Monday, September 20, 2010

ಉತ್ತರ ಕರ್ನಾಟಕದ ನೆರೆಗೆ ಒಂದು ವರ್ಷ..





ನೆರೆ- ಹೊರೆಯ ಹತ್ತು ಚಿತ್ರಗಳು

                                      ಭರವಸೆಯ ಕಂಗಳು                                                      
ರಾಯಚೂರಿನ ಕಟಕನೂರಿನ ಇದೇ ಶೆಡ್‌ ಒಂದು ವರ್ಷದಿಂದ ಇವರಿಗೆಲ್ಲ ಅರಮನೆ!
ಈ ಹುಡುಗನ ಕಾತರ ಕ್ಯಾಮೆರಾಕ್ಕೆ ಸೆರೆಯಾಗಿದ್ದು ಹೀಗೆ...

ಯಾರ್ಯಾರದೋ ಬದುಕಿನ ಬದುವಿನ ಮೇಲೆ ಸೊಟ್ಟ ಸೊಟ್ಟನೆ ಹರಿದು ಹೋದ ನದಿ ಈಗ ತಣ್ಣಗಾಗಿದ್ದಾಳೆ. ನನಗೇನೂ ಗೊತ್ತಿಲ್ಲ ಎಂಬಂತೆ ಸೈಲೆಂಟಾಗಿಬಿಟ್ಟಿದ್ದಾಳೆ. ಆದರೆ ಇವರೆಲ್ಲರ ಬದುಕೇ ಹರಿದು ಹೋಗಿದೆ. ಹಾಸಿಗೆ ಹಿಡಿದ ಅಮ್ಮನನ್ನು ಬಿಟ್ಟು ದುಡಿಯಲು ಹೋದ ಮಗ ಬರುವುದೇ ಎರಡು ತಿಂಗಳಿಗೊಮ್ಮೆ; ಶೀಟಿನ ಮನೆಯ ತೊಪ್ಪೆ ನೆಲಕ್ಕಿಂತಲೂ ಸುಂದರವಾದ ಜಗತ್ತೊಂದು ಹೊರಗೆ ಇದೆ ಎನ್ನುವ ಅರಿವು ಆ ಪುಟಾಣಿಗಿಲ್ಲ; ಬೆಂಗಳೂರಿಗೆ ಕೆಲಸಕ್ಕೆಂದು ಹೋದ ಗಂಡ ಮತ್ತೆ ಮನೆಗೆ ಬರುತ್ತಾನೆ ಎನ್ನುವ ನಂಬಿಕೆಯೂ ಕಂಕುಳಲ್ಲಿ ಹಸುಳೆ ಹೊತ್ತುಕೊಂಡ ಆಕೆಗೆ ಇಲ್ಲ; ನಾಳೆ ಕೆಲಸ ಸಿಗುತ್ತದೆ ಎಂಬ ಗ್ಯಾರಂಟಿ ಇಲ್ಲ; ರಾತ್ರಿ ಹೊಟ್ಟೆ ತುಂಬುತ್ತದೆ ಎಂಬ ಭರವಸೆಯೂ ಇಲ್ಲ . ಒಂದು ವರ್ಷದ ಇಂಥ ಛಿದ್ರ ಬದುಕಿನ ಇಲ್ಲಗಳ ಮಧ್ಯೆ ಉಳಿದಿರುವುದು ಬದುಕುವ ಛಲ ಮಾತ್ರ. ಒಡೆದುಹೋದ ಬದುವನ್ನು ಮತ್ತೆ ಕಟ್ಟಿ ಜೀವನದಲ್ಲಿ ಪಚ್ಚೆ ಕಾಣುವ ಕನಸು ಮಾತ್ರ. 
ಗದಗ, ಕೊಪ್ಪಳ, ರಾಯಚೂರು ಜಿಲ್ಲೆಯಲ್ಲಿ  ಕಂಡುಬಂದ ಅಂಥ ಹರಿದ ಹತ್ತು ಚಿತ್ರಗಳು ಇಲ್ಲಿವೆ...

