Wednesday, October 6, 2010

ಅಳುವುದು ಸುಲಭ; ಆಳುವುದು ಕಷ್ಟ!
-ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು
-ರಾಜ್ಯ ಕಂಡ ಅತ್ಯಂತ ದುರ್ಬಲ ಮುಖ್ಯಮಂತ್ರಿ
ಇದು ಬಹುಶಃ  ರಾಜಕೀಯ ದುರಂತ ಇರಬೇಕು. ಒಬ್ಬ ವ್ಯಕ್ತಿಗೇ ಇಂಥ ಎರಡೆರಡು ವಿರೋಧಾಭಾಸದ `ಬಿರುದಾಂಕಿತ'!
ಸಮರ್ಥ ವಿರೋಧ ಪಕ್ಷದ ನಾಯಕನೊಬ್ಬ ಸಮರ್ಥ ಆಡಳಿತಗಾರನಾಗಲಾರ ಎನ್ನುವ ವಿಪರ್ಯಾಸವನ್ನು ಮುಖ್ಯಮಂತ್ರಿ ಯಡಿಯೂರಪ್ಪ  ಸಾಬೀತುಪಡಿಸಿಬಿಟ್ಟಿದ್ದಾರೆ. ಅವರೊಬ್ಬ ದುರ್ಬಲ ಮುಖ್ಯಮಂತ್ರಿ ಎನ್ನುವುದನ್ನು  ವಿರೋಧಿಗಳು ಹೇಳಿದ್ದರೆ ಅದು ಸಹಜ ಟೀಕೆ ಎಂದು ತಳ್ಳಿಹಾಕಬಹುದಿತ್ತು. ಆದರೆ ಇದನ್ನು ಅವರ ಪಕ್ಷದವರೇ ಒಳಗೊಳಗೆ ಹೇಳಿಕೊಳ್ಳುತ್ತಿರುವುದರಿಂದ ಇದೊಂದು ನಿರ್ವಿವಾದ ಅಂಶ.
ಯಾವುದಾದರೂ ಸಂಕಟಕ್ಕೆ ಸಿಕ್ಕಿಹಾಕಿಕೊಂಡಾಗಲೆಲ್ಲ  `ಇದು ನನಗೆ ಇನ್ನೊಂದು ಅಗ್ನಿ ಪರೀಕ್ಷೆ' ಎಂದು ಹೇಳುತ್ತಿದ್ದ ಯಡಿಯೂರಪ್ಪ ತಮ್ಮ ರಾಜಕೀಯ ಪ್ರಬುದ್ಧತೆ ತೋರಲು ಅಡಿಗಡಿಗೆ ಸೋತರು. ಒಮ್ಮೆಯೂ ಅವರು ತನ್ನ  ಧೋರಣೆಯಲ್ಲಿ ಇರಬಹುದಾದ ಸಮಸ್ಯೆಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲೂ ಹೋಗಲಿಲ್ಲ. ವಿರೋಧ ಪಕ್ಷದ ಸ್ಥಾನಕ್ಕೆ ಹೇಗೆ ಭಾವುಕತೆ, ರೊಚ್ಚು ತುಂಬಿದರೋ ಅದನ್ನೇ ಮುಖ್ಯಮಂತ್ರಿ ಸೀಟಿಗೂ ಅಂಟಿಸಿದರೆ ಸಾಕು ಸುಲಭವಾಗಿ ಐದು ವರ್ಷ ಆಡಳಿತ ನಡೆಸಬಹುದು ಎಂದು ತಿಳಿದುಕೊಂಡಿದ್ದರೋ ಏನೋ. ಆದರೆ ಆ ಸೀಟು ಡಿಮಾಂಡ್‌ ಮಾಡುವುದೇ ಬೇರೆಯ ಸ್ವಭಾವವನ್ನು ಎಂಬುದನ್ನು  ಮರೆತೇಬಿಟ್ಟರು.ಕೆಟ್ಟದ್ದಾಗಿ ಅಳುವುದರಿಂದ ಸಿಂಪಥಿ ಗಳಿಸಬಹುದು; ಆದರೆ ಕೆಟ್ಟದ್ದಾಗಿ ಆಳುವುದರಿಂದ ಅಲ್ಲ;
