ
ಹೌದ್ರೀ
ನಮನೆ ತುಂಬಾ 3 ದಿನದಿಂದ ನೀರಿದೆ!
* * *   
ಹೀಗೊಂದು ಸುದ್ದಿ- ಬೆಂಗಳೂರಲ್ಲಿ ಭಾರಿ ಮಳೆ. "ಬಾವಿ'ಗಿಳಿದು ಮಹಾ"ಸಾಗರ'ದ ಪ್ರತಿಪಕ್ಷಗಳ ಧರಣಿ.
*    *    *
ಮನೆ ಮಾಲೀಕ : ಎಲ್ಲ ಅನುಕೂಲಾನೂ ಇದೆ. 24 ಅವರ್‌ ವಾಟರ್‌. ಚೆನ್ನಾಗಿ ಗಾಳಿ ಬರುತ್ತೆ. ಪಾರ್ಕಿಂಗ್‌ ನೋ ಪ್ರಾಬ್ಲಂ. ಅಕ್ಕಪಕ್ಕದವರು ತುಂಬಾ ಸೈಲೆಂಟ್‌. ಬಸ್‌ಗಳು ಬೇಕಷ್ಟಿವೆ. ಕೂಲ್‌ ಏರಿಯಾ.
ಬಾಡಿಗೆದಾರ: ಸರ್‌, ಮನೆ ತಂಕ ದೋಣಿ ಬರುತ್ತಾ?
*    *    *   
ಕೊನೆಗೂ "ಸಿಲಿಕಾನ್‌ ಕಣಿವೆ' ಹೆಸರು ಸಾರ್ಥಕವಾಯಿತು. ಈಗ "ಕಣಿವೆ' ತುಂಬಾ ನೀರು!
*    *    *
ದಾರಿಹೋಕ (ಅಡ್ರೆಸ್‌ ಚೀಟಿ ತೋರಿಸಿ) ಸರ್‌, ಸ್ವಲ್ಪ ಅಡ್ರೆಸ್‌ ಹೇಳ್ತೀರಾ?
"ಸೀದಾ ಹೋಗಿ. ಮುಂದೆ ಸಿಗ್ನಲ್‌ ಇರುತ್ತೆ. ಬರೀ ನೀರಿರುತ್ತೆ. ಗಾಬ್ರಿಯಾಗಬೇಡಿ. ಪ್ಯಾಂಟನ್ನು ಮಡಚಿ ಶೂವನ್ನು ಬಿಚ್ಚಿ, ನಿಧಾನವಾಗಿ ಮುಂದೆ ಹೋಗಿ. ಎಡಬಲದಲ್ಲಿ ನಿಂತ ಬಸ್ಸಿರುತ್ತೆ. ಅದಕ್ಕೆ ಹತ್ತಬೇಡಿ. ಅದು ಎಲ್ಲಿಗೂ ಹೋಗಲ್ಲ. ಮತ್ತೆ ಬಲಕ್ಕೆ ತಿರುಗಿ. ಈಗ ನೀರು ಆಳ ಜಾಸ್ತಿಯಾಗಿರುತ್ತೆ. ಈಜೋದೇ ಗತಿ. ಹಾಗೇನೇ ಎರಡೂವರೆ ಕಿಮೀ ಈಜಿ. ಅಲ್ಲಿ ಅಪಾರ್ಟ್‌ಮೆಂಟ್‌ನ 4ನೇ ಮಾಡಿ ಸಿಗುತ್ತೆ. ಅಲ್ಲಿ "ಇಳಿ'ಯಬೇಡಿ. ಮುಂದೆ ಹೋಗಿ, ಅಲ್ಲಿ ಇನ್ನೊಂದು ಸರ್ಕಲ್‌ ಸಿಗುತ್ತೆ. ಅಲ್ಲೇ ಎಡಕ್ಕೆ ಈಜಿ. ಅದೇ ಕ್ರಾಸ್‌ನಲ್ಲಿ ನಿಮ ಅಡ್ರೆಸ್‌ ಇದೆ. ಮನೆ ಇದ್ರೆ ಅದೃಷ್ಟ. ಗುಡ್‌ಲಕ್‌..!
*    *    *
ಬೆಂಗಳೂರಿನ ಹುಡುಗನ ಜತೆ ಮದುವೆ ಫಿಕ್ಸ್‌ ಆಗಿದೆ ಎಂದಾಕ್ಷಣ ಗುಲ್ಬರ್ಗ ಹುಡುಗಿ ನಾಚಿ "ನೀರಾದಳು"
*    *    *
ಹೀಗೊಂದು ಸುದ್ದಿ: ಜಲನಗರದಲ್ಲಿ ರಸ್ತೆಗಳೆಲ್ಲ ತುಂಬಿ ಹರಿಯುತ್ತಿರುವುದರಿಂದ ಎರಡು ಬೋಟ್‌ಗಳ ನಡುವೆ ಡಿಕ್ಕಿಯಾಗಿ ನಾಲ್ವರು ಮುಳುಗಿದ್ದಾರೆ.
(ಇದು 2006ರಲ್ಲಿ ಪ್ರಜಾವಾಣಿಯಲ್ಲಿ  ಪ್ರಕಟವಾದ ಲೇಖನ. ಈಗಲೂ ಪರಿಸ್ಥಿತಿ ಬದಲಾಗಿಲ್ಲ ಬಿಡಿ)

3 comments: