Sunday, April 10, 2011

ಅರೆ ಇಸ್ಕಿ!

ಬಾಳು ಬಾಲಾಯಿತು


ನನಗೂ ಕ್ರಿಕೆಟ್‌ಗೂ ಸಂಬಂಧ ಅಷ್ಟಕ್ಕಷ್ಟೆ. ಎಷ್ಟೋ ಸಲ ಈ ಮ್ಯಾಚ್‌ ನೋಡಲೇಬೇಕು ಅಂತ ಆಫೀಸಿಗೆ ರಜೆ ಹಾಕಿ ಕೂತದ್ದಿದೆ. ಉಹುಂ, ಕಾಲು ಗಂಟೆ ಕಳೆದ ಕೂಡಲೇ ಬೋರನ್ನಿಸಿಬಿಟ್ಟು, ಇದಕ್ಕಿಂತ ಆ ಆಫೀಸೇ ಬೆಸ್ಟ್‌ ಅಂತ ಅನ್ನಿಸಿದ್ದೂ ಇದೆ. ಕ್ರಿಕೆಟ್‌ ಹುಚ್ಚು ಬೆಳೆಸಿಕೊಂಡು ನಾನೂ ಮನುಷ್ಯನಾಗಬೇಕು ಅಂತ ಮಾಡಿದ ಪ್ರಯತ್ನಗಳೆಲ್ಲ ವಿಫಲವಾಗಿದೆ. ಕಡೆಗೂ ನಾನು ಒಪ್ಪಿಕೊಂಡುಬಿಟ್ಟಿದ್ದೇನೆ- ನನಗೂ ಕ್ರಿಕೆಟ್‌ಗೂ ಆಗಿಬರೊಲ್ಲ ಅಂತ.
ನಮ ಮನೆಯಲ್ಲಿ ನನ್ನನ್ನು ಬಿಟ್ಟರೆ ಎಲ್ಲರಿಗೂ ಕ್ರಿಕೆಟ್ಟೇ ದೇವರು. ನನ್ನಾಕೆಗೋ ಕ್ರಿಕೆಟ್‌ ಎಂದರೆ ಮುಗೀತು. ಹೊಸ ಆಟಗಾರರಿಂದ ಹಿಡಿದು 70ರ ದಶಕದ ಆಟಗಾರರವರೆಗೂ ಎಲ್ಲರ ಹೆಸರು, ಅವರು ಮಾಡಿದ ಸ್ಕೋರ್‌, ಯಾವ ಮ್ಯಾಚ್‌ನಲ್ಲಿ ಯಾರು ಕ್ಯಾಚ್‌ ಹಿಡಿದರು, ಯಾರು ಬಿಟ್ಟಿದ್ದರಿಂದ ಯಾರು ಸೋತರು, ಯಾವ ಸ್ಪಿನ್ನಿಗೆ ಯಾವ ಶಾಟ್‌ ಬೇಕು ಹೀಗೆ ಎಲ್ಲವೂ ಕರಾತಲಮಲಕ. ನಂಗೆ ಅದೆಲ್ಲ ಬೇಜಾರಾಗೊಲ್ಲ. ಆದರೆ ನಾನು ಆಫೀಸಿನಿಂದ ಸುಸ್ತಾಗಿ ಮನೆಗೆ ಬಂದು ಬೆನ್ನು ನೋವು ಅಂತ ಮಲಗಿಕೊಂಡರೆ, ರೀ ಪಾಪ ಸಚಿನ್‌ಗೆ ಭುಜ ನೋವಂತೆ, ಅಫ್ರಿದಿಗೆ ಸೊಂಟ ನೋವಂತೆ ಕಣ್ರೀ ಅಂತಂದುಬಿಡುತ್ತಾಳೆ. ಯಾವ ಗಂಡಸು ತಾನೇ ಇಂಥದ್ದನ್ನು ಸಹಿಸಿಕೊಳ್ಳುತ್ತಾನೆ ಹೇಳಿ?
ವರ್ಲ್ಡ್‌ಕಪ್‌ ಆರಂಭವಾಯಿತೆಂದರೆ ನಮ ಮನೇಲಿ ಸ್ಟೌ, ಕುಕ್ಕರ್‌ಗಳಿಗೆಲ್ಲ ಖುಷಿ. ಒಂದ್ಸಲ ಹೀಗೆ ಆಯಿತು. ಲಾಸ್ಟ್‌ ವರ್ಲ್ಡ್‌ ಕಪ್‌ನಲ್ಲಿ ಡೇ ಅಂಡ್‌ ನೈಟ್‌ ಮ್ಯಾಚ್‌ ಮರುದಿನ ಬೆಳಿಗ್ಗೆ ನಾನು ಎಂದಿನಂತೆ ಏಳು ಗಂಟೆಗೆ ಎದ್ದೆ. ನನ್ನ ಇನ್‌ಬಾಕ್ಸ್‌ನಲ್ಲಿ ಒಂದು ಮೆಸೇಜ್‌ ಬಂದಿತ್ತು. ರಾತ್ರಿ ಮಲಗುವಾಗ ತಡವಾಗಿದೆ. ಅಡುಗೆ ಮನೇಲಿ ಪೆಪ್ಸಿನೂ, ಕುರುಕುರೆನೂ ಇಟ್ಟಿದ್ದೇನೆ. ಬ್ರೇಕ್‌ ಫಾಸ್ಟ್‌ ಮಾಡಿಕೊಂಡು ಆಫೀಸಿಗೆ ಹೋಗಿ. ಡೋಂಟ್‌ ಡಿಸ್ಟರ್ಬ್‌. ಗುಡ್‌ನೈಟ್‌ ಅಂತ. ಕ್ರಿಕೆಟ್‌ ಮಾತ್ರ ಅಲ್ಲ, ಈ ಜಾಹೀರಾತುಗಳೂ ನನ್ನ ಲೈಫನ್ನ ಹಾಳು ಮಾಡ್ತಾ ಇದೆ ಅಂತ ಅರ್ಥ ಆಗಿದ್ದು ನನಗೆ ಅವತ್ತೇ.
ನಾನು ಮದುವೆಯಾಗಿದ್ದು ವರ್ಲ್ಡ್‌ ಕಪ್‌ ಮುಗಿದ ನಂತರದ ತಿಂಗಳು. ಹಾಗಾಗಿ ಮತ್ತೆ ನಾಲ್ಕು ವರ್ಷ ಸಮಸ್ಯೆ ಇರಲಿಲ್ಲ. ಸಂಸಾರಕ್ಕೇನೂ ತೊಂದರೆಯಾಗಿಲ್ಲ. ಇಬ್ಬರು ಮಕ್ಕಳು. ಒಂದು ಗಂಡು, ಒಂದು ಹೆಣ್ಣು.
ನಾನಾಕೆಯ ಕ್ರಿಕೆಟ್‌ ಪ್ರೀತಿ ಬಗ್ಗೆ ಹೆಚ್ಚು ವಿರೋ ವ್ಯಕ್ತಪಡಿಸುವುದಿಲ್ಲ. ಏನೋ ಅಭಿಮಾನ ಎಂದು ಸುಮನಾಗಿಬಿಡುತ್ತೇನೆ. ಆದರೆ ರಾತ್ರಿ ಮ್ಯಾಚ್‌ ನೋಡಿ ಬೆಳಿಗ್ಗೆ ಎದ್ದು ಧೋನಿದ್ದು ಏನು ಆಟ ಕಣ್ರೀ ಅಂತಾಳಲ್ಲ, ಆಗ ಮನಸ್ಸಿಗೆ ತುಂಬಾ ಕುರ್‌ಕುರೆಯಾಗ್ತದೆ. ಒಮೊಮೆ ವಿನಾ ಕಾರಣ ನನ್ನನ್ನು ಕ್ರಿಕೆಟಿಗರಿಗೆ ಹೋಲಿಸುವಾಗಲಂತೂ ಮೈ ಉರಿದುಬಿಡುತ್ತದೆ. ಅದ್ಯಾಕ್ರೀ ಶ್ರೀಶಾಂತ್‌ ಥರ ಸಿಡುಕುತ್ತೀರಿ, ಸಚಿನ್‌ ಥರ ಉಗುರು ಕಚ್ಕೊತ್ತೀರಿ.. ಹೀಗೆ ನನ್ನನ್ನು ಅವರಿಗೆಲ್ಲ ಹೋಲಿಸಿಬಿಟ್ಟಾಗ ಶಾಂತವಾಗಿ ಹೇಳ್ತೀನಿ- ನೋಡು ಕಣೇ, ಹಾಗೆಲ್ಲ ಕಂಪೇರ್‌ ಮಾಡಬೇಡ. ನಾನು ನಾನೇ ಅಂತ. ತಕ್ಷಣ ಬ್ಯಾಟ್‌ ಮಾಡುತ್ತಾಳೆ- ಅಬ್ಬಾ, ಈಗ ದ್ರಾವಿಡ್‌ ಥರ ಕಾಣಿಸ್ತಾ ಇದ್ದೀರಿ, ಎಷ್ಟು ಕೂಲ್‌.. ಅಂತ!