ಬಿಡಿಸಿ ನಿವಾಳಿಸಿ ಎಸೆಯಬಹುದಾಗಿದ್ದ ಬಲೆಯಲ್ಲೂ  ಯಡಿಯೂರಪ್ಪ ಬಿದ್ದು  ತೊಳಲಾಡಿಬಿಟ್ಟರು. ಇಲ್ಲದಿದ್ದರೆ ಯಾವುದೇ ಬಲ ಇಲ್ಲದ ರೇಣುಕಾಚಾರ್ಯರಂಥ ಶಾಸಕರೊಬ್ಬರ ಮರ್ಜಿಗೆ ಸರ್ಕಾರ ಬೀಳಬೇಕಿತ್ತೇ? ಜಸ್ಟ್‌ ತಮಗೆ ಮಂತ್ರಿಗಿರಿ ಬೇಕೆನ್ನುವ ಕಾರಣದಿಂದ ರೆಸಾರ್ಟ್‌ಗಳಲ್ಲಿ ಅಡಗಿ ಕುಳಿತು ಅವರು ಸರ್ಕಾರವನ್ನು ಹೆದರಿಸುತ್ತಾರೆಂದರೆ... ಅದು ರೇಣುಕಾಚಾರ್ಯ ಅವರ ಸಾಮರ್ಥ್ಯವಂತೂ ಖಂಡಿತಾ ಅಲ್ಲ. ಮುಖ್ಯಮಂತ್ರಿ ದೌರ್ಬಲ್ಯವಲ್ಲವೇ?
2009ರಲ್ಲಿ  ನೆರೆ ಕಂಡ ಒಂದೇ ತಿಂಗಳಲ್ಲಿ  ರೆಡ್ಡಿ ಸೋದರರ ಬಂಡಾಯಕ್ಕೆ ಮುಖ್ಯಮಂತ್ರಿ ಕಡಿವಾಣ ಹಾಕಿದ್ದರೆ ಇಷ್ಟೊಂದು ಅಧ್ವಾನ ಎದುರಿಸುವ ಅಗತ್ಯವಂತೂ ಇರುತ್ತಿರಲಿಲ್ಲ. ಆದರೆ ಅಲ್ಲಿಂದ ಅವರು ಹೆಜ್ಜೆ ಹೆಜ್ಜೆಗೆ ಮಂಡಿಯೂರುತ್ತಲೇ ಬಂದರು. ಸ್ವಾಭಿಮಾನಕ್ಕಿಂತ ಅಧಿಕಾರದ ಕುರ್ಚಿ ದೊಡ್ಡದ್ದು ಎನ್ನುವ ತಮ್ಮ ಅಂತರಾಳದ ಅಭಿಮತವನ್ನು ಜಗಜ್ಜಾಹೀರು ಮಾಡಿಬಿಟ್ಟರು.
ಯಾವುದೇ ಒಬ್ಬ  ಸ್ಟ್ರಾಂಗ್‌ ಮುಖ್ಯಮಂತ್ರಿ ತಮ್ಮದೇ ಪಕ್ಷದ ಶಾಸಕರಿಗೆ ಅಂಜಿಕೊಂಡು ಕೂರುವ ಅಗತ್ಯ ಹೇಗೆ ಇಲ್ಲವೋ ಹಾಗೆಯೇ ಶಾಸಕರನ್ನು ಪೂರ್ಣ ಕಡೆಗಣಿಸಿ ದೌಲತ್ತು ಮಾಡುವುದೂ ಅಸಂಬದ್ಧ. ಇದೇ ಯಡಿಯೂರಪ್ಪ ಅವರ ದ್ವಂದ್ವ. ಒಂದು ಕಡೆ ತಮ್ಮ ಪಕ್ಷದ ಶಾಸಕರನ್ನು ಪೂರ್ಣ ಕಡೆಗಣಿಸಿ ನಿರಂಕುಶ ಪ್ರಭು ಆಗಿಬಿಟ್ಟರೆ, ಇನ್ನೊಂದು ಕಡೆ ಕೆಲವರ ಬ್ಲಾಕ್‌ಮೇಲ್‌ಗೆ ಬೆದರಿ ಅವರು ಹೇಳಿದ್ದಕ್ಕೆಲ್ಲ ಸಹಿ ಹಾಕಿಬಿಡುವ ಕಾರಕೂನರಾಗಿಬಿಟ್ಟರು. ಇದೆರಡನ್ನೂ ಸರಿದೂಗಿಸಿಕೊಂಡು ಹೋಗದೇ ಇದ್ದುದೇ ಇಂದು ಯಡಿಯೂರಪ್ಪ ಸಂಕಟಕ್ಕೆ ಕಾರಣ.
