Friday, September 24, 2010

ಅರೆ ಇಸ್ಕಿ


ನಾವೂ ಬರ್ತೀವಿ ಕಲೆಕ್ಷನ್‌ಗೆ...
ಬಡ್ಡಿಕುಮಾರನ ಬಗ್ಗೆ  `ಇಂಟ್ರೆಸ್ಟ್‌ ' ಇದ್ದರೆ ಈ ಕತೆ ಓದಿ.
ದಿನಾ ತಿರುಗಾಟದಲ್ಲಿರುವ ಬಡ್ಡಿಕುಮಾರ ಅವತ್ತು ಸ್ವಲ್ಪ ಬೇಗ ಮನೆಗೆ ಬಂದ. ಬಡ್ಡಿ ಕಲೆಕ್ಷನ್‌ಗೆ ಹೋಗ್ತಾನೆ. ಎಷ್ಟೊತ್ತಿಗೋ ಮನೆಗೆ ಬರ್ತಾನೆ. ಅವನ ಕಾಲಲ್ಲಿ ಚಕ್ರ ಇದೆ ಅಂತ ಮನೆಯವರು ಹೇಳಿದರೆ, ಅವನ ಕೈಯಲ್ಲಿ ಚಕ್ರಬಡ್ಡಿ ಇದೆ ಅಂತ ಜನ ಮಾತಾಡಿಕೊಳ್ಳುತ್ತಿದ್ದರು.  ತಿರುಗಾಟ ಆತನ ಹುಟ್ಟುಗುಣವಾದ್ದರಿಂದ ಮನೆಯಲ್ಲಿದ್ದವರೂ ಸಹ ಹೆಚ್ಚು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಅವತ್ತು ಹಾಗಾಗಲಿಲ್ಲ. ಮನೆಗೆ ಬಂದು ನೋಡುತ್ತಾನೆ.. ಎಲ್ಲ  ಉಲ್ಟಾ ಪಲ್ಟಾ.
ಹಾಲ್‌ನಲ್ಲಿ  ಕುರ್ಚಿ ಅಡಿಮೇಲಾಗಿದೆ; ಟೀಪಾಯಿ ಒಡೆದುಹೋಗಿದೆ. ಒಂದಷ್ಟು ಹುಡುಗರು ಅಲ್ಲೆಲ್ಲೋ ಮೂಲೆಯಲ್ಲಿ ಕೂತು ಮಾತಾಡುತ್ತಿದ್ದಾರೆ. ಗುಸು.. ಗುಸು...
ಕುಪಿತನಾದ ಬಡ್ಡಿಕುಮಾರನ ಪಿತ್ತ ನೆತ್ತಿಗೇರಿತು.
`ಯಾರೋ ಅದು, ನಾನೂ ಬಂದ್ರೂ ಸುಮ್ನೆ ಇದ್ದೀರಲ್ಲ?' ಅಂತ ಕಿರುಚಿದ
ಉಹುಂ ನೋ ರಿಪ್ಲೈ..
ಅವಿಭಕ್ತ ಕುಟುಂಬದಲ್ಲಿ ಬಡ್ಡಿಕುಮಾರನೇ ಹಿರೀಕ. ಈವರೆಗೆ ಅವನಿಗೆ ಇಂಥ ಅನುಭವ ಆಗಿರಲೇ ಇಲ್ಲ. ಮನೆಯಲ್ಲಿರುವ ಎಲ್ಲರೂ ತಲೆಬಾಗಿ ನಿಂತುಕೊಳ್ಳೋರು. ಈಗ ನೋಡಿದರೆ, ಒಬ್ಬೊಬ್ಬರ ಮುಖ ಒಂದೊಂದು ಕಡೆ.
ಮಧ್ಯಮನನ್ನು ಕರೆದು ಕೇಳಿದ `ಏನೋ ರಾಮಿ, ಗರ ಬಡ್ದಿದೆಯೇನು?