1
ಮುರಿದುಹೋದ ಹಗ್ಗದ ಮಂಚದಲ್ಲಿ ಮಲಗಿದ್ದ ರಾಧಾಗೆ ಇನ್ನೂ ವರ್ಷ ತುಂಬಿಲ್ಲ. ಬರ್ತ್‌ಡೇ ಯಾವಾಗ ಎಂದು ಕೇಳಿದರೆ ಅವಳ ಅಮ್ಮನ ಕಂಗಳಲ್ಲಿ ನೀರು ತುಂಬುತ್ತದೆ. ಮಲಪ್ರಭ ಇಡೀ ಊರಿಗೆ ಊರನ್ನೇ ನುಂಗಿದಾಗ ರಾಧಾ ಹುಟ್ಟಿದ್ದಳಂತೆ.
ಇಡೀ ಊರು ಉಳಿಯಲು ಚಡಪಡಿಸುತ್ತಿರಬೇಕಾದರೆ ಹುಲಿಯಮ್ಮಳ ಗರ್ಭದಲ್ಲಿ ಕದಲಿಕೆ. ಮಣ್ಣಿನ ಮನೆ ಕಣ್ಣಮುಂದೆ ಕರಗುತ್ತಿರುವಾಗಲೇ ಕರುಳಬಳ್ಳಿಗೆ ಜನುಮ ನೀಡಿದಳು. ನೀರಿನ ನಡುವೆಯೇ ಕಂದಮ್ಮನನ್ನು ಸೆರಗಲಿ ಕಾಪಿಕೊಂಡು ಬಂದ ಆಕೆ ಸೇರಿದ್ದು  ಬಿ.ಎಸ್‌.ಬೇಲೇರಿ ನಿರಾಶ್ರಿತರ ಕ್ಯಾಂಪಿಗೆ (ಗದಗದ ರೋಣ ತಾಲ್ಲೂಕು). ದಾರಿಯಲ್ಲಿ ಬರುವಾಗ ಕೂಸು ಒಮ್ಮೆ ನೀರಿಗೂ ಬಿದ್ದಿತ್ತು. ಅದೃಷ್ಟಕ್ಕೆ ರಾಧಾ ಬದುಕುಳಿದಳು.
ನೆರೆ ಬಂದದ್ದಕ್ಕೆ ಸಾಕ್ಷಿಯಾಗಿ ಕಣ್ಣಿನಲ್ಲೇ ಕತೆ ಹೇಳುವ ಪುಟಾಣಿಗೆ ಈಗ ಹನ್ನೊಂದು ತಿಂಗಳು. ಅಮ್ಮ- ಅಜ್ಜಿ ಹೆಸರುಕಾಳು ಹೊಲದಲ್ಲಿ ದುಡಿದು ಹೊಟ್ಟೆ ತುಂಬಿಸುತ್ತಾರೆ. ಹಾಗೆ ದುಡಿದರೆ ಸಂಜೆ ಊಟ; ಇಲ್ಲದಿದ್ದರೆ ಉಹುಂ ಏನೂ ಇಲ್ಲ. ರಾಧಾಳಂಥ ಎಲ್ಲ ಮಕ್ಕಳಿಗೂ ಇಲ್ಲಿ ಅದೇ ಗತಿ. ಇನ್ನು ಸ್ಕೂಲೆಲ್ಲಿ ಬಂತು?
ಈ ಸ್ಥಿತೀಲಿ ಹ್ಯಾಂಗ್ರೀ ಈ ಮಕ್ಕಳನ್ನು ಸಾಕೋದು? ಬೇಕಾದ್ರೆ ಒಯ್ಯಿರಿ.. ನೀವೇ ಸಾಕಿಕೊಳ್ಳಿ ಹೀಗಂತ ಕ್ಯಾಂಪಿಗೆ ಬರುವ ಪ್ಯಾಟಿ ಜನಕ್ಕೆಲ್ಲ ಬಿಸಲಮ್ಮ ಆಫರ್‌ ಇಡುತ್ತಾಳೆ!
ಅದಾವುದೂ ಗೊತ್ತಾಗದ ಮಗು ಸುಮ್ಮನೆ ನಕ್ಕುಬಿಡುತ್ತದೆ.

2
ಅಲ್ಲಿ ನಗುವ ಮಗು. ಇಲ್ಲೊಂದು ಕಡೆ ಮಗು ಸದಾ ಅಳುತ್ತಿರುತ್ತದೆ.
ಹಡೆದವ್ವ ಬಿಟ್ಟು ಕೆಲಸಕ್ಕೆ ದೂರಕ್ಕೆ ಹೋಗಿದ್ದಾಳೆ. ಎಲ್ಲಿ ಹೋಗಿದ್ದಾಳೋ ಯಾರಿಗೆ ಗೊತ್ತು? ಮಗುವಂತೂ ರಾಯಚೂರಿನ ತಲಮಾರಿ ಕ್ಯಾಂಪಿನಲ್ಲಿ ಅಳುತ್ತಿದೆ. ಆತನ ಹೆಸರು ಇಶಾಕ್‌. ವಯಸ್ಸು ಒಂದು ದಾಟಿದೆ.
ಇಡೀ ಕ್ಯಾಂಪಿನಲ್ಲಿ ಓರಗೆಯ ಮಕ್ಕಳೆಲ್ಲ ಆಡುತ್ತಿರಬೇಕಾದರೆ ಈತನಿಗೆ ಅದೆಲ್ಲ ಬೇಡ. ಮೈ ಇಡೀ ಕಜ್ಜಿ. ಎರಡೂ ಕೈಗಳಲ್ಲಿ ತುರಿಸಿಕೊಳ್ಳಲೂ ಟೈಮಿಲ್ಲ. ಯಾರಾದರೂ ಕೊಟ್ಟ ತಿಂಡಿ ತಿಂದುಕೊಂಡು ಕಾಲು ಕೆರೆದುಕೊಂಡು ಕೂತಿರುತ್ತಾನೆ. ತಲಮಾರಿಯ ಈ ಶೆಡ್‌ಗಳೇ ಹಾಗಿದೆ. ಸಂಜೆಯಾಯಿತೆಂದರೆ ಸೊಳ್ಳೆಗಳ ದಾಳಿ. ಹಾವು, ಚೇಳುಗಳಿಗೂ ಇದು ನಿರಾಶ್ರಿತರ ಶಿಬಿರ! `ನಮಗೋ ದಿನಾ ಚೇಳು ಹಿಡಿದು ಕೊಲ್ಲುವುದೇ ಕೆಲಸ' ಎಂದು ಈರಮ್ಮ ಭುಸುಗುಡುತ್ತಾಳೆ.
ಆದರೇನು, ಅಲ್ಲಿನ ಜನನಾಯಕರಿಗೆ ಈ ಕೋಪದ ಭುಸ್‌ ತಟ್ಟುವುದೇ ಇಲ್ಲ.