ಎಷ್ಟೋ ಸಲ ರಾತ್ರಿ ಊಟಕ್ಕೂ ತತ್ವಾರ. ಏನೋ ಪಾಪ ಮ್ಯಾಚ್‌ ನೋಡ್ತಾ ಇದ್ದಾಳೆ ಅಂತ ಅಡುಗೆ ಮಾಡೋಕೆ ಹೋದ್ರೆ ಅಲೂ ್ಲಎಡವಟ್ಟು. ಬೇಳೆಯೋ, ಉಪ್ಪೋ ಇರುವುದೇ ಇಲ್ಲ. ಆಕೆಯ ಕ್ರಿಕೆಟ್‌ ಸಹವಾಸ- ನಮಗೆಲ್ಲ ಉಪವಾಸ ಎಷ್ಟೋ ದಿನ. ಕೇಳಿದ್ರೆ, ಕ್ರಿಕೆಟ್‌ ಎನ್ನೋದು ಧರ್ಮ; ವರ್ಲ್ಡ್‌ಕಪ್‌ ಎನ್ನೋದು ವ್ರತ ಎಂದು ಏನೇನೋ ಬಡಬಡಿಸುತ್ತಿದ್ದಳು.
ನನ್‌ ಬಾಳು ಒಂಥರಾ ಕ್ರಿಕೆಟ್‌ ಬಾಲ್‌ ಥರಾನೇ ಆಗೋಯಿತು. ಯಾರು ಗೆಲ್ತಾರೋ, ಯಾರು ಸೋಲ್ತಾರೋ ನಾನಂತೂ ಹೊಡೆಸಿಕೊಳ್ಳೋದೇ ಆಗೋಯಿತು.
ಇವಳ ಕ್ರಿಕೆಟ್‌ ಹುಚ್ಚು ಅತಿರೇಕಕ್ಕೆ ಹೋಗುತ್ತಿರುವುದನ್ನು ನೋಡಿ ಯಾವುದಾದರೂ ಸೈಕ್ರಿಯಾಟಿಸ್ಟ್‌ ಹತ್ತಿರ ಕರೆದುಕೊಂಡು ಹೋಗಬೇಕು ಎಂದು ತೀರ್ಮಾನಿಸಿದೆ. ಹಗಲು ರಾತ್ರಿ ಕ್ರಿಕೆಟ್‌ ಧ್ಯಾನ ನಿಲ್ಲಿಸದಿದ್ದರೆ ಮುಂದೆ ಅಪಾಯ ಇದೆ ಎಂದು ನನಗೆ ಗೊತ್ತಾಯಿತು. ಫೇಮಸ್ಸು ಡಾಕ್ಟು ನಳಿನಿ ಬಳಿ ಒಮೆ ಕರೆದುಕೊಂಡು ಹೋದೆ. ಥರೋ ಪರೀಕ್ಷೆ ಮಾಡಿ, ಪ್ರಾಬ್ಲಂ ಏನೂ ಇಲ್ಲ. ಸುಮನಿದ್ದು ಬಿಡಿ ಎಂದು ಸಲಹೆ ಕೊಟ್ಟರು. ನನ್ನ ಕಷ್ಟ ಅವರಿಗೆ ಎಲ್ಲಿ ಅರ್ಥವಾಗಬೇಕು? ಅವರು ಗಂಡಸ್ಸಾಗಿದ್ದು, ಇಂಥ ಹೆಂಡತಿ ಇದ್ರೆ ಗೊತ್ತಾಗ್ತ ಇತ್ತೇನೋ?