ತಲೆಬೋಳಿಸಿಕೊಂಡಿದ್ದ ರಾಮಿ ಸ್ಲೋ ಮೋಷನ್‌ನಲ್ಲಿ ಕತ್ತು ಎತ್ತಿದ. ತೆಲುಗು ಸೀರಿಯಲ್‌ಪ್ರಿಯನಾದ ಅತ ಸೀರಿಯಲ್‌ನಂತೆಯೇ ಮುಖದಲ್ಲಿ ಒಂದಷ್ಟು ಭಾವನೆ ತೋರಿಸಿ ಸ್ಲೋ ಆಗಿ ಬಾಯಿಬಿಟ್ಟ.. 'ಅಲ್ಲಾ, ನೀನ್ಯಾಕೋ ಒಂದಲ್ಲ ಒಂದು ತಪ್ಪು ಮಾಡ್ತಾ ಇದ್ದೀಯ. ಚಂದ್ರಣ್ಣ ಮೋಸ ಲೆಕ್ಕ ಮಾಡ್ದ ಅಂತ ಬಡ್ಡಿ ವ್ಯವಹಾರದಿಂದ ಕಿತ್ತು ಹಾಕಿದ್ದೀರಿ. ಈಗ ಮತ್ತೆ ಕರ್ಕಬಂದಿದ್ದೀರಿ. ನಾವೆಲ್ಲ ಗಲಾಟೆ ಮಾಡಿದ್ದಕ್ಕೆ ಶೀಬಾಕ್ಕನ ಕಿತ್ತು ಹಾಕಿದ್ರಿ. ಈಗ ಮತ್ತೆ ಪವರ್‌ ಕೊಡ್ತೀರಿ. ನೀವು ವ್ಯವ್ಹಾರದಾಗೆ ಲಾಸ್‌ ಆದಾಗ ಬಡ್ಡಿ ಕಲೆಕ್ಷನ್‌ ಮಾಡ್ಕೊಟ್ಟ ಶಿವೀಗೆ ಈಗ ವ್ಯವಹಾರಕ್ಕೆ ತಲೆ ಹಾಕ್ಬೇಡ ಅಂತೀರಿ. ಇದೆಲ್ಲಾ ಸರೀನಾ?'
ಬಡ್ಡಿಕುಮಾರನಿಗೆ ವಿಷಯ ಅರ್ಥವಾಗುತ್ತಾ ಬಂತು. ಬಡ್ಡಿ ಕಲೆಕ್ಷನ್‌ ಮಾಡೋಕೆ ಕುಮಾರ ಒಬ್ಬೊಬ್ಬರನ್ನು ಒಂದೊಂದು ಲೈನ್‌ಗೆ ಕಳಿಸ್ತಾನೆ. ಇದರಲ್ಲೇ ಯಡವಟ್ಟಾಗಿದ್ದು ಅನ್ನೋದು ಗೊತ್ತಾಯಿತು.
ರಾಮಿ ಹೇಳೋದ್ರಲ್ಲಿ ನಿಜಾ ಇದೆ. ನಾವು ಇನ್ವೆಸ್ಟ್‌ ಮಾಡಿಲ್ಲಾಂದ್ರೆ ನೀವು ಹೆಂಗೆ ವ್ಯವಹಾರ ಮಾಡ್ತಾ ಇದ್ರೀ? ಲಾಭ ಬಂತೂಂತ ನಮನ್ನೇ ಮರೆಯೋದಾ? ಅಲ್ಲೆಲ್ಲೋ ಮೂಲೆಯಲ್ಲಿದ್ದ ಜನ್ನು ಬಂದು ಪ್ರಶ್ನೆ ಒಗಾಯಿಸಿದ.
ಏನು ಉತ್ತರ ಕೊಡೋದು ಗೊತ್ತಾಗದೆ, ಬಡ್ಡಿಕುಮಾರ ತತ್ತರಿಸಿಬಿಟ್ಟ.