3
ಹಾವು-ಚೇಳುಗಳ ಸಿಟ್ಟೆಲ್ಲ ಸಾಮಾನ್ಯ ಜನರ ಮೇಲೆಯೇ!
ಈ ಅಮಾಯಕರ ಮೇಲೆ ಆ ಹಾವಿಗೆ ಏನು ಕೋಪವೋ? ತಲಮಾರಿಯ ಅಭದ್ರ ಶೆಡ್‌ಗೆ ನುಸುಳಿಬಂದ ಹಾವೊಂದು ತಾಯಪ್ಪನನ್ನು ಕಚ್ಚಿ ಹಾಗೆಯೇ ಹರಿದುಹೋಯಿತು. ಈಗ ಆತನ ಹೆಂಡತಿ ಬಸಮ್ಮ, ಮಗಳು ಭೀಮೇಶಮ್ಮ, ಮಗ ನಾಗರಾಜ್‌ ಅನಾಥರು. ಜಲಪ್ರಳಯದಿಂದ ಪಾರಾಗಿ ಸಾವನ್ನು ಗೆದ್ದೇಬಿಟ್ಟೆವಲ್ಲ ಎಂದು ನಿಡಿದು ಉಸಿರು ಬಿಟ್ಟ ಜನರೇ ಈಗ ಉಸಿರು  ಹಿಡಿದು ನಿಂತುಕೊಂಡಿದ್ದಾರೆ! ಅದೇ ತಾಯಪ್ಪನ ಪಕ್ಕದ ಮನೆಯಲ್ಲಿ ಅನಾಥವಾಗಿ ಮಲಗಿರುವ ನರಸಿಂಹುಡು ಊಟ ಬಿಟ್ಟಿದ್ದಾನೆ. ಆಸ್ತಮಾದಿಂದ ಉಸಿರಾಡಲೂ ಆಗುತ್ತಿಲ್ಲ. ಮೂಳೆಗಳ ಹಂದರವಾದ ಆತ ಅಷ್ಟೇ ದುರ್ಬಲವಾದ ಶೆಡ್‌ನ ನೆಲದ ಮೇಲೆ ಬಿದ್ದಿದ್ದಾನೆ.. ತಮ್ಮನನ್ನು ಉಳಿಸಿಕೊಡಿ ಎಂದು ಅವನ ಅಣ್ಣ ಬಂದವರಲ್ಲೆಲ್ಲ ಗೋಗರೆಯುತ್ತಿದ್ದಾನೆ.
ಕ್ಯಾಂಪಿನ ಮೇಲೆ ಗಿಡುಗ ಸುತ್ತುತ್ತಲೇ ಇದೆ!

4
ಇಷ್ಟಾದರೂ ಒಂದಷ್ಟು ಕನಸುಗಳನ್ನು ಹಿಡಿಯಲ್ಲಿಟ್ಟುಕೊಂಡು ಸಂಧ್ಯಾಜೀವಿಗಳು ಆಕಾಶ ನೋಡುತ್ತಿವೆ. ಮತ್ತೆ ತಮ್ಮ ಜೀವಿತ ಕಾಲದಲ್ಲಿ ಅಂಥ ಮಳೆ ಬರಲಾರದು ಎನ್ನುವ ನಂಬಿಕೆ ಅವರದು. 
ಮಾನ್ವಿ ತಾಲ್ಲೂಕಿನ ಚೀಕಲಪರ್ವಿ ಶೆಡ್‌ನಲ್ಲಿ ಇಂಥ ಹಲವು ಜೀವಗಳು ಹೊಸಬದುಕಿಗೆ ಹಪಹಪಿಸುತ್ತಿವೆ. ಮಹ್ಮದ್‌ ಆಲಿ ಹಾಸಿಗೆ ಬಿಟ್ಟೇಳುವ ಸ್ಥಿತಿಯಲ್ಲಿಲ್ಲ. ಆದರೂ, ಹೊರಗಿನವರು ಯಾರೇ ಬರಲಿ. ನಮ್ಮ ಜನರಿಗೆ ಸೌಕರ್ಯ ಕೊಡಿ. ನೀರಿಲ್ಲ, ಕರೆಂಟಿಲ್ಲ, ಮನೆ ಇಲ್ಲ ಎಂದು ಸಮಸ್ಯೆಗಳನ್ನು ಪಟ್ಟಿ ಮಾಡಿಕೊಡುತ್ತಾರೆ.
ಈ ಕ್ಯಾಂಪಿಗೆ ಯಾರೇ ಹೋಗಲಿ, ಸಾಲುಸಾಲಾಗಿ ವೃದ್ಧಜೀವಗಳೆಲ್ಲ ಬಂದು ನಿಂತುಕೊಂಡುಬಿಡುತ್ತಾರೆ. ಹೊಸ ಬದುಕು ಕಾಣಬಹುದೋ ಎನ್ನುವ ನಿರೀಕ್ಷೆ. ಪರಿಹಾರ ಸಿಗಬಹುದೋ ಎಂಬ ಆಸೆ. ಅದು ಕಣ್ಣು ಕಾಣದ ನರಸಮ್ಮಳ ಕಣ್ಣಲ್ಲೂ ಇದೆ. ವೃದ್ಧರಾದ ಶಬ್ದಾಜ್‌ ಆಲಿ ಸಾಬ್‌, ಕಾಯಮ್ಮ, ಕರಿತಾಯಮ್ಮ, ಬಳ್ಳಾರಿಗೆ ಕೆಲಸಕ್ಕೆ ಹೋಗಿರುವ ಮಕ್ಕಳ ಕಾತರದಲ್ಲಿರುವ ಬುರುಗಮ್ಮ, ಎಲ್ಲೋ ಹೋದ ಗಂಡನನ್ನು ಕಾಯುತ್ತಿರುವ ಬಾಲೆ ತಿಮ್ಮವ್ವರ ಕಣ್ಣಲ್ಲೂ ಅದೇ ಆಸೆ.