ಸಂಪುಟ ಪುನರ್ರಚನೆ ಬೇಡ ಎಂದು ಯಾರೋ ಶಾಸಕ ಬಹಿರಂಗ ಹೇಳಿಕೆ ನೀಡುತ್ತಾನೆ ಎಂದರೆ, ನನಗೆ ಮಂತ್ರಿಗಿರಿ ಕೊಡದಿದ್ದರೆ ನನ್ನ ದಾರಿ ನೋಡಿಕೊಳ್ಳುತ್ತೇನೆ ಎಂದು ಇನ್ನೊಬ್ಬ ಶಾಸಕ ಕತ್ತಿ ಝಳಪಿಸುತ್ತಾನೆ ಎಂದರೆ, ಅದೆಲ್ಲಿಂದಲೋ ಕುಳಿತು ಈ ಸರ್ಕಾರ ನೆಟ್ಟಗಿಲ್ಲ ಎಂದು ಒಬ್ಬ ಶಾಸಕ ಮಾಧ್ಯಮಕ್ಕೆ ಬೈಟ್‌ ಕೊಡುತ್ತಾನೆ ಎಂದರೆ, ಅಧಿಕಾರಿ ಟ್ರಾನ್ಸ್‌ಫರ್‌ನ್ನು  ಇನ್ನೊಬ್ಬ ಮಂತ್ರಿ ಕ್ಯಾನ್ಸಲ್‌ ಮಾಡಿಸುತ್ತಾನೆ ಎಂದರೆ, ಭಾರಿ ಹಗರಣದಡಿ ಸಿಲುಕಿಯೂ ಬಚಾವಾಗುತ್ತಾರೆ ಎಂದರೆ... ಅದು ಮುಖ್ಯಮಂತ್ರಿಯ ಅಸಹಾಯಕತೆಯನ್ನಲ್ಲದೆ ಇನ್ನೇನನ್ನು ಹೇಳೀತು?
ಬಿಜೆಪಿ `ಸಹಿಷ್ಣುತೆ'
ಇನ್ನೊಂದು ದುರಂತ ಎಂದರೆ: ಶಿಸ್ತನ್ನು ಗುತ್ತಿಗೆಗೆ ಪಡೆದುಕೊಂಡಿದ್ದೇವೇನೋ ಎನ್ನುವ ಪೋಸ್‌ ಕೊಡುತ್ತಿದ್ದ ಬಿಜೆಪಿ ಯಡಿಯೂರಪ್ಪ ಸರ್ಕಾರದ ಇಷ್ಟೊಂದು ಅಶಿಸ್ತು- ಅಪಸ್ಯವಗಳನ್ನು  ಸಹಿಸಿಕೊಂಡಿವೆ. ಅಂದರೆ, ಸಂಘಟನೆ  `ಸಹಿಷ್ಣುತೆ'ಯನ್ನು ಮೈಗೂಡಿಸಿಕೊಂಡಿದೆ ಎಂದು ವ್ಯಾಖ್ಯಾನಿಸಿಕೊಳ್ಳಬಹುದೇ?