"ಅಲ್ಲ.. ಅಲ್ಲ.. ಹಂಗಲ್ಲ. ಇದರಲ್ಲಿ ನಂದೇನಿಲ್ಲ' ಅಂತ ತಡವರಿಸುತ್ತಿರುವಾಗಲೇ ಬ್ಲೇಡಪ್ಪ ಬಂದ. ಬಡ್ಡಿ ಕುಮಾರನ ಸೋದರ ಈ ಬ್ಲೇಡಪ್ಪ. ಒಮೊಮೆ ಇವರಿಬ್ಬರು ಜಗಳ ಮಾಡ್ತಾರೆ. ಲಾಭ ಸರಿ ಸಿಕ್ಕಾಗ ಜತೆಯಾಗಿಬಿಡುತ್ತಾರೆ. ಯಾವಾಗಲೂ ಬ್ಲೇಡ್‌ ಹಿಡಿದುಕೊಂಡೇ ಓಡಾಡುತ್ತಾನೆ. ನಾಲಿಗೆ ಕತ್ತರಿಸ್ತೀನಿ ಅಂತಾ ಇರ್ತಾನೆ. (ನಿಜವಾಗಿಯೂ ನಾಲಿಗೆ ಕತ್ತರಿಸಿದ್ದಾನೋ ಅಂತ ಗೊತ್ತಿಲ್ಲ)
"ನೋಡ್ರೀ, ನಿಮ್ದೇನು ಸಮಸ್ಯೆ? ವಾರ ವಾರ ನಿಮ್ಗೆ ಕಲೆಕ್ಷನ್‌ ಸರಿಯಾಗಿ ಸಿಕ್ತಾ ಇದೆಯೋ, ಇಲ್ವೋ ಹೇಳಿ. ಯಾರ್ನ ಕಲೆಕ್ಷನ್‌ಗೆ ಕಳ್ಸಬೇಕೂಂತ ನಾವು ಡಿಸೈಡ್‌ ಮಾಡ್ತೀವಿ. ಇಲ್ಲಾಂದ್ರೆ ನಿಮ್‌ ದಾರಿ ನೋಡ್ಕೊಳ್ಳಿ ಅಂತಂದುಬಿಟ್ಟ ಬ್ಲೇಡಪ್ಪ.
ಒಂದು ನಿಮಿಷ ಇಡೀ ಮನೆಯಲ್ಲಿ ಮೌನ. ಬ್ಲೇಡಪ್ಪನ ಮಾತಿಂದ ಹೆದರಿದ್ದು ಬಡ್ಡಿಕುಮಾರ. ಅಷ್ಟರಲ್ಲಿ, ಕಣ್ಣಲ್ಲಿ ನೀರುತುಂಬಿಕೊಂಡು ಅದರ ಮೇಲೆ ಕನ್ನಡಕ ಹಾಕಿಕೊಂಡು ಚೇಳೂರಪ್ಪ ಬಂದ. ಅದೇನ್ರಿ ಹಂಗಂತೀರಿ. ಸರಿ ಬಿಡಿ, ನಮ್‌ ದಾರಿ ನೋಡ್ಕೊತ್ತೀವಿ. ನಾನು ನಾಳೇನೇ ಮನೆ ಬಿಟ್ಟು ಹೋಗ್ತೀನಿ. ಅದೇನು ಮಾಡ್ಕತ್ತೀರೋ ಮಾಡ್ಕಳಿ. ನನ್ನ ಕಲೆಕ್ಷನ್‌ ಲೈನ್‌ಗೆ ಕಳಿಸ್ತೀರೋ ಇಲ್ವೊ ಹೇಳಿ ಅಂದ. ಇವನ ಜತೆ ಮುತ್ತಪ್ಪನೂ ಸೇರಿಕೊಂಡ.
ತಕ್ಷಣ ಚೇಳೂರಪ್ಪನ ಹೆಗಲ ಮೇಲೆ ಕೈ ಹಾಕಿದ ಕುಮಾರ ದೂರ ಕರ್ಕೊಂಡು ಹೋಗಿ ಅದೇನು ಕಲೆಕ್ಷನ್‌ ಮೋಡಿ ಮಾಡಿದ್ನೋ ಗೊತ್ತಿಲ್ಲ. ಚೇಳೂರಪ್ಪ ಸುಮನಾಗಿಬಿಟ್ಟ.