5
ಕಾಯುವುದು ಈ ಸಂತ್ರಸ್ತರ ದಿನಚರಿ. ಅದು ಪರಿಹಾರಕ್ಕೆ ಇರಬಹುದು, ದೂರದೂರಿಗೆ ಕೆಲಸಕ್ಕೆ ಹೋದ ತಮ್ಮವರಿಗೆ ಇರಬಹುದು ಇಲ್ಲವೇ ನಾಳೆ ಸಿಗುವ ಮನೆಗೇ ಇರಬಹುದು..ಅಥವಾ ಆ ರಾತ್ರಿಯ ಊಟಕ್ಕೂ ಆಗಿರಬಹುದು.
ಸುರಪುರದ ಬಂಡೊಳ್ಳಿಯ ಶಿವಮ್ಮಳ ವಯಸ್ಸು ಈಗ 18. ರೋಣದ ಬಿಎಸ್‌ ಬೇಲೇರಿಯ ಹುಲಿಯಮ್ಮಳ ವಯಸ್ಸು ಈಗ 19. ಇಬ್ಬರ ಕಂಕುಳಲ್ಲೂ ಮಕ್ಕಳಿವೆ. ಆದರೆ ಗಂಡ ಎಲ್ಲಿ ಎಂದು ಕೇಳಿದರೆ ಉತ್ತರ ಇಲ್ಲ. ಕೆಲಸಕ್ಕೆ ಹೋಗಿದ್ದಾನೋ, ಕೆಲಸ ಮುಗಿಸಿ ಹೋಗಿದ್ದಾನೋ? ಸ್ವಲ್ಪ ವಿಚಾರಿಸಿದರೆ ಸಾಕು- ಎಲ್ಲಾದರೂ ಗಂಡನ ಮನೆ ಸಿಕ್ರೆ ನೋಡ್ತೀರಾ? ಎಂದು ಅತ್ಯಂತ ಡೀಸೆಂಟಾಗಿ ಹಿರಿಯರು ಮಾತುಕತೆಗೆ ರೆಡಿಯಾಗುತ್ತಾರೆ.
ಪರಿಹಾರದ ಪಟ್ಟೀನಲ್ಲೂ ನಮ್ಮ ಹೆಸರಿಲ್ಲ. ಮನೆಯಂತೂ ಕನಸೇ, ನಾವೇನು ಮಾಡೋದು? ಎಂದು ಹೇಳುವ ಶಿವಮ್ಮ ಮಗುವಿನತ್ತ ನೋಡುತ್ತಾಳೆ. ಅಲ್ಲೇ ಕೈಯಲ್ಲಿ ಗುಂಡಿ ತೋಡುತ್ತಿದ್ದ ಆ ಮಗು ನೀರು ಸಿಗುತ್ತದೋ ಎಂದು ನೋಡುತ್ತದೆ. ಇಲ್ಲಿ, ಅಮ್ಮನ ಕಂಗಳಲ್ಲಿ ನೀರು ಬರುತ್ತದೆ.


 6
ಕಣ್ತುಂಬಾ ನೀರನ್ನೇ ತುಂಬಿಕೊಂಡ ಚೀಕಲಪರ್ವಿ ಶೆಡ್‌ನ ಹೆಣ್ಣುಮಕ್ಕಳು ರಾತ್ರಿ ಮಲಗುವ ಮೊದಲು ನೀರು ಕುಡಿಯೋದಿಲ್ಲ!
ನಡುರಾತ್ರಿ ಮೂತ್ರಬಂದರೆ ಹೊರಗೆ ಹೋಗಲು ಭಯ. ಕರೆಂಟಿಲ್ಲ. ಪಕ್ಕದಲ್ಲಿ ಶೌಚಾಲಯವಿಲ್ಲ. ನೀರಿಂದಲೇ ಈ ಗತಿ ಬಂದರೂ ಈಗ ಕುಡಿಯಲಿಕ್ಕೇ ಸರಿಯಾದ ನೀರಿಲ್ಲ.
ಒಂದೊಂದು ಊರಿನ ಒಂದೊಂದು ಶೆಡ್‌ಗಳು ಒಂದೊಂದು ಕತೆ ಹೇಳುತ್ತವೆ. ಟಿನ್‌ನ ಈ ಶೀಟ್‌ನಲ್ಲಿ ಕೆಲವೆಡೆ ಮನೆ ಕಟ್ಟಿಕೊಂಡಿದ್ದರೆ, ಇನ್ನು ಕೆಲವೆಡೆ ಬಿದಿರಿನ ತಟ್ಟಿಯೇ ಗೋಡೆ.  ಚೀಕಲಪರ್ವಿಯಲ್ಲಿ ಬಿದಿರಿನ ಶೀಟ್‌ ಹಾರಿಹೋಗಿದೆ. ರಾಯಚೂರಿನ ಕಟಕನೂರಿನ ಮನೆಗಳು ಬೆಂಗಳೂರಿನ ಧನಿಕರ ಮನೆಯ ನಾಯಿಗೂಡಿಗಿಂತಲೂ ಚಿಕ್ಕದ್ದು. ಇಲ್ಲಿ ಅಡುಗೆ ಮನೆ ಹೊರಗೆ! ಕೆಸರಿನ ನಡುವೆ ಈ ಜನರ ಅರಮನೆ!
ಬಾಗಲಕೋಟೆ ಸಿಮೆಂಟ್‌ನಲ್ಲಿ ಮನೆ ಕಟ್ಟುವ ಕನಸು ಕಟ್ಟಿಕೊಂಡಿದ್ದರು. ಅದೇ ಜನ ಈಗ ಅದೇ ಬಾಗಲಕೋಟೆ ಸಿಮೆಂಟ್‌ನ ಚೀಲದಲ್ಲಿ ಮನೆ ಕಟ್ಟಿಕೊಂಡಿದ್ದಾರೆ!
ಮಳೆಗಾಳಿ ಬಂದರೆ ಕಣ್ಮುಚ್ಚಿಕೊಂಡು ದೇವರ ಚಿತ್ರ ಇರುವ ಕ್ಯಾಲೆಂಡರ್‌ಗೆ ನಮಿಸುತ್ತಾರೆ. ಕಣ್ಣು ತೆರೆದಾಗ ಶೆಡ್‌ ಬೀಳದೇ ಇದ್ದರೆ ಇನ್ನೊಮ್ಮೆ ನಮಿಸುತ್ತಾರೆ!