ಮೊದ ಮೊದಲು ಮಕ್ಕಳ ಜತೆ, ಪಕ್ಕದ ಮನೆ ರೀನಾ ಜತೆ ಕ್ರಿಕೆಟ್‌ ಬಗ್ಗೆ ಚರ್ಚೆ ಮಾಡುತ್ತಿದ್ದ ಈಕೆ ಈಗ ಫೋನಿನಲ್ಲೂ ಸ್ನೇಹಿತರ ಜತೆ ಕ್ರಿಕೆಟ್‌ ಬಗ್ಗೆ ಮಾತಾಡಲು ಶುರು ಮಾಡಿದಳು. ಒಂದು ದಿನ ಅರ್ಧಗಂಟೆಯಾದರೂ ಫೋನ್‌ ಇಟ್ಟಿರಲಿಲ್ಲ, ಬರೇ ಇದೇ ಡಿಸ್ಕಷನ್‌. . . ಏನು ಶಾಟ್‌ ಅದು, ಅವನ ಸ್ಕೇರ್‌ ಕಟ್‌ ಸೂಪರ್‌ ಆಗಿತ್ತು. ಈ ಸ್ಕೋರ್‌ನ ಚೇಸ್‌ ಮಾಡ್ಲಿಲ್ಲ ಅಂದ್ರೆ ಇನ್ನ್ಯಾಕ್ರೀ ಆಡಬೇಕು.. ಹೀಗೆ ಆಕ್ರೋಶಭರಿತ ಮಾತುಗಳು. ಫೋನಿಟ್ಟ ಮೇಲೆ ಕೇಳ್ದೆ- ಯಾರ ಜತೆಗೆ ಇಷ್ಟೊತ್ತು ಕ್ರಿಕೆಟ್‌ ಆಡ್ತಾ ಇದ್ದೆ ಅಂತ. ಅದೇ ಕಣ್ರೀ ಅವತ್ತು ಕರ್ಕೊಂಡು ಹೋಗಿದ್ರಲ್ಲ, ಸೈಕ್ರಿಯಾಟಿಸ್ಟ್‌ ಡಾ. ನಳಿನಿ ಅಂತ ಹೇಳಿದಾಗ ನಾನು ಇಂಡಿಯಾದ ಪಿಚ್ಚಾಗಿಬಿಟ್ಟೆ!
ಬಹುಶಃ ನನ್ನ ಹಾಗೆಯೇ ಎಷ್ಟು ಜನ ಹೀಗೆ ಒದ್ದಾಡುತ್ತಿರಬಹುದೋ ಎಂದು ನನಗೆ ಆಗಾಗ್ಗೆ ಕಾಡುತ್ತಿತ್ತು. ಈ ಬಗ್ಗೆ ಸಾಕಷ್ಟು ಸಲ ಗಂಭೀರವಾಗಿ (ಗೌತಮ್‌ ಗಂಭೀರವಾಗಿ ಅಲ್ಲ) ಯೋಚನೆ ಮಾಡಿದ್ದೆ. ಕ್ರಿಕೆಟ್‌ಪೀಡಕರ ಸಂಘವೊಂದನ್ನು ಕಟ್ಟುವ ಬಗ್ಗೆಯೂ ಯೋಚನೆ ಮಾಡಿದ್ದೆ. ಈ ಐಡಿಯಾವನ್ನು ನನ್ನ ಮಿತ್ರನೊಬ್ಬನಿಗೆ ಹೇಳಿದೆ.
ಅವನಿಗೋ ಆಶ್ಚರ್ಯ! ಅಲ್ಲ ಕಣಪ್ಪ, ಯಾವಾಗಲೂ ಡಕ್‌ಗೆ ಔಟ್‌ ಆಗೋನು ಸೆಂಚುರಿ ಬಾರಿಸಿದಂಗಾಯ್ತಲ್ಲೋ, ನಿನಗೂ ಐಡಿಯಾ ಬಂದಿದೆ ಅಂತ ಕುಟುಕಿದ. ಅದೆಲ್ಲ ಇರಲಿ, ಸಂಘ ಆರಂಭಿಸೋದ ಅಂತ ನೇರವಾಗಿ ಕೇಳ್ದೆ.
ನೋಡು, ಅದೆಲ್ಲ ಓಕೆ. ಸಂಘ ಸ್ಥಾಪಿಸಿ ನಿಮ ಹಿತಾಸಕ್ತಿ ಬಗ್ಗೆ ಹೋರಾಡೋದು ಎಲ್ಲ ಗುಡ್‌ ಐಡಿಯಾನೇ. ಆದರೆ ಒಂದು ಎಡವಟ್ಟು ಆಗಬೋದು..