ಅಷ್ಟರಲ್ಲಿ ಸರವಿಂದನ ಮೊಬೈಲ್‌ಗೆ ಕಾಲೊಂದು ಬಂತು. ಜೋರಾಗಿ ಕೂಗಿ ಹೇಳಿದ ಆತ "ಓಹೋ.. ಇದು ಮನಂತಕುಮಾರನ ಫೋನ್‌. ಸುಮ್ನಿರಿ.. ಶ್‌..!
ಮೊಬೈಲ್‌ನ್ನು ಹಿಡಿದುಕೊಂಡು ಗತ್ತಿನಿಂದ ದೂರಕ್ಕೆ ಹೋಗಿ ಹುಂ, ಹುಂ.. ಹುಂ.. ಎನ್ನಲಾರಂಭಿಸಿದ.
ಬಡ್ಡಿಕುಮಾರನಿಗೂ ಮನಂತಕುಮಾರನಿಗೂ ಮೊದಲಿನಿಂದಲೂ ಆಗೊಲ್ಲ. ಬಡ್ಡಿ ಕಲೆಕ್ಷನ್‌ ಇನ್‌ಚಾರ್ಜ್‌ ತಗೋಬೇಕು ಅಂತ ಮನಂತ ಭಾಳಾನೇ ಟ್ರೈ ಮಾಡಿ ಸೋತಿದ್ದ.
ಮನೆಯಲ್ಲಿ ಇನ್ನೊಂದು ಡ್ರಾಮಾ ನಡೀತಾ ಇರೋದನ್ನ ನೋಡಿದ ಬಡ್ಡಿಕುಮಾರ ಹೇಳಿಯೇಬಿಟ್ಟ.. ನೋಡ್ರಿ, ಇದು ಫೈನಲ್‌. ನಾನು ಈಗ ಸರವಿಂದ, ಗೋಳಪ್ಪ, ಶಿವಿ ಇವರನ್ನ ಕಲೆಕ್ಷನ್‌ನಿಂದ ತೆಗೀತಾ ಇದ್ದೀನಿ. ಶೀಬಾ, ಸೀಮಣ್ಣ, ನಾಗಾಯಣ, ರಾಮಪ್ಪ, ಶಂಕರಪ್ಪ, ಪೋಥೇಲ ಇವರನ್ನು ಕಲೆಕ್ಷನ್‌ಗೆ ಸೇರಿಸಿಕೊಳ್ತಾ ಇದ್ದೀನಿ.. ಅಂತ ಹೇಳಿ ಹೊರಟೇ ಬಿಟ್ಟ.. ಕಲೆಕ್ಷನ್‌ಗೆ.
ಗೋಳಪ್ಪನ ಗೋಳು ಮನೆ ಇಡೀ ತುಂಬಿಕೊಂಡಿತು. ಅಯ್ಯಯ್ಯೋ.. "ನಂಗೆ ಮೋಸ ಮಾಡಿಬಿಟ್ರು, ನನ್‌ ಕಲೆಕ್ಷನ್‌ ಪೂರ್ತಿಯಾಗಲೇ ಇಲ್ಲ., ಅಷ್ಟು ಬೇಗ ಕಿತ್ತು ಹಾಕಿಬಿಟ್ರಲ್ಲ. ನಾನು ಆತಹತ್ಯೆ ಮಾಡ್ಕೊತ್ತೀನಿ" ಅಂತ ಹೇಳಿ ಮನೆಯಲ್ಲೆಲ್ಲ ಹೊರಳಾಡಿ ಕಣ್ಣೀರು ಹಾಕಿಬಿಟ್ಟ.
ಯಾವಾಗಲೂ ಗಲಾಟೆ ಮಾಡ್ತಾ ಇದ್ದ ಜನ್ನು, ಮುತ್ತಪ್ಪ ಸೈಲೆಂಟಾಗಿಬಿಟ್ರು.