7   
ಊರಿಡೀ ಕೊಚ್ಚಿ ಹೋದರೂ ಎಷ್ಟೋ ಕಡೆ ದೇವಸ್ಥಾನಗಳು ಮಾತ್ರ ಭದ್ರವಾಗಿವೆ. ಈಗಲೂ ಈ ದೇವರೇ ಈ ಜನರಿಗೆ ಹೊಸ ಭರವಸೆ ತುಂಬಿಸಬಲ್ಲವರು.
ಮಹಾಮಳೆಗೆ ಕಟಕನೂರು ಪೂರಾ ಕೊಚ್ಚಿಹೋಗಿತ್ತು. ಆದರೆ ಅಲ್ಲಿನ ಆಂಜನೇಯ ದೇವಸ್ಥಾನ ಮಾತ್ರ ಉಹುಂ ಜಪ್ಪೆನ್ನಲಿಲ್ಲ. ಮನೆಕಳಕೊಂಡ ಜನರೆಲ್ಲ ಈಗ ಊರ ಹೊರವಲಯದಲ್ಲಿ  ತಾತ್ಕಾಲಿಕ ಶೆಡ್‌ನಲ್ಲಿದ್ದಾರೆ. ಊರೊಳಗೆ ಆಂಜನೇಯ ಮಾತ್ರ. ಆದರೆ ಜನ ದೇವರನ್ನು ಬಿಟ್ಟಿಲ್ಲ. ಪ್ರತಿ ಶನಿವಾರ ಇಲ್ಲಿ  ಈಗಲೂ ಪೂಜೆ ನಡೆಯುತ್ತದೆ. ಜನ ಸೇರುತ್ತಾರೆ. ಆ ಊರಿನ ಹಿರಿ ಮಹಿಳೆ ಹನುಮಕ್ಕ ದಿನಕ್ಕೆ ಎರಡು ಸಲ ಬಂದು ಪೂಜೆ ಮಾಡಿ ಹೋಗುತ್ತಾಳೆ. ನನಗೆ ಮನೆ ಕೊಡಿಸಪ್ಪ ಎಂದು ಮೊರೆ ಇಡುತ್ತಾಳೆ. ದೇವರಿಗೆ ಕೇಳಿಸಿತೋ ಇಲ್ಲವೋ ಗೊತ್ತಿಲ್ಲ. ಅಧಿಕಾರಿಗಳಿಗೆ ಮಾತ್ರ ಈ ಮೊರೆ ಕೇಳಿಸಿಲ್ಲ. ಹನುಮಕ್ಕನ ಇಬ್ಬರು ಗಂಡುಮಕ್ಕಳಿಗೆ ಮನೆ ಕೊಡಿಸಿದ್ದಾರೆ. ಹನುಮಕ್ಕನಿಗೆ ಇಲ್ಲ.
ಆದರೂ ನಂಬಿಕೆ ಬಿಟ್ಟಿಲ್ಲ. ನಂಗೆ ಪ್ರತ್ಯೇಕ ಮನೆ ಕೊಡಿಸು ಎಂದು ದಿನವೂ ಮೊರೆ ಇಡುತ್ತಾಳೆ.
ರೋಣ ತಾಲ್ಲೂಕಿನ ಬಸರೋಡಿನಲ್ಲಿ ಹಲವರಿಗೆ ದೇವಳವೇ ಮನೆ. ಅಲ್ಲಿನ ಸಿದ್ದರಾಮ ಹಿರೇಮಠ ಬಿದ್ದುಹೋದ ತಮ್ಮ ಮನೆ ರಿಪೇರಿ ಮಾಡಿಸುವ ಬದಲು ದೇವರಿಗೆ.. ಅಲ್ಲಲ್ಲ.. ದೇವಸ್ಥಾನಕ್ಕೇ ಮೊರೆ ಹೋಗಿದ್ದಾನೆ!