ಬಿಜೆಪಿಯಂಥ ಒಂದು ರಾಷ್ಟ್ರೀಯ ಪಕ್ಷ ಅನಾಯಕತ್ವಕ್ಕೆ ಈಡಾದರೆ ಏನಾಗಬಲ್ಲುದು ಎಂಬುದಕ್ಕೆ ಕರ್ನಾಟಕದ ಪೊಲಿಟಿಕ್ಸ್‌ಗಿಂತ ಬೇರೆ ನಿದರ್ಶನ ಏಕೆ ಬೇಕು? ದಕ್ಷಿಣ ಭಾರತದ ಹೆಬ್ಬಾಗಿಲು ಎಂದು ಭರ್ಜರಿ ಪ್ರಚಾರ ಗಿಟ್ಟಿಸಿಕೊಂಡ ಬಿಜೆಪಿ ಧುರೀಣರು ಇವತ್ತು ಅವರದ್ದೇ ಪಕ್ಷದ ಶಾಸಕರಿಂದ ಅದೇ ಹೆಬ್ಬಾಗಿಲು ಮುಚ್ಚುತ್ತಿರುವುದನ್ನು ನೋಡಿ ಸುಮ್ಮನೆ ಕೂತುಬಿಟ್ಟಿದ್ದಾರೆ.
ಆಪರೇಷನ್‌ ಕಮಲದಂಥ ಚಟುವಟಿಕೆಯನ್ನು  ಒಂದಷ್ಟು  ಜನ ಒಪ್ಪಿಕೊಳ್ಳಬಹುದು. ಆದರೆ, ಆ ಒಪ್ಪಿಗೆ ಲಕ್ಷ್ಮಣ ರೇಖೆಯನ್ನು  ದಾಟಿದಾಗಲೂ ಪಕ್ಷದ ಹೈಕಮಾಂಡ್‌ ಸುಮ್ಮನಿತ್ತು. ರೆಡ್ಡಿ ದೂಳು ಇಡೀ ಕರ್ನಾಟಕವನ್ನು ಮುಚ್ಚಿಕೊಂಡಾಗಲೂ ಬಿಜೆಪಿ ನಾಯಕರು ಬಾಯಿ ಮುಚ್ಚಿಕೊಂಡಿದ್ದರು. ಹಗರಣಗಳ ಮೇಲೆ ಹಗರಣ ಸುರಿದಾಗಲೂ ಶಿಸ್ತಿನ ಪಕ್ಷದ ಸುಮ್ಮನಿತ್ತು, ಭ್ರಷ್ಟಾಚಾರ ತಾರಕಕ್ಕೆ ಹೋದಾಗಲೂ ಬಿಜೆಪಿ ಗಪ್‌ಚುಪ್‌... ಆ ಮೌನಗಳೇ ಇವತ್ತು ಬಿಜೆಪಿಯನ್ನು ಇಷ್ಟೊಂದು ಇಕ್ಕಟ್ಟಿಗೆ ಸಿಲುಕಿಸಿದೆ.
ಬಿಜೆಪಿ ನಾಯಕರು ಈಗ ಕಾಂಗ್ರೆಸ್‌-ಜೆಡಿಎಸ್‌ ನಾಯಕರನ್ನು ಬಯ್ಯಬಹುದು. ಬೆಂದ ಮನೆಯಲ್ಲಿ ಗಳ ಹಿರಿಯುವ ಕೆಲಸಕ್ಕೆ ಈ ನಾಯಕರು ಕೈ ಹಾಕಿದ್ದೂ ನಿಜ. ಆದರೆ, ಅದಕ್ಕೆ ಅವಕಾಶ ಮಾಡಿಕೊಟ್ಟಿದ್ದನ್ನು ಮರೆಮಾಚಲಾಗದು. ಬಿಜೆಪಿ ಮತ್ತು ಯಡಿಯೂರಪ್ಪ  ಈಗ ಕನ್ನಡಿ ಮುಂದೆ ನಿಂತುಕೊಂಡರೆ ರಾಜ್ಯಕ್ಕೆ ಒಳಿತು.

No comments:

Post a Comment