ಬ್ಲೇಡಪ್ಪ ಎಲ್ಲರಿಗೂ ಕಲೆಕ್ಷನ್‌ ಬೀದಿ ಹಂಚಿದ. ಶೀಬಾಗೆ ಪ್ರತ್ಯೇಕವಾಗಿ ಕರ್ದು ಹೇಳ್ದ.. ನೋಡು- ನಿಂಗೆ ಕೊಟ್ಟ ಬೀದಿ ಬಿಟ್ಟು ಬೇರೆ ಕಡೆ ತಲೆಹಾಕಿದಿಯೋ ಹುಷಾರ್‌ ಅಂತ.
ಸೀಮಪ್ಪನ ಕರ್ದು ಬ್ಲೇಡಪ್ಪ.. ನಿಂಗೆ ಆಹಾರ ಬೀದಿ ಕೊಟ್ಟಿದ್ದೀನಿ. ಲಾಸ್ಟ್‌ ಟೈಮ್‌ ವೀರಪ್ಪನ ತರ ಮಾಡಬೇಡ.. ಅಂತ ಹೇಳಿ ನಕ್ಕ.
ಆ ನಗು ಇಡೀ ಮನೆಯಲ್ಲಿ ಪ್ರತಿಧ್ವನಿಸಿತು.
ಲೈನ್‌ ಸಿಗದವರು ಹ್ಯಾಪ್‌ ಮೋರೆ ಹಾಕಿಕೊಂಡು ಅಟ್‌ಲೀಸ್ಟ್‌ ನಮಗೆ ಕಲೆಕ್ಷನ್‌ಗೆ ಒಂದು ಕ್ರಾಸ್‌ ಆದ್ರೂ ಕೊಡ್ರೀಪ ಅಂತ ಗುಟ್ಟುಗುಟ್ಟಾಗಿ ಕೇಳಲು ಶುರುಮಾಡಿದರು. ಲೈನ್‌ ಸಿಕ್ಕವರೆಲ್ಲ ಬ್ಯಾಗ್‌ ಹೆಗಲೇರಿಸಿಕೊಂಡು ಹೊರಟೇಬಿಟ್ಟರು ಕಲೆಕ್ಷನ್‌ಗೆ!

5 comments:

  1. Good humarous story!!
    -sumanth

    ReplyDelete
  2. ಬದ್ದಿಕುಮಾರನ ಕಥೆ ಚೆನ್ನಾಗಿದೆ. ಒಳ್ಳೆ ಕಾನ್ಸೆಪ್ಟ್.
    ಮಿನಿಸ್ಟರ್ಸ್ ಮಾಡೋ "ಕಲೆಕ್ಷನ್'' ಬಗ್ಗೆ ಚೆನ್ನಾಗಿ ವಿವರಿಸಿದ್ದೀರಿ. ನಿಮ್ಮ ಬ್ಲಾಗ್ ಬರವಣಿಗೆ ಹೀಗೆ ಮುಂದುವರೆಯಲಿ...

    ReplyDelete
  3. ಏನ್ರಿ ಮುಖ್ಯ ಮಂತ್ರಿ ಬಗ್ಗೆ ಬಾಯಿಗೆ ಬಂದಂತೆ ಬರಿತಿರಾ ನಿಮ್ಮನ್ನ ನೋಡಿಕೊಳ್ಳುತ್ತಿವಿ. ಏನೇನೋ ತರಲೆಯಾಗಿ ಸದ್ಯಕ್ಕೆ ಕಲೆಕ್ಷನ್ ಸರಿಯಾಗಿಲ್ಲ. ಎಲ್ಲಾ ಸರಿಯಾಗಲಿ ನಿಮಗೂ ಒಂದಷ್ಟು ಕೊಡುತ್ತಿವಿ. ಹಂಗೆಲ್ಲ ಬರೆದು ಮರ್ಯಾದೆ ಕಲಿಬೇದ್ರಪ್ಪ.

    ReplyDelete