8
ತಗಡು ಶೀಟಿನ ಮನೆಗೊಂದು ನಂಬರ್‌ : 1019
ಕಳೆದ ಮೂರು ವರ್ಷಗಳಿಂದ ನರಗುಂದದ ಹಾಡಗೋಳಿಯ ನಿವಾಸಿ ಅಂಗವಿಕಲ ನಿಂಗಪ್ಪ ವಲಚಾದಿ ವಿಳಾಸ ಇದು. 1997ರಲ್ಲಿ  ಮಲಪ್ರಭ ನದಿ ಪ್ರವಾಹ ಬಂದು ಮನೆ ಮಠ ಕಳೆದುಕೊಂಡ ಇವರಿಗೆ ಸರ್ಕಾರ ಟೆಂಪರರಿ ಶೆಡ್‌ ಕಟ್ಟಿಸಿಕೊಟ್ಟಿತ್ತು. ಈಗಲೂ ಅಲ್ಲೇ ಇದ್ದಾರೆ. ನಿರ್ಮಾಣವಾಗುತ್ತಿರುವ ಹೊಸಮನೆ ಕನಸು ಕಟ್ಟಿಕೊಂಡಿದ್ದಾರೆ.
ನದಿ ಬದುಕಿಗೂ ಇವರಿಗೂ ಜನುಮ ಜನುಮದ ಸಂಬಂಧ. `15 ವರ್ಷ ಹಿಂದೆ ಹಿಂದೆ ಗಂಗವ್ವ ಬಂದಿದ್ಳು. ಒಂದಷ್ಟು ದಿನ ಊರ ಹೊರ ಹೋಗಿ ಮತ್ತೆ ವಾಪಾಸಾಗುತ್ತಿದ್ದೊ. 2007ರಲ್ಲಿ  ಮತ್ತೆ ನೆರೆ ಬಂದಾಗ ಸರ್ಕಾರ ಶೆಡ್‌ ಹಾಕಿಸಿಕೊಟ್ಟಿತು' ಎಂದು ಬಾಳವ್ವ ತಲವಾರಿ ಹೇಳುವಾಗ ಆಕೆಯ ಕಣ್ಣಲ್ಲಿ ಹೊಸಮನೆಯೇ ನಲಿಯುತ್ತಿತ್ತು. ನೋಡ್ರೀ, ನಮಗೆ ಅಗ್ದೀ ತ್ರಾಸ ಐತೆ. ಅಳು ಬರ್ತೈತಿ ಆದರೂ ನಕ್ಕೊಂಡೇ ಹೇಳ್ತೀವಿ ಎನ್ನುತ್ತಲೇ ಆಕೆ ನೋವನ್ನೆಲ್ಲ ಬಿಚ್ಚಿಡುತ್ತಾಳೆ.

9
ಗೋಡೆಯಲ್ಲಿ ದೊಡ್ಡ ಬಿರುಕಿದೆ. ಇತ್ತಲಿಂದ ನೋಡಿದರೆ ಆಚೆಗಿನ ಬೆಳಕು ಕಾಣಿಸುತ್ತದೆ. ಕಂಬ ಸೊಟ್ಟಗಾಗಿದೆ. ಒಂದು ಗಾಳಿ ಮಳೆ ಬಂದರೆ ಮನೆ ಜೀಕುತ್ತದೆ. ಮನೆಸೂರಿನಲ್ಲಿ ಕಟ್ಟಿದ ಜೇಡರ ಬಲೆ ಬಿಡಿಸಲು ಧೈರ್ಯ ಇಲ್ಲ. ಮುಟ್ಟಿದರೆ ಎಲ್ಲಿ ಮನೆ ಬೀಳುತ್ತದೋ ಎಂಬ ಭಯ.
ಇಷ್ಟಾದರೂ ಅಲ್ಲೇ ಸಂಸಾರ.
ನರೇಗಲ್‌ನ `ಕೆಲ' ಸಂತ್ರಸ್ತರ ಧೈರ್ಯ. ನೆರೆಯಿಂದ ಹಾನಿಯಾದ ಮನೆ ಬಿಟ್ಟು ದೂರ ಹೋಗಲು ರೆಡಿ ಇಲ್ಲ. `ಏನೋ ಒಂದು ವರ್ಷ ಮಳೆ ಬಂತು. ಪ್ರತಿವರ್ಷ ಬರುತ್ತೇನ್ರೀ' ಎನ್ನುವ `ಕೆಲವರ' ಪ್ರಶ್ನೆಯಲ್ಲಿ  ಧೈರ್ಯ ಇದೆಯೋ, ಭಂಡತನ ಇದೆಯೋ ಗೊತ್ತಿಲ್ಲ. ಬೇರೆ ಊರಿನಲ್ಲಿ ಪುನರ್ವಸತಿ ಬಯಸುವ ಜನರೂ ಈಗ ಸೈಲೆಂಟಾಗಿಬಿಟ್ಟಿದ್ದಾರೆ. ಇವರಿಗೆ `ಕೆಲವರ' ವಿರುದ್ಧ ಮಾತನಾಡುವ ಧೈರ್ಯವಂತೂ ಇಲ್ಲ!
ರಾಯಚೂರಿನ ತುಂಗಭದ್ರಾದ ಜನಕ್ಕೆ ಪುನರ್ವಸತಿ ಕಾಣಲು ಮನಸ್ಸಿದ್ದರೂ ಅವರಿಗೆ ಸೂಕ್ತ ಜಾಗವೇ ಇನ್ನೂ ಸಿಕ್ಕಿಲ್ಲ.