ನೋಡು, ಸಾಮಾನ್ಯವಾಗಿ ಕ್ರಿಕೆಟ್‌ನ್ನು ಇಷ್ಟಪಡದ ಗಂಡಸರು ಭಾಳ ಕಡಿಮೆ. ಹೀಗಾಗಿ, ನಿನಗೆ ಏನೋ ಐಬಿದೆ ಅಂತ ಜನ ತಿಳ್ಕೊಂಡ್ರೆ ಎಂದು ನೇರವಾಗಿ ನನ್ನ ಪೌರುಷಕ್ಕೇ ಸವಾಲು ಹಾಕಿದ. ಮತ್ತೊಮೆ ಪಿಚ್ಚಾಗಿಬಿಟ್ಟೆ!
ಕ್ರಿಕೆಟ್‌ ವಿರುದ್ಧ ಆಡೋದಕ್ಕಿಂತ ಅಡ್ಜಸ್ಟ್‌ ಆಗಿಬಿಡೋದೇ ವಾಸಿ ಅಂತ ತೀರ್ಮಾನಕ್ಕೆ ಬಂದುಬಿಟ್ಟೆ.
ಇನ್ನೊಂದು ಸಲ, ನನ್ನ ಮಗ ಶಾಲೆಯಿಂದ ಬಂದೋನೇ ಬ್ಯಾಗನ್ನು ಮೂಲೆಗೆ ಎಸೆದು, ಇವರಿಗೆಲ್ಲರಿಕ್ಕಿಂತ ನಮ್‌ ಇಂಡಿಯಾ ಕ್ರಿಕೆಟ್‌ ಟೀಮೇ ಬೆಸ್ಟ್‌ ಅನ್ಸುತ್ತೆ ಅಂತ ಗೊಣಗೋಕೆ ಶುರು ಮಾಡಿದ.
ಅಪ್ಪನ ಕರುಳು ಚುರ್‌ಕ್‌ ಅಂತು. ಕೇಳ್ದೆ, ಏಕೋ, ಏನಾಯಿತೋ ಅಂತ.
ಅಲ್ಲ, ಮನೇಲಿ ನೀನು, ಅಮ ಹೊಡೀತೀರಿ. ಸ್ಕೂಲಲ್ಲಿ ಮೇಷ್ಟ್ರು ಹೊಡೀತಾರೆ. ಇವರೆಲ್ಲರಿಗಿಂತ ನಮ್‌ ಟೀಮೇ ಬೆಟರ್‌ ಅಲ್ವಾ? ಅಂತಂದ.
ಅಮನ ಕ್ರಿಕೆಟ್‌ ಜೀನ್‌ ಮಗನಿಗೂ ಟ್ರಾನ್ಸ್‌ಫರ್‌ ಆಗಿರುವುದು ಕನ್‌ಫರ್ಮ್‌ ಆಯಿತು.

4 comments:

  1. ಏಂಡ್ರೀ ಸಿಕ್ಸರ್ ಬಾರಿಸಿದ್ದೀರಲ್ಡ್ರೀ....

    ReplyDelete
  2. ಕ್ರಿಕೆಟ್ ನ ಹಿಂದೆ ಇಂಥಾ ಕರುಣಾಜನಕ ಕಥೆ ಇದೆ ಅಂತ ಗೊತ್ತಿರ್ಲಿಲ್ಲ!

    ReplyDelete
  3. Dear BKG,
    Your entry into bolg pitch is as dazzling as that of Vinod Kambli and as captivating as that of Vishwanath.
    Keep it up and fill up soon. Don't leave any gap.
    'Arey Iskii' is great.
    -NAGESH HEGDE

    ReplyDelete
  4. Good one.
    - Godlabeelu

    ReplyDelete