10

ಹರಿದುಹೋದ ಜಿಂಕ್‌ಶೀಟ್‌ ನಡುವೆ ಮಳೆ ನೀರು ಜಿನುಗುತ್ತಿದೆ. ಇರುಳ ಆಕಾಶದಲ್ಲಿ ಚಂದಿರ ಇಲ್ಲ; ಬರಿ ಕರಿಮೋಡ. ಅದರೆ ಶೆಡ್‌ ಒಳಗೆ ಹಸಿ ಹಸಿ ನೆಲದ ಮೇಲೆ ಗೋಣಿ ತಾಟಿನಲ್ಲಿ ಮಲಗಿದ ನವಜೋಡಿ ಚಂದಿರನ ಕಾಣುತ್ತಿದೆ.
ಬದುಕು ಬರಿದಾದರೂ ಬಯಕೆ ಬರಿದಲ್ಲವಲ್ಲ. ಈ ಕಷ್ಟದ ಸಂಕೋಲೆಯ ಶೆಡ್‌ನಲ್ಲಿ  ಎಲ್ಲ ಸಂಭ್ರಮ ನಡೆಯುತ್ತದೆ. ಹಾಡಗೋಳಿ ಕ್ಯಾಂಪಿನಲ್ಲಿ  ಒಂದು ವರ್ಷದಲ್ಲಿ ಮೂರು ಮದುವೆಯಾಗಿದೆ. ಈಗ ಅಲ್ಲಿ   ಎಂಟು ಮಂದಿ ಗರ್ಭಿಣಿಯರು ಇದ್ದಾರೆ. ಈಚೆಗೆ ಮೂರು ಡೆಲಿವರಿಯಾಗಿದೆ. ಬಿ.ಎಸ್‌.ಬೇಲೇರಿ ಕ್ಯಾಂಪ್‌ನಲ್ಲಿ  ಇಬ್ಬರು ಹಸಿ ಬಾಣಂತಿಯರಿದ್ದಾರೆ. ಚೀಕಲಪರ್ವಿಯಲ್ಲಿ  ಮೂವರು ಗರ್ಭಿಣಿಯರಿದ್ದಾರೆ.
ಮಕ್ಕಳು ಪಕ್ಕದ ಮನೆಯ ಡಿಷ್‌ ಟಿವಿ ಮೂಲಕ ಹೊಸ ಲೋಕ ನೋಡುತ್ತಿದ್ದಾರೆ. ಜನ ಬವಣೆ ಮರೆತು ಹೊಸ `ಮನೆ' ಕಟ್ಟುತ್ತಿದ್ದಾರೆ. ಸರ್ಕಾರ ಕೊಟ್ಟಿತೋ, ಬಿಟ್ಟಿತೋ ಜನರ ಮನದಲ್ಲಿ  ಹೊಸ ಹಾದಿ ಹುಡುಕುವ ಛಲ ಇದೆ. ಹಾವು ಕಚ್ಚಿ ಸತ್ತ ತಾಯಪ್ಪನ ಮಗಳು ಟೈಲರಿಂಗ್‌ ಮಾಡುತ್ತಿದ್ದಾಳೆ. ಕಟಕನೂರಿನಿಂದ ಹತ್ತು ಜನ ಬೆಂಗಳೂರಿಗೆ ಕೂಲಿಗೆ ಹೋಗಿದ್ದಾರೆ; ಗಂಡ ಬರುತ್ತಾನೋ ಎಂದು ಕಾಯುತ್ತಿರುವ ಹುಲಿಯಮ್ಮ ಹೆಸರುಕಾಳು ಕೊಯಿಲು ಮಾಡುತ್ತಿದ್ದಾಳೆ...
(August‌ 27ರ ವಿಜಯnext ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)


6 comments:

  1. hello sir,
    good one
    The fact is that people are good, if only their fundamental wishes are satisfied, their wish for affection and security. Give people affection and security, and they will give affection and be secure in their feelings and their behavior.”

    ReplyDelete
  2. ನಿಂಗಪ್ಪ ಚಾವಡಿ.
    ಅಧ್ಯಕ್ಷರು ಜಿಲ್ಲಾ ಕಾರ್ಯನಿರತ ಪತ್ರರ್ಕರ ಸಂಘ ಹಾವೇರಿ
    ಸ್ಥಾನಿಕ ಸಂಪಾದಕರು ''ಮೂಡಣ, ಕನ್ನಡ ದಿನ ಪತ್ರಕೆ.
    ಮೇಡಂ ! ಈ ಲೇಖನೆ ಒದಿ ಬಾಲ್ಯದಲ್ಲಿ ನಾನು ನಮ್ಮೂರಲ್ಲಿ (ಕುಗ್ರಾಮ) ಕಳೆದ ದಿನದ ನೆನಪು ಒಂದಡೆಯಾದರೆ ಬದಲಾದ ಪರಿಸ್ಥಿತಿಯಲ್ಲಿಯು ಈ ಹಳ್ಳಿಯಲ್ಲಿ ಜನ ಇಂತಹ ಬದುಕು ಸಾಗಿಸುತ್ತಿದ್ದಾರೆ? ಎಂದು ಪ್ರಶ್ನೆಹಿಸಿಕೊಂಡು ಕಣ್ಣಲ್ಲಿ ನೀರು ಬಂದವು.

    ReplyDelete
  3. ನಿಂಗಪ್ಪ ಚಾವಡಿ.
    ಅಧ್ಯಕ್ಷರು ಜಿಲ್ಲಾ ಕಾರ್ಯನಿರತ ಪತ್ರರ್ಕರ ಸಂಘ ಹಾವೇರಿ
    ಸ್ಥಾನಿಕ ಸಂಪಾದಕರು ''ಮೂಡಣ, ಕನ್ನಡ ದಿನ ಪತ್ರಕೆ.
    ಮೇಡಂ ! ಈ ಲೇಖನೆ ಒದಿ ಬಾಲ್ಯದಲ್ಲಿ ನಾನು ನಮ್ಮೂರಲ್ಲಿ (ಕುಗ್ರಾಮ) ಕಳೆದ ದಿನದ ನೆನಪು ಒಂದಡೆಯಾದರೆ ಬದಲಾದ ಪರಿಸ್ಥಿತಿಯಲ್ಲಿಯು ಈ ಹಳ್ಳಿಯಲ್ಲಿ ಜನ ಇಂತಹ ಬದುಕು ಸಾಗಿಸುತ್ತಿದ್ದಾರೆ? ಎಂದು ಪ್ರಶ್ನೆಹಿಸಿಕೊಂಡು ಕಣ್ಣಲ್ಲಿ ನೀರು ಬಂದವು.

    ReplyDelete
  4. ನಿಂಗಪ್ಪ ಚಾವಡಿ.
    ಅಧ್ಯಕ್ಷರು ಜಿಲ್ಲಾ ಕಾರ್ಯನಿರತ ಪತ್ರರ್ಕರ ಸಂಘ ಹಾವೇರಿ
    ಸ್ಥಾನಿಕ ಸಂಪಾದಕರು ''ಮೂಡಣ, ಕನ್ನಡ ದಿನ ಪತ್ರಕೆ.
    ಮೇಡಂ ! ಈ ಲೇಖನೆ ಒದಿ ಬಾಲ್ಯದಲ್ಲಿ ನಾನು ನಮ್ಮೂರಲ್ಲಿ (ಕುಗ್ರಾಮ) ಕಳೆದ ದಿನದ ನೆನಪು ಒಂದಡೆಯಾದರೆ ಬದಲಾದ ಪರಿಸ್ಥಿತಿಯಲ್ಲಿಯು ಈ ಹಳ್ಳಿಯಲ್ಲಿ ಜನ ಇಂತಹ ಬದುಕು ಸಾಗಿಸುತ್ತಿದ್ದಾರೆ? ಎಂದು ಪ್ರಶ್ನೆಹಿಸಿಕೊಂಡು ಕಣ್ಣಲ್ಲಿ ನೀರು ಬಂದವು.

    ReplyDelete
  5. ನಿಂಗಪ್ಪ ಚಾವಡಿ.
    ಅಧ್ಯಕ್ಷರು ಜಿಲ್ಲಾ ಕಾರ್ಯನಿರತ ಪತ್ರರ್ಕರ ಸಂಘ ಹಾವೇರಿ
    ಸ್ಥಾನಿಕ ಸಂಪಾದಕರು ''ಮೂಡಣ, ಕನ್ನಡ ದಿನ ಪತ್ರಕೆ.
    ಮೇಡಂ ! ಈ ಲೇಖನೆ ಒದಿ ಬಾಲ್ಯದಲ್ಲಿ ನಾನು ನಮ್ಮೂರಲ್ಲಿ (ಕುಗ್ರಾಮ) ಕಳೆದ ದಿನದ ನೆನಪು ಒಂದಡೆಯಾದರೆ ಬದಲಾದ ಪರಿಸ್ಥಿತಿಯಲ್ಲಿಯು ಈ ಹಳ್ಳಿಯಲ್ಲಿ ಜನ ಇಂತಹ ಬದುಕು ಸಾಗಿಸುತ್ತಿದ್ದಾರೆ? ಎಂದು ಪ್ರಶ್ನೆಹಿಸಿಕೊಂಡು ಕಣ್ಣಲ್ಲಿ ನೀರು ಬಂದವು.

    ReplyDelete
  6. ನಿಂಗಪ್ಪ ಚಾವಡಿ.
    ಅಧ್ಯಕ್ಷರು ಜಿಲ್ಲಾ ಕಾರ್ಯನಿರತ ಪತ್ರರ್ಕರ ಸಂಘ ಹಾವೇರಿ
    ಸ್ಥಾನಿಕ ಸಂಪಾದಕರು ''ಮೂಡಣ, ಕನ್ನಡ ದಿನ ಪತ್ರಕೆ.
    ಮೇಡಂ ! ಈ ಲೇಖನೆ ಒದಿ ಬಾಲ್ಯದಲ್ಲಿ ನಾನು ನಮ್ಮೂರಲ್ಲಿ (ಕುಗ್ರಾಮ) ಕಳೆದ ದಿನದ ನೆನಪು ಒಂದಡೆಯಾದರೆ ಬದಲಾದ ಪರಿಸ್ಥಿತಿಯಲ್ಲಿಯು ಈ ಹಳ್ಳಿಯಲ್ಲಿ ಜನ ಇಂತಹ ಬದುಕು ಸಾಗಿಸುತ್ತಿದ್ದಾರೆ? ಎಂದು ಪ್ರಶ್ನೆಹಿಸಿಕೊಂಡು ಕಣ್ಣಲ್ಲಿ ನೀರು ಬಂದವು.

    ReplyDelete